ಕೇಣಿಯಲ್ಲಿ ಬಂದರು ನಿರ್ಮಾಣ ವಿರೋಧಿಸಿ ಪ್ರತಿಭಟನೆ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮೀನುಗಾರರು
ಅಂಕೋಲಾ, ಫೆ.24: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ‘ಕೇಣಿ ಗ್ರೀನ್ ಫೀಲ್ಡ್’ ಖಾಸಗಿ ಬಂದರು ಯೋಜನೆಯ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿ ನೂರಕ್ಕೂ ಅಧಿಕ ಜನರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮೂವರು ಮಹಿಳೆಯರು ಅಸ್ವಸ್ಥರಾಗಿದ್ದು, ಅವರನ್ನು ಪೊಲೀಸರು ಆ್ಯಂಬುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಸಾಗಿಸಿದ ಘಟನೆಯೂ ನಡೆಯಿತು.
‘ಸರ್ವೇ ಕಾರ್ಯ ನಿಲ್ಲಿಸುವವರೆಗೂ ಉಗ್ರ ಪ್ರತಿಭಟನೆ ಮಾಡುತ್ತೇವೆ. ಬಂದರು ಯೋಜನೆಯನ್ನು ಕೈ ಬಿಡದಿದ್ದರೆ ಮತ ಬಹಿಷ್ಕಾರದ ಜೊತೆ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಕಡಲತೀರದಲ್ಲಿ ಸೇರಿದ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಘಟನಾ ಸ್ಥಳಕ್ಕೆ ಎಸ್ಪಿ ಎಂ.ನಾರಾಯಣ, ಡಿವೈಎಸ್ಪಿ ಗಿರೀಶ, ಪಿಐ ಚಂದ್ರಶೇಖರ ಮಠಪತಿ ಸೇರಿದಂತೆ ಹಲವು ಅಧಿಕಾರಿ ಗಳು ಸಮಾಧಾನ ಪಡಿಸಿದರೂ, ಪ್ರತಿಭಟನಾಕಾರರು ‘ಜಿಲ್ಲಾಧಿಕಾರಿ ಬಂದು ಸರ್ವೇ ಕಾರ್ಯ ನಿಲ್ಲಿಸಬೇಕು’ ಎಂದು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ಮೀನುಗಾರರ ಮುಖಂಡರಾದ ಶ್ರೀಕಾಂತ ದುರ್ಗೇಕರ, ಸಂಜೀವ ಬಲೆಗಾರ, ಶಂಕರ ಬಲೆಗಾರ, ಹೂವಾ ಖಂಡೇಕರ, ಉಮಾಕಾಂತ ಹೊಸ್ಕಟ್ಟಾ, ಚಂದ್ರಕಾಂತ ಪಿರನಕರ, ರಾಜೇಶ್ವರಿ ಕೇಣಿಕರ, ಸೂರಜ ಹರಿಕಂತ್ರ, ವಾಮನ ಉದಯ ನಾಯ್ಕ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
"ಯಾವುದೇ ಕಾರಣಕ್ಕೂ ಇಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಮಹಿಳೆಯರೂ ಪ್ರಾಣ ಕೊಡಲು ಸಿದ್ಧರಾಗಿದ್ದಾರೆ. ನಮಗೆ ಕಡಲು ಬಿಟ್ಟರೆ ಬೇರೆ ಪ್ರಪಂಚವಿಲ್ಲ. ನಮ್ಮಷ್ಟಕ್ಕೆ ನಾವು ಮೀನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದೇವೆ. ಒಂದು ವೇಳೆ ಇಲ್ಲಿ ಖಾಸಗಿ ಬಂದರು ನಿರ್ಮಾಣವಾಗಬೇಕೆಂದರೆ ನಮ್ಮನ್ನು ಕೊಂದು ನಮ್ಮ ಸಮಾಧಿಯ ಮೇಲೆ ಬಂದರು ನಿರ್ಮಾಣವಾಗಲಿ".
ಶ್ರೀಕಾಂತ ದುರ್ಗೇಕರ, ಮೀನುಗಾರಿಕಾ ಮುಖಂಡರು, ಕೇಣಿ
ನಿಷೇಧಾಜ್ಞೆ ಲೆಕ್ಕಿಸದೆ ಪ್ರತಿಭಟನೆ
ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಮತ್ತು ಅಂಕೋಲಾ ಪುರಸಭೆ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಇದನ್ನು ಲೆಕ್ಕಿಸದೆಯೇ ಸ್ಥಳೀಯ ಮೀನುಗಾರರು ಕಡಲತೀರದಲ್ಲಿ ಸೇರಿ ಪ್ರತಿಭಟನೆ ನಡೆಸಿದರು.