Screengrab : X 

ಹೈದರಾಬಾದ್: ಮಕ್ಕಳಿಲ್ಲದ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಮಗುವೊಂದನ್ನು ದತ್ತು ಪಡೆದು ಸಾಕುತ್ತಿದ್ದ ದಂಪತಿಯಿಂದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೈಕೋರ್ಟ್ ಅಕ್ಟೋಬರ್ 16ರಂದು ಮಗುವನ್ನು ದಂಪತಿಗೆ ಹಿಂದಿರುಗಿಸುವಂತೆ ಆದೇಶಿಸಿದ್ದರೂ, ಅಧಿಕಾರಿಗಳು ಈವರೆಗೆ ಮಗುವನ್ನು ಒಪ್ಪಿಸಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮಕ್ಕಳ ಕಲ್ಯಾಣ ಕೇಂದ್ರದಲ್ಲಿರುವ ಮಗುವನ್ನು ನೋಡಲು ಪೋಷಕರು ತೆರಳಿದಾಗ, “ಅಮ್ಮಾ, ನನ್ನನ್ನು ಕರೆದುಕೊಂಡು ಹೋಗು.. ಭಯವಾಗುತ್ತಿದೆ” ಎಂದು ಮಗು ಕಣ್ಣೀರಿಡುತ್ತಾ ಗೋಗರೆದಿದೆ. ಬಳಿಕ ತಂದೆ ಮಗುವನ್ನು ಎತ್ತಿಕೊಂಡು ಸಂತೈಸಿದ್ದಾರೆ. ಈ ವೇಳೆ ಮಗು ತಂದೆಯನ್ನು ಬಿಟ್ಟು ಹೋಗದಂತೆ ಅಪ್ಪಿ ಹಿಡಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿವೆ.

ಕಾನೂನುಬದ್ಧವಾಗಿ ದತ್ತು ಪಡೆದಿಲ್ಲ ಎಂಬ ಕಾರಣ ನೀಡಿ, ಮೂರು ವರ್ಷಗಳಿಂದ ಸಾಕಿ ಬೆಳೆಸುತ್ತಿದ್ದ ಮಗುವನ್ನು ಪೋಷಕರಿಂದ ಬೇರ್ಪಡಿಸಿ ಅಧಿಕಾರಿಗಳು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ನಡುವೆ, ಹಿಂದೂ ಸಂಪ್ರದಾಯದ ಪ್ರಕಾರವೇ ಮಗುವನ್ನು ದತ್ತು ಪಡೆದಿರುವುದಾಗಿ ತಿಳಿಸಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅಕ್ಟೋಬರ್ 16ರಂದು ಮಗುವನ್ನು ಮರಳಿ ಪೋಷಕರಿಗೆ ಒಪ್ಪಿಸುವಂತೆ ಆದೇಶಿಸಿತ್ತು. ಆದರೆ, ಹೈಕೋರ್ಟ್ ಆದೇಶವಿದ್ದರೂ ಅಧಿಕಾರಿಗಳು ಮಗುವನ್ನು ಒಪ್ಪಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಹಿಂದೂ ಸಂಪ್ರದಾಯದಂತೆ ಮಗುವನ್ನು ದತ್ತು ಪಡೆದು ಮೂರು ವರ್ಷಗಳಿಂದ ಸಾಕುತ್ತಿದ್ದೇವೆ. ಆದರೆ, ಯಾರೋ ದೂರು ನೀಡಿದ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಂದು ಮಗುವನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಬಳಿಕ ವಕೀಲರ ಮೂಲಕ ಹೈಕೋರ್ಟ್ ಮೊರೆ ಹೋದಾಗ, ಮಗುವನ್ನು ನಮಗೆ ಒಪ್ಪಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆದರೂ ಅಧಿಕಾರಿಗಳು ಮಗುವನ್ನು ಹಿಂದಿರುಗಿಸಿಲ್ಲ ಎಂದು ಮಗುವನ್ನು ಸಾಕಿ ಬೆಳೆಸಿದ ತಾಯಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹಲವರು, ಮಗುವಿನ ಕಣ್ಣೀರಿನ ವೀಡಿಯೊ ಮನಕಲಕುವಂತಿದೆ. ಮಗುವಿನ ಅಳುವನ್ನು ಕೇಳಿದಾಗಲೇ ನೋವಾಗುತ್ತದೆ. ಮೂರು ವರ್ಷಗಳಿಂದ ಪ್ರೀತಿಯಿಂದ ಸಾಕಿದ ಪೋಷಕರ ಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದು. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಮಗುವನ್ನು ಹಿಂದಿರುಗಿಸದಿರುವುದೇಕೆ? ಎಂದು ʼಎಕ್ಸ್ʼ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಮಗುವನ್ನು ಪೋಷಕರ ಮಡಿಲಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಕಾನೂನು ದುರ್ಬಲರ ವಿರುದ್ಧ ಬಲವಾಗಿ, ಪ್ರಭಾವಿಗಳ ವಿರುದ್ಧ ದುರ್ಬಲವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಪ್ರಕರಣವೂ ಉದಾಹರಣೆ. ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶ್ರೀಮಂತರು ಮತ್ತು ಪ್ರಭಾವಿಗಳ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆ, ಬಡವರು ಹಾಗೂ ಮಧ್ಯಮ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿದೆ.

ಮಕ್ಕಳಿಲ್ಲದ ದಂಪತಿ ದತ್ತು ಪಡೆದ ಮಕ್ಕಳನ್ನು ಜೈವಿಕ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಂತಹ ಮಕ್ಕಳು ತಮ್ಮ ಪೋಷಕರಿಂದ ಕೆಲವೇ ನಿಮಿಷಗಳ ಕಾಲವೂ ದೂರವಿರಲು ಸಾಧ್ಯವಾಗದಷ್ಟು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಿರುವಾಗ, ಮಗುವನ್ನು ಪೋಷಕರಿಂದ ಬೇರ್ಪಡಿಸುವ ಬದಲು ದತ್ತು ಪ್ರಕ್ರಿಯೆಯಲ್ಲಿ ಏನಾದರೂ ಕಾನೂನುಬದ್ಧ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಲು ಬೇರೆ ಮಾರ್ಗ ಕಂಡುಕೊಳ್ಳಬೇಕು. ಮಗುವನ್ನು ಮಾತ್ರ ಪೋಷಕರಿಂದ ದೂರವಿಡಬಾರದು ಎಂದು ಜನರು ಮನವಿ ಮಾಡಿದ್ದಾರೆ.

ಮಗುವಿನ ಅಳುವನ್ನು ನೋಡಿದಾಗ ತಮಗೂ ಕಣ್ಣೀರು ಬರುತ್ತಿದೆ. ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದಿರುವುದು ಅಧಿಕಾರಿಗಳ ವರ್ತನೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಗುವನ್ನು ಅದರ ಪೋಷಕರಿಗೆ ಒಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಗಿತ್ಯಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿರುವ ಜನರು, ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಕುಟುಂಬವನ್ನು ಮತ್ತೆ ಒಂದುಗೂಡಿಸುವಂತೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor