×
Ad

Vijayapura | ಚಡಚಣದಲ್ಲಿ ಆರು ಮಂದಿಯ ಭೀಕರ ಕೊಲೆ ಪ್ರಕರಣ; 12 ಜನರ ವಿರುದ್ಧ ಎಫ್ಐಆರ್

Update: 2026-05-30 21:02 IST

ಕೊಲೆಯಾದವರು

ವಿಜಯಾಪುರ : ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಿನ್ನೆ ನಡೆದ ಆರು ಜನರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣ ಪೊಲೀಸ್ ಠಾಣೆಯಲ್ಲಿ ಒಟ್ಟು 12 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ತನಿಖೆ ತೀವ್ರಗತಿಯಲ್ಲಿ ಸಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಘಟನೆಯಲ್ಲಿ ಐವರು ಕುಟುಂಬಸ್ಥರು ಹಾಗೂ ಓರ್ವ ಕಾರ್ಮಿಕನನ್ನು ಕಳೆದುಕೊಂಡ ನಿರಾಳೆ ಕುಟುಂಬದ ಸದಸ್ಯರೊಬ್ಬರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಡಚಣ ತಾಲೂಕಿನ ಕಲ್ಲಣ್ಣಗೌಡ ಪಾಟೀಲ್ ಅವರನ್ನು ಈ ಪ್ರಕರಣದಲ್ಲಿ ಮೊದಲ ಆರೋಪಿ  ಎಂದು ಹೆಸರಿಸಲಾಗಿದೆ. ಅಪ್ಪುಗೌಡ ಲಗಮನಗೌಡ ಊರ್ಫ್ ಲಕ್ಕನಗೌಡ ಪಾಟೀಲ, ಈಶ್ವರಪ್ಪ ಲಗಮನಗೌಡ ಪಾಟೀಲ, ಪ್ರಕಾಶ ಬಸವರಾಜ ಮಾಸ್ತರ್ ಊರ್ಪ್ ಪಾಟೀಲ, ಪ್ರಶಾಂತ ಊರ್ಫ್ ಪರುಗೌಡ, ಬಸವರಾಜ ಮಾಸ್ತರ್ ಊರ್ಫ್ ಪಾಟೀಲ, ಸಿದ್ದರಾಮ ಕಲ್ಲನಗೌಡ ಪಾಟೀಲ, ಲಾಯಪ್ಪ ನೇನಪ್ಪಾ ಬಿರಾದಾರ, ಚಿದಾನಂದಗೌಡ ನಾಮದೇವ ಕೋಲಿ ಊರ್ಫ್ ಟಕ್ಕಲಕಿ, ಮಾಸಿದ್ದ ಶ್ರೀಮಂತ ಬಿರಾದಾರ, ಶ್ರೀಮಂತ ಶಂಕರಪ್ಪ ಬಿರಾದಾರ, ಶಂಕರಪ್ಪ ಮಾದೇವ ಅರಕೇರಿ, ಅಪ್ಪಾಸಾಹೇಬ ಶಂಕರ ಭೋವಿ ಇವರ ಮೇಲೆ ಪ್ರಕರಣ ದಾಖಲಾಗಿದೆ.

ಹತ್ಯೆಗೆ ಮೂಲ ಕಾರಣ ಜಮೀನು ವಿವಾದವೇ ..!

