ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ಡಿವೈಎಸ್‌ಪಿ ಸಂತೋಷ್ ಚೌಹಾಣ್
ಹರಪನಹಳ್ಳಿ : ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನು ಪಾಲನೆ ಮಾಡಬೇಕೆಂದು ಹರಪನಹಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಸಂತೋಷ್ ಚೌಹಾಣ್ ಹೇಳಿದರು.
ನಗರದ ಹರಪನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಹರಪನಹಳ್ಳಿ ಪೊಲೀಸ್ ಠಾಣೆ ವತಿಯಿಂದ 37ನೇ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿವೈಎಸ್‌ಪಿ ಸಂತೋಷ್ ಚೌಹಾಣ್, ದ್ವಿಚಕ್ರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಚಾಲನಾ ಪರವಾನಗಿ, ಇನ್ಶೂರೆನ್ಸ್ ಸೇರಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಸಾರ್ವಜನಿಕರ ಸಾಕಷ್ಟು ಸಾವು ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಹರಿಹರ ವೃತ್ತದಿಂದ್ದ ಸರಕಾರಿ ಆಸ್ಪತ್ರೆಯ ಮುಖ್ಯ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕಾನೂನಿನ ಬಗ್ಗೆ ವಿವಿಧ ಘೋಷ ವಾಕ್ಯಗಳೊಂದಿಗೆ ಪೊಲೀಸರು ಜಾಥಾ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಹರಪನಹಳ್ಳಿ ಸಿಪಿಐ ಮಹಾಂತೇಶ್ ಸಜ್ಜನ್, ವಿವಿಧ ಠಾಣೆ ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ವಿಜಯ ಕೃಷ್ಣ, ಕಿರಣ್ ಕುಮಾರ್, ನಾಗರತ್ನ, ಕ್ರೈಮ್ ವಿಭಾಗದ ಮೀನಾಕ್ಷೀ ಹಾಗೂ ಎಎಸ್ಐಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.