ಗಾಲಿ ಕುರ್ಚಿ ಮೇಲಿನ ವಿಶ್ವಮಾನ್ಯ ಧೀಮಂತ | Vartha Bharati- ವಾರ್ತಾ ಭಾರತಿ

--

ಗಾಲಿ ಕುರ್ಚಿ ಮೇಲಿನ ವಿಶ್ವಮಾನ್ಯ ಧೀಮಂತ

ಹಾಕಿಂಗ್ ಅವರ ಬದುಕು ಮನವಕುಲಕ್ಕೆ ಬ್ರಹ್ಮಾಂಡದ ರಹಸ್ಯಗಳನ್ನು ತೆರೆದು ತೋರಿಸಿದಷ್ಟೇ ಅಲ್ಲದೆ ಮಾನವ ಪ್ರಯತ್ನಗಳ ಇನ್ನೊಂದು ತುದಿಯಲ್ಲಿ ಭರವಸೆಯ ಬೆಳಕಿದೆ ಎಂಬುದನ್ನು ಸ್ವಂತ ನಿದರ್ಶನದಿಂದ ತೋರಿಸಿಕೊಟ್ಟಿತು. ಕನಸುಗಳನ್ನು ನನಸಾಗಿಸುವ ಮಾರ್ಗದಲ್ಲಿ ಮಾನವನ ದೈಹಿಕ ನ್ಯೂನತೆಗಳು ಅಡ್ಡಿಯಾಗಲಾರವು ಎಂಬದನ್ನು ಅವರು ತೋರಿಸಿಕೊಟ್ಟರು. ಸ್ಟೀಫನ್ ಹಾಕಿಂಗ್ ತಮ್ಮ ಹಿಂದೆ, ಮನುಕುಲಕ್ಕೆ ಅಪಾರವಾದ ವೈಜ್ಞಾನಿಕ ಜ್ಞಾನ ಭಂಡಾರವನ್ನೂ ಮನಸ್ಸಿನ ಸಂಕಲ್ಪ ಶಕ್ತಿ ಎಲ್ಲ ಬಗೆಯ ಅಡೆತಡೆಗಳನ್ನು ದಾಟಿ ತನ್ನ ಗುರಿಯತ್ತ ಸಾಗಬಲ್ಲದು ಎಂಬ ದೃಢನಂಬಿಕೆ ವಿಶ್ವಾಸಗಳನ್ನೂ ಬಿಟ್ಟು ಅಗಲಿದ್ದಾರೆ.


ಗಾ ಲಿ ಕುರ್ಚಿಯ ಮೇಲೆ ಕುಳಿತು ಬ್ರಹ್ಮಾಂಡದ ‘ಪರ್ಯಟನ’ ನಡೆಸಿದ ಧೀಮಂತ ಸ್ಟೀಫನ್ ಹಾಕಿಂಗ್ ಇನ್ನಿಲ್ಲವೆಂದರೆ ಅದು ಚೋದ್ಯವೆನಿಸಿ, ಅವರು ಬ್ರಹ್ಮಾಂಡದ ಯಾವುದೋ ಮೂಲೆಯಲ್ಲಿ ಕುಳಿತು ಸಂಶೋಧನೆ ನಡೆಸುತ್ತಿದ್ದು ನಾಳೆಯೋ ನಾಡಿದ್ದೂ ನಮಗೆ ಈ ವಿಶ್ವದ ಮತ್ತೊಂದು ವಿಸ್ಮಯವನ್ನು ಪ್ರಕಟಿಸಬಹುದು ಎಂದು ಭಾಸವಾದರೆ ಅದು ಉತ್ಪ್ರೇಕ್ಷೆಯಾಗದು. ತಮ್ಮ ಸಂಶೋಧನೆಗಳು ಮತ್ತು ವಿಜ್ಞಾನ ಸಾಹಿತ್ಯ ರಚನೆ ಮೂಲಕ ಬ್ರಹ್ಮಾಂಡ ವಿಜ್ಞಾನವನ್ನು ಜನರ ಹತ್ತಿರಕ್ಕೆ ತಂದು, ಬ್ರಹ್ಮಾಂಡದ ರಹಸ್ಯಗಳನ್ನು ನಮ್ಮ ಮುಂದೆ ತೆರದಿಟ್ಟ ‘ಚಿರಂಜೀವಿ ವಿಜ್ಞಾನಿ’ ಸ್ಟೀಫನ್ ಹಾಕಿಂಗ್ ಮರಣವನ್ನು ನಾವು ಅಗಲಿಕೆ ಎನ್ನಬಹುದೇ ಹೊರತು ‘ಸಾವು’ ಎನ್ನಲಾಗದು. ಇಪ್ಪತ್ತು- ಇಪ್ಪತ್ತೊಂದನೇ ಶತಮಾನದ ಜನಜೀವನದ ಮೇಲೆ ಇಷ್ಟೊಂದು ಗಾಢವಾದ ಪ್ರಭಾವ ಬೀರಿದ ಸ್ಟೀಫನ್ ಹಾಕಿಂಗ್ ವಿಶ್ವ ವಿಜ್ಞಾನದ ಒಂದು ಭಾಗವಾಗಿ ಸದಾ ನಮ್ಮೊಡನೆ ಇರುತ್ತಾರೆ. ಸ್ಟೀಫನ್ ಹಾಕಿಂಗ್ ಏನು, ಅವರ ಬದುಕೇನು? ವಿಜ್ಞಾನಕ್ಕೆ ಮತ್ತು ಪ್ರಪಂಚದ ಜನರಲ್ಲಿ ವೈಜ್ಞಾನಿಕ ದೃಷ್ಟಿ ಬೆಳೆಸಲು ಅವರ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಲು ನಾವು ಸ್ಟೀಫನ್ ಹಾಕಿಂಗ್ ಬದುಕನ್ನು ವಿಜ್ಞಾನದ ಒಂದು ಪುಸ್ತಕವನ್ನಾಗಿ ಓದಿಯೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

 ಜಗತ್ತಿನ ಹತ್ತನೆಯ ವಿಸ್ಮಯವೆನ್ನಬಹುದಾದ ಸ್ಟೀಫನ್ ಹಾಕಿಂಗ್ ಜನಿಸಿದ್ದು 1942ರ ಜನವರಿ 4ರಂದು, ಇಂಗ್ಲೆಂಡಿನ ಆಕ್ಸ್‌ಫರ್ಡ್ ನಗರದಲ್ಲಿ. ತಂದೆ ಫ್ರಾಂಕ್ ಹಾಕಿಂಗ್ ಮತ್ತು ತಾಯಿ ಇಸೊಬೆಲ್ಲೆ. ಬಾಲ್ಯ ಅಷ್ಟೇನೂ ಆರೋಗ್ಯಕರವಾಗಿರಲಿಲ್ಲ. ಬಾಲಕ ಹಾಕಿಂಗ್ ಓದು ವಿದ್ಯೆಯಲ್ಲಿ ಬುದ್ಧಿವಂತನೆನಿಸಿಕೊಂಡರೂ ಕಾಯಿಲೆಯೊಂದು ಅವನನ್ನು ಕಾಡುತ್ತಿತ್ತು. ಎಂದೇ ದೈಹಿಕ ಬೆಳವಣಿಗೆಯಲ್ಲೂ ಸಣಕಲ. ಆದರೆ ಮುಂದೆ ಬೌದ್ಧಿಕವಾಗಿ ಮಹಾಕಾಯನಾಗುವ ಎಂಬ ಸುಳಿವು ನಮಗೆ ಅವನ ಹದಿನಾಲ್ಕನೆಯ ವಯಸ್ಸಿನಲ್ಲೇ ಕಂಡುಬರುತ್ತದೆ. ಆ ವಯಸ್ಸಿನಲ್ಲಿ ವಿಶೇಷ ಓದಿಗೆ ಗಣಿತ ಶಾಸ್ತ್ರವನ್ನು ಆಯ್ಕೆಮಾಡಿಕೊಂಡು ಸುತ್ತಮುತ್ತಲಿನವರನ್ನು ಬೆರಗುಗೊಳಿದ ಸ್ಟೀಫನ್ ಹಾಕಿಂಗ್ ಆಕ್ಸ್‌ಫರ್ಡ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಮೆಟ್ಟಲು ಏರುವ ವೇಳೆಗಾಗಲೇ ಅವನ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗಳ ನಡುವೆ ಸಮತೋಲ ತಪ್ಪಿತ್ತು. ಬುದ್ಧಿಮನಸ್ಸುಗಳು ಮುಂದೆ ಇದ್ದರೆ, ಕೈ ಹಿಂದಿರುತ್ತಿತ್ತು. ಬೂಟಿನ ಲೇಸು ಹಾಕಲಾಗುತ್ತ್ತಿರಲಿಲ್ಲ, ಬರವಣಿಗೆಯಲ್ಲಿ ಅಕ್ಷರಗಳು ಸೊಟ್ಟಪಟ್ಟ ಇರುತ್ತಿದ್ದವು. ಹೂಜಿಯಿಂದ ಲೋಟಕ್ಕೆ ನೀರು ಬಗ್ಗಿಸಿಕೊಳ್ಳಲಾಗುತ್ತಿರಲಿಲ್ಲ. ತಜ್ಞ ವೈದ್ಯರು ಇದನ್ನು ನರಸಂಬಂಧಿ ಗಂಭೀರ ಕಾಯಿಲೆ ಎಂದು ಗುರುತಿಸಿದರು. ಮಾಂಸಖಂಡಗಳು ನಿಷ್ಕ್ರಿಯವಾಗುತ್ತಾ ಹೋಗಿ ಸಾವನ್ನು ತರುವ ಲಕ್ಷಣದ ಈ ರೋಗ ಮಿದುಳಿನ ತಂಟೆಗೆ ಹೋಗುವುದಿಲ್ಲವಂತೆ. ಹೀಗೆ ಹಾಕಿಂಗ್‌ನ ಮಿದುಳು ಸುರಕ್ಷಿತ. ಎಂದೇ ಇರಬೇಕು ಹಾಕಿಂಗ್ ಅವರ ದೇಹ ಕುಗ್ಗುತ್ತ ಹೋದಂತೆ ಅವರ ಬುದ್ಧಿ ದೈತ್ಯ ಸ್ವರೂಪದಲ್ಲಿ ಬೆಳೆಯುತ್ತ ಹೋಯಿತು.

1962ರಲ್ಲಿ ಆಕ್ಸ್‌ಫರ್ಡ್ ವಿಶ್ಸವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ‘ಹಿಗ್ಗುತ್ತಿರುವ ಬ್ರಹ್ಮಾಂಡದ ಗುಣಲಕ್ಷಣ’ ಕುರಿತು ವಿಶೇಷ ಅಧ್ಯಯನ ನಡೆಸಿ ಡಾಕ್ಟರೆಟ್ ಪಡೆದರು. 1979ರಲ್ಲಿ ಗಣಿತ ಶಾಸ್ತ್ರದ ಅಧ್ಯಾಪಕರಾಗಿ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಸೇರಿದರು. ಅಲ್ಲಿ ಸುಮಾರು ಮೂವತ್ತು ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿದರು. ಮೂವತ್ತ್ತೆರಡರ ಚಿಕ್ಕ ಪ್ರಾಯದಲ್ಲೇ ಬ್ರಿಟನ್ನಿನ ಸುಪ್ರಸಿದ್ಧ ರಾಯಲ್ ಸೊಸೈಟಿ ಸದಸ್ಯತ್ವದ ಗೌರವಕ್ಕೆ ಪಾತ್ರರಾದ ಸ್ಟೀಫನ್ ಹಾಕಿಂಗ್ ಅವರಿಗೆ ಬ್ರಹ್ಮಾಂಡದ ಉಗಮ ಮತ್ತು ಕಪ್ಪುರಂಧ್ರಗಳು ಪ್ರಿಯವಾದ ವಿಷಯಗಳಾಗಿದ್ದವು. ಕಪ್ಪುರಂಧ್ರದಲ್ಲಿ ಶೂನ್ಯವಾಗಿದ್ದ ಕಾಲವನ್ನು ಹಿಂದಕ್ಕೆ ತಿರುಗಿಸುತ್ತ ಬಂದರೆ ಅದು ಇಡೀ ವಿಶ್ವವನ್ನೇ ಬಿಂದುರೂಪಕ್ಕೆ ತರುತ್ತದೆ, ಅಂದರೆ ಮಹಾಸ್ಫೋಟ(ಬಿಗ್ ಬ್ಯಾಂಗ್) ಎನ್ನುವ ತೀರ್ಮಾನಕ್ಕೆ ಬಂದರು.ತಮ್ಮ ಈ ಹೊಸ ಸಿದ್ಧಾಂತವನ್ನು ಸೂತ್ರರೂಪದಲ್ಲಿ ವಿವರಿಸಿದರು. ವಿಜ್ಞಾನಿಗಳು ನಿಬ್ಬೆರಗಾಗಿ ಈ ಹೊಸ ಸಿದ್ಧಾಂತವನ್ನು ಒಪ್ಪಿಕೊಂಡರು. ಸ್ಟೀಫನ್ ಹಾಕಿಂಗ್ ಅವರ ಆಸಕ್ತಿ ಅಧ್ಯಯನಗಳು ಭೌತ ವಿಜ್ಞಾನಕ್ಕಷ್ಟೆ ಸೀಮಿತಗೊಂಡಿರಲಿಲಲ್ಲ. ಅವರು ತಮ್ಮ ಪ್ರಥಮ ಆಸಕ್ತಿಯಾದ ಗಣಿತ ವಿಜ್ಞಾನದಲ್ಲೂ ವಿಶೇಷ ಅಧ್ಯಯನ, ಸಂಶೋಧನೆಗಳನ್ನು ನಡೆಸಿ ಹೊಸ ಸಿದ್ಧಾಂತಗಳನ್ನು ಮಂಡಿಸಿದ್ದರು. ಖಗೋಲದ ಕಪ್ಪುರಂಧ್ರಗಳ ಅಧ್ಯಯನದಲ್ಲಿ ತೊಡಗಿದ್ದಾಗ, ಕಪ್ಪುರಂಧ್ರ ತನ್ನಲ್ಲಿನ ದ್ರವ್ಯ ರಾಶಿಯಿಂದಾಗಿ ತನ್ನ ಭಾರಕ್ಕೆ ತಾನೆ ಕುಸಿದು ಬೆಳಕನ್ನು ಹೊರಸೂಸಲಾಗದ ವಿಲಕ್ಷಣ ಸ್ಥಿತಿ ತಲುಪಿದಾಗ ಅಲ್ಲಿ ಕಾಲ-ದೇಶ-ದಿಕ್ಕುದೆಸೆಗಳೆಲ್ಲವೂ ಶೂನ್ಯವಾಗುತ್ತದೆ. ಆದರೆ ಆಗಲೂ ಅದು ವಿಕಿರಣ ಸೂಸುತ್ತಲೇ ಇರುತ್ತದೆ ಎಂಬ ಸಿದ್ಧಾಂತ ವನ್ನು ಗಣಿತ ಸೂತ್ರಗಳ ಮೂಲಕ ವಾದಿಸಿ ವಿವಾದಕ್ಕೆ ಗುರಿಯಾದರು.

ಬ್ರಹ್ಮಾಂಡದ ವಿಸ್ತರಣೆ ಮತ್ತು ತನ್ನದೇ ಭಾರದಿಂದ ಕುಸಿಯುವ ಕಪ್ಪು ರಂಧ್ರದ ಕುಸಿತವನ್ನು ನಿಲ್ಲಿಸಲಾಗದೆಂಬ ಖಭೌತ ವಿಜ್ಞಾನಿ ರೋಜರ್ ಪೆನ್ರೋಸ್ ಅವರ ಆಲೋಚನೆಗಳಿಂದ ಸ್ಫೂರ್ತಿ ಪಡೆದು ಸಂಶೋಧನೆ ನಡೆಸಿದ ಸ್ಟೀಫನ್ ಹಾಕಿಂಗ್ ಬ್ರಹ್ಮಾಂಡದ ಏಕತ್ವ ಕುರಿತ ಪ್ರಮೇಯವನ್ನು ಮಂಡಿಸಿದರು. ಈ ಸಂಶೋಧನೆ ಮತ್ತು ಅದರ ಮುಂದುವರಿದ ಸಂಶೋಧನೆಗಳು ‘ಹಾಕಿಂಗ್-ಪೆನ್ರೋಸ್ ಪ್ರಮೇಯಗಳು’ ಎಂದು ವಿದ್ವತ್‌ವಲಯಗಳಲ್ಲಿ ಮಾನ್ಯತೆ ಪಡೆದವು.ಇದರಿಂದ ಹಾಕಿಂಗ್ ಬೆಳಗಾಗುವುದರಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದರು. ಆನಂತರ ಅವರು ಸಹೋದ್ಯೋಗಿ ವಿಜ್ಞಾನಿಗಳ ಜೊತೆಗೂಡಿ ಕಪ್ಪುರಂಧ್ರದ ರೂಪ, ರಚನೆ ಮತ್ತು ಕ್ರಿಯೆಗಳನ್ನು ಕುರಿತು ನಿಯಮಗಳನ್ನು ರೂಪಿಸಿದರು. ಉಷ್ಣಬಲ ವಿಜ್ಞಾನದ (ಥರ್ಮೊಡೈನಮಿಕ್ಸ್) ನಿಯಮಗಳನ್ನು ಹೋಲುವಂಥ ನಿಯಮಗಳು ಇವು. ಕಪ್ಪುರಂಧ್ರಗಳು ವಿಕಿರಣ ಸೂಸುವವು ಎಂದು ಪ್ರತಿಪಾದಿಸುವ ಈ ಸಿದ್ಧಾಂತ ವಿವಾದಗಳಿಗೆ ಎಡೆಮಾಡಿಕೊಟ್ಟಿತು. ಬೆಳಕೂ ಸೇರಿದಂತೆ ಯಾವುದೂ ಕಪ್ಪು ರಂಧ್ರದಿಂದ ಹೊರಬರುವುದಿಲ್ಲ ಎಂಬುದು ಈವರೆಗಿನ ಶಾಸ್ತ್ರೀಯ ಸಿದ್ಧಾಂತವಾಗುತ್ತು. ಹಾಕಿಂಗ್ ಕ್ವಾಂಟಮ್ ಸಿದ್ಧಾಂತದ ನೆರವಿನಿಂದ ಈ ಅಸಾಂಗತ್ಯವನ್ನು ನಿವಾರಿಸಿದರು. ಇದರಿಂದಾಗಿ ಕಪ್ಪುರಂಧ್ರದ ವಿಕಿರಣಕ್ಕೆ ಹಾಕಿಂಗ್ ವಿಕಿರಣ (ಹಾಕಿಂಗ್ ರೇಡಿಯೇಷನ್)ಎಂದು ನಾಮಕರಣ ಮಾಡಲಾಯಿತು.

ನಕ್ಷತ್ರ ಲೋಕದ ವಿದ್ಯಮಾನಗಳನ್ನು ಕುರಿತು ಏಳು ಹೊಸ ಸಿದ್ಧಾಂತ ಗಳನ್ನು ಮಂಡಿಸಿದ ಕೀರ್ತಿ ಹಾಕಿಂಗ್ ಅವರದು. ಸೈದ್ಧಾಂತಿಕ ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳೂ ದೊರಕಿದ್ದವಾದರೂ ಹಾಕಿಂಗ್ ವಿಶ್ವದ ಮಹೋನ್ನತ ಗೌರವವಾದ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದರು. ಕಪ್ಪುರಂಧ್ರದಿಂದ ವಿಕಿರಣ ಹೊರಹೊಮ್ಮುತ್ತದೆ ಎಂಬ ಅವರ ಸಿದ್ಧಾಂತಕ್ಕೆ ನೊಬೆಲ್ ಪುರಸ್ಕಾರ ದೊರೆಯುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಹಾಕಿಂಗ್ ಅವರ ಶೋಧನೆಗೆ ಪುರಾವೆಗಳಿಲ್ಲವೆಂಬ ಕಾರಣದಿಂದ ನೊಬೆಲ್ ಪ್ರಶಸ್ತಿ ನಿರಾಕರಿಸಲಾಯಿತು. ತನ್ನ ಸಂಶೋಧನೆಗಳ ಮೂಲಕ ಬ್ರಹ್ಮಾಂಡ ವಿಸ್ತಾರ ಕುರಿತಂತೆ ಸಾಂಪ್ರದಾಯಿಕ ಮಾದರಿಯ ಚಿಂತನೆಯಲ್ಲಿ ಮುಳುಗಿಹೋಗಿದ್ದ ಭೌತವಿಜ್ಞಾನಿಗಳಿಗೆ ತೀವ್ರಗಾಮಿ ಆಲೋಚನೆಗಳಿಂದ ಹೊಸಮಾರ್ಗ ತೋರಿಸಿದವರು ಸ್ಟೀಫನ್ ಹಾಕಿಂಗ್. ವಿಜ್ಞಾನ ಲೇಖಕನಾಗಿ ಹೊಸ ತಲೆಮಾರಿನ ಮೇಲೆ ಗಾಢವಾದ ಪ್ರಭಾವ ಬೀರಿದವರು. ವಿಜ್ಞಾನ ಪ್ರಪಂಚಕ್ಕೆ ಹೊಸ ಮಾರ್ಗತೋರಿದ ಹಾಕಿಂಗ್ ಅವರ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಗ್ರಂಥ ವಿಜ್ಞಾನ ಸಾಹಿತ್ಯದಲ್ಲಿ ಹೊಸ ಮೈಲಿಗಲ್ಲು ಎನ್ನಿಸಿಕೊಂಡಿತು.

ಬ್ರಹ್ಮಾಂಡದ ವಿಸ್ತರಣೆ ಮತ್ತು ಅದರ ಗತಿಲಯ ಕುರಿತು ಪಾರಿಭಾಷಿಕ ಪದಗಳ ಕಸರತ್ತಿಲ್ಲದೆ ಸರಳ ಭಾಷೆಯಲ್ಲಿ, ಆಕರ್ಷಕ ಶೈಲಿಯಲ್ಲಿ ಬ್ರಹ್ಮಾಂಡದ ಬೆಳವಣಿಗೆ, ವಿಸ್ತಾರ, ಗತಿನಿಯಮಗಳನ್ನು ನಿರೂಪಿಸುವ ಈ ಗ್ರಂಥ ಬೆಳಗಾಗುವುದರಲ್ಲಿ ಜನಪ್ರಿಯತೆಯ ಶಿಖರಮುಟ್ಟಿ ಲಕ್ಷಾಂತರ ಪ್ರತಿಗಳು ಖರ್ಚಾದವು. ಲಕ್ಷಾಂತರ ಮಂದಿ ಅವರ ಅಭಿಮಾನಿಗಳಾದರು. ಐವತ್ತು ವರ್ಷಗಳಿಗೂ ಹೆಚ್ಚುಕಾಲ ಸಾವು ಸ್ಟೀಫನ್ ಹಾಕಿಂಗ್‌ನ ಮನೋವೇಧಕ ಸಂಗಾತಿಯಾಗಿತ್ತು. ‘‘ನಲವತ್ತೊಂಬತ್ತು ವರ್ಷಗಳ ಕಾಲ ನಾನು ಸಾವಿನ ನಿರೀಕ್ಷೆಯಲ್ಲಿ ಬದುಕಿದ್ದೇನೆ. ನನಗೆ ಸಾವಿನ ಹೆದರಿಕೆಯಿಲ್ಲ. ನನಗೆ ಸಾಯುವ ಆತುರವೂ ಇಲ್ಲ’’ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದ ಹಾಕಿಂಗ್ ಅವರಿಗೆ ಮರಣದ ನಂತರ ಮಿದುಳು ಮತ್ತು ದೇಹಕ್ಕೆ ಏನಾಗುತ್ತದೆ ಎಂಬ ಬಗ್ಗೆ ಲೋಕಾರೂಢಿಯ ವ್ಯಾವಹಾರಿಕ ಧೋರಣೆ ಇತ್ತು. ಮಾತನಾಡುವ ಶಕ್ತಿ ಕಳೆದುಕೊಂಡು, ಗಾಲಿಕುರ್ಚಿಗೆ ಅಳವಡಿಸಿದ್ದ ಕಂಪ್ಯೂಟರಲ್ಲಿ ತಮ್ಮ ಭಾವನೆಗಳನ್ನು ಬರೆದು ತೋರಿಸುತ್ತಿದ್ದ ಅವರು ಮನುಷ್ಯನ ಮಿದುಳನ್ನು ಕಂಪ್ಯೂಟರ್ ಎಂದೇ ಪರಿಗಣಿಸಿದ್ದರು. ಮಿದುಳಿನ ಅಂಶಗಳು, ಅವಯವಗಳು ವಿಫಲಗೊಂಡಾಗ ಕಂಪ್ಯೂಟರ್ ಕೆಲಸ ನಿಂತುಹೋಗುತ್ತದೆ.ಮುರಿದುಬಿದ್ದ ಕಂಪ್ಯೂಟರಿಗೆ ಸ್ವರ್ಗ-ನರಕಗಳಿಲ್ಲ.

ದೇವರು ಕುರಿತ ಸಾಂಪ್ರದಾಯಿಕ ಪರಿಕಲ್ಪನೆಯನ್ನು ತಿರಸ್ಕರಿಸುವ ಹಾಕಿಂಗ್ ‘ಬ್ರೀಫ್ ಹಿಸ್ಟರಿ ಆಫ್ ಟೈಮ್’ಗ್ರಂಥದಲ್ಲಿ ದೇವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವಿಶ್ವದಲ್ಲಿನ ಸಕಲಚರಾಚರಗಳು ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಭೌತಶಾಸ್ತ್ರದಲ್ಲಿ ಸಮಂಜಸವಾದ ಸಮಜಾಯಿಷಿ ಇಲ್ಲದಂಥ ಸಂದರ್ಭದಲ್ಲಿ ದೇವರ ಪರಿಕಲ್ಪನೆಯ ನಸುನೋಟ ಹೊಮ್ಮಿರಬೇಕು. ದೇವರು ಎಂಬುದು ಮನುಷ್ಯ ತನ್ನ ಅಸ್ತಿತ್ವಕ್ಕೆ ನೀಡುವ ಒಂದು ಸಮರ್ಥನೆಯಷ್ಟೆ. ಆದರೆ ಈ ಸಮರ್ಥನೆಯೂ ಭೌತ ಶಾಸ್ತ್ರದ ನಿಯಮವೇ. ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದಕ್ಕೆ ಮೊದಲು ಈ ಪ್ರಪಂಚ ಭಗವಂತನ ಸೃಷ್ಟಿ ಎಂದು ನಂಬುವುದು ಸಹಜವಾಗಿತ್ತು. ಆದರೆ ಈಗ ವಿಜ್ಞಾನ ಹೆಚ್ಚು ಸಮರ್ಥನೀಯವಾದ, ನಂಬುವಂತಹ ಕಾರಣವನ್ನು ನೀಡುತ್ತಿದೆ. ‘‘ನಮಗೆ ದೇವರ ಮನಸ್ಸು ಏನೆಂಬುದು ಗೊತ್ತು ಎನ್ನುವಾಗ ಅದರ ಅರ್ಥ ದೇವರಿಗೆ ತಿಳಿದಿರಬಹುದಾದ ಎಲ್ಲವೂ ನಮಗೂ ಗೊತ್ತು ಎನ್ನುವುದೇ ಆಗಿರುತ್ತದೆ. ಇದಲ್ಲದ ಮತ್ತೊಬ್ಬ ದೇವರಿದ್ದರೆ ಆಗ ನಾನೊಬ್ಬ ನಾಸ್ತಿಕ’’ ಎನ್ನುತ್ತಾನೆ ಹಾಕಿಂಗ್.

 ಮನೋಬಲ ದೃಢವಾಗಿದ್ದಲ್ಲಿ ದೈಹಿಕ ಶಕ್ತಿಯನ್ನು ತನ್ನಿಚ್ಛೆಗೆ ಅನುಗುಣವಾಗಿ ಬಾಗಿಸಿಕೊಳ್ಳಬಹುದು ಎಂಬುದಕ್ಕೆ ಸ್ಟೀಪನ್ ಹಾಕಿಂಗ್‌ಉತ್ತಮ ನಿದರ್ಶನವಾಗಿ ನಿಲ್ಲುತ್ತಾರೆ. ಸರ್ವದಾ ಪ್ರಯೋಗಶೀಲರಾಗಿದ್ದ ಅವರು ಅರವತ್ತೈದನೆಯ ವಯಸ್ಸಿನಲ್ಲೂ ತಮ್ಮ ಮನಸ್ಸು ದೇಹಗಳನ್ನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಅವರ ಈ ಒಂದು ‘ಸಾಹಸ’ವನ್ನು ಗಮನಿಸಹುದು. 2007ರಲ್ಲಿ ಅವರು ನ್ಯೂಟನ್‌ನ ಗುರುತ್ವಾಕರ್ಷಣ ನಿಯಮ ಪರೀಕ್ಷಿಸಲು ಅಮೆರಿಕದಲ್ಲಿ ಅತ್ಯಂತ ಹಗುರ ವಿಮಾನದಲ್ಲಿ ಹಾರಾಟ ನಡೆಸಿದ್ದರು. ವಿಜ್ಞಾನ ಪ್ರಪಂಚ ಅವರ ಈ ಸಾಹಸವನ್ನು ನಿಬ್ಬೆರಗಾಗಿ ನೋಡಿತ್ತು. ಹೀಗೆ ಅವರು ಮನೋಬಲವಿದ್ದಲ್ಲಿ ದೈಹಿಕ ನ್ಯೂನತೆ ಸಾಧನೆಗೆ ಅಡ್ಡಿಯಾಗಲಾರದು ಎಂಬುದನ್ನು ತೋರಿಸಿಕೊಟ್ಟಿದ್ದರು. ರೊಬೋಟ್‌ನಂತಹ ಕೃತಕ ಬುದ್ಧಿಮತ್ತೆ ಆಧರಿಸಿದ ತಂತ್ರಜ್ಞಾನ ಮಾನವ ಕುಲಕ್ಕೆ ವಿನಾಶಕಾರಿ, ಸಹಜ ಬುನಾದಿಯ ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದಲೇ ಮಾನವನ ಪ್ರಾಪಂಚಿಕ ಅಭ್ಯುದಯ ಸಾಧ್ಯ ಎಂದು ನಂಬಿದ್ದರು.

ಸ್ಟೀಫನ್ ಹಾಕಿಂಗ್, ವಿಜ್ಞಾನದ ಪಿತಾಮಹರಾದ ಗೆಲಿಲಿಯೋನ ಮುನ್ನೂರನೇ ಪುಣ್ಯತಿಥಿಯಂದು ಜನಿಸಿ, ಮತ್ತೊಬ್ಬ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ ಜನ್ಮದಿನದಂದು ಇಹಲೋಕಕ್ಕೆ ವಿದಾಯ ಹೇಳಿದ್ದು ಕಾಕತಾಳೀಯವಿರಬಹುದು ಎಂದರೆ ಅದು ಅವೈಜ್ಞಾನಿಕವಾದೀತೇ? ಅದೇನೇ ಇರಲಿ, ವಿಜ್ಞಾನದಲ್ಲಿ ಮಾನವಕುಲದ ಆಸಕ್ತಿ ಮತ್ತು ಕಲ್ಪನೆಗಳ ಗರಿಗೆದರಿಸಿದ ಗೆಲಿಲಿಯೋ, ಐಸಾಕ್ ನ್ಯೂಟನ್, ಐನ್‌ಸ್ಟೈನ್‌ರಂಥ ಮಹಾನ್ ವಿಜ್ಞಾನಿಗಳ ಪರಂಪರೆಯನ್ನು ಮುಂದುವರಿಸಿದವರು ಸ್ಟೀಫನ್ ಹಾಕಿಂಗ್ ಎಂದರೆ ಅದು ಅತಿಶಯೋಕ್ತಿಯಾಗಲಾರದು. ನ್ಯೂಟನ್ ಮತ್ತು ಐನ್‌ಸ್ಟೈನ್ ಅವರ ಸಂಶೋಧನೆ ಮತ್ತು ಪ್ರಯೋಗಗಳ ಆಳ-ಅಗಲ-ವಿಸ್ತಾರಗಳು ಹೆಚ್ಚು ವ್ಯಾಪಕವಾದವು. ಹಾಕಿಂಗ್‌ನ ಅಧ್ಯಯನ ಮತ್ತು ಸಂಶೋಧನಾ ಕಾರ್ಯಕ್ಷೇತ್ರ ಬ್ರಹ್ಮಾಂಡ ಮತ್ತು ಗುರುತ್ವಾಕರ್ಷಣೆಗೆ ಸೀಮಿತಗೊಂಡಿತ್ತು. ಹಾಕಿಂಗ್ ಅವರ ಬದುಕು ಮಾನವಕುಲಕ್ಕೆ ಬ್ರಹ್ಮಾಂಡದ ರಹಸ್ಯಗಳನ್ನು ತೆರೆದು ತೋರಿಸಿದಷ್ಟೇ ಅಲ್ಲದೆ ಮಾನವ ಪ್ರಯತ್ನಗಳ ಇನ್ನೊಂದು ತುದಿಯಲ್ಲಿ ಭರವಸೆಯ ಬೆಳಕಿದೆ ಎಂಬುದನ್ನು ಸ್ವಂತ ನಿದರ್ಶನದಿಂದ ತೋರಿಸಿಕೊಟ್ಟಿತು. ಕನಸುಗಳನ್ನು ನನಸಾಗಿಸುವ ಮಾರ್ಗದಲ್ಲಿ ಮಾನವನ ದೈಹಿಕ ನ್ಯೂನತೆಗಳು ಅಡ್ಡಿಯಾಗಲಾರವು ಎಂಬದನ್ನು ಅವರು ತೋರಿಸಿಕೊಟ್ಟರು. ಸ್ಟೀಫನ್ ಹಾಕಿಂಗ್ ತಮ್ಮ ಹಿಂದೆ, ಮನುಕುಲಕ್ಕೆ ಅಪಾರವಾದ ವೈಜ್ಞಾನಿಕ ಜ್ಞಾನ ಭಂಡಾರವನ್ನೂ ಮನಸ್ಸಿನ ಸಂಕಲ್ಪ ಶಕ್ತಿ ಎಲ್ಲ ಬಗೆಯ ಅಡೆತಡೆಗಳನ್ನು ದಾಟಿ ತನ್ನ ಗುರಿಯತ್ತ ಸಾಗಬಲ್ಲದು ಎಂಬ ದೃಢನಂಬಿಕೆ ವಿಶ್ವಾಸಗಳನ್ನೂ ಬಿಟ್ಟು ಅಗಲಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top