ಭಟ್ಕಳ ಮೂಲದ ಬಾಲಕಿ ಸೇರಿದಂತೆ ಇಬ್ಬರ ಮೃತ್ಯು
ಭಟ್ಕಳ, ಜ. 10: ಇಲ್ಲಿನ ಉಮರ್ ಸ್ಟ್ರೀಟ್ ನಿವಾಸಿಯಾ ಗಿರುವ ಸದ್ಯಕ್ಕೆ ಸೌದಿ ಅರೇಬಿಯದಲ್ಲಿ ಉದ್ಯೋಗಿಯಾ ಗಿರುವ ಫಯಾಝ್ ಗವಾಯಿ ಯಾನೆ ಫಯಾಝ್ ಭಾಖರ್ ಕುಟುಂಬದ ಕಾರು ರವಿವಾರ ಸೌದಿ ಅರೇಬಿಯದ ತಾಯಿಫ್ ನಗರದಿಂದ ಸುಮಾರು 200 ಕಿಮೀ ದೂರ ಝುಲ್ಮ್ ಎಂಬಲ್ಲಿ ಅಪಘಾತಕ್ಕೀಡಾ ಗಿದ್ದು, ಫಯಾಝ್ ಗವಾಯಿ ಸೇರಿದಂತೆ ಅವರ ಏಳು ವರ್ಷದ ಪುತ್ರಿ ಮರಿಯಮ್ ಫಿಝಾ ಅಪಘಾತ ದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಅಪಘಾತದಲ್ಲಿ ಫಯಾಝ್ರವರ ಪತ್ನಿ, ಇಬ್ಬರು ಮಕ್ಕಳು, ಓರ್ವ ಸ್ನೇಹಿತ ಹಾಗೂ ಮತ್ತೋರ್ವ ಕುಟುಂಬ ಸಂಬಂಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕಾರು ಚಾಲಕ ಯಾಸಿರ್ ಮನ್ನಾ(40), ಮಕ್ಕಳಾದ ಉಮರ್ ಗವಾಯಿ(4) ಫೈಹಾನ್ ಗವಾಯಿ(2), ಪತ್ನಿ ಫಾಯಿಝಾ(38), ಸಂಬಂಧಿ ಅನ್ಸಾರ್ ಶಿಂಗೇಟಿ(46) ಎಂದು ಗುರುತಿಸಲಾಗಿದೆ. ಗಾಯಾಳುಗಳು ತಾಯಿಫ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ:
ಫಯಾಝ್ ಗವಾಯಿ ತಮ್ಮ ಕುಟುಂಬ ಸಮೇತ ಏಳು ಸದಸ್ಯರೊಂದಿಗೆ ಶನಿವಾರ ಸಂಜೆ ಫೋರ್ಚುನರ್ ಕಾರಿನಲ್ಲಿ ಅಲ್ ಜುಬೇಲ್ನಿಂದ ಪವಿತ್ರ ಉಮ್ರಾ ಯಾತ್ರೆ ನಿರ್ವಹಿಸಲು ಮಕ್ಕಾಗೆ ತೆರಳು ತ್ತಿದ್ದರು ಎನ್ನಲಾಗಿದ್ದು, ರಾತ್ರಿ ಸುಮಾರು 1:40ಕ್ಕೆ ಅವರ ಕಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಭಟ್ಕಳ ಮುಸ್ಲಿಮ್ ಜಮಾಅತ್ ಜಿದ್ದಾ ಇದರ ಪ್ರಮುಖರ ನಿಯೋಗವೊಂದು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ಮತ್ತೊಂದು ತಂಡವು ಝುಲ್ಮ್ ಪೊಲೀಸ್ ಠಾಣೆಗೆ ತೆರಳಿ ಮೃತದೇಹಗಳನ್ನು ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಫಯಾಝ್ ಕಳೆದ 22 ವರ್ಷಗಳಿಂದ ಸೌದಿ ಅರೇಬಿಯದ ಅಲ್-ಜುಬೇಲ್ನಲ್ಲಿ ಸ್ವಂತ ಉದ್ಯೋಗವನ್ನು ಹೊಂದಿದ್ದು, ಸಿದ್ಧಉಡುಪುಗಳ ಅಂಗಡಿಯೊಂದನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.