ವಾರಕ್ಕೆ 5 ಮೊಟ್ಟೆಗಳನ್ನು ಸೇವಿಸುವುದರಿಂದ ಅಲ್ಝೀಮರ್ ಅಪಾಯ ಕಡಿಮೆಯಾಗಲಿದೆ!
ಸಾಂದರ್ಭಿಕ ಚಿತ್ರ | Photo Credit : freepik
ಅಲ್ಜೀಮರ್ ಒಂದು ನಿಧಾನವಾಗಿ ಅಭಿವೃದ್ಧಿ ಹೊಂದುವ ನರ ಕ್ಷೀಣಗೊಳ್ಳುವ ಕಾಯಿಲೆಯಾಗಿದ್ದು, ಬುದ್ಧಿ ಮಾಂದ್ಯತೆಗೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.
ಪ್ರತಿ ವಾರ ಕನಿಷ್ಠ ಐದು ಮೊಟ್ಟೆಗಳನ್ನು ಸೇವಿಸುವುದರಿಂದ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರು ಅಲ್ಝೀಮರ್ ರೋಗದ ಅಪಾಯ ಕಡಿಮೆ ಮಾಡಬಹುದು ಎಂದು ಲೋಮಾ ಲಿಂಡಾ ವಿಶ್ವವಿದ್ಯಾಲಯದ ಅಡ್ವೆಂಟಿಸ್ಟ್ ಆರೋಗ್ಯ ವಿಜ್ಞಾನ ಕೇಂದ್ರದ 2026ರ ಅಧ್ಯಯನ ಕಂಡುಹಿಡಿದಿದೆ.
“ಮೊಟ್ಟೆಗಳನ್ನು ಎಂದಿಗೂ ತಿನ್ನದೆ ಇರುವುದಕ್ಕೆ ಹೋಲಿಸಿದರೆ ವಾರಕ್ಕೆ ಕನಿಷ್ಠ ಐದು ಮೊಟ್ಟೆಗಳನ್ನು ತಿನ್ನುವುದರಿಂದ ಅಲ್ಝೀಮರ್ ಅಪಾಯವನ್ನು ಕಡಿಮೆ ಮಾಡಬಹುದು” ಎಂದು ವಿಶ್ವವಿದ್ಯಾಲಯದ ಪ್ರಾದ್ಯಾಪಕಿ ಮತ್ತು ಅಧ್ಯಯನದ ಪ್ರಧಾನ ತನಿಖಾಧಿಕಾರಿ ಜೋನ್ ಸಬಾಟೆ ಹೇಳಿದ್ದಾರೆ.
“ದಿನ ನಿತ್ಯ ಸೇವಿಸದೆ ಇದ್ದರೂ ಸಹ ಆಗಾಗ್ಗೆ ಮೊಟ್ಟೆಗಳನ್ನು ಸೇವಿಸುವುದರಿಂದ ಅಲ್ಝೀಮರ್ನ ಅಪಾಯ ಗಮನಾರ್ಹ ಕಡಿಮೆಯಾಗಲಿದೆ. ತಿಂಗಳಿಗೆ 1ರಿಂದ 3 ಬಾರಿ ಮೊಟ್ಟೆಗಳನ್ನು ತಿನ್ನುವುದರಿಂದ ಶೇ 17ರಷ್ಟು ಕಡಿಮೆ ಅಪಾಯವಿದೆ ಎಂದು ಕಂಡುಕೊಂಡರೆ, ವಾರಕ್ಕೆ ಎರಡರಿಂದ ನಾಲ್ಕು ಬಾರಿ ಮೊಟ್ಟೆಗಳನ್ನು ತಿನ್ನುವುದರಿಂದ ಶೇ 20ರಷ್ಟು ಕಡಿಮೆ ಅಪಾಯವಿದೆ” ಎಂದು ಸಬಾಟೆ ವಿವರಿಸಿದ್ದಾರೆ.
ಅಲ್ಝೀಮರ್ ರೋಗ ಎಂದರೇನು?
ಅಲ್ಜೀಮರ್ ಒಂದು ನಿಧಾನವಾಗಿ ಅಭಿವೃದ್ಧಿ ಹೊಂದುವ ನರ ಕ್ಷೀಣಗೊಳ್ಳುವ ಕಾಯಿಲೆಯಾಗಿದ್ದು, ಬುದ್ಧಿ ಮಾಂದ್ಯತೆಗೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಈ ಸ್ಥಿತಿಯು ಮೆದುಳಿನಲ್ಲಿ ಪ್ರೊಟೀನ್ ಶೇಖರಣೆ ಹೆಚ್ಚಿಸುತ್ತದೆ. ಹೀಗಾಗಿ ಮೆದುಳಿನ ಕೋಶಗಳು ಸಾಯುವಂತೆ ಮಾಡುತ್ತದೆ ಮತ್ತು ಕ್ರಮೇಣ ಮೆದುಳಿನ ಗಾತ್ರ ಕುಗ್ಗಿಸುತ್ತದೆ. ಅಂತಿಮವಾಗಿ ಮೆದುಳಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ.
ಮುಖ್ಯವಾಗಿ 65 ಮೀರಿದ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಗೆ ಪ್ರಸ್ತುತ ಚಿಕಿತ್ಸೆ ಇಲ್ಲದಿದ್ದರೂ ಕೆಲವು ಚಿಕಿತ್ಸೆಗಳು ರೋಗ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಜೀವನದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತವೆ.
ಮೊಟ್ಟೆ ಮತ್ತು ಮೆದುಳಿನ ಆರೋಗ್ಯದ ನಡುವಿನ ಸಂಬಂಧವೇನು?
ಮೊಟ್ಟೆಗಳು ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಪ್ರಮುಖ ಪೋಷಕಾಂಶಗಳನ್ನು ಹೊಂದಿವೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಮೊಟ್ಟೆಯು ಮೆದುಳು ಮತ್ತು ದೇಹದ ಕಾರ್ಯಗಳಿಗೆ ಅಗತ್ಯವಾಗಿರುವ ಕೋಲೀನ್ ಅನ್ನು ಒದಗಿಸುತ್ತದೆ. ಕೋಲೀನ್ ಅಗತ್ಯ ಪೋಷಕಾಂಶವಾಗಿದ್ದರೂ ದೇಹವು ಸಣ್ಣ ಪ್ರಮಾಣದಲ್ಲಿ ಅದನ್ನು ಉತ್ಪಾದಿಸುತ್ತದೆ. ಹೀಗಾಗಿ ಸಮತೋಲನಕ್ಕೆ ಪೂರಕವಾಗಿ ಕೋಲೀನ್ ಸೇವನೆ ಅಗತ್ಯವಾಗಿರುತ್ತದೆ.
ಮೊಟ್ಟೆಗಳಲ್ಲಿ ಮತ್ತೊಂದು ಪ್ರಮುಖ ಒಮೆಗಾ-3 ಕೊಬ್ಬಿನಾಮ್ಲವೂ ಸಮೃದ್ಧವಾಗಿದೆ. ನಿರ್ದಿಷ್ಟವಾಗಿ ಹಳದಿ ಲೋಳೆಯು ಫಾಸ್ಫೋಲಿಪಿಡ್ಗಳಲ್ಲಿ ಸಮೃದ್ಧವಾಗಿದೆ. ಹಳದಿ ಲೋಳೆಯು ಒಟ್ಟು ಮೊಟ್ಟೆಯ ಲಿಪಿಡ್ಗಳಲ್ಲಿ ಶೇ 30ರಷ್ಟನ್ನು ರೂಪಿಸುತ್ತದೆ. ಇವು ನ್ಯೂರೋಟ್ರಾನ್ಸ್ಮಿಟರ್ ರಿಸೆಪ್ಟರ್ ಕಾರ್ಯಕ್ಕೆ ಅಗತ್ಯವಾಗಿವೆ.
ಮೊಟ್ಟೆಗಳಲ್ಲಿ ಲುಟೀನ್ ಮತ್ತು ಜಿಯಾಂಕ್ಸಂಥೀನ್ ಮತ್ತು ಆಂಟಿ ಆಕ್ಸಿಡಂಟ್ಗಳು ಸಹ ಇರುತ್ತದೆ. ಅವು ನಿರ್ಣಾಯಕ ಅರಿವಿನ ಕಾರ್ಯವನ್ನು ಸುಧಾರಿಸುತ್ತವೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ.