ವಿದ್ಯಾ ವಿಕಾಸ ಯೋಜನೆಯಡಿ ಕಳಪೆ ಸಮವಸ್ತ್ರ ಪೂರೈಕೆ

Update: 2024-05-25 05:10 GMT

ಸಾಂದರ್ಭಿಕ ಚಿತ್ರ PC: PTI

ಬೆಂಗಳೂರು: ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ 2024-25ನೇ ಸಾಲಿಗೆ ಶಾಲಾ ಮಕ್ಕಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳೇ ಕಳಪೆಯಿಂದ ಕೂಡಿವೆ. ಕಲಬುರಗಿ ವಿಭಾಗ ಸೇರಿದಂತೆ ರಾಜ್ಯದ ಇನ್ನಿತರ ವಿಭಾಗಗಳ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಸಮವಸ್ತ್ರ ಬಟ್ಟೆಗಳ ಮಾದರಿಗಳನ್ನು ಪರಿಶೀಲಿಸಿರುವ ಕೇಂದ್ರೀಯ ರೇಷ್ಮೆ ಮಂಡಳಿಯು ಈಗಾಗಲೇ ಹಲವು ಜಿಲ್ಲೆಗಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳನ್ನು ತಿರಸ್ಕರಿಸಿದೆ.

ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರಿಗೆ ಪತ್ರ (ಅ.ಸ.ಪ. ಸಂ; ಇಪಿ 170 ಯೋಸಕ 2024) ಬರೆದಿದ್ದಾರೆ. ಈ ಪತ್ರದ ಪ್ರತಿಯು the-file. in'ಗೆ ಲಭ್ಯವಾಗಿದೆ.

ಸಮವಸ್ತ್ರ ಹೊಲಿಗೆ ವೆಚ್ಚವನ್ನೂ ಪೋಷಕರಿಂದಲೇ ಭರಿಸಿಕೊಂಡಿರುವ ಸರಕಾರವು ಇದೀಗ ಪೂರೈಕೆ ಮಾಡಿರುವ ಸಮವಸ್ತ್ರವು ಕಳಪೆಯಿಂದ ಕೂಡಿದೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯ ಕುರಿತು ಸಚಿವ ಮಧು ಬಂಗಾರಪ್ಪ ಅವರೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಂಬಂಧ 2023ರ ಡಿಸೆಂಬರ್ 8 ಮತ್ತು 2024ರ ಮಾರ್ಚ್ 15ರಂದು ಆದೇಶ ಹೊರಡಿಸಿದ್ದರು. ಅಲ್ಲದೇ ಸಮವಸ್ತ್ರ ಸರಬರಾಜಿಗೂ ಮುನ್ನ ಅಂದರೆ 2024ರ ಮಾರ್ಚ್ 30ರಂದೇ ಸಮವಸ್ತ್ರಗಳ ಸ್ಯಾಂಪಲ್‌ಗಳನ್ನು ಪರಿಶೀಲನೆಗೆ ಸಲ್ಲಿಸಲಾಗಿತ್ತು. ಈ ಸ್ಯಾಂಪಲ್‌ಗಳನ್ನು ಪರಿಶೀಲಿಸಿದ್ದ ಕೇಂದ್ರೀಯ ರೇಷ್ಮೆ ಮಂಡಳಿಯು 2024ರ ಮೇ 8ರಂದು ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂಬುದು ಪತ್ರದಿಂದ ತಿಳಿದು ಬಂದಿದೆ.

ಸಮವಸ್ತ್ರಗಳ ಗುಣಮಟ್ಟ ಪರೀಕ್ಷೆ ಸಂಬಂಧ ಕರಾರು ಒಪ್ಪಂದದ ಕ್ರಮ ಸಂಖ್ಯೆ 4ರ ಪ್ರಕಾರ ಸರಬರಾಜಿಗೂ ಮುನ್ನ ತಯಾರಾಗಿರುವ ಸಮವಸ್ತ್ರ ಬಟ್ಟೆಗಳಲ್ಲಿ ಪ್ರತಿ 25000 ಮೀಟರ್ ಗೆ ಒಂದು ಸ್ಯಾಂಪಲ್‌ನಂತೆ 2024ರ ಮಾರ್ಚ್ 300 m 46, 14 ಹಾಗೂ ಸ್ಕರ್ಟಿಂಗ್ 20 ಸ್ಯಾಂಪಲ್‌ಗಳನ್ನು ಪಡೆದಿತ್ತು. ಅಲ್ಲದೇ ಈ ಸ್ಯಾಂಪಲ್‌ಗಳ ಗುಣಮಟ್ಟ ಪರಿಶೀಲಿಸಲು 2024ರ ಎಪ್ರಿಲ್ 2ರಂದು ಕೇಂದ್ರ ರೇಷ್ಮೆ ಮಂಡಳಿಗೆ ಸಲ್ಲಿಸಿತ್ತು ಎಂಬುದು ಗೊತ್ತಾಗಿದೆ. 'ಷರ್ಟಿಂಗ್ ಬಟ್ಟೆಯ ಎಲ್ಲಾ 46 ಸ್ಯಾಂಪಲ್

ಗಳು ಕಾಂಪೋಸಿಷನ್‌ನಲ್ಲಿ ತಿರಸ್ಕೃತವಾಗಿರುತ್ತವೆ ಹಾಗೂ ಇಲಾಖೆಯು ನಿಗದಿಪಡಿಸಿದ್ದ ಮಾನದಂಡಗಳಿಗಿಂತಲೂ ಜಿಎಸ್‌ಎಂ ಕಡಿಮೆ ಇರುತ್ತದೆ. ಸ್ಕರ್ಟಿಂಗ್‌ನ 20 ಸ್ಯಾಂಪಲ್‌ಗಳಲ್ಲಿ 12 ಸ್ಯಾಂಪಲ್‌ಗಳ ಕಾಂಪೋಸಿಷನ್, ಇಲಾಖೆ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಇರುವುದಿಲ್ಲ ಎಂದು ಕೇಂದ್ರ ರೇಷ್ಮೆ ಮಂಡಳಿಯು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಸದ್ಯ ಸರಬರಾಜಾಗಿರುವ ಸಮವಸ್ತ್ರಗಳು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೋದಾಮಿನಲ್ಲಿವೆ. ಈ ಸಮವಸ್ತ್ರಗಳ ಎಲ್ಲಾ ಷರ್ಟಿಂಗ್ ಬಟ್ಟೆಗಳನ್ನು 30 ದಿನದೊಳಗೆ ಮರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತ ರಿತೇಶ್ ಕುಮಾರ್ ಸಿಂಗ್ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರಕಾರವು ಶಾಲಾ ವಿದ್ಯಾರ್ಥಿಗಳ ಎರಡನೇ ಜೊತೆ ಸಮವಸ್ತ್ರ ಬಟ್ಟೆಯನ್ನಷ್ಟೇ ನೀಡಿ ಕೈತೊಳೆದುಕೊಂಡಿತ್ತು. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸಮವಸ್ತ್ರದ ಹೊಲಿಗೆ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಇಲಾಖೆಯು ಹೊರಡಿಸಿದ್ದ ಸುತ್ತೋಲೆಯು ಹೈಕೋರ್ಟ್ ಆದೇಶವನ್ನು ನೇರಾ ನೇರ ಉಲ್ಲಂಘಿ ಸಿದಂತಾಗಿತ್ತು.

ಸಮವಸ್ತ್ರದ ಬಟ್ಟೆಯನ್ನು ಮಾತ್ರ ಸರಕಾರದಿಂದ ಉಚಿತವಾಗಿ ನೀಡುತ್ತಿದ್ದು ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಸುತ್ತೋಲೆಯನ್ನು ಸುಚಿವ ಮಧು ಬಂಗಾರಪ್ಪ ಅವರು ಅನುಮೋದಿಸಿದ್ದರು.

ಬಟ್ಟೆಯ ಬೆಲೆಗಿಂತ ಹೊಲಿಗೆ ವೆಚ್ಚ ಹೆಚ್ಚಾಗಿದೆ ಒಂದು ಸೆಟ್ ಶರ್ಟ್ ಮತ್ತು ಪ್ಯಾಂಟ್‌ಗೆ ಹೊಲಿಗೆ ವೆಚ್ಚ ಕನಿಷ್ಠ 350 ರೂ.ನಿಂದ 800 ರೂ. ವರೆಗೆ ಖರ್ಚು ಮಾಡಿದ್ದರು. ಮಾಸ್ಟರ್ ಮಂಜುನಾಥ್ ಪ್ರಕರಣದಲ್ಲಿ ಎರಡನೇ ಸೆಟ್ ಗೆ ಹೊಲಿಗೆ ಹಾಕಿದ ಸಮವಸ್ತ್ರವನ್ನು ಸರಕಾರ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯವು ಆದೇಶಿಸಿತ್ತು. ಆದರೀಗ ಹೊಲಿಗೆ ಹಾಕದ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.

ರಾಜ್ಯದ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಿಸಿರಲಿಲ್ಲ. ಸ್ವೀಕರಿಸಿದ್ದ ಉಚಿತ ಸಮವಸ್ತ್ರಗಳನ್ನು ದೀರ್ಘಕಾಲದವರೆಗೂ ಗೋದಾಮಿನಲ್ಲಿಡಲಾಗುತ್ತಿದೆಯೇ ವಿನಃ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುತ್ತಿಲ್ಲ ಎಂಬುದು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ತಪಾಸಣೆಯು ಬಹಿರಂಗಗೊಳಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News