ಸುರಪುರ: ಜೀವನದಲ್ಲಿ ಉನ್ನತಿ ಸಾಧಿಸಲು ಜ್ಞಾನದ ಭಂಡಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗರಾಜ ಮೂಲಿಮನಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಸ್ನಾತಕ ಹಾಗೂ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜಿಗೆ ಹಾಜರಾಗುವುದರಿಂದ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಗುತ್ತದೆ. ಕಾಲೇಜಿನ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಘಟಕಗಳಿಗೆ ಸೇರಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸಿಕೊಳ್ಳಬೇಕು. ಸುರಪುರದಲ್ಲಿ ಶೈಕ್ಷಣಿಕ ಪರ್ವ ನಡೆಯುತ್ತಿದ್ದು, ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಅದನ್ನು ಜ್ಞಾನದ ಸಾಧನವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಮೊಬೈಲ್‌ನ ದುರುಪಯೋಗದಿಂದಾಗುವ ಪರಿಣಾಮಗಳನ್ನು ವಿದ್ಯಾರ್ಥಿಗಳು ಅರಿತು ಜವಾಬ್ದಾರಿಯಿಂದ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಲಭೀಮ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳ ಸದುಪಯೋಗ ಪಡೆದು ಉಪನ್ಯಾಸಕರು ಬೋಧಿಸುವ ಪಾಠಗಳನ್ನು ಸಮರ್ಪಕವಾಗಿ ಅಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರಟಗಿಯ ಪ್ರಾಧ್ಯಾಪಕ ಹಣಮಂತಪ್ಪ ಚಂದಲಾಪುರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಉಪನ್ಯಾಸಕರಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬಳಿಕ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಉಪನ್ಯಾಸಕ ಡಾ. ವಿದ್ಯಾಸಾಗರ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಣಮಂತಪ್ಪ ವಗ್ಗಾರ ಸ್ವಾಗತಿಸಿದರು. ಬಸ್ಸಮ್ಮ ಗಿರಡಿಮಠ ಹಾಗೂ ದೇವು ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕ ಭಿಮಣ್ಣ ಮಾಲಿ ಪಾಟೀಲ್,ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭಂಡಾರೆಪ್ಪ ನಾಟೇಕರ್, ಉಪ ಖಜಾನೆ ಅಧಿಕಾರಿ ಪರಶುರಾಮ ನಾಯಕ, ಸ.ನೌ.ಸಂ.ಅಧ್ಯಕ್ಷ ರಾಮಕೃಷ್ಣ ಕಲಬುರ್ಗಿ, ಮೋನಯ್ಯ ಗೋನಾಲ, ಸೋಫಿಸಾಬ್ ಕುಂಬಾರಪೇಟ, ಭೀಮಣ್ಣ ಬೋಸಗಿ, ಕೆಂಭಾವಿ ಕಾಲೇಜಿನ ಪ್ರಾಚಾರ್ಯ ನಾಗಪ್ಪ ಚವಲಕರ್, ಸೈದಾಪುರದ ಉಪನ್ಯಾಸಕ ಚಂದ್ರಶೇಖರ ನಾಯಕ,ಪ್ರಮೋದ ಕುಲಕರ್ಣಿ, ಮೋನಯ್ಯ,ಡಾ.ಜಗದೀಶ ಕುಮಾರ, ಜ್ಯೋತಿ ಭಂಡಾರಿ, ಪ್ರೋ. ದೇವಿಂದ್ರಪ್ಪ ಪಾಟೀಲ್, ಬಸ್ಸಣ್ಣ, ಡಾ.ಮಹಾದೇವಪ್ಪ, ಪ್ರ‌.ದ.ಸ ದ್ವಾರಕೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor