ಸುರಪುರ: ಕಲಬುರಗಿಯ ಮಹಾ ದಾಸೋಹಿ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾ ಅವರ ಪ್ರಥಮ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಟ್ಟಣದ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಮಂಗಳವಾರ ದಾಸೋಹ ಕಾರ್ಯಕ್ರಮ ನಡೆಯಿತು.

ಶರಣಬಸವ ರೆಸಿಡೆನ್ಷಿಯಲ್ ಪಬ್ಲಿಕ್ ಸ್ಕೂಲ್, ಶರಣಬಸವ ರೆಸಿಡೆನ್ಷಿಯಲ್ ಇಂಡಿಪೆಂಡೆಂಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್, ಬಸವರಾಜಪ್ಪ ಅಪ್ಪಾ ಪದವಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಬೋಧಕವರ್ಗ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಶರಣಬಸಪ್ಪ ಸಾಲಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅಪ್ಪಾಜಿ ಅವರು ನೀಡಿದ ಮಹತ್ವದ ಕೊಡುಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ನೈತಿಕ ಪ್ರಗತಿಗೆ ತೋರಿದ ಕಾಳಜಿ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಅವರು ಬೀರಿದ ಪ್ರಭಾವವನ್ನು ಸ್ಮರಿಸಬೇಕು ಎಂದರು.

ಅಪ್ಪಾಜಿಯವರು ಶಿಕ್ಷಣವನ್ನು ಕೇವಲ ಜ್ಞಾನಾರ್ಜನೆಯ ಸಾಧನವನ್ನಾಗಿ ನೋಡದೆ, ಉತ್ತಮ ಮೌಲ್ಯಗಳು, ಸಂಸ್ಕಾರ, ಶಿಸ್ತು ಹಾಗೂ ಸಮಾಜದ ಮೇಲಿನ ಜವಾಬ್ದಾರಿಯನ್ನು ಬೆಳೆಸುವ ಶಕ್ತಿಯುತ ಮಾಧ್ಯಮವೆಂದು ಪರಿಗಣಿಸಿದ್ದರು. ಅವರ ದೂರದೃಷ್ಟಿ, ಸರಳತೆ, ಸೇವಾ ಮನೋಭಾವ ಹಾಗೂ ಶಿಕ್ಷಣದ ಮೇಲಿನ ಅಪಾರ ಕಾಳಜಿ ಇಂದಿಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಸಾದ ವಿತರಣೆಗೆ ಮುನ್ನ ವಿವಿಧ ಅಂಗಸಂಸ್ಥೆಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿ ಡಾ. ಶರಣಬಸವಪ್ಪ ಅಪ್ಪಾ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.

ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಸುರಪುರ ಕ್ಯಾಂಪಸ್‌ನ ಎಲ್ಲಾ ಅಂಗಸಂಸ್ಥೆಗಳ ವಿದ್ಯಾರ್ಥಿಗಳು, ಬೋಧಕವರ್ಗ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor