ಯಾದಗಿರಿ | ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಮೃತ್ಯು
ಆಸ್ಪತ್ರೆ ಎದುರು ಪೋಷಕರ ಪ್ರತಿಭಟನೆ
ಯಾದಗಿರಿ: ಹೆರಿಗೆ ವೇಳೆ ಮಗು ಮೃತಪಟ್ಟ ಘಟನೆ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿ, ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಯಾದಗಿರಿ ತಾಲೂಕಿನ ಬಳಿಚಕ್ರ ತಾಂಡಾದ ನಿವಾಸಿ ನೀಲಾಬಾಯಿ ಅವರು, ಶನಿವಾರ ಬೆಳಗ್ಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮಹಿಳೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಬೆಡ್ ನೀಡಿರಲಿಲ್ಲ. ಹೀಗಾಗಿ ನಿನ್ನೆ ಇಡೀ ದಿನ ಆಸ್ಪತ್ರೆಯ ನೆಲದ ಮೇಲೆ ಗರ್ಭಿಣಿ ಮಲಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾತ್ರಿಯಿಡೀ ತೀವ್ರ ಹೆರಿಗೆ ನೋವಿನಿಂದ ಬಳಲಿದ ನೀಲಾಬಾಯಿ. ಬಳಿಕ ಸಹಜ ಹೆರಿಗೆಯಾಗುತ್ತದೆ ಎಂದು ಹೇಳಿದ ವೈದ್ಯರು ಬೆಳಗ್ಗೆ 5 ಗಂಟೆ ಹೊತ್ತಿಗೆ ಸಿಜೇರಿಯನ್ ಮಾಡಿ, ಹೆರಿಗೆಗೆ ಮುಂದಾದಾಗ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ನೀಲಾಬಾಯಿ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.