ಡಾ. ಫರ್ಝಾನಾ ಫರಾಹ್ ಅವರ ಕವನ ಸಂಕಲನ ‘ರುಕಾ ಸಾ ಮೌಸಮ್’ಗೆ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ
ಭಟ್ಕಳ : ಕರ್ನಾಟಕ ಉರ್ದು ಅಕಾಡೆಮಿಯು ಪ್ರಖ್ಯಾತ ಕವಯಿತ್ರಿ ಹಾಗೂ ಸಾಹಿತಿಯುವಾದ ಡಾ. ಫರ್ಝಾನಾ ಫರಾಹ್ ಅವರ ಕವನ ಸಂಕಲನ ‘ರುಕಾ ಸಾ ಮೌಸಮ್’ ಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಉರ್ದು ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿಯು 25,000 ರೂ. ಪ್ರಶಂಸಾಪತ್ರ, ಶಾಲು ಮತ್ತು ಹಾರವನ್ನು ಒಳಗೊಂಡಿತ್ತು.
ಬೆಂಗಳೂರು ಕೆಎಂಡಿಸಿ (KMDC) ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಸೀರ್ ಅಹ್ಮದ್ ಈ ಗೌರವವನ್ನು ಪ್ರದಾನ ಮಾಡಿದರು. ಈ ಸಂದರ್ಭ ಎಂಎಲ್‌ಸಿ ಬಿಲ್ಕಿಸ್ ಬಾನು, ಅಕಾಡೆಮಿ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಅಲಿ ಖಾಝಿ, ಅಕಾಡೆಮಿ ಸದಸ್ಯರು ಹಾಗೂ ಉರ್ದು ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು.
ಭಟ್ಕಳದ ಅಂಜುಮನ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಫರ್ಝಾನಾ ಫರಾಹ್, ಕವಯಿತ್ರಿಯಾಗಿ ಮಾತ್ರವಲ್ಲದೆ ವಿಡಂಬನೆ ಮತ್ತು ಪ್ರಬಂಧ ಲೇಖಕಿಯಾಗಿಯೂ ಖ್ಯಾತಿ ಪಡೆದಿದ್ದಾರೆ. ಅವರ 'ಶೋಖಿ ತಹ್ರೀರ್', 'ದೇಖ್ನಾ ತಹ್ರೀರ್ ಕಿ ಲಝ್ಝತ್' ಮತ್ತು 'ಗುಲ್ ಅಫ್ಶಾನಿಯಾನ್' ಎಂಬ ಮೂರು ಪ್ರಬಂಧ ಸಂಕಲನಗಳು ಸಾಕಷ್ಟು ಮೆಚ್ಚುಗೆ ಪಡೆದಿವೆ.
ಡಾ. ಫರ್ಝಾನಾ ಫರಾಹ್ ಅವರ ಈ ಸಾಧನೆಗೆ ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಸೇರಿದಂತೆ ಬಂಧು-ಮಿತ್ರರು, ಸಹೋದ್ಯೋಗಿಗಳು, ಸಾಹಿತ್ಯಾಸಕ್ತರು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಹಲವರು ಅಭಿನಂದನೆ ಸಲ್ಲಿಸಿದ್ದಾರೆ.