20 ಮಹತ್ವದ ಕೃತಿಗಳ ಸಂಕ್ಷಿಪ್ತ ಪರಿಚಯ

ಪುಟಗಳ ನಡುವಿನ ಪರಿಮಳ

-

ಮೋಹನ್ ಜಿ.ಎನ್.

ಹಿರಿಯ ಪತ್ರಕರ್ತರಾಗಿರುವ ಜಿ.ಎನ್. ಮೋಹನ್ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳ ನಡುವೆ ಸಮನ್ವಯ ಸಾಧಿಸಿದವರು. ಸ್ವತಃ ಲೇಖಕರು ಪ್ರಕಾಶಕರಾಗಿಯೂ ಗುರುತಿಸಿಕೊಂಡವರು. ಕವಿಯಾಗಿಯೂ ಗಮನ ಸೆಳೆದಿರುವ ಮೋಹನ್ ಅವರ ಕವನ ಸಂಕಲನ ‘ಪ್ರಶ್ನೆ ಇರುವುದು ಶೇಕ್ಸ್ ಪಿಯರ್‌ನಿಗೆ’. ಅವರ ‘ನನ್ನೊಳಗಿನ ಹಾಡು ಕ್ಯೂಬಾ’ ಅಪಾರ ಓದುಗರನ್ನು ಪಡೆದ ಪ್ರವಾಸ ಕಥನ. ಪಿ. ಸಾಯಿನಾಥ್ ಬರಹಗಳು ಕನ್ನಡಕ್ಕೆ ಚಿರಪರಿಚಿತರಾಗುವುದಲ್ಲಿ ಮೋಹನ್ ಅವರ ಅನುವಾದದ ಕೊಡುಗೆ ದೊಡ್ಡದು. ‘ಅವಧಿ’ ವೈಬ್‌ಸೈಟ್ ಮೂಲಕ ಕನ್ನಡವನ್ನು ಮನ, ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ನನಗೆ ಯಾಕೋ ಗೊತ್ತಿಲ್ಲ ನ್ಯಾಯಮೂರ್ತಿ ಗಳಾಗಿದ್ದ ಎಚ್.ಎನ್. ನಾಗಮೋಹನ್ ದಾಸ್ ಅವರು ಹೇಳಿದ್ದು ಮತ್ತೆ ಮತ್ತೆ ನೆನಪಿಗೆ ಬರುತ್ತಾ ಇರುತ್ತದೆ. ಒಂದು ದಿನ ನಾನೂ ಅವರು ಕುಪ್ಪಳಿಗೆ ಹೋಗಲು ದಿಢೀರ್ ತೀರ್ಮಾನ ಮಾಡಿ ಹೆದ್ದಾರಿಯ ಮೈಲಿಗಲ್ಲುಗಳನ್ನು ಹಿಂದೆ ಹಾಕುತ್ತಾ ಸಾಗಿದ್ದೆವು. ಆಗ ಇದ್ದಕ್ಕಿದ್ದಂತೆ ಅವರು ‘ಮೋಹನ್ ನನಗೆ ಒಂದು ಆಸೆ ಇದೆ’ ಎಂದರು. ಏನು ಸಾರ್? ಎಂದೆ. ‘ನನ್ನ ಮುಂದೆ ಒಂದು ವ್ಯಾಜ್ಯ ಬರಬೇಕು. ನನ್ನ ಹಿರಿಯರು ಸಂಗ್ರಹಿಸಿದ ಪುಸ್ತಕಗಳು ನನ್ನ ಪಾಲಾಗಬೇಕು ಅಂತ’ ಎಂದರು. ನಾನು ಬೆರಗುವೊಡೆದು ಹೋದೆ. ಅವರು ಮುಂದುವರಿಸಿದರು. ನಾನು ಎಷ್ಟೊಂದು ವಾದ ವಿವಾದಗಳನ್ನು ಆಲಿಸಿದ್ದೇನೆ. ಆಸ್ತಿಗಾಗಿ ಕಿತ್ತಾಡಿಕೊಂಡ, ಪರರ ಆಸ್ತಿ ಹೊಡೆದುಕೊಂಡ, ನೆರೆಮನೆಯವನ ಜಾಗವನ್ನು ಒತ್ತರಿಸಿಕೊಂಡ, ಖಾಲಿ ಇದ್ದ ಸೈಟ್ ಅನ್ನು ಕಬ್ಜ ಮಾಡಿಕೊಂಡ ವಿವಾದಗಳು... ಆಗೆಲ್ಲಾ ನನಗೆ ಈ ಆಸೆ ತಲೆ ಎತ್ತುತ್ತದೆ. ಪುಸ್ತಕವನ್ನೂ ಒಂದು ಆಸ್ತಿ ಎಂದುಕೊಳ್ಳುವ, ಅದು ನನಗೆ ಬೇಕು ಎಂದು ಹಂಬಲಿಸುವ ಕಾಲ ಬರಬಾರದೇ ಎಂದು..’ ಎಂದರು.

