ಸುರಪುರ:  ಬಸವ ಮಂಟಪ ಕೃತಿಯ ಲೇಖಕ ರವಿ ಹಂಜ್ ವಿರುದ್ಧ ಪಟ್ಟಣದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಬಳಿಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಕ್ರಾಂತಿ ಮಾಡಿದರು, ಅವರು ಜಾತಿ ಮತಗಳ ಹಂಗನ್ನು ತೊರೆದು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ವಚನಗಳ ರಚನೆಯ ಮೂಲಕ ಜಗತ್ತಿಗೆ ಸಮಾನತೆಯನ್ನು ಬೋಧಿಸಿದರು. ಅಂತಹ ಕ್ರಾಂತಿಕಾರಿ ಬಸವಣ್ಣನವರ ತೇಜೋವಧೆ ಮಾಡಲು ರವಿ ಹಂಜ್ ಎನ್ನುವ ಲೇಖಕನೊಬ್ಬ ಬಸವ ಮಂಟಪ ಎನ್ನುವ ಕೃತಿಯನ್ನು ರಚಿಸಿ ಅದರಲ್ಲಿ ಶರಣರಿಗೆ ಅವಮಾನಿಸುವ ಅಂಶಗಳನ್ನು ಸೇರಿಸಿದ್ದು ಖಂಡನೀಯವಾಗಿದೆ ಎಂದು ಹೇಳಿದರು.  

ಬುದ್ಧ ಬಸವಣ್ಣ ಅಂಬೇಡ್ಕರ್ ಮುಂತಾದವರು ಈ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ತೊಲಗಿಸಿ ಸಮ ಸಮಾಜದ ನಿರ್ಮಾಣ ಮಾಡಿದ ಮಹಾನ್ ಪುರುಷರಾಗಿದ್ದಾರೆ. ಅಂತಹ ಬಸವಣ್ಣನವರ ಕುರಿತು ಖಾಸಗಿ ವಾಹಿನಿಯೊಂದರಲ್ಲಿ ರವಿ ಹಂಜ್ ಅವಮಾನಕರವಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ. ಕೂಡಲೇ ರವಿ ಹಂಜ್‌ ಮತ್ತು ನಕಲಿ ಪತ್ರಕರ್ತನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.  

ಈ ವೇಳೆ ನಿವೃತ ಉಪನ್ಯಾಸಕ ಮಾನು ಗುರಿಕಾರ, ಚಿಂತಕ ಮೂರ್ತಿ ಬೊಮ್ಮನಹಳ್ಳಿ ಮಾತನಾಡಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ್- 2 ತಹಸಿಲ್ದಾರ್ ಮಲ್ಲಯ್ಯ ದಂಡು ಮೂಲಕ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ಶರಣಪ್ಪ ನಗನೂರ, ಸಂಗಣ್ಣ ಚಿಂಚೋಳಿ, ಮಹೇಶ ಸುಂಗಲಕರ್, ಮರಿಯಪ್ಪ ಕಾಂಗ್ರೆಸ್, ಬಸವರಾಜ ಬೊಮ್ಮನಹಳ್ಳಿ, ಸಿದ್ದಣ್ಣ ಸುರಪುರಕರ್, ದುರಗಪ್ಪ ಅರಳಹಳ್ಳಿ, ಗಣಪತಿ ದೇವಿಕೇರಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor