ಓದು-ಮರು ಓದು | Vartha Bharati- ವಾರ್ತಾ ಭಾರತಿ

--

ಓದು-ಮರು ಓದು

ಈಚೆಗೆ ಇಂದಿನ ತಲೆಮಾರಿನ ಸಾಹಿತಿಗಳ ಬರಹಗಳ ಓದು-ಮರು ಓದು ಒಂದು ಗೀಳಿನಂತೆ ನಡೆಯುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಂತೂ ನೀಲಿಗಣ್ಣಿನ ಸಾಹಿತಿಗಳ ಬರೆಹದ ಕುರಿತು ಆಗಾಗ ಓದು-ಮರುಓದು ನಡೆಯುತ್ತದೆ. ಗುಣಮಟ್ಟ ಚೆನ್ನಾಗಿಲ್ಲದಾಗ ಓದುವುದೇ ಕಷ್ಟ; ಮರು ಓದಿಗೆ ಎಲ್ಲಿದೆ ಅವಕಾಶ? ಯಾರಿಗಾಗಿ ಮರು ಓದು? ಇದರಿಂದ ಪ್ರಶಸ್ತಿಗಳ ಸಾಧ್ಯತೆ ಹೆಚ್ಚಿದರೂ ಸಾಹಿತ್ಯಸಾಧನೆ ಹೆಚ್ಚದು.


ನನ್ನ ಮತ್ತು ನನ್ನ ಆನಂತರದ ತಲೆಮಾರಿನ ಬಹುಪಾಲು ಸಾಹಿತಿಗಳಿಗೆ ಬೇಸರವುಂಟುಮಾಡುವ ಒಂದು ಮಾತನ್ನು ನಾನು ಹೇಳಲೇಬೇಕಿದೆ. ಅದೆಂದರೆ ನನಗೆ ಇತ್ತೀಚೆಗಿನ ಬಹಳಷ್ಟು ಬರಹಗಳು- ಗದ್ಯವೇ ಇರಲಿ, ಪದ್ಯವೇ ಇರಲಿ, ಅಥವಾ ವಿಮರ್ಶೆಯಾಗಲಿ ರುಚಿಗೆಟ್ಟ ಅಡುಗೆಯಂತಿವೆ. ಇತ್ತ ಪಾಂಡಿತ್ಯವಾಗಲಿ, ಅತ್ತ ಪ್ರತಿಭೆಯಾಗಲಿ, ಸಮಪಾಕದಲ್ಲಿಲ್ಲದೇ ಹೋದಲ್ಲಿ ಉರಿಯುವ ಉಂಡೆಯಂತೆ ಕತ್ತಲಿನಲ್ಲಿ ಮಾತ್ರ ಕಾಣುವ ಮಿಣುಕು ಹುಳದ ದೀಪದಂತೆ, ಕಂಡರೂ ಅದರಿಂದ ಯಾವ ಪ್ರಯೋಜನವನ್ನೂ ಹೊಂದೆವು ಮತ್ತು ಅದರ ಗೊತ್ತುಗುರಿಯನ್ನು ಕಾಣಲಾರೆವು. ಇಂದಿನ ತಲೆಮಾರಿನ ಬರಹಗಳ ಬಗ್ಗೆ ನನಗೆ ನನ್ನದೇ ಆದ ಕೆಲವು ಅನುಮಾನಗಳಿವೆ. ಕಳೆದ ಸುಮಾರು ಒಂದು ಶತಮಾನದ ಆಧುನಿಕ ಕನ್ನಡ ಸಾಹಿತ್ಯದ ಓಟದಲ್ಲಿ ಇದನ್ನು ಸೂಕ್ಷ್ಮವಾಗಿ ಹೀಗೆ ಹೇಳಬಹುದು:

ಕೆಲವು ಕವಿತೆಗಳು ಏನನ್ನೋ ಹೇಳಲು ಹೊರಟು ಅವುಗಳಲ್ಲಿ ಒಂದೆರಡು ಫ್ಲಾಷ್‌ಗಳು ಅಲ್ಲೋ ಇಲ್ಲೋ ಮಿನುಗಿದರೆ ಸಾಕು ಈ ಲೋಕದಿಂದ ಹೊರಗಿನ ಇನ್ನೊಂದು ಲೋಕವನ್ನು ಕಂಡಂತೆ ಹೊಗಳಿಕೆಯ ಸುರಿಮಳೆಯಾಗುತ್ತದೆ. ಇಡೀ ಕವಿತೆಯು ಸಾವಯವ ಶಿಲ್ಪದ ಸಮಗ್ರೀಕರಣವಾಗಲೇ ಬೇಕಿಲ್ಲ; ಏಕೆಂದರೆ ಅದೊಂದೇ ಕಾವ್ಯಮೀಮಾಂಸೆಯ ಜಗತ್ತಲ್ಲ. ಆದರೆ ಒಂದು ಕವಿತೆಯು ಏನು ಹೇಳುತ್ತದೆಯೆಂಬುದನ್ನು ಕಾಣಲಾರದೆ ‘ಅಂಧಕ ಗಜ ನ್ಯಾಯ’ದಂತೆ (ಇದೊಂದು ಲೌಕಿಕ ನ್ಯಾಯ; ಕುರುಡರು ಆನೆಯ ಒಂದೊಂದು ಭಾಗವನ್ನು ಸ್ಪರ್ಷಿಸಿ ಆನೆ ಹಗ್ಗದಂತಿದೆ, ಆನೆ ಹಾವಿನಂತಿದೆ, ಆನೆ ಗೋಡೆಯಂತಿದೆ, ಆನೆ ಕಂಬದಂತಿದೆ ಎಂದು ವರ್ಣಿಸಿದಂತೆ ಎಂದರ್ಥ) ಒಬ್ಬೊಬ್ಬರೂ ಒಂದೊಂದು ಸಾಲನ್ನು ಕಂಡು ಅಥವಾ ಕಾಣದೆ ‘‘ವಾಹ್, ತಾಜ್ ಬೋಲಿಯೆ!’’ ಎಂದು ಉದ್ಗರಿಸುವುದನ್ನು ಕಂಡಾಗ ಇದು ಒಟ್ಟಾರೆ ಏನು ಹೇಳಿದೆ ಮತ್ತು ಇದಿಷ್ಟೇ ಒಂದು ಸುಂದರ ಸೃಷ್ಟಿಯಾಗಬಹುದೇ ಎಂದು ಪ್ರಶ್ನಿಸಬೇಕಿದೆ.

ಒಂದು ಕವಿತೆಯು ನಮ್ಮನ್ನು ಕಾಡಬೇಕು. ಓದಿ ಮುಗಿದ ಮೇಲೂ ಇಲ್ಲಿ ಮಹತ್ತಾದ್ದೊಂದು ಇದೆ, ಅದನ್ನು ಹಿಡಿಯುವ ತನಕ ಓದಬೇಕು ಎಂದನ್ನಿಸಬೇಕು. ಬೇಂದ್ರೆಯವರ ‘ಬೆಳಗು’ ಕವಿತೆ ಇಂತಹ ಮೋಡಿಯ ಪರಿಣಾಮವನ್ನು ಮಾಡಿತ್ತು. ಅವರೇ ಅಂತಹ ಇನ್ನೊಂದು ಕವಿತೆಯನ್ನು ಬರೆಯಲಾರರು ಅನ್ನಿಸುವಂತಿತ್ತು. ಏಕೆಂದರೆ ಇದು ಬರಿ ಬೆಳಗಲ್ಲೋ ಅಣ್ಣ! ಬೇಂದ್ರೆಯವರ ಇನ್ನಷ್ಟು ಪದ್ಯಗಳು ಗಂಭೀರ ವಿಮರ್ಶೆಗೊಳಗಾದವು; ಬುದ್ಧಿಯನ್ನು ಸಾಣೆಗಿಟ್ಟವು. ಆದರೆ ಬೆಳಗು ಮಾತ್ರ ಆನಂತರದ ಎಲ್ಲ ಪದ್ಯಗಳನ್ನು ತಾನು ಆಗಲೇ ಹೇಳಿದ್ದೇನೆ ಎಂದು ಗಿಡಗಂಟೆಗಳ ಕೊರಳೊಳಗಿಂದ ಹಾಡುತ್ತಿತ್ತು. ಅಡಿಗರ ‘ಮೋಹನ ಮುರಲಿ’ ಇದೇ ಬೆರಗನ್ನು ಉಂಟುಮಾಡಿತ್ತು. ಅವರೇ ಅಂತಹ ಪದ್ಯವನ್ನು ಮತ್ತೆ ಬರೆಯುವ ಸಾಹಸವನ್ನು ಮಾಡಲಿಲ್ಲ. ಅವರ ವಿಕಾಸ ಗಂಭೀರವಾಗಿ ಹೊಸಹಾದಿಯಲ್ಲಿ ಮುನ್ನಡೆದರೂ ಮೋಹನ ಮುರಲಿಯ ಸ್ನಿಗ್ಧ ಮುಟ್ಟುವಿಕೆ, ಕನಸಿನಲ್ಲಿ ಎಲ್ಲಿಗೋ ಹೋಗುವಂತಹ ಒಂದು ನಿಲ್ದಾಣವಲ್ಲ-ನಿಲ್ದಾಣವನ್ನು ಕಾಣುವ ಬಯಕೆಯನ್ನು ಉದ್ದೀಪನಗೊಳಿಸುವ ಸಾಲುಗಳು ಮರೆತೇನೆಂದರೆ ಮರೆಯಲಿ ಹೇಗೆ ಎಂಬಂಥದ್ದು. ಬೇಂದ್ರೆ, ಅಡಿಗ ಮಾತ್ರವಲ್ಲ, ಪುತಿನ, ಕೆಎಸ್‌ನ ಅನಂತರದ ಜಿಎಸ್‌ಎಸ್, ಕಣವಿ, ಎಕ್ಕುಂಡಿ, ನಿಸಾರ್ ಅಹಮದ್, ಹೀಗೆ ಇತರ ಸಾಧಕರನ್ನೂ ಇಲ್ಲಿ ನೆನಪಿಸಿಕೊಳ್ಳಲೇಬೇಕು.

ಇಂದಿನ ತಲೆಮಾರಿನಲ್ಲಿ ಆನಂದ ಝುಂಜರವಾಡ, ಎಸ್. ಮಂಜುನಾಥ್, ಜಿ.ಕೆ. ರವೀಂದ್ರ ಕುಮಾರ್ ಈ ಕೆಲವು ಹೆಸರುಗಳನ್ನು ಹೊರತುಪಡಿಸಿದರೆ ಬೇರೆ ಹೆಸರುಗಳು ಫಳಕ್ಕನೆ ನೆನಪಾಗುವುದಿಲ್ಲ. ಪ್ರಯತ್ನಪಟ್ಟರೆ ಇನ್ನೊಂದೆರಡು ಹೆಸರುಗಳು ನೆನಪಾದಾವೇನೋ?

