ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ: ಪೊಲೀಸರ AI ಕಣ್ಗಾವಲು ವ್ಯವಸ್ಥೆ; ಅದು ಸೃಷ್ಟಿಸಿರುವ ವಿವಾದವೇನು?

Update: 2026-07-24 22:30 IST

ಸಾಂದರ್ಭಿಕ ಚಿತ್ರ | Photo Credit : magnific.com

ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ದಿಲ್ಲಿ ಪೊಲೀಸರು ಜಂತರ್ ಮಂತರ್ ನಲ್ಲಿ ನಡೆಸಿದ ಕಣ್ಗಾವಲು ಪ್ರಕ್ರಿಯೆಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಸಿಜೆಪಿ ಕರೆ ನೀಡಿದ್ದ "ಸಂಸದ್ ಚಲೋ" ಪ್ರತಿಭಟನೆಯ ಸಮಯದಲ್ಲಿ ತಮ್ಮನ್ನು ಸತತವಾಗಿ ವೀಡಿಯೋ ಚಿತ್ರೀಕರಣ ಮಾಡಿ, ಹೆದರಿಸಲಾಗಿತ್ತು ಎಂದು ಹಲವು ಪ್ರತಿಭಟನಾಕಾರರು ಆರೋಪಿಸಿದ್ದರು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ (JNUSU) ಮಾಜಿ ಅಧ್ಯಕ್ಷೆ ಐಶೆ ಘೋಷ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಜೂನ್ 20 ರಿಂದ ದಿಲ್ಲಿ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಶಾಶ್ವತ ಸರ್ವೆಲೆನ್ಸ್ ಟವರ್ ಸ್ಥಾಪಿಸಿ, ಪ್ರತಿಭಟನಾಕಾರರ ಫೋಟೋ ಮತ್ತು ವೀಡಿಯೋಗಳನ್ನು ಸತತವಾಗಿ ತೆಗೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪ್ರತಿಭಟನಾ ಚಟುವಟಿಕೆಗಳಷ್ಟೇ ಅಲ್ಲದೆ, ಊಟ ಮಾಡುವುದು, ವಿಶ್ರಾಂತಿ ಪಡೆಯುವುದು ಮತ್ತು ವೈದ್ಯಕೀಯ ನೆರವು ಪಡೆಯುವಂತಹ ದೈನಂದಿನ ಕಾರ್ಯಗಳನ್ನೂ ರೆಕಾರ್ಡ್ ಮಾಡಲಾಗುತ್ತಿದೆ. ವಿದ್ಯಾರ್ಥಿ ಪ್ರತಿಭಟನಾಕಾರರ ಫೋಟೋ ಮತ್ತು ವೀಡಿಯೋಗಳನ್ನು ಅವರ ಪೋಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುವುದಾಗಿ ಪೊಲೀಸ್ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂದೂ ಹೇಳಲಾಗಿದೆ.

ಧಾರಾಕಾರ ಮಳೆಯಲ್ಲಿ ನೆನೆದ ಬಟ್ಟೆಯಲ್ಲಿದ್ದ ಮಹಿಳಾ ಪ್ರತಿಭಟನಾಕಾರರ ಫೋಟೋ ಮತ್ತು ವೀಡಿಯೋಗಳನ್ನು ಪೊಲೀಸರು ಚಿತ್ರೀಕರಿಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪ್ರತಿಭಟನಾ ಸ್ಥಳದ ದೃಶ್ಯಗಳಲ್ಲಿ, ದಿಲ್ಲಿ ಪೊಲೀಸ್ ಸಿಬ್ಬಂದಿ ಫೋನ್ ಮತ್ತು ಕ್ಯಾಮ್ ಕಾರ್ಡರ್ಗಳ ಹೊರತಾಗಿ 'ಮೆಟಾ ಸ್ಮಾರ್ಟ್ ಗ್ಲಾಸ್' ಧರಿಸಿ ಪ್ರತಿಭಟನಾಕಾರರನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.

ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಸಂಸತ್ ಚಲೋ ಮೆರವಣಿಗೆಯ ಸಮಯದಲ್ಲಿ ಮಹಿಳಾ ಪ್ರತಿಭಟನಾಕಾರರೊಬ್ಬರಿಗೆ ಕಪಾಳಮೋಕ್ಷ ಮಾಡಿ, ನಂತರ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ವರ್ಗಾವಣೆಯಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸಂದೀಪ್ ಲಂಬಾ ಅವರು ಸ್ಮಾರ್ಟ್ ಗ್ಲಾಸ್ ಧರಿಸಿರುವುದು ಕಂಡುಬಂದಿತ್ತು. ಈ ಬಾರಿ ಕ್ಯಾಮೆರಾ ಕಂಟೆಂಟ್ ಕ್ರಿಯೇಟರ್ ಕೈಯಲ್ಲಿ ಇರದೆ, ಸರಕಾರದ ಕೈಯಲ್ಲಿತ್ತು. ಪೊಲೀಸ್ ಸ್ಮಾರ್ಟ್ ಗ್ಲಾಸ್ ಧರಿಸಿ ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳೇ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಅಪ್ಲೋಡ್ ಮಾಡಿದ್ದರು. ಪತ್ರಕರ್ತರು ಮತ್ತು ತಂತ್ರಜ್ಞಾನ ನೀತಿ ತಜ್ಞರು ಇದನ್ನು ದೊಡ್ಡ ಗೌಪ್ಯತೆಯ ಅಪಾಯ ಎಂದು ಎಚ್ಚರಿಸಿದ್ದಾರೆ.

ದೆಹಲಿ ಹೈಕೋರ್ಟ್ ನ ದ್ವಿಪೀಠದ ಮುಂದೆ ದಿಲ್ಲಿ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ರೆಕಾರ್ಡಿಂಗ್ ಅನ್ನು ಕಣ್ಗಾವಲು ಎಂದು ಕರೆಯುವುದನ್ನು ನಿರಾಕರಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಂತರ್ ಮಂತರ್ ನಲ್ಲಿ ನಡೆಯುವ ಪ್ರತಿಭಟನೆಗಳನ್ನು ನಿಯಮಿತವಾಗಿ ರೆಕಾರ್ಡ್ ಮಾಡಲಾಗುತ್ತದೆ. ಸ್ವತಃ ನೂರಾರು ಪ್ರತಿಭಟನಾಕಾರರೇ ಅಲ್ಲಿಂದ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅವರು ಈ ಅರ್ಜಿಯನ್ನು "ಖಾಸಗಿ ಹಿತಾಸಕ್ತಿಯ ಐಷಾರಾಮಿ ದಾವೆ" ಎಂದಿದ್ದಾರೆ.

ಪ್ರತಿಭಟನಾ ಸ್ಥಳಗಳಲ್ಲಿ ಪೊಲೀಸ್ ಕ್ರಮಗಳನ್ನು ನಿಯಂತ್ರಿಸಲು ಯಾವುದೇ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಇದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದೂಡಿದೆ.

ವರದಿಗಳ ಪ್ರಕಾರ, ದಿಲ್ಲಿ ಪೊಲೀಸರು ನಗರದಾದ್ಯಂತ ಕಣ್ಗಾವಲು ನಡೆಸಲು ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುತ್ತಿದ್ದಾರೆ.

ಸಿಜೆಪಿ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ ನಡೆದ ಘರ್ಷಣೆಗಳ ನಂತರ, ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾದ ವ್ಯಕ್ತಿಗಳನ್ನು ಗುರುತಿಸಲು AI ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಬಳಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಗಳನ್ನು ಮಾಡುವ ಮೊದಲು ಈ ದೃಶ್ಯಾವಳಿಗಳನ್ನು ಅಪರಾಧಿಗಳ ಮಾಹಿತಿಯಿರುವ ಪೊಲೀಸ್ ಡೇಟಾಬೇಸ್ ಜೊತೆ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಲಭೆ, ಸರ್ಕಾರಿ ನೌಕರರ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತು FIRಗಳನ್ನು ದಾಖಲಿಸಲಾಗಿದೆ.

