Vijayanagara | ಪೊಲೀಸ್ ಠಾಣೆಯಲ್ಲಿ ಯುವಕನ ಅನುಮಾನಾಸ್ಪದ ಸಾವು ಪ್ರಕರಣ : ಕುಟುಂಬಕ್ಕೆ ನೂರ್ ಅಹ್ಮದ್ ಸಾಂತ್ವನ
ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಹಗರಿಬೊಮ್ಮನಹಳ್ಳಿ/ವಿಜಯನಗರ, ಆ.5: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಭವಿಸಿರುವ ಕಸ್ಟೋಡಿಯಲ್ ಡೆತ್ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಖಲೀಲ್ ಅವರ ನಿವಾಸಕ್ಕೆ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್.ಎಸ್.ಬಶೀರ್ ಅಹ್ಮದ್, ಕಾಂಗ್ರೆಸ್ ಮುಖಂಡ ನೂರ್ ಅಹ್ಮದ್ ನೇತೃತ್ವದ ನಿಯೋಗ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿತು.
ಕುಟುಂಬ ಸದಸ್ಯರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ನೂರ್ ಅಹ್ಮದ್, ಪ್ರಕರಣದ ತನಿಖೆ ಯಾವುದೇ ರೀತಿಯ ಪಕ್ಷಪಾತವಿಲ್ಲದೆ ನಡೆಯಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಆರ್ಥಿಕ ನೆರವು ನೀಡಬೇಕು ಹಾಗೂ ಮಕ್ಕಳ ಭವಿಷ್ಯವನ್ನು ಭದ್ರಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮೃತ ಖಲೀಲ್ ಅವರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ನೂರ್ ಅಹ್ಮದ್ ಘೋಷಿಸಿದರು.
ಪತ್ನಿಯಿಂದ ಗಂಭೀರ ಆರೋಪ :
ಮೃತ ಖಲೀಲ್ ಅವರ ಪತ್ನಿ ಶೈನಾಜ್ ಮಾತನಾಡಿ, ಪತಿಯನ್ನು ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದ ಬಳಿಕ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಅವರು ಕಣ್ಣೀರಿಟ್ಟರು. ಈ ಆರೋಪಗಳ ಕುರಿತು ಪೊಲೀಸರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಸಿಐಡಿ ತನಿಖೆಗೆ ಒತ್ತಾಯ :
ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್. ಬಶೀರ್ ಅಹ್ಮದ್ ಮಾತನಾಡಿ, ಪ್ರಕರಣದ ಕುರಿತು ಸ್ವತಂತ್ರ ಸಿಐಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಠಾಣೆಯ ಸಿಸಿಟಿವಿ ದೃಶ್ಯಾವಳಿ, ವೈದ್ಯಕೀಯ ದಾಖಲೆಗಳು ಹಾಗೂ ಮರಣೋತ್ತರ ಪರೀಕ್ಷೆ ವರದಿ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ನ್ಯಾಯ ದೊರೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಕಸ್ಟೋಡಿಯಲ್ ಡೆತ್ ಆರೋಪದ ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಕುಟುಂಬದ ಆರೋಪಗಳ ಕುರಿತು ತನಿಖೆಯ ಅಂತಿಮ ವರದಿ ಹಾಗೂ ಸಂಬಂಧಿತ ಅಧಿಕಾರಿಗಳ ಅಧಿಕೃತ ಮಾಹಿತಿ ಹೊರಬರಬೇಕಿದೆ.