ಕಡೆಗೂ ಕರುಣಾಳು ರಾಘವನಲಿ ತಪ್ಪಿಲ್ಲ? | Vartha Bharati- ವಾರ್ತಾ ಭಾರತಿ

--

ಕಡೆಗೂ ಕರುಣಾಳು ರಾಘವನಲಿ ತಪ್ಪಿಲ್ಲ?

ನಿರ್ಭಯಾ ಪ್ರಕರಣ ಮತ್ತು ಅದಾದ ಆನಂತರದ ಪ್ರತಿಭಟನೆ ಹಾಗೂ ಕಾನೂನು ಇದಕ್ಕೆ ಪ್ರತಿಸ್ಪಂದಿಸಿದ ರೀತಿ ಇವನ್ನು ಗಮನಿಸಿದಾಗ ಇನ್ನು ಮುಂದೆ ಯಾವ ಹೆಣ್ಣಿಗೂ ಅನ್ಯಾಯವಾಗುವುದಿಲ್ಲ ಮತ್ತು ಮಹಿಳೆಯರು ಮಧ್ಯರಾತ್ರಿಯೂ ನಿರಾತಂಕವಾಗಿ ನಡೆಯಬಹುದು ಎಂದು ಅದೆಷ್ಟೋ ಜನರು ಕಲಿಸಿಕೊಂಡದ್ದು ಸುಳ್ಳಲ್ಲ. ಆದರೆ ಕಾಲಾನುಕಾಲಕ್ಕೆ ಚುನಾವಣೆಗಳು ನಡೆಯುವ ಪ್ರಜಾತಂತ್ರದಲ್ಲಿ ಅಪರಾಧಗಳೂ ಅದಕ್ಕಿಂತ ವೇಗವಾಗಿ ಮರುಕಳಿಸುತ್ತವೆ ಮತ್ತು ಹೊಸಬಗೆಯ ತಂತ್ರದೊಂದಿಗೆ ಬೀದಿಗಿಳಿಯುತ್ತವೆ.


ಹೆಣ್ಣು ದೇಹವನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮುಟ್ಟುವ ಹಕ್ಕು ಯಾರಿಗೂ ಇಲ್ಲ ಎಂಬ ಮಹತ್ತರವಾದ ತೀರ್ಪೊಂದನ್ನು ದೆಹಲಿ ಉಚ್ಚ ನ್ಯಾಯಾಲಯವು ನೀಡಿದೆ. ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ಅಪರಾಧಿಗೆ ಐದು ವರ್ಷ ಶಿಕ್ಷೆ ನೀಡಿದ ಸಂದರ್ಭದಲ್ಲಿ ನ್ಯಾಯಾಲಯವು ಈ ಅಂಶವನ್ನು ಸಾರಿತು. ಕೆಲವು ವರ್ಷಗಳ ಹಿಂದೆ ಪಂಜಾಬಿನ ಆಗಿನ ಪೊಲೀಸ್ ವರಿಷ್ಠರಾದ ಕೆ.ಪಿ.ಎಸ್. ಗಿಲ್ ಎಂಬ ಐಪಿಎಸ್ ಅಧಿಕಾರಿ ರೂಪನ್ ಸಿಂಗ್ ಬಜಾಜ್ ಎಂಬ ಐಎಎಸ್ ಅಧಿಕಾರಿಯ ಹಿಂಭಾಗವನ್ನು ಸವರಿದ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ವರೆಗೂ ತಲುಪಿ ಆ ಪೋಲೀಸು ಅಧಿಕಾರಿ ಶಿಕ್ಷೆಗೊಳಗಾದದ್ದನ್ನು ಎಲ್ಲರೂ ಮರೆತಿರಲಾರರು. ಸಾರ್ವಜನಿಕ ಸ್ಥಳಗಳಲಿ,್ಲ ಕಚೇರಿಗಳಲ್ಲಿ ಮಾತ್ರವಲ್ಲ, ಮನೆಯೊಳಗೂ ಹೆಣ್ಣಿಗೆ ತನ್ನ ದೇಹದ ಬಗ್ಗೆ ಸ್ವಾತಂತ್ರ್ಯವಿದೆಯೆಂಬುದನ್ನು ನ್ಯಾಯಾಲಯಗಳು ಮತ್ತೆ ಮತ್ತೆ ಸಾರಿ ಹೇಳಬೇಕಾಗಿ ಬಂದಿರುವುದು ನಾಗರಿಕ ಸಮಾಜವು ತಲೆತಗ್ಗಿಸಬೇಕಾದ ವಿಚಾರ. ಹೀಗೆ ಹೇಳಿದರೂ, ಅನೇಕರು ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಸುದ್ದಿ, ಮಾಹಿತಿ ಪ್ರಸಾರವಾದಾಗಲೂ ಇಂತಹ ಅಪರಾಧಗಳು ಎಗ್ಗಿಲ್ಲದೆ ನಡೆಯುತ್ತಿವೆಯೇಕೆ?

ದೇಶದೆಲ್ಲೆಡೆ ಪ್ರಚೋದನೆಗೀಡಾದವರಂತೆ ಹೆಣ್ಣುಮಕ್ಕಳ ಆತ್ಮವಿಶ್ವಾಸ, ಘನತೆ ಮತ್ತು ಸುರಕ್ಷತೆಯನ್ನು ಆತಂಕಪಡಿಸುವ ಕುಗ್ಗಿಸುವ ರೀತಿಯಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದನ್ನು ಮಾಧ್ಯಮಗಳು ವರದಿಮಾಡುತ್ತಿವೆ. ಸಂವಿಧಾನ, ಭಾರತೀಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಹಿಂದುತ್ವ ಮುಂತಾದ ತಾತ್ವಿಕ ಸಿದ್ಧಾಂತಗಳು ಬೀದಿಬೀದಿಗಳಲ್ಲಿ, ನಡೆದಾಡುವ ನಾಲಗೆಗಳಲ್ಲಿ ಬಿಕರಿಯಾಗುತ್ತಿರುವ ಈ ಕಾಲದಲ್ಲಿ ಅಂತರ್ಧರ್ಮೀಯ ದೌರ್ಜನ್ಯಗಳಷ್ಟೇ ಅಧಿಕಾರಸ್ಥರ ಗಮನ ಸೆಳೆಯುತ್ತದೆ. ಯಾವೊಬ್ಬ ಹೆಣ್ಣು ಮಗಳು ದೌರ್ಜನ್ಯಕ್ಕೀಡಾದರೆ ಮೊದಲಿಗೆ ಅವಳು ಯಾವ ಜಾತಿ ಎಂಬುದನ್ನಷ್ಟೇ ಗಮನಿಸಿ ಆನಂತರ ತಮ್ಮ ಅಭಿಪ್ರಾಯವನ್ನು, ಬೆಂಬಲ-ವಿರೋಧವನ್ನು ಸಾರುವ ವೀರರ ಪಡೆಯೇ ದೇಶದೆಲ್ಲೆಡೆ ವ್ಯಾಪಿಸಿದೆ. ಹೆಣ್ಣು-ಗಂಡು ಎಂಬ ಎರಡೇ ಜಾತಿ, ಮಾನವೀಯತೆ ಎಂಬ ಒಂದು ಧರ್ಮ ಇದ್ದ ಕಾಲವಷ್ಟೇ ಸುಭಿಕ್ಷೆಯ ಕಾಲವೆಂದು ಅನ್ನಿಸುತ್ತದೆ.

ಹೆಣ್ಣು ಬಾಲ್ಯ ವಿವಾಹಕ್ಕೆ ತುತ್ತಾಗುತ್ತಿದ್ದ, ಸಹಗಮನದಲ್ಲಿ ಸುಟ್ಟುಹೋಗುತ್ತಿದ್ದ, ಬದುಕಿದರೂ ಮಂಡೆ ಬೋಳಿಸಿ ‘ಮುಂಡೆ’ಯೆಂಬ ಅಭಿದಾನವನ್ನು ಹೊತ್ತು ವೃಂದಾವನದಲ್ಲಿ ಪರಾಶ್ರಯ ಹೊಂದುತ್ತಿದ್ದ (ಅದಿನ್ನೂ ಮುಂದುವರಿಯುತ್ತಿದೆಯೆಂದು ಕೇಳಿದ್ದೇನೆ!) ಮತ್ತು ಸಮಾಜದಲ್ಲಿ, ಸಂಸಾರದಲ್ಲಿ ಯಾವ ಗೌರವಕ್ಕೂ ಪಾತ್ರವಾಗದೆ ತಂದೆ, ಗಂಡ, ಮಕ್ಕಳ ಆಶ್ರಯದ ಅನಿವಾರ್ಯತೆಯನ್ನು ಹೇಳುವಂತಿರುವ ‘ನಸ್ತ್ರೀ ಸ್ವಾತಂತ್ರ್ಯಮರ್ಹತಿಃ’ ಎಂಬ ಉದಾತ್ತ(!) ಸಂಸ್ಕೃತಿವಂತ(?) ಶಿರೋನಾಮೆಗೆ ತುತ್ತಾಗಿರುತ್ತಿದ್ದ ಭವ್ಯ ಇತಿಹಾಸ ಈ ದೇಶಕ್ಕಿದ್ದಿತು. ಆಗಿನ್ನೂ ಭಾರತೀಯ ಪರಂಪರೆಗೆ ಯಾವ ಪರಧರ್ಮೀಯರ ಅಡೆತಡೆಗಳೂ ಇರಲಿಲ್ಲ. ಜಗಜ್ಜನನಿಯಾಗುವತ್ತ ಭಾರತ ಇದೇ ಹಾದಿಯಲ್ಲಿ ಹೋಗುತ್ತಿದ್ದರೆ ಈ ದೇಶದ ಪೂಜ್ಯ ಮಹಿಳೆಯರ ಸ್ಥಿತಿ ಏನಾಗುತ್ತಿತ್ತೋ ದೇವರೇ ಬಲ್ಲ.

ಆದರೆ ಲಾರ್ಡ್ ವಿಲಿಯಂ ಬೆಂಟಿಂಕ್, ರಾಜಾ ರಾಮ ಮೋಹನ ರಾಯ್ ಮುಂತಾದ ಸಮಾಜ ಸುಧಾರಕರ ಕೈಯಲ್ಲಿ ಒಂದಷ್ಟು ಕಾಲವಾದರೂ ಈ ದೇಶದ ಸಾಮಾಜಿಕ ಸ್ಥಿತಿಗತಿಯ ಹೊಣೆ ಮತ್ತು ಅಧಿಕಾರವಿದ್ದುದರಿಂದ ಕೆಲವು ಮಹಾನ್ ಗೌರವಗಳಿಂದಲಾದರೂ ಈ ದೇಶದ ಮಹಿಳೆ ಮತ್ತು ಮುಖ್ಯವಾಗಿ ಭಾರತ ಮಾತೆ ಪಾರಾದಳು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಒನಕೆ ಓಬವ್ವ ಹೀಗೆ ಉದ್ದುದ್ದ ಪಟ್ಟಿ ಬೆಳೆದಿತ್ತಾದರೂ ಅವರ ಬದುಕಿನ ಸಂದರ್ಭದಲ್ಲಿ ಅವರು ಅನುಭವಿಸಿರಬಹುದಾದ ಒಳತೋಟಿ ಅರ್ಥವಾಗಬೇಕಾದರೆ ಇತ್ತೀಚೆಗೆ ‘ಪದ್ಮಾವತಿ’-‘ಪದ್ಮಾವತ್’ ಆದ ವಿಕಾಸವನ್ನು ಗಮನಿಸಬೇಕು. ಮಾನಭಂಗವಾಗುವ ಅರ್ಹತೆ ಮಹಿಳೆಯರಿಗಷ್ಟೇ ಎಂಬ ರೀತಿಯಲ್ಲಿ ಈ ದೇಶದ ಪುರುಷರು ವರ್ತಿಸುವಾಗ ಯಾವ ಧರ್ಮವೂ ಮಹಿಳೆಯರನ್ನು ಕಾಪಾಡದೆಂಬುದು ಅರ್ಥವಾಗುತ್ತದೆ. ಅದೊಂದೇ ಈಗ ಭ್ರಷ್ಟಾಚಾರದ ಹಾಗೆ ಜಾತ್ಯತೀತವಾಗಿ, ಧರ್ಮಾತೀತವಾಗಿ ನಡೆಯುತ್ತಿದೆ. ಹಿಂದೆಲ್ಲ ಮಹಿಳೆಗೆ ಸಂಬಂಧಿಸಿದ ಅಪರಾಧಗಳು ನಡೆಯುತ್ತಿರುತ್ತಿರಲಿಲ್ಲ ವೆಂದಲ್ಲ. ಪ್ರಾಯಃ ಗುಟ್ಟಾಗಿ ನಡೆಯುತ್ತಿದ್ದವು. ಅವು ಬಹಿರಂಗಗೊಂಡರೆ ಆ ವ್ಯಕ್ತಿ ಅಷ್ಟೇ ಬಹಿರಂಗವಾಗಿ ಅವಮಾನಕ್ಕೊಳಗಾಗುತ್ತಿದ್ದ. ಪುರುಷರ ಗರ್ವ ಎಷ್ಟೇ ಇರಲಿ ಸಿಕ್ಕಿಬೀಳುವವರೆಗೆ ಯಾರೂ ಕಳ್ಳರಲ್ಲ ಎಂಬ ಸಿದ್ಧಾಂತವಿದ್ದಾಗಲೂ ಒಮ್ಮೆ ಸಿಕ್ಕಿಬಿದ್ದರೆ ಬದುಕಿಡೀ ತಲೆತಗ್ಗಿಸಿನಡೆಯ ಬೇಕಾಗಿತ್ತು.

ಇಂದಿಗೂ ಮುಸ್ಲಿಮ್ ರಾಷ್ಟ್ರಗಳಲ್ಲಿ ಮಹಿಳೆಯ ಮೇಲಣ ಅಪರಾಧಗಳು ತೀವ್ರತರವಾಗಿ ಪರಿಗಣಿಸಲ್ಪಡುತ್ತವೆ. ಆದರೆ ದುರದೃಷ್ಟವಶಾತ್ ಅಲ್ಲಿ ಹೀಗೆ ಅಪರಾಧಕ್ಕೆ ಬಲಿಯಾದ ಮಹಿಳೆಯೂ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳೆ. ಇದರ (ಕು)ತರ್ಕ ಅರ್ಥವಾಗುವುದಿಲ್ಲ. ಮಹಿಳೆಯ ಕುರಿತ ಅಪರಾಧವೆಂದರೆ ದೈಹಿಕವೆಂದಷ್ಟೇ ಬಗೆದರೆ ತಪ್ಪು. ಎಲ್ಲ ರೀತಿಯ- ಮಾನಸಿಕ, ಬೌದ್ಧಿಕ- ಅವಮಾನಗಳೂ ಮಹಿಳೆಯ ಕುರಿತ ಅಪರಾಧಗಳೇ. ನಮ್ಮ ಸಮಾಜದಲ್ಲಿ ಪುರುಷರಿಗೂ ಮಹಿಳೆಯರಿಗೂ ಅನಾದಿ ಕಾಲದಿಂದಲೂ ಲಜ್ಜೆ, ಗೌರವ ಮುಂತಾದ ವಿಚಾರಗಳಲ್ಲಿ ಭಿನ್ನ ಅಳತೆಗೋಲುಗಳಿವೆ. ಒಂದು ಸರಳ ಉದಾಹರಣೆಯನ್ನು ನೀಡುವುದಾದರೆ ಗಂಡಸರು ಹಗಲಿರುಳೆನ್ನದೆ ಎಲ್ಲಿ ಬೇಕಾದರೂ ಶೌಚ ಮಾಡಬಹುದಾಗಿತ್ತು; ಮಾಡಬಹುದಾಗಿದೆ. ಆದರೆ ಅಂತಹ ಸಂದರ್ಭಗಳಲ್ಲಿ ಮಹಿಳೆಯರು ಮಾತ್ರ ಯಾರಿಗೂ ಕಾಣದಂತೆ ತಮ್ಮ ಶೌಚೋತ್ತಡಗಳನ್ನು ನಿವಾರಿಸಿಕೊಳ್ಳ ಬೇಕಾಗುತ್ತದೆ. (ಇತ್ತೀಚೆಗೆ ಬಿಡುಗಡೆಯಾದ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನೆಮಾ ಈ ಸಮಸ್ಯೆಯನ್ನು ಚಿತ್ರಿಸಿದೆ.)

ಇಂದಿಗೂ ಪ್ರವಾಸ ಹೋಗುವ ಮಂದಿಯನ್ನು ನೋಡಿ: ನಗರ-ಹಳ್ಳಿವಾಸಿಗಳೆನ್ನದೆ ಗಂಡಸರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ತಮ್ಮ ಬಾಧೆಯನ್ನು ಪರಿಹರಿಸಿಕೊಂಡರೆ ಮಹಿಳೆಯರು ನಾಚಿಕೊಂಡು ದಿನವಿಡೀ ಕುಗ್ಗಿ ಕೂರುವುದನ್ನು ನೋಡಬಹುದು. ಕೆಲವೇ ಕೆಲವು ಮಂದಿ ಆದದ್ದಾಗಲೆಂದು ರಸ್ತೆಯಿಂದ ಕಾಡಬದಿಗೆಲ್ಲಾದರೂ ಹೋಗಿ ಈ ಕಂಟಕದಿಂದ ಪಾರಾಗುತ್ತಾರೆ. ಅಥವಾ ತಂಡದಲ್ಲಿ ಸಜ್ಜನರಿದ್ದರೆ ಸರಿಯಾದ ಟಾಯ್ಲೆಟ್ ವ್ಯವಸ್ಥೆಯಿರುವ ಹೊಟೇಲುಗಳಲ್ಲಿ ನಿಲ್ಲಿಸುತ್ತಾರೆ. ಬಸ್‌ಗಳಲ್ಲಿ, ಇನ್ನಿತರ ಮೋಟಾರು ವಾಹನಗಳಲ್ಲಿ, ರೈಲುಗಳಲ್ಲೂ ಮಹಿಳೆಯರಿಗೆ ಸರಿಯಾದ ಆಸನ ವ್ಯವಸ್ಥೆಯಿರುವುದಿಲ್ಲ. ‘ಮಹಿಳೆಯರಿಗಾಗಿ’ ಎಂದು ಮೀಸಲಾಗಿಟ್ಟ ಸೀಟುಗಳಲ್ಲೂ ಪುರುಷರೇ ಕುಳಿತುಕೊಳ್ಳುವುದನ್ನು, ಮಹಿಳೆಯರು ಬಂದಾಗಲೂ ಅವನ್ನು ಬಿಟ್ಟುಕೊಡದಿರುವುದನ್ನು ಮತ್ತು ಇಂತಹ ತಾರತಮ್ಯವನ್ನು ನೋಡಿಯೂ ಸುಮ್ಮನಿರುವ ಇತರ ಪ್ರಯಾಣಿಕರನ್ನು ಮಾತ್ರವಲ್ಲ, ಚಾಲಕ-ನಿರ್ವಾಹಕರನ್ನೂ ಕಾಣುತ್ತೇವೆ. ಬಸ್‌ನಲ್ಲಿ ಕೈ-ಕಾಲುಗಳನ್ನು ಅಡ್ಡ ಹಾಕಿ ಮಹಿಳೆಯರನ್ನು ಕುಹಕದಿಂದ ಕಾಡುವುದು ಸರ್ವೇಸಾಮಾನ್ಯ. ಕ್ಯೂವಿನಲ್ಲಿ ಮಧ್ಯೆ ಮಹಿಳೆ ಸಿಕ್ಕರಂತೂ ಆಕೆಯ ಮಾನ ಅನಿವಾರ್ಯವಾಗಿ ಮೂರಾಬಟ್ಟೆಯಾಗುವುದು ಸಹಜವೆಂಬಂತೆ ಪುರುಷರು ಸ್ವೀಕರಿಸಿರುವುದು ದೊಡ್ಡ ದುರಂತ. ಈಗ ಈ ಕಾಯಿಲೆ ಗಣ್ಯರ ಪ್ರಯಾಣ ಮಾಧ್ಯಮವೆನಿಸಿದ ವಿಮಾನಗಳಿಗೂ ವ್ಯಾಪಿಸಿದೆ.

ಇದು ವಿದ್ಯಾವಂತ-ಅವಿದ್ಯಾವಂತ, ಮತ್ತು ಹಳ್ಳಿ-ಪೇಟೆ, ಎಂಬ ಭೇದವನ್ನು ಮೀರಿ ಬೆಳೆದಿದೆ. ಸಿನೆಮಾಗಳಲ್ಲಿ ಇಂತಹ ಖಳರನ್ನು ಭೇಟೆಯಾಡುವ ನಾಯಕರನ್ನು ಮತ್ತು ಅಂತಹ ವೀರತ್ವವನ್ನು ಮೆಚ್ಚಿ ಆತನಿಗೊಲಿಯುವ ನಾಯಕಿಯನ್ನು ಕಾಣುತ್ತೇವಾದರೂ ಅಂತಹ ಚಿತ್ರಗಳು ಬೆಳ್ಳಿತೆರೆಯಿಂದೀಚೆಗೆ ಇಳಿಯುವುದೇ ಇಲ್ಲ. ಆದರೆ ಮಹಿಳೆಯೊಬ್ಬಳ ಮಾನಭಂಗವನ್ನು ರಾಜಕಾರಣಿಗಳು, ಗೂಂಡಾಗಳು, ಮಠಾಧೀಶರು, ಸನ್ಯಾಸಿಗಳು, ಸಮಾಜಸೇವಕರೆನಿಸಿಕೊಂಡವರು ಮಾಡುವ ದೃಶ್ಯಗಳು ಅದು ಹೇಗೋ ನಿಜಜೀವನಕ್ಕೆ ಪ್ರವೇಶಿಸಿವೆ. ಸೃಜನಶೀಲತೆಯ, ಕಲ್ಪನೆಯ, ಎಲ್ಲ ಮಾರ್ಗಗಳನ್ನು ನಾವಿಂದು ನೈಜವಾಗಿ ಕಾಣಬಹುದು. ನಿರ್ಭಯಾಳ ಪ್ರಕರಣ ಮತ್ತು ಅದಾದ ಆನಂತರದ ಪ್ರತಿಭಟನೆ ಹಾಗೂ ಕಾನೂನು ಇದಕ್ಕೆ ಪ್ರತಿಸ್ಪಂದಿಸಿದ ರೀತಿ ಇವನ್ನು ಗಮನಿಸಿದಾಗ ಇನ್ನು ಮುಂದೆ ಯಾವ ಹೆಣ್ಣಿಗೂ ಅನ್ಯಾಯವಾಗುವುದಿಲ್ಲ ಮತ್ತು ಮಹಿಳೆಯರು ಮಧ್ಯರಾತ್ರಿಯೂ ನಿರಾತಂಕವಾಗಿ ನಡೆಯಬಹುದು ಎಂದು ಅದೆಷ್ಟೋ ಜನರು ಕಲಿಸಿಕೊಂಡದ್ದು ಸುಳ್ಳಲ್ಲ.

ಆದರೆ ಕಾಲಾನುಕಾಲಕ್ಕೆ ಚುನಾವಣೆಗಳು ನಡೆಯುವ ಪ್ರಜಾತಂತ್ರದಲ್ಲಿ ಅಪರಾಧಗಳೂ ಅದಕ್ಕಿಂತ ವೇಗವಾಗಿ ಮರುಕಳಿಸುತ್ತವೆ ಮತ್ತು ಹೊಸಬಗೆಯ ತಂತ್ರದೊಂದಿಗೆ ಬೀದಿಗಿಳಿಯುತ್ತವೆ. ಅಪರಾಧಿಗಳು ಸಹಜವಾಗಿಯೇ ಕ್ರೂರ ಮನಸ್ಸುಳ್ಳವರು. ಮಾನಸಿಕ ವ್ಯಭಿಚಾರದ ವ್ಯಕ್ತಿಗಳು ಅಸಂಖ್ಯವಿರಬಹುದು; ಅದನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಸುವ ಧೈರ್ಯ ಅವರಿಗಿರುವುದಿಲ್ಲ. ಆದ್ದರಿಂದ ಅವರು ಸಜ್ಜನರು. ಆದರೆ ತಮ್ಮ ವಿಕೃತಿಯನ್ನು ಏನೇ ಬರಲಿ ಪ್ರದರ್ಶಿಸಿಯೇ ಬಿಡುತ್ತೇನೆಂಬ ಇರಾದೆಯುಳ್ಳ ವ್ಯಕ್ತಿಯು ಎರಡು ಕಾಲುಗಳಲ್ಲಿ ನಿಂತರೂ ನಾಲ್ಕು ಕಾಲುಗಳ ದುಷ್ಟಮೃಗಗಳಿಗಿಂತಲೂ ಕೀಳಾಗಿ ವರ್ತಿಸುತ್ತಾನೆ. ಆತನಿಗೆ ತನ್ನ ಬಲಿಪಶುವಿಗಾಗುವ ಮಾತ್ರವಲ್ಲ ತನಗೂ ಆಗಬಹುದಾದ ಯಾವ ದುಷ್ಪರಿಣಾಮಗಳ ಭಯವೂ ಇರುವುದಿಲ್ಲ. ಸೀತಾಪಹರಣವಾದಾಗ ಆಕೆಯ ಮಾನಹರಣಕ್ಕೆ ರಾವಣನು ಪ್ರಯತ್ನಿಸಲಿಲ್ಲವೆಂಬುದು ಪುರಾಣದಲ್ಲಿದೆ. ಇದಕ್ಕೆ ರಾವಣನಿಗೆ ಶಾಪವಿದ್ದುದೇ ಕಾರಣವೆಂಬುದೂ ಪೌರಾಣಿಕ ಸತ್ಯ. ಇಂದ್ರನು ಅಹಲ್ಯೆಯನ್ನು ಕೆಡಿಸುವುದಕ್ಕೆ ಗೌತಮನ ರೂಪದಲ್ಲಿ ಹೋದನೆಂದು ಪುರಾಣ ವ್ಯಾಖ್ಯಾನಿಸುತ್ತದೆ. ತುಳಸೀ ಜಲಂಧರ ಕಥೆ ಲೋಕವಿಖ್ಯಾತ.

ತುಳಸಿಯ ಪಾತಿವ್ರತ್ಯವನ್ನು ಕೆಡಿಸಲು ಸ್ವತಃ ಭಗವಂತನೇ ಮುಂದಾದ ಉದಾಹರಣೆ ಅದು. ಮಹಾಭಾರತದಲ್ಲಿ ಕುರುರಾಜಾಸ್ಥಾನದಲ್ಲಿ ದ್ರೌಪದಿಯ ವಸ್ತ್ರಾಪಹಾರದ ಪ್ರಸಂಗವಿದೆ. ನಾರಿಯರ ಸೀರೆ ಕದ್ದು ಅವಮಾನಿಸಿಯೂ ನಾಯಕನಾದ, ದೇವನಾದ ಕೃಷ್ಣ ಅದೇ ಬಟ್ಟೆಗಳನ್ನು ದ್ರೌಪದಿಗೆ ನೀಡಿ ಆಕೆಯ ಮಾನ ಕಾಪಾಡಿದನೆಂದು ರೂಪಕವನ್ನು ಸೃಷ್ಟಿ ಮಾಡಿ ಆತನ ಮಾನವನ್ನೂ ಕಾಪಾಡಲಾಗಿದೆ. ಚರಿತ್ರೆಯಲ್ಲಿ ಯಾವುದೇ ಅರಸನ ಮಾನದ ಅಳತೆಗೋಲು ಆತ ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಿದ್ದ ಎಂಬುದರಿಂದ ಆಗುತ್ತಿತ್ತು. ಮಹಿಳೆಯರನ್ನು ಗೌರವಿಸಿದರೆ ದೇವತೆಗಳು ಸಂತೋಷಪಡುತ್ತಿದ್ದರೆಂಬುದು ನಮ್ಮ ಹೆಮ್ಮೆಯ ಸುಭಾಷಿತವೇ ಹೊರತು ವಾಸ್ತವ ಹಾಗಿರಲಿಲ್ಲವೆಂಬುದೂ ಅಷ್ಟೇ ಸತ್ಯ.

ಆದರೆ ಎಲ್ಲ ಕಾಲದಲ್ಲೂ ಮಹಿಳೆಯನ್ನು ಸೌಂದರ್ಯದ ಮತ್ತು ಯಾರದೋ ಅಭಿಮಾನದ ಸಂಕೇತವಾಗಿ ನೋಡಲಾಗುತ್ತಿತ್ತು. ಅದನ್ನು ಭಂಗಗೊಳಿಸಬೇಕಾದರೆ ಆಕೆಯ ಮಾನಹರಣವನ್ನು ಮಾಡಬೇಕಾಗಿತ್ತು. ಮಾನಹರಣ ಆಯಿತೋ ಇಲ್ಲವೋ ಮುಖ್ಯವಲ್ಲ; ಮಾನವಂತೂ ಹೋಯಿತು. ಇಂತಹ ಅನೀತಿಯನ್ನು ರಾಜಕಾರಣದ ಯುಕ್ತಿಯಾಗಿಯೂ ಬಳಸಲಾಗುತ್ತಿತ್ತು. ಹೆಣ್ಣಿಗೆ ಹೆಣ್ಣೇ ಶತ್ರುವಾದ ನಿದರ್ಶನಗಳು ಬೇಕಷ್ಟಿವೆ. ಗೂಢಚರ್ಯೆಯಲ್ಲಿ ಹೆಣ್ಣುಗಳನ್ನು ಲೈಂಗಿಕ ಸಂಬಂಧಕ್ಕೆ ಮನವೊಲಿಸಿ ಶತ್ರುದೇಶದ ಮಾಹಿತಿಗಳನ್ನು ಪಡೆಯುವ ತಂತ್ರಗಳಿದ್ದವು. ತಮ್ಮ ಸಂಸಾರದಿಂದ ದೂರವಿರುವ ಸೈನಿಕರನ್ನು ತೃಪ್ತಿಪಡಿಸಲು ಮಹಿಳೆಯರನ್ನು ಅಪಹರಿಸಿ ಲೈಂಗಿಕ ಗುಲಾಮರನ್ನಾಗಿ ಮಾಡಿದ್ದು ಚರಿತ್ರೆಯುದ್ದಕ್ಕೂ ನಡೆದು ಬಂದು ವರ್ತಮಾನಕ್ಕೂ ಚಾಚಿದೆ. ಆಕೆಗೂ ಒಂದು ಮನಸ್ಸಿದೆ, ಆಕೆಗೂ ಇಷ್ಟಾನಿಷ್ಟಗಳಿವೆ ಎಂಬುದನ್ನು ಗಮನಿಸಲು ಸಮಾಜಕ್ಕೆ ವ್ಯವಧಾನವೇ ಇರಲಿಲ್ಲವೇನೋ ಎಂದು ತೋರಿಸುವ ಮಾರ್ಮಿಕವಾದ ಉದಾಹರಣೆಗಳಿವೆ.

ರಕ್ತಸಂಬಂಧ ಹೆಣ್ಣಿನ ಮೂಲಕವೇ ಬಂದಿದ್ದರೂ ಆಕೆಯ ರಕ್ತಕ್ಕೆ ಬೆಲೆಯೇ ಇಲ್ಲವೇನೋ ಎಂಬಂತಿದೆ ಆಕೆಯ ಸ್ಥಿತಿಗತಿ-ಇಂದಿಗೂ. ಕವಿಯೊಬ್ಬಳು ಹೇಳಿದಂತೆ ರಕ್ತ ಸಂಬಂಧ ಎಂದರೆ- ‘‘ನನಗದು ಗೊತ್ತಿದೆ; ನಾನು ಹೆಣ್ಣು’’ ಎಂದು ಸದಾ ಜಾಗೃತಾವಸ್ಥೆಯಲ್ಲಿ ಎಲ್ಲ ಹೆಣ್ಣುಗಳೂ ಅಕ್ಕಮಹಾದೇವಿಯಷ್ಟು ಧೈರ್ಯದಲ್ಲಿ ಹೇಳುವ ಹಗಲು ಇನ್ನೂ ಬಂದಿಲ್ಲವೇನೋ? ಇನ್ನೂ ಕಟುವಾಗಿ ಹೇಳಬೇಕೆಂದರೆ- Men can't be raped ಎಂಬುದನ್ನು ಸುಳ್ಳು ಮಾಡುವುದು ಹೇಗೆ? ಈ ಬಗ್ಗೆ ಮಹಿಳೆಯರು ಎಂದಿಗಿಂತ ಹೆಚ್ಚು ಕೆಚ್ಚನ್ನು, ಸಾಮಾಜಿಕ ವಾತಾವರಣವನ್ನು ಸೃಷ್ಟಿಸಬೇಕು: ಇದು ತನ್ನ ಹಣೆಬರೆಹವೆಂಬಂತೆ ಕಾಣುವುದನ್ನು, ಅಥವಾ ತಾನು ಪ್ರತಿಭಟಿಸಿದರೆ ಪರಿಣಾಮ ನೆಟ್ಟಗಾಗದೆಂದು ಆತಂಕಿಸುವುದನ್ನು ನಿಲ್ಲಿಬೇಕು. ಕಾಡಿಗೊಯ್ಯಲ್ಪಟ್ಟ ಸೀತೆ ತನ್ನ ದೌರ್ಭಾಗ್ಯವನ್ನು ಹಳಿದುಕೊಂಡು ‘‘ಕಡೆಗೂ ಕರುಣಾಳು ರಾಘವನಲಿ ತಪ್ಪಿಲ್ಲ’’ ಎಂಬುದನ್ನು ನಿಲ್ಲಿಸಬೇಕು. ಆಗ ಮಾತ್ರ ಶ್ರೀರಾಮನೂ ಶ್ರೀಕೃಷ್ಣನೂ ಎಚ್ಚೆತ್ತುಕೊಂಡಾರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top