ಯಾದಗಿರಿ | ಡಿ.ದೇವರಾಜ ಅರಸು ರಾಜ್ಯ ಕಂಡ ಅಭಿವೃದ್ಧಿಯ ಹರಿಕಾರ : ಜಿಲ್ಲಾಧಿಕಾರಿ ಹರ್ಷಲ್ ಭೋಯರ್
ಯಾದಗಿರಿ: ಹಿಂದುಳಿದ ವರ್ಗಗಳ ಹರಿಕಾರರೆಂದು ಹೆಸರಾದ ಡಿ.ದೇವರಾಜ ಅರಸು ಅವರು ತಮ್ಮ ಎಂಟು ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದ ನಾಯಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ತಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡವರ, ಶೋಷಿತರ, ಹಿಂದುಳಿದ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಅನೇಕ ಹೊಸ ಕಾನೂನು ಮತ್ತು ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟು ಅನೇಕರ ಹೊಸ ಬದುಕಿಗೆ ದಾರಿದೀಪವಾಗಿದ್ದರು.
ಅವರು ಅಂದು ಮಾಡಿದ ಅನೇಕ ಜನಪರ ಯೋಜನೆಗಳು ಇಂದಿಗೂ ಜಾರಿಯಲ್ಲಿವೆ. ಅವರಿಗೆ ಅಧಿಕಾರಕ್ಕಿಂತ ಜನರ ಕಾಳಜಿಯೇ ಮುಖ್ಯವಾಗಿತ್ತು ಎಂಬುವುದನ್ನು ಅವರ ರಾಜಕೀಯ ಜೀವನ ಮತ್ತು ಸಾಮಾಜಿಕ ಬದುಕು ಅವಲೋಕಿಸಿದಾಗ ತಿಳಿಯುತ್ತದೆ ಎಂದು ಭೊಯರ್ ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ ಅಶೋಕ ವಾಟ್ಕರ್ ಅವರು ಡಿ.ದೇವರಾಜ ಅರಸು ಅವರ ಜಯಂತಿ ಕುರಿತು ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸದಾಶಿವ ಎಂ.ನಾರಾಯಣಕರ್ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ಅನೇಕ ಯೋಜನೆಗಳನ್ನು ಈ ಮಹಾನ ನಾಯಕರ ಹೆಸರಲ್ಲಿ ಜಾರಿಗೊಳಿಸುವ ಮೂಲಕ ಅನೇಕರಿಗೆ ಉಪಯೋಗವಾಗುವಂತಹ ಕೆಲಸ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುರಾವ್ ಹುಲಗಪ್ಪ ಕಾಡ್ಲೂರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ, ಡಿವೈಎಸ್ ಪಿ ನಾಯಕ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಅಪ್ಪಣ್ಣ ಚಿನ್ನಾಕರ್, ಭೀಮಣ್ಣ ಮೇಟಿ, ಶರಣಪ್ಪ ಮಾನೇಗಾರ್, ಮೌಲಾಲಿ ಅನಪೂರ್, ನಾಗರತ್ನ ಮೂರ್ತಿ ಅನಪೂರ್, ಮರೇಪ್ಪ ಚಟ್ಟರಕರ್, ಉಮೇಶ ಮುದ್ನಾಳ, ಬಾಷುಮೀಯಾ ವಡಗೇರಾ, ಯಾದವ ಸಮಾಜದ ಜಿಲ್ಲಾದ್ಯಕ್ಷ ತಾಯಪ್ಪ ಯಾದವ್, ಮಡಿವಾಳಪ್ಪ ಬಿಜಾಸಪೂರ್, ಹಣಮಂತ ಗಣಪೂರ್, ಸುಭಾಶ್ಚಂದ್ರ ಕೌಲಗಿ, ಬೀಮರಾಯ ಹಳೆಮನಿ, ಭೀಮರಾಯ ಠಾಣಗುಂದಿ, ಮಲಿಕಾರ್ಜುನ ಕಟ್ಟಿಮನಿ ಇದ್ದರು.
ನಿಲಯ ಪಾಲಕ ಉಮೇಶ ಪೂಜಾರ ಸ್ವಾಗತಿಸಿದರು. ಜ್ಯೋತಿ ಲತಾ ತಡಿಬಿಡಿ ಅವರು ನಿರೂಪಿಸಿ, ವಂದಿಸಿದರು.