Photo Credit : PTI 

ಹಬ್ಬದ ಸಮಯದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ತಡೆಯಲು ಆದೇಶಗಳನ್ನು ಜಾರಿಗೊಳಿಸದಿರುವ ಬಗ್ಗೆ ನಾಗರಿಕ, ಮಾಲಿನ್ಯ ನಿಯಂತ್ರಣ ಮತ್ತು ಪೊಲೀಸ್ ಅಧಿಕಾರಿಗಳನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಮುಂಬೈನ ವಾಯು ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್, ನಗರವು ಮಾಲಿನ್ಯದ ಮಟ್ಟದಲ್ಲಿ ದಿಲ್ಲಿಯನ್ನೂ ಮೀರುತ್ತಿರುವುದು ಆಘಾತಕಾರಿ ಎಂದು ಹೇಳಿದೆ. ಜೊತೆಗೆ, ಹಬ್ಬದ ಸಮಯದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ತಡೆಯಲು ಆದೇಶಗಳನ್ನು ಜಾರಿಗೊಳಿಸದಿರುವ ಬಗ್ಗೆ ನಾಗರಿಕ, ಮಾಲಿನ್ಯ ನಿಯಂತ್ರಣ ಮತ್ತು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಲಕ್ಷಾಂತರ ಜನರು ಮಾಲಿನ್ಯದ ದುಷ್ಪರಿಣಾಮಗಳನ್ನು ಅನುಭವಿಸುತ್ತಿರುವ ತುರ್ತು ಪರಿಸ್ಥಿತಿಯ ಹೊರತಾಗಿಯೂ ಕ್ರಮ ಕೈಗೊಳ್ಳದ ಅಧಿಕಾರಿಗಳು ಹೇಗೆ ‘ಶಾಂತಿಯುತ ನಿದ್ರೆ’ ಮಾಡಲು ಸಾಧ್ಯವಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಕರ್ತವ್ಯಲೋಪಕ್ಕಾಗಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.

ಮೆರವಣಿಗೆಗಳ ಸಮಯದಲ್ಲಿ ಬಳಸುವ ಧ್ವನಿ ವ್ಯವಸ್ಥೆಗಳಿಗೆ ಪರವಾನಗಿಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವುದು ಮತ್ತು ಹಬ್ಬದ ಸಮಯದಲ್ಲಿ ಸಾರ್ವಜನಿಕ ಬೀದಿಗಳಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೇರಿದಂತೆ ತನ್ನ ಆದೇಶಗಳನ್ನು ಜಾರಿಗೊಳಿಸುವಲ್ಲಿ ಪೊಲೀಸರು ಅತ್ಯಂತ ನಿಧಾನವಾಗಿ ಕೆಲಸ ಮಾಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ದಕ್ಷಿಣ ಮುಂಬೈನಲ್ಲಿ ಮಂಗಳವಾರ ನಡೆದ ಘಟನೆಯನ್ನು ಹೈಕೋರ್ಟ್ ಉಲ್ಲೇಖಿಸಿದೆ. ಕಾಫರ್ಡ್ ಮಾರುಕಟ್ಟೆಯ ಬಳಿಯ ಪೊಲೀಸ್ ಠಾಣೆಯ ಮುಂದಿನ ಜನನಿಬಿಡ ಬೀದಿಗಳಲ್ಲಿ ಪಟಾಕಿಗಳನ್ನು ಸಿಡಿಸಿರುವುದು ನ್ಯಾಯಾಲಯದ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ನಿಷ್ಕ್ರಿಯತೆಯು ಸಂವಿಧಾನದ 14 ಮತ್ತು 21ನೇ ವಿಧಿಗಳ ಅಡಿಯಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದ್ದು, ದಂಡ ಮತ್ತು ಮೊಕದ್ದಮೆಗೆ ಅರ್ಹವಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಶಬ್ದ ಮಾಲಿನ್ಯ ಮತ್ತು ಹಬ್ಬದ ಸಮಯದಲ್ಲಿ ಬೀದಿಗಳಲ್ಲಿ ಪಟಾಕಿಗಳನ್ನು ಸಿಡಿಸುವುದಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್ ಎಸ್. ಕುಲಕರ್ಣಿ ಮತ್ತು ನೀಲಾ ಕೆ. ಗೋಖಲೆ ಅವರ ಪೀಠವು, ನ್ಯಾಯಾಲಯದ ಆದೇಶಗಳ ನಿಖರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಠಾಣೆಗಳ ಉಸ್ತುವಾರಿಗಳೊಂದಿಗೆ ಸಭೆ ನಡೆಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ.

