ಹರಪನಹಳ್ಳಿ: ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡುವ ರೈತರಿಗೆ ಪ್ರೋತ್ಸಾಹದಾಯಕ ದರ ನೀಡುವುದರ, ಜೊತೆಗೆ ಹಾಲಿನ ಗುಣಮಟ್ಟ ಕಾಪಾಡುವುದು ಪ್ರತಿಯೊಬ್ಬ ಉತ್ಪಾದಕರ ಜವಾಬ್ದಾರಿಯಾಗಿದ್ದು, ನೀರು ಬೆರೆಸದೆ ಶುದ್ಧ ಹಾಲು ಪೂರೈಸುವ ಮೂಲಕ ಸಹಕಾರ ಸಂಘದ ವಿಶ್ವಾಸಾರ್ಹತೆ ಹೆಚ್ಚಿಸಬೇಕು ಎಂದು ವಿಜಯನಗರ ಜಿಲ್ಲಾ ಉಪ ವ್ಯವಸ್ಥಾಪಕ ಯಶವಂತ ಯಾದವ್ ಹೇಳಿದರು.

ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿರುವ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಗ್ರಾಮೀಣ ಭಾಗದ ಮಹಿಳೆಯರು ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾತ್ರ ಪರಿಗಣಿಸದೆ, ಸ್ವತಂತ್ರ ಆದಾಯ ಗಳಿಸುವ ಉದ್ಯಮವಾಗಿ ರೂಪಿಸಿಕೊಳ್ಳಬೇಕು. ದಿನವೊಂದಕ್ಕೆ 5ರಿಂದ 10 ಲೀಟರ್ ಹಾಲು ಉತ್ಪಾದಿಸಿ ಸಂಘಕ್ಕೆ ಪೂರೈಸಿದರೆ ಮಾಸಿಕವಾಗಿ 10 ಸಾವಿರ ರೂ.ಗೂ ಅಧಿಕ ಆದಾಯ ಗಳಿಸಲು ಅವಕಾಶವಿದೆ. ಮಹಿಳೆಯರ ಆರ್ಥಿಕ ಪ್ರಗತಿಗೆ ಪೂರಕವಾಗಿ ಜಿಲ್ಲಾ ಹಾಲು ಒಕ್ಕೂಟದಿಂದ ಸಂಘಕ್ಕೆ ಅಗತ್ಯ ನೆರವು ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ರಾ.ಬ.ಕೊ.ಹಾ. ಹಾಲು ಒಕ್ಕೂಟದ ನಿರ್ದೇಶಕರಾದ ಎಚ್.ಆರ್. ರತ್ನಮ್ಮ ಅಶೋಕ, ಶಿವದರ್ಶನ್, ಬಿ. ಮೃತುಂಜಯ್ಯ ಹಾಗೂ ಜಿ.ಪಿ. ಶಿವಕುಮಾರ್ ಮಾತನಾಡಿ, ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಭದ್ರತೆ ಕಲ್ಪಿಸಲು ಇಂತಹ ಸಂಘಗಳು ಸಹಕಾರಿಯಾಗಲಿವೆ ಎಂದರು.

ನೂತನ ಸಂಘದ ಆರಂಭದ ದಿನವೇ 50ಕ್ಕೂ ಹೆಚ್ಚು ಮಹಿಳಾ ಹಾಲು ಉತ್ಪಾದಕರು ಹಾಲು ಪೂರೈಸಿದ್ದು, ಸಂಘದ ಚಟುವಟಿಕೆಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷೆ ಎಸ್. ಲಕ್ಷ್ಮಿ, ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ನಿರ್ದೇಶಕರಾದ ಡಿ.ಎಚ್. ದೇವಿಕಾ, ಸುಶೀಲಮ್ಮ, ಗೌರಮ್ಮ, ಡಿ. ಕೊಟ್ರಮ್ಮ, ಅಂಬಿಕಾ, ನಾಗವೇಣಿ, ಸುಜಾತ, ವಿಜಯಮ್ಮ, ಕಮಲಮ್ಮ, ಗ್ರಾಮದ ಹಿರಿಯರಾದ ಜಿ. ಗುರುಶಾಂತಪ್ಪ, ಬಿಕ್ಕಿಕಟ್ಟಿ ಚನ್ನಬಸಪ್ಪ, ಶಿವಮೂರ್ತಪ್ಪ, ಜಿ. ಭರ್ಮಪ್ಪ, ರುದ್ರಾಚಾರಿ, ಜಿ. ಮಂಜಮ್ಮ, ಗಂಗಪ್ಪ, ಡಿ. ಅರುಣ, ಹಾಗೂ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕರಿಬಸಮ್ಮ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor