×
Ad

ಪ್ರೊ. ಬಿ. ಕೃಷ್ಣಪ್ಪ ಶೋಷಿತರ ಸ್ವಾಭಿಮಾನದ ಧ್ವನಿ: ರಾಮಣ್ಣ ಕಲ್ಲದೇವನಹಳ್ಳಿ

Update: 2026-06-09 18:51 IST

ಯಾದಗಿರಿ: ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಜೀವನವಿಡೀ ಹೋರಾಟ ನಡೆಸಿದ ದಿ. ಪ್ರೊ. ಬಿ. ಕೃಷ್ಣಪ್ಪ ಅವರು ದಲಿತ ಚಳವಳಿಗೆ ಶಕ್ತಿಯಾಗಿ, ಶೋಷಿತರ ಸ್ವಾಭಿಮಾನದ ಬದುಕಿಗೆ ಧ್ವನಿಯಾಗಿದ್ದರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಘಟನೆ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಹೇಳಿದರು.

ನಗರದ ಅಂಬೇಡ್ಕರ್ ಚೌಕ್‌ನಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ. ಬಿ. ಕೃಷ್ಣಪ್ಪ ಅವರ 89ನೇ ಜನ್ಮದಿನಾಚರಣೆ ಅಂಗವಾಗಿ ಪ್ರೊ. ಬಿ. ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದಸಂಸ ಸಂಸ್ಥಾಪಕರಾದ ಪ್ರೊ. ಬಿ. ಕೃಷ್ಣಪ್ಪ ಅವರು ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕಿನ ಪಾಠ ಕಲಿಸಿದವರಾಗಿದ್ದು, ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವ ಮೂಲಕ ಶೋಷಿತರಲ್ಲಿ ಆತ್ಮವಿಶ್ವಾಸ ತುಂಬಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ರಾಜ್ಯ ಸಮಿತಿ ಸದಸ್ಯ ದಲಿತ ಹಿರಿಯ ಮುಖಂಡ ನಾಗಣ್ಣ ಬಡಿಗೇರ್ ಮಾತನಾಡಿ ಪ್ರೊ. ಬಿ. ಕೃಷ್ಣಪ್ಪ ಅವರು ದಲಿತರು, ಶೋಷಿತರು, ದಮನಿತರು, ಮಹಿಳೆಯರು ಹಾಗೂ ಭೂರಹಿತರ ಪರ ಧ್ವನಿಯಾಗಿ ಕಾರ್ಯನಿರ್ವಹಿಸಿದರು. ಜಾತಿ, ಧರ್ಮಗಳ ಭೇದವಿಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಅವರು, ಮೂಢನಂಬಿಕೆ ಹಾಗೂ ಸಾಮಾಜಿಕ ಶೋಷಣೆಯ ವಿರುದ್ಧ ಜನಜಾಗೃತಿ ಮೂಡಿಸಿದರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮರೆಪ್ಪ ಚಟ್ಟೇರಕರ್, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳಲ್ಲಿ ಅಚಲ ನಂಬಿಕೆ ಹೊಂದಿದ್ದ ಪ್ರೊ. ಬಿ. ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿ ಎಂಬ ಸಾಮಾಜಿಕ ಚಳವಳಿಯನ್ನು ಕಟ್ಟುವ ಮೂಲಕ ರಾಜ್ಯದ ದಲಿತ ಸಮುದಾಯಕ್ಕೆ ಸ್ವಾಭಿಮಾನದ ಸಂಕೇತವಾಗಿದ್ದರು. ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಸಂಘಟನೆಯನ್ನು ಬೆಳೆಸಿದ ಅವರ ಹೋರಾಟದ ಹಾದಿ ಇಂದಿಗೂ ಸಾಮಾಜಿಕ ನ್ಯಾಯದ ಹೋರಾಟಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ, ವಿಜಯಕುಮಾರ್ ಶಿರಗೋಳ, ಗೋಪಾಲ್ ತಳಗೇರಿ, ಪರಶುರಾಮ ರೋಜಾ, ಧಮ್ಮಚಾರಿ ನಿಂಗಪ್ಪ ಕೊಲ್ಲೂರಕರ್, ನರೆಂದ್ರ ಅನವಾರ, ನಿಂಗಣ್ಣ ಬಿರನಾಳ, ಭೀಮರಾಯ ಅಗ್ನಿ, ಭೀಮರಾಯ ಸುಂಗಲಕರ್, ಸೈದಪ್ಪ ಕೊಲ್ಲೂರು, ಶರಣಪ್ಪ ತಳವರಗೇರಾ, ಆನಂದ್ ಚಟ್ಟೇರಕರ್, ಶಿವಕುಮಾರ್ ಕರ್ದಳ್ಳಿ, ವಿಜಯಕುಮಾರ್ ಆಶನಾಳ, ಸೇರಿದಂತೆ ದಸಂಸ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News