ಯಾದಗಿರಿ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಾಗೂ ಬೆಳೆ ನಷ್ಟದ ನಡುವೆಯೂ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಶಾಸಕ ಶರಣಗೌಡ ಕಂದಕೂರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ನೀಡಿರುವ ವರದಿಗಳಲ್ಲಿಯೇ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳಲ್ಲಿ ಮಳೆ ಕೊರತೆ ಹೆಚ್ಚಿರುವುದಾಗಿ ಉಲ್ಲೇಖಿಸಲಾಗಿದೆ. ಆದರೂ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಯಾವ ಮಾನದಂಡದ ಆಧಾರದಲ್ಲಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಆರು ತಾಲೂಕುಗಳಿದ್ದು, ಕೇವಲ ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ಯಾದಗಿರಿ, ಗುರುಮಠಕಲ್, ಶಹಾಪುರ ಹಾಗೂ ಸುರಪುರ ಭಾಗಗಳಲ್ಲಿ ನೀರಾವರಿ ಸೌಲಭ್ಯ ಕಡಿಮೆ ಇರುವುದರಿಂದ ಬಹುತೇಕ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ ಎಂದು ಹೇಳಿದರು.

ಜೂನ್ 1ರಿಂದ ಜುಲೈವರೆಗೆ ಸರ್ಕಾರದ ವರದಿ ಪ್ರಕಾರ ಗುರುಮಠಕಲ್‌ನಲ್ಲಿ ಶೇ.58 ಹಾಗೂ ಯಾದಗಿರಿಯಲ್ಲಿ ಶೇ.59ರಷ್ಟು ಮಳೆ ಕೊರತೆ ದಾಖಲಾಗಿದೆ. ಆಗಸ್ಟ್ 28ರವರೆಗಿನ ವರದಿಯಲ್ಲಿಯೂ ಗುರುಮಠಕಲ್‌ನಲ್ಲಿ ಶೇ.44, ಯಾದಗಿರಿಯಲ್ಲಿ ಶೇ.54, ಶಹಾಪುರದಲ್ಲಿ ಶೇ.50 ಹಾಗೂ ಸುರಪುರದಲ್ಲಿ ಶೇ.35ರಷ್ಟು ಮಳೆ ಕೊರತೆ ಇದೆ. ಈ ಅಂಕಿ-ಅಂಶಗಳು ವೈಯಕ್ತಿಕ ವರದಿಗಳಲ್ಲ, ಸರ್ಕಾರದ ಇಲಾಖೆಗಳೇ ನೀಡಿರುವ ವರದಿಗಳು. ಹಾಗಿದ್ದರೂ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಐದು ದಿನದ ಮಳೆಗೆ ಬರದ ಲೆಕ್ಕ ಬದಲಾಯಿಸಬೇಡಿ :

ಆಗಸ್ಟ್ ಮೊದಲ ವಾರದಲ್ಲಿ ನಾಲ್ಕೈದು ದಿನ ಮಳೆಯಾಗಿದೆ ಎಂಬ ಕಾರಣಕ್ಕೆ ಬರ ಪರಿಸ್ಥಿತಿ ಇಲ್ಲ ಎಂದು ತೀರ್ಮಾನಿಸಬಾರದು. ನಾಲ್ಕೈದು ದಿನದ ಮಳೆಯಿಂದ ಇಡೀ ಹಂಗಾಮಿನಲ್ಲಿ ರೈತರು ಅನುಭವಿಸಿರುವ ನಷ್ಟ ಸರಿಯಾಗುವುದಿಲ್ಲ. ಹೀಗೆ ಮಾಡಿದರೆ ರೈತರಿಗೆ ಮರಣ ಶಾಸನ ಬರೆದಂತಾಗುತ್ತದೆ ಎಂದು ಕಂದಕೂರ ಹೇಳಿದರು.

ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಪ್ರಮುಖ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿವೆ. ರೈತರು ಎರಡು-ಮೂರು ಬಾರಿ ಬಿತ್ತನೆ ಮಾಡಿದರೂ ಮತ್ತೆ ಬೆಳೆ ಕಳೆದುಕೊಂಡಿದ್ದಾರೆ. ಹಲವು ಹೊಲಗಳಲ್ಲಿ ಬೆಳೆ ಕಾಣದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

‘ಜ್ವರ ಬಂದದ್ದು ಎಮ್ಮಿಗೆ, ಬರೆ ಹಾಕಿದ್ದು ಎತ್ತಿಗೆ’ :

ಬರ ಘೋಷಣೆ ವಿಚಾರದಲ್ಲಿ ಸರ್ಕಾರದ ಕ್ರಮವನ್ನು ವ್ಯಂಗ್ಯವಾಗಿ ಟೀಕಿಸಿದ ಕಂದಕೂರ, “ಜ್ವರ ಬಂದದ್ದು ಎಮ್ಮಿಗೆ, ಬರೆ ಹಾಕಿದ್ದು ಎತ್ತಿಗೆ ಎಂಬಂತಾಗಿದೆ. ಸಂಕಷ್ಟದಲ್ಲಿರುವ ತಾಲೂಕುಗಳನ್ನು ಬಿಟ್ಟು ಬೇರೆ ರೀತಿಯಲ್ಲಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಬೆಳೆ ನಷ್ಟ ಹಾಗೂ ಮಳೆ ಕೊರತೆಯ ಬಗ್ಗೆ ವರದಿ ನೀಡಿದ್ದಾರೆ. ಆದರೂ ಆ ವರದಿಗಳನ್ನು ಪರಿಗಣಿಸದಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.

ವರದಿ ಬದಲಾದದ್ದು ಹೇಗೆ? :

ಒಂದು ಹಂತದಲ್ಲಿ ಶೇ.58-59ರಷ್ಟು ಮಳೆ ಕೊರತೆ ಇದೆ ಎಂದು ಹೇಳಿ, ನಂತರದ ವರದಿಯಲ್ಲಿ ಬೇರೆ ಅಂಕಿ-ಅಂಶ ತೋರಿಸಲಾಗುತ್ತಿದೆ. ಹಾಗಾದರೆ ವರದಿ ಬದಲಾದದ್ದು ಹೇಗೆ? ಯಾವ ಆಧಾರದ ಮೇಲೆ ಕೆಲವು ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಕ್ಯಾಬಿನೆಟ್ ಮುಂದೆ ವಿಷಯ ಹೋಗುವ ವೇಳೆಗೆ ಅಧಿಕಾರಿಗಳ ವರದಿಯಲ್ಲಿ ಬದಲಾವಣೆ ಆಗಿದೆಯೇ ಅಥವಾ ಬೇರೆ ಮಾನದಂಡಗಳನ್ನು ಬಳಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಗುಳೆ ತಪ್ಪಿಸಲು ಬರ ಘೋಷಣೆ ಅಗತ್ಯ :

ತಮ್ಮ ಕ್ಷೇತ್ರದಲ್ಲಿ ದೊಡ್ಡ ಜಮೀನು ಹೊಂದಿರುವ ರೈತರಿಗಿಂತ ಒಂದು-ಎರಡು ಎಕರೆ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಳೆ ಬಂದು ಬೆಳೆ ಬಂದರೆ ಮಾತ್ರ ಅವರ ಕುಟುಂಬಗಳ ಜೀವನ ಸಾಗುತ್ತದೆ. ಬೆಳೆ ಕೈಕೊಟ್ಟರೆ ಜೀವನಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.

ಗುರುಮಠಕಲ್ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಎರಡನೇ ಪಟ್ಟಿಯಲ್ಲಿ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳನ್ನು ಸೇರಿಸುವುದಾಗಿ ಹೇಳಿದೆ. ಸರ್ಕಾರ ತನ್ನ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕ್ಷೇತ್ರದ ರೈತರ ಪರವಾಗಿ ವಿಧಾನಸಭೆ ಎದುರು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

“ನಾನು ವೈಯಕ್ತಿಕ ಅನುದಾನ ಅಥವಾ ಬೇರೆ ಯಾವುದೇ ಬೇಡಿಕೆ ಕೇಳುತ್ತಿಲ್ಲ. ರೈತರ ಬದುಕು ಉಳಿಸುವಂತೆ ಕೇಳುತ್ತಿದ್ದೇನೆ. ರೈತರು ಎಲ್ಲ ತಾಲೂಕುಗಳಲ್ಲಿಯೂ ಒಂದೇ ರೀತಿಯ ಸಂಕಷ್ಟದಲ್ಲಿದ್ದಾರೆ” ಎಂದು ಹೇಳಿದರು.

ರೈತರ ಆತ್ಮಹತ್ಯೆ ಬಗ್ಗೆ ಕಳವಳ :

ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕೌಟುಂಬಿಕ ಹಾಗೂ ಆರ್ಥಿಕ ಸಂಕಷ್ಟ, ಸಾಲದ ಹೊರೆ, ಬೆಳೆ ನಷ್ಟ ಮತ್ತು ಆದಾಯದ ಕೊರತೆ ರೈತರನ್ನು ಕಠಿಣ ನಿರ್ಧಾರ ಕೈಗೊಳ್ಳುವಂತೆ ಮಾಡುತ್ತಿದೆ ಎಂದರು.

ರೈತರ ಸಮಸ್ಯೆಯನ್ನು ಕೇವಲ ಅಂಕಿ-ಅಂಶಗಳ ಮೂಲಕ ನೋಡದೆ ಮಾನವೀಯ ದೃಷ್ಟಿಯಿಂದ ಸರ್ಕಾರ ಪರಿಗಣಿಸಬೇಕು. ಬ್ಯಾಂಕ್ ನೋಟಿಸ್‌ಗಳಿಂದ ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಾಲಮನ್ನಾ ಕೇಳುತ್ತಿಲ್ಲ, ರೈತರ ಬದುಕು ಉಳಿಸಿ :

“ಸರ್ಕಾರದಿಂದ ಈಗಲೇ ಸಾಲಮನ್ನಾ ಮಾಡುವಂತೆ ನಾವು ಕೇಳುತ್ತಿಲ್ಲ. ಆದರೆ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಕ್ಕಿದೆ. ಕನಿಷ್ಠ ಬೆಳೆ ಪರಿಹಾರ, ಬರ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು” ಎಂದು ಕಂದಕೂರ ಆಗ್ರಹಿಸಿದರು.

ರೈತರ ಬಗ್ಗೆ ಕಾಳಜಿ ಇರಬೇಕಾದರೆ ಸರ್ಕಾರದಲ್ಲಿ ತಾಯಿ ಹೃದಯ ಹಾಗೂ ಮಾನವೀಯ ಮನಸ್ಸು ಇರಬೇಕು. ಪಕ್ಷ-ರಾಜಕೀಯವನ್ನು ಬದಿಗಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

“ಇದು ಶರಣಗೌಡ ಕಂದಕೂರ ಅವರೊಬ್ಬರ ಹೋರಾಟವಲ್ಲ. ಸಂಕಷ್ಟದಲ್ಲಿರುವ ಸಾವಿರಾರು ರೈತರ ಧ್ವನಿ. ಸರ್ಕಾರ ಕೂಡಲೇ ಮರುಪರಿಶೀಲನೆ ನಡೆಸಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಬೇಕು” ಎಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor