--

ಶಿವರಾಮ ಕಾರಂತರ ರಾಜಕೀಯ ಒಲವು

ಬಾಬರಿ ಮಸೀದಿ ಅಳಿದ ಮೇಲೆ

ಜಿ. ರಾಜಶೇಖರ

ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಿಯ ಚಿಂತಕ ಜಿ. ರಾಜಶೇಖರ್, ಹಿಂಸಾರಾಜಕಾರಣದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವವರು. ಹಿಂಸೆಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವವರು. ಪ್ರಭುತ್ವ ಸೃಷ್ಟಿಸುತ್ತಿರುವ ರಾಜಕೀಯ ಹಿಂಸೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾ ಅದಕ್ಕೆ ಪ್ರತಿಕ್ರಿಯಿಸುತ್ತಿರುವವರು. ಪಿ. ಲಂಕೇಶ್ ಅವರ ಪತ್ರಿಕೆಯಲ್ಲಿ ಲಂಕೇಶರ ಮಹತ್ವದ ಬರಹಗಾರರಾಗಿ ಗುರುತಿಸಿಕೊಂಡಿದ್ದ ರಾಜಶೇಖರ್ ಅವರ ಬರಹಗಳ ಸಂಕಲನ ‘ಬಹುವಚನ ಭಾರತ’ ಇತ್ತೀಚಿನ ಮಹತ್ವದ ಕೃತಿಯಾಗಿದೆ.

ಶಿವರಾಮ ಕಾರಂತರನ್ನು ಕುರಿತ ಈ ಬರಹದ ಶೀರ್ಷಿಕೆ ನೋಡಿ ಓದುಗರು ಆಶ್ಚರ್ಯ ಪಡಬಹುದು. ಇತ್ತೀಚೆಗೆ ಯಾವ ವಿಷಯದ ಬಗ್ಗೆ ಮಾತು ಪ್ರಾರಂಭಿಸಿದರೂ ಬಾಬರಿ ಮಸೀದಿ ಧ್ವಂಸ, ಕೋಮುವಾದ ಇತ್ಯಾದಿಗಳನ್ನು ಎಳೆದುತರುವವರ ‘ಪಾಲಿಟಿಕಲಿ ಕರೆಕ್ಟ್ ಹಠ-ಒತ್ತಾಯ ಇದು’ ಎಂದು ಸಹ ಕೆಲವರು ಮೂಗು ಮುರಿಯಬಹುದು. 1960ರಲ್ಲಿ ಪ್ರಕಟವಾದ ‘ಅಳಿದ ಮೇಲೆ’ ಶಿವರಾಮ ಕಾರಂತರ ಮುಖ್ಯ ಕಾದಂಬರಿಗಳಲ್ಲಿ ಒಂದು. ಬಾಬರಿ ಮಸೀದಿ ಧ್ವಂಸಗೊಂಡದ್ದು 1992ರ ಡಿಸೆಂಬರ್ 6ರಂದು. ಒಂದು ಕಾದಂಬರಿ; ಇನ್ನೊಂದು ಚಾರಿತ್ರಿಕ ಘಟನೆ. ಕಾಲಮಾನದಲ್ಲಿ ಸಹ ಅವೆರಡರ ನಡುವೆ ಸಾಕಷ್ಟು ಅಂತರವಿದೆ. ಕಾರಂತರ ಕಾದಂಬರಿ ಮತ್ತು ಬಾಬರಿ ಮಸೀದಿ ಧ್ವಂಸಗಳನ್ನು ಒಟ್ಟಿಗೆ ತರುವುದು ನಾಟಕಕಾರ ಗಿರೀಶ್ ಕಾರ್ನಾಡರ ಅಪರೂಪದ ಒಂದು ಕತೆ. ಆ ಕತೆಯ ಶೀರ್ಷಿಕೆಯೂ ‘ಅಳಿದ ಮೇಲೆ’. ಕಾರಂತರ ಕಾದಂಬರಿಯಲ್ಲಿ ಸಂಭವಿಸುವ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ಅದರಿಂದ ಒಂದು ಮುಸ್ಲಿಮ್ ಕುಟುಂಬ ಅನುಭವಿಸಿದ ದುಃಖ ದುಮ್ಮಾನಗಳನ್ನು ಗಿರೀಶರ ಕತೆ ನಿರೂಪಿಸುತ್ತದೆ. ‘ಕನ್ನಡ ಪ್ರಭ’ ಪತ್ರಿಕೆಯ 1998ರ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ಕತೆ, ನಂತರ ಗಿರೀಶರ ‘ಆಗೊಮ್ಮೆ ಈಗೊಮ್ಮೆ’ ಮನೋಹರ ಗ್ರಂಥಮಾಲಾ, ಧಾರವಾಡ, 2008 ಸಂಕಲನದಲ್ಲಿ ಮರುಮುದ್ರಣಗೊಂಡಿದೆ. ನಿಸ್ಸಂದೇಹವಾಗಿ ಈ ಕತೆ, ಶ್ರೇಷ್ಠ ಲೇಖಕನೊಬ್ಬ ತನಗಿಂತ ಹಿರಿಯರಾದ ಇನ್ನೊಬ್ಬ ಶ್ರೇಷ್ಠ ಲೇಖಕನಿಗೆ ಸಲ್ಲಿಸಿದ ಗೌರವವಾಗಿದೆ. ಕಾರಂತರು ತೀರಿಕೊಂಡದ್ದು 1997 ಡಿಸೆಂಬರ್ 9ರಂದು; ಅಂದರೆ ಗಿರೀಶರ ಕತೆ ಪ್ರಕಟವಾಗುವುದಕ್ಕೆ ಸರಿಸುಮಾರು ಒಂದು ವರ್ಷದ ಮೊದಲು. ಹಾಗಾಗಿ ಈ ಕತೆಯನ್ನು ಕಾರಂತರಿಗೆ ಗಿರೀಶರ ಶ್ರದ್ಧಾಂಜಲಿ ಎಂದೂ ನಾವು ಓದಬಹುದಾಗಿದೆ. ಈ ವಿಶಿಷ್ಟತೆಯ ಜೊತೆ ಕತೆಯಲ್ಲಿ ಉದ್ದೇಶ ಪೂರ್ವಕವಾಗಿಯೋ, ಹಾಗಲ್ಲದೆಯೋ ಒಂದು ವ್ಯಂಗ್ಯದ ಎಳೆ ಕೂಡ ಸೇರಿಕೊಂಡಿದೆ.

 ಶಿವರಾಮ ಕಾರಂತರು ದೇಶದ ದಿನನಿತ್ಯದ ರಾಜಕೀಯದಲ್ಲಿ ಎಂದೂ ಸಕ್ರಿಯವಾಗಿ ತೊಡಗಿ ಕೊಂಡವರಲ್ಲ. ಆದರೆ ಬಾಬರಿ ಮಸೀದಿ ಧ್ವಂಸಕ್ಕೆ ಮೊದಲಿನಿಂದ, ಯಾಕೆ ತುರ್ತುಪರಿಸ್ಥಿತಿಯ ಕಾಲದಿಂದಲೂ ಕಾರಂತರಿಗೆ ಬಿಜೆಪಿ ಧೋರಣೆಗಳ ಕುರಿತು ತುಸು ಒಲವಿತ್ತು. ‘ಬಾಬರಿ ಮಸೀದಿ ಕೂಡ ಒಂದು ಮಂದಿರವೇ ಆಗಿರುವುದರಿಂದ ಅದನ್ನು ಧ್ವಂಸ ಗೊಳಿಸಿದ್ದು ಒಂದು ಪಾಪಕೃತ್ಯ’ ಎಂಬುದು ಗಿರೀಶ್‌ರ ಕತೆಯ ಧೋರಣೆ. ಹಾಗೆ ನೋಡಿದರೆ ಕಾರಂತರ ವೈಯಕ್ತಿಕ ರಾಜಕೀಯ ನಂಬಿಕೆ ಏನೇ ಇರಲಿ, ಅವರ ಕಾದಂಬರಿ ‘ಅಳಿದ ಮೇಲೆ’ ಕೂಡ, ಅದೇ ಧೋರಣೆ ಯನ್ನು ಮೈಗೂಡಿಸಿಕೊಂಡಿರುವ ಕೃತಿ. ಬಾಬರಿ ಮಸೀದಿ ಧ್ವಂಸ ಒಂದು ಮುಖ್ಯ ಘಟನೆಯಾಗಿರುವ ತಮ್ಮ ಕತೆಗೆ ಗಿರೀಶರು ಕಾರಂತರ ಕಾದಂಬರಿಯನ್ನು ಹಿನ್ನೆಲೆಯಾಗಿಸಿಕೊಂಡದ್ದು ಸಹ ಆ ಕಾರಣದಿಂದಲೇ. ಕಾರಂತರ ಪ್ರತಿಭೆಯ ಬಗ್ಗೆ ಗೌರವ ಮತ್ತು ಬಾಬರಿ ಮಸೀದಿ ಧ್ವಂಸ ಕುರಿತು ವಿಷಾದ - ಇವೆರಡೂ ಒಟ್ಟಾಗಿ ಗಿರೀಶರ ಕತೆಯ ವ್ಯಂಗ್ಯಕ್ಕೆ ಕಾರಣವಾಗುತ್ತದೆ.

‘‘ಕರಸೇವಕರ ಈ ಸಂಘಟಿತ ದಾಳಿಗೆ ಸ್ಥಳದಲ್ಲಿದ್ದ ಹೆಚ್ಚಿನ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಕೆಲವು ಸ್ಥಳೀಯ ಹಿಂದೂಗಳು ಮೊದಲ ಬಾರಿಗೆ ನೆರವು ಕೊಟ್ಟರು..... ಕರಸೇವಕರು 75 ವರ್ಷ ಪ್ರಾಯದ ಜಮೀನ್ದಾರ ತಾಹಿರ್ ಹುಸೇನ್ ಅವರ ಮನೆಗೆ ಬೆಂಕಿಕೊಟ್ಟರು. ಮನೆಯ ಯಜಮಾನನನ್ನು ಮನೆ ಹೆಬ್ಬಾಗಿಲಿನಲ್ಲೇ ಸುಟ್ಟುಕೊಂದರು. ತಾಹಿರ್ ಹುಸೇನ್ ಅವರ ಪೂರ್ವಜರು ಸುಮಾರು 300 ವರ್ಷಗಳಿಂದ ಅಯೋಧ್ಯೆಯಲ್ಲಿ ವಾಸಿಸಿಕೊಂಡಿದ್ದವರು. ಆದರೆ ಈಗ ತಾಹಿರ್ ಹುಸೇನ್‌ರದ್ದು ಎಂದು ಹೇಳಬಹುದಾದ ಕೆಲವು ಎಲುಬುಗಳು ಮಾತ್ರ ಉಳಿದಿದ್ದವು.

 ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ಕಥಾನಕ ಮೈತಳೆಯುವುದು ಉತ್ತರ ಕನ್ನಡ ಜಿಲ್ಲೆಯ ಒಂದು ಹಳ್ಳಿ ಮತ್ತು ಮುಂಬೈ ಶಹರಗಳಲ್ಲಿ. ಕಾದಂಬರಿಯ ಪ್ರಧಾನ ಪಾತ್ರ ಯಶವಂತ ಹುಟ್ಟಿ ಬೆಳೆದು ದೊಡ್ಡವನಾದದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಒಂದು ಹಳ್ಳಿಯಲ್ಲಿ. ಅವನು ಮದುವೆಯಾಗಿ ಕೈ ಹಿಡಿದ ಹೆಣ್ಣು ಅದೇ ಜಿಲ್ಲೆಯವಳು. ಯಶವಂತ ತನ್ನ ವೃತ್ತಿ ಜೀವನ ಆರಂಭಿಸಿದ್ದು ಕೂಡ ಅಲ್ಲಿಯೇ. ಕೈಹಿಡಿದ ಪತ್ನಿಗೆ ಯಶವಂತನ ಜೊತೆ ಹೊಂದಾಣಿಕೆ ಆಗಲಿಲ್ಲ; ಪರಸ್ಪರ ಪ್ರೀತಿಯಂತೂ ದೂರವೇ ಉಳಿಯಿತು. ದುರಾಸೆಯ ಸ್ವಭಾವದ ಆ ಹೆಂಗಸಿಗೆ ಯಶವಂತನ ನಿರ್ಲಿಪ್ತತೆ ಅವ್ಯವಹಾರ ಎಂದೇ ತೋರುತ್ತದೆ. ಅದಕ್ಕೆ ಸರಿಯಾಗಿ ತನ್ನ ವ್ಯವಹಾರದಲ್ಲೂ ನಷ್ಟ ಅನುಭವಿಸಿ, ಯಶವಂತ ಪತ್ನಿ, ಊರು, ಮನೆಗಳನ್ನು ತೊರೆದು, ದೂರದ ಮುಂಬೈಯಲ್ಲಿ ಅಜ್ಞಾತವಾಸ ಆರಂಭಿಸುತ್ತಾನೆ. ಕಾದಂಬರಿ ಶುರುವಾಗುವುದು ಮುಂಬೈಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಯಶವಂತನ ಸಾವಿನ ವೃತ್ತಾಂತದೊಡನೆ. ಯಶವಂತನನ್ನು ಮುಂಬೈಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕಾದಂಬರಿಯ ನಿರೂಪಕನ ಜೊತೆ ಆತನಿಗೆ ಗಾಢ ಸ್ನೇಹ ಬೆಳೆಯುತ್ತದೆ. ಯಶವಂತ, ಮುಂಬೈಯ ಜನ ಅರಣ್ಯದಲ್ಲಿ ಒಂಟಿತನ ಬಯಸಿ ಅಲ್ಲಿಯೇ ನೆಲೆಸಿದವನು. ಕಾದಂಬರಿಯ ನಿರೂಪಕನನ್ನು ಹೊರತುಪಡಿಸಿ ಅವನಿಗೆ ಆ ಮಹಾನಗರದಲ್ಲಿ ಯಾರೂ ಆಪ್ತರಿಲ್ಲ. ತನ್ನ ಸಾವಿನ ನಿರೀಕ್ಷೆಯಲ್ಲಿ ಎಂಬಂತೆ, ಯಶವಂತ ತನ್ನ ನಂತರ ತನ್ನ ಆಸ್ತಿ, ತನ್ನ ಬ್ಯಾಂಕ್ ಅಕೌಂಟಿನಲ್ಲಿರುವ ಹಣ ಮತ್ತು ಕಾಗದ ಪತ್ರಗಳಿಗೆ ಆತನ ಗೆಳೆಯನಾಗಿರುವ ಕಾದಂಬರಿಯ ನಿರೂಪಕನೇ ವಾರಸುದಾರ ಎಂದು ಸೂಚಿಸಿ ಮರಣಪತ್ರ ಬರೆದಿದ್ದಾನೆ. ತನ್ನ ಕಾಲಾನಂತರ ತನ್ನ ಹಣ ಹೇಗೆ ವಿನಿಯೋಗವಾಗಬೇಕು ಎಂದು ಯಶವಂತ ಮರಣಪತ್ರದಲ್ಲಿ ದಾಖಲಿಸಿದ್ದಾನೆ. ತನಗೆ ಆಪ್ತರಾದ ಕೆಲವರಿಗೆ ಸಲ್ಲಬೇಕಾದ ಮೊಬಲಗಿನ ಜೊತೆ, ತನ್ನ ಹುಟ್ಟೂರಿನಲ್ಲಿ ಇಳಿ ವಯಸ್ಸಿನ ಓರ್ವ ಮಹಿಳೆಗೆ ಪ್ರತಿ ತಿಂಗಳೂ ಒಂದು ಮೊತ್ತದ ಹಣ ಸಂದಾಯವಾಗಬೇಕು ಎಂದು ಆತ ತನ್ನ ಮರಣ ಪತ್ರದಲ್ಲಿ ಕಾಣಿಸಿದ್ದಾನೆ. ಕಾದಂಬರಿಯ ನಿರೂಪಕ, ಈ ಮುದುಕಿಯನ್ನು ಅರಸಿಕೊಂಡು, ಯಶವಂತನ ಹುಟ್ಟೂರು, ಬೆನಕನ ಹಳ್ಳಿಗೆ ಪ್ರಯಾಣ ಬೆಳೆಸುತ್ತಾನೆ. ಆ ಹಳ್ಳಿಯಲ್ಲಿ ಯಶವಂತನ ಹಣ ಸಲ್ಲಬೇಕಾದದ್ದು ಪಾರ್ವತಮ್ಮ ಎಂಬ ಹಣ್ಣು ಹಣ್ಣು ಮುದುಕಿಗೆ. ಆಕೆ ಯಶವಂತನ ಸಾಕುತಾಯಿಯಾಗಿ ಅವನನ್ನು ಬೆಳೆಸಿದವಳು; ಸಾಕುತಾಯಿಯಾದರೂ ಯಶವಂತನನ್ನು ಹೆತ್ತ ತಾಯಿಗಿಂತ ಹೆಚ್ಚು ಮಮತೆಯಲ್ಲಿ ಸಾಕಿದವಳು. ಪಾರ್ವತಮ್ಮನ ಆ ಹಳ್ಳಿಯಲ್ಲಿ, ಹಳ್ಳಿಯ ಹೆಸರಿಗೆ ಕಾರಣ ಒದಗಿಸಿದ ಒಂದು ಬೆನಕನ ಗುಡಿ ಇದೆ. ಅದು ಪಾಳುಬಿದ್ದ ಗುಡಿಯಾದರೂ ಅಲ್ಲಿನ ದೈವಕ್ಕೆ ಪಾರ್ವತಮ್ಮ ಭಕ್ತಿಯಿಂದ ನಡೆದುಕೊಳ್ಳುತ್ತಾಳೆ. ಕಾದಂಬರಿಯಲ್ಲಿ ಸ್ವತಃ ನಿರೂಪಕನೇ ಪಾರ್ವತಮ್ಮ ಮತ್ತು ಬೆನಕನ ಗುಡಿ ಕುರಿತು ಹೇಳುವ ಮಾತು ಇದು, ‘‘ನನ್ನ ಮನಸ್ಸಿನಲ್ಲಿ ಎರಡೆರಡು ಜೀರ್ಣವಾದ ಗುಡಿಗಳು ಕಾಣಿಸಿದವು. ಬೆನಕಯ್ಯನ ಕಲ್ಲು ಮಣ್ಣಿನ ಗುಡಿಯೊಂದು; ಎಲುಬು ಮಾಂಸಗಳ ಗುಡಿ ಮತ್ತೊಂದು. ಆ ಮತ್ತೊಂದು ಗುಡಿಯ ದೇವತೆಯೇ ಪಾರ್ವತಮ್ಮ’’ ಕಾರಂತರು ತಮ್ಮ ಕಾದಂಬರಿಯಲ್ಲಿ ಪಾರ್ವತಮ್ಮ ಮತ್ತು ತನ್ನ ಹಳ್ಳಿಯ ಸಹಜೀವಿಗಳ ಜೊತೆ ಆಕೆ ಬಾಳಿದ ಬಗೆಯ ಚಿತ್ರಣ ಮುಖಾಂತರ ಸಜೀವಗೊಳಿಸುವ ಮಾತು ಇದು- ಪಾರ್ವತಮ್ಮ ಎಲುಬು ಮಾಂಸಗಳ ಗುಡಿ; ಅವಳ ದೇಹವೇ ದೇವಾಲಯ. ಕಾದಂಬರಿಯ ಮುಖ್ಯ ಪಾತ್ರ ಯಶವಂತ ನಿರೀಶ್ವರವಾದಿ; ಕಾರಂತರಂತೂ, ಅವರೇ ಒಂದೆಡೆ ತಮ್ಮ ಬಗ್ಗೆ ಹೇಳಿಕೊಂಡ ಹಾಗೆ ಆಸ್ತಿಕನೂ ಅಲ್ಲದ ನಾಸ್ತಿಕನೂ ಅಲ್ಲದ ಅಥವಾ ಎರಡೂ ಆಗಿರುವ ಅನಾಸ್ತಿಕ. ಆದರೆ ಪಾರ್ವತಮ್ಮ ದೇವರಲ್ಲಿ ಪರಮ ಶ್ರದ್ಧೆಯುಳ್ಳವಳು. ಯಶವಂತನಿಗೆ ಅವಳು ತಾಯಿ ದೇವತೆ; ನಿರೂಪಕನಿಗೆ ವೃದ್ಧಾಪ್ಯದಲ್ಲಿ ಸವೆದ ಅವಳ ದೇಹವೇ ಗುಡಿ; ಹಾಗಾಗಿ ಆತ, ಯಶವಂತನ ದುಡ್ಡಿನಲ್ಲಿ ಬೆನಕನ ಹಳ್ಳಿಯ ಪಾಳುಬಿದ್ದ ಗುಡಿಯ ಜೀರ್ಣೋದ್ಧಾರಕ್ಕೆ ಮುಂದಾಗುತ್ತಾನೆ. ಅದರಿಂದ ಪಾರ್ವತಮ್ಮನ ಹಂಬಲವನ್ನೂ ಈಡೇರಿಸಿದಂತಾಯಿತು; ಯಶವಂತನ ಇಂಗಿತವನ್ನು ನಡೆಸಿದಂತಾಯಿತು ಎಂಬುದು ನಿರೂಪಕನ ಯೋಚನೆ. ಕಾದಂಬರಿಯಲ್ಲಿ ಯಶವಂತ, ಪಾರ್ವತಮ್ಮ ಹಾಗೂ ನಿರೂಪಕ - ಎಲ್ಲರೂ ತಮ್ಮ ‘ಸ್ವ’ವನ್ನು ‘ತಮ್ಮತನ’ವನ್ನು ಉಳಿಸಿಕೊಂಡು ಇತರ ಜೀವಗಳ ‘ಸ್ವ’ವನ್ನು ‘ಸ್ವಾಯತ್ತತೆ’ಯನ್ನು ಮತ್ತು ಆ ಸ್ವಾಯತ್ತತೆಯಲ್ಲಿ ತಾವು ತಾವಾಗಿಯೇ ಬಾಳುವ ‘ಹಕ್ಕ’ನ್ನು ಗೌರವಿಸುವವರು. ನಾಸ್ತಿಕನಾದ ಯಶವಂತ, ತನ್ನ ಸಾಕುತಾಯಿ ಪಾರ್ವತಮ್ಮನ ದೈವಶ್ರದ್ಧೆಯನ್ನು ಗೌರವಿಸುವುದು, ‘ಅನ್ಯ’ದ ಜೊತೆ ಸಹಬಾಳ್ವೆ ಅಲ್ಲ; ನಾವು ಒಲ್ಲದ್ದರ ಕುರಿತು ಸಹನೆ ಅಲ್ಲ; ನಮಗೆ ಸರಿ ಕಾಣದ ಜೀವನ ವಿಧಾನಗಳ ಬಗೆಗಿನ ಸಹಿಷ್ಣುತೆಯೂ ಅಲ್ಲ. ಇದು ನಮ್ಮ ಸಹಜೀವಿಯ ಅಸ್ಮಿತೆ ಮತ್ತು ಸ್ವಾಯತ್ತತೆಗಳನ್ನು ಗುರುತಿಸಿ ಗೌರವಿಸುವ, ಅತ್ಯಂತ ಜೀವಪರ ನಿಲುವು. ಇಂತಹ ಜೀವನದೃಷ್ಟಿ ಒಬ್ಬ ಮುಸ್ಲಿಮನೋ, ಕ್ರೈಸ್ತನೋ ನಮ್ಮ ಜೊತೆ ಬಾಳಬೇಕೆಂದಾದರೆ, ಅವನು ತನ್ನ ಧರ್ಮದ ಆಚರಣೆ, ತನ್ನ ಸಮುದಾಯದ ಉಡುಗೆತೊಡುಗೆ ಹಾಗೂ ತನ್ನ ಆಹಾರ ಪದ್ಧತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸುವುದಿಲ್ಲ. ಕಾರಂತರ ಕಾದಂಬರಿಯ ವಿನ್ಯಾಸದಲ್ಲೇ ಒಡಮೂಡುವ ಈ ಅರಿವು ಗಿರೀಶರ ಕತೆಯಲ್ಲೂ ಪ್ರತಿಧ್ವನಿ ಪಡೆದುಕೊಳ್ಳುತ್ತದೆ. ಗಿರೀಶರ ಕತೆ, ಕಾರಂತರ ಕಾದಂಬರಿಯ ಈ ಘಟ್ಟದ ಅಂದರೆ, ಯಶವಂತನ ಹುಟ್ಟೂರು ಬೆನಕನಹಳ್ಳಿಯ ಗುಡಿಯ ಜೀರ್ಣೋದ್ಧಾರ ಮಾಡಿಸುವ ನಿರೂಪಕನ ನಿರ್ಧಾರದವರೆಗಿನ ವಿವರಗಳನ್ನು ಬಳಸಿಕೊಳ್ಳುತ್ತದೆ. ಗಿರೀಶರ ಕತೆಯಲ್ಲಿ ರಿಝಿವಿ ಎಂಬ ಟೆಲಿಚಿತ್ರ ನಿರ್ಮಾಪಕ, ಕಾರಂತರ ‘ಅಳಿದ ಮೇಲೆ’ ಕೃತಿಗೆ ಎಷ್ಟು ಮನ ಸೋತಿದ್ದಾನೆ ಎಂದರೆ, ಅದನ್ನು ಆಧರಿಸಿ ಒಂದು ಚಿತ್ರ ಮಾಡಲು ಅವನು ನಿರ್ಧರಿಸುತ್ತಾನೆ; ಆ ಚಿತ್ರಕ್ಕೋಸ್ಕರ ಚಿತ್ರ ನಿರ್ಮಾಪಕರೊಡನೆ ಚೌಕಾಶಿ ಮಾಡಿ ಒಂದಿಷ್ಟು ಹಣವನ್ನು ಮುಂಗಡವಾಗಿ ಪಡೆದಿದ್ದೂ ಅಲ್ಲದೆ ಶಿವರಾಮ ಕಾರಂತರ ಅನುಮತಿಯನ್ನು ಸಹ ಪಡೆದುಕೊಂಡಿದ್ದಾನೆ. ಆನಂತರ ತನ್ನ ಚಿತ್ರದ ಕುರಿತು ಚರ್ಚಿಸಲು, ರಿಝಿವಿ, ಕಾರಂತರು ತನ್ನ ಕೊನೆಗಾಲದಲ್ಲಿ ನೆಲೆಸಿದ್ದ ಕರಾವಳಿಯ ಕೋಟದ ಸಮೀಪ ಸಾಲಿಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಹೆದ್ದಾರಿಯಲ್ಲಿ ಅಪಘಾತವಾಗಿ ತೀರಿಕೊಳ್ಳುತ್ತಾನೆ. ರಿಝಿವಿ ತನ್ನ ಆತ್ಮ ತೃಪ್ತಿಗಾಗಿ ಈ ಚಿತ್ರ ನಿರ್ಮಿಸುವುದರ ಜೊತೆಗೆ, ಅದರಲ್ಲಿ ಸ್ವಲ್ಪ ಹಣ ಉಳಿಸಿ, ತನ್ನ ಮಗಳ ಮದುವೆಯನ್ನು ಸಹ ಮಾಡುವ ಪ್ಲಾನ್ ಹಾಕಿಕೊಂಡಿದ್ದ. ಈಗ ಅವನೇ ತೀರಿಕೊಂಡಿದ್ದಾನೆ. ರಿಝಿವಿ ಕುಟುಂಬ ಕಂಗಾಲಾಗುತ್ತದೆ. ಈ ನಡುವೆ 1992 ಡಿಸೆಂಬರ್ 6ರಂದು ಉತ್ತರಪ್ರದೇಶದ ಫೈಝಾಬಾದ್ ನಗರದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವಾಗುತ್ತದೆ. ರಿಝಿವಿಯ ಮಗ ಯಾಕೂಬ್‌ನ ಹೆಗಲ ಮೇಲೆ ತನ್ನ ಸೋದರಿಯ ವಿವಾಹದ ಜವಾಬ್ದಾರಿ ಬಿದ್ದಿದೆ. ಯಾಕೂಬ್ ಕತೆಯ ನಿರೂಪಕನ ಬಳಿ ಧಾವಿಸಿ ಕಾರಂತರ ಕಾದಂಬರಿ ಆಧಾರಿತ ಚಿತ್ರವನ್ನು ಆತನೇ ನಿರ್ದೇಶಿಸಬೇಕು ಎಂದು ದುಂಬಾಲು ಬೀಳುತ್ತಾನೆ. ಆದರೆ ನಿರೂಪಕ ಯಾಕೂಬ್‌ನ ಮನವಿಯನ್ನು ಸುತಾರಾಂ ಒಪ್ಪಿಕೊಳ್ಳುವುದಿಲ್ಲ. ಅಯೋಧ್ಯೆಯ ದುರ್ಘಟನೆ ಅವನನ್ನು ಅಲ್ಲಾಡಿಸಿಬಿಟ್ಟಿದೆ. ಈಗ ತಾನು ಕಾರಂತರ ಕಾದಂಬರಿಯಲ್ಲಿ ವರ್ಣಿತವಾಗಿರುವಂತೆ ಚಿತ್ರದಲ್ಲಿಯೂ ಗುಡಿಯೊಂದನ್ನು ಪುನರ್‌ನಿರ್ಮಿಸಿದರೆ ಬಾಬರಿ ಮಸೀದಿ ಧ್ವಂಸ ಮಾಡಿದ್ದನ್ನು ಸಮರ್ಥಿಸಿದಂತೆ ಆಗುತ್ತದೆ. ಎಷ್ಟು ಮಾತ್ರಕ್ಕೂ ಅದು ತನ್ನಿಂದ ಸಾಧ್ಯವಿಲ್ಲ ಎಂದು ಅವನು ಕೈ ಚೆಲ್ಲಿ ಬಿಡುತ್ತಾನೆ. ಯಾವ ಕಾರಣಕ್ಕೆ ಕಾರಂತರ ಕಾದಂಬರಿ ಆಧಾರಿತ ಚಿತ್ರ ನಿರ್ಮಾಣದ ಬಗ್ಗೆ ರಿಝಿವಿ ಉತ್ಸಾಹ ತೋರಿಸಿದನೋ, ಅದೇ ಕಾರಣಕ್ಕೆ ಗಿರೀಶರ ಕತೆಯ ನಿರೂಪಕ ಚಿತ್ರ ನಿರ್ದೇಶನಕ್ಕೆ ಒಲ್ಲೆ ಎನ್ನುತ್ತಿದ್ದಾನೆ. ಈ ನಡುವೆ ರಿಝಿವಿಯ ಪತ್ನಿಗೆ ಬೆಳೆದು ನಿಂತ ಮಗಳ ಮದುವೆಯದ್ದೇ ಚಿಂತೆ. ಅಯೋಧ್ಯೆಯಲ್ಲಿ ಸಂಭವಿಸಿದ ಘಟನೆಯೊಂದು ದೂರದ ಮುಂಬೈಯ ಮುಸ್ಲಿಮ್ ಕುಟುಂಬವನ್ನು ಕಂಗೆಡಿಸಿದೆ! ಕಾರ್ನಾಡರ ಕತೆಯಲ್ಲಿ ಸೂಚ್ಯವಾಗಿ ಚಿತ್ರಿತವಾಗುವ ಬಾಬರಿ ಮಸೀದಿ ಧ್ವಂಸದ ಈ ದುರಂತವನ್ನು ಇನ್ನಷ್ಟು ಸಮಗ್ರವಾಗಿ ನಿರೂಪಿಸುವ ಕೃತಿ, ಲೋಕಖ್ಯಾತ ಚಿಂತಕ ಅಶೀಶ್‌ನಂದಿ, ಸಮಾಜ ಶಾಸ್ತ್ರಜ್ಞರಾದ ಶಿಖಾತ್ರಿವೇದಿ, ಶೈಲ್ ಮಯಾರಂ ಮತ್ತು ಅಚ್ಯುತ್‌ಯಾಜ್ಞಿಕ್‌ರ ಸಹಬಾಗಿತ್ವದೊಂದಿಗೆ ಪ್ರಕಟಿಸಿದ CREATING A NATIONALITY. THE RAM JANMABHUMI MOVEMENT AND FEAR OF THE SELF - O.U.P. DELHI 1995. ಈ ಪುಸ್ತಕ ನೀಡುವ ಮಾಹಿತಿ ಓದುಗರನ್ನು ಈಗಲೂ ಅಸ್ವಸ್ಥಗೊಳಿಸುವಷ್ಟು ದಾರುಣವಾಗಿದೆ. 1992 ಡಿಸೆಂಬರ್ 6ರ ಘಟನೆ ಹಠಾತ್ತನೆ ಸ್ಫೋಟಗೊಂಡದ್ದಲ್ಲ. ದೇಶಾದ್ಯಂತ ಅದಕ್ಕೆ ನಡೆದ ಪೂರ್ವ ತಯಾರಿ, ಅದರಲ್ಲಿ ಭಾಗವಹಿಸಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಧರ್ಮ ಗುರುಗಳು ಹಾಗೂ ಅದರ ಉಸ್ತುವಾರಿಯನ್ನು ನಿರ್ವಹಿಸಿದ ಸಂಘಟನೆಗಳನ್ನು ವಿವರವಾಗಿ ಚಿತ್ರಿಸುವ ಈ ಕೃತಿ ಡಿಸೆಂಬರ್ 6 ಮತ್ತು ಆ ನಂತರ ಅಯೋಧ್ಯೆಯಲ್ಲಿ ನಡೆದದ್ದರ ಪ್ರತ್ಯಕ್ಷದರ್ಶಿ ವರದಿಯನ್ನು ಸಹ ಒಳಗೊಂಡಿದೆ. ‘ಕರಸೇವಕರು’ ಎಂಬ ಹಿಂದುತ್ವ ಸಿದ್ಧಾಂತದ ಕಾಲಾಳುಗಳು ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿಸಿದ ಬಾಬರಿ ಮಸೀದಿ ಧ್ವಂಸದ ಕಾರ್ಯಾಚರಣೆಯ ನಂತರ ಅಯೋಧ್ಯೆಯಲ್ಲಿ ಏನು ನಡೆಯಿತು ಎಂಬುದನ್ನು ಪುಸ್ತಕದಲ್ಲಿ ವರ್ಣಿಸಲಾಗಿದೆ. ‘‘ಡಿಸೆಂಬರ್ 6ರ ರಾತ್ರಿ ಮತ್ತು ಅದರ ಮಾರನೆಯ ದಿನದ ಮಧ್ಯಾಹ್ನಗಳ ನಡುವೆ, ಉದ್ರಿಕ್ತಕರಸೇವಕರ ಗುಂಪು ಅಯೋಧ್ಯೆಯಲ್ಲಿ ಮಕ್ಕಳೂ ಸೇರಿದಂತೆ 13 ಮುಸ್ಲಿಮರನ್ನು ಜೀವಂತ ಸುಟ್ಟು ಕೊಂದಿತು. ಡಿಸೆಂಬರ್ 6ಕ್ಕಿಂತ ಮೊದಲೇ ಅಯೋಧ್ಯೆಯ ಹೆಚ್ಚಿನ ಮುಸ್ಲಿಮರು ಊರು ಮನೆ ಬಿಟ್ಟು ಹೆಚ್ಚು ಸುರಕ್ಷಿತವೆನ್ನಿಸಿದ ದೂರದ ಊರುಗಳಿಗೆ ಹೊರಟು ಹೋಗಿದ್ದರು; ಊರಿನಲ್ಲೇ ಉಳಿದುಕೊಂಡಿದ್ದ ಮುಸ್ಲಿಮರಲ್ಲಿಯೂ ಕೆಲವರು ಬಾಬರಿ ಮಸೀದಿ ಉರುಳಿದ ಸುದ್ದಿ ಕೇಳಿದ್ದೇ ತಮ್ಮ ಮನೆ ಮಾರು ಬಿಟ್ಟು ಓಡಿದರು. ಬೇರೆ ಎಲ್ಲೂ ತಮಗೆ ಆಶ್ರಯ ದೊರೆಯುವ ಸಾಧ್ಯತೆ ಇಲ್ಲದ ಕೆಲವು ಅಸಹಾಯಕ ಮುಸ್ಲಿಮರು ಮಾತ್ರ ಆ ದಿನ ಅಯೋಧ್ಯೆಯಲ್ಲಿ ಉಳಿದುಕೊಂಡಿದ್ದರು...’’

ಬಾಬರಿ ಮಸೀದಿ ಧ್ವಂಸ ದೇಶದ ಸಮಸ್ತ ಹಿಂದೂಗಳ ಹೆಸರಿನಲ್ಲಿ, ಅವರ ಅನುಮತಿ ಪಡೆದುಕೊಳ್ಳದೆ, ಆರೆಸ್ಸೆಸ್ ಮತ್ತು ಅದರ ಸಂಘ ಪರಿವಾರದ ಕಾಲಾಳುಗಳು ನಡೆಸಿದ ಪೂರ್ವಯೋಜಿತ ಕಾರ್ಯಕ್ರಮ. ಕಾರಂತರ ‘ಅಳಿದ ಮೇಲೆ’ ಕಾದಂಬರಿ ಪ್ರಕಟವಾದದ್ದು 1992ರ ಘಟನೆಗಿಂತ ಮೂರು ದಶಕಗಳಿಗೂ ಮೊದಲು. ಆದರೆ ಕಾದಂಬರಿ ಎತ್ತಿಹಿಡಿಯುವ ನಂಬಿಕೆಯ ಸ್ವಾಯತ್ತತೆ ಮತ್ತು ನಂಬಿಕೆಯ ಸ್ವಾತಂತ್ರಗಳನ್ನು ರಾಮಜನ್ಮ ಚಳವಳಿ ಮೆಟ್ಟಿ ತುಳಿದು ಧ್ವಂಸಗೊಳಿಸಿರುವುದರ ಕಾರಣದಿಂದಾಗಿ, ಕಾದಂಬರಿ ಇಂದಿಗೂ ಪ್ರಸ್ತುತವಾಗಿದೆ; ರೋಗಗ್ರಸ್ತವಾದ ನಮ್ಮ ಸಮಾಜಕ್ಕೆ ಔಷಧಪ್ರಾಯವೂ ಆಗಿದೆ.

‘ಹಿಂದೂಗಳು ಎಂದೂ ಅನ್ಯಮತೀಯರ ಪೂಜಾಸ್ಥಳಗಳಿಗೆ ಹಾನಿ ಮಾಡುವುದಿಲ್ಲ; ಹಿಂದೂಗಳದ್ದು ಅತ್ಯಂತ ಸಹಿಷ್ಣುಧರ್ಮ’ ಎಂಬ ವಿಹಿಂಪದ ಹೆಗ್ಗಳಿಕೆಯನ್ನು ಅಳಿಸಿ ಹಾಕಲೋ ಎಂಬಂತೆ, ದಾಖಲೆಗಳ ಪ್ರಕಾರ ಪಟ್ಟಣದ 23 ಮಸೀದಿ, 11 ಮಝಾರ್, 3 ಈದ್ಗಾ ಮತ್ತು 2 ಮದ್ರಸಾಗಳನ್ನು ನಾಶಪಡಿಸಲಾಯಿತು...... ‘‘ಜೈ ಶ್ರೀರಾಮ್’’ ಎಂದು ಬೊಬ್ಬೆ ಹಾಕುತ್ತ ಕರಸೇವಕರು ಪಟ್ಟಣದಲ್ಲಿದ್ದ ಮುಸ್ಲಿಮರ ಮನೆಗಳನ್ನೂ ಅಂಗಡಿ ಮುಂಗಟ್ಟುಗಳನ್ನೂ ವ್ಯವಸ್ಥಿತವಾಗಿ ಲೂಟಿ ಮಾಡಿ, ನಂತರ ಆ ಕಟ್ಟಡಗಳಿಗೆ ಬೆಂಕಿಕೊಟ್ಟರು. ಊರಿನಲ್ಲಿ ಯಾರೂ ಅವರನ್ನು ತಡೆಯಲಿಲ್ಲ. ಅದು ಅಯೋಧ್ಯೆಯ ‘‘ಮೊತ್ತಮೊದಲ ಹಿಂದೂ-ಮುಸ್ಲಿಮ್ ಗಲಭೆ ಮತ್ತು ಅದು ಸಾಕಷ್ಟು ಪರಿಣಾಮಕಾರಿಯಾಗಿತ್ತು; ಒಟ್ಟು 134 ಮನೆಗಳು ಸುಟ್ಟು ಬೂದಿಯಾದವು....’’ ‘‘ಕರಸೇವಕರ ಈ ಸಂಘಟಿತ ದಾಳಿಗೆ ಸ್ಥಳದಲ್ಲಿದ್ದ ಹೆಚ್ಚಿನ ಪೊಲೀಸರು, ಅರೆಸೈನಿಕ ಪಡೆಗಳು ಮತ್ತು ಕೆಲವು ಸ್ಥಳೀಯ ಹಿಂದೂಗಳು ಮೊದಲ ಬಾರಿಗೆ ನೆರವು ಕೊಟ್ಟರು..... ಕರಸೇವಕರು 75 ವರ್ಷ ಪ್ರಾಯದ ಜಮೀನ್ದಾರ ತಾಹಿರ್ ಹುಸೇನ್ ಅವರ ಮನೆಗೆ ಬೆಂಕಿಕೊಟ್ಟರು. ಮನೆಯ ಯಜಮಾನನನ್ನು ಮನೆ ಹೆಬ್ಬಾಗಿಲಿನಲ್ಲೇ ಸುಟ್ಟುಕೊಂದರು. ತಾಹಿರ್ ಹುಸೇನ್ ಅವರ ಪೂರ್ವಜರು ಸುಮಾರು 300 ವರ್ಷಗಳಿಂದ ಅಯೋಧ್ಯೆಯಲ್ಲಿ ವಾಸಿಸಿಕೊಂಡಿದ್ದವರು. ಆದರೆ ಈಗ ತಾಹಿರ್ ಹುಸೇನ್‌ರದ್ದು ಎಂದು ಹೇಳಬಹುದಾದ ಕೆಲವು ಎಲುಬುಗಳು ಮಾತ್ರ ಉಳಿದಿದ್ದವು. ‘‘CREATING A NATIONALITY'' ಪುಟ 192-200.

ರಾಮಜನ್ಮ ಭೂಮಿ ಚಳವಳಿ ಮತ್ತು ಬಾಬರಿ ಮಸೀದಿ ಧ್ವಂಸ ಗುರಿಮಾಡಿಕೊಂಡದ್ದು ಕೇವಲ ಮುಸ್ಲಿಮ್ ಸಮುದಾಯವನ್ನು ಮಾತ್ರವಲ್ಲ. ಹಿಂದುತ್ವ ಸಿದ್ಧಾಂತದ ವತಿಯಿಂದ ನಡೆದ ಆ ಕಾರ್ಯ ಹಿಂದೂಗಳ ಸ್ವಾಯತ್ತತೆಯನ್ನು ಕೂಡ ಧ್ವಂಸಗೊಳಿಸಿತು. ದೇಶದ ಸಮಸ್ತ ಹಿಂದೂಗಳ ಹೆಸರಿನಲ್ಲಿ, ಅವರ ಅನುಮತಿ ಪಡೆದುಕೊಳ್ಳದೆ, ಆರೆಸ್ಸೆಸ್ ಮತ್ತು ಅದರ ಸಂಘ ಪರಿವಾರದ ಕಾಲಾಳುಗಳು ನಡೆಸಿದ ಪೂರ್ವಯೋಜಿತ ಕಾರ್ಯಕ್ರಮ ಅದು. ಕಾರಂತರ ‘ಅಳಿದ ಮೇಲೆ’ ಕಾದಂಬರಿ ಪ್ರಕಟವಾದದ್ದು 1992ರ ಘಟನೆಗಿಂತ ಮೂರು ದಶಕಗಳಿಗೂ ಮೊದಲು. ಆದರೆ ಕಾದಂಬರಿ ಎತ್ತಿಹಿಡಿಯುವ ನಂಬಿಕೆಯ ಸ್ವಾಯತ್ತತೆ ಮತ್ತು ನಂಬಿಕೆಯ ಸ್ವಾತಂತ್ರಗಳನ್ನು ರಾಮಜನ್ಮ ಚಳವಳಿ ಮೆಟ್ಟಿ ತುಳಿದು ಧ್ವಂಸಗೊಳಿಸಿರುವುದರ ಕಾರಣದಿಂದಾಗಿ, ಕಾದಂಬರಿ ಇಂದಿಗೂ ಪ್ರಸ್ತುತವಾಗಿದೆ; ರೋಗಗ್ರಸ್ತವಾದ ನಮ್ಮ ಸಮಾಜಕ್ಕೆ ಔಷಧಪ್ರಾಯವೂ ಆಗಿದೆ. ಗಿರೀಶರ ಕತೆ ಕಾರಂತರ ಕಾದಂಬರಿಯನ್ನು ಆಧರಿಸಿರುವುದಾದರೂ ಅದೇ ಕಾರಣಕ್ಕೆ.

1992-93ರ ಮುಂಬೈ ಗಲಭೆ ಹತ್ತಿರ ಹತ್ತಿರ 1,000 ಜನರನ್ನು ಬಲಿತೆಗೆದುಕೊಂಡಿತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಆಲಾಯದ ಹೇಳಬೇಕಾಗಿಲ್ಲ. ಆಗ ಮಹಾರಾಷ್ಟ್ರದ ಎರಡು ಪ್ರಮುಖ ವಿರೋಧಪಕ್ಷಗಳಾಗಿದ್ದ, ಬಿಜೆಪಿ ಹಾಗೂ ಶಿವಸೇನಾ ಈ ಗಲಭೆಗಳ ನೇತೃತ್ವವಹಿಸಿದ್ದವು. ಆಳುವ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಒಂದೋ ಆ ಗಲಭೆಗಳಿಗೆ ಮೂಕ ಪ್ರೇಕ್ಷಕರಾಗಿದ್ದರು ಅಥವಾ ಸ್ವತಃ ಅವರೇ ಗಲಭೆಗಳಲ್ಲಿ ಶಾಮೀಲಾಗಿದ್ದರು; ಕೆಲವೊಮ್ಮೆ ಭಾಗಿಗಳೂ ಆಗಿದ್ದಿದೆ. ಮುಂಬೈಯ ಪೊಲೀಸ್ ಸಿಬ್ಬಂದಿಯಲ್ಲಿ ಹೆಚ್ಚಿನವರು ದೊಂಬಿಕೋರರ ಜೊತೆ ಸೇರಿಕೊಂಡು ಲೂಟಿ, ಮುಸ್ಲಿಮರ ಆಸ್ತಿಪಾಸ್ತಿಗೆ ಬೆಂಕಿಕೊಡುವುದು, ಮಾರಾಮಾರಿ ಮುಂತಾದವುಗಳಲ್ಲಿ ಪಾಲುಗೊಂಡರು.

ಬಾಬರಿ ಮಸೀದಿ ಧ್ವಂಸಗೊಂಡ ನಂತರವೂ ಅದು ಕಾರಂತರ ‘ಅಳಿದ ಮೇಲೆ’ ಕಾದಂಬರಿ ಎತ್ತಿ ಹಿಡಿಯುವ ನಂಬಿಕೆಯ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳನ್ನು ನಾಶಪಡಿಸುವಂತಹದ್ದಾದರೂ, ಕಾರಂತರಿಗೆ ಹಿಂದುತ್ವದ ಜೊತೆ ಸಹಮತವಿತ್ತು. ಇದು ಗಿರೀಶರ ಕತೆ ಓದುವವರನ್ನು ಚುಚ್ಚದೆ ಬಿಡದು. ಆದರೆ ಕತೆಯ ವ್ಯಂಗ್ಯಕ್ಕೆ ಇದೊಂದೇ ಕಾರಣವಲ್ಲ. ಕಾರಂತರ ಕಾದಂಬರಿಯ ಕಥಾನಕದ ಬಹುಭಾಗ ಸಂಭವಿಸುವುದು ಮುಂಬೈಯಲ್ಲಿ. ಕಾರಂತರ ಇನ್ನೊಂದು ಬಹು ಮುಖ್ಯ ಕಾದಂಬರಿ ‘ಮರಳಿ ಮಣ್ಣಿಗೆ’ಯಲ್ಲಿ ಸಹ ಮುಂಬೈಗೆ ಪ್ರಧಾನ ಪಾತ್ರವಿದೆ. ಆ ಕಾದಂಬರಿಯ ನಾಯಕ ಪಾತ್ರಗಳಲ್ಲಿ ಒಬ್ಬನಾದ ರಾಮ ಐತಾಳನ ಮೊಮ್ಮಗ, ಲಚ್ಚನ ಮಗ, ರಾಮ ತನ್ನ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಮುಂಬೈಯಲ್ಲಿ. ‘ಮರಳಿ ಮಣ್ಣಿಗೆ’ಯ ಮೂರನೆಯ ತಲೆಮಾರಿನ ರಾಮನ ಹಾಗೆ, ‘ಅಳಿದ ಮೇಲೆ’ ಕಾದಂಬರಿಯ ಯಶವಂತ ಕೂಡ ಸ್ವಲ್ಪ ಮಟ್ಟಿಗೆ ಕಾರಂತರನ್ನೇ ಪ್ರತಿನಿಧಿಸುವವನು; ಕಾರಂತರ alter ego . ಹಾಗೆ ನೋಡಿದರೆ ‘ಅಳಿದ ಮೇಲೆ’ ಕಾದಂಬರಿಯಲ್ಲಿ, ಕಾರಂತರಿಗೆ, ಒಂದಲ್ಲ ಎರಡು ಪ್ರತಿಬಿಂಬಗಳು - ಯಶವಂತ ಮತ್ತು ಕಾದಂಬರಿಯ ನಿರೂಪಕ; ಈ ಪ್ರತಿಬಿಂಬಗಳು ನಮಗೆ ಕಾಣುವುದು ಮುಂಬೈಯ ಮಹಾನಗರದ ಧಾವಂತದ ಹಿನ್ನೆಲೆಯಲ್ಲಿ. ವೈಯಕ್ತಿಕವಾಗಿ ಸಹ ಮುಂಬೈ ಕಾರಂತರಿಗೆ ತುಂಬ ಪ್ರಿಯವಾಗಿದ್ದ ನಗರ. ಅವರು ವರ್ಷಕ್ಕೆ ಒಮ್ಮೆಯಾದರೂ, ಮುಂಬೈಗೆ ಹೋಗುವುದನ್ನು ರೂಢಿಮಾಡಿಕೊಂಡಿದ್ದರು. ಖ್ಯಾತ ಕಲಾವಿದ ಕೆ. ಕೆ. ಹೆಬ್ಬಾರರನ್ನು ಒಳಗೊಂಡು ಅವರು ಹಲವು ಖಾಸಾ ದೋಸ್ತ್‌ಗಳು ಮುಂಬೈಯಲ್ಲಿ ವಾಸವಾಗಿದ್ದರು. ಅದೂ ಅಲ್ಲದೆ ಮುಂಬೈಯ ಜನಸಂದಣಿ ಮತ್ತು ವೈವಿಧ್ಯಮಯ ಬದುಕಿಗೆ ಕಾರಂತರು ಮರುಳಾಗಿದ್ದರು. ‘ತರಂಗ’ ವಾರ ಪತ್ರಿಕೆಯ ಮೊದಲ ಸಂಪಾದಕ ಸಂತೋಷ ಕುಮಾರ ಗುಲ್ವಾಡಿ, ಒಮ್ಮೆ ಕಾರಂತರ ಮುಂಬೈ ವ್ಯಾಮೋಹದ ಬಗ್ಗೆ ಹೇಳುತ್ತ ಆ ಮಹಾನಗರದ ಜನನಿಬಿಡ ಬೀದಿಗಳಲ್ಲಿ "HE WOULD LOSE HIMSELF IN ABANDON'' ಎಂದಿದ್ದರು. ವಾರಣಾಸಿಯ ದೇವಸ್ಥಾನಗಳನ್ನು ಮೊದಲ ಬಾರಿಗೆ ಕಂಡು ಏನೂ ಅನ್ನಿಸದೆ ಜಡವಾಗಿದ್ದ ರಾಮಕೃಷ್ಣ ಪರಮಹಂಸರು ಗಂಗಾನದಿ ಗುಂಟ ದೋಣಿಯಲ್ಲಿ ಸಂಚರಿಸುತ್ತ ಪರವಶರಾದರಂತೆ! ಪ್ರಾಯಶಃ ಮುಂಬೈಯ ಜನಪ್ರವಾಹದಲ್ಲಿ ಕಾರಂತರು ಪರವಶರಾಗುತ್ತಿದ್ದಿರಬೇಕು. ಕಾರಂತರ ಬಗ್ಗೆ ಹೇಳುತ್ತ ರಾಮಕೃಷ್ಣ ಪರಮಹಂಸರನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಕಾರಂತರ ವೈವಿಧ್ಯಮಯ ಕೃತಿಗಳಲ್ಲಿ ಪರಮಹಂಸರ ಜೀವನವನ್ನು ನಿರೂಪಿಸುವ ‘ಶ್ರೀ ರಾಮಕೃಷ್ಣರ ಜೀವನ ಚರಿತ್ರೆ’ ಕೂಡಾ ಒಂದು. ಸ್ವಯಂಘೋಷಿತ ಅನಾಸ್ತಿಕರಾದ ಕಾರಂತರು ಪರಮಹಂಸರನ್ನು ಕುರಿತ ಆ ಕೃತಿಯನ್ನು ಆಸ್ತಿಕರಾದ ತಮ್ಮ ತಾಯಿಗೋಸ್ಕರ ರಚಿಸಿದರಂತೆ. ಮನುಷ್ಯ ಮಾತ್ರವಲ್ಲ, ಈ ಲೋಕದ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ಕ್ರಿಮಿಕೀಟ, ಹುಳಹುಪ್ಪಟೆಗಳ ಸಮಸ್ತ ಜೀವಜಗತ್ತಿನ, LIFE WORLD ನ ಸ್ವಾಯತ್ತತೆಯನ್ನು ಪ್ರತಿಪಾದಿಸಿದವರು ಕಾರಂತರು. ‘ದಯೆಬೇಕು ಸಕಲ ಜೀವಂಗಳಲಿ’ ಎಂಬ ಮಾತನ್ನು ಅಕ್ಷರಶಃ ಪಾಲಿಸಿದವರು ಅವರು. ಪರಿಸರದ ಕುರಿತು ಅವರಿಗಿದ್ದ ಕಾಳಜಿ ಸಹ ಅವರ ಜೀವದಯೆಯಿಂದಲೇ ಹುಟ್ಟಿರುವಂತಹದ್ದು. ಹಾಗಿರುತ್ತ ಕಾರಂತರು ಬಾಬರಿ ಮಸೀದಿ ಧ್ವಂಸ ಮತ್ತು ಅದರ ನೆವದಲ್ಲಿ 1992 ಡಿಸೆಂಬರ್ 6ರ ಸಂಜೆಯೇ ಮುಂಬೈ ನಗರದಲ್ಲಿ ಶುರುವಾಗಿ 1993ರ ಮಾರ್ಚ್ ತಿಂಗಳವರೆಗೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಕೃತ್ಯಗಳ ಬಗ್ಗೆ ಯಾಕೆ ವೌನವಹಿಸಿದರು ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ. ರಾಮಜನ್ಮ ಚಳವಳಿ ಹುಟ್ಟುಹಾಕಿದ ಈ ಜೀವಹಿಂಸೆಯ ಸರಣಿ, ದೇಶಾದ್ಯಂತ ರಕ್ತಪಾತಕ್ಕೆ ಸ್ಫೂರ್ತಿ ನೀಡಿದ ಅಡ್ವಾಣಿಯವರ ರಥಯಾತ್ರೆ, ಬಾಬರಿ ಮಸೀದಿ ಧ್ವಂಸ, ಮುಂಬೈ ಹಿಂಸಾಕಾಂಡ, ಗುಜರಾತ್ 2002 ಮತ್ತು ನಂತರವೂ ಮುಂದುವರಿದಿದೆ. 2008ರಲ್ಲಿ ಒರಿಶಾದ ಕಂಧಮಾಲ್ ಜಿಲ್ಲೆಯ ಆದಿವಾಸಿ ಕ್ರೈಸ್ತರ ಮೇಲೆ ಹಲವು ತಿಂಗಳುಗಳ ಕಾಲ ನಡೆದ ಸಾಮೂಹಿಕ ಹಿಂಸೆ ಮತ್ತು 2013ರಲ್ಲಿ ಉತ್ತರ ಪ್ರದೇಶದ ಮುಝಫ್ಫರ್ ನಗರದ ಮುಸ್ಲಿಮರ ಮೇಲೆ ನಡೆದ ಹಿಂಸೆ - ಇವು ಕೂಡ ರಾಮಜನ್ಮ ಭೂಮಿ ಚಳವಳಿ ಹುಟ್ಟುಹಾಕಿದ ಹಿಂಸೆಯ ಕಂತುಗಳೇ ಆಗಿದೆ. ಮೊದಮೊದಲು ಒಂದು ದೃಶ್ಯವಾಗಿ, ದೇಖಾವೆಯಾಗಿ, ನಮ್ಮ ಕಣ್ಣುಗಳಿಗೆ ಒದಗುತ್ತಿದ್ದ ಈ ಹಿಂಸೆ ಈಗೀಗ ಹಾದಿಬೀದಿಗಳ ಸರ್ವೇ ಸಾಮಾನ್ಯ ವಿದ್ಯಮಾನವಾಗಿ ಬಿಟ್ಟಿದೆ; ದಿನನಿತ್ಯದ ಈ ಮುಖಹೀನ ಹಿಂಸೆಯನ್ನು ಯಾರೂ ಕಣ್ಣೆತ್ತಿ ಕೂಡ ನೋಡುವುದಿಲ್ಲ. 2017ರ ರಮಝಾನ್ ಮಾಸದ ಒಂದು ದಿನ, ದಿಲ್ಲಿಯ ಹೊರವಲಯದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗನೊಬ್ಬನನ್ನು ಅವನ ಸಹ ಪ್ರಯಾಣಿಕರೇ, ಹಣ್ಣು ಕತ್ತರಿಸುವ ಚಾಕುವಿನಲ್ಲಿ ಇರಿದು ಇರಿದು ಕೊಂದರು. ಆ ಹುಡುಗನಿಗೆ ಅವರ ಗುರುತು ಪರಿಚಯ ಇರಲಿಲ್ಲ. ಆ ಹುಡುಗ ಯಾರು, ಅವನ ಹೆಸರೇನು, ಎಲ್ಲಿಯವನು ಎಂದು ಆ ಪ್ರಯಾಣಿಕರಿಗೂ ಗೊತ್ತಿರಲಿಲ್ಲ. ಆದರೆ ಹುಡುಗ ಮುಸ್ಲಿಮ್ ಎಂಬುದು ತನ್ನ ತಲೆಯ ಮೇಲೆ ಅವನು ಧರಿಸಿದ್ದ ಟೋಪಿಯಿಂದ ಅವರಿಗೆ ಗೊತ್ತಾಗಿಬಿಟ್ಟಿತ್ತು; ಅದೊಂದೇ ಕಾರಣಕ್ಕೆ ರೈಲಿನಲ್ಲಿದ್ದ ಆ ಪ್ರಯಾಣಿಕರು ಅವನನ್ನು ಇರಿದು ಕೊಂದರು; ಆ ಹುಡುಗನ ನೆರವಿಗೆ ಯಾರೂ ಬರಲಿಲ್ಲ; ಅವನ ಹೆಸರು ಹಾಫಿಝ್ ಜುನೈದ್ ಖಾನ್; ಅಥವಾ ಅದು ಮುಹಮ್ಮದ್ ಅಖ್ಲಾಕ್, ಪೆಹ್ಲೂಖಾನ್, ರಕ್ಬಾರ್‌ಖಾನ್, ಅಫ್ರಜುಲ್ಲಾ, ಹುಸೇನಬ್ಬ - ಯಾವುದಾದರೂ ಆಗಬಹುದು. ಹಿಂಸೆ ದಿನನಿತ್ಯದ ಮಾಮೂಲು ಸಂಗತಿಯಾಗಿ ಬಿಡುವ ಈ ವಿದ್ಯಮಾನವನ್ನು ಬಾಬರಿ ಮಸೀದಿಯ ಧ್ವಂಸದ ಕಾಲಘಟ್ಟದಿಂದ ನಾವು ಗುರುತಿಸಬಹುದು. ಇದನ್ನು ಸೂಚ್ಯವಾಗಿ ಹೇಳುವ ಕಾರ್ನಾಡರ ಕತೆಯ ಒಂದು ತುಣುಕು ಇಲ್ಲಿದೆ; ರಿಝವಿ ನಿರ್ಮಿಸಲು ಉದ್ದೇಶಿಸಿದ್ದ ಕಾರಂತರ ಕಾದಂಬರಿ ಆಧಾರಿತ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ಅಭಿನಯಿಸಲಿದ್ದ ಭೂಷಣ, ಬಾಬರಿ ಮಸೀದಿ ಧ್ವಂಸವಾದ ಸುದ್ದಿಯನ್ನು ಸ್ವಾಗತಿಸುತ್ತಾನೆ. ಅದನ್ನು ಕಾರ್ನಾಡರು ವರ್ಣಿಸುವ ಬಗೆ ಹೀಗೆ:-

‘6 ಡಿಸೆಂಬರ್’, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಯಿತು. ಮಾರನೇ ದಿನ ಭೂಷಣ್ ಫೋನ್ ಮಾಡಿದ. ‘‘ಒಳ್ಳೆದಾಯ್ತು. ಅವರಿಗೆ ಹಾಗೇ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಕಲಿಯೋದಿಲ್ಲ’’ ಎಂದ. ‘ನನ್ನ ಕುಟುಂಬದವರು, ನೆಂಟರಿಷ್ಟರು, ಮಿತ್ರರು, ಎಲ್ಲ ಹೌದೆಂದು ತಲೆದೂಗುತ್ತಿದ್ದರು. ತನ್ನ ಹಿಂಸೆಗೇ ನಿಗುರಿ ವೀರ್ಯ ಸ್ಖಲನ ಮಾಡಿಕೊಂಡಿತ್ತು ನನ್ನ ಪರಿಸರ.’ (ಆಗೊಮ್ಮೆ ಈಗೊಮ್ಮೆ - ಪುಟ 12)

1993 ಜನವರಿ 10ರಂದು ಹಿಂದೂ ದೊಂಬಿಕಾರರ ಗುಂಪೊಂದು ದಲಾಲ್ ಎಸ್ಟೇಟ್‌ನಲ್ಲಿ ಭಾರೀ ಅನಾಹುತ ಮಾಡಿತು. ಈ ಗುಂಪು ಎಸ್ಟೇಟ್‌ನ ಆವರಣದ ಒಳಗೆ ನುಗ್ಗಿ ಕಟ್ಟಡಗಳ ಮೇಲೆ ಕಲ್ಲು ತೂರಲು ಆರಂಭಿಸಿತು. ಎಸ್ಟೇಟ್‌ನ ‘ಜಿ’ ಕಟ್ಟಡದಲ್ಲಿ ವಾಸವಾಗಿದ್ದ ಎರಡು ಮುಸ್ಲಿಮ್ ಮನೆಗಳ ಬಾಗಿಲು ಒಡೆದು ಗುಂಪಿನಲ್ಲಿದ್ದವರು ತಮ್ಮ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡರು. ಆನಂತರ ಅವರು ಆ ಮನೆಗಳಿಗೆ ಬೆಂಕಿಕೊಟ್ಟರು. ಇಡೀ ‘ಜಿ’ ಕಟ್ಟಡ ಹೊತ್ತಿ ಉರಿಯತೊಡಗಿತು. ಕಟ್ಟಡದ ಬಾಗಿಲುಗಳನ್ನೆಲ್ಲ ಹೊರಗಿನಿಂದ ಚಿಲಕ ಹಾಕಿ ಭದ್ರಪಡಿಸಿದ್ದರು.

‘ಅಳಿದ ಮೇಲೆ’ ಕತೆಯಲ್ಲಿ ಮಸೀದಿ ಧ್ವಂಸದ ಆರೆಸ್ಸೆಸ್ ಶೌರ್ಯವನ್ನು ಒಂದು ಲೈಂಗಿಕ ಪ್ರತಿಮೆಯ ಮುಖಾಂತರ ಲೇವಡಿ ಮಾಡುವ ಕಾರ್ನಾಡರು, ಈ ಕತೆಗೆ ಸಂವಾದಿ ಎಂಬಂತೆ ಬರೆದ ಇನ್ನೊಂದು ಕತೆಯ ಶೀರ್ಷಿಕೆ ‘ಮುಸಲಮಾನ ಬಂದ! ಮುಸಲಮಾನ ಬಂದ!’ ದೇಶಕಾಲ ವಿಶೇಷ - 2010 ಬೆಂಗಳೂರು ಪುಟ 17-20. ಆರೆಸ್ಸೆಸ್ ತನ್ನ ರಾಜಕೀಯ ಉದ್ದೇಶಗಳಿಗೋಸ್ಕರ ಅಮಾಯಕ ಜನರಲ್ಲಿ ಮುಸ್ಲಿಮ್ ಸಮುದಾಯದ ಕುರಿತು ಭಯ, ಉದ್ರೇಕಿಸುವುದನ್ನು ತನ್ನ ಈ ಕತೆಯಲ್ಲಿ ಕಾರ್ನಾಡರು ಚಿತ್ರಿಸುವ ಬಗೆ ವಿಶಿಷ್ಟವಾದದ್ದು. ಕಾರ್ನಾಡರು ಭಾವಾವೇಶದಲ್ಲಿ ಬರೆಯುವವರಲ್ಲ; ಅವರು ಸಿಟ್ಟಿನಲ್ಲಿ ಕೂಗಾಡುವವರೂ ಅಲ್ಲ. ‘ಮುಸಲಮಾನ ಬಂದ!’ ‘ಮುಸಲಮಾನ ಬಂದ!’ ಕತೆಯಲ್ಲಿ ಕಾರ್ನಾಡರು ಆರೆಸ್ಸೆಸ್ ಕುರಿತ ತಮ್ಮ ಸಿಟ್ಟನ್ನು ತಣಿಸಿ, ಆವೇಶವನ್ನು ಪಳಗಿಸಿ ಸಂಘವನ್ನು ಗೇಲಿ ಮಾಡಿ ನಗುತ್ತಾರೆ. ಆ ಕತೆಯನ್ನು ಓದಿದ ಯಾವ ಆರೆಸ್ಸೆಸ್ ದೇಶಭಕ್ತನೂ, ಖಂಡಿತ ಜೀವಮಾನ ಪರ್ಯಂತ ಕಾರ್ನಾಡರನ್ನು ಕ್ಷಮಿಸುವುದಿಲ್ಲ. ಕೋಮುಹಿಂಸೆಯ ಗುಣಲಕ್ಷಣಗಳು ಮತ್ತು ಬಾಬರಿ ಮಸೀದಿ ಧ್ವಂಸದ ನಂತರ ಹಿಂಸೆ ಪಡೆದುಕೊಳ್ಳುತ್ತಿರುವ ಸ್ವರೂಪವನ್ನು ಮುಂಬೈ ಹಿಂಸಾಕಾಂಡದ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ಶ್ರೀ ಬಿ.ಎನ್. ಶ್ರೀಕೃಷ್ಣ ಆಯೋಗ, ಸರಕಾರಕ್ಕೆ ಸಲ್ಲಿಸಿದ ವರದಿ, ನಿಚ್ಚಳವಾಗಿ ಕಾಣಿಸುತ್ತದೆ. ಹೇಳಿ ಕೇಳಿ ಅದು ಒಂದು ನ್ಯಾಯಾಂಗ ತನಿಖೆಯ ಅಫಿಷಿಯಲ್ ವರದಿ. ಅದರ ಭಾಷೆ, ಪರಿಭಾಷೆ ನುಡಿಗಟ್ಟುಗಳೆಲ್ಲ ಕೋರ್ಟು, ಕಚೇರಿ ಮತ್ತು ಪೊಲೀಸ್ ಠಾಣೆಗಳಲ್ಲಿ ನಿತ್ಯ ಬಳಕೆಯಾಗುವ ಮಾಹಿತಿ ರವಾನಿಸುವುದಕ್ಕೆ ಮಾತ್ರ ಸೀಮಿತಗೊಂಡ ಒಣಗಿದ ರಿಕ್ತ. ಭಾಷೆ ಆದರೆ ಅಗ್ರಿಪಾದದಿಂದ ತೊಡಗಿ ವಿ.ಪಿ.ರೋಡ್‌ವರೆಗೆ, ಮುಂಬೈ ನಗರದ 26 ಪೊಲೀಸ್ ಠಾಣೆಗಳ ವ್ಯಾಪ್ತಿಯೊಳಗೆ ನಡೆದ ಹಿಂಸಾಕೃತ್ಯಗಳ ಕರಾಳತೆ ಮತ್ತು ಅರ್ಥಹೀನತೆಗಳನ್ನು ನಿರೂಪಿಸುವ ಈ ವರದಿಗೆ ಭಾಷೆಯ ಕುಸುರಿ ಕೆಲಸದ ಅಗತ್ಯವೇ ಇಲ್ಲ. ಡೆಮ್ಮಿ 1/5 ಸೈಜಿನ 323 ಪುಟಗಳ ಆ ಸುದೀರ್ಘ ವರದಿಯ ಸಣ್ಣ ತುಣುಕೊಂದನ್ನು ಮಾತ್ರ ಇಲ್ಲಿ ಉದಾಹರಿಸಲಾಗಿದೆ. ಇದು ಮುಂಬೈಯ ನಾಗ್‌ಪಾಡಾ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯ ವರದಿ: 

ನಾಗ್‌ಪಾಡಾ ಪೊಲೀಸ್ ಠಾಣೆ

22.23 - 1993 ಜನವರಿ 10ರಂದು ಹಿಂದೂ ದೊಂಬಿಕಾರರ ಗುಂಪೊಂದು ದಲಾಲ್ ಎಸ್ಟೇಟ್‌ನಲ್ಲಿ ಭಾರೀ ಅನಾಹುತ ಮಾಡಿತು. ಈ ಗುಂಪು ಎಸ್ಟೇಟ್‌ನ ಆವರಣದ ಒಳಗೆ ನುಗ್ಗಿ ಕಟ್ಟಡಗಳ ಮೇಲೆ ಕಲ್ಲು ತೂರಲು ಆರಂಭಿಸಿತು. ಎಸ್ಟೇಟ್‌ನ ‘ಜಿ’ ಕಟ್ಟಡದಲ್ಲಿ ವಾಸವಾಗಿದ್ದ ಎರಡು ಮುಸ್ಲಿಮ್ ಮನೆಗಳ ಬಾಗಿಲು ಒಡೆದು ಗುಂಪಿನಲ್ಲಿದ್ದವರು ತಮ್ಮ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡರು. ಆನಂತರ ಅವರು ಆ ಮನೆಗಳಿಗೆ ಬೆಂಕಿಕೊಟ್ಟರು. ಇಡೀ ‘ಜಿ’ ಕಟ್ಟಡ ಹೊತ್ತಿ ಉರಿಯತೊಡಗಿತು. ಕಟ್ಟಡದ ಮರದ ಪಾವಟಿಗೆಗಳಿಗೆ ಅವರು ಪೆಟ್ರೋಲ್ ಚಿಮುಕಿಸಿ ಬೆಂಕಿ ಕೊಟ್ಟರು, ಕಟ್ಟಡದ ಬಾಗಿಲುಗಳನ್ನೆಲ್ಲ ಹೊರಗಿನಿಂದ ಚಿಲಕ ಹಾಕಿ ಭದ್ರಪಡಿಸಿದ್ದರು. 22.24

 ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿರುವ ಅರವಿಂದ ಪ್ರಭುದಾಸ್ ಸೋಲಂಕಿ, ದಲಾಲ್ ಎಸ್ಟೇಟ್‌ನ ‘ಡಿ’ ಬ್ಲಾಕಿನ ಮನೆಯೊಂದರಲ್ಲಿ ವಾಸವಾಗಿದ್ದು ಅಂದು ನಡೆದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾರೆ. ಅವರು ಹೇಳುವಂತೆ ಆ ಬ್ಲಾಕಿನ ಮನೆಯೊಂದರಲ್ಲಿ ಅಂಗುಟಿಮಾಲಾ ಎಂಬ ಹೆಸರಿನ ಮುಸ್ಲಿಮ್ ಗೃಹಸ್ಥರೊಬ್ಬರು ವಾಸವಾಗಿದ್ದಾರೆ. ದೊಂಬಿಕೋರರು ಆ ಮನೆಯನ್ನು ಪೂರ್ತಿ ಲೂಟಿ ಮಾಡಿದರು. ಕಟ್ಟಡಕ್ಕೆ ಅವರು ಬೆಂಕಿ ಕೊಟ್ಟರು. ಆ ಬೆಂಕಿಯನ್ನು ನೋಡುವುದಕ್ಕೆ ಮೊದಲೇ ಸೋಲಂಕಿ ಅವರಿಗೆ ಪೆಟ್ರೋಲ್‌ನ ವಾಸನೆ ಮೂಗಿಗೆ ಬಡಿಯಿತು. ಬೆಂಕಿಯಿಂದ ತಪ್ಪಿಸಿಕೊಂಡು ಹೊರಗೆ ಓಡಿಬರಲು ಅವರು ಯತ್ನಿಸಿದರು. ಆದರೆ ಬಾಗಿಲು ಹೊರಗಿನಿಂದ ಚಿಲಕ ಹಾಕಿತ್ತು. ಅವರು ಬಲ ಹಾಕಿ, ಜಗ್ಗಾಡಿ ಹೇಗೋ ಬಾಗಿಲು ತೆರೆದು ಹೊರಗೆ ಓಡಿ ಬಂದು ಇತರ ಮನೆಗಳ ಬಾಗಿಲುಗಳನ್ನು ತೆರೆದರು; ಕಟ್ಟಡಕ್ಕೆ ಹತ್ತಿದ ಬೆಂಕಿಯ ಬಗ್ಗೆ ಆ ಮನೆಗಳ ಒಳಗಿದ್ದವರಿಗೆ ಕೂಗಿ ಕೂಗಿ ಹೇಳಿದರು. ಮನೆಗಳ ಒಳಗಿದ್ದವರು ಹೊರಗೆ ಓಡಿ ಬಂದರು. ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಎಸ್ಟೇಟ್‌ನ ‘ಜಿ’ ಕಟ್ಟಡದ 4ನೆಯ ಮಹಡಿಯಲ್ಲಿ ವಾಸವಾಗಿದ್ದ ಪಾರ್ಸಿ ದಂಪತಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ಉಳಿದವರಿಗೆ ಗೊತ್ತಾಯಿತು. ಆ ಕಟ್ಟಡದಲ್ಲಿ ಮನೆ ಮಾಡಿಕೊಂಡಿದ್ದ ಕೆಲವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಬಾಲ್ಕನಿಯಿಂದ ಹೊರಗೆ ಹಾರಿದ್ದರು. 78ರ ಹರೆಯದ ಆಸುಪಾಸಿನಲ್ಲಿದ್ದ ಆ ಪಾರ್ಸಿ ದಂಪತಿಗೆ ಬಾಲ್ಕನಿಯಿಂದ ಹೊರಗೆ ಹಾರಿ ಬೆಂಕಿಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಕಟ್ಟಡಗಳ ಮೆಟ್ಟಲುಗಳು ಅದಾಗಲೇ ಹೊತ್ತಿ ಉರಿಯುತ್ತಿದ್ದುದರಿಂದ ಮೆಟ್ಟಲು ಇಳಿದು ಹೊರಗೆ ಬರಲು ಸಹ ಅವರಿಗೆ ಸಾಧ್ಯವಿರಲಿಲ್ಲ; ಗಂಡಹೆಂಡತಿ ಇಬ್ಬರೂ ಬೆಂಕಿಯಲ್ಲಿ ಸಜೀವ ಸುಟ್ಟು ಹೋದರು.DAMNING VERDICT-REPORT OF THE JUSTICE B.N. SRIKRISHNA COMMISSION FOR INQUIRY INTO THE RIOTS AT MUMBAI. SABRANG COMMUNICATIONS AND PUBLISHING PVT. ಪುಟ 169

1992-93ರ ಮುಂಬೈ ಗಲಭೆ ಹತ್ತಿರ ಹತ್ತಿರ 1,000 ಜನರನ್ನು ಬಲಿತೆಗೆದುಕೊಂಡಿತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಆಲಾಯದ ಹೇಳಬೇಕಾಗಿಲ್ಲ. ಆಗ ಮಹಾರಾಷ್ಟ್ರದ ಎರಡು ಪ್ರಮುಖ ವಿರೋಧಪಕ್ಷಗಳಾಗಿದ್ದ, ಬಿಜೆಪಿ ಹಾಗೂ ಶಿವ ಸೇನಾ ಈ ಗಲಭೆಗಳ ನೇತೃತ್ವವಹಿಸಿದ್ದವು. ಆಳುವ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷದ ರಾಜಕಾರಣಿ ಗಳು ಒಂದೋ ಆ ಗಲಭೆಗಳಿಗೆ ಮೂಕ ಪ್ರೇಕ್ಷಕರಾಗಿದ್ದರು ಅಥವಾ ಸ್ವತಃ ಅವರೇ ಗಲಭೆಗಳಲ್ಲಿ ಶಾಮೀಲಾಗಿದ್ದರು; ಕೆಲವೊಮ್ಮೆ ಭಾಗಿಗಳೂ ಆಗಿದ್ದಿದೆ. ಮುಂಬೈಯ ಪೊಲೀಸ್ ಸಿಬ್ಬಂದಿಯಲ್ಲಿ ಹೆಚ್ಚಿನವರು ದೊಂಬಿಕೋರರ ಜೊತೆ ಸೇರಿಕೊಂಡು ಲೂಟಿ, ಮುಸ್ಲಿಮರ ಆಸ್ತಿಪಾಸ್ತಿಗೆ ಬೆಂಕಿಕೊಡುವುದು, ಮಾರಾಮಾರಿ ಮುಂತಾದವುಗಳಲ್ಲಿ ಪಾಲುಗೊಂಡರು. ಶ್ರೀಕೃಷ್ಣ ಆಯೋಗದ ವರದಿ ಈ ಎಲ್ಲ ವಿದ್ಯಮಾನಗಳನ್ನು ಸಾದ್ಯಂತ ನಿರೂಪಿಸುತ್ತದೆ; ತನ್ನ ನಿರ್ಣಯಗಳಿಗೆ ಸಾಕ್ಷಾಧಾರಗಳನ್ನು ಒದಗಿಸುತ್ತದೆ; ಗಲಭೆಗಳಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸರಕಾರಿ ಅಧಿಕಾರಿಗಳನ್ನು ಅದು ಹೆಸರಿಸಿದೆ. ಆದರೆ 1992-93ರ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಯಾವ ಸರಕಾರವೂ-ಅದು ಕಾಂಗ್ರೆಸ್‌ನದ್ದೇ ಆಗಲಿ, ಬಿಜೆಪಿ, ಶಿವಸೇನೆಗಳ ಒಕ್ಕೂಟದ್ದೇ ಆಗಲಿ- ಈ ವರದಿಯನ್ನು ಕಾರ್ಯಗತಗೊಳಿಸುವ ಗೋಜಿಗೆ ಹೋಗಿಲ್ಲ. ಜನ ಸಾಮಾನ್ಯರಂತೂ 92ರ ಆ ಕೆಟ್ಟ ದಿನಗಳನ್ನು ಮರೆತೇ ಬಿಟ್ಟಿದ್ದಾರೆ. ಮುಂಬೈ ಹಿಂಸಾಕಾಂಡದ ಕುರಿತ ಶ್ರೀಕೃಷ್ಣ ಆಯೋಗದ ವರದಿ, ಹಿಂಸಾಕೃತ್ಯಗಳ ನಿರೂಪಣೆಯ ಜೊತೆಗೆ ಆ ಹಿಂಸೆಯ ಬಗ್ಗೆ ಪ್ರಭುತ್ವ ಮತ್ತು ಪ್ರಜೆಗಳ ಸಂವೇದನ ಶೂನ್ಯತೆಯನ್ನು ಸಹ ನಮ್ಮ ಮನಗಾಣಿಸುತ್ತದೆ. ಸಂವೇದನೆಯನ್ನು ಚುರುಕುಗೊಳಿಸುವ ಸಂಸ್ಕೃತಿ, ತಾನೇ ಜಡವಾದರೆ ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆಯೇ? ತನ್ನ ಕತೆಯಲ್ಲಿ ಗಿರೀಶ್ ಬರೆಯುತ್ತಾರೆ. ‘‘ಬಾಬರಿ ಮಸೀದಿಯ ವಿನಾಶದಂಥ ಘಟನೆ ಎಂದೂ ಒಬ್ಬಂಟಿಯಾಗಿ ನಿಲ್ಲುವುದಿಲ್ಲ. ಅದು ಪಿಡುಗಿನಂತೆ ನಮ್ಮ ಸಂಸ್ಕೃತಿಯ ಪ್ರತಿ ಅಂಶವನ್ನೂ ಕಲುಷಿತಗೊಳಿಸುತ್ತದೆ. ಮೂವತ್ತೆರಡು ವರ್ಷಗಳ ಹಿಂದೆಯೇ ಬರೆದ ಒಂದು ಕನ್ನಡ ಸಾಹಿತ್ಯ ಕೃತಿಯನ್ನು ಕೂಡ’’

(ಆಗೊಮ್ಮೆ ಈಗೊಮ್ಮೆ ಪುಟ 114)

ಈ ಲೇಖನ ಮುಗಿಸುವ ಮೊದಲು ಪ್ರಾರಂಭದಲ್ಲೇ ಪ್ರಸ್ತಾಪಿಸಿದ ‘ಪಾಲಿಟಿಕಲ್ ಕರೆಕ್ಟ್’ ನಿಲುವಿನ ಬಗ್ಗೆ ಒಂದೆರಡು ಮಾತು. ಶಿವರಾಮ ಕಾರಂತರ ‘ಅಳಿದ ಮೇಲೆ’ ಕಾದಂಬರಿಯನ್ನು ಅದೇ ಹೆಸರಿನ ಗಿರೀಶ್ ಕಾರ್ನಾಡರ ಕತೆಯ ಓದಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅರ್ಥೈಸಲು ಮತ್ತು ಕಾರಂತರ ಘೋಷಿತ ರಾಜಕೀಯ ನಿಲುವುಗಳ ಕುರಿತು ಚರ್ಚಿಸಲು ಬರೆದಿರುವ ಈ ಲೇಖನದ್ದು ಪಾಲಿಟಿಕಲ್ ಕರೆಕ್ಟ್ ನಿಲುವು ಎಂದು ಹೇಳಬಹುದೇ? ನನಗೆ ಗೊತ್ತಿಲ್ಲ. ಇಷ್ಟಕ್ಕೂ ಪಾಲಿಟಿಕಲ್ ಕರೆಕ್ಟ್ ನಿಲುವು ಎಂದರೆ ನಿಖರ ವಾಗಿ ಏನು? ಕೇಂದ್ರದಲ್ಲಿ ಆರೆಸ್ಸೆಸ್‌ಗೆ ಶರಣಾಗಿರುವ, ಹಿಂದುತ್ವಕ್ಕೆ ಬದ್ಧವಾಗಿರುವ ಒಂದು ಅಘೋಷಿತ ಸರ್ವಾಧಿಕಾರದ ಸರಕಾರ ಮತ್ತು ರಾಜ್ಯದಲ್ಲಿ ಐಸಿಯುನಲ್ಲಿ ಇರುವಂತೆ ಭಾಸವಾಗುವ ಒಂದು ಸೋ ಕಾಲ್ಡ್ ಸೆಕ್ಯುಲರ್ ಸರಕಾರ ಇರುವಾಗ ಪಾಲಿಟಿಕಲ್ ಕರೆಕ್ಟ್ ನಿಲುವು ಎಂದರೆ, ಯಾರಿಗೆ ಸಮ್ಮತವಾಗುವ ನಿಲುವು? ಬಲ್ಲವರು ಹೇಳಬೇಕು.

(ಮಣಿಪಾಲದ ಮಾಹೆ ಪ್ರಾಯೋಜಿತ ಸಾಹಿತ್ಯ ಮತ್ತು ಕಲಾಮೇಳ ‘ಮಿಲಾಪ್’ನ ಅಂಗವಾಗಿ ತಾ. 6-9-2018ರಂದು ನಡೆದ ವಿಚಾರ ಸಂಕಿರಣದಲ್ಲಿ ಓದಲಾದ ಪ್ರಬಂಧ.)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top