--

ಗಾಂಧಿ-150: ಭಾರತದ ಪ್ರಸಕ್ತ ರಾಜಕಾರಣದ ದಿಕ್ಕು ದೆಸೆ

ಡಾ. ಬಿ.ಎಲ್.ಶಂಕರ್

ಮೂಲತಃ ಕಾಫಿ ಪ್ಲಾಂಟರ್. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ, ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ಇವರು, ವಕೀಲರಾಗಿ ವೃತ್ತಿ ಆರಂಭಿಸಿ ನಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಜನತಾ ಪಕ್ಷದ ಮೂಲಕ ಗುರುತಿಸಿಕೊಂಡ ಇವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರೊಂದಿಗೆ ಭಾರತ್ ಯಾತ್ರೆಯಲ್ಲಿ ಪಾಲ್ಗೊಂಡವರು. ಜೆಪಿ, ಲೋಹಿಯಾ ಅವರ ವಿಚಾರಧಾರೆಗೆ ಮನಸೋತವರು. ಬದಲಾವಣೆ ಬಯಸಿ 1980ರಲ್ಲಿ ರಾಜಕಾರಣಕ್ಕೆ ಇಳಿದ ಇವರು, ಸಂಸದರಾಗಿ ವಿಧಾನ ಪರಿಷತ್ತಿನ ಸಭಾಪತಿಯಾಗಿ, ತಮ್ಮ ಇತಿಮಿತಿಯಲ್ಲಿಯೇ ಜನಪರ ಕೆಲಸಗಳನ್ನು ಮಾಡಿದವರು. ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಒಲವುಳ್ಳ; ಓದು, ಚರ್ಚೆ, ಸಂವಾದಗಳಲ್ಲಿ ಆಸಕ್ತಿಯುಳ್ಳ; ಉತ್ತಮ ಸಮಾಜಕ್ಕಾಗಿ ತುಡಿಯುವ ಇವರು, ‘ಪ್ರಯೋಗರಂಗ’ ಎಂಬ ರಂಗ ತಂಡಕ್ಕೆ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇವರು, ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲೇ, ಪ್ರತಿಷ್ಠಿತ ಕಲಾ ಸಂಸ್ಥೆಯಾದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯುವಜನತೆ ರಾಜಕಾರಣದಲ್ಲಿ ಆಸಕ್ತಿಹೊಂದಿದ್ದರೂ, ಸಾಂಪ್ರದಾಯಿಕ ನೇರ ಮತದಾನದ ರಾಜಕಾರಣಕ್ಕಿಂತ ಮುಷ್ಕರ, ಹರತಾಳ, ಬಂದ್ ಮುಂತಾದ ‘ಬೀದಿ ರಾಜಕಾರಣ’ದಲ್ಲೇ ಹೆಚ್ಚು ಆಸಕ್ತರಾಗಿದ್ದಾರೆಂಬುದು ಇತ್ತೀಚೆಗೆ ಭಾರತವೂ ಸೇರಿದಂತೆ ವಿಶ್ವದ 128 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದ ಫಲಿತಾಂಶ. ಇದಕ್ಕೆ ಯುವ ಜನಾಂಗ ಯಾವಾಗಲೂ ಅಸ್ತಿತ್ವದಲ್ಲಿರುವ ಸರಕಾರದ ವಿರುದ್ಧದ ಮನೋ ಭಾವನೆಯನ್ನೇ ನೆಚ್ಚಿಕೊಳ್ಳುವುದು; ರಾಜಕಾರಣದ ಮುಖ್ಯವಾಹಿನಿಯಲ್ಲಿ ಹೊಸ ಧ್ವನಿಗಳಿಗೆ ಮುಕ್ತ ಪ್ರವೇಶವಿಲ್ಲದಿರುವುದು. ರಾಜಕಾರಣದಲ್ಲಿ ತತ್ವ-ಸಿದ್ಧಾಂತ-ನೈತಿಕತೆಗಳ ವಿಚಾರದಲ್ಲಿ ರಾಜಿಮಾಡಿಕೊಂಡಿರುವುದು ಪ್ರಮುಖ ಕಾರಣಗಳು.

ಭಾರತದ ಸಂವಿಧಾನ ಮತ್ತು ಆಶಯಗಳು

ಭಾರತದ ಸಂವಿಧಾನದ ರಚನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡವರಲ್ಲಿ ಸ್ವತಂತ್ರ ಭಾರತದ ಸಂವಿಧಾನದ ರೂಪುರೇಷೆಗಳ ಕುರಿತಾಗಿ ಸಾಕಷ್ಟು ಭಿನ್ನಮತವಿದ್ದರೂ ಕೂಡ ಒಟ್ಟಾರೆಯಾಗಿ ಸಂವಿಧಾನ ಎಂತಹ ಮೌಲ್ಯಗಳನ್ನು ಪ್ರತಿನಿಧಿಸಬೇಕು ಎನ್ನುವುದರ ಬಗ್ಗೆ ಸಹಮತವಿತ್ತು ಎನ್ನುವುದು ಸ್ಪಷ್ಟ. ಸಂವಿಧಾನ ರಚನೆಯಲ್ಲಿ ಭಾಗವಹಿಸಿದ್ದವರಲ್ಲಿ ಸಾಕಷ್ಟು ಮಂದಿ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದವರು ಹಾಗೂ ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂದಿಸದ ವಸಾಹತು ಆಳ್ವಿಕೆ ಯ ಅನಾಹುತಗಳನ್ನು ಅನುಭವಿಸಿದವರು. ಸ್ವತಂತ್ರ ಭಾರತದ ಸಂವಿಧಾನ ಅಂತಹ ದೋಷಗಳಿಂದ ಮುಕ್ತವಾಗಿರಬೇಕೆಂಬುದು ಸಹಜವಾಗಿಯೇ ಅವರ ಬಯಕೆಯಾಗಿತ್ತು. ಸಂವಿಧಾನ ಕರ್ತೃಗಳ ಈ ಹಂಬಲ ಸಂವಿಧಾನದ ಮುನ್ನುಡಿಯಲ್ಲಿ ಪ್ರತಿಧ್ವನಿಸುವುದನ್ನು ನಾವು ಕಾಣುತ್ತೇವೆ. ಸಂವಿಧಾನದ ಚೌಕಟ್ಟಿನಲ್ಲಿ ರೂಪಿತವಾಗುವ ಆಳ್ವಿಕೆಯು ಮೇಲಿನಿಂದ ಹೇರಲ್ಪಟ್ಟ ಆಳ್ವಿಕೆಯಾಗಿರದೆ ಜನರ ಆಶೋತ್ತರಗಳನ್ನು ಪ್ರತಿನಿಧಿಸಬೇಕು ಎನ್ನುವುದನ್ನು ಮುನ್ನುಡಿಯ ಪ್ರಾರಂಭದ ಸಾಲುಗಳು ಸ್ಪಷ್ಟವಾಗಿ ಸಾರುತ್ತವೆ. ‘‘ಭಾರತದ ಪ್ರಜೆಗಳಾದ ನಾವು’’ ನಮಗೇ ಕೊಟ್ಟುಕೊಂಡ ಸಂವಿಧಾನವಿದು. ಸಂವಿಧಾನಬದ್ಧ ಆಳ್ವಿಕೆಯ ಸ್ವರೂಪ ಸಾರ್ವ ಭೌಮತೆ, ಸಮಾಜವಾದ, ಜಾತ್ಯತೀತ ವಾದ, ಪ್ರಜಾಪ್ರಭುತ್ವ, ಗಣರಾಜ್ಯ, ನ್ಯಾಯ, ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ವ್ಯಕ್ತಿಯ ಘನತೆ, ರಾಷ್ಟ್ರದ ಐಕ್ಯತೆ ಹಾಗೂ ಭದ್ರತೆ, ಅಂತರ್‌ರಾಷ್ಟೀಯ ಶಾಂತಿ ಹಾಗೂ ನ್ಯಾಯಯುತವಾದ ಅಂತರ್‌ರಾಷ್ಟ್ರೀಯ ವ್ಯವಸ್ಥೆ, ಮೂಲಭೂತ ಕರ್ತವ್ಯ ಗಳಾದ ರಾಷ್ಟ್ರಭಕ್ತಿ, ರಾಷ್ಟ್ರೀಯಭಾವನೆ, ಮಾನವೀಯತೆ, ಶಿಸ್ತು, ಪರಿಸರಸಂರಕ್ಷಣೆ, ಮಹಿಳಾವಾದ, ವೈಜ್ಞಾನಿಕ ದೃಷ್ಟಿಕೋನ ಮುಂತಾದ ಮೌಲ್ಯಗಳನ್ನು ಜನರಲ್ಲಿ ಉದ್ದೀಪನಗೊಳಿಸುವ ಆಶಯಗಳನ್ನು ಒಳಗೊಂಡಿದೆ. ಈ ಮೇಲಿನ ಎಲ್ಲ ಆಶೋತ್ತರಗಳು, ಮೌಲ್ಯಗಳು ಎಷ್ಟೇ ಉದಾತ್ತವಾಗಿದ್ದರೂ ಕೂಡಾ ಅವುಗಳ ಪ್ರಾಮಾಣಿಕ ಅಳವಡಿಕೆಯಲ್ಲಿ ನಾವೆಷ್ಟು ಯಶಸ್ವಿಯಾಗಿದ್ದೇವೆ ಎಂಬುದನ್ನು ಮೌಲ್ಯಮಾಪನಮಾಡಲು ಇದು ಸಕಾಲ. ಗಾಂಧೀಜಿ, ಆಚಾರ್ಯ ವಿನೋಬಾ ಭಾವೆ, ಮಹರ್ಷಿ ಅರವಿಂದ, ರವೀಂದ್ರನಾಥ ಠಾಗೋರ್ ಮುಂತಾದ ದಾರ್ಶನಿಕರುಗಳ ಕನಸಿನ ‘ಭಾರತ’ ಹೇಗಿರಬೇಕಿತ್ತು? ಈಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಎಂಬ ಬಗ್ಗೆ ಶೇ.60ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯುವ ಮತದಾರರನ್ನು ಹೊಂದಿರುವ ಇಂದಿನ ಭಾರತ ವಸ್ತುನಿಷ್ಠವಾಗಿ ವಿಮರ್ಶೆ ಮಾಡಬೇಕಿದೆ.

ಯುವಜನತೆ ರಾಜಕಾರಣದಲ್ಲಿ ಆಸಕ್ತಿಹೊಂದಿದ್ದರೂ, ಸಾಂಪ್ರದಾಯಿಕ ನೇರ ಮತದಾನದ ರಾಜಕಾರಣಕ್ಕಿಂತ ಮುಷ್ಕರ, ಹರತಾಳ, ಬಂದ್ ಮುಂತಾದ ‘ಬೀದಿ ರಾಜಕಾರಣ’ದಲ್ಲೇ ಹೆಚ್ಚು ಆಸಕ್ತರಾಗಿದ್ದಾರೆಂಬುದು ಇತ್ತೀಚೆಗೆ ಭಾರತವೂ ಸೇರಿದಂತೆ ವಿಶ್ವದ 128 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದ ಫಲಿತಾಂಶ. ಇದಕ್ಕೆ ಯುವ ಜನಾಂಗ ಯಾವಾಗಲೂ ಅಸ್ತಿತ್ವದಲ್ಲಿರುವ ಸರಕಾರದ ವಿರುದ್ಧದ ಮನೋ ಭಾವನೆಯನ್ನೇ ನೆಚ್ಚಿಕೊಳ್ಳುವುದು; ರಾಜಕಾರಣದ ಮುಖ್ಯವಾಹಿನಿಯಲ್ಲಿ ಹೊಸ ಧ್ವನಿಗಳಿಗೆ ಮುಕ್ತ ಪ್ರವೇಶವಿಲ್ಲದಿರುವುದು. (ಜಗತ್ತಿನ ಒಟ್ಟು ಸಂಸತ್ ಸದಸ್ಯರುಗಳ ಪೈಕಿ ಕೇವಲ ಶೇ.2ರಷ್ಟು ಮಂದಿ ಮಾತ್ರ 30 ವರ್ಷ ವಯಸ್ಸಿಗಿಂತ ಚಿಕ್ಕವರು); ರಾಜಕಾರಣದಲ್ಲಿ ತತ್ವ-ಸಿದ್ಧಾಂತ-ನೈತಿಕತೆಗಳ ವಿಚಾರದಲ್ಲಿ ರಾಜಿಮಾಡಿಕೊಂಡಿರುವುದು ಪ್ರಮುಖ ಕಾರಣಗಳು.

ಯುವಜನತೆ ನೇರ ಮತದಾನದಲ್ಲಿ ಪಾಲ್ಗೊಳ್ಳುವ ಪ್ರಮಾಣ ಆಶಾದಾಯಕ ವಾಗಿಲ್ಲವೆಂಬುದು ಇತಿಹಾಸವನ್ನು ಗಮನಿಸಿದರೆ ಕಂಡುಬರುತ್ತದೆ. ಮತದಾನ ಮಾಡುವವರ ಪೈಕಿ ಅವರು ಒಂದೋ ನಿರ್ದಿಷ್ಟ ರಾಜಕೀಯ ಪಕ್ಷದ ಮೇಲೆ ಒಲವುಳ್ಳವರಾಗಿರುತ್ತಾರೆ; ಅಥವಾ ಆ ಪಕ್ಷದ ಸ್ವಯಂಸೇವಕರಾಗಿರುತ್ತಾರೆ; ಇಲ್ಲವೇ ಪಕ್ಷದ ಕಾರ್ಯಕರ್ತರಾಗಿರುತ್ತಾರೆ. ಮತದಾನದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮತದಾನವನ್ನು ಪ್ರಭಾವಿಸುವ ಇತರ ಮೂಲಗಳಾದ ಬೀದಿಯಲ್ಲಿ ಹೋರಾಟ ಪ್ರದರ್ಶನ ಮತ್ತು ಡಿಜಿಟಲ್/ವಿದ್ಯುನ್ಮಾನ/ಸಾಮಾಜಿಕ ಜಾಲತಾಣ ಮಾಧ್ಯಮಗಳ ಮೂಲಕ ಸಕ್ರಿಯರಾಗಿರುವುದಕ್ಕೆ ಹೆಚ್ಚು ಒತ್ತುಕೊಡುತ್ತಾರೆ.

ನಮ್ಮ ಚುನಾವಣಾವ್ಯವಸ್ಥೆ ಮತ್ತು ಅದರ ಮೂಲಕ ಆಯ್ಕೆಯಾಗುವ ಚುನಾಯಿತ ಪ್ರತಿನಿಧಿಗಳೇ ಇದಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ ಮಾತ್ರ. ಭಾರತದ ದಾರ್ಶನಿಕರುಗಳ ಹಾಗೂ ಸಂವಿಧಾನ ಪಿತೃಗಳ ಕನಸಿನ ಭಾರತ ಈಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಈ ಕೆಲವಿಚಾರಗಳ ಹಿನ್ನೆಲೆಯಲ್ಲಿ ಪರೀಕ್ಷಿಸಬಹುದು.

ಜನಾಂದೋಲನಗಳು

ಒಂದು ನಿರ್ದಿಷ್ಟ ವಿಚಾರದ ಬಗ್ಗೆ ಜನಾಂದೋಲನಗಳು ಕ್ರಿಯಾಶೀಲವಾಗಿರುವುದು ಇತ್ತೀಚಿನ ವರ್ಷಗಳಲ್ಲಿನ ಪ್ರಮುಖ ಬದಲಾವಣೆ. ಉದಾ: ಅಣ್ಣಾ ಹಝಾರೆಯವರ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಜನಾಂದೋಲನ. ಇದು ಭ್ರಷ್ಟಾಚಾರ ವಿರೋಧಿ ಜನಾಂದೋಲನವಾಗಿದ್ದರೂ, ಸಂಸತ್ತಿನ ಸದಸ್ಯರಲ್ಲದ ಅಣ್ಣಾ ಹಝಾರೆಯವರು ಜನಾಂದೋಲನದ ಮೂಲಕ ಸಂಸತ್ತಿಗೆ ಹೀಗೆಯೇ ನಿರ್ಣಯಿಸಬೇಕೆಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ಎನ್ನುವುದು ಸಂಸತ್ತಿನ ಪ್ರತಿನಿಧಿಗಳ ವಾದವಾದರೆ; ಲಕ್ಷಾಂತರ ಜನರ ಪ್ರತಿನಿಧಿಯಾದ ಹಝಾರೆಯವರ ಪ್ರಾತಿನಿಧ್ಯವನ್ನು ಸಂಸತ್ತು ಕಡೆಗಣಿಸುವಂತಿಲ್ಲ ಎನ್ನುವ ಪ್ರತಿವಾದವನ್ನು ಹುಟ್ಟುಹಾಕುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದು ಇತಿಹಾಸ.

ಅಭಿವ್ಯಕ್ತಿ ಸ್ವಾತಂತ್ರ

ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಗಲಭೆಯು ಅಭಿವ್ಯಕ್ತಿ ಸ್ವಾತಂತ್ರದೊಂದಿಗೆ ತಳುಕು ಹಾಕಿಕೊಂಡಿದ್ದನ್ನು ನಾವು ಗಮನಿಸಬಹುದು. ಇದು ಅಭಿವ್ಯಕ್ತಿ ಸ್ವಾತಂತ್ರ ಮತ್ತು ರಾಷ್ಟ್ರೀಯ ಐಕ್ಯತೆಯ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿತ್ತು. ಭಾರತದಲ್ಲಿ ಅಳವಡಿಸಿ ಕೊಂಡಿರುವ ಜಾತ್ಯತೀತೆಯ ಸ್ವರೂಪವೂ ಸಹ ಸಾಕಷ್ಟು ವಿವಾದಕ್ಕೊಳಗಾಗಿದೆ. ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನಿನಲ್ಲಿ ಪ್ರಭುತ್ವವು ಕ್ಯೆಹಾಕಬಾರದು ಎನ್ನುವ ನಿಲುವು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ರಾಜೀವ್ ಗಾಂಧಿಯವರ ಕಾಲದಲ್ಲಿ ಉದ್ಭವವಾದ ಶಾಬಾನು ಪ್ರಕರಣ ಈ ಪ್ರಶ್ನೆಯನ್ನು ಮುಂಚೂಣಿಗೆ ತಂದಿತ್ತು. ಸಂವಿಧಾನವು ಕೊಡಮಾಡಿರುವ ಅಲ್ಪಸಂಖ್ಯಾತ ಧರ್ಮಗಳ ರಕ್ಷಣೆಯ ನಿಯಮಗಳು ಸಮಾನ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳಲು ಅಡ್ಡಿಯಾಗಿದೆ ಎನ್ನುವ ಕೂಗೂ ಆಗಾಗ ಕೇಳಿಬರುತ್ತಿದೆ. ರಾಮಜನ್ಮ ಭೂಮಿ ಪ್ರಕರಣವು ಬಹುಸಂಖ್ಯಾತರ ಆಶೋತ್ತರಗಳಿಗೆ ಜಾತ್ಯತೀತತೆ ಅಡ್ಡಿಯಾಗಿದೆ ಎನ್ನುವಂತೆ ಪ್ರತಿಬಿಂಭಿಸಲಾಗುತ್ತಿದೆ.

ಅಗಾಧ ವೈವಿಧ್ಯವನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಇಂತಹ ಚರ್ಚೆಗಳು ಕಂಡುಬರುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಷ್ಟೆಲ್ಲಾ ಗೊಂದಲ ಹಾಗೂ ವಿವಾದಗಳ ನಡುವೆಯೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಮುಂದುವರಿದುಕೊಂಡು ಬಂದಿದೆ ಹಾಗೂ ಅದು ಮುಂದೆಯೂ ಹೀಗೆಯೇ ಮುಂದುವರಿದುಕೊಂಡು ಹೋಗುವ ಲಕ್ಷಣಗಳಿವೆ ಎನ್ನುವುದನ್ನು ನಾವು ಗುರುತಿಸಿದರೆ ಭಾರತದ ಪ್ರಜಾಪ್ರಭುತ್ವದ ಅಗಾಧ ಅಂತಃಶಕ್ತಿಯ ಅರಿವು ನಮಗಾಗುತ್ತದೆ.

ಗಾಂಧೀಜಿಯವರ ಹುಟ್ಟುಹಬ್ಬದ 150ನೇ ವರ್ಧಂತಿಯ ಪ್ರಸ್ತುತ ಸಂದರ್ಭದಲ್ಲಿ ಇತ್ತೀಚೆಗಿನ ವಿದ್ಯಮಾನಗಳನ್ನು ಮಾತ್ರ ಪರಿಗಣಿಸಿ, ನಮ್ಮ ದೇಶದ ಪ್ರಗತಿಯ ಬಗ್ಗೆ ಒಂದು ನಿರ್ಧಾರಕ್ಕೆ ಬರುವುದು ತಪ್ಪೆನಿಸಬಹುದು. ಹಾಗಾಗಿ, ಭಾರತದ ಪ್ರಜಾಪ್ರಭುತ್ವ ಪದ್ಧತಿ ಹಾಗೂ ರಾಜಕಾರಣದ ಬಗ್ಗೆ ಮಂಥನ ನಡೆಸುವಾಗ ಗಾಂಧೀಜಿಯವರ ಜೊತೆಯಲ್ಲಿ ಬಸವಣ್ಣನವರನ್ನೂ ಸ್ಮರಿಸಿಕೊಳ್ಳುವುದು ಸಮಂಜಸವಾದೀತು. ಏಕೆಂದರೆ, ಇವರಿಬ್ಬರೂ ತಮ್ಮ ಕಾಲಮಾನದ ಸಾಮಾಜಿಕ-ರಾಜಕೀಯ ಅನಿಷ್ಟಗಳ ವಿರುದ್ಧ ಹೋರಾಡಿದ್ದರೂ, ಅವುಗಳ ಅಂತಿಮ ಪ್ರತಿಫಲ ಸಮಾನತೆಯೇ ಆಗಿತ್ತು; ಅರ್ಥಾತ್ ಪ್ರಜಾಫ್ರಭುತ್ವ ಪದ್ಧತಿಯ ಸ್ಥಾಪನೆಯಾಗಿತ್ತು. ಬಸವಣ್ಣ ಮತ್ತು ಗಾಂಧಿ - ಇವರಿಬ್ಬರ ಕಾಲಮಾನ, ಚಾರಿತ್ರಿಕ ಸಂದರ್ಭಗಳು ವಿಭಿನ್ನವೇ. ಬಸವಣ್ಣನವರ ಕಾಲದಲ್ಲಿ ರಾಜಷಾಹಿ, ವೈದಿಕಪುರೋಹಿತಷಾಹಿಗಳು ವಿಜೃಂಭಿಸಿದ್ದರೆ; ಗಾಂಧೀಜಿ ಕಾಲದಲ್ಲಿ ಬ್ರಿಟಿಷ್ ವಸಾಹತುಷಾಹಿ ಮೆರೆಯುತ್ತಿತ್ತು. ಬಸವಣ್ಣ ಸಮುದಾಯದ ಧಾರ್ಮಿಕ ಸ್ವಾತಂತ್ರವನ್ನು ತಮ್ಮ ಆದ್ಯತೆಯನ್ನಾಗಿಸಿಕೊಂಡರೆ; ಗಾಂಧೀಜಿಗೆ ರಾಜಕೀಯ ಸ್ವಾತಂತ್ರ ಪ್ರಧಾನವಾಯಿತು. ಹಾಗಾಗಿ ಸ್ವಾತಂತ್ರಾ ನಂತರದ ಭಾರತದಲ್ಲಿ ನಾವೇನು ಸಾಮಾಜಿಕ ಸಂಘರ್ಷಗಳನ್ನು ಕಾಣುತ್ತಿದ್ದೇವೋ, ಅವುಗಳ ಇನ್ನೊಂದು ರೂಪ ಸ್ವಾತಂತ್ರ ಪೂರ್ವದ ಭಾರತದಲ್ಲಿಯೂ ಇತ್ತು. ಅವೆಲ್ಲವನ್ನೂ ಮೀರಿ ಭಾರತ ಬೆಳೆಯುತ್ತಿರುವ ಪರಿ ಒಂದು ಪ್ರಬುದ್ಧ ರಾಷ್ಟ್ರದ ಚಿತ್ರಣವನ್ನು ವಿಶ್ವದ ಮುಂದಿಡುವಲ್ಲಿ ಸಫಲವಾಗಿದೆ.

ಸಂತ ಮನೋಧರ್ಮ ಹೊಂದಿದ್ದ ಗಾಂಧೀಜಿ ರಾಜಕೀಯ ಕ್ರಿಯೆಯಲ್ಲಿ ತೊಡಗಿದರು. ರಾಜಕೀಯ ಕ್ರಿಯೆಯಲ್ಲಿ ತೊಡಗಿದ್ದ ಬಸವಣ್ಣ ಸಂತ ಮನೋಧರ್ಮ ರೂಪಿಸಿಕೊಂಡರು. ಇದು ಭಾರತೀಯ ಸಂದರ್ಭದಲ್ಲಿ ಮಾತ್ರ ಸಾಧ್ಯವಾಗುವ ಚಾರಿತ್ರಿಕ ಗುಣಲಕ್ಷಣಗಳು. ಬಸವಣ್ಣ ಮತ್ತು ಗಾಂಧಿಯವರ ವ್ಯಕ್ತಿತ್ವದಲ್ಲಿ ಸಮಾನ ಅಂಶಗಳೆಂದರೆ; ಆತ್ಮ ನಿರೀಕ್ಷೆ, ನಿಷ್ಠುರ ಪ್ರಾಮಾಣಿಕತೆ ಮತ್ತು ನೈತಿಕತೆ. ಇವು ಇಂದಿನ ಕಾಲಮಾನದ ರಾಜಕಾರಣದಲ್ಲಿ ಮರೆಯಾಗಿರುವ ವಿಚಾರಗಳೂ ಕೂಡಾ.

1915 ಜನವರಿ 9ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ ಗಾಂಧಿ ತನ್ನ ಸ್ವಾಗತ ಸಮಾರಂಭದಲ್ಲಿ -

‘‘ನೀವೆಲ್ಲ ನನ್ನ ಗೆಲುವನ್ನಷ್ಟೇ ಗಮನಿಸಿದ್ದೀರಿ. ನನ್ನ ಸೋಲುಗಳನ್ನು ಗಮನಿಸಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನನ್ನ ಜಯದ ಹಾದಿಯನ್ನು ಕೇಳಿ ಅಭಿನಂದಿಸುತ್ತಿರುವ ನಿಮ್ಮೆದುರು ನನ್ನ ಸೋಲುಗಳು ಬೆತ್ತಲೆಯಾಗಿ ನಿಲ್ಲುತ್ತವೆ; ನನ್ನ ತಪ್ಪುಗಳೂ ಸಾಕಷ್ಟಿವೆ. ನನ್ನ ಸೋಲು ಮತ್ತು ತಪ್ಪುಗಳನ್ನು ಮತ್ತೆ ನಿರೀಕ್ಷಿಸುತ್ತಲೇ ಅವನ್ನು ಮೀರಿ ತಾಯ್ನೆಡಿನ ಸೇವೆಮಾಡಲು ಬದ್ಧನಾಗಿದ್ದೇನೆ.’’ ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆಯಾದದ್ದು, ಅರೆಬೆತ್ತಲೆಯಾಗಿ ಬೆಳೆದ ಅಂಬೇಡ್ಕರ್ ಪೂರ್ಣ ಸೂಟುಧಾರಿಯಾದದ್ದು ಭಾರತೀಯ ಸಂದರ್ಭದಲ್ಲಿ ಒಂದು ಮೈಲಿಗಲ್ಲು. ಒಬ್ಬರದ್ದು ಪಾಪಪ್ರಜ್ಞೆಯಿಂದ ಉದ್ಭವಿಸಿದ ನಿರ್ಧಾರವಾದರೆ; ಇನ್ನೊಬ್ಬರದ್ದು ಸಾಮಾಜಿಕ ಸ್ವಾಭಿಮಾನದ ಪ್ರತೀಕವಾಯಿತು. ಇಂಥಾ ಮೇರು ವ್ಯಕ್ತಿತ್ವದ ರಾಷ್ಟ್ರದ್ರಷ್ಟಾರರ ‘ಜಯಂತಿ’ ಒಂದು ಆಚರಣೆಯಾಗಿ, ಆತ್ಮಸಾಕ್ಷಿಯಿಲ್ಲದ ಜನನಾಯಕರು ‘ಮಹಾತ್ಮಾ’ನ ಬಗ್ಗೆ ಮಾತಿನಮನೆ ಕಟ್ಟುವುದೇ ಪ್ರತಿವರ್ಷದ ವಿಪರ್ಯಾಸವಾಗುತ್ತಿದೆ!

ಈಗ ಭಾರತೀಯ ಪ್ರಜಾಪ್ರಭುತ್ವದ ತಳಹದಿ; ವಾಸ್ತವ ಸತ್ಯಗಳ ದರ್ಶನ ಮಾಡಿಕೊಳ್ಳೋಣ. ಜೊತೆಗೆ ಒಂದಷ್ಟು ವಿಚಾರಗಳಲ್ಲಿ ನಮ್ಮನ್ನು ನಾವು ಸ್ವ-ವಿಮರ್ಶೆ ಮಾಡಿಕೊಳ್ಳೋಣ. ಯಾಕೆಂದರೆ, ಈ ಪ್ರಕ್ರಿಯೆ ನಮ್ಮ ರಾಷ್ಟ್ರಪ್ರಗತಿಯ ದೃಷ್ಟಿಕೋನದಲ್ಲಿರುವ ಲೋಪದೋಷಗಳನ್ನು ಗುರುತಿಸುವಷ್ಟರಮಟ್ಟಿಗಾದರೂ ಸಹಕಾರಿಯಾದೀತು.

►ಭಾರತದಲ್ಲಿ 4,120 ರಾಜ್ಯಮಟ್ಟದಲ್ಲಿ ಶಾಸನ ನಿರೂಪಣೆ ಮಾಡುವ ಶಾಸಕರು ಮತ್ತು ರಾಷ್ಟ್ರಮಟ್ಟದಲ್ಲಿ 543 ಲೋಕಸಭಾ ಸದಸ್ಯರಿದ್ದಾರೆ. ಪ್ರತೀ ಲೋಕಸಭಾ ಸದಸ್ಯ ಸರಾಸರಿ 20 ಲಕ್ಷ ನಾಗರಿಕರ ಜವಾಬ್ದಾರಿ ಹೊತ್ತಿರುವುದರಿಂದ ಕೆಲವೇ ಮಂದಿ ಲೋಕಸಭಾ ಸದಸ್ಯರು ತಮ್ಮ ಸಂವಿಧಾನಬದ್ಧ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅದರ ಪರಿಣಾಮ ಲಕ್ಷಾಂತರ ಜನರ ಮೇಲೆ ಆಗುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ರಾಷ್ಟ್ರದ ಒಟ್ಟು ಹಿತದೃಷ್ಟಿಯಿಂದ ಪರಿಗಣಿಸಿದರೆ ಇದು ಉಂಟುಮಾಡುವ ಪ್ರಭಾವದ ಅಗಾಧತೆಯನ್ನು ಊಹಿಸಲಸಾಧ್ಯ.

►ವಿಶ್ವದಲ್ಲೇ ಅತೀ ಹೆಚ್ಚಿನ ದುಡಿಯುವ ಅಂದರೆ, ಯುವಕರು ಇರುವ ಭಾರತದಲ್ಲಿ, ದೇಶದ ನೀತಿಯನ್ನು ರೂಪಿಸುವವರು (ಶಾಸಕರು ಮತ್ತು ಸಂಸತ್ ಸದಸ್ಯರುಗಳು) ಬಹಳ ಎಚ್ಚರಿಕೆಯಿಂದಲೇ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

►ಭಾರತದ ಎಲ್ಲಾ ಹಂತದ ಚುನಾವಣೆಗಳಲ್ಲಿ ಅಭಿವೃದ್ಧಿಯ ವಿಚಾರಗಳ ಬಗ್ಗೆ ಈಗ ನಡೆಯುತ್ತಿರುವ ಚರ್ಚೆ-ಸಂವಾದಗಳಲ್ಲಿ ಅಸ್ಪಷ್ಟತೆಯಿದ್ದು, ಇಂತಹ ಅನುತ್ಪಾದಕ ಚರ್ಚೆಯನ್ನು ನಿಲ್ಲಿಸಬೇಕು.

►ಸಾರ್ವಜನಿಕ ಭಾಷಣಗಳಲ್ಲಿ ಅಭ್ಯರ್ಥಿಗಳು ಹೇಳುವುದೇನು? ಅಧಿಕಾರಕ್ಕೆ ಬಂದ ನಂತರ ಮಾಡುವುದೇನು? ಎಂಬುದನ್ನು ಮತದಾರರು ಮಾತ್ರವಲ್ಲದೆ ಚುನಾಯಿತ ಅಭ್ಯರ್ಥಿಗಳೂ ವಿಮರ್ಶೆಮಾಡಿ ನೋಡಬೇಕು.

►ಬಹುಪಾಲು ರಾಜಕೀಯ ನೇತಾರರ ಕಣ್ಣುಗಳಲ್ಲಿ ಜನರ ಸಂಕಷ್ಟಗಳನ್ನು ಕಾಣುವ ಬೆಳಕಿಲ್ಲ; ಜನತೆಯ ಸಮಸ್ಯೆಗಳನ್ನು ಆಲಿಸುವ ಸಹನೆಯಿಲ್ಲ. ಹೀಗಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ.

►ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗೆ ಸ್ವಾತಂತ್ರ ಬೇಕು; ಆದರೆ, ಅವುಗಳ ಮೂಲಕ ಸಮೂಹಕ್ಕೆ ಅನ್ಯಾಯ ಆಗಬಾರದು.

►ದೇಶದ ಸಮಗ್ರ ಪ್ರಗತಿಯ ನೆಲೆಯಲ್ಲಿ ಚರ್ಚಿಸಿ ಸೂಕ್ತ ನೀತಿ-ನಿರೂಪಣೆ ಮಾಡ ಬೇಕಾದ ಸಂಸತ್ತಿನಲ್ಲಿ ಪ್ರಜಾಪ್ರತಿನಿಧಿಗಳ ಸಭೆ ಗದ್ದಲದ ಗೂಡಾಗುತ್ತಿವೆ; ಈ ಗದ್ದಲದ ಮಧ್ಯೆಯೇ ಅತ್ಯಂತ ಪ್ರಮುಖ ಮಸೂದೆಗಳು ಅಂಗೀಕರಿಸಲ್ಪಡುತ್ತಿವೆ! ಆದರೆ, ಸಂಸತ್ತಿನಲ್ಲಿ ಗದ್ದಲಮಾಡಿದ ಒಂದು ಗಂಟೆ ಬಳಿಕ ಅದೇ ಜನಪ್ರತಿನಿಧಿಗಳು ಟಿ.ವಿ.ಸ್ಟುಡಿಯೋಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ಕುಳಿತು ಯಾವನೋ ಟಿ.ವಿ. ಮಾಡರೇಟರ್ ಅಥವಾ ಆ್ಯಂಕರ್ ಒಬ್ಬರ ಮಾತಿಗೆ ತಲೆದೂಗುತ್ತಾ ಚರ್ಚೆಯಲ್ಲಿ ಭಾಗವಹಿಸುತ್ತಾರೆ! ಇದು ಎಂಥಾ ಮನ:ಸ್ಥಿತಿಯನ್ನು ಪ್ರತಿನಿಧಿಸುತ್ತಿದೆ; ಯಾರ ಮೇಲೆ ಯಾರ ಪ್ರಭಾವ ಬೀರುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ.

►ಲಾರ್ಡ್ ಬ್ರೈಸ್ (Modern Democracies  ಕೃತಿಯ ಲೇಖಕರು, ಚಿಂತಕರು) ಹೇಳಿರುವಂತೆ; ‘‘ಸರಕಾರದ ದಕ್ಷತೆಯನ್ನು ತಿಳಿಯಲು ನ್ಯಾಯಾಂಗಕ್ಕಿಂತ ಮಿಗಿಲಾದ ಪರೀಕ್ಷೆಯಿಲ್ಲ. ನ್ಯಾಯದಾನದ ದೀಪ ಆರಿದಾಗ ಆವರಿಸುವ ಕತ್ತಲೆಗಿಂತ ಮಿಗಿಲಾದ ಅಂಧಕಾರವಿಲ್ಲ.’’

►ಜನರಲ್ಲಿ ಸಂವೇದನೆ, ಚಿಂತನೆಗಳನ್ನು ಬೆಳೆಸಬೇಕಾದ ಲೇಖಕರು, ಚಿಂತಕರು, ಕಲಾವಿದರು, ಕಲಾಕಾರರು ತಮ್ಮ ಒಪ್ಪಿತ ಸಾಮಾಜಿಕ ಜವಾಬ್ದಾರಿಗಳನ್ನು ಸಮಷ್ಟಿಯ ಹಿತದೃಷ್ಟಿಯಿಂದ ನಿಭಾಯಿಸಬೇಕಾಗುತ್ತದೆ. ವಿಶೇಷವಾಗಿ ಬುದ್ಧಿಜೀವಿಗಳೆನ್ನಿಸಿಕೊಂಡವರು ಪ್ರಜಾಪ್ರಭುತ್ವದ ಪರಿಭಾಷೆ ಮತ್ತು ವೌಲ್ಯಗಳನ್ನು ವಿಶಾಲ ದೃಷ್ಟಿಕೋನದಿಂದ ಅಂತರ್ಗತಮಾಡಿಕೊಂಡು, ಅಂತೆಯೇ ತಮ್ಮ ಮಾತು- ನಡವಳಿಕೆಗಳನ್ನು ಪ್ರದರ್ಶಿಸಬೇಕಿದೆ.

►ಸಾವಿರಾರು ವರ್ಷಗಳ ಮುಂಚಿನಿಂದಲೂ ಬಹುಧರ್ಮ, ಸಂಸ್ಕೃತಿಗಳನ್ನು ಒಳಗೊಂಡಿದ್ದೂ ಸಾಂಸ್ಕೃತಿಕವಾಗಿ ಒಂದೇ ಆಗಿದ್ದ ಇಷ್ಟೊಂದು ದೊಡ್ಡ ಸಾಮ್ರಾಜ್ಯವನ್ನು ಕಳೆದುಕೊಳ್ಳುವ ದ್ವೇಷ ಹಾಗೂ ಸಂಕಟದಲ್ಲಿ ಚರ್ಚಿಲ್ - ‘‘ನಿರಕ್ಷರಿ ಭಾರತೀಯರಿಗೆ ಸ್ವಾತಂತ್ರ ಕೊಟ್ಟರೆ ಹತ್ತು ವರ್ಷಗಳಲ್ಲಿ ಅದನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಆಳಿಕೊಳ್ಳಲು ಬರದೆ ಭ್ರಷ್ಟರಾಗುತ್ತಾರೆ’’ ಎಂದು ಹೇಳಿದ್ದನ್ನು ನಿಜಮಾಡುವ ರೀತಿಯಲ್ಲಿ ನಮ್ಮ ಜನತಂತ್ರ ಸಾಗುತ್ತಿದೆ.

►ಯುವರಾಜಕಾರಣಿಗಳ ಕುರಿತಾಗಿ ಮೂಡುವ ನಿರಾಶೆಯ ಚಿತ್ರಣ ಕೇವಲ ಅವರ ವೈಯಕ್ತಿಕ ಸೋಲಿನ ವಿಚಾರವಲ್ಲ. ಅದು ಒಂದು ರಾಷ್ಟ್ರೀಯ ಬಿಕ್ಕಟ್ಟು. ಹೊಸ ತಲೆಮಾರಿನಲ್ಲೂ ಹೊಸ ಯೋಚನೆ ಕಾಣಿಸದೇ ಹೋದಾಗ, ಹೊಸ ತಲೆಮಾರು ಅಕ್ಷರಶ: ಹಳೆಯ ತಲೆಮಾರಿನ ನಾಯಕತ್ವದ ಪಡಿಯಚ್ಚಿನಂತೆ ಕಾಣಿಸಿಕೊಂಡಾಗ ಅದರರ್ಥ ಇನ್ನೂ ಹಲವು ದಶಕಗಳ ಕಾಲ ಈ ದೇಶದಲ್ಲಿ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದು!

►ಜಾಗತೀಕರಣದ ಮುಕ್ತಮಾರುಕಟ್ಟೆಯ ಇಂದಿನ ಸನ್ನಿವೇಶದಲ್ಲಿ ಸಂಪತ್ತು ಹಾಗೂ ಉತ್ಪತ್ತಿಯ ಲಾಭ ಎಲ್ಲರಿಗೂ ಸಿಗಲು ಸಾಧ್ಯವಾಗುವಂತಹ ಸಮಾನಾವಕಾಶಗಳನ್ನು ಕಲ್ಪಿಸಲು ಸರಕಾರ ಶಕ್ತವಾಗಿದೆಯೇ? ಉತ್ಪತ್ತಿಯಾದ ಸಂಪತ್ತು ಕೆಲವರ ವಶದಲ್ಲಿ ಮಾತ್ರ ಉಳಿದರೆ ಅದು ಬಡತನದ ಸಮುದ್ರದಲ್ಲಿ ಶ್ರೀಮಂತಿಕೆಯ ದ್ವೀಪಗಳನ್ನು ಸೃಷ್ಟಿಸುವುದಿಲ್ಲವೇ?

(Defending Politics – Why Democracy matters in 21st Century

ಮ್ಯಾಥ್ಯೂ ಫ್ಲಿಂಡರ್ಸ್‌ ಕೃತಿಯ ಲೇಖಕರು) ಪ್ರತಿಪಾದಿಸುವಂತೆ; ಪ್ರಜಾಪ್ರಭುತ್ವದ ಮೇಲೆ ಮುಕ್ತಮಾರುಕಟ್ಟೆ ಉಂಟುಮಾಡುವ ಮೊದಲ ಪ್ರಭಾವ - ‘‘ಪ್ರಜಾಪ್ರಭುತ್ವದ ಮೂಲಧರ್ಮವಾದ ಬಹುಸಂಖ್ಯಾತ ಸಮೂಹ ಪ್ರಭಾವವನ್ನು ಕಡೆಗಣಿಸುತ್ತದೆ. ಕೊಳ್ಳುವ ಶಕ್ತಿಯಿಲ್ಲದ ಬಹುಸಂಖ್ಯಾತರ ಅಭಿಪ್ರಾಯಗಳಿಗೆ ಬೆಲೆ ಬರುವುದಿಲ್ಲ. ಹಾಗಾಗಿ ಮಾರುವವರ ಮಾತು ಮುಖ್ಯವಾಗುತ್ತದೆ. ನೈತಿಕ ವಾದಗಳನ್ನು ಮಂಡಿಸುವ ಪ್ರಜಾಪ್ರಭುತ್ವದ ಸತ್ವವನ್ನು ಮೊಟಕುಗೊಳಿಸುತ್ತದೆ. ಲಂಚವನ್ನು ವಿರೋಧಿಸುವವರು ಸಮಾಜದಲ್ಲಿ ದಡ್ಡರಂತೆ ಪರಿಗಣಿಸಲ್ಪಡುತ್ತಾರೆ.’’ 1863ರಲ್ಲಿ ಅಮೆರಿಕದ ಗೆಟಿಸ್‌ಬರ್ಗ್ ಎಂಬಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಅಬ್ರಹಾಂ ಲಿಂಕನ್;( ‘‘We here resolve that government of the people, by the people, for the people shall not perish from the earth'' )ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ಎಂಬ ಆಡಳಿತಾತ್ಮಕ ವ್ಯವಸ್ಥೆ ಹಳಿತಪ್ಪಲು ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ವಾಗ್ದಾನವನ್ನು ಲಿಂಕನ್ ಅಮೆರಿಕದ ಜನರಿಗೆ ನೀಡಿದ್ದರು. ಅದು ಅಲ್ಲಿ ಇನ್ನೂ ಜೀವಂತವಾಗಿದೆ.

(Media Research & Information Bureau ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಚುನಾವಣೆಯಿಂದ ಚುನಾವಣೆಗೆ ಅರ್ಥಕಳೆದುಕೊಳ್ಳುತ್ತಿದೆ. ಭಾರತದ ಉದ್ದಗಲಕ್ಕೂ ಕುಟುಂಬಗಳ ಪ್ರಭುತ್ವ ತನ್ನ ವಿರಾಟ್ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ಇನ್ನು ನಿರ್ದಿಷ್ಟ ರಾಜಕೀಯ ಸಿದ್ಧಾಂತದ ನೆಲೆಯಲ್ಲಿ ಸ್ಥಾಪನೆಗೊಂಡ ಅನೇಕ ಪ್ರಾದೇಶಿಕ ಪಕ್ಷಗಳು ಈಗ ವ್ಯಕ್ತಿಕೇಂದ್ರಿತ ಇಲ್ಲವೇ ಕುಟುಂಬಕೇಂದ್ರಿತ ರಾಜಕೀಯ ಪಕ್ಷಗಳಾಗಿವೆ. )ಸಮೀಕ್ಷೆ ಪ್ರಕಾರ; ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚೂ ಕಡಿಮೆ 117 ವಿಧಾನಸಭಾ ಕ್ಷೇತ್ರಗಳು ವ್ಯಕ್ತಿಗತ ಪಾಳೇಪಟ್ಟುಗಳಾಗಿವೆ! ಈ ಕ್ಷೇತ್ರಗಳ ನಖಶಿಖಾಂತ ಹಿಡಿತಸಾಧಿಸಿರುವ ಪಾಳೇಗಾರರ ವಿರುದ್ಧ ಸೆಣಸಾಡುವ ಸಾಮರ್ಥ್ಯ ಇನ್ನೊಬ್ಬ ಅಭ್ಯರ್ಥಿಗೆ ಬರಲು ಸಾಧ್ಯವೇ ಇಲ್ಲ! ತಾಲೂಕಿನ ಆಡಳಿತ ವ್ಯವಸ್ಥೆ ಈ ಪಾಳೇಗಾರರ ಆಣತಿಯಂತೆಯೇ ನಡೆಯುವಷ್ಟರಮಟ್ಟಿಗೆ ಹಿಡಿತವಿದೆ. ಹೀಗಾಗಿ ನಿಜವಾಗಿಯೂ ಚುನಾವಣೆ ನಡೆಯುವುದು ಕೇವಲ 107 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ!

ಧರ್ಮ ರಾಜಕಾರಣ

ಇವೆಲ್ಲಕ್ಕೆ ಕಲಶವಿಟ್ಟಂತೆ ನಡೆಯುತ್ತಿರುವ ‘ಧರ್ಮ ರಾಜಕಾರಣ’ ಇನ್ನೊಂದು ಮಜಲಿಗೆ ದೇಶವನ್ನು ಕೊಂಡೊಯ್ಯುತ್ತಿದೆ. ಯಾವುದೇ ದೇಶದ ಸಂವಿಧಾನವಾಗಲೀ, ಕಾನೂನಾಗಲೀ, ಸರಕಾರಗಳಾಗಲೀ ಯಾವುದೇ ಧರ್ಮಗಳನ್ನು ಹುಟ್ಟುಹಾಕಲು, ಅಂತೆಯೇ ಅಳಿಸಿಹಾಕಲು ಸಾಧ್ಯವಿಲ್ಲ. ಅದು ಜನರ ನಂಬಿಕೆ, ಆಚರಣೆ, ಪರಂಪರೆಗೆ ಸಂಬಂಧಿಸಿದ ವಿಚಾರ. 12ನೇ ಶತಮಾನದಲ್ಲಿನ ಬಸವಣ್ಣ ಲಿಂಗ, ಜಾತಿ, ವೃತ್ತಿ ಕಾರಣಕ್ಕೆ ಇದ್ದ ಅಸಮಾನತೆಯನ್ನು ಧಿಕ್ಕರಿಸಿ ಸಮಸಮಾಜದ ನಿರ್ಮಾಣಕ್ಕೆ ದೊಡ್ಡ ಕ್ರಾಂತಿಯನ್ನು ಕೈಗೊಂಡರು. ಅದು ಅಂದಿನ ಅಗತ್ಯವಾಗಿತ್ತು. ವರ್ಣಾಶ್ರಮ, ಜಾತಿಮತಗಳ ನಿರಾಕರಣೆ, ಸಮಾನತೆ ಇವೆಲ್ಲವೂ ಬಸವಣ್ಣ ಜಗತ್ತಿಗೆ ಕೊಟ್ಟಿರುವ ವಿಚಾರಗಳು. ಬುದ್ಧ, ಜೈನಧರ್ಮದ ತೀರ್ಥಂಕರರು, ಗುರುನಾನಕ್ ಮೊದಲಾದವರೂ ಇದೇ ಕೆಲಸವನ್ನು ಮಾಡಿದ್ದಾರೆ. ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಗ್ಗಂಟಾಗಿಯೇ ಉಳಿದಿದ್ದ ವೇದ-ಉಪನಿಷತ್ತುಗಳ ಸಾರವನ್ನು, ಜೀವನಮೌಲ್ಯಗಳನ್ನು ಸರಳ ವಚನಗಳ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದ ಶ್ರೇಯಸ್ಸು ವಚನಕಾರರಿಗೆ ಸಲ್ಲುತ್ತದೆ. ಒಬ್ಬ ಮನುಷ್ಯನ ಜೊತೆಗೆ ಸಕಲಜೀವಿಗಳ ಒಳಿತನ್ನು ಬಯಸಿ, ಸಾವಿರಾರು ವರ್ಷಗಳ ಕಾಲ ತನಗೆ ಎದುರಾಗುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯಹೊಂದಿರುವ ಕಾರಣಕ್ಕೆ ಧರ್ಮಗಳು ಪ್ರಸ್ತುತವಾಗಬೇಕು ಅಥವಾ ಪ್ರಸ್ತುತವಾಗಬಾರದು. ಒಂದು ದೇಶದ ಕಾನೂನಿನ ಚೌಕಟ್ಟು ರಚನೆಗೆ ಸಂವಿಧಾನ ಹೇಗೆ ಮುಖ್ಯವೋ ಹಾಗೆ ನಾಗರಿಕ ಬದುಕಿನಲ್ಲಿ ಧಾರ್ಮಿಕ ಚೌಕಟ್ಟನ್ನು ರೂಪಿಸುವಲ್ಲಿ ನಮ್ಮ ಧಾರ್ಮಿಕ ಮುಖಂಡರ ವಿಚಾರಧಾರೆಗಳು, ಧರ್ಮಗ್ರಂಥಗಳು ಕೆಲಸಮಾಡಿವೆ. ಅದರಲ್ಲಿಯೂ ಮನುಷ್ಯನ ಖಾಸಗಿ ಬದುಕನ್ನು ಹೊರತುಪಡಿಸಿ ಉಳಿದ ಸಾರ್ವಜನಿಕ ಬದುಕಿನಲ್ಲಿ ಅವನನ್ನು ಸಮುದಾಯಪರವಾದ ಜೀವಿಯನ್ನಾಗಿ ಬದುಕುವಂತೆ ತಿಳಿಸಿವೆ. ಕುವೆಂಪು, ಗಾಂಧಿ, ಅಂಬೇಡ್ಕರ್ ಮೊದಲಾದವರು ಈ ನಿಟ್ಟಿನಲ್ಲಿ ಇತ್ತೀಚೆಗೆ ಪ್ರಯತ್ನಮಾಡಿದ್ದಾರೆ. ಯಾವುದೇ ಮತ-ಧರ್ಮದಲ್ಲಿ ಸಂಕುಚಿತ ಮನೋಭಾವ ಬೆಳೆಸದೇ ಖಾವಿಧಾರಿಗಳಿಂದ ಹಿಡಿದು ರಾಜಕಾರಣಿಗಳ ಸಹಿತ ಎಲ್ಲಾ ಚಿಂತಕರು ಒಟ್ಟಿಗೆ ಸೇರಿ ಸರಿಯಾದ ಚರ್ಚೆ ನಡೆಸಬೇಕು. ಇಲ್ಲದಿದ್ದರೆ ಬಸವಣ್ಣನಾಗಲೀ, ಅಂಬೇಡ್ಕರ್ ಆಗಲೀ, ಗಾಂಧೀಜಿಯಾಗಲೀ ಇವರುಗಳ ಚಿಂತನೆಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಬಸವಣ್ಣ, ಗಾಂಧೀಜಿಯಂಥ ದಾರ್ಶನಿಕರನ್ನು ಜಾತಿಯ ಚೌಕಟ್ಟಿನಲ್ಲಿ ಬಂಧಿಸಿ ಪೂಜಿಸುವುದರಿಂದ ಹೀಗೆಲ್ಲಾ ಆಗಿದೆ. ಅವರಿಗೆ ದೇವರ ಪಟ್ಟಕೊಟ್ಟು ಪೂಜಿಸುವುದರ ಬದಲು ಅವರ ಚಿಂತನೆಗಳನ್ನು ನಾವು ಅನುಸರಿಸಬೇಕು. ಇದು ಕಷ್ಟಕರವಾದ ಕೆಲಸವಾದರೂ ಇದೇ ಇಂದಿನ ಅಗತ್ಯ.

‘‘ನಿಯಮಗಳ ಅರಿವು ಅನುಸರಣೆ ಇಲ್ಲದವನು ಜನಸೇವಕನಾಗಲಾರ - ಗಾಂಧಿ’’

ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆಯಾದದ್ದು, ಅರೆಬೆತ್ತಲೆಯಾಗಿ ಬೆಳೆದ ಅಂಬೇಡ್ಕರ್ ಪೂರ್ಣ ಸೂಟುಧಾರಿಯಾದದ್ದು ಭಾರತೀಯ ಸಂದರ್ಭದಲ್ಲಿ ಒಂದು ಮೈಲಿಗಲ್ಲು. ಒಬ್ಬರದ್ದು ಪಾಪಪ್ರಜ್ಞೆಯಿಂದ ಉದ್ಭವಿಸಿದ ನಿರ್ಧಾರವಾದರೆ; ಇನ್ನೊಬ್ಬರದ್ದು ಸಾಮಾಜಿಕ ಸ್ವಾಭಿಮಾನದ ಪ್ರತೀಕ ವಾಯಿತು. ಇಂಥಾ ಮೇರು ವ್ಯಕ್ತಿತ್ವದ ರಾಷ್ಟ್ರದ್ರಷ್ಟಾರರ ‘ಜಯಂತಿ’ ಒಂದು ಆಚರಣೆಯಾಗಿ, ಆತ್ಮಸಾಕ್ಷಿಯಿಲ್ಲದ ಜನನಾಯಕರು ‘ಮಹಾತ್ಮಾ’ನ ಬಗ್ಗೆ ಮಾತಿನಮನೆ ಕಟ್ಟುವುದೇ ಪ್ರತಿವರ್ಷದ ವಿಪರ್ಯಾಸವಾಗುತ್ತಿದೆ!

ಯುವರಾಜಕಾರಣಿಗಳ ಕುರಿತಾಗಿ ಮೂಡುವ ನಿರಾಶೆಯ ಚಿತ್ರಣ ಕೇವಲ ಅವರ ವೈಯಕ್ತಿಕ ಸೋಲಿನ ವಿಚಾರವಲ್ಲ. ಅದು ಒಂದು ರಾಷ್ಟ್ರೀಯ ಬಿಕ್ಕಟ್ಟು. ಹೊಸ ತಲೆಮಾರಿನಲ್ಲೂ ಹೊಸ ಯೋಚನೆ ಕಾಣಿಸದೇ ಹೋದಾಗ, ಹೊಸ ತಲೆಮಾರು ಅಕ್ಷರಶ: ಹಳೆಯ ತಲೆಮಾರಿನ ನಾಯಕತ್ವದ ಪಡಿಯಚ್ಚಿನಂತೆ ಕಾಣಿಸಿಕೊಂಡಾಗ ಅದರರ್ಥ ಇನ್ನೂ ಹಲವು ದಶಕಗಳ ಕಾಲ ಈ ದೇಶದಲ್ಲಿ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದು!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top