ಯಾದಗಿರಿ | ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಬಾಲಕಾರ್ಮಿಕತೆ ಹೆಚ್ಚಳ : ಕ್ರಮ ಕೈಗೊಳ್ಳಲು ನಾಗಪ್ಪ ಬಿ.ಹೊನಗೇರಾ ಆಗ್ರಹ
ಯಾದಗಿರಿ : ಜಿಲ್ಲೆಯ 6 ತಾಲೂಕಿನ ಮಕ್ಕಳು ಶಾಲೆಯ ಸಮಯದಲ್ಲಿ ಹತ್ತಿ ಬಿಡಿಸುವುದು ಮತ್ತು ಅಂಗಡಿಗಳಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ನಡೆಯುತ್ತಿದ್ದು, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಬಿ. ಹೊನಗೇರಾ ಅವರು, ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಶಾಲಾ ಸಮಯದಲ್ಲೇ ಮಕ್ಕಳು ಆಟೋ, ಟ್ಯಾಕ್ಸಿ, ಪಿಕಪ್‌ಗಳಲ್ಲಿ ಹತ್ತಿ ಬಿಡಿಸಲು ಕರೆದೊಯ್ಯಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅನೇಕ ಶಾಲೆಗಳಲ್ಲಿ ಹಾಜರಾತಿಯೂ ಹಲವು ಮಟ್ಟಿಗೆ ಕುಸಿದಿರುವುದನ್ನು ನೋಡಬಹುದು. ಅಧಿಕಾರಿಗಳು ಕಂಡರೂ ಕೂಡ ನಿರ್ಲಕ್ಷ್ಯ ವಹಿಸುತ್ತಿರುವುದು ಕಳವಳಕಾರಿ ಎಂದು ಹೇಳಿದರು.
ಶಿಕ್ಷಣ ಪಡೆಯಬೇಕಾದ ವಯಸ್ಸಿನ ಮಕ್ಕಳನ್ನು ಶ್ರಮಕ್ಕೆ ತೊಡಗಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಕಾನೂನು ವಿರೋಧಿ ಕೃತ್ಯ ಎಂದು ಅವರು ತಿಳಿಸಿದರು. ತಕ್ಷಣ ತನಿಖೆ ನಡೆಸಿ ಮಧ್ಯವರ್ತಿಗಳು ಹಾಗೂ ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುವ ವಾಹನ ಮಾಲೀಕರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಕ್ಕಳನ್ನು ಶಾಲೆಗೆ ಮರು ಪ್ರವೇಶಿಸಲು ಶಿಕ್ಷಣ ಇಲಾಖೆ ಮತ್ತು ಬಾಲಕಲ್ಯಾಣ ಇಲಾಖೆ ಸಂಯೋಜಿತ ಕಾರ್ಯಾಚರಣೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವನ್ನೂ ಇಲಾಖಾ ಮಟ್ಟದಲ್ಲಿ ಪರಿಶೀಲಿಸಬೇಕು. ಮಕ್ಕಳ ಭವಿಷ್ಯ ರಕ್ಷಿಸಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ರೇಣುಕಾ ಯಾದಗಿರಿ, ಶರಣಪ್ಪ ಖಾನಾಪೂರ, ಭೀಮಾಶಂಕರ ರಾಯಪ್ಪನೋರ್, ಆದೆಪ್ಪ ಹೊನಗೇರಾ, ಅಂಬ್ರೇಷ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ತಡಿಬಿಡಿ, ಉಪಾಧ್ಯಕ್ಷ ಸುರೇಶ ಹೊಸಮನಿ, ಸೈದಾಪೂರ ಹೋಬಳಿ ಅಧ್ಯಕ್ಷ ಆಕಾಶ, ವಲಯ ಉಪಾಧ್ಯಕ್ಷ ಶರಣು, ವಡಗೇರಿ ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಮರೆಪ್ಪ ಕಡಿಮನಿ, ದೇವಪ್ಪ ಅಲ್ಲಿಪುರ, ಭೀಮರಾಯ ಎಸ್.ಕೆ., ನಾಗರಾಜ ಸೇರಿದಂತೆ ಇನ್ನಿತರರು ಇದ್ದರು.