ನೆಹರೂ ನಿವೃತ್ತರಾಗುವುದಿಲ್ಲ! | Vartha Bharati- ವಾರ್ತಾ ಭಾರತಿ

--

ನೆಹರೂ ನಿವೃತ್ತರಾಗುವುದಿಲ್ಲ!

ತನ್ನ ಕಾಲದ ಸಮಸ್ಯೆಗಳಿಗೆ ಉತ್ತರಿಸಲಾಗದವರು ತನ್ನ ಪೂರ್ವಜರನ್ನು, ಅಥವಾ ತನ್ನ ಎದುರಾಳಿಗಳನ್ನು ದೂಷಿಸಬೇಕಾದ್ದು ರಾಜನೀತಿಯೆನಿಸದೆ ಅಗ್ಗದ ಮತ್ತು ಅಜ್ಞರನ್ನು ಮರುಳಾಗಿಸುವ ತಂತ್ರವೆನಿಸುತ್ತದೆ. ಆದರೆ ಈ ಟೀಕೆಗಳಲ್ಲಿ ಅಡಗಿದ್ದ ಒಂದು ಮಹೋನ್ನತ ಸತ್ಯವೆಂದರೆ ನೆಹರೂರ ನೆರಳು ನಮ್ಮನ್ನೆಷ್ಟು ಆವರಿಸಿದೆಯೆಂಬುದು.


ನಮ್ಮೆಲ್ಲ ಇತಿಹಾಸಗಳನ್ನು ತಿರುಚುವ ಮತ್ತು ಸಾಧ್ಯವಾದರೆ ಅಳಿಸುವ ಹೊಸ ಪ್ರಯತ್ನಗಳು ದೇಶದೆಲ್ಲೆಡೆ ಮತ್ತು ಸಂಸತ್ತಿನಿಂದಲೇ ನಡೆಯುತ್ತಿವೆ. ಅಲ್ಲೋ ಇಲ್ಲೋ ಇತಿಹಾಸವನ್ನು ತಿರುಚುವ ಮತ್ತು ಅಳಿಸುವ ಪ್ರಯತ್ನಗಳು ಸತತ ನಡೆಯುತ್ತಲೇ ಬಂದಿದ್ದವು. ಆದರೆ ಈಗ ನಡೆಯುತ್ತಿರುವುದು ಒಂದು ಪ್ರಜ್ಞಾಪೂರ್ವಕ ಸಂಚಿನಂತಿದೆ. ಇದೊಂದು ಸಾಮೂಹಿಕ ಮತ್ತು ಸೈದ್ಧಾಂತಿಕ ಆಂದೋಲನದಂತಿದೆಯೆಂಬುದನ್ನು ಮತ್ತು ಆಳುವವರು ಇದನ್ನು ಪರೋಕ್ಷವಾಗಿ ಮಾತ್ರವಲ್ಲ, ಪ್ರತ್ಯಕ್ಷವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ಪ್ರಚೋದಿಸುತ್ತಿದ್ದಾರೆಂಬುದನ್ನು ಗಮನಿಸಿದರೆ ಇಂತಹ ಪ್ರಯತ್ನಗಳ ಫಲಾಫಲಗಳನ್ನು, ಪರಿಣಾಮಗಳನ್ನು ಮತ್ತು ಫಲಿತಾಂಶಗಳನ್ನು ಪರ್ಯಾಲೋಚಿಸಬಹುದು.

ಮೆಕಾಲೆ ಭಾರತೀಯ ಲಕ್ಷಣಗಳನ್ನು ಅಳಿಸುವ ಸಲುವಾಗಿಯೇ ಆಂಗ್ಲ ಶಿಕ್ಷಣ ಪದ್ಧತಿಯನ್ನು ತಂದನಂತೆ. ಶಿಕ್ಷಣವೆಂಬುದು ಸಾಂಸ್ಕೃತಿಕ ಪಲ್ಲಟಗಳನ್ನು ಸೃಷ್ಟಿಸುತ್ತದೆಯೆಂಬುದು ಭಾರತೀಯರಿಗೆ ಅರಿವಾಗುವಾಗ ತುಂಬಾ ತಡವಾಯಿತು. ಅಷ್ಟು ಹೊತ್ತಿಗಾಗಲೇ ನಾವು ಕಂದು ಸಾಹೇಬರನ್ನು ಸೃಷ್ಟಿಸಲು ಆರಂಭಿಸಿದ್ದೆವು. ಹೀಗೆ ಪಾಶ್ಚಾತ್ಯ ಶಿಕ್ಷಣ ಪದ್ಧತಿಯು ಬರಿಯ ಶಿಕ್ಷಣವಾಗದೆ ಹೊಸ ಸಂಸ್ಕೃತಿಯಾಗಿ ಭಾರತದಲ್ಲಿ ಅಭ್ಯುದಯವನ್ನು ಕಂಡದ್ದು ಕಳೆದೆರಡು ಶತಮಾನಗಳ ಬೆಳವಣಿಗೆ. ಆದರೆ ಇದರಿಂದ ಹಾನಿಗಿಂತ ಅನುಕೂಲವೇ ಆಯಿತು. ಭಾರತಕ್ಕೆ ವಿಶ್ವದ ಬಾಗಿಲುಗಳು ತೆರೆದವು. ಗಾಂಧಿ ಮತ್ತು ಅವರ ಹಿರೀಕರನ್ನೂ ಸರೀಕರನ್ನೂ ಆನಂತರದ ನಾಯಕರನ್ನೂ ಸೃಷ್ಟಿಸಿದ್ದು ಇದೇ ಶಿಕ್ಷಣವೆಂಬುದನ್ನು ನಾವು ಮರೆಯಬಾರದು. ಒಂದು ರೀತಿಯಲ್ಲಿ ಕಂಬಳಿ ಹುಳವು ಚಿಟ್ಟೆಯಾಗಿ ಹಾರಿತು. ಇಂಗ್ಲಿಷ್, ರೈಲು, ರಸ್ತೆಗಳು ಈ ಆಂಗ್ಲೀಕರಣದ ಇತ್ಯಾತ್ಮಕ ಕೊಡುಗೆಗಳಲ್ಲಿ ಕೆಲವೆಂದು ತಿಳಿದರೆ ಎಲ್ಲ ಕೇಡುಗಳಲ್ಲೂ ಏನಾದರೂ ಒಳ್ಳೆಯವಿರುತ್ತವೆಂಬ ನಂಬಿಕೆ ದೃಢವಾಗಬಹುದು.

ಸ್ವಾತಂತ್ರ್ಯದ ಆರಂಭದ ದಶಕಗಳಲ್ಲಿ ದೇಶದ ಎಲ್ಲೆಡೆ ಇದರ ಪ್ರಭಾವದಿಂದಾಗಿ ಕೈಗಾರಿಕೆಗಳು ಮತ್ತು ಹೊಸಬಗೆಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ತೆರೆದುಕೊಂಡವು. ಕೃಷಿಯಲ್ಲೂ ಆಮೂಲಾಗ್ರ ಬದಲಾವಣೆಗಳಾದವು. ಪರಂಪರೆಯನ್ನೇ ನಂಬಿಕೊಂಡಿದ್ದರೆ ಇಂತಹ ಬದಲಾವಣೆ ನಡೆಯುತ್ತಿರಲಿಲ್ಲವೇನೋ? ಇವುಗಳ ಫಲ ಎಷ್ಟು ಬಡ ಭಾರತೀಯರಿಗೆ ಮೌಲ್ಯಾಧಾರಿತವಾಗಿ ದಕ್ಕಿತೆಂಬುದು ಚರ್ಚಾಸ್ಪದವಾದರೂ ಈ ದೇಶದೊಳಗೆ ಇವು ಇವೆಯೆಂಬುದೇ ಬಹಳಷ್ಟು ಜನರಿಗೆ ಸಮಾಧಾನ ತಂದ ವಿಚಾರ. ಬ್ರಿಟಿಷ್ ಇಂಡಿಯಾ ಭಾರತವಾಗಿ ಬದಲಾದರೂ ಅವರು ಬಿಟ್ಟುಹೋದ ಜಾತಿ-ವರ್ಗವ್ಯತ್ಯಾಸಗಳು ಪಳೆಯುಳಿಕೆಯಂತೆ ಉಳಿದೇ ಉಳಿದವು. ಹಣ, ಜಾತಿ ಮತ್ತು ಅಧಿಕಾರ ಇವುಗಳಲ್ಲಿ ಯಾವುದಾದರೂ ಎರಡು ಇದ್ದವರು ಮುಂದೆ ಬಂದರು; ಉಳಿದವರು ಹಿಂದುಳಿದವರಾದರು.

ಗಾಂಧಿ ಸ್ವಾತಂತ್ರ್ಯ ಪಡೆದ ಅನಂತರ ಕಾಂಗ್ರೆಸ್ ಪಕ್ಷವನ್ನು ಬರಖಾಸ್ತು ಮಾಡಬೇಕೆಂಬ ಸಲಹೆಯನ್ನಿಟ್ಟಿದ್ದರಂತೆ. ಸ್ವಾತಂತ್ರ್ಯಕ್ಕಾಗಿ ರಚಿತವಾದ ಸಂಘಟನೆಯೊಂದನ್ನು ಉಳಿಸಿಕೊಳ್ಳಬಾರದೆಂಬ ಅವರ ಆಶಯದ ಹಿಂದೆ ಅದು ಅರಾಜಕೀಯವಾಗಿತ್ತೆಂಬ ನಂಬಿಕೆಯಿದ್ದಿರಬೇಕು ಮತ್ತು ಅರಾಜಕತೆಯನ್ನು ಸೃಷ್ಟಿಸೀತೆಂಬ ಆತಂಕವಿದ್ದಿರಬೇಕು. ಆದರೆ ಕಾಂಗ್ರೆಸ್ ಅಂತಹ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಯಷ್ಟೇ ಆಗಿ ಉಳಿದಿರಲಿಲ್ಲ. ಅದು ಸ್ವಾತಂತ್ರ್ಯಪೂರ್ವದಲ್ಲೇ ಭಾರತದ ಅಸ್ಮಿತೆಯನ್ನು ಗುರುತಿಸಿ ಕೊಳ್ಳುವುದರೊಂದಿಗೇ ಒಂದು ಬಲಾಢ್ಯ ರಾಜಕೀಯ ಪ್ರಾತಿನಿಧ್ಯವನ್ನು ಹೊಂದುವ ಪ್ರಯತ್ನದಲ್ಲೇ ಇದ್ದಿತು ಮತ್ತು ಹೀಗಲ್ಲದಿದ್ದರೆ ಅದು ಬ್ರಿಟಿಷ್ ಭಾರತದಲ್ಲಿ ಚುನಾವಣೆಯನ್ನು ಎದುರಿಸುವ ನಿರ್ಧಾರವನ್ನು ಕೈಗೊಳ್ಳುತ್ತಿರ ಲಿಲ್ಲವೆಂಬುದನ್ನು ಇತಿಹಾಸ ಮರೆಯಬಾರದು.

ಸ್ವಾತಂತ್ರವು 1947ರ ಅಗಸ್ಟ್ 15ರಂದು ಸಿಕ್ಕಿತೆಂಬುದು ಒಂದು ತಾಂತ್ರಿಕ ಗುರುತೇ ಹೊರತು ಅದಕ್ಕೂ ಮೊದಲೇ ಸ್ವಾತಂತ್ರದ ಸಿದ್ಧತೆಗಳಾಗಿದ್ದವು. ಒಂದು ಗಿಡವೋ ಹೂವೋ ಹಣ್ಣೋ ಹೇಗೆ ಹೀಚಿನಿಂದ ನಿಧಾನವಾಗಿ ಮೊಳೆತು ತನ್ನ ಪ್ರಬುದ್ಧ ಅಭಿವ್ಯಕ್ತಿಯನ್ನು ಪಡೆಯುತ್ತದೆಯೋ ಹಾಗೆಯೇ ಈ ಸ್ವಾತಂತ್ರದ ಫಲ. ದಿನಾ ಸ್ವಾತಂತ್ರ ಹೋರಾಟವನ್ನು ನೋಡಿದವರಿಗೆ 1947ರ ಅಗಸ್ಟ್ 15 ವಿಶೇಷ ಅನ್ನಿಸಿರಲಾರದು. ಗಾಂಧಿಗಂತೂ ಇದು ಅನ್ನಿಸಿರಲೇ ಇಲ್ಲ. ‘‘ಸಮಾಜದ ಕೊನೆಯವನಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ ದಕ್ಕದೆ ಇಂತಹ ರಾಜಕೀಯ ಸ್ವಾತಂತ್ರವು ಅರ್ಥಪೂರ್ಣವಾಗಲಾರದು’’ ಎಂದು ಅವರು ಹೇಳಿದ್ದರ ಹಿಂದಿನ ಅರ್ಥ ಇದೇ. ಇದರಿಂದಾಗಿ ಪ್ರಾಮಾಣಿಕ ಅನ್ನುವುದಕ್ಕಿಂತಲೂ ಅರಾಜಕೀಯ ನಾಯಕರಿಗೆ ತಾವು ಹಿಂದೆ ನಡೆಸಿದ ಪ್ರಭಾತ್ ಫೇರಿಗಳನ್ನು ಮುಂದೆಯೂ ನಡೆಸಬೇಕೆಂದೆನ್ನಿಸಿತು. ಚಳವಳಿಗಳು ಮುಗಿದಿಲ್ಲ, ಅವು ಹೊಸ ರೂಪವನ್ನು ತಾಳಬೇಕಿದೆ ಎಂದು ಅಂಥವರು ಬಯಸಿದರು. ಇಂದಿಗೂ ಸ್ವಾತಂತ್ರ ಹೋರಾಟದ ಸಾವಿರಾರು ತೊರೆಗಳು ಬತ್ತದೆ ಹೊಸ ಸ್ವಾತಂತ್ರಕ್ಕಾಗಿ ಹೋರಾಡುತ್ತಿರುವುದು ಈ ಕಾರಣದಿಂದಾಗಿಯೇ. ಇಂತಹ ಬೆಳವಣಿಗೆ ಕಾಂಗ್ರೆಸ್‌ನ ಕಾನೂನಾತ್ಮಕತೆಯನ್ನು ಮತ್ತು ಔರಸತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿತು.

ಆದ್ದರಿಂದ ಕಾಂಗ್ರೆಸ್‌ನ ಬರಖಾಸ್ತಿಗೆ ಗಾಂಧಿ ನೀಡಿದ ಸೂಚನೆಯ ಕುರಿತು ಇದಕ್ಕಿಂತ ಮಹತ್ವದ ಸಂಕೇತವನ್ನು ಕಾಣಲಾಗದು. ಮತ್ತು ಅದು ರಾಜಕೀಯ ಪಕ್ಷವಾಗಿ ಮುನ್ನಡೆದದ್ದು ಪ್ರಜಾಪ್ರಭುತ್ವದ ಮಾದರಿಯೆಂದೇ ತಿಳಿಯಬೇಕು. ಇದೇ ತರ್ಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳಿಗೂ ಆರೋಪಿಸಬಹುದು. ಒಂದು ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯೆಂದು ಬಿಂಬಿಸಿಕೊಂಡ ಆರೆಸ್ಸೆಸ್ ಸ್ವಾತಂತ್ರದ ಅನಂತರ ತನ್ನ ಪಾತ್ರವೇನೆಂದು ಹುಡುಕಾಡತೊಡಗಿತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಂಘಟನೆಯಾಗಿ ಸಕ್ರಿಯ ಪಾತ್ರವನ್ನು ನಿರ್ವಹಿಸದ ಆರೆಸ್ಸೆಸ್ (ಅದರ ಕೆಲವಾದರೂ ಕಾರ್ಯಕರ್ತರು ಭಾಗವಹಿಸಿದ್ದರು ಎಂಬ ಸತ್ಯವನ್ನು ಜೀರ್ಣಿಸಿಕೊಳ್ಳಲೇಬೇಕು!) ಅನಂತರ ಕಾಂಗ್ರೆಸ್‌ಗೆ ಪರ್ಯಾಯವಾಗಿ ಪುನರ್‌ಸೃಷ್ಟಿಗೊಳ್ಳಲು ಹವಣಿಸಿತು. ಇದರ ಮಿಥ್ಯೆಯನ್ನು ಮನಗಂಡಾಗ ಧಾರ್ಮಿಕವಾಗಿ ಬಹುಸಂಖ್ಯಾತ ಹಿಂದುಗಳನ್ನೊಳಗೊಂಡ ಒಂದು ರಾಜಕೀಯ ಸಂಘಟನೆಯಾಗಿ ಬದಲಾಗುವ ತೀವ್ರ ಅನಿವಾರ್ಯತೆಯನ್ನು ಧಿಕ್ಕರಿಸಿದ ಈ ಸಂಘಟನೆಯು ಭಾರತೀಯ ಜನಸಂಘವನ್ನು ಸೃಷ್ಟಿಸಿ ಪೋಷಿಸಿತು. (ಮುಂದೆ ಇತಿಹಾಸದ ಒತ್ತಡದಲ್ಲಿ ಜನಸಂಘವು ಬರಖಾಸ್ತಾಗಿ ಜನತಾ ಪಾರ್ಟಿಯಲ್ಲಿ ವಿಲೀನವಾಗಿ ಮತ್ತೆ ಪ್ರತ್ಯೇಕವಾಗಿ ಭಾರತೀಯ ಜನತಾ ಪಕ್ಷವಾಗಿ ಬದಲಾದದ್ದು ಇತಿಹಾಸವೂ ಹೌದು; ರಾಜಕಾರಣವೂ ಹೌದು. ಇವೆಲ್ಲದರ ನಡುವೆ ಆರೆಸ್ಸೆಸ್ ಭಾರತೀಯ ಜನತಾ ಪಕ್ಷದ ಹಿರಿಯಣ್ಣನಾಗಿ ಮುಂದುವರಿಯಿತು. ರಾಜ್ಯಾಧಿಕಾರವನ್ನು ಪಡೆಯದೆಯೇ ರಾಜಕೀಯದ ಅಧಿಕಾರವನ್ನು ಪಡೆದ ವಿಶ್ವದ ಏಕೈಕ ರಾಜಕೀಯೇತರ ಸಂಘಟನೆಯೆಂಬ ಹೆಗ್ಗಳಿಕೆಯನ್ನು ಈಗ ಈ ಸಂಘಟನೆಗೆ ಆನ್ವಯಿಸಬಹುದು ಇಲ್ಲವೇ ಆರೋಪಿಸಬಹುದು.)

ನೆಹರು ಸ್ವಾತಂತ್ರ್ಯೋತ್ತರ ಭಾರತಕ್ಕೆ ಅನಿವಾರ್ಯವೆಂದನ್ನಿಸಿದ್ದು ಇಂತಹ ಪಲ್ಲಟಗಳಿಂದಲೇ. ಭಾರತಕ್ಕೆ ವಿಶ್ವಾತ್ಮಕವಾಗಿ ಸ್ವೀಕಾರಾರ್ಹವಾದ ಪಂಥವನ್ನು ನಿರ್ಮಿಸುವಲ್ಲಿ ನೆಹರೂರ ಕೊಡುಗೆಯನ್ನು ಎಂದೂ ಅಲಕ್ಷಿಸಲಾಗದು. ನೆಹರೂರ ಪ್ರಧಾನಿ ಹುದ್ದೆ ಒಂದು ನೆಹರೂ ಯುಗವನ್ನು ಸೃಷ್ಟಿಸಿತ್ತು. ಇದು ಪ್ರಾಯಃ ಸವಾಲನ್ನು ಎದುರಿಸಿದ್ದು ಅವರ ಮಗಳಾದ ಇಂದಿರಾ ಗಾಂಧಿಯ ಸುದೀರ್ಘ ಅಧಿಕಾರಾವಧಿಯಲ್ಲಿ ಎಂಬುದು ಒಂದು ರಾಜಕೀಯ ವ್ಯಂಗ್ಯ. ಪಶ್ಚಿಮದ ಜಗತ್ತು ಭಾರತವನ್ನು ಪೂರ್ವದ ಬೆರಗು ಎಂದು ಕಂಡದ್ದು ನೆಹರೂ ಯುಗದಲ್ಲಿ. ನೆಹರೂರ ಪ್ರಭಾವ ಆ ಕಾಲದ ರಾಜಕೀಯದ ಮೇಲೆ ಎಷ್ಟಿತ್ತೆಂದರೆ ಯಾರೂ ನೆಹರೂರ ವರ್ಚಸ್ಸನ್ನು ಮೀರದಾದರು. ಎಷ್ಟೇ ಅತೃಪ್ತಿಯಿದ್ದಾಗಲೂ ನೆಹರೂರ ಸಾತ್ವಿಕ ಹಠದೆದುರು ಕಾಂಗ್ರೆಸ್ ತಲೆಬಾಗಬೇಕಾಗಿತ್ತು. ಇದೊಂದು ಥರದ ಗಾಂಧಿತ್ವದ ಹಠ.

ಗಾಂಧಿಯ ಔರಸ ಪುತ್ರನಂತಿದ್ದ ನೆಹರೂ ಸಾಂಪ್ರದಾಯಿಕ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಸರದಾರರಂತೆ ಹೊರಹೊಮ್ಮಿದರು. ಅವರ ಮನಸ್ಸು ವಿಶಾಲವಿತ್ತು; ರಾಜಕೀಯವಾಗಿ ಎಷ್ಟೇ ಟೀಕೆಗಳನ್ನೆದುರಿಸಿದರೂ ಈ ದೇಶದ ಎಲ್ಲ ಪುರಾತನ, ಅರ್ವಾಚೀನ ನಂಬಿಕೆಗಳೊಳಗೆ ಇದ್ದ ಪಾರಂಪರಿಕ ಸಂಕುಚಿತತೆಯನ್ನು ಅವರು ದೂರಮಾಡಿ ಭಾರತೀಯತೆಗೆ ಆಧುನಿಕತೆಯ ಹೊಸ ಹೊಳಪನ್ನು ನೀಡುವಲ್ಲಿ ಯಶಸ್ವಿಯಾದರು. ಅತ್ಯುತ್ತಮ ವಾಗ್ಮಿಯೂ ಬರೆಹಗಾರರೂ ನ್ಯಾಯವಾದಿಯೂ ಆಗಿದ್ದ ನೆಹರೂ ತನ್ನ ಕಾಲದ ಮತ್ತು ವಿಶಾಲ ಭಾರತದ ಭವಿಷ್ಯದ ಒಬ್ಬ ಐಕಾನ್ ಆಗಿ ಉಳಿದರು. ಪ್ರಧಾನಿಯಾಗಿ ಅವರ ಅಸ್ತಿತ್ವವನ್ನು ದಾಖಲೆಗಳು ಉಳಿಸುತ್ತವೆ; ಆದರೆ ಅವರ ಇನ್ನುಳಿದ ಅಸ್ತಿತ್ವವನ್ನು ಅವರ ಆತ್ಮಚರಿತ್ರೆ ಮತ್ತು ವಿಶ್ವ ಇತಿಹಾಸದ ಹೊಳವುಗಳು ಈ ಎರಡೇ ಕೃತಿಗಳು ಉಳಿಸಬಲ್ಲವು. ಅವರನ್ನು ಟೀಕಿಸುವವರು ಅವರ ಮಾತಿನ ಮತ್ತು ಬರಹದ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅಥವಾ ಕನಿಷ್ಠ ಅವನ್ನು ಓದಲು, ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ನೆಹರೂರನ್ನು ರಾಜಕೀಯೇತರವಾಗಿಯೂ ಸಾಕಷ್ಟು ಟೀಕಿಸಿದವರಿದ್ದರು. ಅವರನ್ನು ಎಡಬಿಡಂಗಿಯೆಂದು ಭಾವಿಸಿದ ಚಿಂತಕರನೇಕರು ಅವರ ಮಧ್ಯಮ ಮಾರ್ಗ ಆಗ ತಾನೇ ಜೀವಿಸಲು ಆರಂಭಿಸಿದ ಸ್ವತಂತ್ರ ಭಾರತಕ್ಕೆ ಅನಿವಾರ್ಯವೆಂಬುದನ್ನು ಮರೆತರು.

ಪ್ರಾಯಃ ಇಂದಿನ ಮೌಲ್ಯಮಾಪನದಲ್ಲಿ ಅವರ ಮಧ್ಯಮಮಾರ್ಗವು (ರಾಜಕೀಯಕ್ಕಷ್ಟೇ) ಮತ್ತಷ್ಟು ಅನಿವಾರ್ಯದಂತೆ ಕಾಣಿಸುತ್ತಿದೆ. ಗೋಪಾಲಕೃಷ್ಣ ಅಡಿಗರ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಕವಿತೆಯಲ್ಲಿ ಅವರ ವ್ಯಕ್ತಿತ್ವವನ್ನು ದರ್ಶಿಸುವುದರ ಜೊತೆಗೇ ಅವರ outdated  ಚಿಂತನೆಗಳ ಮತ್ತು 'indispensability' ಕುರಿತು ವಿಡಂಬನೆಯಿದೆ. ನೆಹರೂರ ಆದರ್ಶಗಳ ಪ್ರಯೋಜನವನ್ನು ಪ್ರಜೆಗಳಿಗಿಂತ ಹೆಚ್ಚಾಗಿ ಅವರ ಸುತ್ತ ಬೆಳೆದ ಬಂದಣಿಕೆಗಳು ಹೇಗೆ ಪಡೆದರೆಂಬುದರ ಕುರಿತು ವಿಡಂಬನೆಯಿದೆ. ಒಂದು ಗಟ್ಟಿ ವ್ಯಕ್ತಿತ್ವದ ಸುತ್ತ ಸಂಶಯಗಳು ಬೆಳೆಯಲೇ ಬೇಕು. ಇದು ಗಾಂಧಿಯನ್ನೂ ಬಿಟ್ಟಿಲ್ಲ. ರಾಜಕೀಯವಾಗಿ ನೆಹರೂ ಅವರಿಗೆ ಅನೇಕ ಶತ್ರುಗಳಿದ್ದರು. ಸ್ವತಃ ಅವರ ಅಳಿಯ (ಇಂದಿರಾ ಗಾಂಧಿಯ ಪತಿ) ಫಿರೋಜ್ ಗಾಂಧಿಯೂ ಅವರನ್ನು ವಿರೋಧಿಸಿ ಅವರ ಪ್ರಖರತೆಯನ್ನು ಸಹಿಸಲಾಗದಂತಿದ್ದರು! ಕಾಶ್ಮೀರ ಸಮಸ್ಯೆ, ಪಂಚಶೀಲ ಮುಂತಾದವುಗಳ ಕುರಿತ ಅವರ ನಂಬಿಕೆಗಳು ದೇಶಕ್ಕೆ ಸಮಸ್ಯೆಗಳನ್ನು ಸೃಷ್ಟಿಸಿದವು. ರಾಜಕೀಯದ ಏರುಪೇರುಗಳಲ್ಲಿ ಇವೆಲ್ಲ ಸಹಜ ಮತ್ತು ಶಾಶ್ವತ. ಆದರೆ ಅವರ ವ್ಯಕ್ತಿತ್ವಕ್ಕೆ ಅಪಚಾರವೆಸಗುವ ಕಾರ್ಯವನ್ನು ಅವರನ್ನು ಪ್ರಾಮಾಣಿಕವಾಗಿ, ರಾಜಕೀಯೇತರವಾಗಿಯೂ ಅಧ್ಯಯನ ಮಾಡಿದ ಯಾರೂ ಮಾಡಿರಲಿಲ್ಲವೆನ್ನುವುದು ಈ ದೇಶಕ್ಕೆ ಹೆಮ್ಮೆ ತರುವ ವಿಚಾರ.

ನೆಹರೂ ಅಳಿದು ಐದು ದಶಕಗಳಾದ ಆನಂತರವೂ ನೆಹರೂರ ದಟ್ಟ ನೆರಳು ಈ ದೇಶದ ಮೇಲಿದೆಯೆಂಬುದನ್ನು ಗಮನಿಸಿದರೆ ಅವರ ವ್ಯಕ್ತಿತ್ವವು ಏರಿದ ಎತ್ತರ ಮತ್ತು ಬಿಟ್ಟ ಬಿಳಲುಗಳು ಅರ್ಥವಾದೀತು. ಇದು ಇನ್ನೂ ಹೆಚ್ಚು ಮನದಟ್ಟಾಗುವುದು ಅವರನ್ನು ವಿರೋಧಿಸುವ ಆರೆಸ್ಸೆಸ್ ಪ್ರಣೀತ ಹಿಂದುತ್ವದ ಮಾರ್ಗದರ್ಶನ. ನೆಹರೂರನ್ನು ಅಳಿಸದೆ ಈ ದೇಶದ ಮುನ್ನೋಟವನ್ನು ಅಳಿಸಲಾಗದೆಂಬ ಅರಿವು ಈ ಮಂದಿಗಿದೆ. ಅದಕ್ಕೆ ಈಚೆಗೆ ಸಂಸತ್ತಿನಲ್ಲಿ ಪ್ರಧಾನಿಯವರು ಆಯವ್ಯಯದ ಅನಂತರದ ತಮ್ಮ ವಂದನಾಪೂರ್ವಕ ಭಾಷಣದಲ್ಲಿ ಬಹುಪಾಲು ಸಮಯವನ್ನು ನೆಹರೂರನ್ನು ಮತ್ತು ಕಾಂಗ್ರೆಸನ್ನು ದೂಷಿಸುವಲ್ಲಿ ವ್ಯಯಮಾಡಿದ್ದೇ ಸಾಕ್ಷಿ.

ತನ್ನ ಕಾಲದ ಸಮಸ್ಯೆಗಳಿಗೆ ಉತ್ತರಿಸಲಾಗದವರು ತನ್ನ ಪೂರ್ವಜರನ್ನು, ಅಥವಾ ತನ್ನ ಎದುರಾಳಿಗಳನ್ನು ದೂಷಿಸಬೇಕಾದ್ದು ರಾಜನೀತಿಯೆನಿಸದೆ ಅಗ್ಗದ ಮತ್ತು ಅಜ್ಞರನ್ನು ಮರುಳಾಗಿಸುವ ತಂತ್ರವೆನ್ನಿಸುತ್ತದೆ. ಆದರೆ ಈ ಟೀಕೆಗಳಲ್ಲಿ ಅಡಗಿದ್ದ ಒಂದು ಮಹೋನ್ನತ ಸತ್ಯವೆಂದರೆ ನೆಹರೂವಿನ ನೆರಳು ನಮ್ಮನ್ನೆಷ್ಟು ಆವರಿಸಿದೆಯೆಂಬುದು. ಚರಿತ್ರೆಯನ್ನು ಹೇಗೇ ಮುಚ್ಚಲು ಪ್ರಯತ್ನಿಸಿದರೂ ಅದು ಸತ್ಯವಾಗಿದ್ದರೆ ಅದು ಹೇಗೋ ವಿವೇಕದ ಮಳೆಹನಿ ಬಿದ್ದಾಗ ಮೊಳೆತು ಬೆಳೆಯುತ್ತದೆ; ತನ್ನ ಅಸ್ತಿತ್ವವನ್ನು ಅನಾವರಣಗೊಳಿಸುತ್ತದೆ. ನೆಹರೂಗಿಂತ ಶ್ರೇಷ್ಠರು ಈ ಮಣ್ಣಿನಲ್ಲಿ ಹುಟ್ಟಿರಬಹುದು; ಇನ್ನೂ ಹುಟ್ಟಬಹುದು; ಆದರೆ ಈ ಶ್ರೇಷ್ಠರ ಪಟ್ಟಿಯಲ್ಲಿ ನೆಹರೂ ಇರಲಿಲ್ಲವೆಂದು ಮನಗಾಣಿಸುವುದು ಮೂರ್ಖತನದ ಪರಮಾವಧಿಯಾಗಬಹುದು. ಕವಿವಾಣಿ ಸುಳ್ಳಲ್ಲ; ನೆಹರೂ ನಿವೃತ್ತರಾಗುವುದಿಲ್ಲ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top