ಪಠಾಣ್ಕೋಟ್ ದಾಳಿ ಪ್ರಕರಣ: ಸಂಚುಕೋರರ ವಿರುದ್ಧ ಕಠಿಣ ಕ್ರಮಕ್ಕೆ ಅಮೆರಿಕ ಆಗ್ರಹ
ವಾಷಿಂಗ್ಟನ್, ಜ.9: ಖಾಸಗಿ ಹಾಗೂ ಬಹಿರಂಗ ಭೇಟಿಯ ವೇಳೆ ತಾನು ನೀಡಿದ್ದ ಭರವಸೆಗಳ ಕುರಿತು ಮಾತುಕತೆಗೆ ತೆರಳಲು ಪಾಕಿಸ್ತಾನಕ್ಕೆ ಇದು ಸಕಾಲವಾಗಿದೆ ಎಂದು ತಾನು ಭಾವಿಸುವುದಾಗಿ ಅಮೆರಿಕ ಹೇಳಿದೆ.
ಭಯೋತ್ಪಾದಕ ಕಾರ್ಯಜಾಲಗಳು ವಿರುದ್ಧದ ಕಾರ್ಯಾಚರಣೆಯಲ್ಲಿ ಮತ್ತು ಪಠಾಣ್ಕೋಟ್ ಭಯೋತ್ಪಾದಕ ದಾಳಿಯ ಸಂಚುಕೋರರನ್ನು ನ್ಯಾಯಾಂಗಕ್ಕೆ ಒಪ್ಪಿಸುವಲ್ಲಿ ಯಾವುದೇ ತಾರತಮ್ಯವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನದೊಳಗಿನ ಕೆಲವು ಗುಂಪುಗಳು ಹಾಗೂ ವ್ಯಕ್ತಿಗಳು ಪಠಾಣ್ಕೋಟ್ ವಾಯುನೆಲೆಯ ಮೇಲಿನ ದಾಳಿಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಾರೆ ಎಂಬ ಭಾರತೀಯ ಬೇಹುಗಾರಿಕೆ ವರದಿಗಳ ನಡುವೆಯೇ ಹೇಳಿಕೆಯೊಂದನ್ನು ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಂತೆ ಈ ಪ್ರಕರಣದ ತನಿಖೆಯು ಕುಂಟುತ್ತ ಸಾಗುವಂತಾಗಬಾರದು ಎಂದು ಹೇಳಿದ್ದಾರೆ.
‘‘ಘಟನೆಗೆ ಸಂಬಂಧಿಸಿ ಸಮಗ್ರ ತನಿಖೆ ಕೈಗೊಳ್ಳಲಿರುವುದಾಗಿ ಅವರು(ಪಾಕಿಸ್ತಾನ) ಹೇಳಿದ್ದಾರೆ. ಭಯೋತ್ಪಾದಕ ಗುಂಪುಗಳನ್ನು ಪರಿಗಣಿಸುವಲ್ಲಿ ತಾವು ಯಾವುದೇ ತಾರತಮ್ಯವೆಸಗುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಆ ಮಾತನ್ನು ಎಷ್ಟರ ಮಟ್ಟಿಗೆ ಪಾಕ್ ಅನುಸರಿಸಲಿದೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ’’ ಎಂದವರು ಹೇಳಿದ್ದಾರೆ.