ಯಾದಗಿರಿ ರೆಡ್ಡಿ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ರಾಜಶೇಖರಗೌಡ ಪಾಟೀಲ ವಜ್ಜಲ್ ನೇಮಕ
ಯಾದಗಿರಿ: ಕರ್ನಾಟಕ ರಾಜ್ಯ ಶಿವಶರಣ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ (ರಿ.), ಬೆಂಗಳೂರು ಇದರ ಯಾದಗಿರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿರುವ ಅವರು, ರೆಡ್ಡಿ ಸಮಾಜಕ್ಕೆ ರಾಜ್ಯ ಹಾಗೂ ದೇಶದಲ್ಲಿ ಭವ್ಯ ಇತಿಹಾಸವಿದ್ದು, ರಾಜಶೇಖರಗೌಡ ಪಾಟೀಲ ವಜ್ಜಲ್ ಅವರು ಸಮಾಜದ ಸಂಘಟನೆಯಲ್ಲಿ ದೀರ್ಘಕಾಲದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ವಜ್ಜಲ್ ಅವರು ಸಮಾಜದ ಮುಖಂಡರು ಹಾಗೂ ಯುವಕರೊಂದಿಗೆ ಸರಳವಾಗಿ ಬೆರೆಯುವ ಗುಣ ಹೊಂದಿದ್ದು, ಸಮಾಜ ಸಂಘಟನೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಿಂದ ಜಿಲ್ಲೆಯಲ್ಲಿ ಸಮಾಜ ಮತ್ತಷ್ಟು ಸದೃಢವಾಗಿ ಸಂಘಟನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಸೇರಿದಂತೆ ಜಿಲ್ಲೆಯ ಇತರ ಮುಖಂಡರೊಂದಿಗೆ ಚರ್ಚಿಸಿ ಈ ನೇಮಕ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರು ಜಿಲ್ಲೆಯಲ್ಲಿ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.