×
Ad

ಭಟ್ಕಳದಲ್ಲಿ ಭೀಕರ ದುರಂತ| ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದ ಎಂಟು ಮಂದಿ ಜಲಸಮಾಧಿ; ಮೂವರು ನಾಪತ್ತೆ

Update: 2026-05-24 18:42 IST

ಭಟ್ಕಳ: ತಟ್ಟಿಹಕ್ಕಲು ಸಮೀಪದ ವೆಂಕಟಾಪುರ ನದಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ದುರಂತದಲ್ಲಿ ಕಪ್ಪೆಚಿಪ್ಪು (ಮಳ್ವಿ) ಸಂಗ್ರಹಿಸಲು ನದಿಗೆ ಇಳಿದಿದ್ದ ಎಂಟು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ.

ಮೃತರನ್ನು  ಮಾಲತಿ ಜಟ್ಟಪ್ಪ ನಾಯ್ಕ, ಲಕ್ಷ್ಮಿ ಮಾದೇವ ನಾಯ್ಕ, ಲಕ್ಷ್ಮಿ ಶಿವರಾಮ ನಾಯ್ಕ, ಲಕ್ಷ್ಮಿ ಅಣ್ಣಪ್ಪ ನಾಯ್ಕ, ಉಮೇಶ್ ಮಂಜುನಾಥ ನಾಯ್ಕ, ಲಕ್ಷ್ಮಿ ಮಾದೇವ ನಾಯ್ಕ, ಮಾಸ್ತಮ್ಮ ಮಂಜುನಾಥ ನಾಯ್ಕ, ಜ್ಯೋತಿ ನಾಗಪ್ಪ ನಾಯ್ಕ (ಹಿರೇಹಿತ್ಲು) ಎಂದು ಗುರುತಿಸಲಾಗಿದೆ.

ಮಾದೇವ ಭೈರಪ್ಪ ನಾಯ್ಕ, ಮಂಜಮ್ಮ ಗೊಯ್ದ ನಾಯ್ಕ, ನಾಗರತ್ನ ಪರಮೇಶ್ವರ ನಾಯ್ಕ ನಾಪತ್ತೆಯಾದವರು ಎಂದು ತಿಳಿದುಬಂದಿದೆ.

ಮೃತರೆಲ್ಲರೂ ಶಿರಾಲಿಯ ಸಾರದಹೊಳೆ ಭಾಗದ ಶ್ರಮಜೀವಿಗಳಾಗಿದ್ದು, ದಿನನಿತ್ಯದ ಜೀವನೋಪಾಯಕ್ಕಾಗಿ ಒಟ್ಟು 14 ಮಂದಿ ಗುಂಪಾಗಿ ನದಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನೀರಿನ ಸೆಳೆತ ಹೆಚ್ಚಾದ ಪರಿಣಾಮ ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಸಮಯಪ್ರಜ್ಞೆ ಮೆರೆದು ಮೂವರನ್ನು ರಕ್ಷಿಸಿದ್ದು, ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ನಾಪತ್ತೆಯಾಗಿರುವ ಮೂವರಿಗಾಗಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಬದುಕು ಕಟ್ಟಿಕೊಳ್ಳಲು ನದಿಗೆ ಇಳಿದವರು ಹೆಣವಾಗಿ ಮರಳುತ್ತಿರುವ ದೃಶ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ತಾಲೂಕಿನ ಇತ್ತೀಚಿನ ಅವಧಿಯ ಅತ್ಯಂತ ದಾರುಣ ದುರಂತಗಳಲ್ಲಿ ಇದೂ ಒಂದಾಗಿದೆ ಎಂದು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.

ತಂಝೀಮ್ ಅಧ್ಯಕ್ಷರಿಂದ ಸಂತಾಪ: ಘಟನೆಗೆ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ದಿನನಿತ್ಯದ ಬದುಕಿಗಾಗಿ ಶ್ರಮಿಸುತ್ತಿದ್ದ ಅಮಾಯಕರು ಇಂತಹ ದಾರುಣ ರೀತಿಯಲ್ಲಿ ಮೃತಪಟ್ಟಿರುವುದು ಮನಕಲಕುವ ಸಂಗತಿ. ಮೃತರ ಕುಟುಂಬಗಳ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ನಾಪತ್ತೆಯಾಗಿರುವವರ ಪತ್ತೆಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News