ಸ್ವಸ್ಥ ಸಮಾಜಕ್ಕೆ ತತ್ವಬದ್ಧ ರಾಜಕೀಯ ಪಕ್ಷಗಳು ಬೇಕು

-

ದೇಶದ ರಾಜಕೀಯ ದೇಶದ ಹಳ್ಳಿಗಳಿಗೂ ತಲುಪಿ ಅಭಿವೃದ್ಧಿಗಿಂತ ಹೆಚ್ಚು ಆತಂಕವನ್ನು ಉಂಟು ಮಾಡಿದ ವಿಚಾರ ಎಲ್ಲರೂ ಅನುಭವಿಸಿದ ಸತ್ಯವಾದರೂ ಅದನ್ನು ಆತಂಕ ಎಂದು ಭಾವಿಸದೆ ಒಂದು ಧರ್ಮದ ಜಯ, ಈ ದೇಶ ಆ ಧರ್ಮಕ್ಕೆ ಮಾತ್ರ ಸೇರಿದ್ದು ಎಂಬ ಭಾವ ಹರಡುವುದಕ್ಕೆ ಕಷ್ಟಪಡಬೇಕಾದ ಅಗತ್ಯವೇ ಇಲ್ಲದ ದೇಶ ನಮ್ಮದು. ಅದೇ ನಮ್ಮ ದೇಶದ ಸಂವಿಧಾನದ ಅರಿವು ಅದು ನೀಡಿರುವ ಹಕ್ಕು ಬಾಧ್ಯತೆಗಳ ಅರಿವು ವಿದ್ಯಾವಂತರಿಗೂ ಅರಿವಾಗುವ ಪರಿಸ್ಥಿತಿ ಈ ದೇಶದಲ್ಲಿ ನಿರ್ಮಾಣಗೊಳ್ಳದಿರುವ ಸ್ಥಿತಿಗೆ ಅಷ್ಟೂ ವರ್ಷಗಳಲ್ಲಿ ದೇಶವನ್ನು ಆಳಿದ ರಾಜಕೀಯ ಪಕ್ಷವೂ ಹೊಣೆಯಾಗಿದೆ. ಇಪ್ಪತ್ತೈದು ವರ್ಷಗಳ ಆಳ್ವಿಕೆಯ ಅಧಿಕಾರ, ಪಕ್ಷದ ತಾತ್ವಿಕತೆಯನ್ನು ಗಟ್ಟಿಗೊಳಿಸುವಲ್ಲಿ ವಿಫಲವಾದುದು, ಸಂವಿಧಾನವನ್ನು ನಿರ್ಲಕ್ಷಿಸಿದ ಘಟನೆಗಳೆಲ್ಲವೂ ಈ ದೇಶದ ಮುಂದಿನ ರಾಜಕೀಯ ವಿದ್ಯಮಾನಗಳಿಗೆ ಕಾರಣ ಎನ್ನುವುದು ಕೂಡಾ ಮರೆಯತಕ್ಕ ಅಂಶವಲ್ಲ.

ಇಂತಹ ದಿನಗಳಲ್ಲಿ ಮತ್ತೆ ದೇಶದಲ್ಲಿ ಕೇಂದ್ರ ಸರಕಾರದ ಚುನಾವಣೆಯ ಘೋಷಣೆಯಾಯ್ತು. ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಬಹು ಮುಖ್ಯ ಪ್ರಣಾಳಿಕೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣದ ಘೋಷಣೆ, ಭರವಸೆ. ಭಾಜಪದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ದೇಶದಾದ್ಯಂತ ಶ್ರೀ ರಾಮರಥದ ಪರ್ಯಟಣೆ. ಧರ್ಮದಲ್ಲಿ ರಾಜಕೀಯ ಇರಬಾರದು ಎನ್ನುವುದು ಎಲ್ಲರ ಆಶಯವಾದರೂ ಹಿಂದೂ ಧರ್ಮದೊಳಗಿನ ಜಾತೀಯತೆ, ಧಾರ್ಮಿಕ ಅಸಮಾನತೆ, ಅಸ್ಪಶ್ಯತೆ ಇವೆಲ್ಲವೂ ಧರ್ಮದೊಳಗಣ ರಾಜಕೀಯವೇ. ಇನ್ನುಳಿದ ಧರ್ಮಗಳಲ್ಲಿ ಇಷ್ಟು ಢಾಳಾಗಿ ರಾಜಕೀಯ ಕಾಣಿಸದಿದ್ದರೂ ಶ್ರೀಮಂತ ಬಡವ ಎಂಬ ಅಸಮಾನತೆ ಇರುವುದು ಅಷ್ಟೇ ಸತ್ಯ. ಇದು ಕೂಡಾ ಒಂದು ರೀತಿಯ ರಾಜಕೀಯವೇ. ಇನ್ನು ರಾಜಕೀಯಕ್ಕೆ ತನ್ನದೇ ಧರ್ಮ ಎಂದರೆ ನೀತಿ ನಿಯಮಗಳು. ಆಯಾಯ ರಾಜಕೀಯ ಪಕ್ಷಗಳಿಗೆ ಸಮಾಜಮುಖಿಯಾದ, ಸಮಾನತೆಯ ಆಶಯಗಳ ತಾತ್ವಿಕತೆಯೊಂದಿಗೆ ದೇಶದ ಅಭಿವೃದ್ಧಿಯ ಬಗ್ಗೆ ಧೋರಣೆಗಳು ಇರಬೇಕಾದವುಗಳು. ಆದರೆ ಇವುಗಳೆಲ್ಲಾ ಚುನಾವಣೆ ಬಂತೆಂದರೆ ಜಾತೀಯತೆ, ವೋಟ್‌ಬ್ಯಾಂಕ್ ಭ್ರಷ್ಟಾಚಾರಗಳೆಂಬ ಸಡಿಲವಾದ ಸೂತ್ರಗಳಲ್ಲಿ ರಾಜಕೀಯ ಪಕ್ಷಗಳು ಹೆಣೆಯಲ್ಪಟ್ಟು ತತ್ವಗಳೆಲ್ಲ ಗಾಳಿಗೆ ತೂರಿ ಹೋಗಿ ರಾಜಕೀಯ ಎಂದರೆ ಪ್ರಜ್ಞಾವಂತ ಜನರಿಗೆ ಮೈಲಿಗೆ ಎನ್ನುವಷ್ಟು ಹೊಲಸಾದುದೂ ನಿಜ.

ಈ ಸಂದರ್ಭದಲ್ಲಿ ನಮ್ಮ ಊರಿಗೂ ರಾಮರಥ ಬರುವ ಸುದ್ದಿಯಾಯಿತು. ಯಾವ ವೇಳೆಯಲ್ಲಿ ಎಂಬ ಬಗ್ಗೆ ಖಚಿತವಾಗಿ ಗೊತ್ತಿಲ್ಲದ ನಮಗೆ ಹಗಲಲ್ಲಿ ಬಂದು ಹೋದರೆ ನಮಗೆ ನೋಡುವ ಅವಕಾಶವಿರಲಾರದು ಎಂದುಕೊಂಡಿದ್ದೆವು. ಆದರೆ ಹಾಗಾಗದೆ ಮುಸ್ಸಂಜೆ ನಮ್ಮ ಬಾರಗ ರಸ್ತೆಯ ಕೊನೆಯಲ್ಲಿದ್ದ ದಲಿತರ ಮನೆಗಳ ಪಕ್ಕದಲ್ಲಿದ್ದ ಅವರ ಆರಾಧ್ಯ ದೈವ ಕೋಡ್ದಬ್ಬು ಬಾರದ ದೈವಸ್ಥಾನದವರೆಗೆ ಶಂಖ ಜಾಗಟೆಗಳ ಗೌಜಿಯೊಂದಿಗೆ ಬಂತು. ಅನುಕೂಲ ಸಿಂಧು ಪ್ರವೃತ್ತಿ ಎನ್ನುವುದು ಅರ್ಥವಾಗುವುದು ಇಂತಹ ಸಂದರ್ಭದಲ್ಲಿಯೇ. ಇಂದಿಗೂ ಮಾನಸಿಕ ಅಸ್ಪಶ್ಯತೆಯನ್ನು ಸಾಮಾಜಿಕವಾಗಿ ಧರ್ಮದೊಳಗೆ ಅನುಭವಿಸುವ ದಲಿತರಲ್ಲಿ ಕೆಲವರಿಗೆ ಅಂದು ಶ್ರೀರಾಮನೇ ಬಂದು ಉದ್ಧರಿಸಿದ ಅನುಭವವಾದುದು ನಿಜವೇ. ಯಾಕೆಂದರೆ ಆ ಬಳಿಕ ಅಲ್ಲಿನ ಯುವ ಪೀಳಿಗೆಗೆ ಭಾಜಪದ ಸಕ್ರಿಯ ಕಾರ್ಯಕರ್ತರಾಗಿರುವುದು ಕೂಡಾ ನಿಜವೇ. ಪ್ರಾರಂಭದ ವರ್ಷಗಳಲ್ಲಿ ಅಲ್ಲಿ ನಡೆಯುತ್ತಿದ್ದ ವಾರ್ಷಿಕ ಕೋಲ (ಉತ್ಸವ)ದಲ್ಲಿ ಭಾಗಿಯಾಗದೆ ಇರುತ್ತಿದ್ದ ಸವರ್ಣೀಯರು ಭಾಗಿಯಾದುದು; ಅವರೇ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶಕರಾದುದು; ಕಪ್ಪು ಬಣ್ಣದ ಕರಿ (ದೊಂದಿಯ ಮಸಿ) ಹಣೆಗೆ ಹಚ್ಚುವ ಪ್ರಸಾದದೊಂದಿಗೆ ಗಂಧವೂ ಪ್ರಸಾದ ರೂಪದಲ್ಲಿ ನೀಡುವಂತಾದುದು ಹೊರನೋಟಕ್ಕೆ ದಲಿತರನ್ನು ಮೇಲ್ದರ್ಜೆಗೆ ಏರಿಸಿದಂತಾಯ್ತು ಎಂದು ದಲಿತರೇ ಭಾವಿಸಿಕೊಂಡಲ್ಲಿ ಉಳಿದವರ ಊಹೆಗಳಿಗೆ ಖಂಡಿತಾ ಅರ್ಥವೇ ಇಲ್ಲ ಎನ್ನುವುದು ನಿಜ. ಶ್ರೀರಾಮ ರಥವನ್ನು ನಾವು ಮನೆಯಂಗಳದಲ್ಲೇ ನಿಂತು ನೋಡಿದೆವು. ಕೋದಂಡಧಾರಿಯಾದ ಶ್ರೀರಾಮ ಬಾಣ ಹೂಡುತ್ತಿರುವ ಕಟೌಟ್ ನೋಡಲು ಸುಂದರವಾಗಿತ್ತು. ನಮ್ಮ ಬ್ಲಾಕ್‌ನ ಮಕ್ಕಳು, ಹೆಂಗಸರೇ ಹೆಚ್ಚು ಸಂಖ್ಯೆಯಲ್ಲಿ ಮನೆಯಿಂದ ಹೊರಬಂದು ನೋಡಿದ್ದೇ ಅಲ್ಲದೆ ಆರತಿ ಬೆಳಗಿದರು. ರಾಮರಥದ ಜೊತೆಗೆ ಬಂದ ಸ್ಥಳೀಯ ರಾಜಕೀಯ ಕಾರ್ಯಕರ್ತರು ದೈವಸ್ಥಾನದಲ್ಲಿ ಚುನಾವಣಾ ಪ್ರಚಾರ ಮಾಡಿದುದು ನಮ್ಮ ಮನೆಗೂ ಕೇಳಿಸುತ್ತಿತ್ತು. ಗಾಂಧೀಜಿಯವರು ಕನಸು ಕಂಡ ರಾಮರಾಜ್ಯವೂ ಈಗ ಭಾಜಪವೂ ನಿರ್ಮಿಸುವ ರಾಮರಾಜ್ಯಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು. ಆಗಲೇ ಈ ದೇಶಕ್ಕೆ ಮುಕ್ತಿ. ಆದ್ದರಿಂದ ಭಕ್ತಿಯೊಂದಿಗೆ ಕರಸೇವೆಗೆ ಯುವಕರು ಸಿದ್ಧರಾಗಿ ಅಯೋಧ್ಯೆಗೆ ಇಟ್ಟಿಗೆ ಒಯ್ಯುವ ಕಾರ್ಯದಲ್ಲಿ ಭಾಗವಹಿಸುವುದು ಪುಣ್ಯಕಾರ್ಯ ಎಂಬುದನ್ನು ಸಮರ್ಥಿಸಿಕೊಂಡರು. ಜೊತೆಗೆ ಇದು ಹಿಂದೂ ದೇಶದ ಪ್ರತಿಷ್ಠೆಯ ವಿಚಾರವನ್ನು ತಿಳಿಸಿ ಆಕ್ರಮಣಕಾರರಾಗಿದ್ದ ಮುಸ್ಲಿಮರ ಆಡಳಿತದಲ್ಲಿ ಆದ ಧರ್ಮನಾಶದ ಕಾರ್ಯಗಳಿಗೆ ಈ ಮೂಲಕ ಉತ್ತರ ನೀಡಬೇಕಾದುದು ಕರ್ತವ್ಯ ಎಂಬೆಲ್ಲಾ ಮಾತುಗಳು ಕೇಳಿದ ಮಂದಿಗೆ ಹೌದು ಎಂದು ಅನ್ನಿಸಿದರೆ ತಪ್ಪಿಲ್ಲವೆಂಬಂತೆ ಮಾತುಗಳು ಎಲ್ಲರ ಮನದಾಳಕ್ಕೆ ಇಳಿಯುವಂತೆ ಇತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ರಾಮಾಯಣದ ಸಂಸ್ಕೃತಿಯ ಈ ದೇಶದಲ್ಲಿ ರಾಮ ಮಂದಿರದ ನಿರ್ಮಾಣ ಅನಿವಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುವಲ್ಲಿ ಅಡ್ಡಿಯಾಗುವ ಅಂಶಗಳು ಕೇಳುವವರ ನೆಲೆಯಲ್ಲಿ ಯಾವುದೂ ಇರಲಿಲ್ಲ. ಅವರ ಪಾಲಿಗೆ ಅಯೋಧ್ಯೆಯಲ್ಲಿ ಕೆಡವಲಾಗಿದ್ದ ಬಾಬರಿ ಮಸೀದಿಯ ಬಗ್ಗೆ ಈ ಮೊದಲು ಏನೇನೂ ತಿಳಿದಿರಲಿಲ್ಲ ಎನ್ನುವುದು ಕೇವಲ ಹಿಂದೂಗಳಿಗೆ ಮಾತ್ರವಲ್ಲ ನನ್ನೂರಿನ ಮುಸ್ಲಿಮರಿಗೂ ಗೊತ್ತಿರಲೇಬೇಕಾದ ವಿಷಯವೂ ಆಗಿರಲಿಲ್ಲ. ಬಾಬರನ ಮಸೀದಿಗೂ ಇಲ್ಲಿನ ಮುಸ್ಲಿಮರಿಗೂ ಯಾವ ಬಾದರಾಯಣ ಸಂಬಂಧ ಇರಲಿಲ್ಲ ಎನ್ನುವುದರೊಂದಿಗೆ, ಈ ಮಸೀದಿಯ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗದ ಕೇಸು ಹಾಗೆಯೇ ಇದೆ ಎನ್ನುವುದು ಮುಸ್ಲಿಮರಿಗೂ, ಹಿಂದೂಗಳಿಗೂ ಗೊತ್ತಿಲ್ಲದ ವಿಷಯವೇ ಆಗಿತ್ತು. ಆದರೆ ಇದೀಗ ಮಸೀದಿ ಕೆಡವಿದ ಪ್ರಕರಣದ ಇಲ್ಲಿನ ಹಿಂದೂಗಳನ್ನು ಮತ್ತು ಮುಸ್ಲಿಮರಿಬ್ಬರನ್ನೂ ಕೋಳಿ ಅಂಕದಲ್ಲಿ ಎರಡು ಕೋಳಿಗಳ ಕಾಲುಗಳಿಗೆ ಬಾಳು (ಸಣ್ಣ ಕತ್ತಿ) ಕಟ್ಟಿ ಸ್ಪರ್ಧೆಗೆ ಬಿಟ್ಟಂತಾಗಿತ್ತು. ಒಂದು ಅಂಕದಲ್ಲಿ ಒಂದು ಕೋಳಿ ಸತ್ತು ಇನ್ನೊಂದು ಗೆದ್ದೆನೆಂಬ ಹೆಮ್ಮೆ ಪಡುವಂತಿಲ್ಲ. ಯಾಕೆಂದರೆ ಇನ್ನೊಂದು ಅಂಕದಲ್ಲಿ ಅದಕ್ಕೂ ಸಾವು ಇದ್ದದ್ದೇ. ಮನುಷ್ಯನ ಹಿಂಸೆಯ ಆನಂದಕ್ಕೆ ಕೋಳಿಗಳೂ ಬಲಿಯಾಗುತ್ತಿದ್ದಂತೆ ಇಲ್ಲಿ ರಾಜಕೀಯ ಪಕ್ಷದ ಅಧಿಕಾರ ಲಾಲಸೆಗೆ ನಿರಪರಾಧಿ ಹಿಂದೂ ಮುಸ್ಲಿಮರು ಬಲಿಯಾಗುತ್ತಿದ್ದುದನ್ನು ಕಂಡರೂ, ಅನುಭವಿಸಿದರೂ ಅರ್ಥೈಸಿಕೊಳ್ಳಲಾಗದ ಮಂದಿ ನಿಜವಾಗಿಯೂ ಬಲಿಪಶುಗಳಾಗಿದ್ದರು.

ಕೇಂದ್ರದಲ್ಲಿ ಭಾಜಪ ಇತರ ಕೆಲವು ಮಿತ್ರ ಪಕ್ಷಗಳೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದರೂ, ಮತ್ತೀಗ ವರ್ತಮಾನದಲ್ಲಿ ಇರುವ ಬಹುಮತದ ಭಾಜಪ ರಾಮ ಮಂದಿರ ನಿರ್ಮಾಣದ ಮಾತುಗಳನ್ನು ಚುನಾವಣೆಯ ಅಸ್ತ್ರವಾಗಿ ಬತ್ತಳಿಕೆಯಲ್ಲಿ ಬಚ್ಚಿಟ್ಟುಕೊಂಡಿರುವುದು ರಾಜಕೀಯ ಚಾಣಾಕ್ಷತನವೇ ಆಗಿ ಉಳಿದಿರುವುದು ರಹಸ್ಯವಾಗಿ ಉಳಿದಿಲ್ಲ. ‘‘ಯಾವ ರಾಜ ಅರಸನಾದರೇನು ರಾಗಿ ಬೀಸೋದು ತಪ್ಪುವುದಿಲ್ಲ’’ ಎಂಬ ಗಾದೆಯಂತೆ ದೇಶದ ರಾಜಕೀಯದ ಬಗ್ಗೆ ಸಾಂದರ್ಭಿಕವಾಗಿ ಭಾವುಕರಾಗುವ ಮಹಿಳೆಯರು ಹಾಗೂ ಮಕ್ಕಳು ನಿಧಾನವಾಗಿ ಇದನ್ನು ಮರೆಯುತ್ತಾ ತಮ್ಮ ತಮ್ಮ ನೆರೆಕರೆಯಲ್ಲಿ ಚಾಹುಡಿ, ಸಕ್ಕರೆ ಸಾಲ ಪಡೆಯುತ್ತಾ, ವೈದ್ಯರ ಬಳಿಗೆ ಹೋಗುವಾಗ ಜೊತೆಯಲ್ಲಿ ಹೋಗುತ್ತಾ, ಮಕ್ಕಳು ಕುಟ್ಟಿದೊಣ್ಣೆ, ಲಗೋರಿ ಆಡುತ್ತಾ ತಮ್ಮ ಜಾತಿ, ಧರ್ಮಗಳನ್ನು ಮರೆತು ಮನುಷ್ಯತ್ವ, ಸ್ನೇಹದ ವೌಲ್ಯವನ್ನು ಮತ್ತೆ ಎತ್ತಿ ಹಿಡಿದಿರುವುದರಿಂದಲೇ ನಾವು ಇಷ್ಟಾದರೂ ನೆಮ್ಮದಿಯಿಂದ ಬದುಕಿದ್ದೇವೆ ಎಂದರೆ ತಪ್ಪಲ್ಲ. ನನ್ನೂರಿನಲ್ಲಿಯೂ ಈ ಬದಲಾವಣೆ ನಿಧಾನವಾಗಿ ಆಗುತ್ತಾ ಮಹಿಳೆಯರು ತಮ್ಮ ತಾಯ್ತನದ ಭಾವನೆಗಳಿಂದ, ಮಕ್ಕಳು ತಮ್ಮ ಮುಗ್ಧತೆಯಿಂದ ಸಮಾಜವನ್ನು ಶಾಂತಿ ನೆಮ್ಮದಿಯ ಕಡೆಗೆ ಸಾಗಿಸಿರುವುದರಿಂದಲೇ ನಾಳಿನ ದಿನಗಳ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ ಅಲ್ಲವೇ? ಆದರೆ ಎರಡೂ ಧರ್ಮದ ಪುರುಷರು ಇಷ್ಟು ಸುಲಭದಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಯೊಂದಿಗೆ ಧರ್ಮದ ಅಸ್ಮಿತೆಯ ರಕ್ಷಕರಾಗಿ ಸಮಾಜದ ಶಾಂತಿ ನೆಮ್ಮದಿಗಳನ್ನು ಕೆಡಿಸುವ, ಕಾನೂನುಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭಗಳು ಬಂದಾಗ ರಾಜಕೀಯದ ಚಕ್ರವ್ಯೆಹದೊಳಗೆ ನುಸುಳಿದ ಯುವಕರಿಗೆ ಸ್ವಂತದ ಬದುಕು ಇಲ್ಲದೆ, ದೇಶದ ಉದ್ಧಾರ, ಧರ್ಮದ ಉದ್ಧಾರ ಎನ್ನುವ ಹೆಸರಲ್ಲಿ ಮನೆಗೆ ಮಾರಿಗಳಾಗುತ್ತಿರುವುದು, ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುವ ಸಮಾಜವನ್ನು ಸ್ವಸ್ಥ ಸಮಾಜ ಎಂದು ಹೇಗೆ ಭಾವಿಸುವುದು? ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು ಎಂಬ ಮನುಷ್ಯನ ಆರೋಗ್ಯಸೂತ್ರದಂತೆ ಸ್ವಸ್ಥ ಸಮಾಜದ ಸೃಷ್ಟಿಗೆ ತತ್ವಬದ್ಧವಾದ, ಸೇವಾ ಮನೋಭಾವದ, ಸಮಾನತೆಯ ಆಶಯವುಳ್ಳ ರಾಜಕೀಯ ಪಕ್ಷಗಳೂ ಬೇಕಾಗಿದೆಯಲ್ಲವೇ? ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು ನಮ್ಮನ್ನು ಕಾಡಿದರೆ ಅದು ತಪ್ಪು ಎನ್ನುವ ವಾದ ಸರಣಿಯೂ ಇದ್ದು, ಒಬ್ಬರನ್ನು ಒಬ್ಬರು ಸಹಿಸಿಕೊಳ್ಳಲಾಗದ ಅಸಹನೆ ರಾಜಕೀಯದಿಂದ, ಸಮಾಜಕ್ಕೆ, ಸಮಾಜದಿಂದ ಮನೆಯೊಳಗೊ ಈ ಮನೋಭಾವ ನುಸುಳಿದೆ ಎಂದರೆ ತಪ್ಪಲ್ಲ. ಇದಕ್ಕೆ ಪೂರಕವಾಗಿ ಇಂದಿನ ತಂತ್ರಜ್ಞಾನದ ಪರಿಣತಿಯ ಕೊಡುಗೆ, ಧನಾತ್ಮಕವಾಗಿರುವುದಕ್ಕಿಂತ ಹೆಚ್ಚು ಋಣಾತ್ಮಕವಾಗುತ್ತಿರುವುದು ನಮ್ಮ ಕಾಲದ ದುರಂತ. ಮಾಧ್ಯಮಗಳು ಇಂತಹ ಸನ್ನಿವೇಶಗಳನ್ನು ವಾಣಿಜ್ಯೀಕರಣಗೊಳಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾ ಮನುಷ್ಯತ್ವವನ್ನೇ ಸುಟ್ಟು ಬೂದಿ ಮಾಡುತ್ತಿದೆ ಎನ್ನುವುದೂ ಸುಳ್ಳಲ್ಲ. ಕಾಟಿಪಳ್ಳ ಕೃಷ್ಣಾಪುರದ ನಮ್ಮ ವಾಸ್ತವ್ಯದ ಕೊನೆಯ ವರ್ಷಗಳ ದಿನಗಳು ಇಂತಹ ಆತಂಕ, ಅಭದ್ರತೆಯ ದಿನಗಳಿಗೆ ಮುನ್ನುಡಿ ಬರೆಯ ಹೊರಟಿವೆ ಅನ್ನಿಸುತ್ತಿತ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top