ಯಾದಗಿರಿ | ನ್ಯಾಯವೇ ಸಮಾಜದ ನೆಲೆ : ಲಾಲಾ ಹುಸೇನ್ ಕಂದಗಲ್
ಪೈಗಂಬರ್ ಮುಹಮ್ಮದ್ ಅಭಿಯಾನ ಪ್ರಯುಕ್ತ ಸೀರತ್ ಪ್ರವಚನ ಕಾರ್ಯಕ್ರಮ
ಯಾದಗಿರಿ: ನ್ಯಾಯವೇ ಸಮಾಜದ ಶ್ರೇಯೋಭಿವೃದ್ಧಿಗೆ ಮೂಲಸ್ತಂಭ. ಸತ್ಯದ ಪರ ನಿಲ್ಲುವುದೇ ನಿಜವಾದ ಧರ್ಮ ಎಂದು ಖ್ಯಾತ ಉಪನ್ಯಾಸಕ ಲಾಲಾ ಹುಸೇನ್ ಕಂದಗಲ್ ಅಭಿಪ್ರಾಯಪಟ್ಟರು.
ನಗರದ ಈಡನ್ ಗಾರ್ಡನ್ ಫಂಕ್ಷನ್ ಹಾಲಿನಲ್ಲಿ ಶನಿವಾರ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾದ ʼನ್ಯಾಯದ ಹರಿಕಾರ ಪೈಗಂಬರ್ʼ ಅಭಿಯಾನದ ಪ್ರಯುಕ್ತ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೈಗಂಬರ್ ಮುಹಮ್ಮದ್ ಅವರ ಜೀವನ ಸಂದೇಶವನ್ನು ಉಲ್ಲೇಖಿಸಿದ ಅವರು, ನ್ಯಾಯವಿಲ್ಲದ ಸಮಾಜ ಅರಾಜಕತೆಯತ್ತ ದೂಡುತ್ತದೆ. ಇಸ್ಲಾಂ ಧರ್ಮದಲ್ಲಿ ನ್ಯಾಯಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದು ವಿವರಿಸಿದರು.
ಇಸ್ಲಾಂನಲ್ಲಿ ಹೆತ್ತವರು ಸ್ವರ್ಗದ ಬಾಗಿಲುಗಳಂತಿದ್ದರೂ, ನ್ಯಾಯದ ವಿಚಾರದಲ್ಲಿ ಸತ್ಯವೇ ಶ್ರೇಷ್ಠ. ಮಕ್ಕಳ ಕರ್ತವ್ಯವೆಂದರೆ ಸತ್ಯದ ಪರ ನಿಲ್ಲುವುದು ಎಂದು ಸ್ಪಷ್ಟಪಡಿಸಿದರು.
“ಜಾತಿಯನ್ನು ಪ್ರೀತಿಸಿದರೆ ಯಾರೂ ನಿನ್ನೊಡನೆ ಇರುವುದಿಲ್ಲ. ಮನುಷ್ಯನನ್ನು ಪ್ರೀತಿಸಿದರೆ ಎಲ್ಲರೂ ನಿನ್ನೊಡನೆ ಇರುತ್ತಾರೆ” ಎಂದು ಪೈಗಂಬರ್ ಅವರು ಹೇಳಿದ್ದಾರೆ. ಕಾರ್ಮಿಕರು, ಅನಾಥರು ಹಾಗೂ ಬಡವರ ಹಕ್ಕುಗಳ ರಕ್ಷಣೆಯಲ್ಲಿ ಅವರು ನೀಡಿದ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತವೀರ ಗುರು ಮುರಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಧಾರ್ಮಿಕ ಸೌಹಾರ್ದ ಹಾಗೂ ನೈತಿಕ ಮೌಲ್ಯಗಳನ್ನು ಉಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಎಂ.ಅನಪೂರ, ಜಮಾಅತೆ ಇಸ್ಲಾಮಿ ಹಿಂದ್ ಯಾದಗಿರಿ ಜಿಲ್ಲಾಧ್ಯಕ್ಷ ಜನಾಬ್ ಸಲಾಹುದ್ದೀನ್ ಜಾಗಿರ್ದಾರ್, ಜಮಾಅತೆ ಇಸ್ಲಾಮಿ ಹಿಂದ್ ಯಾದಗಿರಿ ಜಿಲ್ಲಾ ಸಂಚಾಲಕ ಜನಾಬ್ ಅಮ್ಜದ್ ಹುಸೇನ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ತಂಜಿಮುಲ್ ಮುಸ್ಲಿಮಿನಲ್ ಬೈತುಲ್ ಮಾಲ್ ಅಧ್ಯಕ್ಷ ಜನಾಬ್ ಗುಲಾಮ ಸಮದಾನಿ ಮೂಸಾ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್, ಸೇರಿದಂತೆ ಅನೇಕ ಸಮಾಜಮುಖಿ ಮುಖಂಡರು ಭಾಗವಹಿಸಿದ್ದರು.