ಹೋಮಿಯೋಪತಿಯನ್ನು ಕಪಟ ವೈದ್ಯರೆಂದು ಕರೆಯಬೇಡಿ; ಲಿವರ್ ಡಾಕ್ ಪೋಸ್ಟ್ಗಳನ್ನು ಬ್ಲಾಕ್ ಮಾಡಿದ ಸರ್ಕಾರ
Photo Credit : newslaundry.com
ಜೂನ್ 8ರಂದು ಸಂಜೆ ಕಳುಹಿಸಿದ ಎಚ್ಚರಿಕೆಯಲ್ಲಿ, ನೋಂದಾಯಿತ ಹೋಮಿಯೋಪತಿ ವೈದ್ಯರನ್ನು ‘ಕ್ವಾಕ್ಸ್’ (ಕಪಟ ವೈದ್ಯರು) ಎಂದು ಕರೆಯುವುದು ಮಾನಹಾನಿಕರವಾಗಿದ್ದು, ಕಾನೂನುಬದ್ಧ ಕ್ರಮಕ್ಕೆ ಕಾರಣವಾಗಬಹುದು ಎಂದು ಸರ್ಕಾರ ಹೇಳಿದೆ.
ಆಯುಷ್ ಸಚಿವಾಲಯದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿರುವ ಹೋಮಿಯೋಪತಿಯ ರಾಷ್ಟ್ರೀಯ ಆಯೋಗದಡಿಯಲ್ಲಿರುವ ಹೋಮಿಯೋಪತಿಗಾಗಿ ನೀತಿ ಮತ್ತು ನೋಂದಣಿ ಮಂಡಳಿ (BERH) ಜೂನ್ 8ರಂದು ಸಂಜೆ ಕಳುಹಿಸಿದ ಎಚ್ಚರಿಕೆಯಲ್ಲಿ, ನೋಂದಾಯಿತ ಹೋಮಿಯೋಪತಿ ವೈದ್ಯರನ್ನು ‘ಕ್ವಾಕ್ಸ್’ (ಕಪಟ ವೈದ್ಯರು) ಎಂದು ಕರೆಯುವುದು ಮಾನಹಾನಿಕರವಾಗಿದ್ದು, ಕಾನೂನುಬದ್ಧ ಕ್ರಮಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
BERH ಅಧ್ಯಕ್ಷರಾದ ಡಾ. ಹರ್ಚರಣ್ ಜೀತ್ ಕೌರ್ ಸಹಿ ಹಾಕಿರುವ ಸುತ್ತೋಲೆಯಲ್ಲಿ, “ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು, ಪತ್ರಿಕಾ ಪ್ರಕಟಣೆಗಳು ಅಥವಾ FIR ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ನೋಂದಾಯಿತ ಹೋಮಿಯೋಪತಿ ವೈದ್ಯರನ್ನು ‘ಕ್ವಾಕ್ಸ್’ ಎಂದು ಕರೆಯುವುದು ದಾರಿತಪ್ಪಿಸುವ, ಮಾನಹಾನಿಕರ ಮತ್ತು ಅವರ ವೃತ್ತಿಪರ ಖ್ಯಾತಿಗೆ ಹಾನಿಕರವಾಗಿದೆ. ಇಂತಹ ಪ್ರವೃತ್ತಿಯು ಅನ್ವಯವಾಗುವ ಶಾಸನಬದ್ಧ ನಿಬಂಧನೆಗಳು ಹಾಗೂ ನೋಂದಾಯಿತ ಹೋಮಿಯೋಪತಿ ವೈದ್ಯರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಬಹುದು” ಎಂದು ಹೇಳಲಾಗಿದೆ.
ಎರಡನೇ ನಿರ್ದೇಶನದಲ್ಲಿ, “ಎಲ್ಲ ವೈದ್ಯರು, ಸಂಸ್ಥೆಗಳು ಮತ್ತು ಸಂಬಂಧಿತರು ಹೋಮಿಯೋಪತಿ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ‘ಸರಿಯಾದ ಶ್ರದ್ಧೆ ವಹಿಸಬೇಕು’ ಹಾಗೂ ಮಾನಹಾನಿಕರ, ದಾರಿತಪ್ಪಿಸುವ ಅಥವಾ ಪೂರ್ವಾಗ್ರಹಪೀಡಿತ ಭಾಷೆಯ ಬಳಕೆಯನ್ನು ತಪ್ಪಿಸಬೇಕು” ಎಂದು ಹೇಳಲಾಗಿದೆ. ಆದರೆ ಯಾರು ಕ್ರಮ ಕೈಗೊಳ್ಳುತ್ತಾರೆ ಮತ್ತು ಯಾವ ಕಾನೂನು ಕ್ರಮವನ್ನು ಅನುಸರಿಸಬಹುದು ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.
ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ತಮ್ಮ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿರುವುದಾಗಿ ‘ಲಿವರ್ ಡಾಕ್’ ಎಂದೇ ಪ್ರಸಿದ್ಧರಾಗಿರುವ ಡಾ. ಸಿರಿಯಾಕ್ ಅಬ್ಬೆ ಫಿಲಿಪ್ಸ್ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ಸಿರಿಯಾಕ್ ಅವರು ಎರಡು ಪೋಸ್ಟ್ಗಳ ಮೂಲಕ ದೃಢಪಡಿಸಿದ್ದಾರೆ. “ಹೋಮಿಯೋಪತಿ ಆಯೋಗದ ನಿರ್ದೇಶನದ ಆಧಾರದ ಮೇಲೆ ಭಾರತ ಸರ್ಕಾರವು ಹೋಮಿಯೋಪತಿಯನ್ನು ಟೀಕಿಸುವ ಸಾಮಾಜಿಕ ಜಾಲತಾಣದ ಪೋಸ್ಟ್ ಗಳನ್ನು ನಿರ್ಬಂಧಿಸುತ್ತಿದೆ. ಇದು ಸರ್ಕಾರಕ್ಕೆ ತುಂಬಾ ನಾಚಿಕೆಗೇಡಿನ ಸಂಗತಿ” ಎಂದು ಅವರು ಬರೆದುಕೊಂಡಿದ್ದಾರೆ.
ಇಂದು ಬೆಳಿಗ್ಗೆ ಮತ್ತೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಅವರು ನಿರ್ಬಂಧದ ವಿರುದ್ಧ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಭಾರತ ಸರ್ಕಾರ ಮತ್ತು ಆಯುಷ್ ಸಚಿವಾಲಯವು ಭಾರತದಲ್ಲಿನ ಪರ್ಯಾಯ ಔಷಧ ಉದ್ಯಮ ಹಾಗೂ ಅದರ ವೈದ್ಯರಿಗೆ ವೈದ್ಯಕೀಯ ವಿಜ್ಞಾನ ಸಮುದಾಯದ ಟೀಕೆಗಳಿಂದ ವಿನಾಯಿತಿ ನೀಡಿದೆ” ಎಂದು ಅವರು ಬರೆದಿದ್ದಾರೆ.