ಕನ್ನಡದ ಗದ್ಯ ಬರಹಗಳು ಒಂದು ಶತಮಾನಕ್ಕಿಂತ ತುಸು ಹೆಚ್ಚು ಇತಿಹಾಸವನ್ನು ಹೊಂದಿದಂಥವು. ಆದರೆ ಅವು ಆಗಲೇ ಕಂಠಮಟ್ಟ ತುಂಬಿಕೊಂಡಂತೆ ಇನ್ನೇನು, ಮುಂದೇನು ಎಂಬ ಹಾಗಿವೆ. ಕಾದಂಬರಿಗಳು ಮೊದಲು ಬಂದವು; ಕಥೆಗಳು ಆನಂತರ ಬಂದವು. ಆರಂಭದ ದಿಸೆಯಲ್ಲಿ ಬಂದ ಕಾದಂಬರಿಗಳು ರಮ್ಯತೆಯನ್ನು, ಆದರ್ಶವನ್ನು, ಅಂತಃಕರಣವನ್ನು ತುಂಬಿಕೊಂಡವು. ಯಾವುದೇ ಬಗೆಯ ಕಾದಂಬರಿಗಳಾದರೂ ಓದಿಸಿಕೊಳ್ಳುವುದೇ ಮುಖ್ಯವೆಂಬ ಹಾದಿಯನ್ನಳವಡಿಸಿಕೊಂಡವು. ಇಂದಿರಾಬಾಯಿಯಿಂದ ಮೊದಲ್ಗೊಂಡು ಈ ತಲೆಮಾರಿನ ವರೆಗೆ ಕುವೆಂಪು, ಕಾರಂತರಂತಹ ಮತ್ತು ರಾವಬಹದ್ದೂರ, ಚಿತ್ತಾಲರಂತಹ ಅಪಾರ ಅನುಭವದ ವಿವಿಧ ಮಜಲುಗಳನ್ನು ದಾಟಿ ಬಂದವಾದರೂ ಮತ್ತೆ ‘ಬೆಟ್ಟದ ಜೀವ’ವನ್ನಾಗಲೀ, ‘ಕಾನೂರು ಸುಬ್ಬಮ್ಮ ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳ’ನ್ನಾಗಲಿ ಕಾಣಬೇಕಾದರೆ ಶತಮಾನಗಳೇ ಬೇಕಾದಾವೇನೋ?. ನಂತರ ಬಂದ ಕಥಾ ಸಂಪ್ರದಾಯವು ಮನಮುಟ್ಟುವ ಮತ್ತು ತಳಮಳಗೊಳಿಸುವ ವಸ್ತು ವಿಶೇಷಗಳನ್ನು ಹೊಂದಿ ಹೊಸ ಜಗತ್ತನ್ನು ಪರಿಚಯಮಾಡಿದವು.

ಅವು ಗಾತ್ರದಲ್ಲಿ ಸೀಮಿತವಾಗಿದ್ದುದರಿಂದ ಒಬ್ಬೊಬ್ಬನ ಅನುಭವವೂ ದ್ರವ್ಯವಾಗಿ ಒಂದೊಂದು ಕಥೆಯಾಗಲು ಸಾಧ್ಯವಾಯಿತು. ‘ಧನಿಯರ ಸತ್ಯನಾರಾಯಣ’ದಂತೆ, ಸಾಂಪ್ರದಾಯಿಕ ಒಡಲಿನೊಳಗೆ ಜೀವನ ಪ್ರೀತಿಯನ್ನು ನೀಡುವ ಮಾಸ್ತಿಯವರ ಕಥೆಗಳಂತೆ, ಖಾಸನೀಸರ ‘ತಬ್ಬಲಿಗಳು’ ಕಥೆಯಂತೆ ತನ್ನೊಡಲನ್ನು ಒಡೆದು ಹೊಸ ಸೃಷ್ಟಿಯನ್ನು ತರುವ ಸಾಧ್ಯತೆಯನ್ನು ಕಾಣಲಾಗಲಿಲ್ಲ. ಮುಂದೆ ಅದೇ ಪರಂಪರೆಯ ಅಥವಾ ಅದರಿಂದ ಹೊರಟ ಹಿಳ್ಳುಗಳಂತಿರುವ ಕಥೆಗಳು ಬಂದವು; ಪರಿಣಾಮಕಾರಿ ಅನುಭವವನ್ನು ನೀಡಿದವು. ಕಳೆದ ಕೆಲವು ದಶಕಗಳಲ್ಲಿ ಕಥಾಸಮೃದ್ಧಿ ಕನ್ನಡದ ಅಂತಲ್ಲ ಭಾರತೀಯ ಸರ್ವಭಾಷಾ ಲಕ್ಷಣವಾಯಿತು. ಆದರೆ ಬರಬರುತ್ತ ಒರತೆ ಬತ್ತಿದಾಗ ಬರುವ ಮಣ್ಣಿನ ಬಣ್ಣದ ಕಥೆಗಳಿವೆಯೇ ಹೊರತು ತಿಳಿ ನೀರಿನ ಸಂಗ್ರಹದಂತೆ ಕಾಣುವ ಕಥೆಗಳು ಅಲ್ಲೊಂದು ಇಲ್ಲೊಂದು ಅಪರೂಪಕ್ಕೆ ಬರುತ್ತಿವೆಯೇ ಹೊರತು ರೂಢಿಯ ಹಾದಿಯಲ್ಲಿಲ್ಲ. ಸಂಸ, ಕೈಲಾಸಂರಿಂದ ಆರಂಭವಾದ ನಾಟಕಗಳು ಶ್ರೀರಂಗರೇ ಮೊದಲಾದವರ ಕೈಯಲ್ಲಿ ಸಾಮಾಜಿಕ ದೃಷ್ಟಿಕೋನದ ಹೊಸ ಆಯಾಮವನ್ನು ನೀಡಿದವು. ಕುವೆಂಪು, ಪುತಿನ, ಕಾರ್ನಾಡ್, ಕಂಬಾರ, ಮುಂತಾದ ಒಳ್ಳೆಯ ನಾಟಕಕಾರರಿಗೆ ಇತಿಹಾಸ, ಪುರಾಣ, ಜಾನಪದ ಇವು ಒಳ್ಳೆಯ ಭೂಮಿಕೆಯನ್ನು ನೀಡಿದವು. ಆದರೆ ಇತ್ತೀಚೆಗೆ ನಾಟಕಗಳು ರಂಗದಲ್ಲಿ ನೀಡುವ ಪರಿಣಾಮವನ್ನು ಓದಿನಲ್ಲಿ ನೀಡುತ್ತಿಲ್ಲ. ಆದ್ದರಿಂದಲೇ ರಂಗಪ್ರಯೋಗಕ್ಕೆ ಕಥೆಗಳೂ ಕಾಲಿರಿಸಲಾರಂಭಿಸಿದವು.

ಕನ್ನಡ ವಿಮರ್ಶೆ ಈ ಸಾಹಿತ್ಯ ಸೋದರರಲ್ಲಿ ಕೊನೆಯದು. ಒಂದೊಮ್ಮೆ ಭಾಷೆ, ವಿಶ್ಲೇಷಣೆ ಇವು ದಿವ್ಯವೂ ಭವ್ಯವು ಆಗಿ ಕಂಗೊಳಿಸಿ ಧ್ವನಾರ್ಥವನ್ನೂ ಶೋಧಿಸಿದರೆ ಇತ್ತೀಚೆಗೆ ಈ ವಿಮರ್ಶೆಯೆಂಬ ಓದು ಒಳನೋಟಕ್ಕಿಂತ ಹೆಚ್ಚಾಗಿ ಸ್ವನೋಟವನ್ನು ಇನ್ನೊಬ್ಬರ ಮೇಲೆ ಹೇರುವುದನ್ನು ಕಾಣಬಹುದು. ಕವಿಗೆ ಕವಿ ಮುನಿವಂ ಎಂಬುದು ವಿಮರ್ಶಕರಲ್ಲಿ ಇನ್ನಷ್ಟು ಹೆಚ್ಚಾಗಿ ಕಾಣುತ್ತೇವೆ. ತನ್ನ ದೃಷ್ಟಿಕೋನವನ್ನು ಒಪ್ಪದಿರುವ ಸ್ವಾತಂತ್ರ್ಯವು ಇನ್ನೊಬ್ಬರಿಗಿದೆ ಎಂಬುದನ್ನು ಬಹುತೇಕ ವಿಮರ್ಶಕರು ಮರೆತಂತಿದೆ. ಇದರಿಂದಾಗಿ ಯಾವುದೇ ಸಾಹಿತ್ಯವನ್ನಾದರೂ ಇಷ್ಟವಾದರೆ ಯಾವುದೇ ಮಟ್ಟಕ್ಕೆ ಒಯ್ಯಬಲ್ಲ, ಅಥವಾ ಇಷ್ಟವಾಗದಿದ್ದರೆ ಮಟ್ಟಹಾಕಬಲ್ಲ ವಿಮರ್ಶೆಗಳೂ ಇಂದು ಪ್ರತಿಷ್ಠೆಯ ಸ್ಥಾನದಲ್ಲಿ ಶೋಭಿಸುತ್ತಿವೆ. ಒಬ್ಬ ಸಾಹಿತಿಯ ಬಗ್ಗೆ ಕೊಂಚ ಭಿನ್ನಾಭಿಪ್ರಾಯಗಳು ಬರಬಹುದು; ಆದರೆ ಈತ ಶ್ರೇಷ್ಠ ಸಾಹಿತಿ ಎಂದು ಒಂದು ಯೋಚನಾಶಾಲೆ ಹೇಳಿದರೆ ಈತ ಸಾಹಿತಿಯೇ ಅಲ್ಲ ಎಂಬಷ್ಟು ವಿರೋಧ ಇನ್ನೊಂದು ಯೋಚನಾಶಾಲೆಯಿಂದ ಕೇಳಿಬರುತ್ತಿದೆ. ಇನ್ನೊಂದೆಡೆ ಎಲ್ಲರನ್ನೂ ಖುಷಿಪಡಿಸಬಲ್ಲ ವಿಮರ್ಶಾಸಾಧ್ಯತೆಯು ತೆರೆದುಕೊಳ್ಳುತ್ತಿದೆ. ಎಡ-ಬಲಕ್ಕಿಂತ ಹೆಚ್ಚು ಹಾನಿ ಎಡಬಿಡಂಗಿತನ ಮಾಡುವಂತಿದೆ. ನಮ್ಮ ಅನೇಕ ಹೊಸ ತಲೆಮಾರಿನ ಓದುಗರಿಗೆ ಮತ್ತು ಉತ್ಸಾಹದಿಂದ ಬರೆಯುವವರಿಗೆ ಹಳೆಯ ಸಾಹಿತಿಗಳು ಬಿಡಿ, ಕಳೆದ ಶತಮಾನದ ಸಾಹಿತಿಗಳನ್ನೇ ಗೊತ್ತಿಲ್ಲ. ಗೊತ್ತಿಲ್ಲದಿದ್ದರೆ ತಪ್ಪಿಲ್ಲ. ಆದರೆ ಕನ್ನಡ ಸಾಹಿತ್ಯ ಕಳೆದ ದಶಕದಲ್ಲೇ ಶುರುವಾಯಿತೆಂಬಂತೆ ಈ ಮಂದಿ ನಡೆದುಕೊಳ್ಳುವಾಗ ಅಜ್ಞಾನವೂ ಅಹಂಕಾರವೂ ಜೊತೆಜೊತೆಯಾಗಿ ನಡೆದಾಡುವಂತನ್ನಿಸುತ್ತದೆ. ಹೊಸ ಚಿಗುರು ತನಗೊಂದು ಹಳೆಯ ಬೇರಿತ್ತೆಂದು ಮರೆತರೆ ಸೃಷ್ಟಿಯ ಚಲನಶೀಲತೆಯನ್ನೇ ಧಿಕ್ಕರಿಸಿದಂತಲ್ಲವೇ?

ಈಚೆಗೆ ಇಂದಿನ ತಲೆಮಾರಿನ ಸಾಹಿತಿಗಳ ಬರಹಗಳ ಓದು-ಮರು ಓದು ಒಂದು ಗೀಳಿನಂತೆ ನಡೆಯುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಂತೂ ನೀಲಿಗಣ್ಣಿನ ಸಾಹಿತಿಗಳ ಬರೆಹದ ಕುರಿತು ಆಗಾಗ ಓದು-ಮರುಓದು ನಡೆಯುತ್ತದೆ. ಗುಣಮಟ್ಟ ಚೆನ್ನಾಗಿಲ್ಲದಾಗ ಓದುವುದೇ ಕಷ್ಟ; ಮರು ಓದಿಗೆ ಎಲ್ಲಿದೆ ಅವಕಾಶ? ಯಾರಿಗಾಗಿ ಮರು ಓದು? ಇದರಿಂದ ಪ್ರಶಸ್ತಿಗಳ ಸಾಧ್ಯತೆ ಹೆಚ್ಚಿದರೂ ಸಾಹಿತ್ಯಸಾಧನೆ ಹೆಚ್ಚದು.

ಇಂತಹ ಸಂದರ್ಭದಲ್ಲಿ ಹಳೆಯ ಸಾಹಿತ್ಯದ ಓದು, ಮರು ಓದು ಮುಖ್ಯವಾಗುತ್ತದೆ. ಸಾಹಿತ್ಯಾಭ್ಯಾಸದ ಎಳವೆಯಲ್ಲೇ ಕನ್ನಡದ ಕ್ಲಾಸಿಕಲ್ ಸಾಹಿತ್ಯವನ್ನು ಪರಿಚಯಿಸಬೇಕಾಗುತ್ತದೆ. ಈ ಕೆಲಸಕ್ಕೆ ಒಳ್ಳೆಯ ಶಿಕ್ಷಕರು ಬೇಕು. ಸಂಬಳಕ್ಕಾಗಿ, ಪ್ರತಿಷ್ಠೆಗಾಗಿ, ಪ್ರಚಾರಕ್ಕಾಗಿ ಭಾಷೆಯನ್ನು, ಸಾಹಿತ್ಯವನ್ನು ಕಲಿತವರಿಂದ ಇದು ಸಾಧ್ಯವಿಲ್ಲ. ಸಹಜ ಪ್ರೀತಿಯುಳ್ಳವರಿಂದ ಮಾತ್ರ ಮತ್ತು ಶಿಕ್ಷಣ ಕ್ಷೇತ್ರವೇ ಸಾಹಿತ್ಯಕ್ಷೇತ್ರವೆಂಬ ತಪ್ಪುತಿಳಿವಳಿಕೆ ಹೋದರಷ್ಟೇ ಇದು ಸಾಧ್ಯ. ಕನ್ನಡದ ಹಳೆಯ ಸಾಹಿತ್ಯ ಸಾಕಷ್ಟು ಸಮೃದ್ಧವಾಗಿದೆ. ಮಹೋನ್ನತ ಸಾಹಿತ್ಯ ಸಾವಿರ ವರ್ಷಗಳಿಂದ ಸೃಷ್ಟಿಯಾಗಿದೆ. ಇದನ್ನು ತಿಳಿಹೇಳುವವರು ಬೇಕಲ್ಲ! ಒಂದು ಕೃತಿಯನ್ನು ಇಡೀ ಜೀವಮಾನ ಓದಿಯೂ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ; ಆದರೂ ಹಿಂದಿನ ಕೆಲವು ವಿದ್ವಾಂಸರು ಅಕ್ಷಯಪಾತ್ರೆಯಂತಹ ತಮ್ಮ ಅಧ್ಯಯನ ವಿಸ್ತಾರದಿಂದಾಗಿ ಬೇಕಾದಷ್ಟು ವಿಷಯಗಳನ್ನು ಹೇಳುತ್ತಿದ್ದರು. ಎಷ್ಟು ಮೊಗೆದರೂ ಅವರ ಜ್ಞಾನ ಭಂಡಾರ ಬತ್ತುತ್ತಿರಲಿಲ್ಲ.

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ಅನೇಕ ಡಿಗ್ರಿಸಂಪನ್ನರು ಪಂಪರನ್ನರೆಂದು ವೇದಿಕೆಯಿಂದ ಬೀಗುತ್ತಾರಾದರೂ ಕಾವ್ಯವಿವರಣೆ, ವಿಶ್ಲೇಷಣೆ, ವ್ಯಾಖ್ಯಾನದ ಪ್ರಶ್ನೆ ಬಂದಾಗ ಹಳೆಯ ಕಾವ್ಯವನ್ನು ಜೀವಸಹಜವಾಗಿ ವಿವರಿಸುವ, ವಿಶ್ಲೇಷಿಸುವ ವಿದ್ವಾಂಸರ ಸಂಖ್ಯೆ ಇಲ್ಲವೇ ಇಲ್ಲವೆಂಬಷ್ಟು ಕಡಿಮೆಯಾಗಿದೆ. ನೀವು ಯಾವುದಾದರೂ ಒಬ್ಬ ಕವಿಯ ಬಗ್ಗೆ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದರೆ ಅದರಲ್ಲಿ ತಮಗೊಪ್ಪುವ ಆಯ್ದ ಭಾಗವನ್ನಷ್ಟೇ ಉರು(ಳು!)ಹಾಕಿಕೊಂಡು ಅಲ್ಲಿಂದಿಷ್ಟು ಇಲ್ಲಿಂದಿಷ್ಟು ಸೇರಿಸಿ ತಮ್ಮದೆಂಬಂತೆ ಮಾತನಾಡುವವರು ಮಾತ್ರ ಹೆಚ್ಚಾಗಿದ್ದಾರೆ. (ಕಾರ್ಯಕ್ರಮವೊಂದರಲ್ಲಿ ಕುಮಾರವ್ಯಾಸನ ಒಂದು ಪದ್ಯದ ಭಾಗವನ್ನು ಆಕರ್ಷಕವಾಗಿ ವಿವರಿಸಿದ ವಿದ್ವಾಂಸರೊಬ್ಬರನ್ನು ಅದರ ಹಿಂದಿನ ಪದ್ಯದ ಕುರಿತು ಹೇಳಿರೆಂದು ಸಭಿಕರೊಬ್ಬರು ಕೇಳಿದಾಗ ಅವರು ‘‘ಅದು ಈಗಲ್ಲ, ಇಂದು ಅದು ಪ್ರಸ್ತುತವಲ್ಲ, ಇನ್ನೊಮ್ಮೆ ಅದರ ಬಗ್ಗೆಯೇ ಮಾತನಾಡುತ್ತೇನೆ’’ ಎಂದು ಬೆವರುತ್ತಾ ಜಾರಿಕೊಂಡರು!)

ಒಬ್ಬೊಬ್ಬ ತರಬೇತುದಾರ ಶಿಕ್ಷಕನೂ ಒಂದೊಂದು ಗ್ರಂಥವನ್ನೂ ಮಂತ್ರಪಠನದಂತೆ ಪಾರಾಯಣ ಮಾಡಿ ಮನನಮಾಡಿಕೊಳ್ಳುವಂತೆ ಮತ್ತು ಅದನ್ನು ವಿಶೇಷವಾಗಿ ಅಧ್ಯಯನ ಮಾಡುವಂತೆ ಮತ್ತು ತರ್ಕಿಸುವಂತೆ ವ್ಯವಸ್ಥೆಮಾಡಬೇಕು. ಕುಮಾರವ್ಯಾಸ ಎಂದರೆ ಇಡೀ ‘ಕರ್ಣಾಟ ಭಾರತ ಕಥಾ ಮಂಜರಿ’ಯೇ ಹೊರತು ಯಾವುದೊ ಒಂದು ಪದ್ಯಭಾಗವಲ್ಲ. ಕುಮಾರವ್ಯಾಸನ ಕುರಿತು ಹೇಳಬಲ್ಲವನಿಗೆ ಯಾವ ಪರ್ವವಾಗಲಿ, ಸಂಧಿಯಾಗಲಿ ಅಪರಿಚಿತವಾಗಿರಬಾರದು. ಜೈಮಿನಿ ಭಾರತದ ಕುರಿತು ಮಾತನಾಡುವವನಿಗೆ ಅದರಲ್ಲಿ ರಸಸಿದ್ಧಿಯಾಗಿರಬೇಕು. ಇಲ್ಲವಾದರೆ ಇಂದಿನ ತಲೆಮಾರಿನ ಕವಿತೆಗಳಂತೆ ಒಂದೆರಡು ಫ್ಲಾಷ್‌ಗಳ ಮೂಲಕ ಸಭೆಯಲ್ಲಿರುವ ಅಜ್ಞರನ್ನೂ ಮುಗ್ಧರನ್ನೂ ಬೆರಗುಗೊಳಿಸುವ ಹುನ್ನಾರವಾದೀತೇ ಹೊರತು ಹೊಸಬೆಳಕನ್ನ್ನಾಗಲಿ, ಬೆಳಗನ್ನಾಗಲಿ ತೋರುವುದು ಅಸಾಧ್ಯವಾದೀತು ಮತ್ತು ಯಾವುದೇ ಮರು ಓದು ಬರಿಯ ಮರುಳು ಓದು ಎಂದಷ್ಟೇ ಆದೀತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top