ಮೋದಿ ಪ್ರಣೀತ ಮಾಧ್ಯಮ ಮಾಯಾಜಾಲ

-

ಎನ್.ಎಸ್. ಶಂಕರ್

1979ರಿಂದ ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದ ಇವರು, ಮುಂಗಾರು ಮತ್ತು ಸುದ್ದಿ ಸಂಗಾತಿ ಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು. ಲಂಕೇಶರ ಸಣ್ಣಕತೆ ಆಧಾರಿತ ಮುಟ್ಟಿಸಿಕೊಂಡವರು ಕಿರುಚಿತ್ರದ ಮೂಲಕ ದೃಶ್ಯ ಮಾಧ್ಯಮ ಪ್ರವೇಶಿಸಿದ ಇವರು, ನಾಲ್ಕು ಧಾರಾವಾಹಿಗಳನ್ನು, ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿಚಿತ್ರ, ಜಾಹೀರಾತು ಚಿತ್ರಗಳನ್ನು ನಿರ್ಮಿಸಿದ್ದಾರೆ. ಎರಡು ರಾಜ್ಯ ಪ್ರಶಸ್ತಿಗಳೂ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದ ಉಲ್ಪಾ ಪಲ್ಟಾ ಚಿತ್ರದೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ರಾಂಗ್ ನಂಬರ್, ಜೂಟಾಟ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಪ್ರಶಸ್ತಿ ತೀರ್ಪುಗಾರರ ಮಂಡಳಿ ಸದಸ್ಯರಾಗಿ, ಕರ್ನಾಟಕ ರಾಜ್ಯ ಗುಣಮಟ್ಟದ ಚಿತ್ರಗಳ ಸಹಾಯಧನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದವರು. ವ್ಯಂಗ್ಯಚಿತ್ರ ರಚನೆಗೆ ರಾಷ್ಟ್ರೀಯ ಮಟ್ಟದಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದವರು. ಸಿನೆಮಾ, ರಾಜಕಾರಣ, ಸಾಹಿತ್ಯ ಕ್ಷೇತ್ರಗಳ ಆಳ ಅಧ್ಯಯನ, ಮೌಲ್ಯಯುತ ಬರವಣಿಗೆ, ಭಾಷಣಗಳ ಮೂಲಕ ಚಿಂತಕರೆಂದು ಗುರುತಿಸಿಕೊಂಡವರು.

ಹೆಸರು ಚಂದ್ರಮಣಿ ಕೌಶಿಕ್. ಛತ್ತೀಸ್‌ಗಡದ ಕಾಂಕೇರ್ ಜಿಲ್ಲೆಯ ಕನ್ಹರಿ ಗ್ರಾಮದ ಬಡ ರೈತ ಮಹಿಳೆ. ಕಳೆದ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದೇಶದ ರೈತ ಸಮೂಹದೊಂದಿಗೆ ಚರ್ಚಿಸಲು ವೀಡಿಯೊ ಕಾನ್ಫರೆನ್ಸ್ ಮಾಡಿದಾಗ ಟಿವಿ ಪರದೆಯಲ್ಲಿ ಕಣ್ಣೆದುರು ಕಂಡವರು ಈ ಚಂದ್ರಮಣಿ ಕೌಶಿಕ್. ಮೋದಿ ಆ ಹೆಂಗಸಿನ ಜೊತೆ ಮಾತಾಡುತ್ತ ಆಕೆಯ ಆದಾಯದ ಬಗ್ಗೆ ವಿಚಾರಿಸಿದರು; ಚಂದ್ರಮಣಿ ಕೂಡಲೇ ಮೋದಿ ಸರಕಾರದ ಯೋಜನೆಗಳಿಂದಾಗಿ ತನ್ನ ವರಮಾನ ದುಪ್ಪಟ್ಟಾಗಿದೆ ಎಂಬ ಉತ್ತರ ಕೊಟ್ಟಳು!

https:/www.youtube.com/watch?v=X6G_mN6JGYs)!

(ನೋಡಿ ವೀಡಿಯೊ: ಅಲ್ಲಿಗೆ ಮೋದಿ ಖುಷ್ ಹುವಾ...!! ಎಂಥ ಸಾಧನೆ! ಅಲ್ಲವೇ? ಹೇಗೂ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡಬೇಕೆಂಬುದು ಮೋದಿ ಸರಕಾರದ ಅಧಿಕೃತ ಘೋಷಣೆ.

ಆದರೆ ಈ ದುಪ್ಪಟ್ಟು ವ್ಯವಹಾರದ ಬಗ್ಗೆ ಮೊದಲು ಅನುಮಾನ ಬಂದಿದ್ದು ಕೋಲ್ಕತಾದ ಎಬಿಪಿ ನ್ಯೂಸ್ ವಾಹಿನಿಗೆ. ಈ ಎಬಿಪಿ ನ್ಯೂಸ್- ಆನಂದ್ ಬಜಾರ್ ಪತ್ರಿಕಾ ಬಳಗದ ಹಿಂದಿ ಸುದ್ದಿವಾಹಿನಿ. ದೇಶದ ಪ್ರಮುಖ ಹಿಂದಿ ಸುದ್ದಿ ಚಾನೆಲ್‌ಗಳಲ್ಲೊಂದು. ದಿ ಟೆಲಿಗ್ರಾಫ್ ದಿನಪತ್ರಿಕೆ ಕೂಡ ಅವರದೇ ಪ್ರಕಟನೆ. ಅವರ ಅನುಮಾನಕ್ಕೆ ಕಾರಣ ಇಷ್ಟೇ: ಛತ್ತೀಸ್‌ಗಡ, ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲೊಂದು. ಅದರಲ್ಲೂ ಕಾಂಕೇರ್ ಜಿಲ್ಲೆ- ಅವರ ಅಧಿಕೃತ ವೆಬ್‌ಸೈಟ್ ಪ್ರಕಾರವೇ- ಭಾರತ ದೇಶದಲ್ಲಷ್ಟೇ ಅಲ್ಲ, ಇಡೀ ಭೂಲೋಕದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲೊಂದು! ಇಂಥ ಕಡೆ ರೈತ ಹೆಣ್ಣುಮಗಳ ವರಮಾನ ದುಪ್ಪಟ್ಟಾಗಿದೆ ಎಂದರೆ? ಸುದ್ದಿ ನಿಜವಾಗಿದ್ದರೇನೋ ಅದು ಅದ್ಭುತವೇ ಸರಿ. ಹಾಗಿರದೆ ಅದು ಸುಳ್ಳಾಗಿದ್ದರೆ...?

ಪತ್ತೆ ಮಾಡಲೆಂದೇ ಎಬಿಪಿ ನ್ಯೂಸ್ ತನ್ನ ವರದಿಗಾರರನ್ನು ಕಳಿಸಿತು. ಮತ್ತು ಆ ವರದಿಗಾರರು ತಂದ ವಸ್ತುಸ್ಥಿತಿ ವರದಿ ಹದಿನಾಲ್ಕು ದಿನಗಳ ನಂತರ ಜುಲೈ 6ರಂದು ವಾಹಿನಿಯಲ್ಲಿ ಬಿತ್ತರಗೊಂಡಿತು

(ವೀಡಿಯೊ ನೋಡಿ:-https://youtu.be/lboVJ6cxzdU) ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ- ರಾತ್ರಿ 9:00ಗಂಟೆಗೆ ಪ್ರಸಾರವಾಗುವ ಮಾಸ್ಟರ್ ಸ್ಟ್ರೋಕ್‌ನಲ್ಲಿ.

ಆ ವರದಿಯಲ್ಲಿ ಬಹಿರಂಗವಾದ ಸಂಗತಿಯೆಂದರೆ- ಮೋದಿಯವರ ಇಡೀ ಪ್ರಶ್ನೋತ್ತರ ಪ್ರಸಂಗವೇ ಒಂದು ದೊಡ್ಡ ಪ್ರಹಸನ! ಯಾಕೆಂದರೆ ವೀಡಿಯೊ ಸಂವಾದಕ್ಕೆ ಮುಂಚೆಯೇ ದಿಲ್ಲಿಯಿಂದ ಬಂದಿಳಿದಿದ್ದ ಅಧಿಕಾರಿಗಳು, ಚಂದ್ರಮಣಿ ಕೌಶಿಕ್ ಎಂಬ ಆ ಮಹಿಳೆಗೆ, ಪ್ರಧಾನಿಗಳ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಏನು ಹೇಳಬೇಕೆಂದು ಮೊದಲೇ ಬೋಧಿಸಿದ್ದರು. ಅದರಲ್ಲೂ ವರಮಾನ ದುಪ್ಪಟ್ಟು ಅಂಶವನ್ನು ಒತ್ತಿ ಒತ್ತಿ ಹೇಳಿಕೊಟ್ಟು ತರಬೇತಿಗೊಳಿಸಿದ್ದರು!... ಮಾಸ್ಟರ್ ಸ್ಟ್ರೋಕ್‌ನ ಈ ತನಿಖಾ ವರದಿ ಸಂಚಲನವನ್ನೇ ಸೃಷ್ಟಿಸಿತು.

ಜುಲೈ 6ರ ಮಾಸ್ಟರ್ ಸ್ಟ್ರೋಕ್‌ನಲ್ಲಿ ಹೀಗೆ ಚಂದ್ರಮಣಿ ಕೌಶಿಕ್ ಪ್ರಸಂಗವನ್ನು ಬಯಲಿಗೆಳೆದಿದ್ದೊಂದೇ ಆ ವಾಹಿನಿಯ ಸಾಧನೆಯಲ್ಲ. ಅದಕ್ಕೆ ಮುಂಚೆಯೂ, ನಂತರವೂ ಸರಕಾರದ ಸುಳ್ಳುಗಳನ್ನು ಆ ಚಾನೆಲ್ ಸತತವಾಗಿ ಸ್ಫೋಟಿಸುತ್ತಲೇ ಬಂದಿತ್ತು.

ಆ ದಿನಗಳಲ್ಲೇ ಮಾಸ್ಟರ್ ಸ್ಟ್ರೋಕ್, ಜಾರ್ಖಂಡ್ ರಾಜ್ಯದ ಗೊಡ್ಡಾದಲ್ಲಿ ಗೌತಮ್ ಅದಾನಿಗೆ ಸೇರಿದ ಉಷ್ಣಸ್ಥಾವರ ಸ್ಥಾಪನೆ ಸಂದರ್ಭದಲ್ಲಿ ಹೇಗೆ ಎಲ್ಲ ನೀತಿ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ; ಆದರೆ ಅದಾನಿ ಪ್ರಧಾನಮಂತ್ರಿಗೆ ಪರಮಾಪ್ತರಾದ್ದರಿಂದ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎನ್ನುವ ವರದಿ ಬಿತ್ತರಿಸಿತ್ತು. ಅಷ್ಟೇ ಅಲ್ಲ, ಆ ವಿದ್ಯುತ್ ಸ್ಥಾವರ ಯೋಜನೆಗೆ ಭೂಮಿ ಬಿಟ್ಟುಕೊಡಲು ಒಪ್ಪದ ರೈತರಿಗೆ ಅದಾನಿ ಸಂಸ್ಥೆ ಕಡೆಯಿಂದ ಕೊಲೆ ಬೆದರಿಕೆ ಹಾಕಲಾಗಿತ್ತು; ಅಧಿಕಾರಿಗಳು ಅದನ್ನು ನೋಡಿಯೂ ಕೈ ಕಟ್ಟಿ ಕುಳಿತಿದ್ದ ಆಘಾತಕಾರಿ ಅಂಶವೂ ಆ ವರದಿಯಲ್ಲಿತ್ತು. ಭೂಮಿ ಬಿಟ್ಟು ಕೊಡದಿದ್ದರೆ ನಮ್ಮನ್ನು ಜೀವಂತ ಹುಗಿಯುತ್ತೇನೆ ಎಂದು ಕಂಪೆನಿ ಅಧಿಕಾರಿಯೊಬ್ಬ ನಮಗೆ ಧಮಕಿ ಹಾಕಿದ. ನಾವು ಹೆದರಿ ದೂರು ಕೊಡೋಣ ಅಂತ ಪೊಲೀಸರ ಹತ್ತಿರ ಹೋದರೆ ಅವರು ದೂರಿನಿಂದ ಏನೂ ಉಪಯೋಗ ಇಲ್ಲ, ಅವರು ಪ್ರಧಾನ ಮಂತ್ರಿಗಳಿಗೇ ಹತ್ತಿರದವರು; ನಮ್ಮ ಕೈಯಲ್ಲಿ ಏನೂ ಸಾಗೋಲ್ಲ ಅಂದುಬಿಟ್ಟರು- ಇದು ರೈತನೊಬ್ಬ ವಾಹಿನಿಯ ಕ್ಯಾಮರಾ ಮುಂದೆ ನೀಡಿದ ಹೇಳಿಕೆ. ಆತ ತನ್ನ ಸಂಕಟ ತೋಡಿಕೊಳ್ಳುವಾಗ ಆತನ ಹೆಂಡತಿಯೂ ಪಕ್ಕದಲ್ಲೇ ಮುಖದ ತುಂಬ ದಿಗಿಲು ಹೊತ್ತು ನಿಂತಿದ್ದಳು....

ಅಂತೂ ಪ್ರಸಕ್ತ ಆಳ್ವಿಕೆಯ ಸುಳ್ಳು, ತಟವಟಗಳನ್ನು ಹೀಗೆ ರಾಜಾರೋಷವಾಗಿ ಬಯಲಿಗೆಳೆಯುತ್ತ ಹೋದ ಎಬಿಪಿ ವಾಹಿನಿಯನ್ನು ತಮ್ಮ ಶತ್ರು ಎಂದು ಮೋದಿ ಸಾಮ್ರಾಜ್ಯ ಪರಿಗಣಿಸಿದ್ದು ಸಹಜವಾಗಿತ್ತು. ಪರಿಣಾಮವಾಗಿ ಆ ಚಾನೆಲ್ ಏನೇನು ಅನುಭವಿಸಬೇಕಾಗಿ ಬಂತು ಎಂಬುದು ಇಲ್ಲಿ ಪರಿಶೀಲನೆಗೆ ಯೋಗ್ಯವಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಧ್ಯಮಗಳ ನಂಟಿನ ಸ್ವರೂಪ ಅರಿಯಲೂ ಈ ಪ್ರಸಂಗ ಒಂದು ದಿಕ್ಸೂಚಿಯಾಗಿದೆ.

ಪ್ರಶ್ನೆ ಆ ಪಕ್ಷ, ಈ ಪಕ್ಷದ್ದಲ್ಲ; ಯಾವ ಪಕ್ಷದ ಸರಕಾರವೇ ಆದರೂ, ಒಟ್ಟು ಮಾಧ್ಯಮಗಳ ಬಾಲಬಡುಕತನವನ್ನು ಸಂಪಾದಿಸಲು ಏನೇನೆಲ್ಲ ಕಸರತ್ತು ಮಾಡುತ್ತವೆ ಎಂಬುದು ಭಾರತೀಯರಿಗೆ ಹೊಸದೇನಲ್ಲ. ಕಾಂಗ್ರೆಸಿಗಂತೂ ತುರ್ತುಪರಿಸ್ಥಿತಿಯಲ್ಲಿ ಬರ್ಬರವಾಗಿ ಜನತಂತ್ರದ ಕತ್ತು ಹಿಸುಕಿದ ಇತಿಹಾಸವೇ ಇದೆ. ಅಷ್ಟಿದ್ದರೂ, ಈ ವಿಷಯದಲ್ಲಿ ಮಾತ್ರ ಬಿಜೆಪಿಗೆ ಬಿಜೆಪಿಯೇ ಸಾಟಿ!... ಅಷ್ಟಕ್ಕೂ 2014ರಲ್ಲಿ ಮೋದಿಯವರನ್ನು ಪ್ರಧಾನಿ ಪಟ್ಟಕ್ಕೆ ತಂದು ಕೂರಿಸುವ ಸಲುವಾಗಿ ಆ ಪಕ್ಷ ಸಾಮಾಜಿಕ ಹಾಗೂ ಮತ್ತೆಲ್ಲ ಮಾಧ್ಯಮಗಳನ್ನು ಬಳಸಿಕೊಂಡ ಪರಿಯನ್ನು; ಹಾಗೆಯೇ 2014ರಿಂದೀಚೆಗೆ ಮೋದಿ ಹಾಗೂ ಹಿಂದುತ್ವದ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಾಮಾಜಿಕ ಮಾಧ್ಯಮಗಳ ದೊಡ್ಡ ಆಕ್ರಮಣಕಾರಿ ಸೈನ್ಯದ ಪರಾಕ್ರಮವನ್ನೂ, ದೇಶದ ಜನತೆ ಈಗಾಗಲೇ ಕಂಡು ದಂಗಾಗಿದ್ದಾರೆ.

ಇನ್ನು ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುಂಚಿನಿಂದಲೂ ಬಿಜೆಪಿ ಹಾಗೂ ಈಗಿನ ಸರಕಾರಗಳ ಏಕೈಕ ಶಕ್ತಿ ಕೇಂದ್ರ. ಸರಕಾರವೆಂಬ ಸೌರಮಂಡಲದಲ್ಲಿ ಮೋದಿ ಸೂರ್ಯನಾದರೆ, ಉಳಿದವರೆಲ್ಲ ಗ್ರಹಗಳು ಹಾಗೂ ಕ್ಷುದ್ರ ಗ್ರಹಗಳು ಮಾತ್ರ! ಹಿಂದೊಮ್ಮೆ ಹೇಗೆ 'ಇಂದಿರಾ ಈಸ್ ಇಂಡಿಯಾ' ಎಂಬ ಭಟ್ಟಂಗಿ ಸೊಲ್ಲು ಹೊರಟಿತ್ತೋ, ಅದೇ ಮಾದರಿಯಲ್ಲಿ ಈಗ ಮೋದಿ ಎಂದರೆ ಭಾರತ ಎಂಬ ಭಜನೆ ಚಾಲ್ತಿಯಲ್ಲಿದೆ. ವ್ಯತ್ಯಾಸವೆಂದರೆ, ಇಂದಿರಾ ಸರ್ವಾಧಿಕಾರಿಯಾದ ಕೂಡಲೇ ಇಡೀ ದೇಶ ಅವರ ವಿರುದ್ಧ ತಿರುಗಿ ಬಿತ್ತು. ಆದರೆ ಆ ವಿಷಯದಲ್ಲಿ ಮೋದಿ ಪುಣ್ಯವಂತ! ಜನಕ್ಕೆ ಅವರ ಏಕಚಕ್ರಾಧಿಪತ್ಯವೂ ಆಪ್ಯಾಯಮಾನವಾಗಿ ಕಾಣುತ್ತಿದೆ! ಈ ಸಾರ್ವತ್ರಿಕ ಭಜನೆಯಲ್ಲಿ, ಮಾಧ್ಯಮಗಳೂ ಸೇರಿಕೊಂಡು ತಾಳ ಹಾಕುತ್ತ ಕೂತಿದ್ದರಲ್ಲಿ ಅತಿಶಯವೇನೂ ಇಲ್ಲ. ಮೋದಿ ಹೆಸರು ಪ್ರಧಾನಿ ಹುದ್ದೆಗೆ ನಿಯುಕ್ತವಾದ ಗಳಿಗೆಯೇ ದೇಶದ ಬಹುತೇಕ ಮಾಧ್ಯಮಗಳಿಗೆ- ವಿಶೇಷವಾಗಿ ಟಿವಿ ಚಾನೆಲ್‌ಗಳಿಗೆ ಮೋದಿ ಕೀರ್ತನೆಯೇ ಪೂರ್ಣಾವಧಿ ಕಸುಬಾಯಿತು; ಮತ್ತು ಆ ಕೀರ್ತನೆ ಇನ್ನೂ ನಿಂತೂ ಇಲ್ಲ, ಮತ್ತು ಅದೇ ಅವರಿಗೆಲ್ಲ ಲಾಭದಾಯಕವೂ ಆಗಿ ಪರಿಣಮಿಸಿರುವುದರಿಂದ ಆ ಕೀರ್ತನೆ ಸದ್ಯಕ್ಕೆ ನಿಲ್ಲುವುದೂ ಇಲ್ಲ. ಮೋದಿ ಎಲ್ಲಿಯವರೆಗೆ ಜನರ ಕಣ್ಮಣಿಯಾಗಿರುವರೋ, ಅದುವರೆಗೆ ಮೋದಿ ಭಜನೆಯೇ ಚಾನೆಲ್‌ಗಳಿಗೆ ಜನಪ್ರಿಯತೆ- ಅಂದರೆ ಟಿಆರ್‌ಪಿ ಗಳಿಸುವ ರಹದಾರಿಯೂ ಆಗಿದೆ. ಇದು ಮಾಧ್ಯಮಗಳ ಸ್ವಯಂ ಶರಣಾಗತಿಯ ಅಥವಾ ಸ್ವಯಂ ದಾಸ್ಯದ ಮಗ್ಗಲು. ಆದರೆ ಇದಿಷ್ಟೇ ಅಲ್ಲ, ಮೋದಿ ಹಾಗೂ ಮಾಧ್ಯಮಗಳ ಸಂಬಂಧಕ್ಕೆ ಇನ್ನೂ ಹಲವು ಮಗ್ಗಲುಗಳಿವೆ. ಈ ಅಚ್ಛೇ ದಿನ್ ಭಜನೆಗೆ ಒಂದು ಶಿಸ್ತುಬದ್ಧ ಸ್ವರೂಪ ನೀಡಲು ಬಿಜೆಪಿಯಲ್ಲಿ, ಅತ್ಯುನ್ನತ ಮಟ್ಟದಲ್ಲಿ 200 ಜನರ ಮಾಧ್ಯಮ ನಿಯಂತ್ರಣಾ ಸಮಿತಿ ಅಥವಾ ಮಾಧ್ಯಮ ಕಾವಲು ಸಮಿತಿಯೊಂದು ಅಸ್ತಿತ್ವದಲ್ಲಿದೆ. ನೇರವಾಗಿ ವಾರ್ತಾ ಮಂತ್ರಿಗೆ ವರದಿ ಮಾಡುವ ಈ ಸಮಿತಿಯಲ್ಲಿ ಮೂರು ಹಂತದ ಕಾರ್ಯಕರ್ತರಿದ್ದಾರೆ. ಆ ಸಮಿತಿಯಲ್ಲಿ ಕೆಳ ಹಂತದ 150 ಮಂದಿಗೆ ಮಾಧ್ಯಮಗಳಲ್ಲಿ ಏನೇನು ಬರುತ್ತಿದೆ ನೋಡಿ ಗುರುತು ಮಾಡುವುದಷ್ಟೇ ಕೆಲಸ. ಇವರ ಮೇಲಿನ ಹಂತದ 25 ಮಂದಿ, ಈ ವರದಿಯನ್ನು ಸರಕಾರದ ಅವಗಾಹನೆಗೆ ತಕ್ಕಂತೆ ಪರಿಷ್ಕರಿಸುವರು. ಮಿಕ್ಕ 25 ಮಂದಿ- ಸಮಿತಿಯ ಅತ್ಯುನ್ನತ ದರ್ಜೆ ಸದಸ್ಯರು. ಇವರು ಮಾಧ್ಯಮಗಳ ಕಾರ್ಯವೈಖರಿಯನ್ನು ಟೀಕೆ ಟಿಪ್ಪಣಿ ಸಮೇತ ಪ್ರಸ್ತುತಪಡಿಸಬೇಕು. ಅವರ ಟಿಪ್ಪಣಿ ಅನುಸರಿಸಿ ಉಪ ನಿರ್ದೇಶಕರ ಹಂತದ ಮೂವರು ಅಧಿಕಾರಿಗಳು ವಾರ್ತಾ ಸಚಿವರಿಗೆ ವರದಿ ನೀಡುವರು. ಸಚಿವರು ಇದನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಗಮನಕ್ಕೆ ತರುವರು. ನಂತರ ಪ್ರಧಾನಿ ಕಾರ್ಯಾಲಯದಿಂದ ಸಂಬಂಧಪಟ್ಟ ಚಾನೆಲ್/ ಪತ್ರಿಕೆ ಸಂಪಾದಕರಿಗೆ ಅಗತ್ಯ ಹುಕುಂ ರವಾನೆಯಾಗುವುದು: ಪ್ರಸಾರದಲ್ಲಿ ಏನೇನು ಮಾರ್ಪಾಡು ಮಾಡಬೇಕು, ಏನು ತೋರಿಸಬೇಕು, ತೋರಿಸಬಾರದು ಇತ್ಯಾದಿ. ಮತ್ತೂ ಮುಂದಕ್ಕೆ ಸಂಪಾದಕರನ್ನು ದಾಟಿ ನೇರ ಮಾಲಕರಿಗೇ ನಿರ್ದೇಶನ. ಇದು ಆ ಸಮಿತಿಯ ಕಾರ್ಯಸ್ವರೂಪ.

ಈಗ ಯಾವುದಾದರೂ ಚಾನೆಲ್ ಸರಕಾರದ ಹುಕುಂ ಪಾಲಿಸಲಿಲ್ಲ ಅಂದುಕೊಳ್ಳಿ, ಆಗ ಮೊದಲ ಹಂತದಲ್ಲಿ ಬಿಜೆಪಿ, ಆರೆಸ್ಸೆಸ್ ಹೀಗೆ ಇಡೀ ಸಂಘ ಪರಿವಾರದ ವಕ್ತಾರರು ಸಾರಾಸಗಟಾಗಿ ಆ ಚಾನೆಲ್ ಬಹಿಷ್ಕರಿಸುವರು. ಅಂದರೆ ವಾಹಿನಿಯ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವುದು, ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಹೋಗದಿರುವುದು... ಹೀಗೆ. ಕರ್ನಾಟಕದಲ್ಲಿ ಸುದ್ದಿ ಟಿವಿಯನ್ನೇ ಸ್ಥಳೀಯ ಬಿಜೆಪಿ ನಾಯಕರು ತಿಂಗಳುಗಟ್ಟಳೆ ಬಹಿಷ್ಕರಿಸಿದ ಉದಾಹರಣೆ ಕಣ್ಣ ಮುಂದೆಯೇ ಇದೆ.

ಅಷ್ಟಾಯಿತು. ಆಗಲೂ ಚಾನೆಲ್ ಬಗ್ಗಲಿಲ್ಲ.ಮುಂದೇನು?

ಮುಂದೇನು ಎಂಬುದಕ್ಕೆ ಎಬಿಪಿ ಚಾನೆಲ್ ಅನುಭವವೇ ಸಮರ್ಥ ಉದಾಹರಣೆ.

ಆಗಲೇ ಉಲ್ಲೇಖಿಸಿದ ಎಬಿಪಿ ಚಾನೆಲ್ಲಿನ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದ ರೂವಾರಿ ಪುಣ್ಯ ಪ್ರಸೂನ್ ಬಾಜಪೈ ಎಂಬ ಹಿರಿಯ ಪತ್ರಕರ್ತ. ಈಗ ಚಾನೆಲ್‌ನ ಮಾಲಕರೂ, ಪ್ರಧಾನ ಸಂಪಾದಕರೂ ಆದ ಅವೀಕ್ ಸರ್ಕಾರ್, ಪುಣ್ಯ ಪ್ರಸೂನ್ ಬಾಜಪೈಯವರನ್ನು ಕರೆದು ಕೇಳಿದರು:

ಪ್ರಧಾನಿ ಮೋದಿ ಅವರ ಹೆಸರು ಉಲ್ಲೇಖಿಸದೆ ನೀವು ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲವೇ?

ಅದು ಹೇಗೆ? ಸರಕಾರದ ಪ್ರತಿಯೊಂದು ಯೋಜನೆ ಯನ್ನೂ ಸ್ವತಃ ಪ್ರಧಾನಿಯೇ ಪ್ರಕಟಿಸುತ್ತಾರೆ. ಪ್ರತಿ ಇಲಾಖೆಯ ಕೆಲಸದಲ್ಲಿ ಮಧ್ಯಪ್ರವೇಶಿಸುತ್ತಾರೆ. ಇನ್ನು ಯಾವುದೇ ಯೋಜನೆ ಅಥವಾ ನೀತಿಯ ಬಗ್ಗೆ ಮಾತಾಡಿದಾಗಲೆಲ್ಲ ಪ್ರತಿಯೊಬ್ಬ ಮಂತ್ರಿಯೂ ಪ್ರಧಾನಿ ಯವರ ಹೆಸರನ್ನೇ ಹೇಳುತ್ತಾರೆ. ಅಂದ ಮೇಲೆ ಪ್ರಧಾನಿ ಮೋದಿಯವರ ಹೆಸರೆತ್ತದಿರಲು ಹೇಗೆ ಸಾಧ್ಯ?

ಅಧಿಕಾರಕ್ಕೇರಿದ ಈ ನಾಲ್ಕು ವರ್ಷಗಳಲ್ಲಿ ಈ ಸರಕಾರ ಒಟ್ಟು 106 ಯೋಜನೆಗಳನ್ನು ಪ್ರಕಟಿಸಿದೆ. ಮತ್ತು ಈ 106 ಯೋಜನೆಗಳ ಪ್ರಕಟನೆ ಮಾಡಿದ್ದು ಖುದ್ದು ಮೋದೀಜಿ. ಯೋಜನೆಗಳ ಬಗ್ಗೆ ಪ್ರಚಾರ ಮಾಡುವವರು ಆಯಾ ಇಲಾಖೆಗಳ ಮಂತ್ರಿ- ಅಧಿಕಾರಿಗಳೇ ಆದರೂ, ಆ ಪ್ರಚಾರದ ಹೃದಯವೇ ಮೋದೀಜಿ. ಅಂದರೆ ಯೋಜನೆಗಳ ಪ್ರಚಾರ ಎನ್ನುವುದಕ್ಕಿಂತ ಹೆಚ್ಚಾಗಿ ಮೋದಿ ಎಂಬ ದಂಡನಾಯಕನ ಪರ ಪ್ರಚಾರವದು. ಹಾಗಾಗಿ ಸರಕಾರ ಎಂಬ ಶಬ್ದ ಉಚ್ಚರಿಸಿದ ಕೂಡಲೇ ಅದೇ ಸೊಲ್ಲಿನಲ್ಲಿ ಮೋದಿ ಹೆಸರೂ ಹೊರಡಲೇಬೇಕು. ಇನ್ನು ಮೋದಿ ಎಂದು ಉಚ್ಚರಿಸದೆ, ಸರಕಾರದ ಸುದ್ದಿ ಹೇಳುವುದು ಹೇಗೆ? ಸ್ವತಃ ಚಾನೆಲ್‌ನ ವರದಿಗಾರರು ಹಲ್ಲು ಕಚ್ಚಿಕೊಂಡು ಸುಮ್ಮನಿದ್ದರು ಎಂದೇ ಭಾವಿಸೋಣ. ಆದರೆ ಮೋದಿ ಯೋಜನೆಗಳ ಸೋಲು ಗೆಲುವಿನ ಫಲಾನುಭವಿಗಳಂತೂ, ರೈತನೋ, ಬಸುರಿಯೋ, ನಿರುದ್ಯೋಗಿಯೋ, ವ್ಯಾಪಾರಿಯೋ, ಯಾರೇ ಆದರೂ ಮೋದಿ ಹೆಸರು ತೆಗೆಯದೆ ಮಾತನಾಡಿಯಾರೇ?... ಇದೇ ಧಾಟಿಯಲ್ಲಿ ಸುದೀರ್ಘ ಚರ್ಚೆ ನಡೆದು ಕಡೆಗೆ, ಎಷ್ಟೇ ಕಷ್ಟವಾದರೂ, ಮೋದಿ ಹೆಸರು ಉಲ್ಲೇಖಿಸದೆಯೇ ಮಾಸ್ಟರ್ ಸ್ಟ್ರೋಕ್ ನಿರ್ವಹಿಸಬೇಕೆಂದು ತೀರ್ಮಾನವಾಯಿತು. ಆಯಿತಾ? ಅದು ಇಲ್ಲಿಗೂ ನಿಲ್ಲಲಿಲ್ಲ. ಇನ್ನು ನಾಲ್ಕೇ ದಿನಗಳಲ್ಲಿ ಮೋದಿಯವರ ಹೆಸರಿರಲಿ, ಅವರ ಫೋಟೊ/ ವೀಡಿಯೊ ಕೂಡ ತೋರಿಸುವಂತಿಲ್ಲ ಎಂಬ ನಿರ್ದೇಶನ ಬಂತು!

ಅದಂತೂ ಶತಾಯ ಗತಾಯ ಸಾಧ್ಯವೇ ಇಲ್ಲ! ಹೇಳಿ ಕೇಳಿ ಇದು ಪತ್ರಿಕೆಯೂ ಅಲ್ಲ, ದೃಶ್ಯ ವಾಹಿನಿ. ಸರಕಾರದ ಯಾವ ಸುದ್ದಿ ಬಿತ್ತರವಾದರೂ ಮೋದಿಯವರ ಫೋಟೊ/ ವೀಡಿಯೊ ಬರಲೇಬೇಕಲ್ಲ?... ಒಂದೇ ಸಾಧ್ಯತೆಯೆಂದರೆ, ಸರಕಾರದ ಸುದ್ದಿಯನ್ನೇ ತೋರಿಸಬಾರದು; ಆಗ ಮಾತ್ರ ಮೋದಿಯವರ ಪ್ರಸ್ತಾಪವಿಲ್ಲದೆಯೇ ಕಾರ್ಯಕ್ರಮ ಮುಗಿಸಬಹುದು. ಅಂದರೆ ಆಳುವವರ ಉದ್ದೇಶ ಇದೇನಾ? ಬಂದರೆ ಭಜನೆ ಬರಲಿ, ಇಲ್ಲವಾದರೆ ಏನೂ ಬೇಡ?.... ಹೇಗಿದ್ದರೂ ದೇಶದ ಬಹುತೇಕ ಮಾಧ್ಯಮಗಳು ಮೋದಿ ಭಜನಾ ಮಂಡಳಿಗಳಾಗಿಯೇ ಮಾರ್ಪಾಡಾಗಿವೆ. ಹೀಗಿರುವಾಗ ಎಬಿಪಿಯಂಥ ಚಾನೆಲ್ ಸರಕಾರದ, ಅಂದರೆ ಮೋದಿ ವಿರುದ್ಧ ತಿರುಗಿ ಬೀಳುವುದೇ? ತಿರುಗಿ ಬೀಳುವುದು ಹೋಗಲಿ, ಮೋದಿ ಸುಳ್ಳುಗಳನ್ನು ಬಯಲಿಗೆಳೆಯುವ ಕಾರ್ಯಕ್ರಮಗಳಿಗೇ ಹೆಚ್ಚು ಹೆಚ್ಚು ಟಿಆರ್‌ಪಿ ಬರತೊಡಗಿದರೆ?... ಉದಾಹರಣೆಗೆ ಜಾರ್ಖಂಡ್‌ನಲ್ಲಿ ರೈತರಿಗೆ ಅದಾನಿ ಸಂಸ್ಥೆ ಧಮಕಿ ಹಾಕಿದ ವರದಿಯಂತೂ, ಟಿಆರ್‌ಪಿ ಲೆಕ್ಕದಲ್ಲಿ ಒಮ್ಮಿಂದೊಮ್ಮೆಲೇ ಮೇಲೇರಿತ್ತು. ಅಂದರೆ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮಕ್ಕೆ ಸಾಧಾರಣವಾಗಿ 12ರಷ್ಟಿದ್ದ ಟಿಆರ್‌ಪಿ, ಆ ವರದಿ ಬಿತ್ತರವಾದಾಗ 17ಕ್ಕೇರಿತ್ತು! ಇದರರ್ಥ ಸ್ಪಷ್ಟವಾಗಿತ್ತು. ಸಂದೇಶ ಅಪಾಯಕಾರಿಯಾಗಿತ್ತು. ಮೊದಲೆಲ್ಲ ಮೋದಿ ಭಜನೆಗೆ ಸಿಕ್ಕುತ್ತಿದ್ದ ಟಿಆರ್‌ಪಿ, ಈಗ ಮೋದಿ ಭಂಜನೆಗೆ ಸಿಗುತ್ತಿದೆ ಎಂದಾಯಿತು. ಜೊತೆಗೆ ಟಿಆರ್‌ಪಿಯೇ ಜಾಹೀರಾತು ವರಮಾನದ ಅಡಿಗಲ್ಲಾದ್ದರಿಂದ, ಮೋದಿಯವರನ್ನು ಬಯಲು ಮಾಡಿದವರಿಗೆ ವೀಕ್ಷಕರೂ ಹೆಚ್ಚು, ಆದಾಯವೂ ಹೆಚ್ಚು ಎಂದಂತಾಯಿತು. ಇದೇ ಪ್ರವೃತ್ತಿ ಮುಂದಿನ ಚುನಾವಣೆಗಳಲ್ಲೂ ಸಾರ್ವತ್ರಿಕವಾದರೆ ಗತಿಯೇನು?!... ಸರಕಾರ ಒಮ್ಮಿಂದೊಮ್ಮೆಲೇ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಯಿತು.

ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸರಕಾರದ ಮುಖಂಡರು ಪತ್ರಕರ್ತರ ಮುಂದೆ ಎಬಿಪಿ ವಾಹಿನಿಯನ್ನು ಸುಮ್ಮನೆ ಬಿಡುವುದಿಲ್ಲ, ಪಾಠ ಕಲಿಸುತ್ತೇವೆ ಎಂದು ಗುಡುಗಿದರು. ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ರಾಂಚಿ, ಜೈಪುರ ಮತ್ತು ಪಾಟ್ನಾ ಐಟಿ ವಿಭಾಗದವರಿಗೆ ಪುಣ್ಯ ಪ್ರಸೂನ್‌ನನ್ನು ಸುಮ್ಮನೆ ಬಿಡಬೇಡಿ ಎಂಬ ಆದೇಶ ಕೊಟ್ಟರು. ಅಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸೂನ್ ವಿರುದ್ಧ ಸತತ ದಾಳಿಗೆ ನೇರ ಆದೇಶ.

ವಿರೋಧಿ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಬಯಸುವ ಕೇಂದ್ರದ ಹುನ್ನಾರದ ವಿರುದ್ಧ ದನಿಯೆತ್ತಿದಾಗ, ಸರಕಾರದ ವಕ್ತಾರರು ಮಾಸ್ಟರ್ ಸ್ಟ್ರೋಕ್‌ಗೆ ಟಿಆರ್‌ಪಿ ಇಲ್ಲವಾದ್ದರಿಂದ ವಾಹಿನಿಯವರೇ ಆ ಕಾರ್ಯಕ್ರಮ ನಿಲ್ಲಿಸುವ ಯೋಚನೆಯಲ್ಲಿದ್ದಾರೆ ಎಂಬ ಹಸಿ ಸುಳ್ಳು ಹೇಳಿದರು. ಎಬಿಪಿ ವಾಹಿನಿಯ ವರದಿಗಳು ಉದ್ದೇಶಪೂರ್ವಕ ಸುಳ್ಳಿನ ಕಂತೆ ಎಂದು ಪದೇ ಪದೇ ಸಾರುತ್ತ ಬಂದರು. ವಾರ್ತಾ ಸಚಿವರೂ ಸೇರಿದಂತೆ ಮೂವರು ಮಂತ್ರಿಗಳು ವಾಹಿನಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದರು.... ಇಷ್ಟೆಲ್ಲ ನಡೆಯುವಾಗ, ವಸ್ತುಸ್ಥಿತಿ ಅಧ್ಯಯನಕ್ಕೆಂದು ಚಾನೆಲ್ ಆ ಹಳ್ಳಿಗೆ ಮತ್ತೊಮ್ಮೆ ತನ್ನ ವರದಿಗಾರ ಗ್ಯಾನೇಂದ್ರ ತಿವಾರಿಯನ್ನು ಕಳಿಸಿದರೆ, ಅಲ್ಲಿನ ಸನ್ನಿವೇಶವೇ ಬದಲಾಗಿಹೋಗಿತ್ತು. ಹಳ್ಳಿಯ ತುಂಬ ಪೊಲೀಸರು ಮತ್ತಿತರ ಅಧಿಕಾರಿಗಳು ತುಂಬಿಹೋಗಿದ್ದರು. ಹೇಗಾದರೂ ಸರಿ, ರೈತ ಮಹಿಳೆ ಚಂದ್ರಮಣಿ ಕೌಶಿಕ್ ಎಬಿಪಿ ವರದಿಗಾರನ ಕೈಗೆ ಸಿಗದಂತೆ ನೋಡಿಕೊಳ್ಳುವುದೇ ಅವರ ಧ್ಯೇಯ. ಆದರೆ ಆ ಅಧಿಕಾರಿಗಳೆಲ್ಲ ಇಡೀ ದಿನ ಕಾವಲು ಕಾಯದೆ ಹಗಲು ಹೊತ್ತಿನಲ್ಲೇ ಜಾಗ ಖಾಲಿ ಮಾಡಿಕೊಂಡು ಹೋಗಿಬಿಟ್ಟಿದ್ದರಿಂದ ಆ ಮಹಿಳೆಯ ಜೊತೆಗೆ ಸ್ತ್ರೀಶಕ್ತಿ ಸಂಘಟನೆಯ 12 ಮಂದಿ ಸಹಚರರೂ ವರದಿಗಾರನ ಕೈಗೆ ಸಿಕ್ಕಿಬಿಟ್ಟರು, ತಮ್ಮ ನೈಜ ಬವಣೆಯನ್ನೂ ಬಿಚ್ಚಿಟ್ಟರು. ವರಮಾನ ದುಪ್ಪಟ್ಟಾಗುವುದಿರಲಿ, ಬರಬರುತ್ತ ಹೇಗೆ ತಮ್ಮ ಸ್ಥಿತಿ ಇನ್ನಷ್ಟು ಮತ್ತಷ್ಟು ದುರ್ಭರವಾಗುತ್ತ ಹೋಗಿದೆ ಎಂಬುದನ್ನು ವಿವರವಾಗಿ ಬಿಡಿಸಿಟ್ಟರು.

ಈ ನೂತನ ವರದಿ ಜುಲೈ 9ರಂದು ಪ್ರಸಾರವಾದಾಗ ಸರಕಾರದ ಕಡೆಯಿಂದ ಶುದ್ಧಾಂಗ ಮೌನ! ಆಗಲೇ ಬಾಜಪೈಯವರಿಗೆ ಏನೋ ಗಂಭೀರವಾದದ್ದು ಕಾದಿದೆ ಎಂಬ ಅನುಮಾನ ಹೊಗೆಯಾಡತೊಡಗಿತು. ಅದಕ್ಕೆ ತಕ್ಕಂತೆ ಮಾಧ್ಯಮ ಕಾವಲು ಸಮಿತಿಯ ಸದಸ್ಯರೇ ಒಬ್ಬರು ಇವರಿಗೆ ಫೋನ್ ಮಾಡಿ ಏನು ಬೇಕಾದರೂ ಆಗಬಹುದು, ಜಾಗ್ರತೆಯಾಗಿರಿ ಅನ್ನುವ ಎಚ್ಚರಿಕೆ ಮಾತು ಹೇಳಿದರು.

ಆಗ ಚಾನೆಲ್‌ಗೆ ಮೊದಲು ಎದುರಾದ ತೊಂದರೆ, ತಾಂತ್ರಿಕ ಸಮಸ್ಯೆ ಸ್ವರೂಪದ್ದು. ಮಾರನೇ ದಿನವೇ ಮಾಸ್ಟರ್ ಸ್ಟ್ರೋಕ್ ಪ್ರಸಾರದ ಅವಧಿಯಲ್ಲಿ ಉಪಗ್ರಹ ಸಂಪರ್ಕ ಕಡಿದು ಕಾಡಿಸತೊಡಗಿತು. ಒಂದು ಗಂಟೆ ಅವಧಿಯುದ್ದಕ್ಕೂ ಒಂದೆರಡು ಬಾರಿಯಲ್ಲ, ಮೂವತ್ತರಿಂದ ನಲವತ್ತು ಬಾರಿ ಅಡಚಣೆ ಎದುರಾಯಿತು. ಮತ್ತು ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಆ ತೊಂದರೆಯೂ ಮಾಯವಾಯಿತು! ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸಲು ಚಾನೆಲ್ ತಂತ್ರಜ್ಞರು ಎಷ್ಟು ಯತ್ನಿಸಿದರೂ ಉಪಯೋಗವಾಗಲಿಲ್ಲ. ಕಡೆಗೆ ಚಾನೆಲ್ ಮುಖ್ಯಸ್ಥರು, ಟ್ವಿಟರ್ ಮುಖಾಂತರ ವೀಕ್ಷಕರಿಗೆ ಈ ಉಪಗ್ರಹ ತೊಂದರೆಯ ಬಗ್ಗೆ ವಿವರಣೆ ಕೊಟ್ಟರು. ಮುಂದಕ್ಕೆ ಪ್ರತಿ ದಿನ ಇದೇ ತೊಂದರೆ ಮರುಕಳಿಸತೊಡಗಿದಂತೆ ಮೂರನೇ ದಿನ ಈ ಸಮಸ್ಯೆಯನ್ನು ನೇರ ವೀಕ್ಷಕರ ಗಮನಕ್ಕೇ ತರಬೇಕೆಂದು ತೀರ್ಮಾನವಾಯಿತು. ಅದರಂತೆ ಜುಲೈ 19ರ ಬೆಳಗ್ಗೆಯಿಂದಲೇ ಚಾನೆಲ್ ಸಂದೇಶ ಬಿತ್ತರಿಸತೊಡಗಿತು: ಕಳೆದ ಕೆಲವು ದಿನಗಳಿಂದ ನಮ್ಮ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದ ಸಮಯದಲ್ಲಿ ಉಪಗ್ರಹ ಪ್ರಸಾರದಲ್ಲಿ ಪದೇ ಪದೇ ತಾಂತ್ರಿಕ ಅಡಚಣೆ ಎದುರಾಗುತ್ತಿದೆ. ನಾವು ಶೀಘ್ರದಲ್ಲೇ ಆ ಸಮಸ್ಯೆ ಸರಿ ಮಾಡಲಿದ್ದೇವೆ. ಅದುವರೆಗೂ ವೀಕ್ಷಕರು ನಮ್ಮೆಂದಿಗಿರಬೇಕು... ಆದರೆ ಎರಡೇ ಗಂಟೆಗಳಲ್ಲಿ ಈ ಸಂದೇಶದ ಪ್ರಸಾರ ನಿಲ್ಲಿಸಬೇಕೆಂಬ ಆದೇಶ ಬಂತು! ಹಾಗೇ ನಿಂತೂ ಹೋಯಿತು. ಇದಕ್ಕಿಂತ ಬಲವಾದ ಹೊಡೆತವೆಂದರೆ, ಪ್ರಮುಖ ಜಾಹೀರಾತುದಾರರು ಒಬ್ಬೊಬ್ಬರಾಗಿ ವಾಹಿನಿಯಿಂದ ಕಾಲ್ದೆಗೆಯತೊಡಗಿದರು!...

ಈ ಕಿರುಕುಳ ಇನ್ನೂ ಯಾವ್ಯಾವ ಸ್ವರೂಪ ಪಡೆದುಕೊಳ್ಳುವುದಿತ್ತೋ, ಅಷ್ಟರಲ್ಲಿ ಚಾನೆಲ್ ಮುಖ್ಯಸ್ಥರು ಬಾಜಪೈ ಮುಂದೆ ಕೈ ಮುಗಿದು ನಿಂತು ಈಗೇನು ಮಾಡುವುದು ಹೇಳಿ? ಎಂದು ಕೇಳಿದರು!

ಉಳಿದ ದಾರಿಯೇನು? ಇಲ್ಲವೇ ರಜೆ ಮೇಲೆ ಹೋಗಬೇಕು, ಅಥವಾ ರಾಜೀನಾಮೆ ಕೊಡಬೇಕು. ಪುಣ್ಯ ಪ್ರಸೂನ್ ಬಾಜಪೈ ರಾಜೀನಾಮೆಯ ಹಾದಿ ಆರಿಸಿಕೊಂಡರು. ಆ ಗಳಿಗೆಯೇ ನಡೆಯಿತು ನೋಡಿ ಪವಾಡ! ಉಪಗ್ರಹ ಪ್ರಸಾರದ ತಾಂತ್ರಿಕ ಸಮಸ್ಯೆ ಆ ಕ್ಷಣವೇ ಮಾಯವಾಯಿತು. ಮಾಯವಾದ ಜಾಹೀರಾತುದಾರರು ಆ ದಿನದಿಂದಲೇ ಮರು ಪ್ರತ್ಯಕ್ಷವಾಗತೊಡಗಿದರು. ಅದರಲ್ಲಿ ಮೊದಲು ವಾಪಸು ಬಂದಿದ್ದು ಬಾಬಾ ರಾಮದೇವ್‌ರ ಪತಂಜಲಿ!...

ಮೋದಿ ಹಾಗೂ ಮಾಧ್ಯಮಗಳ ನಂಟಿನಲ್ಲಿ ಈ ಆಯಾಮ ಬಹು ಮುಖ್ಯವಾದದ್ದು: ಮೊದಲನೆಯದು ದಾಸ್ಯ ಮಾಧ್ಯಮವಾದರೆ, ಎರಡನೆಯದು- ತಮ್ಮ ವಿರುದ್ಧ ಬಾಲ ಬಿಚ್ಚುವ ಮಾಧ್ಯಮಗಳ ಕತ್ತು ಹಿಸುಕುವುದು.

ಇದಲ್ಲದೆ ಈ ವಿದ್ಯಮಾನಕ್ಕೆ ಮತ್ತೂ ಒಂದು ಆಯಾಮವಿದೆ: ಇಂದು ದೇಶದಲ್ಲಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಇಡೀ ಮಾಧ್ಯಮಲೋಕವನ್ನು ಹೇಗೆ ಆವರಿಸಿಕೊಂಡಿದ್ದಾರೆಂದರೆ... ನಾಡಿನ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಈಚೆಗೆ ಒಂದು ಮಾತು ಹೇಳಿದ್ದರು- ಇನ್ನು ಐದು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪತ್ರಕರ್ತನೂ ಸಂಬಳ ಪಡೆಯುವುದು ಅಂಬಾನಿಯಿಂದ...! ಅಂದರೆ ದೇಶದ ಪ್ರತಿ ರಾಜ್ಯದಲ್ಲೂ, ಪ್ರತಿ ಭಾಷೆಯಲ್ಲೂ ಅಂಬಾನಿ ಆಧಿಪತ್ಯದ ಪತ್ರಿಕೆ/ ಚಾನೆಲ್/ರೇಡಿಯೋಗಳಿವೆ. ಈಗಂತೂ ಅಂಬಾನಿ ಜೋಬಿನಲ್ಲಿ ಮೋದಿಯಿದ್ದಾರೋ, ಮೋದಿ ಜೋಬಿನಲ್ಲಿ ಅಂಬಾನಿಯಿದ್ದಾರೋ ಎಂದು ದೇಶವೇ ಸೋಜಿಗಪಡುತ್ತಿರುವಾಗ.... ಭಾರತೀಯ ಮಾಧ್ಯಮಗಳ ಪಾಲಿಗೆ ಅಂಬಾನಿ ಎಂದರೂ ಒಂದೇ, ಮೋದಿ ಎಂದರೂ ಒಂದೇ. ಇಂದು ಅಂಬಾನಿಯ ಒಂದು ಉಸಿರು, ಮಾಧ್ಯಮಗಳ ಪಾಲಿನ ಶಾಸನ. ಅಂಬಾನಿ ಬೆರಳೆತ್ತಿದರೆ, ಮೋದಿ ಕ್ಷಣಾರ್ಧದಲ್ಲಿ ದೇವರಾಗುತ್ತಾರೆ; ಮಿಕ್ಕವರೆಲ್ಲ ದೇಶದ್ರೋಹಿ ದೆವ್ವಗಳಾಗುತ್ತಾರೆ.... ಒಂದೇ ಮಾತಿನಲ್ಲಿ ಹೇಳುವುದಾದರೆ, ಮಾಧ್ಯಮಗಳ ಆತ್ಮಸಾಕ್ಷಿ ನೇಣು ಹಾಕಿಕೊಳ್ಳುತ್ತದೆ.... ಮೋದಿ ಹಾಗೂ ಮಾಧ್ಯಮಗಳ ನಂಟಿನ ಮತ್ತೊಂದು ಆಯಾಮವಿದು- ಮಾಧ್ಯಮಗಳ ಮೇಲೆ ನೇರ ಹಾಗೂ ಪರಿಪೂರ್ಣ ಹತೋಟಿ.

ಒಟ್ಟಾರೆ ಭಾರತೀಯ ಮಾಧ್ಯಮಗಳು ಮೋದೀಜಿಯವರ ಸೇವೆಯಲ್ಲಿ ತೊಡಗಿರುವ ಪರಿಯ ಮೂರು ವೈಖರಿಗಳನ್ನು ಕಾಣುತ್ತಿದ್ದೇವೆ. ಮತ್ತು ಅದರ ಪರಿಣಾಮಗಳೂ ಸ್ವಯಂಸ್ಪಷ್ಟವಾಗಿವೆ:

'ನ ಖಾವೂಂಗಾ, ನ ಖಾನೇ ದೂಂಗಾ' ಎಂದು ಹ್ಞೂಂಕರಿಸಿ ಕುರ್ಚಿ ಹಿಡಿದ ಮೋದಿ ಸರಕಾರ ಇದೀಗ ರಫೇಲ್ ಯುದ್ಧ ವಿಮಾನಗಳ 40 ಸಾವಿರ ಕೋಟಿ ಹಗರಣದಲ್ಲಿ ಸಿಲುಕಿಕೊಂಡಿದ್ದರೂ, ಈ ಒಪ್ಪಂದದಲ್ಲಿ ಸರಕಾರಿ ಎಚ್‌ಎಎಲ್ ಸಂಸ್ಥೆಯನ್ನು ಬದಿಗೊತ್ತಿ, ಅಂಬಾನಿಯವರ ರಿಲಯನ್ಸ್ ಸಂಸ್ಥೆಯನ್ನು ಪಾಲುದಾರನಾಗಿ ಮಾಡಿಕೊಳ್ಳುವಂತೆ ಭಾರತ ಸರಕಾರವೇ ಪಟ್ಟು ಹಿಡಿದಿತ್ತೆಂದು ಫ್ರೆಂಚ್ ಮಾಜಿ ಅಧ್ಯಕ್ಷರೇ ಹೊರಗೆಡಹಿದರೂ.... ಮಾಧ್ಯಮಗಳು ಮೌನ ವಹಿಸಿವೆ, ಇಲ್ಲವೇ ಮೋದಿ ಸಮರ್ಥನೆಯಲ್ಲಿ ತೊಡಗಿವೆ.

ಕೌಶಲ ಅಭಿವೃದ್ಧಿ ಯೋಜನೆಯಡಿ 2022ರ ವೇಳೆಗೆ 40 ಕೋಟಿ ಯುವಜನರನ್ನು ತರಬೇತುಗೊಳಿಸಲಾಗುವುದು ಎಂದು ಘೋಷಿಸಿದ್ದರೂ, 2018ರವರೆಗೆ ಆ ಸಂಖ್ಯೆ ಎರಡು ಕೋಟಿಯನ್ನೂ ಮುಟ್ಟಿಲ್ಲ. ಮಾಧ್ಯಮಗಳು ಎಂದಿನಂತೆ ಮೌನ.

ಗೋರಕ್ಷಣೆ ಹೆಸರಿನಲ್ಲಿ ಭಯೋತ್ಪಾದನೆ, ಕೊಲೆಗಳು, ಉನಾ ದಲಿತರನ್ನು ಕಾರಿಗೆ ಕಟ್ಟಿ ಕಬ್ಬಿಣದ ಸರಳುಗಳಿಂದ ಥಳಿಸಿದ್ದು, ಗುರುತರವಾದ ಇಂಥ ಅಸಂಖ್ಯ ವಿಷಯಗಳಲ್ಲಿ ಮೋದಿ ಬಾಯಿಗೆ ಬಿರಡೆ ಜಡಿದುಕೊಂಡಿದ್ದಾರೆ; ತಕ್ಕಂತೆ ಮಾಧ್ಯಮಗಳೂ ಮೌನವಾಗಿವೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರುತ್ತಿವೆ, ಮಾಧ್ಯಮಗಳು ಬಾಯಿ ಹೊಲಿದುಕೊಂಡಿವೆ.

ಅಮಿತ್ ಶಾ ಆದಿಯಾಗಿ ಸಂಘ ಪರಿವಾರದವರ ವಿರುದ್ಧದ ಗಂಭೀರ ಕ್ರಿಮಿನಲ್ ಮೊಕದ್ದಮೆಗಳೆಲ್ಲ ಒಂದೊಂದಾಗಿ ಖುಲಾಸೆಯಾಗುತ್ತಿವೆ, ನ್ಯಾಯಾಧೀಶರೇ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿದ್ದಾರೆ, ಮಾಧ್ಯಮಗಳು ಕಣ್ಣು ಮುಚ್ಚಿಕೊಂಡಿವೆ.

ಮೋದಿಯವರ ಪ್ರತಿ ವಿದೇಶ ಪ್ರವಾಸವೂ ಅಂಬಾನಿ ಅದಾನಿಗಳ ವಾಣಿಜ್ಯ ವಹಿವಾಟು ವರ್ಧನೆಗಾಗಿ ಮಾತ್ರ ನಡೆಸಿದ ಕಸರತ್ತೆಂಬುದು ಹೊಡೆದು ಕಾಣುತ್ತಿದ್ದರೂ, ಮಾಧ್ಯಮಗಳ ಕಣ್ಣಿಗೆ ರಾವು ಬಡಿದಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಕಾಶ್ಮೀರದ ಕಥುವಾದಲ್ಲಿ ಪುಟ್ಟ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದರೂ, ಅಂಥ ಪ್ರಕರಣಗಳು ಒಂದಾದ ಮೇಲೊಂದು ಬೆಳಕಿಗೆ ಬಂದರೂ, ಮಾಧ್ಯಮಗಳು ಬಿಜೆಪಿಯನ್ನು ಕೊಂಡಾಡುವುದರಲ್ಲಿ ನಿರತವಾಗಿವೆ. ದೇಶದ ಧಮನಿಗಳಲ್ಲಿ ಕ್ರಮೇಣ ಕೋಮುದ್ವೇಷದ ನಂಜು ಹರಡುತ್ತಿದೆ. ಆದರೆ ಮಾಧ್ಯಮಗಳು ಅದನ್ನೇ ದೇಶೋದ್ಧಾರವೆಂದು ಬಿಂಬಿಸುತ್ತಿವೆ.

ಕರ್ನಾಟಕದಲ್ಲೇ ನರೇಂದ್ರ ಮೋದಿಯನ್ನು ಇನ್ನೊಬ್ಬ ನರೇಂದ್ರನ (ಸ್ವಾಮಿ ವಿವೇಕಾನಂದರ) ಅವತಾರವೆಂದು ಕರೆಯುವ ಹಾಸ್ಯಾಸ್ಪದ ಉದ್ದೇಶದಿಂದಲೇ ಒಂದು ಚಾನೆಲ್ ಕಾರ್ಯಕ್ರಮ ಮಾಡಿತು! ಇನ್ನು ಬಹುತೇಕ ಚಾನೆಲ್‌ಗಳು ಈವರೆಗೆ ಸಾವಿರ ಬಾರಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರದ ಚರಮಗೀತೆ ಬರೆದು ಮುಗಿಸಿವೆ! ಬಿಜೆಪಿಯ ಬೆನ್ನು ಕಾಯುವ ವ್ರತ ಹಿಡಿದ ಇಂಥ ಮಾಧ್ಯಮಗಳಿಂದ ಯಾವ ಬಗೆಯ ಸತ್ಯದರ್ಶನ ಸಾಧ್ಯ?

ಈಚೆಗೆ ಕೋಬ್ರಾ ಪೋಸ್ಟ್ ಪೋರ್ಟಲ್ ಒಂದು ಗುಪ್ತ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಿ ದೇಶಾದ್ಯಂತ ಮಾಧ್ಯಮ ಮುಖ್ಯಸ್ಥರ ಸುಪ್ತ ಒಲವು ನಿಲುವುಗಳನ್ನು ಶೋಧಿಸಿತ್ತು. ಆ ಸಂದರ್ಭದಲ್ಲಿ ನಮ್ಮ ಸುವರ್ಣ ನ್ಯೂಸ್ ಮುಖ್ಯಸ್ಥರನ್ನು ನೀವು ಹಿಂದುತ್ವ ಪ್ರಸಾರಕ್ಕೆ ಸಹಾಯ ಮಾಡಬಾರದೇಕೆ? ಎಂದು ಕೇಳಿದರೆ, ಅವರು ಈಗ ನಾವು ಮಾಡ್ತಿರೋದು ಅದೇ ಅಲ್ಲವೇ? ಎಂಬ ಮರುಪ್ರಶ್ನೆ ಹಾಕಿದ್ದರು...!

ಮೋದಿ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನೆಲ್ಲ ಗಾಳಿಗೆ ತೂರಿದ್ದಾರೆ, ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣದ ಒಂದು ಪೈಸೆಯನ್ನೂ ತರಲು ಅವರಿಂದಾಗಿಲ್ಲ, ಉದ್ಯೋಗಸೃಷ್ಟಿಯ ಭರವಸೆಯಲ್ಲಿ ಸೋತಿದ್ದಾರೆ, ನೋಟು ರದ್ದು- ಜಿಎಸ್‌ಟಿಗಳ ಮೂಲಕ ದೇಶದ ಅರ್ಥವ್ಯವಸ್ಥೆ ಪಾತಾಳಮುಖಿಯಾಗಿದೆ, ಒಟ್ಟು ಎಲ್ಲ ರಂಗಗಳಲ್ಲೂ ಮೋದಿ ವಿಫಲರಾಗಿದ್ದಾರೆ, ವಚನಭ್ರಷ್ಟರಾಗಿದ್ದಾರೆ, ರಫೇಲ್ ಹಗರಣದಲ್ಲಿ ಭ್ರಷ್ಟಾಚಾರದ ವಾಸನೆಯೂ ಬಡಿಯುತ್ತಿದೆ, ಸಾಲದೆಂದು ಅವರ ನೇತೃತ್ವದಲ್ಲಿ ನಮ್ಮ ಸಹಿಷ್ಣು ಸಮಾಜವೂ ನಾಶವಾಗುತ್ತಿದೆ.... ಇವೆಲ್ಲವೂ ಈ ಮಾಧ್ಯಮಗಳಿಗೆ ಗೊತ್ತಿಲ್ಲವೇ? ಗೊತ್ತಿದ್ದರೂ, ಗುಜರಾತಿನ ನರಮೇಧದ ನೆತ್ತರಿನಲ್ಲಿ ಮಿಂದ ಮೋದಿಯವರ ರಕ್ಷಣೆಗೆ ಯಾಕೆ ಹೀಗೆ ಕತ್ತಿ ಹಿರಿದು ನಿಂತಿದ್ದಾರೆ?

ಈ ಪ್ರಶ್ನೆಗೆ ಹುಡುಕುತ್ತ ಹೋದರೆ ಇನ್ನೂ ಎದೆ ನಡುಗಿಸುವ ಉತ್ತರ ಸಿಗುತ್ತದೆ.

ಅನುಮಾನವೇ ಬೇಡ, ಇವರೆಲ್ಲರಿಗೂ ಮೋದಿಯವರ ವೈಫಲ್ಯದ ಸಂಪೂರ್ಣ ಅರಿವಿದೆ. ಆದರೆ ಇವರ ದೃಷ್ಟಿಯಲ್ಲಿ ಅದು ಕ್ಷಮಾರ್ಹ. ಯಾಕೆಂದರೆ ಬಿಜೆಪಿ ಪಕ್ಷವೊಂದೇ, ಅದರಲ್ಲೂ ನರೇಂದ್ರ ಮೋದಿಯೊಬ್ಬರೇ ಈ ದೇಶದಲ್ಲಿ ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಟ್ಟವರು. ಗುಜರಾತ್ ಹತ್ಯಾಕಾಂಡದ ನಂತರ, ತಾವು ಈ ದೇಶದ ಎರಡನೇ ಪ್ರಜೆಗಳೆಂದು ಅರಿತುಕೊಂಡು ಮುಸ್ಲಿಮರು ಅದಕ್ಕೆ ತಕ್ಕಂತೆ ತಗ್ಗಿ ಬಗ್ಗಿ ನಡೆಯುವುದನ್ನು ಕಲಿತುಕೊಂಡರು- ಕೊನೇ ಪಕ್ಷ ಗುಜರಾತಿನಲ್ಲಿ. ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲಿಡಲು ಮೋದಿ ಒಬ್ಬರಿಂದಲೇ ಸಾಧ್ಯ- ಇದು ದೇಶದ ಬಹುಸಂಖ್ಯಾತರ, ಹಾಗೆಯೇ ಮಾಧ್ಯಮ ಪಂಡಿತರ ನಂಬಿಕೆ. ಇದರೊಂದಿಗೆ ಸಂಘ ಪರಿವಾರ ಆಗಾಗ ಮೀಸಲಾತಿ ವಿರೋಧಿ ಚರ್ಚೆಗಳನ್ನೂ ತೇಲಿ ಬಿಡುತ್ತ ಅತ್ತ ದಲಿತರನ್ನು ಹದ್ದುಬಸ್ತಿನಲ್ಲಿಡುವ ಹುನ್ನಾರವೂ ನಡೆಯುತ್ತಿದೆ.

 ಇಂದು ದೇಶದ ಬಹುಸಂಖ್ಯಾತರಿಗೆ ಬೇಕಾಗಿರುವುದು ಇದೇ. ಬಸ್‌ಸ್ಟಾಪ್‌ಗಳಲ್ಲಿ, ಕ್ಯಾಂಟೀನುಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನೀವು ಕಿವಿ ತೆರೆದಿಟ್ಟುಕೊಂಡಿದ್ದರೆ ಸಾಕು, ಮುಸ್ಲಿಂ ವಿರೋಧಿ ವಾದಗಳು ತಂತಾನೇ ಹೊರಬರಲು ನೆಪ ಕಾಯುತ್ತಿರುವುದು ಅರಿವಿಗೆ ಬರುತ್ತದೆ. ಇದಕ್ಕೆ ಪರಿಹಾರ ಹುಡುಕುವ ಬದಲು ಮಾಧ್ಯಮಗಳು ಬೆಂಕಿ ಸುರಿಯುವ ಕೆಲಸ ಮಾಡುತ್ತಿವೆ. ಈ ಬೆಳವಣಿಗೆಗೆ ಸಂಪೂರ್ಣ ಹೊಣೆ ಮೋದಿ ಮತ್ತು ಮೋದಿ ಮಾತ್ರ.

ಈ ಅಚ್ಛೇ ದಿನ್ ಭಜನೆಗೆ ಒಂದು ಶಿಸ್ತುಬದ್ಧ ಸ್ವರೂಪ ನೀಡಲು ಬಿಜೆಪಿಯಲ್ಲಿ, ಅತ್ಯುನ್ನತ ಮಟ್ಟದಲ್ಲಿ 200 ಜನರ ಮಾಧ್ಯಮ ನಿಯಂತ್ರಣಾ ಸಮಿತಿ ಅಥವಾ ಮಾಧ್ಯಮ ಕಾವಲು ಸಮಿತಿಯೊಂದು ಅಸ್ತಿತ್ವದಲ್ಲಿದೆ. ನೇರವಾಗಿ ವಾರ್ತಾ ಮಂತ್ರಿಗೆ ವರದಿ ಮಾಡುವ ಈ ಸಮಿತಿಯಲ್ಲಿ ಮೂರು ಹಂತದ ಕಾರ್ಯಕರ್ತರಿದ್ದಾರೆ. ಆ ಸಮಿತಿಯಲ್ಲಿ ಕೆಳ ಹಂತದ 150 ಮಂದಿಗೆ ಮಾಧ್ಯಮಗಳಲ್ಲಿ ಏನೇನು ಬರುತ್ತಿದೆ ನೋಡಿ ಗುರುತು ಮಾಡುವುದಷ್ಟೇ ಕೆಲಸ. ಇವರ ಮೇಲಿನ ಹಂತದ 25 ಮಂದಿ, ಈ ವರದಿಯನ್ನು ಸರಕಾರದ ಅವಗಾಹನೆಗೆ ತಕ್ಕಂತೆ ಪರಿಷ್ಕರಿಸುವರು.

ಚಾನೆಲ್‌ಗೆ ಮೊದಲು ಎದುರಾದ ತೊಂದರೆ, ತಾಂತ್ರಿಕ ಸಮಸ್ಯೆ ಸ್ವರೂಪದ್ದು. ಮಾರನೇ ದಿನವೇ ಮಾಸ್ಟರ್ ಸ್ಟ್ರೋಕ್ ಪ್ರಸಾರದ ಅವಧಿಯಲ್ಲಿ ಉಪಗ್ರಹ ಸಂಪರ್ಕ ಕಡಿದು ಕಾಡಿಸತೊಡಗಿತು. ಒಂದು ಗಂಟೆ ಅವಧಿಯುದ್ದಕ್ಕೂ ಒಂದೆರಡು ಬಾರಿಯಲ್ಲ, ಮೂವತ್ತರಿಂದ ನಲವತ್ತು ಬಾರಿ ಅಡಚಣೆ ಎದುರಾಯಿತು. ಮತ್ತು ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಆ ತೊಂದರೆಯೂ ಮಾಯವಾಯಿತು! ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸಲು ಚಾನೆಲ್ ತಂತ್ರಜ್ಞರು ಎಷ್ಟು ಯತ್ನಿಸಿದರೂ ಉಪಯೋಗವಾಗಲಿಲ್ಲ. ಕಡೆಗೆ ಚಾನೆಲ್ ಮುಖ್ಯಸ್ಥರು, ಟ್ವಿಟರ್ ಮುಖಾಂತರ ವೀಕ್ಷಕರಿಗೆ ಈ ಉಪಗ್ರಹ ತೊಂದರೆಯ ಬಗ್ಗೆ ವಿವರಣೆ ಕೊಟ್ಟರು

ಜಾರ್ಖಂಡ್‌ನಲ್ಲಿ ರೈತರಿಗೆ ಅದಾನಿ ಸಂಸ್ಥೆ ಧಮಕಿ ಹಾಕಿದ ವರದಿಯಂತೂ, ಟಿಆರ್‌ಪಿ ಲೆಕ್ಕದಲ್ಲಿ ಒಮ್ಮಿಂದೊಮ್ಮೆಲೇ ಮೇಲೇರಿತ್ತು. ಅಂದರೆ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮಕ್ಕೆ ಸಾಧಾರಣವಾಗಿ 12ರಷ್ಟಿದ್ದ ಟಿಆರ್‌ಪಿ, ಆ ವರದಿ ಬಿತ್ತರವಾದಾಗ 17ಕ್ಕೇರಿತ್ತು! ಇದರರ್ಥ ಸ್ಪಷ್ಟವಾಗಿತ್ತು. ಸಂದೇಶ ಅಪಾಯಕಾರಿಯಾಗಿತ್ತು. ಮೊದಲೆಲ್ಲ ಮೋದಿ ಭಜನೆಗೆ ಸಿಕ್ಕುತ್ತಿದ್ದ ಟಿಆರ್‌ಪಿ, ಈಗ ಮೋದಿ ಭಂಜನೆಗೆ ಸಿಗುತ್ತಿದೆ ಎಂದಾಯಿತು. ಜೊತೆಗೆ ಟಿಆರ್‌ಪಿಯೇ ಜಾಹೀರಾತು ವರಮಾನದ ಅಡಿಗಲ್ಲಾದ್ದರಿಂದ, ಮೋದಿಯವರನ್ನು ಬಯಲು ಮಾಡಿದವರಿಗೆ ವೀಕ್ಷಕರೂ ಹೆಚ್ಚು, ಆದಾಯವೂ ಹೆಚ್ಚು ಎಂದಂತಾಯಿತು. ಇದೇ ಪ್ರವೃತ್ತಿ ಮುಂದಿನ ಚುನಾವಣೆಗಳಲ್ಲೂ ಸಾರ್ವತ್ರಿಕವಾದರೆ ಗತಿಯೇನು?!... ಸರಕಾರ ಒಮ್ಮಿಂದೊಮ್ಮೆಲೇ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಯಿತು.

ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸರಕಾರದ ಮುಖಂಡರು ಪತ್ರಕರ್ತರ ಮುಂದೆ ''ಎಬಿಪಿ ವಾಹಿನಿಯನ್ನು ಸುಮ್ಮನೆ ಬಿಡುವುದಿಲ್ಲ, ಪಾಠ ಕಲಿಸುತ್ತೇವೆ'' ಎಂದು ಗುಡುಗಿದರು. ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ರಾಂಚಿ, ಜೈಪುರ ಮತ್ತು ಪಾಟ್ನಾ ಐಟಿ ವಿಭಾಗದವರಿಗೆ ''ಪುಣ್ಯ ಪ್ರಸೂನ್‌ನನ್ನು ಸುಮ್ಮನೆ ಬಿಡಬೇಡಿ'' ಎಂಬ ಆದೇಶ ಕೊಟ್ಟರು. ಅಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸೂನ್ ವಿರುದ್ಧ ಸತತ ದಾಳಿಗೆ ನೇರ ಆದೇಶ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top