Vijayanagara | ಗುರು ಬೆಳಗಿಸಿದ ಜ್ಞಾನದ ದೀಪ ಎಂದಿಗೂ ಆರದು : ಶಾಸಕ ಡಾ. ಶ್ರೀನಿವಾಸ್ ಎನ್.ಟಿ.
ಡಾ.ಟಿ.ಕೊತ್ಲಮ್ಮ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕೂಡ್ಲಿಗಿ/ವಿಜಯನಗರ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಟಿ.ಕೊತ್ಲಮ್ಮ ಅವರ 32 ವರ್ಷಗಳ ಸರ್ಕಾರಿ ಸೇವಾ ನಿವೃತ್ತಿ ಅಂಗವಾಗಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ ಶ್ರೀನಿವಾಸ್ ಎನ್.ಟಿ. ಮಾತನಾಡಿ, ಸೇವೆಗೆ ನಿವೃತ್ತಿ ಇರಬಹುದು. ಆದರೆ, ಗುರು ಬೆಳಗಿಸಿದ ಜ್ಞಾನದ ದೀಪ ಎಂದಿಗೂ ಆರದು. ಶಿಕ್ಷಕರ ಸ್ಥಾನ ಸಮಾಜದಲ್ಲಿ ಸದಾ ಚಿರಸ್ಥಾಯಿಯಾಗಿರುತ್ತದೆ ಎಂದು ಹೇಳಿದರು.
ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿ, ಶಿಕ್ಷಣ ಕ್ಷೇತ್ರಕ್ಕೆ ಡಾ. ಕೊತ್ಲಮ್ಮ ಅವರು ನೀಡಿರುವ ಅಮೂಲ್ಯ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಶ್ಲಾಘಿಸಿದ ಶಾಸಕ, ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಮುಂದಿನ ಜೀವನ ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲೆಂದು ಹಾರೈಸಿದರು.
ವಿದಾಯ ಭಾಷಣದಲ್ಲಿ ಡಾ.ಟಿ.ಕೊತ್ಲಮ್ಮ ಅವರು ತಮ್ಮ 32 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ, ಶಿಕ್ಷಣವೇ ಸಮಾಜದ ಪರಿವರ್ತನೆಯ ಶಕ್ತಿಯಾಗಿದ್ದು, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣವೇ ಅಡಿಪಾಯ ಎಂದು ಹೇಳಿದರು. ಕಾಲೇಜಿನ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಗಣ್ಯರು, ಉಪನ್ಯಾಸಕರು, ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ನಿವೃತ್ತ ಪ್ರಾಂಶುಪಾಲರಿಗೆ ಗೌರವಪೂರ್ವಕವಾಗಿ ಬೀಳ್ಕೊಟ್ಟರು.