ಜಾಲಿ ಪಟ್ಟಣ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ
ಭಟ್ಕಳ: ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ, ಉತ್ತರ ಕನ್ನಡ ಜಿಲ್ಲೆ ಪಟ್ಟಣ ಪಂಚಾಯತ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಂಗಳವಾರ ಜಿಲ್ಲೆಯ ಉಸ್ತುವಾರಿ ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಅವರು ಹೂ ಕುಂಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದರು.
ಈ ಸಂದರ್ಭ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯನ್ನು ಮಾದರಿ ಪಟ್ಟಣ ಪಂಚಾಯತವಾಗಿ ರೂಪಿಸಲು ಒತ್ತಾಯಿಸಿ, ಪಟ್ಟಣ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸುಮಾರು 167 ಕೋಟಿ ರೂ. ಅನುದಾನ ಮಂಜೂರಿಗಾಗಿ ಮನವಿ ಸಲ್ಲಿಸಿದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, "ಶಾಸಕರಾಗಿದ್ದ ಕಾಲದಲ್ಲಿ ಪಟ್ಟಣ ಪಂಚಾಯತವನ್ನು ಮೇಲ್ದರ್ಜೆಗೇರಿಸಲು ನಾವು ಪ್ರಯತ್ನಿಸಿದ್ದೇವೆ. ಈ ನೂತನ ಕಟ್ಟಡದ ಜಾಗದ ಸಮಸ್ಯೆ ಪರಿಹರಿಸಿ, ಮುಖ್ಯಮಂತ್ರಿಗಳಿಂದ 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ." ಹಾಗೆಯೇ, 86 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಯೋಜನೆ ಕಾರ್ಯಗತಗೊಳ್ಳಲಿದೆ. ಈ ಯೋಜನೆ ರಾಜ್ಯ ಬಜೆಟ್‌ನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಯಲ್ಲಿದೆ. ಸಚಿವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸೂಚಿಸಿದರು.
ಅಲ್ಲದೆ, ನಾನು ನಿರ್ಮಾಣ ಮಾಡಿದ ಸಾಗರ ರಸ್ತೆಯ ಪಾರ್ಕ್ ನಿರ್ವಹಣೆಯ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದರ ದುರಸ್ತಿ ಕಾರ್ಯ ಕೂಡ ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿಕಲಚೇತನರಿಗೆ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸಲಾಯಿತು.
ಈ ಸಮಾರಂಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪುರಸಭೆ ಪ್ರಭಾರಿ ಅಧ್ಯಕ್ಷ ಅಲ್ತಾಪ್ ಖರೂರಿ, ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಶ್ರೀಮತಿ ಅಪ್ಸಾ ಹುಝೈಫಾ ಖಾಜಿಯಾ, ಉಪಾಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ, ಕಾರವಾರ ಎ.ಇ.ಇ. ಭಾಸ್ಕರ ಗೌಡ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿ ಕಾರಿ ಮಂಜಪ್ಪ ಎನ್., ಪಟ್ಟಣ ಪಂಚಾಯತ ಇಂಜಿನಿಯರ್ ಅರವಿಂದ ಸೇರಿದಂತೆ ಹಲವಾರು ಗಣ್ಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು.