ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ : ಶಾಸಕಿ ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ:‘ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಸಂಪರ್ಕ ಕೊಂಡಿಗಳು ಹೆಚ್ಚಿನ ಮಟ್ಟದಲ್ಲಿ ಬೆಳೆಯುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ’ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಗಡಿಯಿಂದ ಕಂಚಿಕೆರೆ ಗ್ರಾಮದವರೆಗೆ ಆಯ್ದಭಾಗದಲ್ಲಿ ರಸ್ತೆ ಅಭಿವೃದ್ಧಿಗೆ 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಜಂಬುಲಿಂಗನಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ನನ್ನ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಮುಂದಿನ ಗುರಿ, ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಲಕ್ಷ್ಮಿಪುರ, ಕಂಚಿಕೆರೆ ಮಾರ್ಗದ ಸಿಸಿ ರಸ್ತೆ, ಡಾಂಬರೀಕರಣ, ಅಗಲೀಕರಣ ಮಾಡಿ ಅಭಿವೃದ್ದಿ ಪಡಿಸಲಾಗುವುದು ಎಂದರು.
ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಸಂಪರ್ಕ ಕೊಂಡಿಗಳು ಹೆಚ್ಚಿನ ಮಟ್ಟದಲ್ಲಿ ಬೆಳೆಯುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ. ಗುತ್ತಿಗೆದಾರರು ಅಭಿವೃದ್ಧಿ ತಾರತಮ್ಯ ಮಾಡದೇ ತಾಲೂಕಿನ ಸಮಗ್ರ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಾಂತಕುಮಾರ್ ರೆಡ್ಡಿ, ಕಂಚಿಕೆರೆ ಜಯಲಕ್ಷ್ಮಿ, ಮತ್ತೂರು ಬಸವರಾಜ್, ಬಿದ್ರಿ ಸುನೀಲ್ ಕುಮಾರ್, ಕುಬೇರಪ್ಪ ಸೇರಿದಂತೆ ಅಭಿಯಂತರರು, ಗುತ್ತಿಗೆದಾರರು ಉಪಸ್ಥಿತರಿದ್ದರು.