ದಿಲ್ಲಿ ಪೊಲೀಸರ ಕಣ್ಗಾವಲು ಜಾಲ ಎಷ್ಟು ವ್ಯಾಪಕವಾಗಿದೆ?

ದಿಲ್ಲಿ ಪೊಲೀಸರು ಪ್ರಸ್ತುತ ದೇಶದ ಅತಿ ದೊಡ್ಡ ಕೃತಕ ಬುದ್ಧಿಮತ್ತೆ ಆಧಾರಿತ ಸಾರ್ವಜನಿಕ ಕಣ್ಗಾವಲು ವ್ಯವಸ್ಥೆಗಳಲ್ಲಿ ಒಂದನ್ನು ನಿರ್ವಹಿಸುತ್ತಿದ್ದಾರೆ. ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ನೀಡಿದ ಮಾಹಿತಿಯ ಪ್ರಕಾರ, ಸುಮಾರು 25,000 ಸಿಸಿಟಿವಿ ಕ್ಯಾಮೆರಾಗಳನ್ನು ಈ ಜಾಲಕ್ಕೆ ಸಂಯೋಜಿಸಲಾಗಿದೆ. ಇವುಗಳಲ್ಲಿ 'ಸೇಫ್ ಸಿಟಿ' ಯೋಜನೆಯಡಿ ಅಳವಡಿಸಲಾದ ಕ್ಯಾಮೆರಾಗಳು ಹಾಗೂ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ಮತ್ತು ಭಾರತೀಯ ರೈಲ್ವೆ ನಿರ್ವಹಿಸುವ ಕ್ಯಾಮೆರಾಗಳು ಸೇರಿವೆ.

ಈ ಯೋಜನೆಯ ಇತ್ತೀಚಿನ ಹಂತವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2026ರ ಫೆಬ್ರವರಿಯಲ್ಲಿ ಉದ್ಘಾಟಿಸಿದರು. ದಿಲ್ಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ 'ಇಂಟಿಗ್ರೇಟೆಡ್ ಕಮಾಂಡ್, ಕಂಟ್ರೋಲ್, ಕಮ್ಯುನಿಕೇಶನ್ ಮತ್ತು ಕಂಪ್ಯೂಟರ್ ಸೆಂಟರ್' (C4I) ಇದರ ಕೇಂದ್ರಭಾಗವಾಗಿದ್ದು, ಇದು ನಗರದಾದ್ಯಂತ ಇರುವ ಜಿಲ್ಲಾ ಮತ್ತು ಪೊಲೀಸ್ ಠಾಣಾ ಮಟ್ಟದ ಕಮಾಂಡ್ ಸೆಂಟರ್ಗಳಿಗೆ ಸಂಪರ್ಕ ಹೊಂದಿದೆ. ಯೋಜನೆಯ ಚಾಲನೆ ಸಮಯದಲ್ಲಿ, 2,100 AI ಆಧಾರಿತ ಕ್ಯಾಮೆರಾಗಳು ಕಾರ್ಯಾಚರಣೆಗೆ ಬಂದಿವೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದರು. ಮೊದಲ ಹಂತದ ಅಡಿಯಲ್ಲಿ, ಈಗಾಗಲೇ 15,000ಕ್ಕೂ ಹೆಚ್ಚು ಹಳೆಯ ಕ್ಯಾಮೆರಾಗಳನ್ನು ಹೊಂದಿರುವ ಈ ಜಾಲಕ್ಕೆ ಹೆಚ್ಚುವರಿಯಾಗಿ 10,000 ಕ್ಯಾಮೆರಾಗಳನ್ನು ಸೇರಿಸಲು ಯೋಜನೆ ರೂಪಿಸಲಾಗಿತ್ತು.

