ಕಷ್ಟದಲ್ಲಿ ಕಿಂಗ್‌ಮೇಕರ್ ದೇವೇಗೌಡ | Vartha Bharati- ವಾರ್ತಾ ಭಾರತಿ

--

ವಾರದ ವ್ಯಕ್ತಿ

ಕಷ್ಟದಲ್ಲಿ ಕಿಂಗ್‌ಮೇಕರ್ ದೇವೇಗೌಡ

‘‘ಪುತ್ರ ಪ್ರಜ್ವಲ್ ರೇವಣ್ಣ 2018ರ ವಿಧಾನಸಭೆ ಚುನಾವಣೆ ಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಅಥವಾ ಹಾಸನ ಜಿಲ್ಲೆಯ ಬೇಲೂರಿನಿಂದ ಸ್ಪರ್ಧಿಸಲಿದ್ದಾರೆ’’ ಎಂದು ದೇವೇಗೌಡರ ಸೊಸೆ ಭವಾನಿ ರೇವಣ್ಣ ಹೇಳಿದ್ದಾರೆ. ಈ ಸುದ್ದಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಸಂಕಷ್ಟಕ್ಕೀಡುಮಾಡಿದೆ. ಅದರಲ್ಲೂ ದೇವೇಗೌಡರಿಗೆ ತಂದೊಡ್ಡಿರುವ ತಳಮಳ, ಹೇಳತೀರದಾಗಿದೆ. ಆದರೆ ಇದಾವುದನ್ನೂ ಬಹಿರಂಗವಾಗಿ ತೋರ್ಪಡಿಸದ 84ರ ಹರೆಯದ ಹರದನಹಳ್ಳಿಯ ದೇವೇಗೌಡರು, ‘‘ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಇಬ್ಬರು ಶೀಘ್ರವೇ ಅಥವಾ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಬರಬಹುದು, ಅವರ ರಾಜಕೀಯ ಪ್ರವೇಶ ಯಾವಾಗ ಎಂಬುದನ್ನು ನಾನು ನಿರ್ಧರಿಸಲಾರೆ, ಪ್ರಧಾನಿಯಾಗುತ್ತೇನೆ ಎಂದು ಯಾವತ್ತೂ ನಾನು ಯೋಚಿಸಿರಲಿಲ್ಲ, ಜನ ಅದರ ಬಗ್ಗೆ ನಿರ್ಧರಿಸುತ್ತಾರೆ’’ ಎಂಬ ಜಾಣ್ಮೆಯ ಉತ್ತರ ಕೊಡುವುದರಲ್ಲಿ, ಆ ಉತ್ತರದಲ್ಲಿಯೇ ಎಲ್ಲರನ್ನು ಸಂಭಾಳಿಸಿ, ಸಮಾಧಾನಿಸುವಲ್ಲಿ ಸದ್ಯಕ್ಕೆ ಯಶಸ್ವಿಯಾಗಿದ್ದಾರೆ.

ಆದರೆ, ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ‘‘ಪ್ರಜ್ವಲ್ ರಾಜಕೀಯ ಆಕಾಂಕ್ಷೆ ತಪ್ಪಲ್ಲ. ಆದರೆ, ಪಕ್ಷದ ಹಿತದೃಷ್ಟಿಯಿಂದ ಕುಟುಂಬದಿಂದ ಇಬ್ಬರು ಮಾತ್ರ, ನಾನು ಮತ್ತು ರೇವಣ್ಣ ಸ್ಪರ್ಧೆ ಮಾಡುತ್ತಿರುವುದರಿಂದ ಪ್ರಜ್ವಲ್‌ಗೆ ಟಿಕೆಟ್ ನೀಡಲಾಗುವುದಿಲ್ಲ’’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಮಾಧ್ಯಮದವರ ಮುಂದೆ ಹೀಗೆ ಹೇಳುವುದು ಸುಲಭ. ಆದರೆ ಕುಟುಂಬದೊಳಗೆ ನಡೆಯುತ್ತಿರುವ ಕುರುಕ್ಷೇತ್ರವನ್ನು ನಿಭಾಯಿಸುವುದು, ನಿಯಂತ್ರಿಸುವುದು ದೇವೇಗೌಡರ ಸದ್ಯದ ಸಮಸ್ಯೆ. ಆದರೆ ಅವರು ಅದನ್ನು ಸಮಸ್ಯೆ ಎಂದುಕೊಳ್ಳುವುದಿಲ್ಲ. ಪ್ರತೀ ಚುನಾವಣಾ ಸಂದರ್ಭದಲ್ಲೂ ಇದು ಇದ್ದದ್ದೆ ಎಂದು ಸಿದ್ಧರಾಗಿ ನಿಂತಿರುತ್ತಾರೆ. ಅದೇ ದೇವೇಗೌಡರ ಸ್ಪೆಷಾಲಿಟಿ.

ಸಾಮಾನ್ಯವಾಗಿ ಚುನಾವಣೆ ಎಂದರೆ, ರಾಜಕಾರಣಿಗಳಿಗೆ ತೊಡೆ ನಡುಕ ಶುರುವಾಗುತ್ತದೆ. ಸಾಮಾನ್ಯ ಅಸಾಮಾನ್ಯ ನಾಗುವ, ಮಣ್ಣು ಹುಳುವಿಗೂ ಮಾತು ಬರುವ ಕಾಲ ವದು. ಚುನಾವಣೆ ಬೇಡುವ ತಾಳ್ಮೆ, ಜಾಣ್ಮೆ, ಹಣ, ಆರೋಗ್ಯ, ಮಾತು, ಮಸಲತ್ತು ಗಳನ್ನು ಧಾರೆ ಎರೆದು ಹೈರಾಣಾಗಿ ಹೋಗುತ್ತಾರೆ. ಕೆಲವರು ಮನೆ ಮಠ ಮಾರಿಕೊಂಡು ಭೂಗತರಾಗುತ್ತಾರೆ. ಇನ್ನು ಕೆಲವರು ಒಂದು ತಿಂಗಳು ಕಷ್ಟಪಟ್ಟರೆ ಐದು ವರ್ಷ ಆರಾಮಾಗಿರಬಹುದು ಎಂದು ಇದ್ದಬದ್ದ ಬುದ್ಧಿಯನ್ನೆಲ್ಲ ಖರ್ಚು ಮಾಡುತ್ತಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುವುದರಲ್ಲಿ, ಜೀವ ಬಾಯಿಗೆ ಬಂದು, ಸಾಕಪ್ಪಇದರ ಸಹವಾಸ ಎನ್ನುವ ಸ್ಥಿತಿ ತಲುಪುತ್ತಾರೆ.

ಆದರೆ ಚುನಾವಣೆಯನ್ನು ದೇವೇಗೌಡರು ನೋಡುವ ರೀತಿಯೇ ಬೇರೆ. ಅವರು ಅದನ್ನು ನಿಭಾಯಿಸುವ ಬಗೆಯೂ ಭಿನ್ನ. ಚುನಾವಣೆ ಎಂದಾಕ್ಷಣ ಗೌಡರು ಎದ್ದುನಿಲ್ಲುತ್ತಾರೆ. ಯುದ್ಧಕ್ಕೆ ಸಿದ್ಧನಾದ ಸೇನಾನಿಯಂತೆ. ಮುದುಡಿದ ಮನಸ್ಸು ಅರಳುತ್ತದೆ. ಮೈಗೆ ಸಿಡಿಲಿನಂತಹ ಶಕ್ತಿ ಸಂಚಯವಾಗುತ್ತದೆ. ವಯಸ್ಸು ಮರೆತುಹೋಗುತ್ತದೆ. ಎದುರಾಳಿಗಳನ್ನು ಸದೆಬಡಿಯಲು, ಹೀಯಾಳಿಸಲು, ನೀರಿಳಿಸಲು ಉತ್ಸುಕರಾಗುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು, ಚಕ್ರವೇ ನಾಚುವಂತೆ ಓಡಾಡುತ್ತಾರೆ.

ಚುನಾವಣಾ ಸಮಯವೆಂದರೆ ಸಾಮಾನ್ಯವಾಗಿ ಗೌಡರ ಮನೆ ಸಂತೆಯಾಗುತ್ತದೆ. ವ್ಯಾಪಾರ-ವಹಿವಾಟು ಜೋರಾಗು ತ್ತದೆ. ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ವಂಚಿತರಾದವರು, ದಿಢೀರ್ ದುಡ್ಡು ಮಾಡಿ, ಭದ್ರತೆಗಾಗಿ ರಾಜಕಾರಣಕ್ಕೆ ಬರುವ ಹೊಸಬರು, ಸೋತು ಭವಿಷ್ಯದಲ್ಲಿ ಬುಡ ಭದ್ರಮಾಡಿ ಕೊಳ್ಳಬೇಕೆನ್ನು ವವರು.. ಹೀಗೆ ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಟಿಕೆಟ್ ಆಕಾಂಕ್ಷಿ ಗಳಂತೂ ಇದ್ದೇ ಇರುತ್ತಾರೆ. ಹಳಬರು ಗೌಡರನ್ನು ಬಯ್ದು ಕೊಂಡು ಪಕ್ಷ ಬಿಡುವುದು, ಹೊಸಬರು ಬೆಟ್ಟದಂತೆ ಭ್ರಮಿಸಿ ಬರು ವುದು ಕೂಡ ಇಲ್ಲಿ ಮಾಮೂಲು. ಈ ಸತ್ಯ ಗೌಡರಿಗೆ ಗೊತ್ತಿದೆ.

ಹಳ್ಳಿಹೈದ ದೇವೇಗೌಡರು 1953ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ, 1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನಸೌಧದ ಮೆಟ್ಟಿಲು ಹತ್ತಿದವರು. 1962ರಿಂದ 2017ರವರೆಗೆ, ಸುಮಾರು 55 ವರ್ಷಗಳ ಕಾಲ, ರಾಜಕಾರಣದ ಏರಿಳಿತದಲ್ಲಿ ಮುಳುಗೆದ್ದವರು. ಕೃಷಿ, ಕಾವೇರಿ, ನೀರಾವರಿ ಬಗ್ಗೆ ತರ್ಕಬದ್ಧವಾಗಿ ವಿಚಾರ ಮಂಡಿಸಿ ಜನಪರ ನಾಯಕರಾಗಿ ಬೆಳೆದವರು. ಇಂಗ್ಲಿಷ್, ಹಿಂದಿ ಬರದಿದ್ದರೂ ರಾಷ್ಟ್ರ ಮಟ್ಟದ ರಾಜಕಾರಣವನ್ನು, ಮಾಧ್ಯಮಗಳನ್ನು ಮ್ಯಾನೇಜ್ ಮಾಡಿದವರು. ತಾಲೂಕು ಬೋರ್ಡ್ ಮೆಂಬರ್‌ನಿಂದ ಹಂತ ಹಂತವಾಗಿ ಮೇಲೇರಿ ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಮಂತ್ರಿಯವರೆಗಿನ ಹತ್ತು ಹಲವು ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದವರು. ಅಧಿಕಾರ ಬಂದಾಗ ಹಿಗ್ಗದೆ, ಕಳೆದುಕೊಂಡಾಗ ಕುಗ್ಗದೆ- ಆರೋಪಗಳು, ಅವಮಾನಗಳು, ಸೋಲುಗಳನ್ನು ಸಮಚಿತ್ತದಿಂದ ಸ್ವೀಕರಿಸಿದವರು. ಬೆಳೆದು ಭಾರತದ ಮಹಾಪುರುಷರ ಪಟ್ಟಿಯಲ್ಲಿ ದಾಖಲಾದವರು.

ಅದಕ್ಕೆ ಕಾರಣ ಅವರ ಹಳ್ಳಿಯ ಬದುಕು. ಆ ಬದುಕು ಕಲಿಸಿದ ಪಾಠ. ಹರದನಹಳ್ಳಿಯ ಬಡ ಕೃಷಿ ಕುಟುಂಬ ದಿಂದ ಬಂದ ಗೌಡರು, ಹಸಿವನ್ನು, ಬಡತನವನ್ನು ಬಲ್ಲವರು. ಇವತ್ತಿಗೂ ಖಾದಿ ಜುಬ್ಬ, ಪಂಚೆ, ಹೆಗಲ ಮೇಲೊಂದು ಟವಲ್ ಧರಿಸುವ; ಸೊಪ್ಪುಸಾರು, ಮುದ್ದೆ, ಜೊತೆಗೊಂದಿಷ್ಟು ಪಪ್ಪಾಯ, ಕಲ್ಲಂಗಡಿ ಹಣ್ಣು ತಿನ್ನುವ ಸರಳ ಜೀವನವನ್ನು ವೃತದಂತೆ ರೂಢಿಸಿಕೊಂಡವರು. ಪ್ರತಿನಿತ್ಯ ಕಡ್ಡಾಯ ವ್ಯಾಯಾಮ. ವ್ಯಾಯಾಮದಷ್ಟೇ ಮುಖ್ಯವಾಗಿ ದೇವರ ಪೂಜೆ-ಪುನಸ್ಕಾರ. ಅವರ ಆಪ್ತರ ಪ್ರಕಾರ, ಬೆಳಗ್ಗೆ ಐದರಿಂದ ಎಂಟು ಗಂಟೆಯವರೆಗೆ, ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಪೂಜಾರಿಗಳಿಂದ ಬೊಗಸೆ ತುಂಬುವಷ್ಟು ಪ್ರಸಾದ ಮತ್ತು ಮಾತ್ರೆಗಳು. ಅದೇ ಅವರ ಬೆಳಗಿನ ಉಪಾಹಾರ.

ದೇವರು ಮತ್ತು ದೆವ್ವಗಳ ಬಗ್ಗೆ ಗೌಡರಿಗೆ ಎಲ್ಲಿಲ್ಲದ ಭಯ ಭಕ್ತಿ- ಅದು ಶ್ರದ್ಧೆಯಲ್ಲ, ಸ್ವಾರ್ಥ. ಪ್ರತಿನಿತ್ಯ ಪೂಜೆ ಮಾಡುವ ಪೂಜಾರಿಗೆ ದೇವರು ಗೊತ್ತಿರುವ ಹಾಗೆ, ಮಾಟಗಾರನಿಗೆ ಜನರ ಅಳ್ಳೆದೆ ಅರ್ಥವಾಗಿರುವ ಹಾಗೆ ದೇವೇಗೌಡರಿಗೆ ದೇವರು-ದೆವ್ವಗಳ ನಿಜಸ್ಥಿತಿ ಗೊತ್ತು. ಗೊತ್ತಿರುವುದರಿಂದಲೇ ಮಾಟ, ಮಂತ್ರ, ಜ್ಯೋತಿಷ್ಯ, ಹಲ್ಲಿಶಕುನ, ಗಿಳಿಶಾಸ್ತ್ರಗಳನ್ನು ನಂಬುವುದಿಲ್ಲ. ಆದರೆ ನಂಬಿದಂತೆ ನಟಿಸುತ್ತಾರೆ. ಏಕೆಂದರೆ ಗೌಡರನ್ನು ಜನ ನಂಬುತ್ತಾರೆ. ಜನರಿಗಾಗಿ ಗೌಡರು ಅವುಗಳನ್ನು ನಂಬುತ್ತಾರೆ. ಸಾರ್ವಜನಿಕ ಬದುಕಿನಲ್ಲಿರುವವರಿಗೆ ಇದೆಲ್ಲ ಮುಖ್ಯ ಎನ್ನುತ್ತಾರೆ. ಜನರಿಗಾಗಿಯೇ ನನ್ನ ಬದುಕು ಎನ್ನುತ್ತಾರೆ. ಮಣ್ಣಿನ ಮಗ ಎಂದರೆ ಖುಷಿಯಾಗುತ್ತಾರೆ. ಆದರೆ ತಮ್ಮ ಸುತ್ತ ಜನ ಗಿಜಿಗಿಡುವುದನ್ನು, ಕಾರ್ಯಕರ್ತರು ಕೈ ಕಾಲುಗಳಿಗೆ ಸಿಕ್ಕಿ, ಬಿದ್ದು, ಎದ್ದು, ಒದ್ದಾಡುವುದನ್ನು, ಒಂದರೆಗಳಿಗೆಯೂ ಪುರುಸೊತ್ತು ಕೊಡದಂತೆ ಜನ ಬಂದು ಪೀಡಿಸುವುದನ್ನು, ಓಲೈಸುವುದನ್ನು, ಕೈ ಮುಗಿಯುವುದನ್ನು, ಕಾಲಿಗೆರಗುವುದನ್ನು ದೇವೇಗೌಡರು ಬಯಸುತ್ತಾರೆ. ಮತದಾರರು, ಮಾಧ್ಯಮ ದವರು, ವಿರೋಧಿ ನಾಯಕರು ಕೊನೆಗೆ ಯಾರೂ ಇಲ್ಲ ಎಂದರೆ ತಮ್ಮ ಕುಟುಂಬದವರು- ಹೀಗೆ ಯಾರಾದರೊಬ್ಬರು ಇವರಿಗೆ ತೊಂದರೆ ಕೊಡುತ್ತಿರಬೇಕೆಂದು ಕಾತರಿಸುತ್ತಾರೆ.

ಈ ಬಾರಿ ಕಾಟ ಕೊಡುವ ಜಾಗದಲ್ಲಿ ಮೊಮ್ಮಗ ಪ್ರಜ್ವಲ್ ಇದ್ದಾರೆ. ಪ್ರಜ್ವಲ್ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದವರಲ್ಲ. ಹುಟ್ಟಿದಾಗಿನಿಂದ ತಾತ, ಅಪ್ಪ, ಚಿಕ್ಕಪ್ಪಂದಿರ ರಾಜಕಾರಣ ದೊಂದಿಗೇ ಬೆರೆತು ಬೆಳೆದವರು. ವಯಸ್ಸು ಮತ್ತು ಬೆಂಬಲಿಗರ ಬಲದಿಂದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಹುಣಸೂರು, ಬೇಲೂರು ಅಥವಾ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇದಕ್ಕೆ ಅಪ್ಪರೇವಣ್ಣರ ಮೌನ ಸಮ್ಮತಿ, ಅಮ್ಮ ಭವಾನಿಯವರ ಬಹಿರಂಗ ಬೆಂಬಲವೂ ಇದೆ. ಆದರೆ ಇದೇ ದೇವೇಗೌಡರಿಗೆ ಈಗ ಕಷ್ಟ ಕೊಡುತ್ತಿದೆ.

1994ರಲ್ಲಿ ಎಚ್.ಡಿ.ದೇವೇಗೌಡರು ಹೊಳೆನರಸೀಪುರ ದಿಂದ ರಾಮನಗರಕ್ಕೆ ಕ್ಷೇತ್ರ ಬದಲಿಸಿದ ನಂತರ, ಊರು ಮಗ ರೇವಣ್ಣರ ಪಾಲಾಯಿತು. ಗೌಡರು ಮುಖ್ಯಮಂತ್ರಿಯಾದಾಗ, ರೇವಣ್ಣ ಶಾಸಕರಾಗಿದ್ದರು. ನಂತರ ಪ್ರಧಾನ ಮಂತ್ರಿಯಾಗಿ ದಿಲ್ಲಿಗೆ ತೆರಳಿದಾಗ, ರೇವಣ್ಣ ಮೊದಲ ಬಾರಿಗೆ ಮಂತ್ರಿಯಾ ದರು. ಅಲ್ಲಿಂದ ಇಲ್ಲಿಯವರೆಗೆ ಹಾಸನ ಜಿಲ್ಲೆಗೆ ರೇವಣ್ಣರೇ ಅಧಿಪತಿ. ಜೊತೆಗೆ ದೇವೇಗೌಡರ ಮನೆಯಲ್ಲಿ ಗೌಡರ ನಂತರ ರಾಜಕೀಯ ಉನ್ನತ ಸ್ಥಾನವೇನಾದರೂ ದೊರಕುವುದಾದರೆ, ಅಲಂಕರಿಸಬೇಕಾದವರು ರೇವಣ್ಣ ಎಂಬುದು ಅವತ್ತಿನಿಂದಲೇ ಬಂದ, ಅಲಿಖಿತ ಒಪ್ಪಂದ. ಆದರೆ ಈ ಅಲಿಖಿತ ಒಪ್ಪಂದವನ್ನು 2004ರಲ್ಲಿ ರಾಮ ನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ಶಾಸಕರಾದ ಕುಮಾರಸ್ವಾಮಿ ಮುರಿದರು. ಅಣ್ಣನನ್ನು ಪಕ್ಕಕ್ಕಿಟ್ಟು ಕ್ಷಿಪ್ರ ಕಾರ್ಯಾಚರಣೆಯ ಮೂಲಕ 2006ರಲ್ಲಿ ಮುಖ್ಯಮಂತ್ರಿ ಯಾದರು. ಅಪ್ಪ-ಅಣ್ಣನಿಗಿಂತ ಹೆಚ್ಚು ‘ಪವರ್‌ಫುಲ್’ ಪೊಲಿಟಿಷಿಯನ್ ಆದರು. ಪಕ್ಷದ ಶಾಸಕರು ಕುಮಾರಣ್ಣನ ಬೆನ್ನಿಗೆ ನಿಂತರು. ಸಾಲದೆಂದು ಮಡದಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ, ಶಾಸಕಿಯನ್ನಾಗಿ ಮಾಡಿದರು. ಇಷ್ಟೆಲ್ಲ ಆದಮೇಲೆ ರೇವಣ್ಣ ಮತ್ತು ಭವಾನಿ ಸುಮ್ಮನಿರುವುದುಂಟೇ? ಭವಾನಿ ಕೆ.ಆರ್. ನಗರದಿಂದ ಕಣಕ್ಕಿಳಿಯುತ್ತೇನೆಂದರು.

ಜೆಡಿಎಸ್ ಎಂದರೆ ಈಗಾಗಲೇ ‘ಫ್ಯಾಮಿಲಿ ಪಾರ್ಟಿ’ ಎಂದು ಬ್ರ್ಯಾಂಡ್ ಆಗಿರುವ ಆರೋಪವನ್ನು ಮುಂದೆ ಮಾಡಿದ ಗೌಡರು, ‘ನೋಡೋಣ, ಸ್ವಲ್ಪತಾಳ್ಮೆಯಿಂದಿರಿ’ ಎಂದು ಮುಂದೂಡುತ್ತಲೇ ಬಂದರು. ಹತ್ತುಹದಿನೈದು ವರ್ಷಗಳು ಉರುಳಿಹೋದವು. ಅಷ್ಟರಲ್ಲಿ ಮಗ ಪ್ರಜ್ವಲ್ ಬೆಳೆದು ದೊಡ್ಡವನಾದ. ರಾಜಕಾರಣದಲ್ಲಿ ನೆಲೆಯೂರುವ ಸೂಚನೆ ನೀಡಿ ಕ್ಷೇತ್ರ ಹುಡುಕಿಕೊಂಡು ಸ್ಪರ್ಧಿಸಲು ಮುಂದಾದ. ಮಗನಿಗಾಗಿ ಹಿಂದೆ ಸರಿದ ಭವಾನಿಯವರು, ಮಗನಿಗೆ ಟಿಕೆಟ್ ಬೇಕೇಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ.

ಭವಾನಿಯವರದ್ದು ಸ್ವಲ್ಪ ಕಮಾಂಡಿಂಗ್ ನೇಚರ್. ಅವರೇ ಡಿಫ್ಯಾಕ್ಟೋ ಶಾಸಕರು. ಇವರನ್ನು ಕಂಡರೆ ಕುಮಾರಸ್ವಾಮಿ ದಂಪತಿಗೆ ಕೊಂಚ ಹೆದರಿಕೆ ಇದೆ. ಆ ಕಾರಣಕ್ಕೆ ಅವರು, ‘‘ರಾಜ್ಯ ಸುತ್ತಿ ಪಾರ್ಟಿ ಕಟ್ಟುವುದು, ಶ್ರಮ ಹಾಕುವುದು, ಹಣ ಸುರಿಯುವುದು ನಾನು. ಶಾಸಕರು ನನ್ನ ಪರವಿದ್ದಾರೆ, ನಾನೇ ಮುಖ್ಯಮಂತ್ರಿ ಅಭ್ಯರ್ಥಿ, ನನ್ನ ಮಾತೇ ಅಂತಿಮ’’ ಎಂದು ವಾದ ಮಂಡಿಸುತ್ತಾರೆ. ‘‘ನಾನು ಹಿರಿಯ, ಕಿರಿಯವನು ಮುಖ್ಯಮಂತ್ರಿ ಯಾದಾಗಲೂ ಸುಮ್ಮನಿರಲಿಲ್ಲವೇ, ನಾನು ನನ್ನ ಸಂಸಾರ ಬೆಳೆಯಬೇಡವೇ, ಮುಖ್ಯಮಂತ್ರಿಯಾಗಬಾರದೆ’’ ಎನ್ನುವುದು ರೇವಣ್ಣರ ವಾದ. ‘‘ನನ್ನ ಹಾಸನ ಲೋಕಸಭಾ ಕ್ಷೇತ್ರವನ್ನು ನಿನಗೆ ಬಿಟ್ಟುಕೊಡುತ್ತೇನೆ, ಚನ್ನರಾಯಪಟ್ಟಣದಲ್ಲಿ ಅಳಿಯನ ತಮ್ಮ ಬಾಲಕೃಷ್ಣ, ಮದ್ದೂರಿನಲ್ಲಿ ಬೀಗ ತಮ್ಮಣ್ಣ, ಜೊತೆಗೆ ನಿನಗೆ ಟಿಕೆಟ್ ಕೊಟ್ಟರೆ ಜನರಿಗೆ ತಪ್ಪುಸಂದೇಶ ರವಾನೆಯಾಗುತ್ತದೆ’’ ಎನ್ನುವುದು ಗೌಡರ ವಿನಂತಿ. ಒಪ್ಪಲು ಯಾರೂ ಸಿದ್ಧರಿಲ್ಲ.

ದೇವೇಗೌಡರು ನಾಡು ಕಂಡು ಅಪರೂಪದ ರಾಜಕಾರಣಿ. ಆದರೆ ಮನೆಯಲ್ಲಿ ಮಡದಿ ಚೆನ್ನಮ್ಮನವರ ಗಂಡ. ರೇವಣ್ಣ ಚೆನ್ನಮ್ಮನವರ ಮುದ್ದಿನ ಮಗ. ‘ನೀವಿರಂಗೆ ಏನಾದ್ರು ಮಾಡಿ’ ಎನ್ನುವ ಮಡದಿಯ ಮಾತಿಗೆ ಕರಗುವ ಮತ್ತು ರೇವಣ್ಣರ ಬಾಯಿಗೆ ಬೆಚ್ಚುವ ಗೌಡರು, ಈಗ ನಿಜಕ್ಕೂ ಕಷ್ಟದಲ್ಲಿದ್ದಾರೆ. ಎದುರಾಗಿರುವ ಸಂಕಷ್ಟದಿಂದ ಪಾರಾಗಲು ಗೊತ್ತಿರುವ ದೇವರು-ದೆವ್ವಗಳ ಮೊರೆ ಹೋಗುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ತೊರೆದವರ ಹೆಗಲ ಮೇಲೆ ಕೈ ಹಾಕಿ ಕರೆತರುತ್ತಿದ್ದಾರೆ. ದಿನದ 24 ಗಂಟೆಯೂ ಸಾಲದೆಂಬಂತೆ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದಾರೆ. ‘‘ಹೇಗಾದರೂ ಮಾಡಿ, ಐವತ್ತು ಅರವತ್ತು ಸೀಟು ಗೆದ್ದು, ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೇವಣ್ಣರನ್ನು ಉಪಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿಬಿಟ್ಟರೆ, ಅಲ್ಲಿಗೆ ನಾನು ನಿರಾಳ’’ ಎಂಬ ಯೋಚನೆಯಲ್ಲಿದ್ದಾರೆ. ಆದರೆ ಇದನ್ನು ಬಹಿರಂಗವಾಗಿ ಹೇಳದೆ, ‘‘ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ, ಕಾಂಗ್ರೆಸ್-ಬಿಜೆಪಿಗೂ ಅಧಿಕಾರ ಕೊಟ್ಟಿದ್ದೀರ, ಜೆಡಿಎಸ್‌ಗೊಂದು ಅವಕಾಶ ಕೊಡಿ’’ ಎಂದು ಮತದಾರರಿಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ. ಗೌಡರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕಾದವರಾರು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top