ಸಿಜೆಪಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಆಕ್ರೋಶ; ಟೊವಿನೋ ಥಾಮಸ್, ರೇವತಿ, ಪಾ ರಂಜಿತ್ ಖಂಡನೆ

Update: 2026-07-22 19:31 IST

ಟೊವಿನೋ ಥಾಮಸ್, ರೇವತಿ, ಪಾ ರಂಜಿತ್ |Photo Credit : IMDb 

ನಟ ಟೋವಿನೋ ಥಾಮಸ್, ಹಿರಿಯ ನಟಿ ರೇವತಿ ಮತ್ತು ನಿರ್ದೇಶಕ ಪಾ ರಂಜಿತ್ ಸೇರಿದಂತೆ ಅನೇಕ ಗಣ್ಯರು ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.

ಮಲಯಾಳಂ ನಟ ಟೋವಿನೋ ಥಾಮಸ್, ಹಿರಿಯ ನಟಿ ರೇವತಿ ಮತ್ತು ತಮಿಳು ಚಲನಚಿತ್ರ ನಿರ್ದೇಶಕ ಪಾ ರಂಜಿತ್ ಸೇರಿದಂತೆ ಅನೇಕ ಗಣ್ಯರು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರು ನಾಗರಿಕರ ಬೆಂಬಲದೊಂದಿಗೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೊಣೆಗಾರಿಕೆ ಮತ್ತು ರಾಜೀನಾಮೆ, NEET ಪರೀಕ್ಷೆಯಲ್ಲಿನ ಅಕ್ರಮಗಳ ನಂತರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯಾಪಕ ಸುಧಾರಣೆಗಳನ್ನು ಒತ್ತಾಯಿಸುತ್ತಿವೆ.

ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ ಸ್ವೀಕಾರಾರ್ಹವಲ್ಲ ಎಂದು ಪ್ರತಿಕ್ರಿಯಿಸಿದ ತಾರೆಯರಲ್ಲಿ ಮಲಯಾಳಂ ನಟ ಟೊವಿನೋ ಥಾಮಸ್ ಅವರೂ ಸೇರಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದಿರುವ ಅವರು, “ಸರಿ ಮತ್ತು ತಪ್ಪು ಸಾಪೇಕ್ಷವಾಗಿರಬಹುದು. ಆದರೆ ಇದು ಖಂಡಿತವಾಗಿಯೂ ಶಾಂತಿಯುತ ಪ್ರತಿಭಟನೆಯನ್ನು ನಿರ್ವಹಿಸುವ ಮಾರ್ಗವಲ್ಲ” ಎಂದು ಬರೆದಿದ್ದಾರೆ.

ವಿದ್ಯಾರ್ಥಿಗಳ ಧ್ವನಿಯನ್ನು ನಿಗ್ರಹಿಸುವುದು ದೇಶದ ಭವಿಷ್ಯವನ್ನು ದಮನಿಸಿದಂತೆ ಎಂದು ನಟ ಹೇಳಿದ್ದಾರೆ.

Full View

“ಈ ವಿದ್ಯಾರ್ಥಿಗಳು ಏನು ತಪ್ಪು ಮಾಡಿದ್ದಾರೆ? ಅವರು ಆಸ್ತಿ ನಾಶ ಮಾಡಿದ್ದಾರೆಯೆ? ಹಿಂಸಾಚಾರಕ್ಕೆ ಇಳಿದಿದ್ದಾರೆಯೆ? ಇಂತಹ ಕ್ರಮಕ್ಕೆ ಅವರು ನಿಖರವಾಗಿ ಏನು ಮಾಡಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ದೇಶಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರನ್ನು ಉದ್ದೇಶಿಸಿ ಅವರು, “ನಮ್ಮ ದೇಶದ ಯಾವುದೇ ಭಾಗದಲ್ಲಿ ನ್ಯಾಯಯುತ ಕಾರಣಕ್ಕಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಪ್ರತಿ ವ್ಯಕ್ತಿಗೂ ನನ್ನ ಬೆಂಬಲವನ್ನು ನೀಡುತ್ತೇನೆ. ಭಿನ್ನಾಭಿಪ್ರಾಯದ ಹಕ್ಕು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಲ್ಲ; ವಾಸ್ತವದಲ್ಲಿ ಅದರ ಅಡಿಪಾಯಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.

ತಮ್ಮ ಅಭಿಪ್ರಾಯಗಳು ರಾಜಕೀಯಕ್ಕಿಂತ ಹೆಚ್ಚಾಗಿ ಮಾನವೀಯತೆಯಿಂದ ಹುಟ್ಟಿಕೊಂಡಿದೆ ಎಂದೂ ಅವರು ಹೇಳಿದ್ದಾರೆ.

Full View

ಹಿರಿಯ ನಟಿ ರೇವತಿ ಕೂಡ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. “ಪೋಷಕರಾಗಿ ಶಿಕ್ಷಣವು ನಮ್ಮ ಮಕ್ಕಳ ಭವಿಷ್ಯವನ್ನು ಮಾತ್ರವಲ್ಲ, ನಮ್ಮ ದೇಶದ ಭವಿಷ್ಯವನ್ನೂ ರೂಪಿಸುತ್ತದೆ ಎಂದು ನಾನು ನಂಬುತ್ತೇನೆ. ಶಿಕ್ಷಣದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುವ ಧ್ವನಿಗಳಿಗೆ ಗಮನ ಕೊಡುವುದು ಮುಖ್ಯ. ನಾವು ಪ್ರತಿ ದೃಷ್ಟಿಕೋನವನ್ನು ಒಪ್ಪುತ್ತೀವೋ ಇಲ್ಲವೋ ನಮ್ಮ ಮಕ್ಕಳ ಭವಿಷ್ಯ ಚಿಂತನಶೀಲ ಸಂಭಾಷಣೆಗೆ ಅರ್ಹವಾಗಿದೆ” ಎಂದು ಬರೆದಿದ್ದಾರೆ.

ಪ್ರತಿಭಟನೆಯ ಸಮಯದ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಶಾಂತಿಯುತ ಮೆರವಣಿಗೆ ಸಮಯದಲ್ಲಿ ಹಿಂಸಾಚಾರದ ವರದಿಗಳನ್ನು ನೋಡುವುದು ಹೃದಯವಿದ್ರಾವಕವಾಗಿದೆ. ಭಾಗಿಯಾಗಿರುವ ಪ್ರತಿಯೊಬ್ಬರ ಸುರಕ್ಷತೆ, ಶಕ್ತಿ ಮತ್ತು ಧೈರ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಸಂವಾದವು ಪ್ರತಿ ನಿರ್ಧಾರಕ್ಕೂ ಮಾರ್ಗದರ್ಶನ ನೀಡಲಿ, ಏಕೆಂದರೆ ಮಕ್ಕಳ ಭವಿಷ್ಯ ಕಡಿಮೆ ಏನೂ ಅಲ್ಲ” ಎಂದು ಹೇಳಿದ್ದಾರೆ.

“ಅವರೇನು ಕೇಳುತ್ತಿದ್ದಾರೆ? ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಮತ್ತು ದೇಶದ ಭವಿಷ್ಯವನ್ನು ರಕ್ಷಿಸಲು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳು ಹೊಡೆತಗಳ ನಡುವೆಯೂ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆದ ಹುಡುಗರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಮಹಿಳೆಯರು ತಮ್ಮ ಮಕ್ಕಳು ಎದುರಿಸುತ್ತಿರುವ ನಿರ್ದಯ ಹಿಂಸೆ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ತಂದೆಯಂದಿರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಹುಡುಗಿಯರು ಹಿಂಸೆ ನಿಲ್ಲಿಸಲು ಬೇಡುತ್ತಿದ್ದಾರೆ. ನಾಯಕರನ್ನು ನಾವು ಮತ ಹಾಕಿ ಆರಿಸಿದ್ದೇವೆ, ಮಕ್ಕಳ ಮತ್ತು ದೇಶದ ಭವಿಷ್ಯವನ್ನು ಅವರ ಕೈಗೆ ಕೊಟ್ಟಿದ್ದೇವೆ. ಅವರು ಮೌನವಾಗಿದ್ದಾರೆ. ನಾಯಕರೇ, ಮಾತುಗಳನ್ನು ಕೇಳಿ, ಸಂವಾದ ನಡೆಸಿ. ಭಿನ್ನಾಭಿಪ್ರಾಯ ಒಪ್ಪಿಕೊಳ್ಳಿ. ಆದರೆ ಕೂತು ಮಾತನಾಡಿ. ಸೋನಂ ವಾಂಗ್ಚುಕ್ ಮತ್ತು ಪ್ರತಿ ವಿದ್ಯಾರ್ಥಿಯ ಮಾತನ್ನು ಕೇಳಬೇಕು, ಅದಕ್ಕೆ ಅವರು ಅರ್ಹರು” ಎಂದು ಅವರು ಬರೆದಿದ್ದಾರೆ.

ಚಲನಚಿತ್ರ ನಿರ್ದೇಶಕ ಪಾ ರಂಜಿತ್, ‘ಎಕ್ಸ್’ನಲ್ಲಿ ವಿವರವಾದ ಪೋಸ್ಟ್ ಹಾಕಿ ಪ್ರತಿಭಟನೆಗಳನ್ನು “ಸರ್ಕಾರದಿಂದ ಹೊಣೆಗಾರಿಕೆ ಒತ್ತಾಯಿಸುವ ದೊಡ್ಡ ಚಳವಳಿ” ಎಂದು ಹೇಳಿದ್ದಾರೆ. “ಹೊಣೆಗಾರಿಕೆಯು ಬೇಡಿಕೆಯಾಗಿ ಪ್ರಾರಂಭವಾಗಿತ್ತು. ಇದೀಗ ಲಕ್ಷಾಂತರ ಯುವಜನರ ಭವಿಷ್ಯದೊಂದಿಗೆ ಆಟವಾಡುವುದನ್ನು ಮುಂದುವರೆಸುವ ಸರ್ಕಾರವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಪೀಳಿಗೆಯ ಸಾಮೂಹಿಕ ಕೋಪ ಮತ್ತು ಆಂದೋಲನವಾಗಿ ಬದಲಾಗಿದೆ” ಎಂದು ಅವರು ಪೋಸ್ಟ್ನಲ್ಲಿ ಹೇಳಿದ್ದಾರೆ.

“ಆಂದೋಲನವು ದೇಶಾದ್ಯಂತ ಹರಡಿದೆ ಮತ್ತು ಉತ್ತರದಾಯಿತ್ವಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ದೆಹಲಿಯ ಬೀದಿಗಳಿಂದ ರಾಜ್ಯಗಳಾದ್ಯಂತ ಪ್ರತಿಭಟನೆಗಳು, ಗಣ್ಯರು ಧ್ವನಿ ಎತ್ತುತ್ತಿರುವುದು ಮತ್ತು ತಮಿಳುನಾಡಿನ ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವುದು, ವಿದ್ಯಾರ್ಥಿಗಳು, ಪೋಷಕರು, ಉದ್ಯೋಗಿಗಳು ಮತ್ತು ನಾಗರಿಕರು ನ್ಯಾಯ ಕೇಳುತ್ತಿರುವುದು, ಇದು ಜನಾಂದೋಲನವಾಗಿ ಬದಲಾಗಿದೆ. ಹೀಗಾಗಿ ಇದೀಗ ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಪುನರಾವರ್ತಿತ ವೈಫಲ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆಯ ಬೇಡಿಕೆ ಮತ್ತು ಆಕ್ರೋಶವನ್ನು ಪ್ರತಿಬಿಂಬಿಸುತ್ತಿದೆ” ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರ ಮೇಲಿನ ಪೊಲೀಸ್ ದಬ್ಬಾಳಿಕೆಯನ್ನೂ ಸಹ ರಂಜಿತ್ ಖಂಡಿಸಿದ್ದಾರೆ. “ಶಾಂತಿಯುತ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹಿಂಸಾಚಾರದ ಕ್ರೂರ ಬಳಕೆಯು ನ್ಯಾಯಸಮ್ಮತವಾದ ಪ್ರಜಾಸತ್ತಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರಕ್ಕೆ ಇಷ್ಟವಿಲ್ಲದೆ ಇರುವುದನ್ನು ಬಹಿರಂಗಪಡಿಸುತ್ತದೆ.” ಎಂದು ಅವರು ಹೇಳಿದರು.

ಕಲಾವಿದರು ಮತ್ತು ನಾಗರಿಕರು ಒಟ್ಟಾಗಿ ನಿಲ್ಲುವಂತೆ ರಂಜಿತ್ ಕರೆ ನೀಡಿದ್ದಾರೆ. ಅಲ್ಲದೆ ಪ್ರತಿಭಟನೆಗೆ ಬೆಂಬಲಿಸಿದ ಗಣ್ಯರನ್ನು ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News