ಈ ವ್ಯವಸ್ಥೆಯು ಮುಖ ಗುರುತಿಸುವಿಕೆ (facial detection), ವಾಹನ ಸಂಖ್ಯೆ ಪತ್ತೆ, ಕೈ ಸನ್ನೆಗಳ ಗುರುತಿಸುವಿಕೆ ಮತ್ತು ಜನದಟ್ಟಣೆ ಮೇಲ್ವಿಚಾರಣೆ ಸೇರಿದಂತೆ AI ಆಧಾರಿತ ವೀಡಿಯೋ ತಂತ್ರಜ್ಞಾನವನ್ನು ಹೊಂದಿದೆ. ಈ ವ್ಯವಸ್ಥೆಯ ಮೂಲಕ ಯಾರನ್ನು ಗುರುತಿಸಬಹುದು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಏಕೆಂದರೆ, ಇದಕ್ಕೆ ಬಳಸುವ ಮುಖ ಗುರುತಿಸುವಿಕೆಯ ಡೇಟಾಬೇಸ್ ಕುರಿತು ಅಧಿಕೃತ ಮಾಹಿತಿ ಕಾಲಕಾಲಕ್ಕೆ ಗಮನಾರ್ಹವಾಗಿ ಬದಲಾಗಿದೆ.

"2025ರಲ್ಲಿ, ದಿಲ್ಲಿ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು 'The Economic Times'ಗೆ ನೀಡಿದ ಹೇಳಿಕೆಯಲ್ಲಿ, ಮುಖ ಗುರುತಿಸುವ ಕ್ಯಾಮೆರಾಗಳನ್ನು 20,000ಕ್ಕೂ ಹೆಚ್ಚು ಅಪರಾಧಿಗಳ ಡೇಟಾಬೇಸ್ಗೆ ಹೋಲಿಸಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದರು. ಅದೇ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಭದ್ರತಾ ವ್ಯವಸ್ಥೆಗಳ ಕುರಿತ ವರದಿಗಳಲ್ಲಿ ಈ ಡೇಟಾಬೇಸ್ ಸುಮಾರು 3,00,000 ದಾಖಲೆಗಳನ್ನು ಹೊಂದಿದೆ ಎಂದು ಹೇಳಲಾಗಿತ್ತು. ನಂತರ, 'ಬಯೋಮೆಟ್ರಿಕ್ ಅಪ್ಡೇಟ್' ಎಂಬ ವಾಣಿಜ್ಯ ನಿಯತಕಾಲಿಕೆಯು ಈ ವ್ಯವಸ್ಥೆಯು ಸುಮಾರು 3,50,000 ಅಪರಾಧ ದಾಖಲೆಗಳನ್ನು ಹೊಂದಿದೆ ಮತ್ತು ಕೇವಲ 200 ಮಿಲಿಸೆಕೆಂಡುಗಳಲ್ಲಿ ಸುಮಾರು 10 ಲಕ್ಷ ದಾಖಲೆಗಳನ್ನು ಪರಿಶೀಲಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿ ಮಾಡಿದೆ.

2019ರಲ್ಲಿ 'ದಿ ಇಂಡಿಯನ್ ಎಕ್ಸ್ಪ್ರೆಸ್' ನಡೆಸಿದ ತನಿಖೆಯಿಂದ, ದಿಲ್ಲಿ ಪೊಲೀಸರು ಮೂರು ಪ್ರತ್ಯೇಕ ಡೇಟಾಸೆಟ್ಗಳನ್ನು ಬಳಸಿ ಮುಖ ಗುರುತಿಸುವ ತಂತ್ರಜ್ಞಾನವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಒಂದರಲ್ಲಿ 1,50,000ಕ್ಕೂ ಹೆಚ್ಚು ಹಳೆಯ ಅಪರಾಧಿಗಳು (ಹಿಸ್ಟರಿ ಶೀಟರ್ಸ್), ಇನ್ನೊಂದರಲ್ಲಿ 2,000 ಶಂಕಿತ ಭಯೋತ್ಪಾದಕರು ಹಾಗೂ ಮತ್ತೊಂದರಲ್ಲಿ ಪ್ರತಿಭಟನೆಗಳ ದೃಶ್ಯಗಳಿಂದ ಸಂಗ್ರಹಿಸಲಾದ ಫೋಟೋಗಳನ್ನು ಒಳಗೊಂಡ "ಕಿಡಿಗೇಡಿಗಳು ಮತ್ತು ಗಲಭೆಕೋರರ" ಪಟ್ಟಿಯಿದೆ.

ಈ ಡೇಟಾಬೇಸ್ಗಳನ್ನು ಹೇಗೆ ರಚಿಸಲಾಗುತ್ತದೆ, ನಿರ್ವಹಿಸಲಾಗುತ್ತದೆ ಮತ್ತು ಪರಿಶೀಲಿಸಲಾಗುತ್ತದೆ ಎಂಬ ಬಗ್ಗೆ ಹಲವು ಕಳವಳಗಳು ವ್ಯಕ್ತವಾಗಿವೆ. ಸೂಕ್ತ ಕಾನೂನು ರಕ್ಷಣೆಗಳಿಲ್ಲದೆ, ಈ ತಂತ್ರಜ್ಞಾನವು ಕೇವಲ ಅಪರಾಧಿಗಳಷ್ಟೇ ಅಲ್ಲದೆ ಪ್ರತಿಭಟನಾಕಾರರಂತಹ ಸಾಮಾನ್ಯ ಜನರ ಮೇಲೆಯೂ ಕಣ್ಣಿಡಲು ಬಳಕೆಯಾಗುವ ಸಾಧ್ಯತೆಯಿದೆ ಎಂದು ಕಾನೂನು ಸಂಶೋಧಕರು ವಾದಿಸುತ್ತಾರೆ.

ದಿಲ್ಲಿ ಪೊಲೀಸರು ಗಲಭೆಕೋರರನ್ನು ಗುರುತಿಸಲು ಕೇವಲ ಮುಖ ಗುರುತಿಸುವ ತಂತ್ರಜ್ಞಾನವನ್ನೇ ಅವಲಂಬಿಸಿದ್ದಾರೆ ಎಂದು 'ಪುಲಿಟ್ಜರ್ ಸೆಂಟರ್'ಗಾಗಿ 'the wire' ನಡೆಸಿದ ತನಿಖೆಯು ಬಹಿರಂಗಪಡಿಸಿದ್ದು, ಇದು ತಂತ್ರಜ್ಞಾನದ ನಿಖರತೆ, ಹೊಣೆಗಾರಿಕೆ ಮತ್ತು ಸಂಭಾವ್ಯ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಆತಂಕ ಮೂಡಿಸಿದೆ.

ದಿಲ್ಲಿ ಪೊಲೀಸರ ಮುಖ ಗುರುತಿಸುವ ತಂತ್ರಜ್ಞಾನಕ್ಕೆ ಇರುವ ಕಾನೂನು ಆಧಾರವೂ ಸೀಮಿತವಾಗಿದೆ. 2025ರಲ್ಲಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಅವರ ಪ್ರಶ್ನೆಗೆ ಉತ್ತರಿಸಿದ್ದ ಗೃಹ ಸಚಿವಾಲಯ, ಈ ವ್ಯವಸ್ಥೆಯು 2022ರ ಜೂನ್ 9ರಂದು ದಿಲ್ಲಿ ಪೊಲೀಸ್ ಹೊರಡಿಸಿದ ಆದೇಶದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿತ್ತು. ಈ ಆದೇಶವು "ಶಂಕಿತ ವ್ಯಕ್ತಿಗಳು ಅಥವಾ ಅಪರಾಧಿಗಳನ್ನು" ಗುರುತಿಸಲು ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಲು ಅಧಿಕಾರ ನೀಡಿದೆ.

ಭಾರತದಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ನಿಯಂತ್ರಿಸಲು ಯಾವುದೇ ಪ್ರತ್ಯೇಕ ಕಾನೂನಿಲ್ಲ.

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023 (DPDP Act) ದತ್ತಾಂಶ ರಕ್ಷಣೆಗೆ ಸಾಮಾನ್ಯ ಚೌಕಟ್ಟನ್ನು ಒದಗಿಸುತ್ತದೆ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬಯೋಮೆಟ್ರಿಕ್ ಕಣ್ಗಾವಲನ್ನು ನಿರ್ದಿಷ್ಟವಾಗಿ ನಿಯಂತ್ರಿಸುವುದಿಲ್ಲ. ಕಾಯ್ದೆಯಲ್ಲಿರುವ ಸಡಿಲಿಕೆಗಳ ಪ್ರಕಾರ, ಕಾನೂನಿನ ಅಡಿಯಲ್ಲಿ ಅಥವಾ ದೇಶದ ಸಾರ್ವಭೌಮತ್ವ, ಅಖಂಡತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಅಗತ್ಯವಿದ್ದಾಗ ಸಾರ್ವಜನಿಕರ ಅನುಮತಿಯಿಲ್ಲದೆ ವೈಯಕ್ತಿಕ ದತ್ತಾಂಶವನ್ನು ಬಳಸಲು ಸರ್ಕಾರಿ ಸಂಸ್ಥೆಗಳಿಗೆ ಅವಕಾಶವಿದೆ. ಪರಿಣಾಮವಾಗಿ, ಸಾರ್ವಜನಿಕ ಕಣ್ಗಾವಲು ವ್ಯವಸ್ಥೆಯಲ್ಲಿ ಸೆರೆಯಾಗುವ ವ್ಯಕ್ತಿಗಳು ತಮ್ಮ ಬಯೋಮೆಟ್ರಿಕ್ ದತ್ತಾಂಶವನ್ನು ಹೇಗೆ ಬಳಸಲಾಗುತ್ತಿದೆ ಎಂದು ತಿಳಿದುಕೊಳ್ಳಲು ಅಥವಾ ಅದನ್ನು ಪ್ರಶ್ನಿಸಲು ಸೀಮಿತ ಅವಕಾಶಗಳಿವೆ.

ಸುಪ್ರೀಂ ಕೋರ್ಟ್ ನ 'ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ vs ಯೂನಿಯನ್ ಆಫ್ ಇಂಡಿಯಾ (2017)' ಪ್ರಕರಣದ ತೀರ್ಪು ಪ್ರಮುಖ ಸಾಂವಿಧಾನಿಕ ರಕ್ಷಣೆಯಾಗಿದೆ. ಗೌಪ್ಯತೆಯ ಹಕ್ಕಿನ ಮೇಲಿನ ಯಾವುದೇ ನಿರ್ಬಂಧವು ಕಾನೂನು ಆಧಾರವನ್ನು ಹೊಂದಿರಬೇಕು, ನ್ಯಾಯಸಮ್ಮತ ಉದ್ದೇಶವನ್ನು ಹೊಂದಿರಬೇಕು ಹಾಗೂ ಕನಿಷ್ಠ ನಿರ್ಬಂಧಗಳನ್ನು ಬಳಸುವ ಮೂಲಕ ಸೂಕ್ತತೆಯನ್ನು ಕಾಯ್ದುಕೊಳ್ಳಬೇಕು ಎಂದು ಈ ತೀರ್ಪು ಹೇಳಿದೆ. ಇದರ ಜೊತೆಗೆ, 'ಮಲಕ್ ಸಿಂಗ್ vs ಪಂಜಾಬ್ ಮತ್ತು ಹರಿಯಾಣ ಸರಕಾರ' ಪ್ರಕರಣದ ಹಳೆಯ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಪೊಲೀಸ್ ಕಣ್ಗಾವಲು ಏಕಪಕ್ಷೀಯವಾಗಿರಬಾರದು, ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ವರ್ಗಗಳ ಹೊರಗಿನ ಜನರನ್ನು ಗುರಿಯಾಗಿಸಬಾರದು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಹತೋಟಿಯಲ್ಲಿಡಲು ಅದನ್ನು ಬಳಸಬಾರದು ಎಂದು ಆ ತೀರ್ಪು ಸ್ಪಷ್ಟಪಡಿಸಿತ್ತು.

ದೆಹಲಿಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೆ ತರುವಾಗ ಈ ರಕ್ಷಣಾತ್ಮಕ ನಿಯಮಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ಡಿಜಿಟಲ್ ಹಕ್ಕುಗಳ ಸಂಘಟನೆಗಳು ವಾದಿಸಿವೆ. ಮಾಹಿತಿ ಹಕ್ಕು ಕಾಯ್ದೆಯಡಿ (RTI) ದೊರೆತ ಉತ್ತರಗಳ ಪ್ರಕಾರ, ದಿಲ್ಲಿ ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನವನ್ನು ಪರಿಚಯಿಸುವ ಮೊದಲು ಯಾವುದೇ ಗೌಪ್ಯತೆ ಮೌಲ್ಯಮಾಪನವನ್ನು ಮಾಡಿಲ್ಲ ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ತಿಳಿಸಿದೆ. ಆ ಸಂಸ್ಥೆಯ ಪ್ರಕಾರ, 'ಸೇಫ್ ಸಿಟಿ' ಯೋಜನೆಗೂ ಸಹ ಯಾವುದೇ ಗೌಪ್ಯತೆಯ ಪ್ರಭಾವದ ಮೌಲ್ಯಮಾಪನ (Privacy Impact Assessment) ನಡೆದಿಲ್ಲ.

ಇತರೆ ದೇಶಗಳು ಮುಖ ಗುರುತಿಸುವ ತಂತ್ರಜ್ಞಾನವನ್ನು ಹೇಗೆ ನಿಯಂತ್ರಿಸುತ್ತವೆ?

2025ರ ಫೆಬ್ರವರಿಯಲ್ಲಿ ಜಾರಿಗೆ ಬಂದ ಯುರೋಪಿಯನ್ ಯೂನಿಯನ್ ನ 'AI ಕಾಯ್ದೆ'ಯು, ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ಲೈವ್ ಮುಖ ಗುರುತಿಸುವ ತಂತ್ರಜ್ಞಾನ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಪಹರಣಕ್ಕೊಳಗಾದವರನ್ನು ಹುಡುಕುವುದು ಅಥವಾ ಭಯೋತ್ಪಾದಕ ದಾಳಿಗಳನ್ನು ತಡೆಯುವಂತಹ ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ವಿನಾಯಿತಿಯಿದೆ.

ಸ್ವೀಡನ್ ದೇಶದಲ್ಲಿ ಗಂಭೀರ ಅಪರಾಧಗಳು, ಭಯೋತ್ಪಾದನೆ ತನಿಖೆಗಳು ಮತ್ತು ನಾಪತ್ತೆಯಾದವರ ಪ್ರಕರಣಗಳಲ್ಲಿ ಮಾತ್ರ ಲೈವ್ ಮುಖ ಗುರುತಿಸುವಿಕೆಗೆ ಅವಕಾಶವಿದೆ. ಇದಕ್ಕೂ ಮೊದಲು ಪ್ರಾಸಿಕ್ಯೂಟರ್ ಅನುಮತಿ ಮತ್ತು ಗೌಪ್ಯತೆ ನಿಯಂತ್ರಕ ಸಂಸ್ಥೆಯ ಮೇಲ್ವಿಚಾರಣೆ ಅಗತ್ಯವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದಲ್ಲಿ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಿಯಮಗಳಿವೆ. ಕೆಲವು ನಗರಗಳು ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನ ಬಳಸುವುದನ್ನು ನಿಷೇಧಿಸಿದ್ದರೆ, ಇನ್ನು ಕೆಲವು ನಗರಗಳು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಇದಕ್ಕೆ ಅನುಮತಿ ನೀಡಿವೆ.

ಯುನೈಟೆಡ್ ಕಿಂಗ್ಡಮ್ ಪೊಲೀಸರು ಮುಖ ಗುರುತಿಸುವ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುತ್ತಿದ್ದರೆ, ಚೀನಾ ಪ್ರಪಂಚದಲ್ಲೇ ಅತಿ ದೊಡ್ಡ ಮುಖ ಗುರುತಿಸುವ ಕಣ್ಗಾವಲು ವ್ಯವಸ್ಥೆಗಳಲ್ಲಿ ಒಂದನ್ನು ನಿರ್ವಹಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor