‘ಬದಲಾವಣೆ’ಗಾಗಿ ಉಪೇಂದ್ರ | Vartha Bharati- ವಾರ್ತಾ ಭಾರತಿ

--

ವಾರದ ವ್ಯಕ್ತಿ

‘ಬದಲಾವಣೆ’ಗಾಗಿ ಉಪೇಂದ್ರ

ಐವತ್ತರ ಅಂಚಿನಲ್ಲಿರುವ ಚಿತ್ರನಟ, ನಿರ್ದೇಶಕ ಉಪೇಂದ್ರ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ‘ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ’ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ಇಳಿಸುವುದಾಗಿ ಘೋಷಿಸಿದ್ದಾರೆ. ಚಿತ್ರನಟ-ನಿರ್ದೇಶಕ ಉಪೇಂದ್ರ, ಕಳೆದ 25 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಗಳಿಸಿದ ಹೆಸರು ಮತ್ತು ಖ್ಯಾತಿಯನ್ನು ರಾಜಕಾರಣದಲ್ಲಿ ಪಣಕ್ಕಿಡಲು ತಯಾರಿ ನಡೆಸಿದ್ದಾರೆ. ರಾಜಕೀಯಕ್ಕೆ ಬರುವುದು, ಪಕ್ಷ ಕಟ್ಟುವುದು, ಚುನಾವಣೆಗೆ ಸ್ಪರ್ಧಿಸುವುದು ದೇಶದ ಪ್ರಜೆಯಾದ ಪ್ರತಿಯೊಬ್ಬರಿಗೂ ಸಂವಿಧಾನ ಕಲ್ಪಿಸಿಕೊಟ್ಟಿರುವ ಹಕ್ಕು. ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ರಾಜಕೀಯ ಪ್ರವೇಶಿಸಿ, ನಾಡಿನ ಜನರ ಬದುಕಿನಲ್ಲಿ ಸಂಪೂರ್ಣ ಬದಲಾವಣೆ ತರಬೇಕೆಂಬ ಮಹದಾಸೆಯನ್ನು ವ್ಯಕ್ತಪಡಿಸಿರುವ ಉಪೇಂದ್ರರ ನಡೆ ನಿಜಕ್ಕೂ ಮೆಚ್ಚತಕ್ಕ ವಿಚಾರವೆ.

ಆದರೆ ಚುನಾವಣಾ ಸಂದರ್ಭದಲ್ಲಿ ಇದೇನು ಹೊಸದಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಜನ ರಾಜಕಾರಣದತ್ತ ಆಕರ್ಷಿತರಾಗುವುದು ಕುತೂಹಲಕರ ಸಂಗತಿಯೂ ಅಲ್ಲ. ಈಗಾಗಲೇ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ, ಶ್ರೀರಾಮ ಸೇನೆಯ ಮುಖ್ಯಸ್ಥ ಮುತಾಲಿಕ್, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರವಿ ಕೃಷ್ಣಾ ರೆಡ್ಡಿ, ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ನಟ ಉಪೇಂದ್ರರ ಪಕ್ಷ ಉದಯವಾಗಿದೆ.

ಹಾಗೆ ನೋಡಿದರೆ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ-90ರ ದಶಕದಲ್ಲಿ-ರವಿಚಂದ್ರನ್ ಮತ್ತು ಸುನಿಲ್‌ಕುಮಾರ್ ದೇಸಾಯಿಯವರನ್ನು ಮಿಕ್ಸ್ ಮಾಡಿದ ಫಾರ್ಮುಲಾದಂತೆ ಕಾಣುತ್ತಿದ್ದರು. ಕುಂತರೂ ನಿಂತರೂ ಸಿನೆಮಾವನ್ನೇ ಧ್ಯಾನಿಸುವ, ಬದಲಾವಣೆ ಬಯಸುವ, ತೀವ್ರ ತುಡಿತದ ಉತ್ಸಾಹಿ ತರುಣರಾಗಿದ್ದರು. ವ್ಯವಸ್ಥೆಯ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟು ಇಟ್ಟುಕೊಂಡಿದ್ದರು. ಭಿನ್ನ ಆಲೋಚನೆಗಳಿಂದ ಭರವಸೆ ಹುಟ್ಟಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಹೊಸತನ ತರಬಹುದೆಂಬ ನಿರೀಕ್ಷೆಗೆ ನೀರೆರೆದಿದ್ದರು.

1992ರಲ್ಲಿ ‘ತರ್ಲೆ ನನ್ಮಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಉಪೇಂದ್ರ, ಇಲ್ಲಿಯವರೆಗೆ ಸುಮಾರು 10 ಚಿತ್ರಗಳನ್ನು ನಿರ್ದೇಶಿಸಿ, 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ನಟನಾಗಿ, ಅಭಿಮಾನಿಗಳ ಪಾಲಿನ ಸೂಪರ್ ಸ್ಟಾರ್ ಆಗಿ ರೂಪಾಂತರಗೊಂಡಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ, ಉಪೇಂದ್ರರ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅವು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಗಮನಿಸಿದರೆ, ಅವು ಹುಟ್ಟುಹಾಕಿದ ಚರ್ಚೆಗಳನ್ನು ವಿಮರ್ಶೆಗೊಳಪಡಿಸಿದರೆ ನಿರಾಶೆ ಎದ್ದು ಕಾಣುತ್ತದೆ. ಎಷ್ಟೆಲ್ಲ ತುಡಿತ, ಚಡಪಡಿಕೆ, ಶ್ರಮ, ಜಾಣ್ಮೆ, ಸೃಜನಶೀಲ ಪ್ರತಿಭೆಯನ್ನು ಧಾರೆ ಎರೆದು ತಯಾರಾದ ಚಿತ್ರಗಳವು? ಅವೆಲ್ಲ ಅವರ ವಿಕ್ಷಿಪ್ತ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಚಿತ್ರಗಳಾದವೇ ಹೊರತು, ಕನ್ನಡಿಗರ ಅಭಿರುಚಿಯನ್ನು, ಅರಿವನ್ನು ವಿಸ್ತರಿಸುವ ಚಿತ್ರಗಳಾಗಲಿಲ್ಲ. ಇನ್ನು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ, ಸದಾ ಕಾಲ ಸ್ಮರಣಿಕೆಯಲ್ಲಿ ಉಳಿಯುವ ಮಾತಂತೂ ಇಲ್ಲವೇ ಇಲ್ಲ. ಉಪೇಂದ್ರರ ಚಿತ್ರಗಳೆಂದರೆ ಗಲೀಜು, ಗಿಲೀಟು, ಗೊಂದಲಗಳ ಗೂಡು. ಮನರಂಜನೆಯ ಮರೆಯಲ್ಲಿ ವಿಕೃತಿಯ ವಿಸ್ತರಣೆ.

ಇಂತಹ ಚಿತ್ರಗಳನ್ನು ಕೊಟ್ಟ ಉಪೇಂದ್ರರಿಗೆ ಈಗ ವಯಸ್ಸಾಗಿದೆ, ಹೊಸ ತಲೆಮಾರಿನ ನಾಯಕನಟರ ಮುಂದೆ ಕಳೆಗುಂದಿದಂತೆ ಕಾಣತೊಡಗಿದ್ದಾರೆ. ಸದ್ಯಕ್ಕೆ ಉಪೇಂದ್ರರ ತಲೆಯಲ್ಲಿ ಹತ್ತಾರು ಕತೆಗಳಿವೆ, ಕೈಯಲ್ಲಿ ಚಿತ್ರಗಳಿಲ್ಲ. ವಾಸ್ತವದಲ್ಲಿ ಒಂದೇ ಒಂದು ಚಿತ್ರವೂ ಸೆಟ್ಟೇರುತ್ತಿಲ್ಲ. ಸಿಕ್ಕಾಪಟ್ಟೆ ಸದ್ದು ಮಾಡಿ ಶುರುವಾದ ‘ಕನ್ನೇಶ್ವರ’ ಹತ್ತು ದಿನಗಳ ಶೂಟಿಂಗ್ ನಂತರ ನಿಂತಿದೆ. ಮಾದೇಶ ನಿರ್ದೇಶನದ ‘ಉಪ್ಪಿರುಪ್ಪಿ’ಎರಡು ದಿನ ಚಿತ್ರೀಕರಣ ಕಂಡು ಸ್ಥಗಿತಗೊಂಡಿದೆ. ‘ಉಪ್ಪಿಮತ್ತೆ ಬಾ’ ಎಂಬ ಚಿತ್ರ ಮುಗಿದು ಮೂರು ತಿಂಗಳಾದರೂ, ಬಿಡುಗಡೆಯ ಭಾಗ್ಯ ಕಾಣದೆ ಕತ್ತಲಲ್ಲಿ ಕೊಳೆಯುತ್ತ ಕೂತಿದೆ. ‘ಡಿಯರ್ ಮೋದಿ’, ‘ಹೋಂ ಮಿನಿಸ್ಟರ್’ ಹೆಸರಿನ ಚಿತ್ರಗಳು ಶುರುವಾದ ವೇಗದಲ್ಲಿಯೇ ನಿಂತುಹೋಗಿವೆ.

ಹಾಗಾಗಿ ಉಪೇಂದ್ರ ಈಗ ಅಕ್ಷರಶಃ ಖಾಲಿ ಕೂತಿದ್ದಾರೆ. ಹೀಗೆ ಖಾಲಿ ಕೂರುವುದು ಉಪೇಂದ್ರ ಜಾಯಮಾನವಲ್ಲ. ಸದಾ ಸುದ್ದಿ ಮತ್ತು ಚಾಲ್ತಿಯಲ್ಲಿರಬೇಕೆಂದು ಬಯಸುವ, ಅದಕ್ಕಾಗಿ ಏನು ಬೇಕಾದರೂ ಮಾಡುವ ಉಪೇಂದ್ರ, ಐರಿಶ್ ಚಿಂತಕ ಜಾರ್ಜ್ ಬರ್ನಾರ್ಡ್ ಷಾರ, ‘ಪಾಲಿಟಿಕ್ಸ್ ಈಸ್ ದ ಲಾಸ್ಟ್ ರೆಸಾರ್ಟ್ ಫಾರ್ ದ ಸ್ಕೌಂಡ್ರಲ್ಸ್’ ಎಂಬ ಮಾತಿಗೆ ಮನ್ನಣೆ ಕೊಟ್ಟು ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಹೊಸ ಪಕ್ಷ ಸ್ಥಾಪಿಸಿದ್ದಾರೆ. ಎಲ್ಲರೊಳಗೊಂದಾಗಲು ಶ್ರೀಸಾಮಾನ್ಯನಾಗಿದ್ದಾರೆ. ಕಾರ್ಮಿಕ ಪರ ಎಂದು ಬಿಂಬಿಸಿ ಕೊಳ್ಳಲು ಡ್ರೈವರ್ ಡ್ರೆಸ್ ಹಾಕಿ, ಕುಟುಂಬಕ್ಕೂ ಹಾಕಿಸಿ ಶ್ರಮಜೀವಿಯ ಪೋಸ್ ಕೊಡುತ್ತಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ ಉಪೇಂದ್ರರ ರಾಜಕಾರಣಕ್ಕೆ ನೆಲೆಯೇ ಇಲ್ಲ. ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಬಗ್ಗೆ ಸುಳಿವು, ಸೂಚನೆಗಳನ್ನೂ ನೀಡಿಲ್ಲ. ಅದಕ್ಕೆ ಬೇಕಾದ ಪೂರ್ವತಯಾರಿಯನ್ನೂ ಮಾಡಿಕೊಂಡಂತೆ ಕಾಣುತ್ತಿಲ್ಲ. ಪಕ್ಷಕ್ಕೊಂದು ಕಚೇರಿ, ಚಿನ್ಹೆ, ಬಾವುಟ, ಕಾರ್ಯಕರ್ತರೂ ಕಾಣುತ್ತಿಲ್ಲ. ಆದರೆ ಉಪೇಂದ್ರ ರಾಜಕಾರಣಕ್ಕಿಳಿಯುತ್ತಿರುವುದರ ಕುರಿತು ಸುದ್ದಿ ಮಾಧ್ಯಮಗಳು ಮಾತ್ರ ಬೊಬ್ಬೆ ಹಾಕುತ್ತಿವೆ. ಸತ್ಯವನ್ನು ಮರೆಮಾಚಿ, ಸುಳ್ಳನ್ನು ವೈಭವೀಕರಿಸಿ ‘ಕರ್ನಾಟಕದಲ್ಲಿ ಕ್ರಾಂತಿಯಾಗಲಿದೆ’ ಎಂದು ಕಹಳೆ ಊದುತ್ತಿವೆ.

ಈ ಬಗ್ಗೆ ಉಪೇಂದ್ರರ ಆಪ್ತರನ್ನು ವಿಚಾರಿಸಿದರೆ, ‘‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ (ಕೆಪಿಜೆಪಿ) ಸಂಸ್ಥಾಪಕರು ಮಹೇಶ್ ಗೌಡ. ಇವರು ಕಾರ್ಖಾನೆಯೊಂದರ ಮಾಲಕರು. ಪಕ್ಷವನ್ನು 2015ರಲ್ಲಿಯೇ ಅಧಿಕೃತವಾಗಿ ನೋಂದಣಿ ಮಾಡಿಸಲಾಗಿದೆ. ಇದೇ ಪಕ್ಷದಡಿ ಅವರ ಪತ್ನಿ ಬಿಬಿಎಂಪಿ ಚುನಾವಣೆಯಲ್ಲಿ ಹೆಗ್ಗನಹಳ್ಳಿ ವಾರ್ಡ್ ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಯಾವಾಗ ಉಪೇಂದ್ರ ತಮ್ಮದೇ ಆದ ಉದ್ದೇಶ, ಗುರಿಗಳೊಂದಿಗೆ ರಾಜಕೀಯ ಪ್ರವೇಶ ಮಾಡಿದರೋ, ಆಗ ಮಹೇಶಗೌಡ ಉಪೇಂದ್ರರೊಂದಿಗೆ ಚರ್ಚಿಸಿ, ಪಕ್ಷವನ್ನು ಮುನ್ನಡೆಸಲು ಕೇಳಿಕೊಂಡರು. ಮತ್ತೊಂದೆಡೆ ಚುನಾವಣೆಗೆ 6 ತಿಂಗಳು ಮಾತ್ರ ಬಾಕಿಯಿದ್ದು, ಪಕ್ಷ ನೋಂದಣಿ ಹಾಗೂ ಚಿಹ್ನೆ ಪಡೆಯುವ ಕೆಲಸ ವಿಳಂಬವಾಗುವುದರಿಂದ, ಸಿದ್ಧಾಂತಗಳು ಒಂದೇ ಆದ್ದರಿಂದ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ’’ ಎಂದರು.

ಅಂದಮೇಲೆ ಕೆಪಿಜೆಪಿ ಪಕ್ಷವೂ ಉಪೇಂದ್ರ ಅವರದ್ದಲ್ಲ. ಅವರದೇ ಆದ ಕ್ಷೇತ್ರವನ್ನೂ ಹುಡುಕಿಕೊಂಡಿಲ್ಲ. ಚುನಾವಣೆಗೆ ಬೇಕಾದ ಪೂರ್ವ ತಯಾರಿಯನ್ನೂ ಮಾಡಿ ಕೊಂಡಿಲ್ಲ. ಹೀಗಿದ್ದರೂ ಸುದ್ದಿ ಮಾಧ್ಯಮಗಳು ಕ್ರಾಂತಿ, ಭಾರೀ ಬದಲಾ ವಣೆ, ಉಪ್ಪಿಕಾಲ ಎಂದೆಲ್ಲ ಸದ್ದು ಮಾಡುತ್ತಿರುವುದೇಕೆ? ಉಪೇಂದ್ರರನ್ನು ಬದಲಾವಣೆಯ ಹರಿಕಾರರಂತೆ ಬಿಂಬಿಸುತ್ತಿರುವುದೇಕೆ? ಈ ಪರಿಯ ವೈಭವೀಕರಣವೇಕೆ ಎಂದು ಉಪೇಂದ್ರರ ಆಪ್ತರನ್ನು ಪ್ರಶ್ನಿಸಿದರೆ, ‘‘ಉಪೇಂದ್ರ ಕರಾವಳಿಯವರು, ಬ್ರಾಹ್ಮಣ ಜಾತಿಗೆ ಸೇರಿದವರು. ಚುನಾವಣೆಗೆ ನಿಂತರೆ ಗೆಲ್ಲುವುದಿಲ್ಲವೆಂದು ಗೊತ್ತು. ಆದರೆ ಎದುರಾಳಿಯನ್ನು ಸೋಲಿಸಬಲ್ಲರು. ಅದು ನೇರವಾಗಿ ಬಿಜೆಪಿಗೆ ಹೊಡೆತ ಬೀಳಲಿದೆ. ಸುದ್ದಿ ಮಾಧ್ಯಮಗಳ ಹೈಪ್ ನೋಡಿ, ಮೋದಿ ಮಾತನಾಡಿಸಬಹುದು, ಯಾವುದಾದರೂ ಸ್ಥಾನಮಾನ ನೀಡಬಹುದು ಎಂಬ ಆಲೋಚನೆಯೂ ಇದೆ’’ ಎನ್ನುತ್ತಾರೆ.

ಉಪೇಂದ್ರ, ಮೋದಿ ಕೃಪಾಕಟಾಕ್ಷಕ್ಕೆ ಕಾದಿರಬಹುದು ಅಥವಾ ರಾಜಕಾರಣದ ಬಗ್ಗೆ ನಿಜಕ್ಕೂ ಗಂಭೀರವಾಗಿ ಚಿಂತಿಸಿರಲೂಬಹುದು. ಆದರೆ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈರಿಂದ ಹಿಡಿದು ಸಾಮಾಜಿಕ ಹೋರಾಟಗಾರ ಹಿರೇಮಠ್‌ರವರೆಗೆ, ಯಾರಿಗೂ ಸಿಗದ ಸ್ಕೋಪ್ ಮತ್ತು ಸ್ಪೇಸ್- ಅದರಲ್ಲೂ ದೃಶ್ಯಮಾಧ್ಯಮಗಳಲ್ಲಿ- ಉಪೇಂದ್ರರಿಗೆ ಸಿಗುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ. ಇವತ್ತಿನ ದೃಶ್ಯ ಮಾಧ್ಯಮಗಳಿಗೆ ಬಹಳ ಮುಖ್ಯವಾಗಿ ಬೇಕಾಗಿರುವುದು- ಸೆಕ್ಸ್, ಕ್ರೈಮ್ ಮತ್ತು ಗ್ಲ್ಯಾಮರ್. ಪ್ರತೀ ಸುದ್ದಿಯಲ್ಲೂ ಈ ಮೂರು ಅಂಶಗಳನ್ನು ಹುಡುಕುತ್ತವೆ, ಇಲ್ಲದಿದ್ದರೆ ತುರುಕುತ್ತವೆ ಮತ್ತು ಬಣ್ಣಕಟ್ಟಿ ಬಿತ್ತರಿಸುತ್ತವೆ. ಉಪೇಂದ್ರರ ರಾಜಕೀಯ ಪ್ರವೇಶದಲ್ಲಿ ಈ ಮೂರು ಅಂಶಗಳಿಲ್ಲ, ನಿಜ. ಆದರೆ ಉಪೇಂದ್ರರ ವಿಷಯ ಪ್ರಸ್ತಾಪಿಸುವಾಗ ಅವರ ಚಿತ್ರಗಳ ತುಣುಕುಗಳನ್ನು ಬಿತ್ತರಿಸುತ್ತವೆ. ಆ ತುಣುಕುಗಳಲ್ಲಿ ದೃಶ್ಯ ಮಾಧ್ಯಮಗಳು ಬಯಸುವ-ಬೇಡುವ ಟಿಆರ್‌ಪಿ ಅಂಶಗಳಿವೆ. ಹಾಗಾಗಿ ಅದೇ ಅತಿಯಾಗಿದೆ.

ಉಪೇಂದ್ರ ವೈಭವೀಕರಣ ದೃಶ್ಯ ಮಾಧ್ಯಮಗಳಿಗಷ್ಟೇ ಸೀಮಿತವಾದದ್ದಲ್ಲ. ಜಾಹೀರಾತಿನ ಮರ್ಜಿಗೊಳಗಾದ ಮುದ್ರಣ ಮಾಧ್ಯಮಗಳಲ್ಲೂ ಉಪೇಂದ್ರ ಎಂದರೆ, ರೀಲೋ-ರಿಯಲ್ಲೋ ಎಂದು ಗೊತ್ತಾಗದ ಹಾಗೆ ಸಂಬಾಳಿಸಿ ದ್ದಾರೆ. ಆತನ ಚಿತ್ರಗಳ ಬಗ್ಗೆ ವಸ್ತುನಿಷ್ಠ ವಿಮರ್ಶೆಯನ್ನು ಮಾಡದ ಸಿನಿ ಪತ್ರಕರ್ತರು, ಜನಿವಾರ ಮತ್ತು ಕರಾವಳಿಯ ಕಾರಣಕ್ಕೆ ಆತನನ್ನು ಪೊರೆಯುತ್ತ, ಪೋಷಿಸುತ್ತ ಬರುತ್ತಿದ್ದಾರೆ. ನಿರಂತರವಾಗಿ ಹೊಗಳುತ್ತ ಚಾಲ್ತಿಯಲ್ಲಿಟ್ಟಿದ್ದಾರೆ. ಹಾಗೆ ಹೊಗಳುವ ಮೂಲಕ ಆತನ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕೆಲವರು, ದೃಶ್ಯ ಮಾಧ್ಯಮಗಳಿಗೂ ಮತ್ತು ಉಪೇಂದ್ರರಿಗೂ ನಡುವಿನ ದಲ್ಲಾಳಿಗಳಾಗಿದ್ದಾರೆ. ಅವರಿಗೂ-ಇವರಿಗೂ ‘ಅನುಕೂಲಕರ’ ಸಂದರ್ಭ ಸೃಷ್ಟಿಸಿಕೊಟ್ಟು ಅನುಕೂಲಸ್ಥರಾಗಿದ್ದಾರೆ.

ಇಂತಹ ಪತ್ರಕರ್ತರು, ಇವರಿಗೆ ಸ್ಥಾನ ಮಾನ ನೀಡಿರುವ ಸುದ್ದಿಮಾಧ್ಯಮಗಳು, ಆ ಸುದ್ದಿಮಾಧ್ಯಮಗಳ ಬೆಂಬಲದಿಂದಲೇ ಬೆಳೆದು ಬಲಿಷ್ಠರಾಗಿರುವ ಉಪೇಂದ್ರರಿಂದ ಈಗ ರಾಜಕೀಯವೆಂಬ ಹೊಸ ಅವತಾರ. ಇದು ಸ್ವಾರ್ಥವೋ-ಸೇವೆಯೋ?

ಅಂದು ಚಿತ್ರರಂಗದ ‘ಬದಲಾವಣೆ’ ಬಯಸಿದ ಉಪೇಂದ್ರ ಇಂದು ನಾಡಿನ ‘ಸಂಪೂರ್ಣ ಬದಲಾವಣೆ’ಗಾಗಿ ರಾಜಕಾರಣಕ್ಕಿಳಿದಿದ್ದಾರೆ. 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಉಪೇಂದ್ರರಿಂದ ಚಿತ್ರರಂಗ ಬದಲಾಯಿತೇ? ನಾವು-ನೀವು ಕಂಡಂತೆ ಉಪೇಂದ್ರದ ಬದುಕಂತೂ ಬದಲಾಗಿದೆ. ಅಂದು ಒಬ್ಬರೇ ಇದ್ದವರು, ಇಂದು ಮಡದಿ, ಮಕ್ಕಳಾಗಿ ಸಂಸಾರ ದೊಡ್ಡದಾಗಿದೆ. ವಾಸಿಸಲಿಕ್ಕೆ ಭವ್ಯ ಬಂಗಲೆ, ವ್ಯಾಪಾರ ವಹಿವಾಟಿಗೆ ರುಪ್ಪೀಸ್ ರೆಸ್ಟೋರೆಂಟ್, ರಾಮೋಹಳ್ಳಿಯ ಬಳಿ ಒಂದಷ್ಟು ಎಕರೆ ಜಮೀನು, ಬ್ಯಾಂಕ್ ಬ್ಯಾಲೆನ್ಸ್.. ಈಗ ಉಪೇಂದ್ರ ಕಂಫರ್ಟ್ ಝೋನ್‌ನಲ್ಲಿದ್ದಾರೆ.

ಇಪ್ಪತ್ತೈದು ವರ್ಷಗಳ ನಂತರ, ಈಗ ಉಪೇಂದ್ರ ಮತ್ತದೇ ‘ಬದಲಾವಣೆ’ಯ ಮಾತುಗಳನ್ನಾಡುತ್ತಿದ್ದಾರೆ. ಯಾರ ಬದಲಾವಣೆ, ಎಂತಹ ಬದಲಾವಣೆ ಎನ್ನುವುದು ನಾಡಿನ ಪ್ರಜ್ಞಾವಂತ ಮತದಾರರಿಗೆ ಬಿಟ್ಟ ವಿಚಾರ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top