--

ಗ್ರಿಫಿತ್ ಎಂಬ ಮೊದಲ ಸಿನೆಮಾ ಗುರು

    ಡಾ.ಕೆ.ಪುಟ್ಟಸ್ವಾಮಿ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಪದವಿ, ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಹಾಗೂ ಹಂಪಿಯ ಕನ್ನಡ ವಿವಿಯಿಂದ ಡಿಲಿಟ್ ಪದವಿ ಪಡೆದವರು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪರ್ತಕರ್ತರಾಗಿ ಸೇವೆ ಆರಂಭಿಸಿದ ಇವರು, ವಡ್ಡರ್ಸೆ ರಘುರಾಮಶೆಟ್ಟರ ಸಂಪಾದಕತ್ವದ ‘ಮುಂಗಾರು’ ದಿನಪತ್ರಿಕೆಯಲ್ಲಿ, ನಂತರ ‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ಕೆಲಕಾಲ ಪತ್ರಕರ್ತರಾಗಿದ್ದವರು. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಇವರ ಪ್ರಮುಖ ಕೃತಿಗಳು. ಮಣಿಭೂಮಿಕ್, ಸಹಸ್ರಬುದ್ದೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ ಹಾಗೂ ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಪ್ರಶಸ್ತಿಗಳು ಪುಸ್ಕೃತರು.

ಗ್ರಿಫಿತ್ ನ ಆರಂಭದ ಚಿತ್ರಗಳು ಕೇವಲ ತಂತ್ರಗಳಿಂದಲೇ ಗಮನ ಸೆಳೆಯಲಿಲ್ಲ. ಆತ ಆರಿಸಿಕೊಳ್ಳುತ್ತಿದ್ದ ಪ್ರಗತಿಪರ ದೃಷ್ಟಿಯ ಕಥಾವಸ್ತುವೂ ಚಿತ್ರವನ್ನು ಮೇಲ್ಮಟ್ಟಕ್ಕೇರಿಸಲು ಕಾರಣವೆನಿಸಿತು. ‘ದಿ ರೆಡ್ಮ್ಯಾನ್ ವ್ಯೆ’ (1909) ಮತ್ತು ‘ರಾಮೋನಾ’ (1910)ರಲ್ಲಿ ಆತ ಬಿಳಿಯರು ರೆಡ್ ಇಂಡಿಯನ್ರನ್ನು ದಮನ ಮಾಡಿದ ರೀತಿಯನ್ನು ಖಂಡಿಸಿದರೆ ‘ಎ ಕಾರ್ನರ್ ಇನ್ ವ್ಹೀಟ್’ (1909) ಚಿತ್ರದಲ್ಲಿ ಬಂಡವಾಳಶಾಹಿಯು ಬಡವರಿಗೆ ಮಾಡುವ ಅನ್ಯಾಯವನ್ನು ಎತ್ತಿ ತೋರಿಸುತ್ತದೆ. ‘ದಿ ಮಸ್ಕೆಟೀಯರ್ಸ್ ಆಫ್ ಪಿಗ್ ಅಲೆ’ (1912) ಚಿತ್ರದಲ್ಲಿ ನಗರದ ಬಡತನದ ದಾರುಣ ಚಿತ್ರವಿದ್ದರೆ, ಅನೇಕ ಚಿತ್ರಗಳಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧ ತನಗಿದ್ದ ಅವಹೇಳನಕ್ಕೆ ಅಭಿವ್ಯಕ್ತಿ ನೀಡಿದ್ದಾನೆ.

ಇಪ್ಪತ್ತನೇ ಶತಮಾನ ಆರಂಭವಾಗಿ ಕೆಲವು ವರ್ಷಗಳಷ್ಟೆ ಆಗಿತ್ತು. ಛಾಯಾಗ್ರಹಣ ಎಂಬ ತಂತ್ರವು ಚಿತ್ರಕಲೆ(Painting) ಯಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡಿತ್ತು. ಅದರಿಂದಾಗಿ ವ್ಯಕ್ತಿಗಳು, ನಿಸರ್ಗವನ್ನು ಅದರ ಸಹಜತೆಯಲ್ಲೇ ಚಿತ್ರಿಸುವ ‘ವಾಸ್ತವ ಶೈಲಿ’ಯ ಚಿತ್ರಕಲೆ ಹೊಸ ಮಾರ್ಗಗಳನ್ನು ಅನ್ವೇಷಿಸಬೇಕಾಯಿತು. ಇಂಪ್ರೆಷನಿಸಂ, ಕ್ಯೂಬಿಸಂ, ಡಾಡಾಯಿಸಂ ಶೈಲಿಗಳು ಉಗಮವಾಗಲು ಅದೇ ಕಾರಣ. ಆದರೆ ಅದೇ ವೇಳೆಗೆ ಚಿತ್ರಗಳು ಚಲಿಸುವ ಮಾಂತ್ರಿಕತೆಯು ಆರಂಭವಾಯಿತು. ಲ್ಯೂಮಿಯೇರ್ ಸೋದರರು ಕಂಡುಹಿಡಿದ ‘ಚಲನಚಿತ್ರ’ ಮಾಧ್ಯಮ ಇಪ್ಪತ್ತರ ದಶಕದ ಆದಿಯಲ್ಲಿ ಬಹುದೊಡ್ಡ ಆಕರ್ಷಣೆಯಾಯಿತು. ಹೊಸ ಹುಮ್ಮಸ್ಸಿನಲ್ಲಿದ್ದ ಅಮೆರಿಕ ಸಂಸ್ಥಾನದಲ್ಲಿ ಚಲನಚಿತ್ರವು ರಂಜನೆಯ ಹೊಸ ಮಾಧ್ಯಮವಾಗಿ ಆಗಮಿಸಿತು. ‘ಜೀವಂತ ಚಿತ್ರಗಳು’ ಎಂದು ಅಮೆರಿಕನ್ನರು ಅವುಗಳನ್ನು ಬಣ್ಣಿಸುತ್ತಿದ್ದರು. ಈ ಜೀವಂತ ಚಿತ್ರಗಳ ಹೊಸ ಜಗತ್ತನ್ನು ನೋಡಲು ಅಮೆರಿಕದ ಜನರು ಮುಗಿಬಿದ್ದರು. ಕತ್ತಲಲ್ಲಿ ಕೂತು ಕೈಯಿಂದ ಸುತ್ತುವ ಪ್ರೊಜೆಕ್ಟರ್ನಿಂದ ಹೊರಬಿದ್ದು ಪರದೆಯ ಮೇಲೆ ಚಲಿಸುವ ಚಿತ್ರಗಳನ್ನು ನೋಡುವ ಸಾಮೂಹಿಕ ಹುಚ್ಚಿಗೆ ಅಮೆರಿಕ ಬಲಿಯಾಯಿತು. ಈ ಹುಚ್ಚನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಅಲ್ಲಿನ ವಣಿಕರು ಸನ್ನದ್ಧರಾದರು. ಅವರು ಖಾಲಿಯಾಗಿದ್ದ ಅಂಗಡಿಗಳು, ಮಳಿಗೆಗಳನ್ನು ಬಾಡಿಗೆಗೆ ಪಡೆದು ಪ್ರದರ್ಶನಾಲಯಗಳನ್ನಾಗಿ ಪರಿವರ್ತಿಸಿದರು. ವಿಚಿತ್ರ ಆಕಾರದ ಪೆಠಾರಿಯಂಥ ಉಪಕರಣವನ್ನು ಮೂರು ಕಾಲಿನ ಪೀಠದ ಮೇಲಿಟ್ಟು ಅಲ್ಲಿಂದ ಸೃಷ್ಟಿಯಾಗುವ ಬಿಂಬಗಳು ಮಲಿನವಾದ ಬಿಳಿ ಬಟ್ಟೆಯ ಮೇಲೆ ಮೂಡುವ ಅಚ್ಚರಿಯನ್ನು ಜನರು ಸವಿದೇ ಸವಿದರು. ಗಲ್ಲಾ ಪೆಟ್ಟಿಗೆ ನಾಣ್ಯಗಳಿಂದ, ನೋಟುಗಳಿಂದ ತುಂಬಿ ತುಳುಕುವುದನ್ನು ಕಂಡು ಉದ್ಯಮಿಗಳು ಹಿಗ್ಗಿದರು. ಅಮೆರಿಕದ ಆರ್ಥಿಕತೆಯ ಆಧಾರವಾಗಿದ್ದ ಮಧ್ಯಮವರ್ಗ ಈ ಅಗ್ಗದ ಮನರಂಜನೆಯನ್ನು ತನ್ನ ತೆಕ್ಕೆಗೆ ಸ್ವೀಕರಿಸಿತು. ಕೆಲವರು ಅದನ್ನು ‘ಬೆಳಕಿನ ಪರದೆಯಲ್ಲಿ ನಡೆಯುವ ವಿಕೃತ ನರ್ತನ’ ಎಂದು ಅಸಹ್ಯಪಟ್ಟುಕೊಂಡರೆ, ಅದರಿಂದ ಹಣವನ್ನು ಗಳಿಸುತ್ತಿದ್ದವರಿಗೆ ಇದು ಶಾಶ್ವತವಾಗಿ ಉಳಿಯುವ ಹುಚ್ಚಲ್ಲ ಎಂಬ ಆತಂಕವೂ ಇತ್ತು. ಆ ಕಾಲಕ್ಕೆ ಈ ಹುಚ್ಚನ್ನೇ ಬಂಡವಾಳ ಮಾಡಿಕೊಂಡ ಚಿತ್ರ ನಿರ್ಮಾಪಕರು ದೃಶ್ಯಾವಳಿಗಳನ್ನು ಚಿತ್ರಿಸಿ ಅಡಿಗಳ ಲೆಕ್ಕದಲ್ಲಿ ಮಾರುತ್ತಿದ್ದರು. ಆ ಕಾಲದ ಚಲನಚಿತ್ರಗಳಿಗೆ ಕತೆಯೆಂಬುದಿರಲಿಲ್ಲ. ವಸ್ತುವಿನ್ಯಾಸವಿರಲಿಲ್ಲ. ಬಸ್ಸ್ಟಾಂಡ್ನ ದೃಶ್ಯ, ಚಲಿಸುವ ರೈಲು, ಹೋಟೆಲ್ನ ಒಳಾಂಗಣ ಯಾವುದೇ ಇರಬಹುದು. ಎರಡು ಆಯಾಮದ ತೆರೆಯ ಮೇಲೆ ಮೂರು ಆಯಾಮದ ಬಿಂಬವನ್ನು ಸೃಷ್ಟಿಸುವ ಚಮತ್ಕಾರಕ್ಕೆ ಜನರು ಮನಸೋತಿದ್ದರು. ಆ ಆಕರ್ಷಣೆಯನ್ನೇ ಬಂಡವಾಳ ಮಾಡಿಕೊಂಡು ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ನೂರಾರು ಅಡಿಯ ದೃಶ್ಯಾವಳಿಗಳನ್ನು ಶೂಟ್ ಮಾಡಿ ಪ್ರದರ್ಶನಾಲಯಕ್ಕೆ ಸರಬರಾಜು ಮಾಡುತ್ತಿದ್ದರು. ನಿಧಾನವಾಗಿ ಚಲನಚಿತ್ರ ನಿರ್ಮಾಣವು ಹೊಸದೊಂದು ಉದ್ಯಮವಾಗತೊಡಗಿತು. ಚಲನಚಿತ್ರದ ಸೆಳೆತದಿಂದ ಉದ್ಯಮದಲ್ಲಿ ತೊಡಗಿದ ಕೆಲವು ಪ್ರತಿಭಾವಂತರು ಉದ್ಯಮವನ್ನು ಕಲೆಯಾಗಿ ಪರಿವರ್ತಿಸುವತ್ತ ಪ್ರಯತ್ನಿಸಿದರು. ಕೈಯಿಂದ ತಿರುಗಿಸಿ ಚಿತ್ರಗಳನ್ನು ಮೂಡಿಸುವ ಕಾರ್ಯವೊಂದು ಸಂಸ್ಕೃತಿಯೊಂದರ ಅರಳುವಿಕೆಗೆ ಕಾರಣವಾಯಿತು. ಚಲನಚಿತ್ರ ರಂಗದಲ್ಲಿ ಸಾಕಷ್ಟು ಪ್ರಯೋಗಗಳು, ಬದಲಾವಣೆ ಮತ್ತು ಹೊಸದನ್ನು ಹುಡುಕುವ ಯತ್ನ ನಿರಂತರವಾಗಿ ನಡೆಯಿತು. 1910ರ ದಶಕದಿಂದ ಆರಂಭವಾದ ಈ ಹೊರಳುದಾರಿಯ ಪಯಣ ಅನೇಕ ರೂಪಾಂತರಗಳಲ್ಲಿ ಸಾಗಿತು. ಬಿಂಬ ದರ್ಶನವೇ ಗುರಿಯಾಗಿ ಕಂಬಳಿ ಹುಳುವಿನಂತೆ ತೆವಳುತ್ತಿದ್ದ ಚಿತ್ರ ಮಾಧ್ಯಮವು ಬಣ್ಣದ ಬಟ್ಟೆಯಾಗಿ ಪರಿವರ್ತನೆಯಾಗಲು ಮೂಲ ಕಾರಣ ಒಬ್ಬ ವ್ಯಕ್ತಿ. ಆ ವ್ಯಕ್ತಿಯ ಪರಿಶ್ರಮ, ದಾರ್ಶನಿಕ ಪ್ರತಿಭೆ ಮತ್ತು ನಿರಂತರ ಕ್ರಿಯಾಶೀಲತೆಯ ಪ್ರಯೋಗಗಳು ಸಿನೆಮಾ ಕಲೆಗೆ ಒಂದು ಗಟ್ಟಿಯಾದ, ಶಾಶ್ವತವಾದ ಅಸ್ತಿಭಾರ ಹಾಕಿತು. ನಿಜವಾದ ಅರ್ಥದಲ್ಲಿ ಆತ ಜಗತ್ತು ಕಂಡ ಮೊತ್ತಮೊದಲ ಸಿನೆಮಾ ನಿರ್ಮಾಪಕ. ಚಲನಚಿತ್ರದ ಪಿತಾಮಹ. ಅವನೇ ಡೇವಿಡ್ ವಾರ್ಕ್ ಗ್ರಿಫಿತ್ ಅಥವಾ ಡಿ.ಡಬ್ಲ್ಯು ಗ್ರಿಫಿತ್.

ಪುಸ್ತಕಗಳನ್ನು ಓದಿ ಬೆಳೆಸಿಕೊಂಡ ತಿಳಿವಿನಿಂದ ನಾಟಕಕಾರನಾಗ ಬೇಕೆಂಬ ಹುಚ್ಚು ಡೇವಿಡ್ ತಲೆಗೇರಿತು. ತನ್ನ ಇಪ್ಪತ್ತನೆಯ ವಯಸ್ಸಿಗೆ ನಾಟಕಗಳನ್ನು ಬರೆದ. ಲೂಸಿವಿಲ್ಲೆಯ ರಂಗಭೂಮಿಯಲ್ಲಿ ಕೆಲಸ ಮಾಡಿದ. ಸುಮಾರು ಒಂದು ದಶಕ ಕಾಲ ಗ್ರಿಫಿತ್ ರಂಗಭೂಮಿ, ನಾಟಕ ರಚನೆ ಮತ್ತು ಹಣ ಸಂಪಾದಿಸಲು ಸಣ್ಣ ಪುಟ್ಟ ಕೆಲಸಗಳನ್ನು ಬಿಡದೆ ಮಾಡಿದ. ಅದಿರಿನ ಗಣಿಯಲ್ಲಿ ಕೂಲಿಯ ಕೆಲಸದಿಂದ ಹಿಡಿದು ನಾಟಕದ ಬೋರ್ಡುಗಳನ್ನು ಬರೆಯುವವರೆಗೆ ಅವನ ಶ್ರಮ ಹಂಚಿಕೆಯಾಗುತ್ತಿತ್ತು. ಆದರೆ ಆತ ಬರೆದ ನಾಟಕಗಳನ್ನು ನಿರ್ದೇಶಕರು ಕಣ್ಣೆತ್ತಿಯೂ ನೋಡಲಿಲ್ಲ.

ಚಲನಚಿತ್ರವನ್ನು ಕಲೆಯಾಗಿ ಮಾರ್ಪಡಿಸಿದ ಏಕೈಕ ವ್ಯಕ್ತಿಯೆಂದೇ ಜಗತ್ತು ಅಂಗೀಕರಿಸಿರುವ ಗ್ರಿಫಿತ್ನ ಬದುಕು ಸಹ ಅನೇಕ ಏಳುಬೀಳುಗಳನ್ನು ಒಳಗೊಂಡ ರೋಚಕ ಸಿನೆಮಾವೊಂದರ ಕತೆಯಂತಿದೆ. ಗ್ರಿಫಿತ್ ಹುಟ್ಟಿದ್ದು 1875ರ ಜನವರಿ 22ರಂದು, ಅಮೆರಿಕ ಸಂಸ್ಥಾನದ ದಕ್ಷಿಣ ಪ್ರಾಂತದ ಕೆಂಟುಕಿ ರಾಜ್ಯದ ಕ್ರೆಸ್ಟ್ ವುಡ್ ನಲ್ಲಿ. ತಂದೆ ಕರ್ನಲ್ ಯಾಕೋಬ್ ಗ್ರಿಫಿತ್ ದಕ್ಷಿಣ ಪ್ರಾಂತದವನಾದ ಕಾರಣ ಗುಲಾಮಗಿರಿ ನಿಷೇಧದ ವಿರುದ್ಧವಿದ್ದವನು. ಉತ್ತರ-ದಕ್ಷಿಣ ಪ್ರಾಂತಗಳ ಒಕ್ಕೂಟದ ನಡುವಿನ ಅಂತರ್ಯುದ್ಧ (ಸಿವಿಲ್ವಾರ್)ದಲ್ಲಿ ದಕ್ಷಿಣ ಪ್ರಾಂತದ ಪರ ಹೋರಾಡಿದವನು. ಹುಟ್ಟಾ ಶ್ರೀಮಂತ. ಆದರೆ ಯುದ್ಧದ ನಂತರ ಶ್ರೀಮಂತಿಕೆ ನಶಿಸಿತು. ಯುದ್ಧ ಪೂರ್ವದಲ್ಲಿ ವೈಭವದಿಂದ ಮೆರೆದಾಡಿದ ಕರ್ನಲ್ ಸಂಸಾರವು ಡೇವಿಡ್ ಗ್ರಿಫಿತ್ ಹುಟ್ಟುವ ವೇಳೆಗೆ ಬಡವಾಗಿತ್ತು. ಆದರೆ ಕಿರಿಯ ಗ್ರಿಫಿತ್ ತನ್ನ ಮನೆತನದ ಘನತೆಯನ್ನು ಮೈಗೂಡಿಸಿಕೊಂಡಿದ್ದ. ತಂದೆಯ ಅಭಿರುಚಿಗಳು, ಕುಶಾಗ್ರಮತಿ ಮಗ ಡೇವಿಡ್ಗೆ ಬಳುವಳಿಯಾಗಿ ಬಂದಿತ್ತು. ಸಂಕಷ್ಟದಲ್ಲೂ ಸಾಹಸಕಿಳಿಯುವ ಪ್ರವೃತ್ತಿ, ಜೊತೆಗೆ ಕುಲೀನ ಮನೆತನದ ರೀತಿ ರಿವಾಜುಗಳನ್ನು ಕಲಿತುಕೊಂಡಿದ್ದ ಆತ ಸುಂದರನಾಗಿಯೂ ಇದ್ದ. ಅಲ್ಲದೆ ಲಲಿತ ಕಲೆಗಳ ಬಗ್ಗೆ ಬಾಲ್ಯದಿಂದಲೇ ಅಪಾರ ಆಸಕ್ತಿವಹಿಸಿದ್ದ.

ಗ್ರಿಫಿತ್ ಹತ್ತು ವರ್ಷದ ಬಾಲಕನಾಗಿರುವಾಗ ತಂದೆಯನ್ನು ಕಳೆದುಕೊಂಡ. ಬಡತನದಿಂದಾಗಿ ಸಂಸಾರ ಬೀದಿಗೆ ಬಿತ್ತು. ಆತನಿಗೆ ಹದಿನಾಲ್ಕು ತುಂಬಿದಾಗ ಲಾಭವಿಲ್ಲದ ತೋಟವನ್ನು ತ್ಯಜಿಸಿದ ಕುಟುಂಬ ಲೂಯಿಸ್ವಿಲ್ಲೆಗೆ ವಲಸೆ ಬಂತು. ತಾಯಿ ಅಲ್ಲೊಂದು ವಸತಿ ಗೃಹ ತೆರೆದಳು. ಬಹುಬೇಗನೆ ವಹಿವಾಟು ನಷ್ಟವನ್ನೇ ತಂದೊಡ್ಡಿತು. ಸಂಸಾರ ಸಾಗಿಸುವ, ಸಾಲ ತೀರಿಸುವ ಹೊಣೆ ಹೊತ್ತ ಡೇವಿಡ್ ಹೈಸ್ಕೂಲಿಗೆ ಶಾಲೆಯನ್ನು ತೊರೆದ. ಮೊದಲು ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ. ಆನಂತರ ಪುಸ್ತಕದಂಗಡಿಗೆ ಬಂದ. ಅಲ್ಲಿ ಕೆಲಸದ ಜೊತೆಗೆ ಪುಸ್ತಕಗಳು ಸಂಗಾತಿಯಾದವು. ಅಂಗಡಿ ಅವನ ವಿಶ್ವವಿದ್ಯಾನಿಲಯವಾಯಿತು. ಪುಸ್ತಕಗಳನ್ನು ಓದಿ ಅರಗಿಸಿಕೊಂಡ ಡೇವಿಡ್ನ ಮುಂದೆ ತಿಳಿವಿನ ಹೊಸ ಲೋಕವೊಂದು ಅನಾವರಣವಾಯಿತು.

ಪುಸ್ತಕಗಳನ್ನು ಓದಿ ಬೆಳೆಸಿಕೊಂಡ ತಿಳಿವಿನಿಂದ ನಾಟಕಕಾರನಾಗಬೇಕೆಂಬ ಹುಚ್ಚು ಡೇವಿಡ್ ತಲೆಗೇರಿತು. ತನ್ನ ಇಪ್ಪತ್ತನೆಯ ವಯಸ್ಸಿಗೆ ನಾಟಕಗಳನ್ನು ಬರೆದ. ಲೂಸಿವಿಲ್ಲೆಯ ರಂಗಭೂಮಿಯಲ್ಲಿ ಕೆಲಸ ಮಾಡಿದ. ಸುಮಾರು ಒಂದು ದಶಕ ಕಾಲ ಗ್ರಿಫಿತ್ ರಂಗಭೂಮಿ, ನಾಟಕ ರಚನೆ ಮತ್ತು ಹಣ ಸಂಪಾದಿಸಲು ಸಣ್ಣ ಪುಟ್ಟ ಕೆಲಸಗಳನ್ನು ಬಿಡದೆ ಮಾಡಿದ. ಅದಿರಿನ ಗಣಿಯಲ್ಲಿ ಕೂಲಿಯ ಕೆಲಸದಿಂದ ಹಿಡಿದು ನಾಟಕದ ಬೋರ್ಡುಗಳನ್ನು ಬರೆಯುವವರೆಗೆ ಅವನ ಶ್ರಮ ಹಂಚಿಕೆಯಾಗುತ್ತಿತ್ತು. ಆದರೆ ಆತ ಬರೆದ ನಾಟಕಗಳನ್ನು ನಿರ್ದೇಶಕರು ಕಣ್ಣೆತ್ತಿಯೂ ನೋಡಲಿಲ್ಲ.

ನಾಟಕದ ರಿಹರ್ಸಲ್ ನಡೆಯುವಾಗ ರಂಗವೇದಿಕೆ ಯಲ್ಲಿ ಆತನಿಗೆ ಬಿಡುವು. ಆ ವಿರಾಮ ಕಾಲದಲ್ಲೇ ನಾಟಕಗಳನ್ನು ರಚಿಸುತ್ತಿದ್ದ. 1906ರಲ್ಲಿ ಲಿಂಡಾ ಅರ್ವಿಡ್ಸನ್ ಎಂಬಾಕೆಯನ್ನು ಮದುವೆಯಾದ. ಹೆಂಡತಿಯ ಕಾಲ್ಗುಣವೋ ಏನೋ! 1907ರಲ್ಲಿ ಆತ ಬರೆದ ನಾಟಕ-‘ಎ ಫೂಲ್ ಆ್ಯಂಡ್ ಎ ಗರ್ಲ್-’ರಂಗ ಪ್ರಯೋಗ ಕಂಡಿತು. ಆದರೆ ಅದು ಯಾರೂ ಊಹಿಸದ ಪ್ರಮಾಣದ ಸೋಲು ಕಂಡಿತು.

ಮದುವೆಯಾಗಿದ್ದ ಗ್ರಿಫಿತ್ಗೆ ಸಂಸಾರದ ಜೊತೆಗೆ ಸಾಲದ ಬಾಧೆಯಿತ್ತು. ನಾಟಕ ಯಶಸ್ವಿಯಾಗದ ಕಾರಣ ಹತಾಶನಾದ. ಆ ವೇಳೆಗೆ ಗೆಳೆಯನೊಬ್ಬ ‘ಮಾತನಾಡುವ ಚಿತ್ರ’ಗಳ ಕ್ಷೇತ್ರಕ್ಕೆ ಹೋಗಲು ಸಲಹೆ ಮಾಡಿದ. ಅಲ್ಲಿ ನಟಿಸಿದರೆ ದಿನವೊಂದಕ್ಕೆ ಐದು ಡಾಲರ್ ಸಿಗುತ್ತದೆ. ಚಿತ್ರಗಳಿಗೆ ಕತೆ ಬರೆದರೆ ಹದಿನೈದು ಡಾಲರ್ ಸಂಭಾವನೆ ದೊರೆಯುತ್ತದೆ. ರಂಗಭೂಮಿಗಿಂತ ಅದು ವಾಸಿ ಎಂಬ ಗೆಳೆಯನ ಸಲಹೆ ಮನಸ್ಸಿಗೆ ನಾಟಿತು.

1907ರಲ್ಲಿ ಹೆಂಡತಿಯ ಜೊತೆ ನ್ಯೂಯಾರ್ಕ್ಗೆ ಬಂದ ಗ್ರಿಫಿತ್ ಮೊದಲು ನಟಿಸಿದ ಚಿತ್ರ ರೆಡ್ಯೂಸ್ಡ್ ಫ್ರಂ ಎನ್ ಈಗಲ್ ನೆಸ್ಟ್. ‘ಡಮ್ಮಿ’ ಹದ್ದುಗಳ ಜೊತೆ ಸೆಣಸುವುದು, ಕುದುರೆ ಮೇಲೆ ಕೂರುವಂಥ ಅಭಿನಯ ಆತನಿಗೆ ಹಿಡಿಸಲಿಲ್ಲ. ಗ್ರಿಫಿತ್ ಕತೆಗಳನ್ನು ಬರೆದುಕೊಡುವ ಹಂಬಲ ವ್ಯಕ್ತಪಡಿಸಿದ. ಆದರೆ ಅವನ ಕತೆಗಳ ಬಗ್ಗೆ ಯಾರಿಗೂ ಇಷ್ಟವಿರಲಿಲ್ಲ. ಇನ್ನು ಬರವಣಿಗೆ ಸಾಕೆಂದು ನಿರ್ಧರಿಸಿದ ಗ್ರಿಫಿತ್ ಅಮೆರಿಕದ ಆ ಕಾಲದ ಪ್ರಸಿದ್ಧ ಚಿತ್ರ ನಿರ್ಮಾಣ ಸಂಸ್ಥೆಯಲ್ಲೊಂದಾದ ನ್ಯೂಯಾರ್ಕ್ನ ‘ಬಯೋಗ್ರಾಫ್’ ಸಂಸ್ಥೆಗೆ ಬಂದು ಸೇರಿದ. ಅಲ್ಲಿ ನಟನೆಯ ಜೊತೆಗೆ ಕತೆಗಳನ್ನು ಬರೆದುಕೊಡುವ ಕಾಯಕವೂ ದೊರೆಯಿತು.

ಬಯೋಗ್ರಾಫ್ ಸಂಸ್ಥೆಗೆ ನೂರಾರು ಸಿನೆಮಾಗಳನ್ನು ಗ್ರಿಫಿತ್ ನಿರ್ದೇಶಿಸಿದ. ‘ಜೂಡಿತ್ ಆಫ್ ಬೆತುಲಿಯಾ’ ಹೊರತುಪಡಿಸಿದರೆ ಎಲ್ಲವೂ ಒಂದು ಎರಡು ರೀಲಿನ ಕಿರುಚಿತ್ರಗಳೇ. ಚಿತ್ರ ನಿರ್ದೇಶನದ ಶೈಲಿಯೊಂದನ್ನು ಈಗ ಕರಗತಮಾಡಿಕೊಂಡಿದ್ದ ಗ್ರಿಫಿತ್ಗೆ ಕಾಲಮಿತಿ ತನ್ನ ಅಭಿವ್ಯಕ್ತಿಗೆ ದೊಡ್ಡ ಅಡಚಣೆಯಂತೆ ಕಂಡಿತು. ಆದರೆ ಬಯೋಗ್ರಾಫ್ ಸಂಸ್ಥೆ ಗ್ರಿಫಿತ್ನ ದೀರ್ಘಾವಧಿಯ ಕಥಾಚಿತ್ರಗಳ ಪ್ರಯೋಗಕ್ಕೆ ಸಿದ್ಧವಿರಲಿಲ್ಲ. ಈ ಭಿನ್ನಾಭಿಪ್ರಾಯದಿಂದ 1913ರಲ್ಲಿ ಬಯೋಗ್ರಾಫ್ ತೊರೆದ ಗ್ರಿಫಿತ್ ಹಾಲಿವುಡ್ಗೆ ಬಂದು ಮ್ಯೂಚುಯಲ್ ಕಂಪೆನಿಯ ಪಾಲುದಾರನೊಬ್ಬನೊಡನೆ ತಮ್ಮ ಸ್ವಂತ ಕಂಪೆನಿ ಆರಂಭಿಸಿದ.

ಆರಕ್ಕೇರದ ಮೂರಕ್ಕಿಳಿಯದ ಬದುಕನ್ನು ಸಾಗಿಸುತ್ತಿದ್ದ ಗ್ರಿಫಿತ್ಗೆ ಕೊನೆಗೂ ಅದೃಷ್ಟ ಒಲಿಯಿತು. ಹೆಚ್ಚಿನ ಸಂಬಳ, ಅವಕಾಶಗಳನ್ನು ಅನುಸರಿಸಿ ಅನೇಕ ತಂತ್ರಜ್ಞರು, ಕಲಾವಿದರು ಬಯೋಗ್ರಾಫ್ ಕಂಪೆನಿಯನ್ನು ಬಿಟ್ಟಾಗ ಚಿತ್ರ ನಿರ್ದೇಶಕರ ಕೊರತೆಯುಂಟಾಯಿತು. ಜೊತೆಗೆ ಅಲ್ಲಿ ನಿರ್ದೇಶಕನಾಗಿದ್ದ ಮಹಾಶಯನೊಬ್ಬ ಕಾಯಿಲೆಯಿಂದ ಹಾಸಿಗೆ ಹಿಡಿದ. ಆಗ ಗ್ರಿಫಿತ್ನ ಸಾಮರ್ಥ್ಯದ ಬಗ್ಗೆ ಯಾರೋ ಕಂಪೆನಿಯ ಮಾಲಕನಿಗೆ ವಿಶ್ವಾಸ ಮೂಡಿಸಿದರು. ಅದರಂತೆ ಆತನಿಗೆ ಕರೆ ಹೋಯಿತು. ಗ್ರಿಫಿತ್ ನಿರ್ದೇಶಕನ ಪಟ್ಟ ಹೊರಲು ತಿರಸ್ಕರಿಸಿದ. ಕಲಾವಿದನಾಗಿ, ಕಥಾಲೇಖಕನಾಗಿ ಹೇಗೋ ಹೊಟ್ಟೆ ತುಂಬುತ್ತಿದೆ. ನಿರ್ದೇಶಕನಾಗಿ ಮೊದಲ ಪ್ರಯತ್ನ ಒಂದು ವೇಳೆ ಸೋಲು ಕಂಡರೆ ಇತ್ತ ನಟನೆಗೂ ಯಾರೂ ಕರೆಯುವುದಿಲ್ಲ. ಅತ್ತ ಮತ್ತೆ ನಿರ್ದೇಶಕನಾಗುವುದು ದುಸ್ಸಾಧ್ಯ. ಹಾಗಾಗಿ ಈಗ ಇರುವ ವೃತ್ತಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದ. ಸುದೈವ. ಗ್ರಿಫಿತ್ ಒಂದು ವೇಳೆ ನಿರ್ದೇಶಕನಾಗಿ ವಿಫಲವಾದರೆ ನಟನೆಯ ಅವಕಾಶಗಳನ್ನು ನಿರಾಕರಿಸುವುದಿಲ್ಲ ಎಂಬ ಭರವಸೆಯನ್ನು ಕಂಪೆನಿಯ ಮಾಲಕ ನೀಡಿದ. ಆಗ ಗ್ರಿಫಿತ್ ತಲೆಬಾಗಿದ. ಗ್ರಿಫಿತ್ ನಿರ್ದೇಶಕನ ಪಟ್ಟಕ್ಕೆ ಬಂದು ಕುಳಿತದ್ದು ಹಾಗೆ!

ಗ್ರಿಫಿತ್ ನಿರ್ದೇಶಿಸಿದ ಮೊದಲ ಸಿನೆಮಾ ಒಂದು ರೀಲು ಉದ್ದದ ‘ದಿ ಅಡ್ವೆಂಚರ್ಸ್ ಆಫ್ ಡಾಲಿ’(ಡಾಲಿಯ ಸಾಹಸಗಳು), 1908ರ ಆರಂಭದಲ್ಲಿ ಬಿಡುಗಡೆಯಾಯಿತು. ಅದರ ಬಿಡುಗಡೆಯ ಮೂಲಕ ಜಗತ್ತಿನ ಸಿನೆಮಾ ಚರಿತ್ರೆಯಲ್ಲಿ ನಿರ್ಣಾಯಕ ಅಧ್ಯಾಯವೊಂದು ಆರಂಭವಾಯಿತು. ಮುಂದಿನ ಐದು ವರ್ಷಗಳಲ್ಲಿ ಗ್ರಿಫಿತ್ ಒಂದು ರೀಲಿನ ನೂರಾರು ಸಿನೆಮಾಗಳನ್ನು ನಿರ್ದೇಶಿಸಿದ. ಆದರೆ ಬಯೋಗ್ರಾಫ್ ಸ್ಟುಡಿಯೋ ಮಾತ್ರ ಆರಂಭದಲ್ಲಿ ಗ್ರಿಫಿತ್ ನಿರ್ದೇಶಕ ಎಂದು ಕ್ರೆಡಿಟ್ ಕೊಡಲಿಲ್ಲ. ಗ್ರಿಫಿತ್ ಅನಾಮಧೇಯನಾಗಿ ಉಳಿದರೂ ಸಿನೆಮಾ ಕ್ಷೇತ್ರದಲ್ಲಿ ಅವನ ಪ್ರಯೋಗಗಳು ಆಸಕ್ತಿ ಕೆರಳಿಸಿದ್ದವು. ಆದರೆ ಗ್ರಿಫಿತ್ ಪ್ರತಿ ಸಿನೆಮಾವನ್ನು ಒಂದು ಪ್ರಯೋಗವೆಂಬಂತೆ ಚಿತ್ರೀಕರಿಸಿದ. ಆವರೆಗೆ ಚಿತ್ರ ನಿರ್ಮಾಣದಲ್ಲಿ ಅನುಸರಿಸುತ್ತಿದ್ದ ಎಲ್ಲ ಸಂಪ್ರದಾಯಗಳನ್ನು ಒಂದೊಂದಾಗಿ ಮುರಿದು ಹಾಕಿದ. ಕುಲೀನ ವರ್ಗದ, ಬೌದ್ಧಿಕವಾಗಿ ಬೆಳೆದಿದ್ದ ಗ್ರಿಫಿತ್ಗೆ ಅಂದಿನ ನಿರ್ದೇಶಕರ ಬಗ್ಗೆ ಸಿಟ್ಟಿತ್ತು. ಅವರೆಲ್ಲರೂ ಕ್ರಿಯಾಶೀಲತೆಯೇ ಇಲ್ಲದ ಕುಬ್ಜ(ಪಿಗ್ಮಿಸ್)ರು ಎಂದೇ ಅಸಹನೆ ವ್ಯಕ್ತಪಡಿಸುತ್ತಿದ್ದ. ಹಾಗಾಗಿ ಅಂದು ಪ್ರಚಲಿತವಿದ್ದ ಸಿನೆಮಾ ನಿಯಮಗಳನ್ನು ಮೆಟ್ಟಿನಿಂತು ಸಿನೆಮಾ ಭಾಷೆಗೆ ಸಂಪೂರ್ಣ ಹೊಸದೊಂದು ಆಕಾರ ನೀಡಿದ. ‘‘ತಾನು ಮಾಡುತ್ತಿದ್ದ ಮಾಧ್ಯಮದ ಬಗ್ಗೆ ಆತನಿಗೆ ಗೌರವವಿರಲಿಲ್ಲ. ಅದೇ ವೇಳೆ ಅವನ ಮನೋಭಾವ ಚಲನಚಿತ್ರವನ್ನು ಒಂದು ಕಲೆಯಾಗಿ ನೋಡುವಂತೆ ಪ್ರೇರೇಪಿಸಿತ್ತು. ಅದರ ಫಲಶ್ರುತಿಯೆಂದರೆ ಗ್ರಿಫಿತ್ ಚಲನಚಿತ್ರವನ್ನು ಒಂದು ಕಲಾಕುಸುಮವನ್ನಾಗಿ ರೂಪಿಸಿದ’’ ಎಂದು ವಿಮರ್ಶಕ ಲಾಯ್ಡಾ ಮಾರಿಸ್ ಬರೆಯುತ್ತಾರೆ.

ಮದುವೆಯಾಗಿದ್ದ ಗ್ರಿಫಿತ್ಗೆ ಸಂಸಾರದ ಜೊತೆಗೆ ಸಾಲದ ಬಾಧೆಯಿತ್ತು. ನಾಟಕ ಯಶಸ್ವಿಯಾಗದ ಕಾರಣ ಹತಾಶನಾದ. ಆ ವೇಳೆಗೆ ಗೆಳೆಯನೊಬ್ಬ ‘ಮಾತನಾಡುವ ಚಿತ್ರ’ಗಳ ಕ್ಷೇತ್ರಕ್ಕೆ ಹೋಗಲು ಸಲಹೆ ಮಾಡಿದ. ಅಲ್ಲಿ ನಟಿಸಿದರೆ ದಿನವೊಂದಕ್ಕೆ ಐದು ಡಾಲರ್ ಸಿಗುತ್ತದೆ. ಚಿತ್ರಗಳಿಗೆ ಕತೆ ಬರೆದರೆ ಹದಿನೈದು ಡಾಲರ್ ಸಂಭಾವನೆ ದೊರೆಯುತ್ತದೆ. ರಂಗಭೂಮಿಗಿಂತ ಅದು ವಾಸಿ ಎಂಬ ಗೆಳೆಯನ ಸಲಹೆ ಮನಸ್ಸಿಗೆ ನಾಟಿತು.

‘ಅಡ್ವೆಂಚರ್ಸ್ ಆಫ್ ಡಾಲಿ’ ಚಿತ್ರದಲ್ಲಿಯೇ ಗ್ರಿಫಿತ್ ತನ್ನ ಭವಿಷ್ಯದಲ್ಲಿ ಬೆಳೆಯುವ ಚಹರೆಗಳನ್ನು ಕೆತ್ತಿಟ್ಟಿದ್ದ. ಮುಂದೆ ತನ್ನ ಮಹತ್ವಾಕಾಂಕ್ಷೆಯ ಸಿನೆಮಾಗಳಲ್ಲಿ ತೋರಿಸಿದ ನಿರೂಪಣಾ ಶೈಲಿ, ಬಿಗಿಯಾದ ಚಿತ್ರಕಥಾ ರಚನೆ, ಕೌತುಕ, ಮೈನವಿರೇಳಿಸುವ ಚೇಸ್ ದೃಶ್ಯಗಳನ್ನೆಲ್ಲ ಒಂದು ರೀಲಿನ ಚಿತ್ರದಲ್ಲಿಯೇ ಅಡಕಗೊಳಿಸಿದ್ದ. ಗ್ರಿಫಿತ್ನ ಪ್ರತಿಭೆಯು ಮೊದಲ ಚಿತ್ರದಲ್ಲಿಯೇ ಬೀಜರೂಪದಲ್ಲಿ ವ್ಯಕ್ತವಾಗಿತ್ತು. ಅದು ಭವಿಷ್ಯದ ನೀಲನಕ್ಷೆಯಂತಿತ್ತು. ಗ್ರಿಫಿತ್ ಬಿತ್ತಿದ ಬೀಜ ಮುಂದೆ ಸುಂದರವಾದ ಮರವಾಗಿ ಬೆಳೆಯಿತು.

ಬಯೋಗ್ರಾಫ್ ಸ್ಟುಡಿಯೋಗಾಗಿ ನಿರ್ದೇಶಿಸಿದ ಚಿತ್ರಗಳ ಮೂಲಕ ಗ್ರಿಫಿತ್ ಪ್ರೇಕ್ಷಕರನ್ನು, ಸಿನೆಮಾ ನಿರ್ಮಾಪಕರನ್ನು ಸೆಳೆದ. ತನ್ನ ಚಿತ್ರಗಳಲ್ಲಿ ತನ್ನದೇ ಅನನ್ಯ ಶೈಲಿಯ ಹೆಗ್ಗುರುತನ್ನು ಮೂಡಿಸಿದ್ದ. ತನ್ನ ಪ್ರತಿಯೊಂದು ಚಿತ್ರವನ್ನು ಹೊಸ ಪ್ರಯೋಗವೆಂದೇ ನಿರ್ಧರಿಸಿ ನಿರ್ದೇಶಿಸುತ್ತಿದ್ದ. ಹೊಸ ನಿರೂಪಣಾ ವಿಧಾನವನ್ನು ಅನುಸರಿಸುತ್ತಿದ್ದ. ಇದ್ದಕ್ಕಿದ್ದಂತೆ ಚಲನಚಿತ್ರವು ಕಲೆಯ ರೂಪವನ್ನು ಪಡೆದುಕೊಂಡು ಗ್ರಿಫಿತ್ ಕೈಯಲ್ಲಿ ವಿಕಸಿಸಲಾರಂಭಿಸಿತು. ಅಂದು ಸ್ಥಿರವಾಗಿ ಮಿಡ್ ಷಾಟ್ನಲ್ಲಿಯೇ ಹೆಚ್ಚು ಕಾಲ ನಿಲ್ಲುತ್ತಿದ್ದ ಕ್ಯಾಮರಾವನ್ನು ದೃಶ್ಯದ ತೀವ್ರತೆಗೆ ತಕ್ಕಂತೆ ಬದಲಿಸಿದ. ವಿಶಾಲವಾದ ಸೆಟ್ಗಳನ್ನು ಹಾಕಿದ. ಅನೇಕ ಬಾರಿ ತೆರೆದ ಬಯಲನ್ನೇ ಹಿನ್ನೆಲೆಯಾಗಿರಿಸಿಕೊಂಡು ಸೆಟ್ ಹಾಕುತ್ತಿದ್ದ. ವಿಶಾಲವಾದ ಭಿತ್ತಿಯಲ್ಲಿ ದೃಶ್ಯ ಪರಿಣಾಮಕಾರಿಯಾಗುವಂತೆ ಮಾಡಲು ಲಾಂಗ್ಷಾಟ್ಗಳಲ್ಲಿ ಚಿತ್ರಿಸಿದ. ಕ್ಯಾಮರಾವನ್ನು ಚಲಿಸುವಂತೆ ಮಾಡಿ ವೀಕ್ಷಣೆಗೊಂದು ರೋಮಾಂಚನ ತಂದ. ಅಷ್ಟೇ ಅಲ್ಲ ಚೇಸಿಂಗ್ ದೃಶ್ಯಗಳನ್ನು ಮೈನವಿರೇಳಿಸುವಂತೆ ಚಿತ್ರೀಕರಿಸುವಲ್ಲಿ ಸಿದ್ಧ ಹಸ್ತನಾದ. ಸುಂದರವಾದ ಸಂಯೋಜನೆಗಳು, ಪರಿಣಾಮಕಾರಿ ಸಂಕಲನದ ಮೂಲಕ ಚಿತ್ರಭಾಷೆಗೆ ಹೊಸ ಭಾಷ್ಯ ಬರೆದ. ಮನುಷ್ಯನ ಭಾವಾಭಿವ್ಯಕ್ತಿಗಾಗಿ ಕ್ಲೋಸ್ ಅಪ್ಷಾಟ್ಗಳನ್ನು ಅಂದಿನ ಪದ್ಧತಿಗೆ ವ್ಯತಿರಿಕ್ತವಾಗಿ ಬಳಸಿದ. ಕ್ಲೋಸ್ ಅಪ್ ಷಾಟ್ಗಳನ್ನು ವೀಕ್ಷಕರನ್ನು ಸೆರೆಹಿಡಿಯುವ ರೀತಿಯಲ್ಲಿ ಕಲಾತ್ಮಕವಾಗಿ ಬಳಸುವ ತಂತ್ರ ಆರಂಭವಾದದ್ದೇ ಗ್ರಿಫಿತ್ನಿಂದ. ಹಾಗೆ ನೋಡಿದರೆ ಕ್ಲೋಸ್ ಅಪ್ ಷಾಟ್ಗಳನ್ನು ಆರಂಭದಲ್ಲಿ ನಿರ್ಮಾಪಕರು ಬಲವಾಗಿ ಆಕ್ಷೇಪಿಸಿದರು. ವೀಕ್ಷಕ ದುಡ್ಡು ಕೊಟ್ಟು ಸಿನೆಮಾ ನೋಡುವುದು ಒಂದು ಫ್ರೇಂನಲ್ಲಿ ನಟನ ಎಲ್ಲ ಅಂಗಗಳನ್ನು ನೋಡಲೆಂದೇ ಹೊರತು ಯಾವುದೋ ಒಂದು ಭಾಗವನ್ನಲ್ಲ ಎಂದು ದೂರಿದರು. ಆದರೆ ಗ್ರಿಫಿತ್ ನೀಡಿದ ಸಮರ್ಥನೆ ಅತ್ಯಂತ ಅರ್ಥಪೂರ್ಣವಾಗಿತ್ತು. ತಾನು ಕ್ಲೋಸ್ ಅಪ್ ಷಾಟ್ ಬಳಸುವುದು ‘ಭಾವನೆ’ಗಳನ್ನು ಸೆರೆಹಿಡಿಯಲು; ನಟನೊಬ್ಬ ತನ್ನ ಭಾವನೆಗಳನ್ನು ಪ್ರೇಕ್ಷಕರಿಗೆ ಸೂಕ್ತವಾಗಿ ತಲುಪಿಸಬೇಕಾದರೆ ಕ್ಲೋಸ್ ಅಪ್ ಬೇಕೇ ಬೇಕು ಎಂದು ವಾದಿಸಿ ಗೆದ್ದ. ಅಲ್ಲದೆ ಸಂಕಲನ ತಂತ್ರವನ್ನು ಸೂಕ್ತವಾಗಿ ಬಳಸಿ ನಿರೂಪಣೆಯ ವೇಗವನ್ನು ಹೆಚ್ಚಿಸುವ ವಿಧಾನವೂ ಅವನಿಗೆ ಕರಗತವಾಗಿತ್ತು. ಪ್ರೇಕ್ಷಕನ ಆಕಳಿಕೆಗೆ ಕಾರಣವಾಗಬಹುದಾದ ನೇರ ಹಾಗೂ ಮಂದಗತಿಯ ನಿರೂಪಣೆಯನ್ನು ಫ್ಲಾಷ್ಬ್ಯಾಕ್, ಕ್ರಾಸ್ಕಟಿಂಗ್, ಬಹುಕೋನಗಳಿಂದ ಚಿತ್ರಿಸಿ ಸಂಕಲಿಸುವುದು, ಪ್ಯಾರಲೆಲ್ ಎಡಿಟಿಂಗ್, ಕ್ಲೈಮ್ಯಾಕ್ಸ್ನಲ್ಲಿ ಚೇಸಿಂಗ್ ದೃಶ್ಯಗಳನ್ನು ಅಡಕಗೊಳಿಸಿ ರಂಜನೀಯಗೊಳಿಸುವ ವಿಧಾನವನ್ನು ಮೊದಲು ಪರಿಚಯಿಸಿದವನೇ ಗ್ರಿಫಿತ್. ಇದು ಬಹುಬೇಗನೆ ಗ್ರಿಫಿತ್ನ ಟ್ರೇಡ್ಮಾರ್ಕ್ ಆಯಿತು. ಇವೆಲ್ಲ ಕ್ರಿಯಾಶೀಲ ತಂತ್ರಗಳು ಸಿನೆಮಾಗೆ ಆ ಕಾಲಕ್ಕೆ ನವನವೀನವಾದದ್ದು. ಈ ರೀತಿಯ ನಿರೂಪಣಾ ವಿಧಾನಗಳೇ ಸಿನೆಮಾವನ್ನು ಕಲಾತ್ಮಕ ರೂಪಕ್ಕೆ ತರಲು ಕಾರಣವಾಯಿತು. ಇದೇ ಗ್ರಿಫಿತ್ ಜಗತ್ತಿನ ಸಿನೆಮಾಗೆ ನೀಡಿದ ಬಹುದೊಡ್ಡ ಕೊಡುಗೆ. ಈ ಕೊಡುಗೆಯೇ ಆತನ ಹೆಸರನ್ನು ಚಿರಸ್ಥಾಯಿಯಾಗಿಸಿದೆ.

ಗ್ರಿಫಿತ್ನ ಆರಂಭದ ಚಿತ್ರಗಳು ಕೇವಲ ತಂತ್ರಗಳಿಂದಲೇ ಗಮನ ಸೆಳೆಯಲಿಲ್ಲ. ಆತ ಆರಿಸಿಕೊಳ್ಳುತ್ತಿದ್ದ ಪ್ರಗತಿಪರ ದೃಷ್ಟಿಯ ಕಥಾವಸ್ತುವೂ ಚಿತ್ರವನ್ನು ಮೇಲ್ಮಟ್ಟಕ್ಕೇರಿಸಲು ಕಾರಣವೆನಿಸಿತು. ‘ದಿ ರೆಡ್ಮ್ಯಾನ್ ವ್ಯೆ’ (1909) ಮತ್ತು ‘ರಾಮೋನಾ’ (1910)ದಲ್ಲಿ ಆತ ಬಿಳಿಯರು ರೆಡ್ ಇಂಡಿಯನ್ರನ್ನು ದಮನ ಮಾಡಿದ ರೀತಿಯನ್ನು ಖಂಡಿಸಿದರೆ ‘ಎ ಕಾರ್ನರ್ ಇನ್ ವ್ಹೀಟ್’ (1909) ಚಿತ್ರದಲ್ಲಿ ಬಂಡವಾಳಶಾಹಿಯು ಬಡವರಿಗೆ ಮಾಡುವ ಅನ್ಯಾಯವನ್ನು ಎತ್ತಿ ತೋರಿಸುತ್ತದೆ. ‘ದಿ ಮಸ್ಕೆಟೀಯರ್ಸ್ ಆಫ್ ಪಿಗ್ ಅಲೆ’ (1912) ಚಿತ್ರದಲ್ಲಿ ನಗರದ ಬಡತನದ ದಾರುಣ ಚಿತ್ರವಿದ್ದರೆ, ಅನೇಕ ಚಿತ್ರಗಳಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧ ತನಗಿದ್ದ ಅವಹೇಳನಕ್ಕೆ ಅಭಿವ್ಯಕ್ತಿ ನೀಡಿದ್ದಾನೆ. 1913ರಲ್ಲಿ ಗ್ರಿಫಿತ್ ತನ್ನ ಮೊದಲ ಕಥಾ ಚಿತ್ರ ‘ಜೂಡಿತ್ ಆಫ್ ಬೆತುಲಿಯಾ’ ನಿರ್ದೇಶಿಸಿದ. ತನ್ನ ಯಹೂದಿ ಸಮುದಾಯವನ್ನು ಅಸಿರಿಯನ್ ಆಕ್ರಮಣಕಾರರಿಂದ ರಕ್ಷಿಸಿದ ಜೂಡಿತ್ನ ಕತೆಯ ಚಿತ್ರದಲ್ಲಿ ಮತ್ತೆ ಗ್ರಿಫಿತ್ ಸಾಮ್ರಾಜ್ಯಶಾಹಿಯ ವಿರುದ್ಧದ ಕ್ರೋಧವನ್ನು ಬಿಚ್ಚಿಟ್ಟ. ಚಿತ್ರದ ಸಮಯ ಅರವತ್ತೈದು ನಿಮಿಷಗಳಷ್ಟು ದೀರ್ಘವಾಗಿತ್ತು.

ಬಯೋಗ್ರಾಫ್ ಸಂಸ್ಥೆಗೆ ನೂರಾರು ಸಿನೆಮಾಗಳನ್ನು ಗ್ರಿಫಿತ್ ನಿರ್ದೇಶಿಸಿದ. ‘ಜೂಡಿತ್ ಆಫ್ ಬೆತುಲಿಯಾ’ ಹೊರತುಪಡಿಸಿದರೆ ಎಲ್ಲವೂ ಒಂದು ಎರಡು ರೀಲಿನ ಕಿರುಚಿತ್ರಗಳೇ. ಚಿತ್ರ ನಿರ್ದೇಶನದ ಶೈಲಿಯೊಂದನ್ನು ಈಗ ಕರಗತಮಾಡಿಕೊಂಡಿದ್ದ ಗ್ರಿಫಿತ್ಗೆ ಕಾಲಮಿತಿ ತನ್ನ ಅಭಿವ್ಯಕ್ತಿಗೆ ದೊಡ್ಡ ಅಡಚಣೆಯಂತೆ ಕಂಡಿತು. ಆದರೆ ಬಯೋಗ್ರಾಫ್ ಸಂಸ್ಥೆ ಗ್ರಿಫಿತ್ನ ದೀರ್ಘಾವಧಿಯ ಕಥಾಚಿತ್ರಗಳ ಪ್ರಯೋಗಕ್ಕೆ ಸಿದ್ಧವಿರಲಿಲ್ಲ. ಈ ಭಿನ್ನಾಭಿಪ್ರಾಯದಿಂದ 1913ರಲ್ಲಿ ಬಯೋಗ್ರಾಫ್ ತೊರೆದ ಗ್ರಿಫಿತ್ ಹಾಲಿವುಡ್ಗೆ ಬಂದು ಮ್ಯೂಚುಯಲ್ ಕಂಪೆನಿಯ ಪಾಲುದಾರನೊಬ್ಬನೊಡನೆ ತನ್ನ ಸ್ವಂತ ಕಂಪೆನಿ ಆರಂಭಿಸಿದ. ತನ್ನ ಜೊತೆ ದುಡಿದಿದ್ದ ಕ್ಯಾಮರಾಮ್ಯಾನ್ ಬಿಲಿ ಬಿಟ್ಜರ್ ಮತ್ತು ಪ್ರತಿಭಾವಂತ ಕಲಾವಿದರ ದಂಡನ್ನೆ ಕರೆತಂದ. ಒಂದೆರಡು ಯಶಸ್ವಿ ಕಥಾಚಿತ್ರಗಳನ್ನು ನಿರ್ದೇಶಿಸಿದ ನಂತರ ಗ್ರಿಫಿತ್ ಚರಿತ್ರೆಯೊಂದರ ನಿರ್ಮಾಣಕ್ಕೆ ಸಿದ್ಧನಾದ. ಗ್ರಿಫಿತ್ನ ಸಾಹಸವನ್ನು ಕಂಡು ಹಣ ಹೂಡುವವರು ಹಿಂಜರಿದರು. ಆದರೆ ದೀರ್ಘಾವಧಿಯ ಚಿತ್ರ ನಿರ್ಮಿಸಲೇಬೇಕೆಂಬ ಸಂಕಲ್ಪದಿಂದ ಗ್ರಿಫಿತ್ ವಿಚಲಿತನಾಗಲಿಲ್ಲ. ಪರಿಣಾಮ-ಸಿನೆಮಾ ಎಂಬ ಆಟಿಕೆಯು ಇಪ್ಪತ್ತನೇ ಶತಮಾನದ ಒಂದು ಪ್ರಬಲ ನಿರೂಪಣಾ ಮಾಧ್ಯಮವಾಗಿ ಅರಳಲು ಅಡಿಗಲ್ಲು ಹಾಕಿದ ಚಿತ್ರವು ನಿರ್ಮಾಣವಾಯಿತು. ಅದುವೇ ‘‘ದಿ ಬರ್ತ್ ಆಫ್ ಎ ನೇಷನ್’’.

ಥಾಮಸ್ ಡಿಕ್ಸನ್ನ ‘ದಿ ಕ್ಲಾನ್ಸ್ಮನ್’ ಕಾದಂಬರಿಯನ್ನು ಅನೇಕ ಬದಲಾವಣೆಗಳೊಡನೆ ಸಿನೆಮಾಗೆ ಅಣಿಗೊಳಿಸಿ ರೂಪಿಸಿದ ಕಥಾಚಿತ್ರ ‘ದಿ ಬರ್ತ್ ಆಫ್ ಎ ನೇಷನ್’ ಒಮ್ಮೆಲೆ ಸಿನೆಮಾ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಒಂದೆರಡು ರೀಲುಗಳ ಚಿತ್ರ ನೋಡಿ ಅಭ್ಯಾಸವಾಗಿದ್ದ ಜನರಿಗೆ ಮೂರು ಗಂಟೆಯಷ್ಟು ದೀರ್ಘವಾದ ಚಿತ್ರ ಹೊಸ ಅನುಭವವೊಂದನ್ನು ನೀಡಿತು. ಅಮೆರಿಕದ ಗುಲಾಮಗಿರಿಯ ಇತಿಹಾಸ, ಅದರ ನಿಷೇಧಕ್ಕೆ ಹೋರಾಡುವ ‘ಅಬಾಲಿಷನಿಸ್ಟ್’ ಚಳವಳಿಗಾರರು, ಅಬ್ರಹಾಂ ಲಿಂಕನ್ ಗುಲಾಮಗಿರಿಯನ್ನು ನಿಷೇಧಿಸುವ ಕಟ್ಟಳೆಗೆ ಸಹಿ ಮಾಡಿದ ನಂತರ ಆರಂಭವಾಗುವ ‘ಸಿವಿಲ್ವಾರ್’ನ ಕಥಾನಕ ಚಿತ್ರದ ಮೊದಲ ಭಾಗವನ್ನು ಆವರಿಸಿಕೊಂಡಿತ್ತು. ಎರಡನೆಯ ಭಾಗದಲ್ಲಿ ಸಿವಿಲ್ವಾರ್ನಲ್ಲಿ ಉತ್ತರ ಪ್ರಾಂತದವರು ವಿಜಯಿಗಳಾಗಿ ಅಮೆರಿಕ ಸಂಸ್ಥಾನ ಮತ್ತೆ ಒಟ್ಟಾದ ನಂತರ ಜಾರಿಯಾಗುವ ಕರಿಯರ ಪುನರ್ನಿರ್ಮಾಣ (ರೀಕನ್ಸ್ಟ್ರಕ್ಷನ್) ಯುಗಕ್ಕೆ ಸಂಬಂಧಿಸಿದ್ದು. ಈ ಯುಗದಲ್ಲಿ ಹೊಸದಾಗಿ ಸ್ವಾತಂತ್ರ ಪಡೆದ ಕರಿಯರ ಅತಿರೇಕಗಳ ಚಿತ್ರಣವಿದೆ. ಗುಲಾಮಗಿರಿ ನಿಷೇಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಉತ್ತರ-ದಕ್ಷಿಣ ಪ್ರಾಂತಗಳ ನಡುವೆ ಆರಂಭವಾದ ಅಂತರ್ಯುದ್ಧ ಮತ್ತು ತದನಂತರದ ದಿನಗಳಲ್ಲಿ ದಕ್ಷಿಣ ಪ್ರಾಂತದ ಬಿಳಿಯರ ಕುಟುಂಬಗಳ ಯಾತನೆ ಮತ್ತು ಬಿಳಿಯರ ರಕ್ಷಣೆಗಾಗಿಯೇ ಹುಟ್ಟಿಕೊಂಡ ಕ್ಲಾನ್ಸ್ ಮನ್ಗಳ ಕಾರ್ಯಾಚರಣೆಯಂಥ ಸ್ಫೋಟಕ ವಸ್ತುವನ್ನು ಸಿನೆಮಾದಲ್ಲಿ ಆತ ಅಳವಡಿಸಿದ. ಅಮೆರಿಕ ಚರಿತ್ರೆಯಲ್ಲೇ ಮಹಾ ಘಟನೆಯೆನಿಸಿದ ‘ಸಿವಿಲ್ವಾರ್’ ಅನ್ನು ಅದರ ಎಲ್ಲ ಆಯಾಮಗಳಿಂದ ಗ್ರಿಫಿತ್ ಮೂಡಿಸಿದ್ದು ಅಚ್ಚರಿಯೆನಿಸಿತು. 1915ರವರೆಗೆ ಅಂಥದೊಂದು ಕ್ರಾಂತಿಕಾರಕ ಬದಲಾವಣೆಯು ಸಿನೆಮಾ ಜಗತ್ತಿನಲ್ಲಿ ಘಟಿಸಿರಲಿಲ್ಲ. ಗ್ರಿಫಿತ್ನ ನಿರ್ದೇಶನ ಯಾರ ಊಹೆಗೂ ನಿಲುಕದಷ್ಟು ನವನವೀನವಾಗಿತ್ತು.

ಉತ್ತರ ಪ್ರಾಂತದ ಸ್ಟೋನ್ಮನ್ ಮತ್ತು ದಕ್ಷಿಣ ಪ್ರಾಂತದ ಕ್ಯಾಮರಮನ್ ಕುಟುಂಬಗಳು ಸಿವಿಲ್ವಾರ್ ಎಂಬ ಅರ್ಥಹೀನ ಯುದ್ಧದಿಂದಾಗಿ ಪಡುವ ಯಾತನೆ; ಬಿಳಿಯರು ಮತ್ತು ಕರಿಯರ ನಡುವಿನ ಸಂಬಂಧಗಳು, ಸಂಘರ್ಷಗಳು; ಗುಲಾಮಗಿರಿಯನ್ನು ಉಳಿಸಿ ಬಿಳಿಯರ ಹಿರಿಮೆಯನ್ನು ಸಂರಕ್ಷಿಸಲು ಹಠತೊಟ್ಟ ಕ್ಲು ಕ್ಲಕ್ಸ್ ಕ್ಲಾನ್ (ಕೆಕೆಕೆ) ಸಂಘಟನೆಯ ಹುರಿಯಾಳುಗಳ ಸಾಹಸ; ಕರಿಯರು ಬಿಳಿಯರ ಮೇಲೆ ಮಾಡುವ ಆಕ್ರಮಣ; ಬಲಾತ್ಕಾರ; ಮುಗ್ಧ ಬಿಳಿಯರು ಪಡುವ ಸಂಕಷ್ಟಗಳನ್ನು ಗ್ರಿಫಿತ್ ತನ್ನ ವಿಶಿಷ್ಟ ನಿರೂಪಣಾ ಶೈಲಿಯಿಂದ ಬೆರಗುಗೊಳಿಸುವಂತೆ ಚಿತ್ರ ರೂಪಿಸಿದ್ದ. ಅಲ್ಲದೆ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಲು ಸಾವಿರಾರು ಸಹ ನಟರನ್ನು ಬಳಸಿ ಯುದ್ಧದ ಘೋರತೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದ. ಚಿತ್ರದ ಆರಂಭದಲ್ಲಿಯೇ ‘‘ಈ ಚಿತ್ರವು ಯುದ್ಧದ ಅನಾಹುತಗಳು ನಿಮ್ಮ ಮನಕ್ಕೆ ತಾಕುವಂತಾಗಿ ಯುದ್ಧದ ಬಗ್ಗೆ ಅಸಹ್ಯ ಹುಟ್ಟಿದರೆ ನನ್ನ ಪ್ರಯತ್ನ ಸಾರ್ಥಕ’’ ಎಂಬ ಉಪ ಶೀರ್ಷಿಕೆಯನ್ನು ಬಳಸಿದ್ದ. ಚಿತ್ರದ ಕಥೆಯನ್ನು ಸುಲಭವಾಗಿ ಅರಿಯಲು ಉಪ ಶೀರ್ಷಿಕೆಗಳಲ್ಲಿ (ಸಬ್ ಟೈಟಲ್ಸ್) ಪೂರಕ ಮಾಹಿತಿಗಳು ಮೂಡಿ ಬರುತ್ತಿದ್ದರೂ ಚಿತ್ರದ ಓಟಕ್ಕೆ ಧಕ್ಕೆಯಾಗುತ್ತಿರಲಿಲ್ಲ. ಚಿತ್ರದಲ್ಲಿ ನಟಿಸಿದ ಕಲಾವಿದರ ಅಭಿನಯವಂತೂ ನಟನೆಯ ಮೂಲಭೂತ ಪಾಠಗಳನ್ನು ಮುಂದಿನ ಜನಾಂಗಕ್ಕೆ ಹೇಳಿಕೊಡುವಷ್ಟು ಶಕ್ತವಾಗಿತ್ತು.

ಆದರೆ ರಾತ್ರಿ ಕಳೆಯುವುದರೊಳಗೆ ಅಪಾರ ಪ್ರಸಿದ್ಧಿಯ ಕಿರೀಟವನ್ನು ಧರಿಸಿದ ಗ್ರಿಫಿತ್ ಅಷ್ಟೇ ಪ್ರಮಾಣದ ವಿರೋಧವನ್ನು ಎದುರಿಸಬೇಕಾಯಿತು. ಆತನ ಸಿನೆಮಾ ತಂತ್ರಜ್ಞಾನದ ಉತ್ಕೃಷ್ಠತೆಯ ಬಗ್ಗೆ ಎಲ್ಲರ ಮೆಚ್ಚುಗೆಯಿತ್ತು. ಆದರೆ ನಿರ್ವಹಿಸಿದ ವಸ್ತು ಸಾಕಷ್ಟು ವಿವಾದ ಸೃಷ್ಟಿಸಿತು. ಅಮೆರಿಕದ ಕರಿಯರು ಮತ್ತು ಪ್ರಗತಿಶೀಲರು ಅದನ್ನು ‘ಕಚಡಾ ಚಿತ್ರ’ ಎಂದು ಕರೆದರು. ಕರಿಯರ ಅವಹೇಳನಕ್ಕಾಗಿಯೇ ಚಿತ್ರವನ್ನು ತಯಾರಿಸುವ ಗ್ರಿಫಿತ್ ಒಬ್ಬ ‘ಜನಾಂಗೀಯ ವಾದಿ’ (ರೇಸಿಸ್ಟ್) ಎಂದು ಜರೆದರು. ಕರಿಯರ ಹಕ್ಕುಗಳು ಮತ್ತು ಕಲ್ಯಾಣಕ್ಕೆ ಕಟಿಬದ್ಧವಾದ ಎಎಎಸಿಪಿ (ಕರಿಯರ ಕಲ್ಯಾಣದ ರಾಷ್ಟ್ರೀಯ ಸಂಸ್ಥೆ) ಸಂಘಟನೆಯು ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಅದರ ನಿಷೇಧಕ್ಕೆ ಆಗ್ರಹಿಸಿತು. ಆದರೆ ‘ಸಿವಿಲ್ ವಾರ್’ನ ನೇರ ಪರಿಣಾಮಗಳನ್ನು ಅನುಭವಿಸಿದ ಕುಟುಂಬದಿಂದ ಬಂದ ಗ್ರಿಫಿತ್ಗೆ ತಾನು ನಿಜವಾದ ಚರಿತ್ರೆಯನ್ನೇ ತೆರೆಗೆ ತಂದಿದ್ದೇನೆಂದು ಕೊನೆಯವರೆಗೂ ಸಮರ್ಥಿಸಿಕೊಳ್ಳುತ್ತಿದ್ದ.

1920ರ ವೇಳೆಗೆ ಕೈಯಲ್ಲಿ ಯಾವ ಚಿತ್ರಗಳೂ ಇರಲಿಲ್ಲ. ಗ್ರಿಫಿತ್ ತನ್ನ ಕ್ರಿಯಾಶೀಲ ಬದುಕಿನಿಂದ ನಿವೃತ್ತಿ ಹೊಂದಿದಂತೆ ಕಂಡುಬಂದ. ಹಾಲಿವುಡ್ಗೆ ಹತ್ತಿರದಲ್ಲೇ ಆತ ಬದುಕಿದರೂ ಯಾರೊಬ್ಬರೂ ಅವನತ್ತ ಸುಳಿಯಲಿಲ್ಲ. ತನ್ನ ಬದುಕನ್ನು ಮೆಲುಕು ಹಾಕುತ್ತಾ, ಮದ್ಯದಲ್ಲಿ ನೋವನ್ನು ಮರೆಯುತ್ತಾ, ಆತ್ಮ ಚರಿತ್ರೆಯನ್ನು ಬರೆಯುವ ವಿಫಲ ಯತ್ನದಲ್ಲೇ ಉಳಿದ ಬದುಕನ್ನು ಕಳೆದ.

ಚಿತ್ರದ ಪ್ರಸಿದ್ಧಿ ಮತ್ತು ವಿವಾದದಿಂದ ನಿಜವಾದ ಲಾಭ ಆಗಿದ್ದು ಗ್ರಿಫಿತ್ಗೆ. ಈ ಚಿತ್ರದಿಂದಾಗಿ ಗ್ರಿಫಿತ್ ಜಗತ್ತಿನ ಶ್ರೇಷ್ಠ ನಿರ್ದೇಶಕ; ಆಧುನಿಕ ಚಿತ್ರ ನಿರೂಪಣೆಯ ಪಿತಾಮಹ ಎಂಬ ಬಿರುದಿಗೆ ಪಾತ್ರನಾದ. ವೀಕ್ಷಕರ ಸಂಖ್ಯೆ ಜಾಸ್ತಿಯಾಯಿತು. ವಿವಾದದಿಂದ ಅನೇಕರಿಗೆ ಸಿನೆಮಾ ಬಗ್ಗೆ ಕುತೂಹಲ ಮೂಡಿತು. ಪರಿಣಾಮ ಬಾಕ್ಸ್ ಆಫೀಸ್ ತುಂಬಿ ತುಳುಕಾಡಿತು.

ಆದರೂ ಇಂದಿನವರೆಗೂ ‘ದಿ ಬರ್ತ್ ಆಫ್ ಎ ನೇಷನ್’ ಗೆ ಜನಾಂಗೀಯವಾದಿ ಸಿನೆಮಾ ಎಂಬ ಕಳಂಕವನ್ನು ತೊಡೆದುಕೊಳ್ಳಲಾಗಿಲ್ಲ. ಸಿವಿಲ್ವಾರ್ ನಂತರದಲ್ಲಿ ಹುಟ್ಟಿಕೊಂಡ ಕೆಕೆಕೆ 1915ರ ವೇಳೆಗೆ ಕ್ಷೀಣವಾಗಿತ್ತು. ಆದರೆ ಬರ್ತ್ ಆಫ್ ಎ ನೇಷನ್-ಆ ಸಂಘಟನೆಯ ಪುನರುತ್ಥಾನಕ್ಕೆ ಕಾರಣವಾಯಿತು. ಬಿಳಿಯರ ಜನಾಂಗದ ರಕ್ಷಣೆಯ ಹಠತೊಟ್ಟ ಫ್ಯಾಶಿಸ್ಟ್ ಸಂಘಟನೆ(ಕೆಕೆಕೆ)ಗೆ ಸದಸ್ಯಬಲ ವೃದ್ಧಿಸಿತು. ಬಹಿರಂಗವಾಗಿಯೇ ಈ ಸಂಘಟನೆ ಸಭೆಗಳನ್ನು ನಡೆಸಿ ಕರಿಯರ ಮೇಲಿನ ತಮ್ಮ ಅಸಹನೆಯನ್ನು ಹೊರಹಾಕಿತು. ಕರಿಯರನ್ನು ಕಂಡಲ್ಲಿ ಹಿಡಿದು ದಂಡಿಸುವ ಘಟನೆಗಳು ಹೆಚ್ಚಾಗುತ್ತಾ ಹೋದವು. ಒಂದು ಸಿನೆಮಾ, ಸಾಮಾಜಿಕವಾಗಿ ಬೀರಬಹುದಾದ ಪ್ರಭಾವಕ್ಕೆ ‘ದಿ ಬರ್ತ್ ಆಫ್ ಎ ನೇಷನ್’ ಮೊದಲ ಬಾರಿಗೆ ಪುರಾವೆ ಒದಗಿಸಿತು.

ತನ್ನನ್ನು ರೇಸಿಸ್ಟ್ ಎಂದು ಕರೆದ ವಿಮರ್ಶಕರಿಗೆ ಉತ್ತರ ನೀಡಲು ಯಶಸ್ಸಿನ ಶೃಂಗದಲ್ಲಿದ್ದ ಗ್ರಿಫಿತ್ ಮತ್ತೊಂದು ಸಾಹಸಕ್ಕೆ ಸಿದ್ಧನಾದ. ತನಗಂಟಿದ ಕಳಂಕವನ್ನು ತೊಡೆದುಹಾಕಲು ಸಂಕಲ್ಪಿಸಿದ. ಸಿನೆಮಾ ನಿರೂಪಣೆಯ ವಿಧಾನದಲ್ಲೇ ಅಮೋಘ ಅಧ್ಯಾಯವೊಂದನ್ನು ಬರೆದು ಚಿತ್ರ ನಿರ್ದೇಶಿಸಲು ಅಣಿಯಾದ. ಈ ಬಾರಿ ತನ್ನ ಚಿತ್ರಕ್ಕೆ ಚರಿತ್ರೆಯ ಬೇರೆ ಬೇರೆ ಘಟ್ಟಗಳಲ್ಲಿ ಪ್ರೀತಿ, ಅನುಕಂಪಗಳ ವಿರುದ್ಧ ಮನುಕುಲ ತೋರುವ ‘ಅಸಹಿಷ್ಣುತೆ’ಯ ವಸ್ತುವನ್ನು ಆರಿಸಿಕೊಂಡ.

ಗ್ರಿಫಿತ್ ನಿರ್ದೇಶಿಸಿದ ‘ಇಂಟಾಲರೆನ್ಸ್’ ಚಿತ್ರವು 2,500 ವರ್ಷಗಳ ಮಾನವ ಚರಿತ್ರೆಯಲ್ಲಿ ಘಟಿಸಿದ ನಾಲ್ಕು ಘಟನೆಗಳನ್ನು ಸಮಾನಾಂತರದಲ್ಲಿ ನಿರೂಪಿಸುವ ಚಿತ್ರ. ಚರಿತ್ರೆಯ ವಿವಿಧ ಘಟ್ಟಗಳಲ್ಲಿ ಅಸಹಿಷ್ಣುತೆಯು ತಲೆಯೆತ್ತಿ ಮನುಕುಲದ ನಾಶಕ್ಕೆ ಕಾರಣವಾದ ಕಥಾನಕ ಆ ನಾಲ್ಕು ಘಟನೆಗಳ ಸಮಾನ ವಸ್ತು. ಹೊಸದಾಗಿ ಆಚರಣೆಗೆ ಬಂದ ಧರ್ಮವೊಂದು ಪ್ರಬಲವಾಗಿ ಇತರರನ್ನು ಸಹಿಸಲಾರದೆ ಬ್ಯಾಬಿಲೋನಿಯಾ ಪತನಕ್ಕೆ (ಕ್ರಿ.ಪೂ. 530) ಕಾರಣವಾದ ಹಿನ್ನೆಲೆ ಮೊದಲನೆಯ ಭಾಗ. ಮನುಕುಲಕ್ಕೆ ಸಹಿಷ್ಣುತೆಯ ಪಾಠವನ್ನು ಹೇಳಿಕೊಟ್ಟ ಏಸುಕ್ರಿಸ್ತನನ್ನು ಶಿಲುಬೆಗೇರಿಸುವ (ಕ್ರಿ.ಶ. 27) ಕಥಾನಕ ಎರಡನೆಯ ಭಾಗ. ಸೈಂಟ್ ಬಾರ್ತಲ್ಮೋನಲ್ಲಿ ಹಗಲಿನಲ್ಲೇ ನಡೆದ ಸಾಮೂಹಿಕ ಹತ್ಯಾಕಾಂಡ (ಕ್ರಿ.ಶ. 1572 ಫ್ರಾನ್ಸ್) ಮೂರನೆಯ ಭಾಗವಾದರೆ ಆಧುನಿಕ ಕಾಲದ ಅಸಹಿಷ್ಣುತೆಯ ನಾನಾ ರೂಪಗಳು ನಾಲ್ಕನೆಯ ಭಾಗವಾಗಿ ಸೇರಿಕೊಂಡಿವೆ. ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಸಹಿಷ್ಣುತೆಯು ಅಮೆರಿಕದ ಜನಜೀವನವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಾಳುಗೆಡವಿದ ಚರಿತ್ರೆ ಇಲ್ಲಿ ದಾಖಲಾಗಿದೆ. ಈ ನಾಲ್ಕು ಭಾಗಗಳನ್ನು ಜೋಡಿಸುವಂತೆ ಹಾಗೂ ಮನುಕುಲದ ಆಶಾಭಾವನೆಯನ್ನು ಪ್ರತಿಬಿಂಬಿಸುವಂತೆ ಕಾಣುವ ತೊಟ್ಟಿಲು ತೂಗುವ ತಾಯೊಬ್ಬಳ ದೃಶ್ಯ ಆಗಾಗ ಮೂಡಿ ಬರುತ್ತದೆ. ಎಲ್ಲಾ ದೃಷ್ಟಿಯಿಂದಲೂ ‘ಇಂಟಾಲರೆನ್ಸ್’ ಮಹತ್ವದ ಚಿತ್ರವೆನಿಸಿತ್ತು. ಬೃಹತ್ ಸೆಟ್ಗಳು... ಸಾವಿರಾರು ಕಲಾವಿದರು... ಕಣ್ಣು ಕೋರೈಸುವ ವಸ್ತ್ರಗಳು... ಕಲಾವಿದರ ನುರಿತ ಅಭಿನಯ... ಅಮೋಘವೆನಿಸಿದ ಛಾಯಾಗ್ರಹಣ... ಅದೊಂದು ಅದ್ಭುತ ಸಿನೆಮಾ ಆಗಿ ಮೂಡಿ ಬಂದಿತ್ತು.

ಬ್ಯಾಬಿಲೋನಿಯಾದ ಅರಮನೆಯ ಸೆಟ್ಗಳಂತೂ ಊಹೆಗೆ ನಿಲುಕದಷ್ಟು ಭವ್ಯವಾಗಿದ್ದವು. ಅದರ ಭವ್ಯತೆಯನ್ನು ಮೇಲಿನಿಂದ ಸೆರೆಹಿಡಿಯಲು ಗ್ರಿಫಿಕ್ ಕ್ಯಾಮರಾ ಒಯ್ಯುವ ವಿಶೇಷ ಲಿಫ್ಟ್ಗಳನ್ನು ಮಾಡಿಸಿದ್ದ. ಸಹಸ್ರಾರು ಕಲಾವಿದರು ಒಮ್ಮೆಲೆ ಕಾಣಿಸಿಕೊಳ್ಳುವ ದೃಶ್ಯ ವೈಭವ, ಸಾಮೂಹಿಕ ಹತ್ಯಾಕಾಂಡ, ಶಿಲುಬೆಗೇರುವ ಏಸು-ಎಲ್ಲವೂ ಚಿತ್ತಾಕರ್ಷಕವಾಗಿ ಮೂಡಿಬಂದಿದ್ದವು. ಮನುಕುಲಕ್ಕೆ ಸಹಿಷ್ಣುತೆಯ ಅಮೋಘ ಸಂದೇಶವೊಂದನ್ನು ಚಿತ್ರದ ಮೂಲಕ ಹೇಳುವ ಆಶಯವಿತ್ತು. ‘ಎ ಬರ್ತ್ ಆಫ್ ಎ ನೇಷನ್’ ಚಿತ್ರಕ್ಕಿಂತಲೂ ‘ಇಂಟಾಲರೆನ್ಸ್’ ಕಲಾತ್ಮಕವಾಗಿ ಮೇಲ್ಮಟ್ಟದ್ದಾಗಿತ್ತು. ‘...........ನೇಷನ್’ ಚಿತ್ರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕೆಲವು ನಿರೂಪಣಾ ತೊಡಕುಗಳು ಇಲ್ಲಿರಲಿಲ್ಲ. ಕಲಾವಿದರ ಅಭಿನಯವೂ ನಿರ್ದೇಶಕರ ಆಶಯಕ್ಕೆ ಸ್ಪಂದಿಸುವಂತಿತ್ತು. ಸಿನೆಮಾ ಚರಿತ್ರೆಯಲ್ಲಿ ಎಲ್ಲ ದೃಷ್ಟಿಯಿಂದಲೂ ಅದೊಂದು ಅದ್ಭುತ ಪ್ರಯೋಗವೇ ಆಗಿತ್ತು. ಕ್ಲಾಸಿಕ್ ಎಂದು ಮುಂದೆ ಪರಿಗಣಿತವಾದ ಈ ಚಿತ್ರ ಪ್ರತಿಭಾವಂತ ನಿರ್ದೇಶಕರಾದ ಪುಡೋವ್ಕಿನ್ ಮತ್ತು ಸೆರ್ಗಿ ಐಸೆನ್ಸ್ಟೀನ್ ಅವರಿಗೆ ಪಠ್ಯವೆನಿಸಿತ್ತು. ಅವರ ಕೃತಿಗಳ ಮೇಲೆ ಈ ಚಿತ್ರ ಅಚ್ಚಳಿಯದ ಪ್ರಭಾವ ಬೀರಿದೆ.

ಆದರೆ ‘ಇಂಟಾಲರೆನ್ಸ್’ ನಿರೀಕ್ಷಿಸಿದ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಆ ಕಾಲಕ್ಕೆ 70,000 ಡಾಲರ್ ವೆಚ್ಚದಲ್ಲಿ ನಿರ್ಮಾಣ ಮಾಡಿದ ಈ ಚಿತ್ರ ಅನೇಕ ಕಾರಣಗಳಿಂದ ಮುಗ್ಗರಿಸಿತು. ಬಿಡುಗಡೆಯಾದಾಗ ಮೊದಲನೇ ಮಹಾಯುದ್ಧ ನಡೆಯುತ್ತಿತ್ತು. ಹೊಸ ಬಗೆಯ ನಿರೂಪಣಾ ವಿಧಾನ ಪ್ರೇಕ್ಷಕರಿಗೆ ಹಿತವೆನಿಸಲಿಲ್ಲ. ಆಗಷ್ಟೇ ರೇಸಿಸ್ಟ್ ಬಿರುದು ಹೊತ್ತ ಗ್ರಿಫಿತ್ ಬಗ್ಗೆ ಪ್ರಗತಿಶೀಲರು ಆಸಕ್ತಿ ತೋರಲಿಲ್ಲ. ಪರಿಣಾಮ ಇಂಟಾಲರೆನ್ಸ್ ಗ್ರಿಫಿತ್ನನ್ನು ಮುಳುಗಿಸಿಬಿಟ್ಟಿತು.

ಥಾಮಸ್ ಡಿಕ್ಸನ್ನ ‘ದಿ ಕ್ಲಾನ್ಸ್ ಮನ್’ ಕಾದಂಬರಿಯನ್ನು ಅನೇಕ ಬದಲಾವಣೆಗಳೊಡನೆ ಸಿನೆಮಾಗೆ ಅಣಿಗೊಳಿಸಿ ರೂಪಿಸಿದ ಕಥಾಚಿತ್ರ ‘ದಿ ಬರ್ತ್ ಆಫ್ ಎ ನೇಷನ್’ ಒಮ್ಮೆಲೆ ಸಿನೆಮಾ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಒಂದೆರಡು ರೀಲುಗಳ ಚಿತ್ರ ನೋಡಿ ಅಭ್ಯಾಸವಾಗಿದ್ದ ಜನರಿಗೆ ಮೂರು ಗಂಟೆಯಷ್ಟು ದೀರ್ಘವಾದ ಚಿತ್ರ ಹೊಸ ಅನುಭವವೊಂದನ್ನು ನೀಡಿತು.

‘ಇಂಟಾಲರೆನ್ಸ್’ ವೈಫಲ್ಯದಿಂದ ಗ್ರಿಫಿತ್ನ ಹೃದಯ ಒಡೆದುಹೋಯಿತು. ಹಣ ಹೂಡುವವರು ಹಿಂಜರಿದರು. ಇಂಟಾಲರೆನ್ಸ್ ಸಾಲದ ಮೂಟೆ ಹೊರಲಾರದ ಭಾರವೆನಿಸಿತು. ಆದರೂ 1919ರಲ್ಲಿ ‘ಬ್ರೋಕನ್ ಬ್ಲಾಸಮ್ಸ್’ ಎಂಬ ಅಮೋಘ ಚಿತ್ರವೊಂದನ್ನು ರೂಪಿಸಿದ. ಚೀನಾದ ಚೆಂಗ್ ಹೂವಾನ್ ಎಂಬಾತ ಬುದ್ಧನ ಶಾಂತಿ ಸಂದೇಶವನ್ನು ಬಿತ್ತರಿಸಲು ಲಂಡನ್ಗೆ ಆಗಮಿಸಿ ಅಲ್ಲಿನ ಕ್ರೌರ್ಯಕ್ಕೆ ಮುಖಾಮುಖಿಯಾಗುವ ಕತೆ. ಲೂಸಿ ಎಂಬ ಕೊಳಗೇರಿಯ ಹುಡುಗಿಯೊಬ್ಬಳು ಅಪ್ಪನ ಹಿಂಸೆ ತಾಳಲಾರದೆ ಚೆಂಗ್ನ ಆಶ್ರಯಕ್ಕೆ ಬರುತ್ತಾಳೆ. ಚೆಂಗ್ನ ಆರೈಕೆಯಲ್ಲಿ ಆರೋಗ್ಯ ಸುಧಾರಿಸುತ್ತದೆ. ಅವಳ ಇರುವನ್ನು ಪತ್ತೆ ಹಚ್ಚಿದ ಅಪ್ಪ ಮಗಳನ್ನು ಎಳೆದೊಯ್ಯುತ್ತಾನೆ. ಭಯಪಟ್ಟ ಲೂಸಿ ಅಪ್ಪನ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಕಪಾಟಿನಲ್ಲಿ ಬಚ್ಚಿಟ್ಟುಕೊಳ್ಳುತ್ತಾಳೆ. ಚೆಂಗ್ ಆಕೆಯ ಮನೆಗೆ ಬರುವ ವೇಳೆಗೆ ಲೂಸಿ ಸತ್ತು ಬಿದ್ದಿರುತ್ತಾಳೆ. ಚೆಂಗ್ನನ್ನು ಹೊಡೆಯಲು ಹೋದ ಅಪ್ಪನನ್ನು ಷೂಟ್ ಮಾಡಿ ಲೂಸಿಯ ಕಳೇ ಬರವನ್ನು ಹೊತ್ತು ತರುತ್ತಾನೆ. ಬುದ್ಧನಿಗೆ ಸ್ಮಾರಕ ನಿರ್ಮಿಸಿದ ನಂತರ ಚೆಂಗ್ ಹೊಟ್ಟೆಗೆ ಚಾಕು ಹಾಕಿಕೊಂಡು ಸಾಯುತ್ತಾನೆ.

ಮನುಷ್ಯ ಸಂಬಂಧಗಳ ವಿವಿಧ ರೂಪಗಳನ್ನು ಅನಾವರಣಗೊಳಿಸಿದ ಈ ಚಿತ್ರ ಯಶಸ್ವಿಯಾಯಿತು. ಆನಂತರ ನಿರ್ದೇಶಿಸಿದ ಚಿತ್ರಗಳಲ್ಲಿ ‘ವೇ ಡೌನ್ ಈಸ್ಟ್’ (1920) ಮತ್ತೊಂದು ಕ್ಲಾಸಿಕ್ ಎನಿಸಿತು.

ಆದರೂ ಗ್ರಿಫಿತ್ ಮೇಲಿದ್ದ ಸಾಲದ ಹೊರೆ ಹೆಚ್ಚಾಗುತ್ತಾ ಹೋಯಿತು. ಮತ್ತೊಂದು ಬ್ರೇಕ್ ಆತನಿಗೆ ಸಿಗಲೇ ಇಲ್ಲ. ಅನೇಕ ಸಿನೆಮಾಗಳನ್ನು ಪ್ರಕಟಿಸಿದ. ಯಾವ ಯೋಜನೆಯೂ ಕೈಗೂಡಲಿಲ್ಲ. ಆನಂತರ ಇಂಗ್ಲೆಂಡ್ಗೆ ಹೋದ. ಅಲ್ಲಿ ಎಚ್.ಜಿ. ವೆಲ್ಸ್ನ ‘ಔಟ್ಲೈನ್ಸ್ ಆಫ್ ಹಿಸ್ಟರಿ’ ಕೃತಿಯನ್ನು ಮತ್ತು ‘ಗಾಂಧಿ’ಯ ಬದುಕನ್ನು ತೆರೆಗೆ ಅಳವಡಿಸಲು ಹಂಬಲಿಸಿದ. ಆದರೆ ಅವೆಲ್ಲವೂ ಕನಸಿನ ಕೂಸುಗಳಾಗಿಯೇ ಉಳಿದವು.

1920ರ ವೇಳೆಗೆ ಕೈಯಲ್ಲಿ ಯಾವ ಚಿತ್ರಗಳೂ ಇರಲಿಲ್ಲ. ಗ್ರಿಫಿತ್ ತನ್ನ ಕ್ರಿಯಾಶೀಲ ಬದುಕಿನಿಂದ ನಿವೃತ್ತಿ ಹೊಂದಿದಂತೆ ಕಂಡುಬಂದ. ಹಾಲಿವುಡ್ಗೆ ಹತ್ತಿರದಲ್ಲೇ ಆತ ಬದುಕಿದರೂ ಯಾರೊಬ್ಬರೂ ಅವನತ್ತ ಸುಳಿಯಲಿಲ್ಲ. ತನ್ನ ಬದುಕನ್ನು ಮೆಲುಕು ಹಾಕುತ್ತಾ, ಮದ್ಯದಲ್ಲಿ ನೋವನ್ನು ಮರೆಯುತ್ತಾ, ಆತ್ಮ ಚರಿತ್ರೆಯನ್ನು ಬರೆಯುವ ವಿಫಲ ಯತ್ನದಲ್ಲೇ ಉಳಿದ ಬದುಕನ್ನು ಕಳೆದ. ಜಗತ್ತಿನ ಕಥಾಚಿತ್ರದ ಪಿತಾಮಹನೆಂಬ, ಮೊತ್ತಮೊದಲ ಬಾಕ್ಸ್ ಆಫೀಸ್ ದಾಖಲೆಯ ಚಿತ್ರ ನಿರ್ದೇಶಕನೆಂಬ ಗೌರವಕ್ಕೆ ಪಾತ್ರನಾದ ಗ್ರಿಫಿತ್ಗೆ ಕೊನೆಯ ಎರಡೂವರೆ ದಶಕಗಳ ಕಾಲ ಒಂದು ಚಿತ್ರವನ್ನು ನಿರ್ದೇಶಿಸಲು ಯಾರೊಬ್ಬರೂ ಆರ್ಥಿಕವಾಗಿ ನೆರವು ನೀಡಲು ಮುಂದೆ ಬರಲಿಲ್ಲ. ಭಗ್ನ ಹೃದಯಿಯಾಗಿ ಗ್ರಿಫಿತ್ 1948ರಲ್ಲಿ ಕೊನೆಯುಸಿರೆಳೆದ. ವ್ಯಂಗ್ಯವೆಂದರೆ ಆತನ ಅಂತಿಮ ಸಂಸ್ಕಾರಕ್ಕೆ ಇಡೀ ಹಾಲಿವುಡ್ ಆಗಮಿಸಿತ್ತು!

ಅಂದಹಾಗೆ ಗ್ರಿಫಿತ್ ಎಷ್ಟು ಮಹತ್ವದ ನಿರ್ದೇಶಕ? ಆತನೆಂದೂ ಕಾಗದದ ಮೇಲೆ ಚಿತ್ರಕತೆಯನ್ನು ಬರೆದು ಸಿದ್ಧಪಡಿಸಿಕೊಳ್ಳುತ್ತಿರಲಿಲ್ಲ. ಎಲ್ಲವೂ ಆತನ ತಲೆಯಲ್ಲೇ ತುಂಬಿರುತ್ತಿದ್ದವು. ದೃಶ್ಯ ಪರಿಸರದ ಎಲ್ಲ ವಿವರಗಳು, ಚಿತ್ರದ ನಾಟಕೀಯತೆ, ವಸ್ತ್ರಗಳು ಮತ್ತು ಪಾತ್ರಗಳ ವರ್ತನೆಗಳು ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆಯಿತ್ತು. ಆತನ ದೃಶ್ಯ ಸಂಯೋಜನೆ ಅದ್ಭುತವಾಗಿತ್ತು. ಆತನ ಚಿತ್ರದಲ್ಲಿ ಸೊಬಗು, ಲಾಲಿತ್ಯ, ಸೌಂದರ್ಯ ಮತ್ತು ವಾಸ್ತವತೆಯು ಮೇಳೈಸಿರುತ್ತಿತ್ತು. ಆತ ಸಿನೆಮಾ ಮಾಧ್ಯಮವನ್ನು ಅರ್ಥಪೂರ್ಣವಾಗಿ ಮತ್ತು ಗುರಿಯೊಂದರ ಸಾಧನೆಗಾಗಿ ಬಳಸಬೇಕೆಂದು ನಂಬಿದ್ದ. ಆತನ ತಾಂತ್ರಿಕ ಜ್ಞಾನವಂತೂ ಉತ್ಕೃಷ್ಠಮಟ್ಟದ್ದಾಗಿತ್ತು. ಆತ ಚಿತ್ರ ನಿರ್ಮಾಣದ ವ್ಯಾಕರಣಕ್ಕೆ ನಾಂದಿ ಹಾಡಿದ. ಆದರೂ ಚಲನಚಿತ್ರರಂಗ ಆತನನ್ನು ಮರೆಯಿತು. ‘‘ಗ್ರಿಫಿತ್ ಬಗ್ಗೆ ಈಗಲೂ ನಾಚಿಕೆ ತುಂಬಿದ ಕೃತಜ್ಞತೆಯೇ ನಮ್ಮಲ್ಲಿರುವುದು’’ ಎಂಬ ಅಮೆರಿಕದ ವಿಮರ್ಶಕನೊಬ್ಬನ ಉದ್ಗಾರ ಸತ್ಯವಾದದ್ದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top