ಸುರಪುರದಲ್ಲಿ ಮೊದಲ ಬಾರಿಗೆ ಮೈಸೂರು ದಸರಾ ಮಾದರಿಯಲ್ಲಿ ನಾಡಹಬ್ಬ ಆಚರಣೆ : ರಾಜಾ ಮುಕುಂದ ನಾಯಕ
ಸುರಪುರ: ಪ್ರಥಮ ಬಾರಿಗೆ ಸುರಪುರದಲ್ಲಿ ನಾಡಹಬ್ಬ ಉತ್ಸವ ಸಮಿತಿಯಿಂದ ಮೈಸೂರು ದಸರಾ ಮಾದರಿಯಲ್ಲಿ ಆನೆಯ ಮೇಲೆ ಅಂಬಾರಿಯಲ್ಲಿ ನಾಡದೇವತೆಯ ಮೆರವಣಿಗೆ ನಡೆಯಲಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ತಿಳಿಸಿದರು.
ಪಟ್ಟಣದ ಪಬ್ಲಿಕ್ ರಿಕ್ರಿಯೇಶನ್ ಕ್ಲಬ್ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 11ರಿಂದ 19ರವರೆಗೆ ಪ್ರತಿದಿನ ಸಂಜೆ ಉಪನ್ಯಾಸ, ಸುರಪುರ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆನೆಯ ಮೇಲೆ ಅಂಬಾರಿ ಮೆರವಣಿಗೆಗೆ ನೆರವು ನೀಡುತ್ತಿರುವ ಸುರೇಶ್ ಆರ್. ಸಜ್ಜನ್ ಹಾಗೂ ನಿತ್ಯವೂ ಅನ್ನದಾಸೋಹಕ್ಕೆ ಸಹಕಾರ ನೀಡುತ್ತಿರುವ ಪ್ರಕಾಶ್ ಸಜ್ಜನ್ ಅವರ ಸೇವೆ ಶ್ಲಾಘನೀಯವಾಗಿದೆ. ಸುರಪುರದಲ್ಲಿ ಐತಿಹಾಸಿಕವಾಗಿರುವ ಈ ಆಚರಣೆಯನ್ನು ಇದೀಗ ಆರಂಭಿಸಲಾಗುತ್ತಿದ್ದು, ಇದು ಇಡೀ ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಬ್ಲಿಕ್ ರಿಕ್ರಿಯೇಶನ್ ಕ್ಲಬ್ ಕಾರ್ಯದರ್ಶಿ ಡಾ. ಸುರೇಶ್ ಸಜ್ಜನ್ ಮಾತನಾಡಿ, ನಮ್ಮ ಭಾಗದ ಜನರು ಮೈಸೂರು ದಸರಾವನ್ನು ಮಾತ್ರ ನೋಡಿದ್ದಾರೆ. ಅಂತಹದ್ದೇ ಒಂದು ಕಾರ್ಯಕ್ರಮವನ್ನು ಸುರಪುರದಲ್ಲಿಯೂ ಆಚರಿಸಬೇಕು ಎಂಬ ಉದ್ದೇಶದಿಂದ ಈ ಬಾರಿ ಆನೆಯ ಮೇಲೆ ಅಂಬಾರಿಯಲ್ಲಿ ನಾಡದೇವತೆಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಕ್ಟೋಬರ್ 11ರಂದು ಸಂಜೆ 4 ಗಂಟೆಗೆ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಿಂದ ರಾಜಬೀದಿಯ ಮೂಲಕ ಗರುಡಾದ್ರಿ ಕಲಾಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ, ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ, ಟಿಎಚ್‌ಒ ಡಾ. ಆರ್.ವಿ. ನಾಯಕ, ರಾಜಾ ವಾಸುದೇವ ನಾಯಕ, ಕ್ಲಬ್ ಅಧ್ಯಕ್ಷ ಅರವಿಂದಕುಮಾರ, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ ಹಾಗೂ ಉದ್ಯಮದಾರ ಗ್ಯಾನಚಂದ್ ಜೈನ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಅನೇಕ ಕಲಾತಂಡಗಳು, ಡೊಳ್ಳು, ಹಲಗೆ ಸೇರಿದಂತೆ ಸ್ಥಳೀಯ ಕಲಾ ತಂಡಗಳು ಭಾಗವಹಿಸಲಿವೆ. ಮಹಿಳೆಯರು ಕುಂಭಕಳಸದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಲಂಕರಿಸುವ ಮೂಲಕ ಮೆರವಣಿಗೆಗೆ ಮೆರಗು ತುಂಬಬೇಕು ಎಂದು ಅವರು ಮನವಿ ಮಾಡಿದರು.
ಉತ್ಸವ ಸಮಿತಿಯ ಉಪಾಧ್ಯಕ್ಷ ಕಿಶೋರ್ ಚಂದ್ ಜೈನ್ ಮಾತನಾಡಿ, 1986ರಲ್ಲಿ ರಾಜಾ ಮದನ ಗೋಪಾಲ ನಾಯಕ ಅವರಿಂದ ಆರಂಭಗೊಂಡಿರುವ ಈ ಉತ್ಸವ ಸಮಿತಿಯು ಇದೀಗ 40ನೇ ವರ್ಷದ ನಾಡಹಬ್ಬ ಆಚರಿಸುತ್ತಿದೆ. ಈ ಬಾರಿಯ ದಸರಾ ಹಬ್ಬವನ್ನು ಈ ಭಾಗದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದರು.
ಸುದ್ದಿಗೋಷ್ಠಿಯ ಆರಂಭದಲ್ಲಿ ವಿಷ್ಣು ಪ್ರಕಾಶ್ ಜೋಶಿ ನೇತೃತ್ವದಲ್ಲಿ ನಾಡದೇವತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಳಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಕ್ಲಬ್ ಅಧ್ಯಕ್ಷ ನ್ಯಾಯವಾದಿ ಅರವಿಂದಕುಮಾರ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದರಖಾನಿ, ಸೋಮನಾಥ ನಾಯಕ ದೊಣ್ಣಿಗೇರ, ಮಹೇಶ ಜಾಗಿರದಾರ, ಸೋಮರಾಯ ಶಖಾಪುರ, ನರಸಿಂಹ ಕಾಂತ ಪಂಚಮಗಿರಿ, ಗೋವರ್ಧನ ಝಂವ್ಹಾರ, ಶಿವಕುಮಾರ ಮಸ್ಕಿ, ಗಂಗಾಧರ ರುಮಾಲ, ಅಂಬ್ರೇಶ ಕುಂಬಾರ, ಶ್ರೀಶೈಲ ಯಂಕಂಚಿ, ಅಮೀನ ರೆಡ್ಡಿ, ಮಂಜುನಾಥ ಗುಳಗಿ ಹಾಗೂ ದೇವು ಹೆಬ್ಬಾಳ ಉಪಸ್ಥಿತರಿದ್ದರು. ಪ್ರಕಾಶ ಅಂಗಡಿ ನಿರೂಪಿಸಿದರು. ರಾಜಶೇಖರ ದೇಸಾಯಿ ವಂದಿಸಿದರು.
ಕಡಗಂಚಿ ಮಠದಿಂದ ಆನೆಯನ್ನು, ಮಸ್ಕಿ ಮಠದಿಂದ ಅಂಬಾರಿ ಹಾಗೂ ಕಲಬುರಗಿಯಿಂದ ನಾಡದೇವಿಯ ಮೂರ್ತಿಯನ್ನು ತರಲಾಗುತ್ತಿದೆ. ಅಂಬಾರಿ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಸರ್ಕಾರದ ಕಾರ್ಯದರ್ಶಿ ಅವರಿಂದ ಪರವಾನಗಿ ಪಡೆಯಲಾಗಿದೆ.
-ಡಾ. ಸುರೇಶ್ ಸಜ್ಜನ್, ಕಾರ್ಯದರ್ಶಿ, ಪಬ್ಲಿಕ್ ರಿಕ್ರಿಯೇಶನ್ ಕ್ಲಬ್, ಸುರಪುರ