Bhatkal | ಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 8 ಮಂದಿ ನೀರುಪಾಲು!
ಮೂವರು ನಾಪತ್ತೆ
ಭಟ್ಕಳ : ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ರವಿವಾರ ಸಂಭವಿಸಿದ ಭೀಕರ ದುರಂತದಲ್ಲಿ, ಚಿಪ್ಪು ತೆಗೆಯಲು ನೀರಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರುಪಾಲಾಗಿದ್ದಾರೆ. ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಒಂದೇ ಕುಟುಂಬದ 13 ಮಂದಿ ರವಿವಾರ ರಜೆಯ ಹಿನ್ನೆಲೆಯಲ್ಲಿ ಅಳ್ವೇಕೋಡಿ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದ ಬಳಿಯ ನದಿಯಲ್ಲಿ ಕೆಲವರು ಚಿಪ್ಪು ಸಂಗ್ರಹಿಸಲು ನೀರಿಗೆ ಇಳಿದಾಗ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮೃತಪಟ್ಟ ಎಂಟು ಮಂದಿಯ ಪೈಕಿ ಆರು ಮೃತದೇಹಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಹಾಗೂ ಉಳಿದ ಎರಡು ಮೃತದೇಹಗಳನ್ನು ಆರ್.ಎನ್.ಎಸ್. ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಎಂಟು ಮಂದಿಯನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನಾಪತ್ತೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.