ಅನಂತ ಮೂರ್ತಿ-ಭೈರಪ್ಪ | Vartha Bharati- ವಾರ್ತಾ ಭಾರತಿ

--

ಅನಂತ ಮೂರ್ತಿ-ಭೈರಪ್ಪ

ರಾಮಚಂದ್ರನ್ ಅವರ ಇಲ್ಲಿನ ಸಮೀಕ್ಷೆ ಪಾಶ್ಚಾತ್ಯ ಅಥವಾ ನಮ್ಮ ಕಾವ್ಯ ಮೀಮಾಂಸೆಯ ಮಾನದಂಡಗಳಿಂದ ಒರೆಗೆಹಚ್ಚುವ ರೀತಿಯದ್ದಲ್ಲ.ಇದೊಂದು ತಾತ್ವಿಕ ಮಾನದಂಡವನ್ನೇ ಪ್ರಮುಖವಾಗಿರಿಸಿಕೊಂಡ ವಿಮರ್ಶೆ. ಅಂದರೆ ಈ ಇಬ್ಬರು ಲೇಖಕರ ತಾತ್ವಿಕ ನಿಲುವೇ ಇಲ್ಲಿ ಮಾನದಂಡ. ಅನಂತ ಮೂರ್ತಿಯವರು ಪೂರ್ವ ಮೀಮಾಂಸೆಯನ್ನು ಪ್ರಶ್ನಿಸಿ ಪಶ್ಚಿಮದಿಂದ ಪ್ರಭಾವಿತರಾದವರು, ಶಾಸ್ತ್ರ ಸಂಪ್ರದಾಯಗಳನ್ನು ಮೀರಿದವರು. ಭೈರಪ್ಪನವರಾದರೋ ನಮ್ಮ ತತ್ವ, ಸಿದ್ಧಾಂತಗಳನ್ನು, ಶಾಸ್ತ್ರಸಂಪ್ರದಾಯಗಳನ್ನು ಪ್ರಶ್ನಿಸದೆ ಒಪ್ಪಿಕೊಂಡವರು. ‘ಸ್ವಧರ್ಮೇ ನಿಧನಂ ಶ್ರೇಯ:’ ಎಂಬುದಕ್ಕೆ ಬದ್ಧರಾದವರು. ಇದು ರಾಮಚಂದ್ರನ್ ಅವರ ‘ಅನಂತ ಮೂರ್ತಿ-ಭೈರಪ್ಪ’ನವರ ಓದಿಗೆ ಇರುವ ಹಿನ್ನೆಲೆ. ರಾಮಚಂದ್ರನ್ ಅವರ ‘ತಾತ್ವಿಕ ಸಮೀಕ್ಷೆ’ಯೂ ಇದೇ ಜಾಡಿನಲ್ಲಿ ಸಾಗಿದೆ.


ಭಾಗ-1

ಇಪ್ಪತ್ತು-ಇಪ್ಪತ್ತೊಂದನೆಯ ಶತಮಾನದ ಇಬ್ಬರು ಅಗ್ರಗಣ್ಯ ಕನ್ನಡ ಸಾಹಿತಿಗಳು ಡಾ.ಯು.ಆರ್.ಅನಂತಮೂರ್ತಿ ಮತ್ತು ಡಾ.ಎಸ್.ಎಲ್.ಭೈರಪ್ಪ. ನಮ್ಮಲ್ಲಿ ‘ಅಜಾತ ಶತ್ರು’ ಎನ್ನುವ ನುಡಿಯೊಂದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಈ ನುಡಿ ಅನ್ವಯಿಸಿದ ‘ಕೀರ್ತಿ’ಗೆ ಪಾತ್ರರಾದ ವಿಶಿಷ್ಟ ಲೇಖಕರೆಂದರೆ ಅನಂತ ಮೂರ್ತೀ ಮತ್ತು ಎಸ್.ಎಲ್.ಭೈರಪ್ಪ. ಕನ್ನಡದ ಈ ಮಹತ್ವದ ಲೇಖಕರಿಬ್ಬರಿಗೂ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ವಿರೋಧಿಗಳಿದ್ದಾರೆ. ಕನ್ನಡದ ಗಡಿ ದಾಟಿದಲ್ಲಿ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಇದೇ ಸ್ಥಿತಿ. ಇಬ್ಬರೂ ಭಾರತೀಯ ಮತ್ತು ಅಂತರ್‌ರಾಷ್ಟ್ರೀಯ ಭಾಷೆಗಳಿಗೆ ಅನುವಾದಗೊಂಡಿರುವ ಲೇಖಕರು. ಅಭಿಮಾನ ಮತ್ತು ವಿರೋಧಗಳು ಎಷ್ಟರಮಟ್ಟಿಗೆ ಪರಾಕಾಷ್ಠೆ ಮುಟ್ಟಿದೆಯೆಂದರೆ, ಅನಂತ ಮೂರ್ತಿಯವರಿಗೆ, ಪಾಕಿಸ್ತಾನಕ್ಕೆ ಹೋಗಿ ಎಂದೂ ‘ಅಭಿಮಾನಿಗಳು’ ವಿಮಾನದ ಟಿಕೆಟ್ ಕಳುಹಿಸಿರುವುದುಂಟು. ಭೈರಪ್ಪನವರನ್ನು ಆರೆಸ್ಸೆಸ್ ಮತ್ತು ಮೋದಿಯವರ ಹೊಗಳುಭಟ ಎಂದು ಜರೆದಿರುವುದುಂಟು. ವಿಮರ್ಶೆಯ ಒಳಗೆ ಮತ್ತು ಹೊರಗೆ ಇಬ್ಬರ ಕೃತಿಗಳೂ ಸಾಕಷ್ಟು ಚರ್ಚೆ- ಸಂವಾದಗಳಿಗೊಳಪಟ್ಟಿರುವುದು ಈ ಸಾಹಿತಿದ್ವಯರ ಕೃತಿಗಳ ಜನಪ್ರಿಯತೆಗೆ ಉಜ್ವಲ ನಿದರ್ಶನವಾದೀತು. ಅನಂತ ಮೂರ್ತಿಯವರನ್ನು ನವ್ಯ, ಆಧುನಿಕ, ಗಾಂಧಿವಾದಿ, ಎಡಪಂಥೀಯ, ಸಂಪ್ರದಾಯ ವಿರೋಧಿ, ಅಸ್ತಿತ್ವವಾದಿ ಇತ್ಯಾದಿ ಹಲವಾರು ಬಗೆಯ ಕ್ರಾಂತಿಕಾರಿ ಕನ್ನಡಕಗಳಿಂದ ನೋಡಿರುವುದುಂಟು. ಭೈರಪ್ಪನವರನ್ನು ಬಲಪಂಥೀಯ, ಹಿಂದುತ್ವವಾದಿ, ಆರೆಸ್ಸೆಸ್, ಸನಾತನವಾದಿ, ಸಂಪ್ರದಾಯ ಶರಣ, ವ್ಯವಸ್ಥೆಯ ಪರ ಇತ್ಯಾದಿ ಕೇಸರಿ ಕನ್ನಡಕಗಳಿಂದ ನೋಡಿರುವುದುಂಟು. ಇವೆಲ್ಲ ಇವತ್ತು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆದಿರುವ ಚರ್ಚೆಯೇ. ಇಂದು ಮತ್ತೆ ಮರುಕಳಿಸುತ್ತಿದೆ ಶುದ್ಧ ಸಾಹಿತ್ಯ ಚರ್ಚೆಗೆಡೆಮಾಡಿಕೊಡುವ ಗ್ರಂಥವೊಂದರಿಂದ. ಪ್ರೊ. ಸಿ. ಎನ್. ರಾಮಚಂದ್ರನ್ ಪ್ರಸ್ತುತ ಕನ್ನಡ ಸಾಹಿತ್ಯ ವಿಚಾರ-ವಿಮರ್ಶೆಯಲ್ಲಿ ಮುಂಚೂಣಿಯಲ್ಲಿರುವ ವಿಮರ್ಶಕರು. ರಾಮಚಂದ್ರನ್ ಅವರು ಬರೆದು, ಬೆಂಗಳೂರಿನ ವಸಂತ ಪ್ರಕಾಶನ ಪ್ರಕಟಿಸಿರುವ ‘ಡಾ. ಯು. ಆರ್. ಅನಂತ ಮೂರ್ತಿ ಮತ್ತು ಡಾ. ಎಸ್. ಎಲ್. ಭೈರಪ್ಪ’ ಪುಸ್ತಕ ಈ ಸಾಹಿತಿದ್ವಯರತ್ತ ನಮ್ಮ ಗಮನ ಸೆಳೆದಿರುವುದೇ ಈ ಒಂದು ಪುನರಾವಲೋಕನಕ್ಕೆ ಪ್ರೇರಣೆ.

ರಾಮಚಂದ್ರನ್ ಅವರ ನೂರಿಪ್ಪತ್ತೆಂಟು ಪುಟಗಳ ಈ ಹೊತ್ತಿಗೆ ನವೋದಯದ ನಂತರದ ಕನ್ನಡದ ಇಬ್ಬರು ಪ್ರಮುಖ ಲೇಖಕರ ತೌಲನಿಕ ಅಧ್ಯಯನ ಇರಬಹದೇ ಎಂಬ ನಿರೀಕ್ಷೆಯಿಂದ ಕೈಗೆತ್ತಿಕೊಂಡವರಿಗೆ ನಿರಾಶೆಯಾದೀತು. ಏಕೆಂದರೆ ರಾಮಚಂದ್ರನ್ ಅವರು ಶುರುವಿಗೇ ಇದು ತೌಲನಿಕ ವಿಮರ್ಶೆಯಲ್ಲ, ಇಬ್ಬರಲ್ಲಿ ಯಾರು ಹೆಚ್ಚು ಸಮರ್ಥ ಲೇಖಕರು ಎಂದು ಗುರುತಿಸುವ ಪ್ರಯತ್ನವಲ್ಲವೆಂದು ನಮ್ಮ ಕುತೂಹಲಕ್ಕೆ ತಣ್ಣೀರೆರಚಿಬಿಟ್ಟಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಈ ಇಬ್ಬರು ಮಹತ್ವದ ಲೇಖಕರ ಕೊಡುಗೆಯನ್ನು ತಾತ್ವಿಕವಾಗಿ ಸಮೀಕ್ಷಿಸುವ ಮೂಲಕ ಗುರುತಿಸುವ ಪ್ರಯತ್ನ ಇದೆಂದು ರಾಮಚಂದ್ರನ್ ಅವರ ವಿನಮ್ರ ಅರಿಕೆ. ಈ ಮಾತುಗಳನ್ನು ಗಮನದಲ್ಲಿಟ್ಟುಕೊಂಡೇ ಓದಲಾರಂಭಿಸಿದರೆ ನಮಗೆ ಸಿಗುವ ಗ್ರಾಸ ಅತ್ಯಂತ ಉಪಯುಕ್ತವಾದುದು ಹಾಗೂ ಮೇಲೆ ಹೇಳಿದ ಅಭಿಮಾನ ಮತ್ತು ವಿರೋಧಗಳ ಪರಾಕಾಷ್ಠೆಗಳಿಂದ ಮುಕ್ತವಾದ ಚರ್ಚೆಗೆ ಪುಟಕೊಡುವಂತಹದ್ದು.
 

ರಾಮಚಂದ್ರನ್ ಅವರ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಅನಂತಮೂರ್ತಿಯವರ ಸ್ಣಕಥೆ, ಕಾದಂಬರಿ, ಲೇಖನ ಮತ್ತು ವಿಮರ್ಶೆ ಸೇರಿದಂತೆ ಎಲ್ಲ ಕೃತಿಗಳನ್ನೂ ಗಮನಿಸಿ ಒಂದು ತಾತ್ವಿಕ ನಿರ್ಧಾರಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ಎರಡನೆಯ ಭಾಗದಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಇಂಥದೇ ಪ್ರಯತ್ನವಿದೆ. ಮೂರನೆಯ ಭಾಗದಲ್ಲಿ ‘ಸಂಸ್ಕಾರ ಮತ್ತು ವಂಶವೃಕ್ಷ ನಡೆದು ಬಂದ ದಾರಿ’ ಎಂಬ ಲೇಖನವಿದೆ. ರಾಮಚಂದ್ರನ್ ಅವರ ಇಲ್ಲಿನ ಸಮೀಕ್ಷೆ ಪಾಶ್ಚಾತ್ಯ ಅಥವಾ ನಮ್ಮ ಕಾವ್ಯ ಮೀಮಾಂಸೆಯ ಮಾನದಂಡಗಳಿಂದ ಒರೆಗೆಹಚ್ಚುವ ರೀತಿಯದ್ದಲ್ಲ. ಇದೊಂದು ತಾತ್ವಿಕ ಮಾನದಂಡವನ್ನೇ ಪ್ರಮುಖವಾಗಿರಿಸಿಕೊಂಡ ವಿಮರ್ಶೆ. ಅಂದರೆ ಈ ಇಬ್ಬರು ಲೇಖಕರ ತಾತ್ವಿಕ ನಿಲುವೇ ಇಲ್ಲಿ ಮಾನದಂಡ. ಅನಂತ ಮೂರ್ತಿಯವರು ಪೂರ್ವ ಮೀಮಾಂಸೆಯನ್ನು ಪ್ರಶ್ನಿಸಿ ಪಶ್ಚಿಮದಿಂದ ಪ್ರಭಾವಿತರಾದವರು, ಶಾಸ್ತ್ರ ಸಂಪ್ರದಾಯಗಳನ್ನು ಮೀರಿದವರು. ಭೈರಪ್ಪನವರಾದರೋ ನಮ್ಮ ತತ್ವ, ಸಿದ್ಧಾಂತಗಳನ್ನು, ಶಾಸ್ತ್ರಸಂಪ್ರದಾಯಗಳನ್ನು ಪ್ರಶ್ನಿಸದೆ ಒಪ್ಪಿಕೊಂಡವರು. ‘ಸ್ವಧರ್ಮೇ ನಿಧನಂ ಶ್ರೇಯ:’ ಎಂಬುದಕ್ಕೆ ಬದ್ಧರಾದವರು. ಇದು ರಾಮಚಂದ್ರನ್ ಅವರ ‘ಅನಂತ ಮೂರ್ತಿ-ಭೈರಪ್ಪ’ನವರ ಓದಿಗೆ ಇರುವ ಹಿನ್ನೆಲೆ. ರಾಮಚಂದ್ರನ್ ಅವರ ‘ತಾತ್ವಿಕ ಸಮೀಕ್ಷೆ’ಯೂ ಇದೇ ಜಾಡಿನಲ್ಲಿ ಸಾಗಿದೆ. ಅನಂತಮೂರ್ತಿಯವರ ಸಾಹಿತ್ಯ ರಚನೆಯ ಮೂರು ಘಟ್ಟಗಳನ್ನು ರಾಮಚಂದ್ರನ್ ಹೀಗೆ ಕಂಡುಕೊಂಡಿದ್ದಾರೆ.‘ಸಂಸ್ಕಾರ’ದಿಂದ ‘ಕ್ಲಿಪ್‌ಜಾಯಿಂಟ್’ ವರೆಗೆ ಒಂದು ಘಟ್ಟ;‘ಭಾರತೀಪುರ’ದಿಂದ ‘ಅವಸ್ಥೆ’ವರೆಗೆ ಎರಡನೆಯ ಘಟ್ಟ; ‘ಭವ’ದಿಂದ ‘ದಿವ್ಯ’ದವರೆಗೆ ಒಂದು ಘಟ್ಟ. ಈ ವಿಂಗಡಣೆ ಸರಿಯಾಗಿಯೇ ಇದೆ. ಮೊದಲನೆಯ ಘಟ್ಟ ವ್ಯವಸ್ಥೆಯನ್ನು ಸಂದೇಹಿಸುವ, ವಿಡಂಬಿಸುವ ಘಟ್ಟ. ಕಾದಂಬರಿಯ ಅನುಭವ ಕನ್ನಡವಾಗಿದ್ದರೂ ಅದು ಪಡೆದಿರುವ ಸಂಸ್ಕಾರ ಮತ್ತು ಅದಕ್ಕೆ ಬಂದಿರುವ ಅರ್ಥದ ಮೊನೆ ಇವು ಪ್ರಮುಖವಾಗಿ ಪಾಶ್ಚಾತ್ಯ ದೇಶಗಳ ಸಮಕಾಲೀನ ಸಂಸ್ಕೃತಿಗಳ ಮೂಲಕ ಬಂದವುಗಳಾಗಿವೆ ಎನ್ನುವ ರಾಜೀವ ತಾರಾನಾಥರ ಟೀಕೆ; ‘ಸಂಸ್ಕಾರದ’ ಒಟ್ಟು ವೈಚಾರಿಕತೆ ‘ಅಸ್ತಿತ್ವವಾದ’ ಎನ್ನುವ ಎಂ.ಜಿ.ಕೃಷ್ಣಮೂರ್ತಿಯವರ ಮಾಪನ-ಇವುಗಳನ್ನು ಒಪ್ಪಿಕೊಳ್ಳುವುದರೊಂದಿಗೆ ರಾಮಚಂದ್ರನ್ ಅವರು ಅನಂತ ಮೂರ್ತಿಯವರ ಬರವಣಿಗೆಯ ಮೊದಲ ಘಟ್ಟ ಪಾಶ್ಚಾತ್ಯ ತತ್ವ ಮೀಮಾಂಸೆಯಿಂದ ಪ್ರಭಾವಿತ ಎಂಬುದನ್ನು ಅನುಮೋದಿಸುತ್ತಾರೆ. ಎರಡನೆಯ ಘಟ್ಟ, ಪೂರ್ವ-ಪಶ್ಚಿಮ ತಾತ್ವಿಕ ಮೀಮಾಂಸೆ ಕುರಿತ ಅನಂತ ಮೂರ್ತಿಯವರ ಸಂದೇಹ, ಡೋಲಾಯಮಾನತೆಗಳು ‘ಕ್ಲಿಪ್ ಜಾಯಿಂಟ್’ನಲ್ಲೇ ಶುರುವಾಗುವುದನ್ನು ರಾಮಚಂದ್ರನ್ ಸರಿಯಾಗಿಯೇ ಗುರುತಿಸಿದ್ದಾರೆ. ‘ಸಂಸ್ಕಾರ’, ವ್ಯಕ್ತಿ-ಅಧ್ಯಾತ್ಮ-ಮುಕ್ತಿ ಈ ನೆಲೆಯಲ್ಲಿ ಸಾಗುವ, ಲೌಕಿಕಬಂಧನಗಳು ಮತ್ತು ಅದರಿಂದ ಬಿಡುಗಡೆ ಪಡೆಯುವ ಧಾವಂತದ ಪ್ರಕ್ರಿಯೆಯಲ್ಲಿ ವ್ಯಕ್ತಿಯ ಹೊಣೆಗಾರಿಕೆ ಕುರಿತಂತೆ ಅಸ್ತಿತ್ವವಾದದ ಹೊಸ್ತಿಲಿಗೆ ಬಂದು ನಿಲ್ಲುತ್ತದೆ. ಮುಂದಿನ ಮೆಟ್ಟಿಲು ‘ಅವಸ್ಥೆ’. ಆಧುನಿಕತೆ, ಪರಂಪರೆ ಮತ್ತು ವರ್ತಮಾನ ಈ ಮೂರರ ಕೂಡುಹಾದಿಯಾದ ‘ಅವಸ್ಥೆ’ಯಲ್ಲಿ ಅನಂತ ಮೂರ್ತಿಯವರು, ‘ಸಂಸ್ಕಾರ’ದ ಉಸಿರುಕಟ್ಟಿಸುವ ವ್ಯವಸ್ಥೆಯ ಎಲ್ಲ ಸಮಸ್ಯೆಗಳಿಗೆ ಇಪ್ಪತ್ತನೆಯ ಶತಮಾನದ ಪ್ರಮುಖ ಬೆಳವಣಿಗೆಯಾದ ಪ್ರಜಾಪ್ರಭುತ್ವದಲ್ಲಿ ಪರಿಹಾರ ಕಾಣಲು ಪ್ರಯತ್ನಿಸುತ್ತಾರೆ. ಎಂದೇ ‘ಅವಸ್ಥೆ’ಗೆ ರಾಜಕೀಯ ಬಣ್ಣ ಬಂದಿದೆ. ಆದರೆ ಈ ಮಧ್ಯದ ‘ಭಾರತೀಪುರ’ದ ಬಗ್ಗೆ ರಾಮಚಂದ್ರನ್ ಅವರ ಮೌನ ಅಥವಾ ನಿರ್ಲಕ್ಷ್ಯ ಕುತೂಹಲಕಾರಿಯಾದುದು. ಏಕೆಂದರೆ, ಭಾರತೀಯ ಸಮಾಜವನ್ನು ಆಧುನಿಕ ಅಸ್ತಿತ್ವವಾದಿ ಕನ್ನಡಕದಿಂದ ನೋಡುವ ಅನಂತ ಮೂರ್ತಿಯವರ ಸೃಜನಶೀಲ ಪ್ರಕ್ರಿಯೆಯಲ್ಲಿ ‘ಭಾರತೀಪುರ’ವೂ ಒಂದು ಮುಖ್ಯ ಕೊಂಡಿ. ‘ಸಂಸ್ಕಾರ’ದಿಂದ ‘ದಿವ್ಯ’ದವರೆಗೆ ಎಲ್ಲ ಕಾದಂಬರಿಗಳ ಕಥಾ ನಾಯಕ ಅನಂತ ಮೂರ್ತಿಯವರೊಳಗಣ ಕ್ರಾಂತಿ ವೀರನೇ ಎಂಬುದನ್ನು ನಾವು ಗಮನಿಸಿದಾಗ ಈ ಕೊಂಡಿಯ ಮಹತ್ವ ಅರಿವಿಗೆ ಬರುತ್ತದೆ.