ನನ್ನ ಮನೆ ಆರ್ಥಾತ್ ‘ಡೋರ್ ನಂ 142’ರ ಒಳಗೆ ಬಂದರೆ ನಿಮಗೆ ಸಿಗುವುದು ಪುಸ್ತಕ, ಪುಸ್ತಕ ಮತ್ತು ಪುಸ್ತಕ ಮಾತ್ರ. ನಾವು ಬಾರ್ಬಿ ಗೊಂಬೆಗಳ ಜೊತೆ ಆಡಿ ಬೆಳೆಯಲಿಲ್ಲ, ಅಂಕಲ್ ಚಿಪ್ಸ್ ನಮ್ಮ ಆಸೆಯಾಗಿರಲಿಲ್ಲ, ವೈಭವದ ಹೋಟೆಲ್ ಊಟ ನಮ್ಮ ಕನಸಾಗಿರಲಿಲ್ಲ. ಮೊಬೈಲ್, ಕಂಪ್ಯೂಟರ್, ವೀಡಿಯೊ ಗೇಮ್ ಕಾಲಿಟ್ಟರಲೇ ಇಲ್ಲ. ನಮ್ಮ ಕನಸು ಪುಸ್ತಕ ಮಾತ್ರವಾಗಿತ್ತು. ಹುಟ್ಟುಹಬ್ಬ ಬಂದರೆ ಪುಸ್ತಕದ ಗಿಫ್ಟ್, ಶಾಲೆಯಲ್ಲಿ ತೇರ್ಗಡೆಯಾದರೆ ಪುಸ್ತಕ, ಭಾಷಣ ಸ್ಪರ್ಧೆಯಲ್ಲಿ ಗೆದ್ದರೆ ಪುಸ್ತಕ, ಮನಸ್ಸು ಭಾರವಾದಾಗ ಸಾಂತ್ವನಕ್ಕೂ ಪುಸ್ತಕ, ರಜಾ ಬಂದರೆ ಪುಸ್ತಕ.. ಹೀಗಾಗಿಯೇ ನಮ್ಮ ಮನೆಯಲ್ಲಿ ಅಮ್ಮನಿಂದ ಹಿಡಿದು ತಂಗಿಯವರೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಪುಸ್ತಕ ಸಂಗ್ರಹವಿದೆ. ಅವರವರ ಬದುಕಿಗೆ ಅವರವರದ್ದೇ ಆಯ್ಕೆಯ ಪುಸ್ತಕ ಕಂದೀಲುಗಳು. ಮನೆ ಪುಸ್ತಕಗಳಿಂದ ಅಕ್ಷರಶಃ ತುಂಬಿ ತುಳುಕಿದೆ. ಇಟ್ಟುಕೊಂಡಿರುವ ಪುಸ್ತಕ ಹೆಚ್ಚಾಗಿ ಉಡುಗೊರೆ ಕೊಟ್ಟದ್ದೂ ಇದೆ. ಕೋಣೆ ತುಂಬಿ ಜಾಗ ಇಲ್ಲವಾದಾಗ ಪುಸ್ತಕ ಮಳಿಗೆಗೆ ಬೀಳ್ಕೊಟ್ಟದ್ದೂ ಇದೆ. ಗೆಳೆಯರು ತಮ್ಮ ಊರುಗಳಲ್ಲಿ, ಹಲವು ಶಾಲೆಗಳಿಗೆ ಲೈಬ್ರರಿಗಳಿಗೆ ಕೊಡುಗೆಯಾಗಿ ಪುಸ್ತಕ ಕೊಟ್ಟದ್ದೂ ಇದೆ. ಹೀಗೆ ಪುಸ್ತಕಗಳು ಮಾತ್ರವೇ ನಮ್ಮ ಅಕ್ಷಯ ಪಾತ್ರೆಗಳು. ದ್ರೌಪದಿಯ ಮಾನ ಉಳಿಸಿದ ಅಕ್ಷಯ ಪಾತ್ರೆ ನಮ್ಮಲ್ಲಿಲ್ಲ, ಆದರೆ ಮಾನವಂತರನ್ನಾಗಿ ಮಾಡಿದ ಅಕ್ಷಯ ಪಾತ್ರೆ ನಮ್ಮ ಮನೆಯ ಪ್ರತಿಯೊಬ್ಬರ ಬಳಿಯೂ ಇದೆ. ‘ವಾರ್ತಾಭಾರತಿ’ಯ ಕಾರಣಕ್ಕೆ ಆ ಅಕ್ಷಯ ಪಾತ್ರೆಯಿಂದ ಒಂದು 20 ಅಗುಳು ಹೆಕ್ಕಲು ಹೊರಟೆ. ಪರಿಣಾಮ ಅವರು ಕೊಟ್ಟ ಗಡುವನ್ನು ದಿನಗಟ್ಟಲೆ ಉಲ್ಲಂಘಿಸಿದ್ದು ಅಷ್ಟೇ. ಒಂದಲ್ಲಾ ಒಂದು ಕಾರಣಕ್ಕೆ ಈ ಎಲ್ಲ ಪುಸ್ತಕಗಳೂ ನನಗೆ ಇಷ್ಟವೇ. ಬೇರೆಯವರು ಯಾವುದು ಓದಬೇಕು ಎಂದು ಕೇಳಿದರೆ ನಾನು ನನ್ನಲ್ಲಿರುವ ಎಲ್ಲಾ ಪುಸ್ತಕಗಳ ಹೆಸರನ್ನೂ ಹೇಳಿಯೇನು. ಹಾಗಾಗಿ 20 ಪುಸ್ತಕ ಮಾತ್ರ ಹೆಕ್ಕುವ ಕೆಲಸವನ್ನು ಇನ್ನೆಂದೂ ಒಪ್ಪಿಕೊಳ್ಳಲಾರೆ ಎಂದು ಶಪಥ ಮಾಡಿಬಿಟ್ಟೆ. ಆದರೆ ಒಂದು ದೊಡ್ಡ ಲಾಭ ಇದರಿಂದ ನನಗೆ ಆಗಿ ಹೋಯಿತು. ನನ್ನ ಸಂಗ್ರಹದ ಇತ್ತೀಚಿನ ಕೃತಿಗಳನ್ನು ಮಾತ್ರವಷ್ಟೇ ತಡಕಿದಾಗಲೂ ನನಗೆ ಗೋಚರವಾದದ್ದು ನಾನು ಓದುವ ರೀತಿ ಬದಲಾಗಿದೆ, ನನ್ನ ಆಯ್ಕೆಯ ವಿಷಯಗಳು ಬದಲಾಗಿದೆ, ನಾನು ಸೃಜನಶೀಲ ಕೃತಿಗಳನ್ನು ಪಕ್ಕಕ್ಕೆ ಸರಿಸಿ ಸಾಕಷ್ಟು ಕಾಲವೇ ಆಗಿ ಹೋಗಿದೆ. ಸಮಕಾಲೀನ ವಿಚಾರಗಳು ನನ್ನನ್ನು ಹೆಚ್ಚು ಕಾಡಿದೆ. ಅದರಲ್ಲೂ ಸೈಬರ್ ಲೋಕದ ದಿಢೀರ್ ಬೆಳವಣಿಗೆಯಿಂದಾಗಿ ನಾನು ಹೆಚ್ಚೆಚ್ಚು ಅದರ ಪರಿಣಾಮಗಳತ್ತ ಮನ ಕೊಟ್ಟಿದ್ದೇನೆ, ‘ಆ್ಯಂಟಿ ನ್ಯಾಷನಲ್’ ‘ಪಾಕಿಸ್ತಾನಕ್ಕೆ ಟಿಕೆಟ್ ಕೊಡಿಸುತ್ತೇನೆ’ ಅಂಕಿ ಸಂಖ್ಯೆಗಳ ಮೂಲಕ ಮಾಡುವ ಕಣ್ಣುಕಟ್ಟು, ಹುಂಬತನವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುವ ಮಾಧ್ಯಮಗಳು ನನ್ನ ಟಾಪ್ ಓದಿನ ಆಯ್ಕೆಗಳಾಗಿವೆ.

ಈ ಆಯ್ಕೆಯ ಒಂದು ಝಲಕ್ ಮಾತ್ರ ನಿಮ್ಮ ಮುಂದಿಟ್ಟಿದ್ದೇನೆ. ಆದಷ್ಟೂ ತೀರಾ ಇತ್ತೀಚೆಗಿನ ಕೃತಿಗಳನ್ನು ಪರಿಚಯಿಸಿದ್ದೇನೆ, ಇಂಗ್ಲಿಷ್ ಪುಸ್ತಕಗಳನ್ನು ಮಾತ್ರ ಆಯ್ದುಕೊಳ್ಳಲು ಒಂದು ಕಾರಣ ಆ ಲೋಕದಲ್ಲಿ ಬರುತ್ತಿರುವ ವಿಚಾರ ವೈವಿಧ್ಯ ಗೊತ್ತಾಗಲಿ ಎನ್ನುವುದು. ಇಲ್ಲಿನ 30 ಪುಸ್ತಕಗಳ ಆಯ್ಕೆ ಬೆಸ್ಟ್ ಅಥವಾ ಟಾಪ್ 30 ಪಟ್ಟಿಯಲ್ಲ. ಈ ಪುಸ್ತಕ ಪರಿಚಯಿಸುವಾಗಲೂ ಮೊದಲು ಪರಿಚಯಿಸಿರುವುದು ದಿ ಬೆಸ್ಟ್ ಎಂದುಕೊಳ್ಳಬೇಡಿ. ನನ್ನ ಸಂಗ್ರಹದಲ್ಲಿರುವ ಪುಸ್ತಕಗಳ ಪೈಕಿ ಹೆಕ್ಕಿ ಕೊಟ್ಟಿರುವುದು, ವಿಷಯ ವೈವಿಧ್ಯತೆ ಆಧಾರದ ಮೇಲೆ ಹೆಕ್ಕಿರುವುದು ಅಷ್ಟೇ.. ಈ ಒಂದು ಪ್ರಯತ್ನ ನೀವು ನಿಮ್ಮ ಪುಸ್ತಕಗಳ ರಾಶಿಯಿಂದ ನಮಗೂ ಒಂದಷ್ಟು ಪುಸ್ತಕಗಳನ್ನು ಪರಿಚಯಿಸಲಿ ಎನ್ನುವುದು.

01 Mahatma on the pitch

   Kausik Bandyopadhyay

ಮಹಾತ್ಮಾ ಗಾಂಧಿಗೂ ಕ್ರಿಕೆಟ್‌ಗೂ ಏನು ಸಂಬಂಧ? ಎನ್ನುವುದೇ ಹುಬ್ಬೇರಿಸುವ ಪ್ರಶ್ನೆ. ಆದರೆ ಕೌಶಿಕ್ ಬಂಧೋಪಾಧ್ಯಾಯ ಈ ಕೃತಿಯಲ್ಲಿ ಗಾಂಧಿಗೂ ಕ್ರಿಕೆಟ್‌ಗೂ ಇದ್ದ ಸಂಬಂಧವನ್ನು ಬಿಡಿಸಿಟ್ಟಿದ್ದಾರೆ. ಕ್ರಿಕೆಟ್‌ನಲ್ಲಿ ಇಣುಕಲು ಸಿದ್ಧವಾಗಿದ್ದ ಕೋಮು ದುರ್ವಾಸನೆಯನ್ನು ಹತ್ತಿಕ್ಕಿದ್ದು ಗಾಂಧಿ. ಬ್ರಿಟಿಷರು ಕೋಮು ಆಧಾರದ ಮೇಲೆ ಕ್ರಿಕೆಟ್ ಟೀಮ್ ರಚಿಸಿ ಒಂದು ಧರ್ಮದ ಟೀಮ್ ಇನ್ನೊಂದು ಧರ್ಮದ ಟೀಮ್ ಮೇಲೆ ಕ್ರಿಕೆಟ್ ಆಡಿಸಲು ಹೊರಟಾಗ ಅದನ್ನು ತೀವ್ರವಾಗಿ ಪ್ರತಿಭಟಿಸಿ ನಿಲ್ಲಿಸುತ್ತಾರೆ. ಕ್ರಿಕೆಟ್‌ನೊಳಗಿದ್ದ ಅಸ್ಪಶ್ಯತೆಯನ್ನು ಮನಗಂಡು ಅದರಲ್ಲಿ ಜಾತ್ಯತೀತ ಕಲ್ಪನೆ ನೀಡಲು ಶ್ರಮಿಸುತ್ತಾರೆ. ಕ್ರಿಕೆಟ್ ಹಾಗೂ ಧರ್ಮ ಎರಡೂ ಗಾಢವಾಗಿ ಕೈ ಜೋಡಿಸಿರುವ ಈ ದಿನಗಳಲ್ಲಿ ಈ ಕೃತಿ ಮಹತ್ವದ್ದು.

02 Reshaping Art

     T.M. Krishna

ಸಂಗೀತವನ್ನು ಜಾತಿ ಸಂಕೋಲೆಯಿಂದ ಹೊರಗೆ ತರಲು ತೀವ್ರವಾಗಿ ಯತ್ನಿಸುತ್ತಿರುವವರು ಟಿ.ಎಂ. ಕೃಷ್ಣ. ಸಂಗೀತ ಲೋಕದ ಮಡಿವಂತಿಕೆ, ಸಂಗೀತ ಉತ್ಸವಗಳ ಜಾತಿ ರಾಜಕೀಯ, ಸಂಗೀತವನ್ನು ಜಾತಿಗೆ ಮಾತ್ರ ಸೀಮಿತಗೊಳಿಸಿರುವುದು, ಸಂಗೀತ ಕ್ಷೇತ್ರದಲ್ಲಿನ ಸೆನ್ಸಾರ್‌ಶಿಪ್‌ಗಳು, ಸರ್ವಾಧಿಕಾರಿ ಧೋರಣೆಗಳನ್ನು ಪ್ರಶ್ನಿಸುತ್ತಾ ಬಂದಿರುವ, ಕೊಳಗೇರಿಗಳಲ್ಲಿ, ಮೀನುಗಾರರ ಮಧ್ಯೆ, ದೇವದಾಸಿಯರೊಂದಿಗೆ ಕುಳಿತು ಸಂಗೀತ ಕಚೇರಿ ನಡೆಸಿರುವ ಟಿ.ಎಂ. ಕೃಷ್ಣ ತಮ್ಮ ಮನದೊಳಗಿನ ಮಾತಿಗೆ ಈ ಕೃತಿಯಲ್ಲಿ ರೂಪ ಕೊಟ್ಟಿದ್ದಾರೆ.

03 Gujarath Files

     Rana Ayyub

ಗುಜರಾತ್ ಹತ್ಯಾಕಾಂಡದಲ್ಲಿ ರಾಜಕಾರಣಿಗಳು, ಪೊಲೀಸರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು ಎನ್ನುವುದನ್ನು ಸಾಕ್ಷಿ ಸಮೇತ ಬಿಚ್ಚಿಟ್ಟ ಕೃತಿ ಇದು. ಮೈಥಿಲಿ ತ್ಯಾಗಿ ಎನ್ನುವ ಮಾರು ಹೆಸರಿನಲ್ಲಿ ರಹಸ್ಯ ಕ್ಯಾಮರಾ ಇಟ್ಟುಕೊಂಡು ನರೇಂದ್ರ ಮೋದಿಯೂ ಸೇರಿದಂತೆ ಹಲವರನ್ನು ‘ತೆಹೆಲ್ಕಾ’ ನಿಯತಕಾಲಿಕಕ್ಕಾಗಿ ಬಯಲಿಗೆಳೆದ ರಾಣಾ ಅಯ್ಯೂಬ್ ಅವರದ್ದು ರೋಚಕ ಕಥನ. ಹೇಗೆ ವ್ಯವಸ್ಥೆ ಧರ್ಮದ ಹತ್ಯಾಕಾಂಡಕ್ಕೆ ಶಾಮೀಲಾಗುತ್ತದೆ ಎನ್ನುವ ಕರಾಳ ದಾಖಲೆ ಇದು.

04 the challenge of impartiality

     Salim Lamrani

ಕ್ಯೂಬಾ ಹಾಗೂ ಜಗತ್ತಿನ ಇತರ ದೇಶಗಳ ನಡುವೆ ಪೇಪರ್ ಗೋಡೆಯಿದೆ ಎನ್ನುತ್ತಾರೆ ಫಿಡೆಲ್ ಕ್ಯಾಸ್ಟ್ರೊ. ಅಮೆರಿಕದ ಮಾಧ್ಯಮಗಳ ಕಣ್ಣಿಂದಲೇ ಕ್ಯೂಬಾವನ್ನು ನೋಡಬೇಕಾದ ಪರಿಸ್ಥಿತಿಯನ್ನು ಮಾಧ್ಯಮ ಬಹುರಾಷ್ಟ್ರೀಯ ಕಂಪೆನಿಗಳು ಸೃಷ್ಟಿಸಿವೆ. ಹಾಗಾಗಿಯೇ ಕ್ಯೂಬಾ ನಿಜಕ್ಕೂ ಏನು ಎನ್ನುವುದೇ ಗೊತ್ತಾಗದೆ ಹೋಗುವ ಪರಿಸ್ಥಿತಿ ಇದೆ. ಈ ಮಧ್ಯೆ ಈ ಕೃತಿ ಕ್ಯೂಬಾವನ್ನೂ ಅಲ್ಲಿನ ಮಾಧ್ಯಮ ಲೋಕವನ್ನು ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ.

05 Telling the Truth, Taking Sides

Editor V K Ramachandran

ಎನ್. ರಾಮ್ ಪತ್ರಕರ್ತ ಮಾತ್ರವೇ ಅಲ್ಲ ಅವರು ಸಾಮಾಜಿಕ ಕಾರ್ಯಕರ್ತ ಕೂಡಾ. ಪತ್ರಿಕೋದ್ಯಮ ನಿಷ್ಪಕ್ಷಪಾತವಾಗಿರಬೇಕು ಎನ್ನುವ ಹಸಿ ಸುಳ್ಳಿಗೆ ವ್ಯತಿರಿಕ್ತವಾಗಿ ಸಾಮಾಜದ ಏಳಿಗೆಗೆ ಮಾಧ್ಯಮವನ್ನು ಬಳಸಿದವರು ಎನ್. ರಾಮ್. ಅವರಿಗೆ 70 ತುಂಬಿದ ನೆಪದಲ್ಲಿ ಅವರ ಗೆಳೆಯರು, ಜೊತೆಯಲ್ಲಿ ಕೆಲಸ ಮಾಡಿದವರು, ಅವರ ಧೋರಣೆಯನ್ನು ಕಂಡವರು ಬರೆದ ಲೇಖನಗಳು ಇಲ್ಲಿವೆ, ರಾಮ್ ಅವರನ್ನೂ, ಪತ್ರಿಕೋದ್ಯಮವನ್ನೂ, ಸಮಾಜವನ್ನೂ ಅರ್ಥ ಮಾಡಿಕೊಳ್ಳಲು ಒಳ್ಳೆಯ ಕೃತಿ.