ಅಕ್ಟೋಬರ್ 26ರ ವಿಚಾರಣೆಯ ಬಳಿಕ ಆದೇಶಗಳನ್ನು ಜಾರಿಗೊಳಿಸಲು ಕೈಗೊಂಡ ಕ್ರಮಗಳ ಕುರಿತು ವಿವರಗಳನ್ನು ಪ್ರಸ್ತುತಪಡಿಸುವಂತೆ ಪೊಲೀಸ್ ಆಯುಕ್ತರು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮತ್ತು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (MPCB) ಮುಖ್ಯಸ್ಥರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಪಟಾಕಿಗಳ ಶಬ್ದ ಮತ್ತು ವಿಷಕಾರಿ ಪರಿಣಾಮಗಳನ್ನು ಎತ್ತಿ ತೋರಿಸುವ ತಾರೆಯರನ್ನು ಒಳಗೊಂಡ ಸುದ್ದಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕ ಸೂಚನೆಗಳನ್ನು ನೀಡುವುದು ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುವುದು ಈ ಕ್ರಮಗಳಲ್ಲಿ ಸೇರಿವೆ.

ಆ ಸಮಯದಲ್ಲಿ ಮುಂಬೈ ದೇಶದ ಎರಡನೇ ಅತ್ಯಂತ ಕಲುಷಿತ ನಗರ ಎಂದು ತಿಳಿಸಿದಾಗ ನ್ಯಾಯಮೂರ್ತಿ ಕುಲಕರ್ಣಿ, “ಇದು ಆಘಾತಕಾರಿ. ನಗರದಲ್ಲಿ ಸಮುದ್ರದ ತಂಗಾಳಿ ಬೀಸುತ್ತದೆ. ಸಾಕಷ್ಟು ತೆರೆದ ಸ್ಥಳಗಳಿವೆ. ಸಮುದ್ರದ ಸಂಪೂರ್ಣ ಮುಕ್ತತೆ ಇದೆ. ಆದರೂ ನಾವು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮುಂಬೈನ ಆಕಾಶ ಸ್ಪಷ್ಟವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದರು.

“ರಿಯಲ್ ಎಸ್ಟೇಟ್ ಅಭಿವೃದ್ಧಿಪಡಿಸುವವರು ಮತ್ತು ಅವರ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿಗಮವು ನಿರ್ಮಾಣ ಸ್ಥಳಗಳ ಬಗ್ಗೆ ಏನನ್ನೂ ಮಾಡುತ್ತಿಲ್ಲ ಎಂದು ತೋರುತ್ತದೆ. ನಿಗಮವು ದಂಡ ವಸೂಲಿ ಮಾಡಬೇಕು. ಜನರು ಬಳಲುತ್ತಿದ್ದಾರೆ ಮತ್ತು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬೆಳಗಿನ ನಡಿಗೆ ಅಸಾಧ್ಯವಾಗಿದೆ. ಮಂಜುಹೊಗೆ ತುಂಬಾ ಕೆಟ್ಟದಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ನಮಗೆ ತಿಳಿದಿಲ್ಲ” ಎಂದು ನ್ಯಾಯಮೂರ್ತಿಗಳು ಹೇಳಿದರು.

ನ್ಯಾಯಮೂರ್ತಿ ಗೋಖಲೆ ಅವರು ಸುದ್ದಿ ವರದಿಗಳನ್ನು ಉಲ್ಲೇಖಿಸಿದರು. “ಅಧಿಕಾರಿಗಳು ಮುಂಬೈನ ಅತ್ಯಂತ ಸ್ವಚ್ಛ ಭಾಗಗಳಲ್ಲಿ ವಾಯು ಗುಣಮಟ್ಟವನ್ನು ಪರೀಕ್ಷಿಸಿ, ಮಾಲಿನ್ಯದ ಮಟ್ಟ ಕುಸಿದಿದೆ ಎಂದು ಹೇಳಬಹುದು. ಆದರೆ, ಅವರು (ಪೌರಾಡಳಿತ ಮತ್ತು ಪೊಲೀಸರು) ನಾವು ಉಸಿರಾಡುವ ಅದೇ ಗಾಳಿಯನ್ನು ಉಸಿರಾಡುತ್ತಿದ್ದಾರೆಯೇ ಅಥವಾ ಜೀವ ಉಳಿಸಿಕೊಳ್ಳಲು ಅವರಿಗೆ ಬೇರೆ ಗಾಳಿ ಲಭ್ಯವಿದೆಯೇ ಎಂಬುದು ನಮಗೆ ತಿಳಿದಿಲ್ಲ” ಎಂದು ನ್ಯಾಯಮೂರ್ತಿಗಳು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor