ಕಾರ್ಪೊರೇಟ್ ‘ಮಹರ್ಷಿಗಳು’ ಹಾಗೂ ಗೋಲ್ಡ್ ಮೆಡಲ್ ಕೂಲಿಗಳು
-

ಘೋರವಾಸ್ತವಗಳು ಕನಸುಗಳ ಕ್ಷಾಮಕ್ಕೇ ಕಾರಣವಾಗಿರುವಾಗ ಕೃತಕ ಆಶಯಗಳ ಮೋಡಬಿತ್ತನೆ ಮಾಡುವ ಕಾರ್ಪೊರೇಟ್ ಸಿನೆಮಾ-ಸಾಂಸ್ಕೃತಿಕ ಲೋಕವು ನಮ್ಮ ಗ್ರಹಿಕೆಯ ಪ್ರಕ್ರಿಯೆಯಲ್ಲಿ ಹೇಗೆ ಬಿರುಕನ್ನು ಉಂಟುಮಾಡುತ್ತದೆ ಎನ್ನುವುದಕ್ಕೆ ‘ಮಹರ್ಷಿ’ ಚಿತ್ರದ ಯಶಸ್ಸಿನ ವಿದ್ಯಮಾನ ಒಂದು ಜೀವಂತ ಉದಾಹರಣೆಯಾಗಿದೆ. ಇದು ಮಹರ್ಷಿ ಚಿತ್ರದ ಯಶಸ್ಸನ್ನು ಅರ್ಥಮಾಡಿಕೊಳ್ಳುವ ಮೂಲಕ ಆ ಬಿರುಕನ್ನು ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೇ ಹೊರತು ಸಿನೆಮಾ ವಿಮರ್ಶೆಯಲ್ಲ.
ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಗೋಲ್ಡ್‌ಮೆಡಲ್ ಪಡೆದ ಪ್ರತಿಭಾವಂತ ಸ್ನಾತಕೋತ್ತರ ಪದವೀಧರರು ಹೊಟ್ಟೆಪಾಡಿಗಾಗಿ ನರೇಗಾ ಯೋಜನೆಯಲ್ಲಿ ಕೂಲಿಮಾಡುತ್ತಿರುವ ವರದಿಗಳು ಬರುತ್ತಿರುವ ಹೊತ್ತಿನಲ್ಲೇ ಅಸಾಧಾರಣ ಜೀನಿಯಸ್ ಆಗಿದ್ದರೆ ಜಗತನ್ನೇ ಗೆಲ್ಲಬಹುದೆಂದು ಸಾರುವ ‘ಮಹರ್ಷಿ’ ಎಂಬ ತೆಲುಗು ಸಿನೆಮಾ ಕರ್ನಾಟಕದಲ್ಲೂ ಜಯಭೇರಿ ಬಾರಿಸುತ್ತಿದೆ ಮತ್ತದು ಜನಸಾಮಾನ್ಯರ ಹಾಗೂ ‘ಪ್ರಜ್ಞಾವಂತರ’ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಘೋರವಾಸ್ತವಗಳು ಕನಸುಗಳ ಕ್ಷಾಮಕ್ಕೇ ಕಾರಣವಾಗಿರುವಾಗ ಕೃತಕ ಆಶಯಗಳ ಮೋಡಬಿತ್ತನೆ ಮಾಡುವ ಕಾರ್ಪೊರೇಟ್ ಸಿನೆಮಾ-ಸಾಂಸ್ಕೃತಿಕ ಲೋಕವು ನಮ್ಮ ಗ್ರಹಿಕೆಯ ಪ್ರಕ್ರಿಯೆಯಲ್ಲಿ ಹೇಗೆ ಬಿರುಕನ್ನು ಉಂಟುಮಾಡುತ್ತದೆ ಎನ್ನುವುದಕ್ಕೆ ‘ಮಹರ್ಷಿ’ ಚಿತ್ರದ ಯಶಸ್ಸಿನ ವಿದ್ಯಮಾನ ಒಂದು ಜೀವಂತ ಉದಾಹರಣೆಯಾಗಿದೆ. ಇದು ಮಹರ್ಷಿ ಚಿತ್ರದ ಯಶಸ್ಸನ್ನು ಅರ್ಥಮಾಡಿಕೊಳ್ಳುವ ಮೂಲಕ ಆ ಬಿರುಕನ್ನು ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೇ ಹೊರತು ಸಿನೆಮಾ ವಿಮರ್ಶೆಯಲ್ಲ.
‘ಮಹರ್ಷಿ’ ಚಿತ್ರದ ಸಾರಾಂಶ ಇಷ್ಟೆ. ಒಂದು ಕೆಳ ಮಧ್ಯಮ ವರ್ಗಕ್ಕೇ ಸೇರಿದ ಅಸಾಧಾರಣ ಪ್ರತಿಭಾಶಾಲಿ ಯುವಕ ಮಹತ್ವಾಕಾಂಕ್ಷೆಯ ಬೆನ್ನು ಹತ್ತಿ ಸಾಫ್ಟ್‌ವೇರ್ ಜಗತ್ತನ್ನೇ ಗೆದ್ದು ದೊಡ್ಡ ಕಾರ್ಪೊರೇಟ್ ಕುಳವಾಗುತ್ತಾನೆ. ಆದರೆ ಆ ಗೆಲುವಿನಲ್ಲಿ ತನ್ನ ಆಪ್ತರಾದವರನ್ನು ಕೂಡಾ (ಆಪ್ತ ಸ್ನೇಹಿತ, ಪ್ರೇಯಸಿ ಮತ್ತು ಹಿತೈಷಿ ಅಪ್ಪ) ಒಳಗೊಳ್ಳುವ ಮೂಲಕ ತನ್ನ ಗೆಲುವಿಗೆ ಸಾರ್ಥಕ್ಯವನ್ನು ಕಂಡುಕೊಳ್ಳಲು ಮರಳಿ ಮಣ್ಣಿಗೆ ಹಿಂದಿರುಗುತ್ತಾನೆ. ಆ ಪ್ರಕ್ರಿಯೆಯಲ್ಲಿ ತನ್ನ ಆಪ್ತ ಸ್ನೇಹಿತ ತನ್ನ ಕುಗ್ರಾಮವನ್ನು ಕಾರ್ಪೊರೇಟ್ ಕಬಳಿಕೆಯಿಂದ ಬಚಾವು ಮಾಡಲು ನಡೆಸುತ್ತಿದ್ದ ಏಕಾಂಗಿ ಹೋರಾಟಕ್ಕೆ ತನ್ನ ಕಾರ್ಪೊರೇಟ್ ಶಕ್ತಿಯ ನೆರವು ಕೊಡುತ್ತಾನೆ. ಭೂಮಿ ಉಳಿಸಿಕೊಳ್ಳಬೇಕೆಂಬ ಛಲವು ರೈತರಲ್ಲಿ ಹುಟ್ಟುವಂತೆ ಮಾಡಲು ಬೇಕಾದ ಬಂಡವಾಳವನ್ನು ಉಚಿತವಾಗಿ ಕೊಡುತ್ತಾನೆ. ನಂತರದಲ್ಲಿ ರೈತರಿಗೆ ಬೇಕಾದ ಸೌಕರ್ಯಗಳನ್ನು ರೂಪಿಸಲು ತನ್ನ ಲಾಭದ 7,000 ಕೋಟಿ ರೂಪಾಯಿಗಳನ್ನು ದಾನ ಮಾಡುತ್ತಾನೆ. ಹೀಗೆ ಎಣೆಯಿಲ್ಲದ ಗೆಲುವನ್ನು ಬಯಸುತ್ತಿದ್ದ ನಾಯಕ ರಿಷಿ ತನ್ನ ಗೆಲುವನ್ನು ಉಳಿದವರಿಗೂ ಹಂಚುವ ಮೂಲಕ ‘ಮಹರ್ಷಿ’ಯಾಗುತ್ತಾನೆ.. ಇಷ್ಟು ಸಂಕ್ಷಿಪ್ತವಾಗಿ ಕಥೆಯ ತಿರುಳು. ‘ಮಹರ್ಷಿ’ಯ ಕಥೆ ಮೂರು ಪ್ಲಾಟುಗಳಲ್ಲಿ ತೆರೆದುಕೊಳ್ಳುತ್ತದೆ. ವಿದ್ಯಾರ್ಥಿ ಹಂತದಲ್ಲಿ ಅಸಾಧಾರಣ ಶೈಕ್ಷಣಿಕ ಪ್ರತಿಭಾವಂತಿಕೆ, ಉದ್ಯಮಿಯಾಗಿ ಅಸಾಮಾನ್ಯ ವ್ಯಾವಹಾರಿಕ ಸಾಧನೆ ಮತ್ತು ಅಂತಿಮವಾಗಿ ಅಪರೂಪದ ವೈಯಕ್ತಿಕ- ಸಾಮಾಜಿಕ ಬದ್ಧತೆ. ಈ ಮೂರೂ ಸಹ ಶಿಕ್ಷಣ, ಉದ್ದಿಮೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಲೋಕ ಸಮಾಜ ನಂಬಬೇಕೆಂದು ಬಯಸುವ ಮೌಲ್ಯಗಳಾಗಿವೆ. ಆದರೆ ಸಿನೆಮಾಗಳು ವಾಸ್ತವವನ್ನು ಪ್ರತಿಬಿಂಬಿಸುವ ಕನ್ನಡಿಗಳಲ್ಲ. ಬದಲಿಗೆ ಕನಸುಗಳನ್ನು ಬಿತ್ತುವ ಮೂಲಕ ಮನರಂಜನೆಯನ್ನು ಒದಗಿಸುವ ಉದ್ಯಮ. ಹೀಗಾಗಿ ಅದನ್ನು ರಾಜಕೀಯ, ಆರ್ಥಿಕ ವಿದ್ಯಮಾನಗಳನ್ನು ವಿಶ್ಲೇಷಿಸುವಂತೆ ವಿಶ್ಲೇಷಿಸಬಹುದೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಸಿನೆಮಾವನ್ನೂ ಒಳಗೊಂಡಂತೆ ಕಲಾ ಪ್ರಕಾರಗಳಲ್ಲಿ ಸ್ವಾತಂತ್ರ್ಯ ಮತ್ತು ಆಯ್ಕೆಗಳು ವ್ಯಕ್ತಿಗತವಾಗಿದ್ದರೂ ಅವು ಉದ್ಯಮವಾದ ನಂತರ ಅವುಗಳೂ ಕೂಡಾ ಉದ್ಯಮದ ತರ್ಕಗಳಿಗೆ ಅಧೀನವಾಗುತ್ತವೆ. ಕೆಲವು ಅಪವಾದಗಳು ಹೇಗೂ ಎಲ್ಲದರಲ್ಲೂ ಇರಲು ಸಾಕು. ಆದರೆ ಪ್ರಧಾನ ಧಾರೆಯಂತೂ ಕಾರ್ಪೊರೇಟೀಕರಣವಾಗಿರುತ್ತದೆ. ಇದನ್ನು ಕಳೆದ ಒಂದು ದಶಕದ ಬಹುಪಾಲು ಭಾರತೀಯ ಪ್ರಧಾನ ಧಾರೆ ಕಮರ್ಷಿಯಲ್ ಸಿನೆಮಾಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತವಾಗುತ್ತಿರುವ ಕಾರ್ಪೊರೇಟ್ ಆರ್ಥಿಕತೆಯ ಅವಿಮರ್ಶಾತ್ಮಕ ಸಮ್ಮತಿ, ಯಾವುದೇ ಬಂಡಾಯಗಳ ಬದಲಿಗೆ ಅನುಸಂಧಾನ, ದಲಿತ-ಆದಿವಾಸಿ ಇನ್ನಿತರ ಅತಂತ್ರ ಬದುಕುಗಳ ಸಂಪೂರ್ಣ ನಿರ್ಲಕ್ಷ್ಯದಂಥ ಧೋರಣೆಗಳಲ್ಲಿ ಕಾಣಬಹುದು.
ಯಂಡಮೂರಿ ವೀರೇಂದ್ರನಾಥರ ಸಾಮಾನ್ಯನ ಅಸಾಮಾನ್ಯ ಸಾಧನೆಯ ಕಾದಂಬರಿಗಳು ಚಿರಂಜೀವಿ ನಾಯಕತ್ವದಲ್ಲಿ ಸಿನೆಮಾ ಆಗಿ ಯಶಸ್ವಿಯಾಗು ವುದರೊಂದಿಗೆ ತೆಲುಗು ಕಮರ್ಷಿಯಲ್ ಸಿನೆಮಾಗಳಲ್ಲಿ ಈ ಮೌಲ್ಯಗಳು ಆಳಲು