ಯಾದಗಿರಿ | ಮಹಿಳೆಯರ ಪೌಷ್ಟಿಕ ಆಹಾರ ಸೇವನೆಗೆ ವಿಶೇಷ ಗಮನ ನೀಡಿ : ಡಿಸಿ ಹರ್ಷಲ್ ಭೋಯರ್
ಯಾದಗಿರಿ: ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಹುಟ್ಟುವ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಟಿಕ ಆಹಾರ ಸೇವನೆಗೆ ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಕರೆ ನೀಡಿದರು.
ನಗರದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಪೋಷನ್ ಮಾಸಾಚರಣೆ, ಮಿಷನ್ ಶಕ್ತಿ ಯೋಜನೆಯ ಸಂಕಲ್ಪ ವಿಶೇಷ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟುವ ಮಗುವಿನ ಭವಿಷ್ಯ ತಾಯಿಯ ಪೌಷ್ಟಿಕ ಆಹಾರ ಸೇವನೆ ಮೇಲೆ ಅವಲಂಬನೆಯಾಗಿದೆ. ಅಪೌಷ್ಟಿಕತೆ, ರಕ್ತಹೀನತೆ, ವಿವಿಧ ಕಾಯಿಲೆಗಳ ನಿವಾರಣೆಗೆ ಹಾಗೂ ಹುಟ್ಟುವ ಮಕ್ಕಳು ಕೂಡ ಬುದ್ಧಿಮಾಂದ್ಯ, ಇತರೆ ದೈಹಿಕ ಸಂಬಂಧಿತ ಕಾಯಿಲೆಗಳಿಂದ ಬಳಲುವುದರಿಂದ ಆದ್ಯತೆ ಮೇಲೆ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳ ಮೂಲಕ ಮಹಿಳೆಯರ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಗಮನ ನೀಡುತ್ತಿವೆ. ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೂ ವಿಶೇಷ ಗಮನ ನೀಡಬೇಕು. ಬಾಲ್ಯವಿವಾಹ ತಡೆಯಬೇಕು. ಪೌಷ್ಟಿಕ ಆಹಾರಗಳಾದ ಸಿರಿಧಾನ್ಯ, ಜೋಳ, ನವಣೆ, ರಾಗಿಗಳಿಗೆ ಉತ್ತೇಜನ ನೀಡಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ದೊರಕಿಸಲು ಅವರು ತಿಳಿಸಿ, ಪೋಷನ್ ಅಭಿಯಾನದಲ್ಲಿ ಪುರುಷರು ಭಾಗವಹಿಸಲು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ಮರಿಯಪ್ಪ ಅವರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ, ಆರೋಗ್ಯ ಕಾರ್ಯಕರ್ತರು ಮಕ್ಕಳ ಆರೋಗ್ಯಕ್ಕೆ ವಿಶೇಷ ಗಮನ ನೀಡಬೇಕು. ಪಾಲಕರಲ್ಲಿ ಸೂಕ್ತ ಜಾಗೃತಿ ಮೂಡಿಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತೋಟಗಾರಿಕೆ ವಿಶ್ವವಿದ್ಯಾನಿಲಯದ ಡಾ.ಶಶಿಕಲಾ ರೂಳಿ, ಸ್ತ್ರೀರೋಗ ತಜ್ಞೆ ಡಾ.ರಾಜೇಶ್ವರಿ ಗುತ್ತೆದಾರ, ಪ್ರಾಸ್ತಾವಿಕವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ, ಜಿಲ್ಲಾ ಆಯುಷ್ ಅಧಿಕಾರಿ ವಂದನಾ ಗಾಳಿ ಉಪಸ್ಥಿತರಿದ್ದರು. ಕವಿತಾ ಬಡಿಗೇರ್ ಪ್ರಾರ್ಥಿಸಿದರು.