ಚಳುವಳಿಗೆ ಸಾಂಸ್ಕೃತಿ ಬುನಾದಿ ಹಾಕಿಕೊಟ್ಟ ದಾರ್ಶನಿಕ ಹಿರೇಮಠ: ಸಾಹಿತಿ ರಹಮತ್ ತರೀಕೆರೆ
ಹಿರೇಮಠ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ
ವಿಜಯನಗರ (ಹೊಸಪೇಟೆ): ರಾಜ್ಯದ ತಳಸಮುದಾಯಗಳ, ಶೋಷಿತ ವರ್ಗಗಳ ಹಾಗೂ ಜನಸಾಮಾನ್ಯರ ಆಚರಣೆಗಳನ್ನು ಮುಂಚೂಣಿಗೆ ತಂದು, ನಮ್ಮ ಸಾಂಸ್ಕೃತಿಕ ಬೇರುಗಳ ಹುಡುಕಿಕೊಡುವ ಮೂಲಕ ಚಳುವಳಿಗಳಿಗೆ ಸಾಂಸ್ಕೃತಿಕ ಬುನಾದಿ ಹಾಕಿಕೊಟ್ಟ ದಾರ್ಶನಿಕ ಸಂಶೋಧಕ ಹಿರೇಮಠರು ಎಂದು ಸಾಹಿತಿ ರಹಮತ್ ತರೀಕೆರೆ ಅವರು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ವಿಜಯನಗರ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ವಿಜಯನಗರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್.ಎಸ್.ಹಿರೇಮಠ ಅವರ ಸಮಗ್ರ ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಇಂದಿನ ಕಾಲೇಜು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿನಿಮಾ ನಟರು ಅಥವಾ ಜನಪ್ರಿಯ ಭಾಷಣಕಾರರನ್ನು ಕರೆಸಿ ಸಂಭ್ರಮಿಸಲಾಗುತ್ತದೆ. ಆದರೆ, ಹಿರೇಮಠರು ಮೂರು-ನಾಲ್ಕು ದಶಕಗಳ ಕಾಲ ದುಡಿದ ಕರ್ಮಭೂಮಿಯಲ್ಲೇ ಅವರ ಬೌದ್ಧಿಕ ಹಾಗೂ ವಿದ್ವತ್ತಿಗೆ ಸಂಬಂಧಿಸಿದ ಸುಮಾರು 3,000 ಪುಟಗಳ ಅಪಾರ ಸಂಶೋಧನಾ ಕೃತಿಗಳನ್ನು ಓದುಗ ಲೋಕಕ್ಕೆ ಅರ್ಪಿಸುತ್ತಿರುವುದು ಅತ್ಯಂತ ಸಾರ್ಥಕ ಮತ್ತು ಕಿರೀಟಪ್ರಾಯವಾದ ಸಂಗತಿಯಾಗಿದೆ. ಉತ್ತರ ಭಾರತದ ವೈದಿಕ ಆರ್ಯ ವಲಸಿಗರ ಸಂಸ್ಕೃತಿಯ ದಾಳಿಯಿಂದಾಗಿ ನಮ್ಮದೇ ಆದ ದಕ್ಷಿಣದ ಸಂಸ್ಕೃತಿಗೆ ಒಂದು ರೀತಿಯ ವಿಸ್ಮೃತಿ ಕವಿದಿದೆ. ಆದರೆ ಆಲೂರು ವೆಂಕಟರಾಯರು, ಶಂಭಾ ಜೋಶಿ, ಕೆ. ವಿ. ನಾರಾಯಣ ಅವರ ಸಾಲಿನಲ್ಲಿ ನಿಲ್ಲುವ ಹಿರೇಮಠರು ತಮ್ಮ ಇಡೀ ಸಂಶೋಧನೆಯ ಮೂಲಕ 'ಕರ್ನಾಟಕತ್ವದ ವಿಕಾಸ' ಮತ್ತು ಅದರ ವಿಶಿಷ್ಟ ದ್ರಾವಿಡ ಅನನ್ಯತೆಯನ್ನು ಹುಡುಕುವ ದಾರ್ಶನಿಕ ಪ್ರಯತ್ನ ನಡೆಸಿದ್ದರು ಎಂದು ಅವರು ವಿವರಿಸಿದರು. ದಲಿತ ಮತ್ತು ಕೆಳಜಾತಿಗಳಲ್ಲಿ ಇರುವ ನಂಬಿಕೆ-ಆಚರಣೆಗಳು ನಗರೀಕರಣದಿಂದ ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಹಿರೇಮಠರು ಹಟ್ಟಿ ಹಬ್ಬ ಹಾಗೂ ಜಾತ್ರೆಗಳೊಳಗಿರುವ ಜೀವಪರ ದರ್ಶನವನ್ನು ಬರಹ ರೂಪದಲ್ಲಿ ನೀಡಿದ್ದಾರೆ ಎಂದು ತರೀಕೆರೆ ಅವರು ಅಭಿಪ್ರಾಯಪಟ್ಟರು
ಹಿರೇಮಠ ಅವರು ಕೇವಲ ಅಕಾಡೆಮಿಕ್ ಅಥವಾ ಪ್ರಮೋಷನ್‌ಗಾಗಿ ಸಂಶೋಧನೆ ಮಾಡಿದವರಲ್ಲ. ರಾಜಕೀಯ, ಅನಕ್ಷರತೆಯಷ್ಟೇ ಅಪಾಯಕಾರಿಯಾದ ಸಾಂಸ್ಕೃತಿಕ ಅನಕ್ಷರತೆ ನಿವಾರಿಸುವುದು ಅವರ ಗುರಿಯಾಗಿತ್ತು. ದೇಶವನ್ನು ಶಾಪಗ್ರಸ್ತ ಸ್ಥಿತಿಗೆ ತಳ್ಳುತ್ತಿರುವ ಕೋಮು ಆಲೋಚನೆಗಳ ವಿರುದ್ಧ ತಮ್ಮ ಕೃತಿಗಳ ಮೂಲಕ ತೀವ್ರವಾದ ಎಚ್ಚರಿಕೆ ನೀಡಿದ್ದರು. ಕರ್ನಾಟಕದ ದಲಿತ ಚಳುವಳಿ, ಭಾಷಾ ಚಳುವಳಿ ಹಾಗೂ ಎಡಪಂಥೀಯ ಚಳುವಳಿಗಳ ರಾಜಕೀಯ ದೃಷ್ಟಿಕೋನಕ್ಕೆ ಒಂದು ಗಟ್ಟಿಯಾದ ಸಾಂಸ್ಕೃತಿಕ ಬುನಾದಿ ಸಿದ್ಧಮಾಡಿಕೊಟ್ಟ ಮನುಷ್ಯ ಹಿರೇಮಠರು ಎಂದು ಬಣ್ಣಿಸಿದ ಅವರು, ಹಿರೇಮಠರ ಸಾಹಿತ್ಯದಲ್ಲಿ ಪ್ರತಿರೋಧದ ಪ್ರಜ್ಞೆ ಎದ್ದು ಕಾಣುತ್ತದೆ. ಅಂಬೇಡ್ಕರ್ ಅವರ ಕೆಲವು ನಿಲುವುಗಳನ್ನು ಬೌದ್ಧಿಕವಾಗಿ ಒಪ್ಪದೇ, ದಲಿತ ಸಾಂಸ್ಕೃತಿಕ ಲೋಕದ ಅಪಾರ ಸಂಭಾವ್ಯತೆಯನ್ನು ಎತ್ತಿಹಿಡಿದಿದ್ದರು. ಹಿರೇಮಠರಿಗೆ ಇನ್ನು ಸ್ವಲ್ಪ ಆಯುಸ್ಸು ಸಿಕ್ಕಿದ್ದರೆ ಅವರ ಸಂಶೋಧನೆಗಳು ಮತ್ತೊಂದು ಮಜಲು ತಲುಪುತ್ತಿದ್ದವು. ಅವರ ಇಡೀ ಬೌದ್ಧಿಕ ಕನಸುಗಳಲ್ಲಿ ಕರ್ನಾಟಕವನ್ನು ಘನತೆಯಿಂದ ಬದುಕುವ ಒಂದು ನಾಡನ್ನಾಗಿ ಹೇಗೆ ಕಟ್ಟಬೇಕು ಎಂಬ ದೊಡ್ಡ ರಾಜಕೀಯ ಮತ್ತು ಸಾಂಸ್ಕೃತಿಕ ಆಕಾಂಕ್ಷೆಯಿತ್ತು. ಅವರ ಈ ಸಿಡಿಲಿನಂತಹ ಆಲೋಚನೆಗಳಿರುವ ದಲಿತ ಸಂಸ್ಕೃತಿ ಚಿಂತನೆ, ಕರ್ನಾಟಕದ ದರ್ಶನಗಳು, ಸಂಸ್ಕೃತಿ, ಜಾನಪದ, ಮತ್ತು ಸಾಹಿತ್ಯ ವಿಮರ್ಶೆ ಪ್ರತಿಯೊಬ್ಬರೂ ಓದಬೇಕಾಗಿದೆ ಎಂದು ರಹಮತ್ ತರೀಕೆರೆ ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಹಿರೇಮಠರು ತಮ್ಮ ಬದುಕು ಮತ್ತು ಬರಹದಲ್ಲಿ ನಿಷ್ಟುರವಾದಿ ಲೋಕವಿರೋಧಿ ಹಾಗೂ ಸತ್ಯವಾದಿ ಮಹಾನ್ ಚಿಂತನೆಯ ಪ್ರವಾದಿ ಎಂಬ ನಾಣ್ಣುಡಿಯನ್ನು ನಿಜವಾಗಿಸಿದವರು. ಹೊಸ ಇತಿಹಾಸದ ಸೃಷ್ಟಿಗಾಗಿ ನಾವು ನಿಜವಾದ ಇತಿಹಾಸಕ್ಕೆ ಮರಳಬೇಕಾಗಿದೆ ಮತ್ತು ಜನತೆಯ ಸಾಂಸ್ಕೃತಿಕ ಇತಿಹಾಸವನ್ನು ಬರೆಯಬೇಕಾದರೆ ನಾವು ಜನರ ಮಧ್ಯೆ ಮತ್ತೆ ಹೋಗಬೇಕಾಗುತ್ತದೆ ಎಂಬುದರಲ್ಲಿ ನಂಬಿಕೆಯಿಟ್ಟವರು ಎಂದು ಹೇಳಿದರು.
ರಹಮತ್ ತರೀಕೆರೆ ಅವರು ಎಸ್.ಎಸ್.ಹಿರೇಮಠ ಅವರು ಸಮಗ್ರ ಸಾಹಿತ್ಯ ಸಂಪುಟ ಪುಸ್ತಕ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಫಣಿರಾಜ್, ವಿಜಯನಗರ ಮಹಾವಿದ್ಯಾಲಯ ಅಧ್ಯಕ್ಷ ಮಲ್ಲಿಕಾರ್ಜುನ ಎನ್. ಮೆಟ್ರಿ, ಬರಹಗಾರ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಪೀರ್‌ಭಾಷಾ, ಎಸ್.ಎಸ್.ಹಿರೇಮಠ ಅವರ ಪತ್ನಿ ಯೋಗಿತಾ ಎಸ್.ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಹಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ ಸೇರಿದಂತೆ ಸಾಹಿತಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.