ಪ್ರಾರಂಭಿಸಿದವೆಂದು ಕಾಣುತ್ತದೆ. ತೆಲುಗು ಸಿನೆಮಾಗಳು ಅದನ್ನು ನಿತ್ಯದೊಂದಿಗೆ ಮತ್ತು ಮಾನವೀಯ ಸಂವೇದನೆ ಗಳೊಂದಿಗೆ ಪ್ಯಾಕೇಜು ಮಾಡುವ ರೀತಿ ಅನನ್ಯವಾದದ್ದು. ಹಾಗೂ ಅಷ್ಟೇ ಆತ್ಮವಂಚಕತನದ್ದು. ಈ ‘ತಾಂತ್ರಿಕ’ ಕೌಶಲ್ಯವು ಮಹರ್ಷಿ ಚಿತ್ರದಲ್ಲೂ ಡಾಳಾಗಿ ಕಂಡುಬರುತ್ತದೆ. ‘ಮಹರ್ಷಿ’ಯ ಮೊದಲ ಭಾಗದಲ್ಲಿ ನಗರದ ಬಡಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಯಾದ ರಿಷಿಯು ಕಷ್ಟಪಟ್ಟು ಓದದಿದ್ದರೂ ಅಸಾಧಾರಣ ಜೀನಿಯಸ್‌ನಿಂದಾಗಿ ಎಂ. ಟೆಕ್‌ನ ಪ್ರತಿ ಸೆಮಿಸ್ಟರಿನಲ್ಲೂ ಫಸ್ಟ್ ಬರುತ್ತಾನೆ. ಆದರೆ ಗ್ರಾಮೀಣ ಹಿನ್ನೆಲೆಯಿಂದ ಬಂದ ರಿಷಿಯ ಕ್ಲಾಸ್ ಮೇಟ್ ಮಾತ್ರ ಎಷ್ಟು ಕಷ್ಟಪಟ್ಟರೂ ಪಾಸು ಮಾಡಲೂ ಆಗುವುದಿಲ್ಲ. ಅಷ್ಟು ಮಾತ್ರವಲ್ಲ. ಉತ್ತಮ ಶೈಕ್ಷಣಿಕ ಹಾಗೂ ತರಬೇತಿ ಪಡೆದ ನಗರದ ಮೇಲ್ಮಧ್ಯಮ ಮತ್ತು ಶ್ರೀಮಂತ ಹಿನ್ನೆಲೆಯಿಂದ ಬಂದವರಿಗೂ ರಿಷಿಯನ್ನು ಸರಿಗಟ್ಟಲು ಆಗುವುದಿಲ್ಲ. ಈ ಸಂದೇಶದ ತಾತ್ಪರ್ಯ ಏನು? ಅಸಾಧಾರಣ ಪ್ರತಿಭೆಗಳಿಗೆ ಶೈಕ್ಷಣಿಕ ಕಾರಣಗಳ ನಿಮಿತ್ತವೇ ಇರುವುದಿಲ್ಲವೇ? ಅದು ಕೆಲವರಲ್ಲಿ ಮಾತ್ರ ಕಂಡುಬರುವ ದೈವದತ್ತ ವರವೇ? ಆದರೆ ವಾಸ್ತವವೆಂದರೆ ಇಂದು ರಿಷಿ ಆಯ್ಕೆ ಮಾಡಿಕೊಳ್ಳುವ ನಾಲೆಡ್ಜ್ ಎಕಾನಮಿ ಕ್ಷೇತ್ರದ ದುಬಾರಿ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ವಲಯದ ಪ್ರಾಥಮಿಕ ಜ್ಞಾನವನ್ನು ‘ಗಳಿಸಬೇಕೆಂದರೂ’ ಸಾವಿರಾರು ಡಾಲರ್ ಟ್ಯೂಷನ್ ಫೀಯನ್ನು ತೆತ್ತು ಖಾಸಗಿ ಉದ್ದಿಮೆಗಳಿಂದ ಅಥವಾ ದೇಶಿ ಅಥವಾ ವಿದೇಶಿ ವಿವಿಗಳಿಂದ ‘ಕೊಂಡುಕೊಳ್ಳಬೇಕು’.
ಆದರೆ ರಿಷಿ ಹೃದಯವಂತ. ಪರೀಕ್ಷೆಯಲ್ಲಿ ಫೇಲಾಗುವ ಸ್ನೇಹಿತನಿಗೆ ಆತ್ಮಬಲ ತುಂಬಲು ಪ್ರತಿಯೊಬ್ಬರಿಗೂ ಅವರದ್ದೇ ಆದ ನಿರ್ದಿಷ್ಟ ‘ಬಲ’ವಿರುತ್ತದೆಂದೂ, ಅದನ್ನು ಕಂಡುಕೊಂಡರೆ ಪ್ರತಿಯೊಬ್ಬರೂ ಯಶಸ್ವಿಯಾಗಬಹುದೆಂದು ಹುರಿದುಂಬಿಸುತ್ತಾನೆ. ಭರ್ತಿ ಚಪ್ಪಾಳೆಯನ್ನೂ ಗಿಟ್ಟಿಸಿಕೊಳ್ಳುತ್ತಾನೆ. ಆದರೆ ವಾಸ್ತವವೇನು? ಇತರ ಜ್ಞಾನಗಳಿಗೆ ತಮ್ಮದೇ ಆದ ಅಂತರ್ಗತ ಮೌಲ್ಯವಿದ್ದರೂ ಮಾರುಕಟ್ಟೆಯಲ್ಲಿ ಮಾತ್ರ ವಿನಿಮಯ ಮೌಲ್ಯವಿಲ್ಲದಂತೆ ಮಾರುಕಟ್ಟೆ ಆರ್ಥಿಕತೆ ಮಾಡಿಟ್ಟಿದೆ. ಆದ್ದರಿಂದಲೇ ಬಳ್ಳಾರಿ ವಿವಿಯಲ್ಲಿ ಗೋಲ್ಡ್‌ಮೆಡಲ್ ಪಡೆದ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಈ ಹೊಸ ಆರ್ಥಿಕತೆಯಲ್ಲಿ ಯಾವ ಮೌಲ್ಯವೂ ಇಲ್ಲದಂತಾಗಿ ನರೇಗ ಕೂಲಿಗೆ ಹೋಗುವಂತಾಗಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ನಪಾಸಾದ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅನಾಥ ಅಸಹಾಯಕತೆಯನ್ನು ಹುಟ್ಟಿಸಿದ್ದು ಕೂಡಾ ತನ್ನ ಮಾರುಕಟ್ಟೆಗೆ ಬೇಕಾದ ‘ಅಸಾಧಾರಣ ಜೀನಿಯಸ್’ಗಳನ್ನು ಹುಟ್ಟಿಸುವ ಈ ಕಾರ್ಪೊರೇಟ್ ಸಂಸ್ಕೃತಿಯೇ ಅಲ್ಲವೇ?
ಹೀಗಾಗಿ ಈ ಹೊಸ ಜ್ಞಾನ ಲೋಕವು ಅಂತರ್ಗತವಾಗಿಯೇ ಶ್ರೀಮಂತ ಲೋಕದ ಪ್ರತಿಭಾವಂತರಿಗೆ ಮೀಸಲಾಗುತ್ತಿದೆ. ಆದರೆ ಉನ್ನತ ಶಿಕ್ಷಣದ ಪ್ರತಿಭಾವಂತಿಕೆಗೆ ಇರುವ ಈ ಸಾಮಾಜಿಕ ಶೈಕ್ಷಣಿಕ ಆಯಾಮವನ್ನು ಕಾರ್ಪೊರೇಟ್ ಸಾಂಸ್ಕೃತಿಕ ಲೋಕ ಮರೆಸಿ ಸೋಲುಗಳನ್ನು ಆಯಾ ವ್ಯಕ್ತಿಯ ಸೋಲೆಂದು ವ್ಯಕ್ತೀಕರಿಸುತ್ತದೆ. ಮಹರ್ಷಿಯ ಎರಡನೇ ಪ್ಲಾಟಿನಲ್ಲಿ ರಿಷಿ ಸಾಫ್ಟ್‌ವೇರ್ ಜಗತ್ತಿನಲ್ಲಿ ಯಾರೂ ಕಾಣದ ಸಾಧನೆ ಮಾಡುತ್ತಾನೆ. ಇದು ಸಿನಿಮೀಯ ಉತ್ಪ್ರೇಕ್ಷೆಯಾಗಿದ್ದರೆ ವಿಮರ್ಶೆಯ ಅಗತ್ಯವಿರಲಿಲ್ಲ. ಬದಲಿಗೆ ಇದೊಂದು ಬಹುದೊಡ್ಡ ಕಾರ್ಪೊರೇಟ್ ಮಿಥ್ಯೆಯಾಗಿದೆ. ಆರ್ಥಿಕತೆಯು ಕೇವಲ ಕೆಲವೇ ದೈತ್ಯರ ಏಕಸ್ವಾಮ್ಯವಾಗಿರುವ ಈ ಜಾಗತೀಕರಣದ ಕಾಲಘಟ್ಟದಲ್ಲಿ ಕೇವಲ ಹೊಸ ತಂತ್ರಜ್ಞಾನದ ಬೌದ್ಧಿಕತೆಗಳು ಯಶಸ್ವೀ ಉದ್ಯಮಗಳಾಗಿಲ್ಲ. ಪ್ರಭುತ್ವದ ‘ನವ ಉದಾರವಾದಿ ರಿಯಾಯತಿ ಮತ್ತು ವಿನಾಯಿತಿಗಳನ್ನು ಪಡೆದುಕೊಳ್ಳದೆ’ (ಅಂದರೆ ದೇಶದ ವಂಚಿತ ಸಮುದಾಯಗಳಿಗೆ ದಕ್ಕಬೇಕಾದ ಸಂಪನ್ಮೂಲಗಳನ್ನು ಕಸಿದುಕೊಳ್ಳದೆ) ಮತ್ತು ಕಾರ್ಪೊರೇಟ್ ವಂಚನೆಗಳನ್ನು ಮಾಡದೆ ಯಾವ ದೊಡ್ಡ ದೊಡ್ಡ ಹೊಸ ಸ್ಟಾರ್‌ಗಳು ಕಾರ್ಪೊರೇಟ್ ದಿಗಂತದಲ್ಲಿ ಉದ್ಭವಿಸಿಲ್ಲ ಅಥವಾ ಉಳಿದುಕೊಂಡಿಲ್ಲ. ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್, ಇನ್ಫೋಸಿಸ್, ವಿಪ್ರೋ ಎಲ್ಲ ಹೊಸ ಸ್ಟಾರ್‌ಗಳ ಕಥೆಯೂ ಇದೆ. ಇತ್ತೀಚೆಗೆ ಹೊರಬಂದ ಕಾರ್ಪೊರೇಟ್ ವಂಚನೆಗಳ ಪ್ರಕರಣದಲ್ಲಿ ಗೂಗಲ್, ಫೇಸ್‌ಬುಕ್ ಪ್ರಧಾನವಾಗಿ ಇದ್ದದ್ದನ್ನು ಮರೆಯಬಾರದಷ್ಟೆ. ಇಲ್ಲಿ ಮೋದಿ ಭಾರತದ ಸ್ಟಾರ್ಟ್ ಅಪ್ ಯೋಜನೆಯಡಿ ಅಸಾಧಾರಣ ಬುದ್ಧಿವಂತಿಕೆ ಇದ್ದವರ ಕಂಪೆನಿಗಳು ಬರ್ಕತ್ತಾಗುತ್ತದೆ. ಅಮಿತ್ ಶಾರ ಮಗನ ಕಂಪೆನಿ ಅಥವಾ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರ ಕಂಪೆನಿ ಅಥವಾ ಜಿಯೋ ಅಂಥ ‘ಸ್ಟಾರ್ಟ್ ಆಪ್’ ಕಂಪೆನಿಗಳು ಮಾತ್ರ ಯಶಸ್ಸು ಕಂಡದ್ದು ಕಾಕತಾಳೀಯವೂ ಅಲ್ಲ. ರಿಷಿಯು ‘ಮಹರ್ಷಿ’ಯಾಗುವ ಸಿನೆಮಾದ ಮೂರನೇ ಪ್ಲಾಟು ವಾಸ್ತವವಾಗಿ ಕಾರ್ಪೊರೇಟ್ ಸಾಂಸ್ಕೃತಿಕ ಮೌಲ್ಯಗಳ ಆಷಾಢಭೂತಿತನದ ಪರಾಕಾಷ್ಠೆ. ಪ್ರಭುತ್ವವು ತನ್ನ ಸಂಪನ್ಮೂಲಗಳನ್ನೆಲ್ಲಾ ಕಾರ್ಪೊರೇಟ್ ರಂಗಕ್ಕೆ ಸುರಿಯುತ್ತಾ ಕೃಷಿ ರಂಗಕ್ಕೆ ಕೊಡುತ್ತಿದ್ದ ಬೆಂಬಲದಿಂದ ಹಿಂದೆ ಸರಿದಿರುವುದೇ ರೈತರ ಸಮಸ್ಯೆಗೆ ಪ್ರಧಾನ ಕಾರಣ. ಪ್ರಭುತ್ವದ ಈ ತಾರತಮ್ಯದ ನೀತಿಯ ಫಲಾನುಭವಿಯಾದ ಕಾರ್ಪೊರೇಟ್ ರಿಷಿ ಪ್ರಭುತ್ವದ ನೀತಿಗಳ ಬಲಿಪಶುವಾದ ರೈತರಿಗೆ ಒಂದಷ್ಟು ಸಾಲ ಕೊಡುವ ಮೂಲಕ ದೇವರಾಗಿಬಿಡುತ್ತಾನೆ. ತಮ್ಮ ಪಾಲನ್ನು ಪ್ರಭುತ್ವದಿಂದ, ಹಕ್ಕಿನಿಂದ ಮತ್ತು ಅಧಿಕಾರದಿಂದ ದಕ್ಕಿಸಿಕೊಳ್ಳಬೇಕಿದ್ದ ರೈತರನ್ನು ಕಾರ್ಪೊರೇಟ್ ದಾಕ್ಷಿಣ್ಯದ ಋಣಕ್ಕೆ ಸಿಕ್ಕಿಸುತ್ತಾನೆ. ಹೀಗೆ ಯಾವ ಕಾರ್ಪೊರೇಟ್ ಪರ ನೀತಿಗಳಿಂದಾಗಿ ರೈತರ ಬದುಕು ದಿಕ್ಕಾಪಾಲಾಗುತ್ತಿದೆಯೋ ಅದೇ ಕಾರ್ಪೊರೇಟ್ ಶಕ್ತಿಗಳನ್ನು ದೇವರೆಂದು ಕಾಣುವಂತೆ ಮಾಡುವ ಮಹಾನ್ ವಂಚನೆಯನ್ನೇ ‘ಮಹರ್ಷಿ’ಕರಿಸಲಾಗಿದೆ.
ಈ ಕಾರ್ಪೊರೇಟ್ ನೈಚ್ಯಾನುಸಂಧಾನಕ್ಕೆ ವಿಶ್ವಸಂಸ್ಥೆಯು 2000ನೇ ಇಸವಿಯಲ್ಲಿ ‘ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಕಾರ್ಪೊರೇಟ್‌ಗಳ ಸಾಮಾಜಿಕ ಜವಾಬ್ದಾರಿ)- ಸಿಎಸ್‌ಆರ್’ ಎಂದು ಹೆಸರಿಟ್ಟಿದೆ. ಅಂದರೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭದ ಶೇ.2ರಷ್ಟನ್ನು ತಾವು ಬಯಸುವ ಸಮಾಜದ ಒಳಿತಿಗೆ ವೆಚ್ಚ ಮಾಡಬೇಕು. ಮತ್ತು ಸರಕಾರ ಅಷ್ಟು ಭಾಗಕ್ಕೆ ತೆರಿಗೆ ವಿನಾಯಿತಿ ಮತ್ತಿತ್ಯಾದಿ ಸೌಲಭ್ಯಗಳನ್ನೂ ಒದಗಿಸುತ್ತದೆ. ಈ ವೀಕೆಂಡ್ ಫಾರ್ಮಿಂಗ್ ಎಲ್ಲಾ ಕಾರ್ಪೊರೇಟ್ ವಲಯದಲ್ಲಿ ಕಂಡುಬರುತ್ತಿರುವ ಸಿಎಸ್‌ಆರ್ ಖಾಯಿಲೆಗಳೇ. ‘‘ಗೆಲುವನ್ನು ಕೋರುವನು ಮನುಷ್ಯ. ಆದರೆ ಗೆಲುವನ್ನು ಹಂಚುವನು ಮಹರ್ಷಿ’’ ಎಂಬುದು ಚಿತ್ರದ ಕೊನೆಯ ಘೋಷಣೆ. ಆದರೆ ಚಿತ್ರದಲ್ಲಿ ತೋರಿಸುವಂತೆ ಜೀನಿಯಸ್ ರಿಷಿಯ ಗೆಲುವಿನ ಹಿಂದೆ ಅವನ ಮೇಲೆ ಬಂದ ಅಪರಾಧವನ್ನು ತನ್ನ ಮೇಲೆ ಹಾಕಿಕೊಂಡ ‘ದಡ್ಡ’ ಸ್ನೇಹಿತನ ಅಂಧಾಭಿಮಾನದ ಅನಾಥ ತ್ಯಾಗವಿರುತ್ತದೆ. ಪ್ರಸ್ತುತ ಪರಿಸ್ಥಿತಿಗೆ ಇದೊಂದು ರೂಪಕವೂ ಆಗಿದೆ. ಅಷ್ಟು ಮಾತ್ರವಲ್ಲ, ಇಲ್ಲಿ ಕೊನೆಗೂ ಆಗುವುದು ಕಾರ್ಪೊರೇಟ್ ಗೆಲುವಿನ ಹಂಚಿಕೆಯೇ ವಿನಃ ರೈತ ಸ್ವಂತ ಬಲದಿಂದ ಗೆಲ್ಲುವುದೇ ಇಲ್ಲ. ರೈತರನ್ನು ಗೆಲ್ಲಿಸಬೇಕಾದ ಪ್ರಭುತ್ವ ಕೈಚೆಲ್ಲಿದ್ದರಿಂದಲೇ ಇಂದು ರೈತಾಪಿಯು ಒಂದೋ ಕಾರ್ಪೊರೇಟ್ ಕಬಳಿಕೆಯ ಕ್ರೌರ್ಯಕ್ಕೋ ಅಥವಾ ಕಾರ್ಪೊರೇಟ್ ಔದಾರ್ಯದ ದಾಕ್ಷಿಣ್ಯಕ್ಕೋ ಸಿಲುಕಿಕೊಳ್ಳುವಂತಾಗಿದೆ. ಹೀಗಾಗಿ ಇದು ಪ್ರಜಾತಂತ್ರದ ವಿರುದ್ಧ ಕಾರ್ಪೊರೇಟ್ ತಂತ್ರದ ಗೆಲುವೇ ಆಗಿದೆ. ಕಾರ್ಪೊರೇಟ್ ಕ್ರೌರ್ಯದ ಹೋಲಿಕೆಯಲ್ಲಿ ಆಷಾಢಭೂತಿ ಕಾರ್ಪೊರೇಟ್ ಔದಾರ್ಯವನ್ನು ಮೆಚ್ಚಿಕೊಳ್ಳುವ ಮೂಲಕ ರಿಷಿಯ ಆ ಅಮಾಯಕ ಸ್ನೇಹಿತನ ದಡ್ಡತನವನ್ನು ಅನುಸರಿಸಬೇಕೆಂದು ಈ ಕಾರ್ಪೊರೇಟ್ ಸಾಂಸ್ಕೃತಿಕ ರಾಜಕಾರಣ ಬಯಸುತ್ತದೆ.
ಆದರೆ ಈ ಕಾರ್ಪೊರೇಟ್ ಔದಾರ್ಯದ ಹಿಂದೆಯೂ ಒಂದು ಕಾರ್ಪೊರೇಟ್ ರಾಜಕಾರಣವಿದೆ. ಜಾಗತೀಕರಣ ಬಂಡವಾಳಶಾಹಿ ವ್ಯವಸ್ಥೆ ಸೃಷ್ಟಿಸುತ್ತಿರುವ ಅಸಹನೀಯ ಅಸಮಾನತೆಗಳು ಜಗತ್ತಿನೆಲ್ಲೆಡೆ ಸಾಮಾಜಿಕ ಸಂಕ್ಷೋಭೆಯನ್ನು ಹುಟ್ಟುಹಾಕುತ್ತಿದೆ. ಅವು ಬೆಳೆದು ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಗೇ ಸಂಚಕಾರ ತರಬಹುದೆಂಬ ಚಿಂತನೆ ಕಾರ್ಪೊರೇಟ್ ಲೋಕದಲ್ಲಿ ಶುರುವಾಗಿದೆ. ಹೀಗಾಗಿ ಬಂಡವಾಳಶಾಹಿ ಶೋಷಕ ಸಂಬಂಧಗಳನ್ನು ಕಿಂಚಿತ್ತೂ ಬದಲಿಸದೆ ಅದರ ಚೌಕಟ್ಟಿನೊಳಗೆ ಕನಿಷ್ಠ ಆಹಾರ, ಕನಿಷ್ಠ ಆದಾಯ ಎಲ್ಲರಿಗೂ ದೊರೆಯುವಂತೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಬಿಕ್ಕಟ್ಟನ್ನು ಮುಂದೂಡುವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿಶ್ವಬ್ಯಾಂಕ್ ಸರಕಾರಗಳಿಗೆ ಸಲಹೆ ಮಾಡುತ್ತಿದೆ ಹಾಗೂ ಬಿಲ್‌ಗೇಟ್ಸ್, ವಾರನ್ ಬಫೆಟ್‌ನಂತಹ ಪ್ರಪಂಚದ ಅತಿ ಶ್ರೀಮಂತರು ಮತ್ತು ಭಾರತದ ಕೆಲವರೂ ಸಹ ತಮ್ಮ ಆದಾಯದ ಒಂದು ಭಾಗವನ್ನು ಈ ಬಗೆಯ ಬಿಕ್ಕಟ್ಟನ್ನು ಮುಂದೂಡಲು ವ್ಯಯಿಸುತ್ತಿದ್ದಾರೆ. ಅಂದರೆ ಒಂದು ಕಡೆ ಮಾರಣಾಂತಿಕ ಗಾಯಗಳನ್ನು ಮಾಡುತ್ತಾರೆ. ಮತ್ತೊಂದು ಕಡೆ ನೋವು ಕಡಿಮೆ ಮಾಡುವ ಮುಲಾಮನ್ನು ಸವರುತ್ತಾರೆ. ಆದರೆ ‘ಮಹರ್ಷಿ’ಯಂಥ ಚಿತ್ರಗಳು ತೋರಿಸುವುದು ಮುಲಾಮು ಹಚ್ಚುವ ಮುಖವನ್ನು ಮಾತ್ರ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.