ಶುಕ್ರವಾರ ನಡೆದ ಘಟನೆಗೆ ಜಮೀನಿನ ವಿವಾದವೇ ಕಾರಣ ಎಂದು ತಿಳಿಸಲಾಗಿದೆ. ಗೋವಿಂದಪುರದಲ್ಲಿ ನಿವರಗಿ ಗ್ರಾಮದ ಖ್ಯಾಮನಿಂಗ ತೇಲಿ ಕುಟುಂಬಕ್ಕೆ ಸೇರಿದ ಜಮೀನಿತ್ತು. ಸುಮಾರು 5-6 ತಿಂಗಳ ಹಿಂದೆ ತೇಲಿ ಕುಟುಂಬ ನಿರಾಳೆ ಅವರ ಮನೆಗೆ ಬಂದು ಗೋವಿಂದಪುರದಲ್ಲಿ ತಮ್ಮ ಜಮೀನಿದ್ದು, ಈ ಹಿಂದೆ ಕೊಲೆ ಪ್ರಕರಣವೊಂದರ ಹಿನ್ನೆಲೆ ಅಲ್ಲಿ ಉಳುಮೆ ಮಾಡಲಾಗದೇ ಜಮೀನು ಪಾಳುಬಿದ್ದಿದೆ. ಕಲ್ಲನಗೌಡ ಈಶ್ವರಗೌಡ ಪಾಟೀಲ ಹಾಗೂ ಅವರ ಕುಟುಂಬಸ್ಥರು ಉಳಮೆಗೆ ತಕರಾರು ಮಾಡುತ್ತಿದ್ದು, ತಾವು ಜಮೀನು ತೆಗೆದುಕೊಳ್ಳುವುದಿದ್ದರೆ ಖರೀದಿ ಹಾಕಿಕೊಡುವುದಾಗಿ ತಿಳಿಸಿದ್ದರು. ಅದಕ್ಕೆ ಒಪ್ಪಿಕೊಂಡಿದ್ದ ನಿರಾಳೆ ಕುಟುಂಬ ಮೊದಲು ಕಲ್ಲನಗೌಡರಿಗೂ ಈ ಕುರಿತು ತಿಳಿಸಿ ತಂಟೆ-ತಕರಾರು ಏನಾದರೂ ಇದೆಯೇ ಎಂದು ಕೇಳಿತ್ತು. ಆಗ ಯಾವುದೇ ತಕರಾರು ಇಲ್ಲವೆಂದು ಕಲ್ಲನಗೌಡರ ಕುಟುಂಬ ತಿಳಿಸಿತ್ತು. ಹೀಗಾಗಿ ನಿರಾಳೆ ಕುಟುಂಬ ತೇಲಿ ಅವರ ಜಮೀನು ಖರೀದಿಸಿತ್ತು. ಇದೀಗ ಕಳೆದೊಂದು ವಾರದಿಂದ ಜಮೀನಿನಲ್ಲಿ ಸ್ವಚ್ಛಗೊಳಿಸಲು ಹೋದಾಗ ಕಲ್ಲನಗೌಡ ಪಾಟೀಲ ಹಾಗೂ ಕುಟುಂಬಸ್ಥರು ಅಡ್ಡಿಪಡಿಸಿದರು ಎನ್ನಲಾಗಿದೆ.

ಈ ಬಗ್ಗೆ ತಹಸೀಲ್ದಾರ್ ಕೋರ್ಟ್ನಲ್ಲಿಯೂ ದಾವೆ ಹೂಡಲಾಗಿ ನಿರಾಳೆ ಕುಟುಂಬದ ಪರವಾಗಿಯೇ ನ್ಯಾಯ ಸಿಕ್ಕಿತ್ತು. ಹೀಗಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಅಲ್ಲಿಗೆ ಬಂದ ಆರೋಪಿತರು ಖಾರದ ಪುಡಿ ಕಣ್ಣಿಗೆ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಶನಿವಾರದಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕೊಲೆಯಾದ ಮೃತರ ದೇಹಗಳನ್ನು ಶನಿವಾರ ಸ್ವಗ್ರಾಮ ಚಡಚಣಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಿರಾಳೆ ಕುಟುಂಬದವರ ಅಂತ್ಯ ಸಂಸ್ಕಾರ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿತು. ಮೃತ ಶಬ್ಬೀರ್‌ ನದಾಫ ಅವರ ಅಂತ್ಯ ಸಂಸ್ಕಾವನ್ನು ಮುಸ್ಲಿಂ ಸಂಪ್ರದಾಯದಂತೆ ಚಡಚಣದಲ್ಲಿ ನೆರವೇರಿಸಲಾಯಿತು.

ಶುಕ್ರವಾರ ತಡರಾತ್ರಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆಗೆ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ

ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸದ್ಯದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು," ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News