06 When Crime Pays

Milan Vaishnav 

ತೋಳ್ಬಲದ ರಾಜಕಾರಣ ಇಂದು ನಗ್ನ ಸತ್ಯ. ಹಣಬಲವಿಲ್ಲದೆ ರಾಜಕಾರಣ ಸಾಧ್ಯವಿಲ್ಲ, ಈ ಹಣ ಬಲಕ್ಕೆ ಅಪರಾಧಿ ಲೋಕದ ಬೆಂಬಲ ಅನಿವಾರ್ಯ ಎನ್ನುವ ಸ್ಥಿತಿಗೆ ರಾಜಕಾರಣ ಬಂದು ತಲುಪಿದೆ. ಸಜ್ಜನ ರಾಜಕಾರಣ ಉಸಿರಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಮಿಲನ್ ವೈಷ್ಣವ್ ಅಪರಾಧ ಲೋಕ ಹಾಗೂ ರಾಜಕಾರಣದ ನಡುವಿನ ನಂಟನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದಾರೆ. ಅಪರಾಧಿಗಳನ್ನೂ ಸಂದರ್ಶಿಸಿ ಬರೆದ ಕೃತಿ ಮತದಾರರೂ ಹೇಗೆ ಅವರನ್ನು ಒಪ್ಪಿಕೊಂಡುಬಿಟ್ಟಿದ್ದಾರೆ ಎನ್ನುವ ಕಟು ವಾಸ್ತವವನ್ನೂ ಬಿಚ್ಚಿಡುತ್ತದೆ.

07 How to Lie with Statistics

Darrell Huff 

‘ಅಚ್ಛೇ ದಿನ್’ಗೆ ಎಲ್ಲರೂ ಕಾಯುತ್ತಾ ಇರುವಾಗ ಕೇಂದ್ರ ಸರಕಾರ ಎಲ್ಲರ ಮುಂದೆಯೂ ಅಂಕಿ ಸಂಖ್ಯೆಗಳನ್ನು ಇಡುತ್ತಿದೆ. ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲದ ದರ ಎಲ್ಲಾ ಸಮಯಕ್ಕಿಂತ ಹೆಚ್ಚು ಏರಿಸಿದ್ದರೂ ಗ್ರಾಫ್‌ಗಳ ಮೂಲಕ, ಅಂಕಿ ಸಂಖ್ಯೆಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸಿದ್ದು ಇತ್ತೀಚೆಗೆ ನಡೆದ ವಿದ್ಯಮಾನ. ಇದನ್ನೆಲ್ಲಾ ನೋಡುವಾಗ 1954ರಲ್ಲಿಯೇ ಬರೆದ ಅಂಕಿ ಸಂಖ್ಯೆಗಳ ಮೂಲಕ ಸುಳ್ಳು ಹೇಳುವುದು ಹೇಗೆ ಎನ್ನುವ ಈ ಕೃತಿ ಗಮನ ಸೆಳೆಯಿತು. ಇದನ್ನು ವಿಶ್ವ ಸಂಸ್ಥೆ, ಅಮೆರಿಕದಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳವರೆಗೆ ಜನರ ಕಣ್ಣಿಗೆ ಮಣ್ಣೆರಚಲು ಎಲ್ಲರೂ ನಡೆಸುತ್ತಲೇ ಬಂದಿದ್ದಾರೆ.

08 algorithms of oppression

Safiya Noble

ಇಂಟರ್ನೆಟ್ ಲೋಕದ ಸರ್ಚ್ ಇಂಜಿನ್‌ಗಳ ಲೋಕವೇ ಭಿನ್ನ. ಅಲ್ಗೊರಿದಂ ಎನ್ನುವುದು ಸೈಬರ್ ಲೋಕವನ್ನು ಆಳುತ್ತಿದೆ ಎಂದರೂ ತಪ್ಪಿಲ್ಲ. ನಿಮ್ಮ ಹುಡುಕಾಟದ ಮೇಲೆ ಕಣ್ಣಿಟ್ಟು ಅದರ ಮೇಲೆ ನಿಮ್ಮ ಲೋಕ ಗಿರಿಗಿರಿ ಸುತ್ತುವಂತೆ ಮಾಡುವ ರೀತಿಯೇ ಅಲ್ಗೊರಿದಂ. ಇದರಿಂದಾಗಿ ಕೇವಲ ಕೊಳ್ಳುಬಾಕತನ ಮಾತ್ರ ಹೆಚ್ಚುತ್ತಿಲ್ಲ, ನೀವು ನಿಮ್ಮದೇ ಲೋಕದಲ್ಲಿ ಸಿಕ್ಕಿ ಹೋಗುವುದಷ್ಟಕ್ಕೆ ಸೀಮಿತವಾಗುತ್ತಿಲ್ಲ. ಆದರೆ ಇದು ಅದಕ್ಕಿಂತ ಅಪಾಯಕಾರಿಯಾಗಿ ವರ್ಣ ವ್ಯವಸ್ಥೆಯನ್ನು ಇನ್ನಷ್ಟು ಬೆಳೆಸುತ್ತಿದೆ ಎನ್ನುವ ಆರೋಪವೂ ಇದೆ. ಅದು ಹೇಗೆ ಎನ್ನುವುದನ್ನು ಈ ಕೃತಿ ಚರ್ಚಿಸಿದೆ.

09 Mothering a Muslim

Nazia Erum

ಇತ್ತೀಚೆಗೆ ತಾನೇ ದಿಲ್ಲಿಯ ಕಾರ್ಪೊರೇಶನ್ ಶಾಲೆಯಲ್ಲಿ ಪ್ರಬುದ್ಧ ಅಧ್ಯಾಪಕರು ಶಾಲೆಯ ವಿದ್ಯಾರ್ಥಿಗಳನ್ನು ಹಿಂದೂ- ಮುಸ್ಲಿಂ-ಕ್ರಿಶ್ಚಿಯನ್ ಎಂದು ವಿಂಗಡಿಸಿ ಪ್ರತ್ಯೇಕವಾಗಿ ಪಾಠ ಮಾಡುತ್ತಿರುವ ಕಾಲ ಇದು. ಒಬ್ಬ ಮುಸ್ಲಿಂ ಆಗಿರುವುದು ಇವತ್ತಿನ ಭಾರತದಲ್ಲಿ ಸುಲಭದ್ದಲ್ಲ. ಅದರಲ್ಲೂ ಮುಸ್ಲಿಮ್ ಮಗುವಾಗಿ ಬೆಳೆಯುವುದು ಸಲೀಸಲ್ಲ. ತರಗತಿಗಳಲ್ಲಿ, ಆಟದ ಅಂಗಳದಲ್ಲಿ ಒಬ್ಬ ಮುಸ್ಲಿಂ ತೀಕ್ಷ್ಣನೋಟವನ್ನು, ಅನುಮಾನವನ್ನು ಎದುರಿಸುತ್ತಲೇ ಬೆಳೆಯಬೇಕಾಗುತ್ತದೆ. ತನ್ನ ಮಗುವಿನ ಧರ್ಮ ಗೊತ್ತಾಗದಿರಲಿ ಎಂದು ‘ಮೈರಾ’ ಎನ್ನುವ ಹೆಸರಿಟ್ಟರೂ ಧರ್ಮದ ಕಣ್ಣುಗಳಿಂದ ಬಿಡುಗಡೆಯೇ ಸಿಗುವುದಿಲ್ಲ. ಫ್ಯಾಷನ್ ಕ್ಷೇತ್ರದ ಪ್ರಮುಖ ಹೆಸರಾದ ನಾಝಿಯಾ ತಾವು ಈ ಮತಾಂಧ ಸಮಾಜದಲ್ಲಿ ತಮ್ಮ ಮಗಳನ್ನು ಬೆಳೆಸಿದ ಕರಾಳ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

10 Sea Prayer

Khaled Hosseini 

‘ಕೈಟ್ ರನ್ನರ್’ ಮೂಲಕ ಹೆಸರಾದ ಖಾಲಿದ್ ಹುಸೇನಿ ಇಲ್ಲಿ ನಿರಾಶ್ರಿತರ ನೋವಿನ ಕಥೆಯನ್ನು ತಮ್ಮದೇ ರೀತಿಯಲ್ಲಿ ಬಣ್ಣಿಸಿದ್ದಾರೆ. ಟರ್ಕಿ ನೆಲದಲ್ಲಿ ಸಮುದ್ರ ದಂಡೆಯಲ್ಲಿ ಸಿಕ್ಕ ಮಗುವಿನ ಮೃತದೇಹದ ಚಿತ್ರ ಎಲ್ಲರಿಗೂ ಗೊತ್ತು. ಆ ಚಿತ್ರವೇ ಇನ್ನಿಲ್ಲದಂತೆ ಕಾಡಿ ಈ ಕೃತಿಯಾಗಿ ಹೊರಬಂದಿದೆ. ಖಾಲಿದ್ ಹುಸೇನಿ ಈ ಕೃತಿಯನ್ನು ಜಗತ್ತಿನ ಎಲ್ಲಾ ನಿರಾಶ್ರಿತರಿಗೆ ಅರ್ಪಿಸಿದ್ದಾರೆ. ಇದು ಕಣ್ಣೀರಿನ ಕಥೆ ಹೇಳುವ, ಮನುಷ್ಯತ್ವವನ್ನು ಪರೀಕ್ಷಿಸಿಕೊಳ್ಳವಂತೆ ಮಾಡುವ ಕೃತಿ

11 A Fly in the Curry

K. P. Jayasankar, Anjali Monteiro

‘ಅವಧಿಯಲ್ಲಿ ತೀರಾ ಚಿಕ್ಕದು ಆದರೆ ಪರಿಣಾಮದಲ್ಲಿ ಅಪಾರವಾದದ್ದು’ ಎಂದೇ ಸಾಕ್ಷಚಿತ್ರಗಳನ್ನು ಬಣ್ಣಿಸಲಾಗುತ್ತದೆ. ಡಾಕ್ಯುಮೆಂಟರಿ ಸಿನೆಮಾದಲ್ಲಿ ಭಾರತ ಸಾಕಷ್ಟು ಹೆಸರು ಮಾಡಿದೆ. ಈ ಕೃತಿಯಲ್ಲಿ ಲೇಖಕರು ಭಾರತದಲ್ಲಿ ಸಾಕ್ಷಚಿತ್ರ ನಡೆದು ಬಂದ ದಾರಿಯನ್ನು ಗುರುತಿಸಿದ್ದಾರಲ್ಲದೆ, ಅದರ ಸಾಮಾಜಿಕ ಕಳಕಳಿಯ ಬಗ್ಗೆ ವಿಶೇಷ ಬೆಳಕು ಚೆಲ್ಲಿದ್ದಾರೆ.

12 Foot soldier of the Constitiution

Teesta Setalvad

ಕೋಮುವಾದದ ವಿರುದ್ಧದ ಒಂದು ಗಟ್ಟಿ ದನಿ- ತೀಸ್ತಾ ಸೆಟಲ್ವಾಡ್. ಗುಜರಾತಿನ ಸರಕಾರಿ ಪ್ರಾಯೋಜಿತ ಕೋಮು ಹತ್ಯಾಕಾಂಡದ ಬಗ್ಗೆ ದನಿ ಎತ್ತಿದವರು. ಧರ್ಮದ ಹೆಸರಿನಲ್ಲಿ ನಡೆದ ಮನುಷ್ಯತ್ವದ ಮಾರಣಹೋಮ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ತೀಸ್ತಾ ಹಾಗೂ ಅವರ ತಂಡ ನಡೆಸಿದ ಅಧ್ಯಯನಗಳು, ಸಂತ್ರಸ್ತರಿಗೆ ನೀಡಿದ ಧೈರ್ಯ ದೊಡ್ಡದು. ಅಷ್ಟೇ ಅಲ್ಲದೆ ಈ ಹತ್ಯಾಕಾಂಡವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಎದೆಗುಂದದೆ ಹೋರಾಡುತ್ತಿದ್ದಾರೆ. ಈ ತೀಸ್ತಾ ಯಾರು ಎನ್ನುವ ಕುತೂಹಲ ಸಹಜ. ಈ ಕೃತಿಯಲ್ಲಿ ತೀಸ್ತಾ ತಾವು ನಡೆದು ಬಂದ ಹಾದಿಯನ್ನು ತಿರುಗಿ ನೋಡಿದ್ದಾರೆ.

13 Dissenting Diagnosis

Arun Gadre, Abhay Shuklay

ವೆದ್ಯಕೀಯ ರಂಗ ಲಾಭಕೋರತನದ ಮುಷ್ಟಿಗೆ ಸಿಕ್ಕಿ ಸಾಕಷ್ಟು ಕಾಲವಾಗಿದೆ. ಬದುಕಿಗೆ ಘನತೆ ನೀಡಬೇಕಿದ್ದ ರಂಗ ಈಗ ಜೀವವನ್ನು ಕಿತ್ತು ತಿನ್ನುವ ಹಂತಕ್ಕೆ ತಲುಪಿದೆ. ರೋಗಿಗಳನ್ನು ಭೀಕರವಾಗಿ ಶೋಷಿಸುವ, ಅವರ ಬದುಕನ್ನೇ ನುಚ್ಚುನೂರು ಮಾಡುವ ಪರಿಸ್ಥಿತಿ ಕಣ್ಣೆದುರಿಗಿದೆ. ಈ ರಂಗದ ಒಳನೋಟವನ್ನು ಈ ಕೃತಿ ನೀಡುತ್ತದೆ.

14 Call of the Mall

Paco Underhill

ಈಗ ಎಲ್ಲಿ ನೋಡಿದರಲ್ಲಿ ಮಾಲ್‌ಗಳು ತಲೆ ಎತ್ತಿವೆ. ಇಷ್ಟೊಂದು ಮಾಲ್ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಇರುವಾಗಲೇ ಪ್ಯಾಕೋ ಅಂಡರ್ ಹಿಲ್ ಮಾಲ್‌ಗಳ ಮನಃಶಾಸ್ತ್ರವನ್ನು ಬಿಡಿಸಿಟ್ಟಿದ್ದಾರೆ. ಈಗಾಗಲೇ ಕೊಳ್ಳುಬಾಕತನದ ಬಗ್ಗೆ ಸಾಕಷ್ಟು ಬರೆದಿರುವ ಪ್ಯಾಕೋ ಇಲ್ಲಿ ಮಾಲ್ ಸಂಸ್ಕೃತಿಯ ಹುನ್ನಾರಗಳನ್ನು ಬಯಲಿಗಿಟ್ಟಿದ್ದಾರೆ. ಮಾಲ್ ನಮ್ಮ ಒಳಗೆ ಹೇಗೆ ಕೊಳ್ಳುಬಾಕ ರಾಕ್ಷಸನನ್ನು ಪೋಷಿಸುತ್ತಿದೆ ಎನ್ನುವ ಬಗ್ಗೆಯೂ ಎಚ್ಚರಿಸಿದ್ದಾರೆ.

15 The Rise and Fall of the Murdoch empire

John Lisners

ಮುರ್ಡೋಕ್ ನನಗೆ ಸದಾ ಅಧ್ಯಯನದ ವಸ್ತು. ಆಸ್ಟ್ರೇಲಿಯಾದವನಾಗಿ ಹುಟ್ಟಿ ನಂತರ ಅಮೆರಿಕನ್ ಪೌರತ್ವ ಪಡೆದು, ಬ್ರಿಟನ್ ಸೇರಿದಂತೆ ಹಲವು ದೇಶಗಳನ್ನು ತನ್ನ ಮಾಧ್ಯಮ ಸಾಮ್ರಾಜ್ಯದಲ್ಲಿ ಬಂಧಿಸಿಟ್ಟವನು ಈತ. ರೂಪರ್ಟ್ ಮುರ್ಡೋಕ್ ಅವರ ಅದೇ ಸೂತ್ರವನ್ನು ಭಾರತದ ಮಾಧ್ಯಮಗಳು ‘ಕಟ್ ಆ್ಯಂಡ್ ಪೇಸ್ಟ್’ ಆಗಿ ಜಾರಿಗೆ ತರಲು ಹೊರಟಿವೆ. ಮುರ್ಡೋಕ್ ಪತ್ರಿಕೋದ್ಯಮ ಎಂಬ ನಾಲ್ಕನೇ ಉಸಿರಾಟದ ತಾಣವನ್ನೇ ನುಚ್ಚುನೂರು ಮಾಡಿ ಹಾಕಿದೆ. ಇದು ಗೊತ್ತಿದ್ದೂ ಲಾಭದ ಮೇಲೆ ಮಾತ್ರ ಕಣ್ಣಿಟ್ಟ ಭಾರತದ ಮಾಧ್ಯಮಗಳು ಇವನ್ನು ಮುಲಾಜಿಲ್ಲದೆ ಜಾರಿಗೆ ತರಲು ಹೊರಟಿವೆ. ಮುಂದಿನ ಭಾರತದ ಮಾಧ್ಯಮ ಸ್ಥಿತಿ ಏನು ಎನ್ನುವುದಕ್ಕೆ ಈ ಕೃತಿ ತೋರುಗನ್ನಡಿ.

16 Newsman

Rajdeep Sardesai

‘ಇಂಡಿಯಾ ಟುಡೇ ಟೆಲಿವಿಷನ್’ನ ಸಲಹಾ ಸಂಪಾದಕರಾದ ರಾಜದೀಪ್ ಸರ್ದೇಸಾಯಿ ಈಗಾಗಲೇ ತಮ್ಮ ಜಾತ್ಯತೀತ ನಿಲುವಿನಿಂದ ಪ್ರಸಿದ್ಧರು. ನರೇಂದ್ರ ಮೋದಿ ಅವರು ರಾಜಕೀಯ ರಂಗದಲ್ಲಿ ಕಾಣುತ್ತಿರುವ ಏರುಗತಿಯನ್ನು ಅಧ್ಯಯನ ಮಾಡಿರುವವರು. 2019ನೇ ವರ್ಷದ ಚುನಾವಣೆಯ ಹಿನ್ನೆಲೆಯಲ್ಲಿ ಈ ಕೃತಿ ಭಾರತದ ರಾಜಕೀಯದ ಹಲವಾರು ಸಂಗತಿಗಳನ್ನು ಚರ್ಚಿಸುತ್ತದೆ. ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಾಜದೀಪ್ ಅವರ ವಿಮರ್ಶಾತ್ಮಕ ನೋಟ ಈ ಕೃತಿಯಲ್ಲಿದೆ.

17 The Free Voice

Ravish Kumar

‘ಎನ್‌ಡಿಟಿವಿ ಇಂಡಿಯಾ’ದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರವೀಶ್ ಕುಮಾರ್ ದೇಶದ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಬರೆದಿರುವ ಕೃತಿ ಇದು. ಈಗಾಗಲೇ ಕನ್ಹಯ್ಯ ಕುಮಾರ್ ಪ್ರಕರಣ, ವೇಮುಲಾ ಪ್ರಕರಣ, ಲವ್ ಜಿಹಾದ್, ಬಾಬಾಗಳ ಧುತ್ತನೆ ಬೆಳವಣಿಗೆ, ಖಾಸಗಿತನದ ಉಲ್ಲಂಘನೆಯ ಬಗ್ಗೆ ಗಟ್ಟಿ ನಿಲುವು ತಳೆದಿದ್ದಾರೆ. ‘ಭಯದ ಸಾಮಾಜೀಕರಣ ನಡೆಯುತ್ತಿದೆ. ಹೊಸ ಪ್ರಜಾಪ್ರಭುತ್ವದಲ್ಲಿ ಭಯಪಡುವುದೇ ನಾಗರಿಕತೆ ಎನ್ನುವ ಕಾಲಕ್ಕೆ ಬಂದು ನಿಲ್ಲುತ್ತಿದ್ದೇವೆ’ ಎನ್ನುವ ಅವರ ಮಾತು ಈ ಕೃತಿಯ ಸಾರವನ್ನೂ ಸೂಚಿಸುತ್ತದೆ.

18 remnants of a separation

Aanchal Malhotra

ಭಾರತದ ವಿಭಜನೆ ನಮ್ಮಳಗನ್ನು ಇನ್ನೂ ಕಿತ್ತು ತಿನ್ನುತ್ತಲೇ ಇದೆ. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದು ಎಷ್ಟೋ ದಶಕಗಳಾಯಿತು. ಆದರೆ ನೆನಪುಗಳು ಸತ್ತಿಲ್ಲ. ವಿಭಜನೆ ದೇಶವನ್ನು ಮಾತ್ರವಲ್ಲ, ಮನುಷ್ಯ ಸಂಬಂಧಗಳನ್ನೇ ವಿಭಜಿಸಿ ಹಾಕಿದೆ. ವಿಭಜನೆಯ ಕುರಿತು ಬಂದ ಕೃತಿಗಳು ಲೆಕ್ಕವಿಲ್ಲದಷ್ಟು. ಆದರೆ ಈ ಕೃತಿ ಭಿನ್ನ. ಅಜ್ಜಿಯ ನೆತ್ತಿಯಲ್ಲಿದ್ದ ಆಭರಣ, ಮನೆಯೊಳಗಿದ್ದ ಕವಿತಾ ಸಂಕಲನ, ಮಹಾರಾಜರು ಕೊಟ್ಟಿದ್ದ ಮುತ್ತಿನ ಹರಳು, ಅಡ ಇಟ್ಟಿದ್ದ ಬೆಳ್ಳಿ..... ಹೀಗೆ ಹೊತ್ತು ತಂದ, ಬಿಟ್ಟು ಬಂದ ವಸ್ತುಗಳ ಮೂಲಕ ನಿಟ್ಟುಸಿರಿನ ಕಥೆ ಹೇಳುತ್ತಾ ಹೋಗುತ್ತದೆ.

19 The true story of fake news

Mark Dice

ಇದು ಸುಳ್ಳು ಸುದ್ದಿಗಳ ಕಾಲ. ಸತ್ಯ ಸುದ್ದಿಗಳನ್ನು ಭೂತಗನ್ನಡಿ ಹಾಕಿ ಹುಡುಕಬೇಕು. ಅದು ಸರಿ ಆದರೆ ಈ ಸುಳ್ಳು ಸುದ್ದಿಗಳು ಯಾಕೆ ಹುಟ್ಟುತ್ತವೆ. ಅದರಿಂದೇನು ಲಾಭ? ಇದರ ಹಿಂದಿರುವ ಸೂತ್ರಧಾರರು ಯಾರು ಈ ಎಲ್ಲಾ ಪ್ರಶ್ನೆಯನ್ನಿಟ್ಟುಕೊಂಡು ಮಾರ್ಕ್ ಡೈಸ್ ನಮ್ಮೆದುರು ಬೆಚ್ಚಿಬೀಳುವ ಸತ್ಯವನ್ನು ಇಟ್ಟಿದ್ದಾರೆ.

20 The Mothers of Manipur

Teresa Rehman

ಭಾರತೀಯ ಸೈನ್ಯದ ಅನಾಚಾರವನ್ನು ಖಂಡಿಸಿ 12 ಮಂದಿ ತಾಯಂದಿರು ಅಸ್ಸಾಂನ ಸೈನಿಕ ಕಚೇರಿಯ ಎದುರು ಬೆತ್ತಲಾಗಿ ಪ್ರತಿಭಟನೆ ನಡೆಸಿದರು. ಅಸ್ಸಾಂನಲ್ಲಿ ನಡೆಯುತ್ತಿದ್ದ ಸೈನಿಕ ದೌರ್ಜನ್ಯ, ಅತ್ಯಾಚಾರಗಳಿಂದ ರೋಸಿ ಹೋಗಿದ್ದ ಜನರ ದನಿ ಇದು. ಇದು ಭಾರತವನ್ನಲ್ಲ ಇಡೀ ಜಗತ್ತನ್ನು ನಡುಗಿಸಿ ಹಾಕಿತು. ಆ 12 ಮಂದಿಯ ನೋವಿನ ಕಥನ ಇಲ್ಲಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top