×
Ad

Vijayapura | ಗೃಹಬಳಕೆ ಗ್ಯಾಸ್ ಅಕ್ರಮ ದಂಧೆ ಬಯಲು : 23 ಸಿಲಿಂಡರ್ ವಶ

Update: 2026-06-24 14:21 IST

ವಿಜಯಪುರ : ನಗರದಲ್ಲಿ ಗೃಹಬಳಕೆ ಸಿಲಿಂಡರ್‌ಗಳಿಂದ ಅನಧಿಕೃತವಾಗಿ ವಾಣಿಜ್ಯ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಿಸಿ ಹೋಟೆಲ್‌ಗಳಿಗೆ ಮಾರಾಟ ಮಾಡುತ್ತಿದ್ದ ಅಕ್ರಮ ದಂಧೆಯನ್ನು ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ.

ನಗರದ ರಹೀಂ ನಗರದ ರಾಜೇಶ್ವರಿ ಮಲ್ಲಪ್ಪ ಬರಟಗಿ ಅವರ ಮಾಲೀಕತ್ವದ ಜಾಗದಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದರು.

ದಾಳಿ ವೇಳೆ ಸುಮಾರು 10 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು ಹಾಗೂ 13 ಗೃಹಬಳಕೆ ಸಿಲಿಂಡರ್‌ಗಳು ಪತ್ತೆಯಾಗಿದ್ದು, ಒಟ್ಟು 23 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆಹಾರ ನಿರೀಕ್ಷಕ ಶಂಕರಗೌಡ ಬಿರಾದಾರ ಅವರು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹೋಟೆಲ್ ಮಾಲಕರಿಗೆ ಎಚ್ಚರಿಕೆ :

ಗೃಹಬಳಕೆ ಸಿಲಿಂಡರ್‌ಗಳ ಗ್ಯಾಸ್ ಅನ್ನು ಅನಧಿಕೃತವಾಗಿ ವಾಹನಗಳಿಗೆ ಅಥವಾ ವಾಣಿಜ್ಯ ಸಿಲಿಂಡರ್‌ಗಳಿಗೆ ವರ್ಗಾಯಿಸಿ ಹೋಟೆಲ್‌ಗಳಿಗೆ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ವಿನಯಕುಮಾರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಹೋಟೆಲ್ ಮಾಲಕರು ಸರ್ಕಾರದ ಅಧಿಕೃತ ಗ್ಯಾಸ್ ಏಜೆನ್ಸಿಗಳಿಂದಲೇ ವಾಣಿಜ್ಯ ಸಿಲಿಂಡರ್‌ಗಳನ್ನು ಖರೀದಿಸಿ ಬಳಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News