ಪಠಾಣ್ಕೋಟ್ ದಾಳಿ ಪ್ರಕರಣ: ನವಾಝ್ ಶರೀಫ್ ಅಧ್ಯಕ್ಷತೆಯಲ್ಲಿ ಸಭೆ

ಇಸ್ಲಾಮಾಬಾದ್, ಜ.7: ಭಾರತದ ಪಂಜಾಬ್ನ ಪಠಾಣ್ಕೋಟ್ ವಾಯುನೆಲೆಯ ಮೇಲೆ ಇತ್ತೀಚೆಗೆ ಉಗ್ರರು ನಡೆಸಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಚರ್ಚಿಸಲು ಗುರುವಾರ ಪಾಕ್ ಪ್ರಧಾನಿ ನವಾಝ್ ಶರೀಫ್ ನೇತೃತ್ವದಲ್ಲಿ ಸಭೆಯೊಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಒದಗಿಸಿರುವ ಸಾಕ್ಷಗಳ ಆಧಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ತ್ವರಿತಗೊಳಿಸುವಂತೆ ನವಾಝ್ ಶರೀಫ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಸಭೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು ಎಂದು ಪ್ರಧಾನಿ ಕಚೇರಿ ಹೊರಡಿಸಿರುವ ಹೇಳಿಕೆ ತಿಳಿಸಿದೆ.
ಹಣಕಾಸು ಸಚಿವ ಇಶಾಕ್ ದಾರ್, ಒಳಾಡಳಿತ ಸಚಿವ ನಿಸಾರ್ ಅಲಿ ಖಾನ್, ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆ.ಜ.(ನಿವೃತ್ತ) ನಾಸಿರ್ ಖಾನ್ ಜಂಜುವಾ, ವಿದೇಶಾಂಗ ಕಾರ್ಯದರ್ಶಿ ಅಯಿಝಾಝ್ ಅಹ್ಮದ್ ಚೌಧರಿ ಬೇಹುಗಾರಿಕೆ ಮಂಡಳಿ ಮುಖ್ಯಸ್ಥ ಅಫ್ತಾಬ್ ಸುಲ್ತಾನ್ ಹಾಗೂ ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಪಠಾಣ್ಕೋಟ್ ದಾಳಿ ಹಾಗೂ ಆ ಕುರಿತು ಭಾರತ ಒದಗಿಸಿರುವ ಮಾಹಿತಿಗಳ ಬಗ್ಗೆ ಚರ್ಚಿಸಲಾಯಿತು ಎಂದು ಪ್ರಧಾನಿ ಕಚೇರಿಯ ನಿಕಟ ಮೂಲವೊಂದು ತಿಳಿಸಿದೆ.
ಭಾರತ ಒದಗಿಸಿರುವ ಮಾಹಿತಿಯು ಕೇವಲ ದೂರವಾಣಿ ಸಂಖ್ಯೆಗಳಿಗೆ ಸೀಮಿತವಾಗಿರುವುದರಿಂದ ಅದು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸಾಕಾಗದು ಮತ್ತು ಈ ಬಗ್ಗೆ ಪಾಕಿಸ್ತಾನವು ಹೆಚ್ಚಿನ ಮಾಹಿತಿಯನ್ನು ಕೋರಬಹುದಾಗಿದೆ’’ ಎಂದು ಮತ್ತೋರ್ವ ಅಧಿಕಾರಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.
‘‘ಪ್ರಕರಣವೊಂದನ್ನು ಸಮರ್ಥಿಸಲು ನಮಗೆ ಬಲವಾದ ಪುರಾವೆಗಳು ಅಗತ್ಯವಿದೆ ಮತ್ತು ಅದು ಹಾಗಿರದಿದ್ದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸುವ ಹಾಗೂ ಶಂಕಿತರು ಜಾಮೀನಿನ ಮೇಲೆ ಬಿಡುಗಡೆಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ’’ ಎಂದವರು ಅಭಿಪ್ರಾಯಿಸಿದ್ದಾರೆ.
ಪಠಾಣ್ಕೋಟ್ ದಾಳಿಯಲ್ಲಿ ಯಾವುದೇ ವ್ಯಕ್ತಿ ಶಾಮೀಲಾಗಿರುವುದು ಸಾಬೀತಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.