  ‘ಅವಸ್ಥೆ’ಯನ್ನು ನಾವು ರಾಜಕೀಯ ಕಾದಂಬರಿಯಾಗಿಯೇ ಓದಬೇಕಾಗಿಲ್ಲ. ‘ಅವಸ್ಥೆ’ಯ ನಾಯಕ ಕೃಷ್ಣಪ್ಪನ ಪಾತ್ರ ಆ ಕಾಲಘಟ್ಟದಲ್ಲಿ ಜ್ವಲಂತ ಸಮಾಜವಾದಿ ನಾಯಕರಾಗಿದ್ದ ಶಾಂತವೇರಿ ಗೋಪಾಲ ಗೌಡರನ್ನು ಹೋಲುತ್ತದೆ ಎನ್ನುವ ಕಾರಣದಿಂದ ಆಗ ಅದಕ್ಕೆ ರಾಜಕೀಯದ ಹಣೆಪಟ್ಟಿ ಕಟ್ಟಲಾಗಿತ್ತು. ಈ ಆರೋಪ ನ್ಯಾಯಾಲಯದ ಮೆಟ್ಟಿಲನ್ನೂ ಏರಿ ‘ಅವಸ್ಥೆ’ ಗೋಪಾಲಗೌಡರ ಜೀವನ ಆಧರಿಸಿದ್ದಲ್ಲ ಎಂದು ತೀರ್ಪು ಬಂದಿರುವುದು ಈಗ ಗತಕಾಲದ ಸಂಗತಿ. ಅನಂತಮೂರ್ತಿಯವರು ತಮ್ಮೆರಡು ಕೃತಿಗಳಿಗೆ (‘ಅವಸ್ಥ್ಥೆ’ ಮತ್ತು ‘ದಿವ್ಯ’) ಕೃತಿಯ ಶೀರ್ಷಿಕೆ ಕುರಿತು ಮೊದಲ ಪುಟದಲ್ಲೇ ಅರ್ಥವಿವರಣೆ ನೀಡಿರುವುದನ್ನು ಗಮನಿಸದೇ ಇರಲಾಗದು. ಅವಸ್ಥಾಃಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ, ಸ್ಥಿತಿ, ಇರುವಿಕೆ ಇತ್ಯಾದಿ ಅರ್ಥವಿವರಣೆಯನ್ನು ನೀಡಿದ್ದಾರೆ. ಈ ಅರ್ಥವಿವರಣೆಯಲ್ಲಿ ವ್ಯವಸ್ಥೆಯ ಪ್ರಸ್ತಾಪ ಇಲ್ಲ. ‘ಅವಸೆ’್ಥಯಲ್ಲಿ ರಾಜಕೀಯ ಚಿಂತನೆಗಳಿದ್ದರೂ ರಾಜಕೀಯವೇ ಅದರ ಒಡಲಲ್ಲ. ಹೃದಯವೂ ಅಲ್ಲ. ಹೆಚ್ಚೆಂದರೆ ಅದು ರಾಜಕೀಯ ಧುರೀಣನೊಬ್ಬನ ಬದುಕನ್ನು ಕೇಂದ್ರವಾಗುಳ್ಳ ಒಂದು ಕಥನ. ಪಾರ್ಶ್ವವಾಯುಪೀಡಿತನಾಗಿ ನಿಷ್ಕ್ರಿಯನಾಗಿರುವ ಕೃಷ್ಣಪ್ಪಜಡ್ಡುಹಿಡಿ ದಿರುವ ನಮ್ಮ ರಾಜಕೀಯ ವ್ಯವಸ್ಥೆಯ ರೂಪಕ ಎನ್ನುವಷ್ಟರಮಟ್ಟಿಗೆ ಕಾದಂಬರಿ ಸ್ವಾತಂತ್ರ್ಯೋತ್ತರ ರಾಜಕೀಯ ವಾಸ್ತವಕ್ಕೆ ಹತ್ತಿರ. ಇಲ್ಲಿ ಬರುವ ಅಸಂಗತ ಚಿತ್ರಗಳಾಗಲೀ, ಗೋಜಲು ಸಂಬಂಧಗಳಾಗಲೀ, ಎಡ-ಬಲ ಪಂಥೀಯ ವಿಚಾರಧಾರೆಯ ತುಣುಕುಗಳಾಗಲೀ ಇವೆಲ್ಲವನ್ನೂ ಕೊಲಾಜ್ ಮಾಡಿದಾಗ ನಮಗೆ ಕಾಣ ಸಿಗುವುದು ವ್ಯಕ್ತಿ ಮತ್ತು ಆಗಿನ ದೇಶಕಾಲಗಳ ಒಂದು ಅವಸ್ಥೆಯ ಚಿತ್ರ ಮಾತ್ರ. ಅಂದರೆ, ಸ್ಥಿತಿ-ಇರುವಿಕೆಗಳ ಕಥನ. ಈ ‘ಅವಸ್ಥೆ’ ಸುವ್ಯವಸ್ಥೆಯಂತೂ ಅಲ್ಲ. ಇಂಥ ‘ಅವಸ್ಥೆ’ಯಲ್ಲಿ ಕೊನೆಗೂ ಉಳಿದಿರುವುದು ‘‘...ಯಾವತ್ತೂ ನಮ್ಮ ಚರಿತ್ರೇಲಿ ದಡ ಹತ್ತದೇನೇ ಇದಾರಲ್ಲ ಅವರಿಗೆ ಸಿಟ್ಟು ಬರೋ ಹಾಗೆ ಮಾಡಕ್ಕೆ ಸಾಧ್ಯವಾದರೆ ಆ ಸಿಟ್ಟು ಸಮಾಜದ ಕ್ಷುದ್ರತೇನ ಸುಟ್ಟೀತು ಅಲ್ವಾ? ಆ ಆಸೆ ಇನ್ನೂ ಉಳ್ಕಂಡಿದೆ’’ ಎನ್ನುವ ಸಿಟ್ಟು ಮಾತ್ರ. ರಾಮಚಂದ್ರನ್ ಅವರು ಹೇಳುವಂತೆ ಆಧುನಿಕ ಸಮಾಜ-ರಚನೆಗಳನ್ನು ಹಾಗೂ ವ್ಯವಸ್ಥೆಗಳನ್ನು ಅತ್ಯಂತ ಕಾಳಜಿಯಿಂದ ನಿಷ್ಠುರವಾಗಿ ಶೋಧಿಸುವ, ಪರೀಕ್ಷಿಸುವ ‘ಅವಸ್ಥೆ’ ಮುಖ್ಯವಾಗುವುದು ಕೃಷ್ಣಪ್ಪಕೊನೆಯಲ್ಲಿ ಕೈಗೊಳ್ಳುವ ಈ ನಿರ್ಧಾರದಿಂದಾಗಿಯೇ. ಆದರೆ ಇದೂ ವ್ಯಕ್ತಿಗತ ಹಂತದ ನಿರ್ಧಾರವೇ ಹೊರತು ಅದಕ್ಕೆ ಬೇಕಾದ ರಾಜಕೀಯ ಸಂಚಲನದ ಬಲವಿಲ್ಲ. ಇಂಥ ಕ್ರಿಯೆ-ಸಂಚಲನಗಳು ಕಾದಂಬರಿಯಲ್ಲಿ ಯಾವ ಘಟ್ಟದಲ್ಲೂ ಕ್ರಿಯಾತ್ಮಕವಾಗಿ ಪ್ರಕಟಗೊಳ್ಳದ ಕಾರಣ ಕೃಷ್ಣಪ್ಪಮತ್ತು ಮಿತ್ರಮಂಡಳಿಯ ಎಡಪಂಥೀಯ ವಿಚಾರಧಾರೆಗಳೆಲ್ಲ ಒಣಹರಟೆಯಾಗಿಬಿಡುವ ಅಪಾಯವೂ ಉಂಟು.

 ‘ಭವ’-ಅಸ್ತಿತ್ವವಾದದ ಒಂದು ಕವಲನ್ನು ಪ್ರತಿನಿಧಿಸುವ ಮಾರ್ಟಿನ್ ಹೈಡೆಗರ್‌ನ ಪ್ರಮುಖ ಪರಿಕಲ್ಪನೆ ‘ದಾಸಿನ್’ ಗೆ ಸಂವಾದಿಯಾದುದು ಎಂಬುದನ್ನು ಒಪ್ಪಿಕೊಂಡ ನಂತರವೂ ಅದು ನಮಗೆ ಹತ್ತಿರವಾಗುವುದು ಭಾರತೀಯ ಪರಿಕಲ್ಪನೆಯ ಭವ ಮತ್ತು ಅದರ ಬಂಧನಗಳಿಂದಾಗಿಯೇ. ಮೃಣ್ಮಯ ಮತ್ತು ಚಿನ್ಮಯ ಬದುಕುಗಳ ಲಯವನ್ನು ಹಿಡಿಯುವ ಮಾನವನ ಹೋರಾಟದ ಪ್ರತಿಫಲನದಂತೆಯೂ ಕಾಣುವ ‘ಭವ’ವನ್ನು ಒಂದು ಕ್ಲಿನಿಕಲ್ ಕಾದಂಬರಿಯಾಗಿ ಓದಬೇಕು ಎನ್ನಿಸುತ್ತದೆ. ವಾಚ್ಯದಲ್ಲೂ ಧ್ವನಿಯಲ್ಲೂ ಹಲವು ಬಗೆಯ ರೋಗವಿಕಾರಗಳಿಂದ ಬಳಲುವ ಇಲ್ಲಿನ ಪಾತ್ರಗಳು ಉದ್ದಕ್ಕೂ ಶುಚೀಕರಣ ಪ್ರಕ್ರಿಯೆಯಲ್ಲಿ ತೊಡಗಿರುವುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ಕೆಲವರಿಗೆ ಈ ಪ್ರಕ್ರಿಯೆ ವಾಚ್ಯದ ನೆಲೆಯಲ್ಲಿ ಕ್ಲಿನಿಕಲ್ ಆದರೆ ಇನ್ನು ಕೆಲವರಿಗೆ ಅಧ್ಯಾತ್ಮ-ಆತ್ಮಜ್ಞಾನಗಳ ಧ್ವನಿಯಲ್ಲಿ ಕ್ಲಿನಿಕಲಾಗುತ್ತದೆ. ‘ಸಂಸ್ಕಾರ’ದಲ್ಲಿ ಕೊಳೆತ ಅಗ್ರಹಾರದ ಬದುಕನ್ನು, ವ್ಕಕ್ತಿ ಮತ್ತು ಸಮುದಾಯದ ಹಂತಗಳಲ್ಲಿ ಸಂಭವಿಸುವ ಮೌಲ್ಯಗಳ ಸಂಘರ್ಷವನ್ನು ಹಾಗೂ ಅನುಭವಸಿದ್ಧಿಯ ಮೂಲಕವೇ ಹೊಸಬದುಕಿಗೆ ಹೊರಳಿಕೊಳ್ಳುವ ಸುಧಾರಣೆಯ ಹಂಬಲವನ್ನು ಯಥಾರ್ಥವಾಗಿ ಚಿತ್ರಿಸುವ ಅನಂತಮೂರ್ತಿಯವರ ಪ್ರಬುದ್ಧ ವೈಚಾರಿಕತೆ ಆಗಿನ ಅವರ ವಯೋಮಾನಕ್ಕೆ ಅಪರೂಪವೆಂಬಂತೆ ತೋರಿದರೂ ಅವರೊಳಗಣ ಕಥನವೀರ(ಪ್ರೊಟಾಗನಿಸ್ಟ್)ತನ್ನೆಲ್ಲ ಕ್ರಾಂತಿಕಾರಿ ಹುಮ್ಮಸ್ಸಿನೊಂದಿಗೆ ‘ಭಾರತೀಪುರ’ದಲ್ಲಿ ಪ್ರಕಟಗೊಳ್ಳುತ್ತಾನೆ. ಸಾಲಿಗ್ರಾಮ ಮುಟ್ಟಿಸುವುದರಿಂದ ದಲಿತರ ಬದುಕಿನಲ್ಲಿ ಬದಲಾವಣೆ ತರಬಹುದೆಂದು ನಂಬಿದ ಈ ಅಪ್ರಬುದ್ಧ ಕ್ರಾಂತಿ ವೀರ ಮುಂದೆ ಕ್ರಮೇಣ ‘ಭವ/-‘ದಿವ್ಯ’ಗಳಲ್ಲಿ ಮಾಗಿ ಪ್ರಬುದ್ಧನಾಗುವ ಪರಿಯನ್ನು ನಾವು ಕಾಣುತ್ತೇವೆ. ‘ಅನಂತಮೂರ್ತಿ ವಾಙ್ಮಯದ ತಾತ್ವಿಕತೆ ಮತ್ತು ವಿಶ್ವದೃಷ್ಟಿ’ ಲೇಖನದಲ್ಲಿ ರಾಮಚಂದ್ರನ್ ಇದನ್ನು ಸಮರ್ಥವಾಗಿ ಗುರುತಿಸಿದ್ದಾರೆ.
ಈ ಹಂತದಲ್ಲಿ ನನಗೆ ದೇವನೂರ ಮಹಾದೇವ ಅವರು ಅನಂತ ಮೂರ್ತಿಯವರ ಬಗ್ಗೆ ಆಡಿರುವ ಈ ಮಾತುಗಳು ನೆನಪಾಗುತ್ತಿವೆ. ‘‘ಅದೇ ಯು.ಆರ್.ಅನಂತ ಮೂರ್ತಿಯವರು ಧರ್ಮದ ಕೊಳಕನ್ನು ಅಕ್ಕಪಕ್ಕ ಸರಿಸಿ ಅದರಲ್ಲಿರೋ ತಿಳಿಜಲವನ್ನು ಉಳಿಸಿಕೊಳ್ಳಬೇಕು ಎನ್ನುವ ಮನಸ್ಸಿನಿಂದ ಪ್ರಯತ್ನಪಡುತ್ತಾರೆ.’’ ಮುಂದಿನ ಕಂತಿನಲ್ಲಿ ಭೈರಪ್ಪನವರ ಕಾದಂಬರಿಗಳ ಸಮೀಕ್ಷೆಯ ಹಿನ್ನೆಲೆಯಲ್ಲಿ ಮಹಾದೇವರ ಈ ಮಾತುಗಳನ್ನು ಮತ್ತಷ್ಟು ಒರಗೆ ಹಚ್ಚಿ ನೋಡಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top