2012ರ ಸೇನಾ ಬಂಡಾಯ ನಿಜ ವಿವಾದಕ್ಕೆ ತಿವಾರಿ ಮರುಜೀವ

ಹೊಸದಿಲ್ಲಿ, ಜ.10: ಜನವರಿ, 2012ರಲ್ಲಿ ಭೂ ಸೇನೆಯು ಸರಕಾರಕ್ಕೆ ಮಾಹಿತಿ ನೀಡದೆ ತನ್ನ 2 ತುಕಡಿಗಳನ್ನು ದಿಲ್ಲಿಯ ಕಡೆ ಕಳುಹಿಸಿತ್ತೆಂಬ ಅಂದಿನ ಪತ್ರಿಕಾ ವರದಿಯೊಂದರ ಕುರಿತಾದ ವಿವಾದಕ್ಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಮನೀಶ್ ತಿವಾರಿ ಮತ್ತೆ ಜೀವ ನೀಡಿದ್ದಾರೆ.
‘ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಪ್ರಕಟವಾಗಿದ್ದ ಆ ವರದಿ ಯು ‘ದುರದೃಷ್ಟಕರ, ಆದರೆ ಸತ್ಯ’ ಎಂದು 2012-14ರ ಅವಧಿಯಲ್ಲಿ ಯುಪಿಎ ಸರಕಾರದ ಮಾಹಿತಿ ಮತ್ತು ಪ್ರಸಾರ ಸಹಾಯಕ ಸಚಿವರಾಗಿದ್ದ ತಿವಾರಿ ಹೇಳಿದ್ದಾರೆ.
ಆ ಸಂದರ್ಭದಲ್ಲಿ ತಾನು ರಕ್ಷಣಾ ಸ್ಥಾಯಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಅದು ದುರದೃಷ್ಟಕರ. ಆದರೆ, ವರದಿಯು ಸತ್ಯ. ತನ್ನ ತಿಳುವಳಿಕೆಯ ಪ್ರಕಾರ ವರದಿ ಸರಿಯಾಗಿತ್ತು ಎಂದವರು ಶನಿವಾರ ದಿಲ್ಲಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.
ತಿವಾರಿಯವರ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸಿ ರುವ ಅವರ ಕಾಂಗ್ರೆಸ್ ಪಕ್ಷ, ತಾನು ಆ ವರದಿಯನ್ನು ‘ಸ್ಪಷ್ಟವಾಗಿ ಹಾಗೂ ನಿಷ್ಠುರವಾಗಿ’ ನಿರಾಕರಿಸುತ್ತಿರುವುದಾಗಿ ಹೇಳಿದೆ. ತನ್ನ ಸಹೋದ್ಯೋಗಿಯು ಸಂಬಂಧಿತ ನಿರ್ಧಾರ ಕೈಗೊಳ್ಳುವ ಸಮಿತಿಯ ಸದಸ್ಯರಾಗಿರದ ಕಾರಣ, ಅಂತಹ ಹೇಳಿಕೆ ನೀಡುವುದು ಸಂಪೂರ್ಣ ತಪ್ಪೆಂದು ತಾನು ಸ್ಪಷ್ಟಡಡಿಸ ಬಯಸುತ್ತೇನೆಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.
ಹಿಸಾರ್ ಹಾಗೂ ಆಗ್ರಾಗಳಿಂದ ಸೇನಾ ತುಕಡಿಗಳು ರಾಜ ಧಾನಿಯ ಕಡೆಗೆ ಬರುತ್ತಿವೆಯೆಂದು ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಸರಕಾರಕ್ಕೆ ವರದಿ ನೀಡಿದ ಹಿನ್ನಲೆಯಲ್ಲಿ 2012ರ ಜ.16-17ರ ನಡುವೆ ರಾತ್ರಿ ಸರಕಾರಕ್ಕೆ ಆಘಾತವಾಗಿತ್ತು ಎಂದು 2012ರ ಎ.4ರಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿತ್ತು. ಈ ಸೇನೆಯ ನಡವಳಿಕೆ ಸರಕಾರದೊಳಗೆ ಸ್ವಲ್ಪ ಕಳವಳವನ್ನು ಮೂಡಿಸುತ್ತೆಂದು ಅದು ಪ್ರತಿಪಾದಿಸಿತ್ತು.
ಕೇಂದ್ರ ಸಚಿವ ಹಾಗೂ ಭೂ ಸೇನೆಯ ಮಾಜಿ ದಂಡ ನಾಯಕ ಜನರಲ್ ವಿ.ಕೆ.ಸಿಂಗ್ ಸರಕಾರದೊಂದಿಗೆ ಭಿನ್ನಾ ಭಿಪ್ರಾಯ ಮತ್ತು ಬಹಿರಂಗ ಸಂಘರ್ಷದಲ್ಲಿ ನಿರತರಾಗಿದ್ದ ವೇಳೆಯೇ ಈ ಬಂಡಾಯ ಯತ್ನ ನಡೆದಿತ್ತು. ಆದರೆ, 2012ರಲ್ಲಿ ಜ.ಸಿಂಗ್ ವರದಿಯನ್ನು ‘ಸಂಪೂರ್ಣ ಮೂರ್ಖ ತನದ್ದೆಂದು’ ತಳ್ಳಿ ಹಾಕಿದ್ದರು.
ಇಂದವರು ತಿವಾರಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಇತ್ತೀಚಿನ ದಿನಗಳಲ್ಲಿ ಅವರಿಗೆ ಯಾವುದೇ ಕೆಲಸವಿಲ್ಲ. ಅವರು ತನ್ನ ಪುಸ್ತಕವನ್ನೋದಲಿ. ಅದು ಎಲ್ಲವನ್ನೂ ಬಹಿರಂಗಪಡಿಸುತ್ತದೆ ಎಂದಿದ್ದಾರೆ.
ಇದಕ್ಕುತ್ತರವಾಗಿ ತಿವಾರಿ, ಎನ್ಡಿಟಿವಿಯೊಂದಿಗೆ ಮಾತನಾಡಿದ್ದ ‘ಇಂಡಿಯನ್ ಎಕ್ಸ್ಪ್ರೆಸ್’ನ ಪ್ರಧಾನ ಸಪಾದಕ ಶೇಖರ ಗುಪ್ತಾ, ಈ ವರದಿ ಸಮರ್ಥನೆಯನ್ನು ಬಯಸುವುದಿಲ್ಲ. ಸತ್ಯವೇನೆಂಬುದು ಪ್ರತಿಯೊಬ್ಬನಿಗೂ ಗೊತ್ತಿದೆ ಎಂದಿದ್ದರೆಂದು ಟ್ವೀಟಿಸಿದ್ದಾರೆ.